Friday, November 12, 2010

ನಗುಮೊಗದ ತ್ಯಾಗಮೂರ್ತಿ ಅಮರಮ್ಮ ಅಮ್ಮ

ಅವಿಭಕ್ತ ಕುಟುಂಬ ವ್ಯವಸ್ಥೆಯಲಿ ಅನೇಕರ ತ್ಯಾಗ, ನಿಸ್ವಾರ್ಥ ಮನೆತನದ ಘನತೆಯನ್ನು ಹೆಚ್ಚಿಸುತ್ತವೆ.
ಈ ಹಿನ್ನೆಲೆಯಲ್ಲಿ ಅಪ್ಪನ ತಾಯಿ ಅಮರಮ್ಮ ಅಮ್ಮನ ತ್ಯಾಗ ನನಗೆ ಆದರ್ಶವೆನಿಸುತ್ತದೆ. ಅಪ್ಪಾ ಹುಟ್ಟಿದ ಕೆಲ ದಿನಗಳ ನಂತರ ಅಜ್ಜನನ್ನು ಕಳೆದುಕೊಂಡ ತಮ್ಮ ಮಗನ ಭವಿಷ್ಯ ಗಮನದಲ್ಲಿಟ್ಟುಕೊಂಡು ಪರಿಶ್ರಮದಿಂದ ಬಾಳಿದಳು. ನೂರಾರು ಜನರಿರುವ ಕುಟುಂಬ ವ್ಯವಸ್ಥೆಯಲಿ ಬೇರೆಯವರ ಸಮೃದ್ಧ, ಸಾಂಸಾರಿಕ ಬದುಕಿನ ಮಧ್ಯ ವಿಧವೆ ಒಂಟಿತನ ಹಿಂಸಾತ್ಮಕವಾದರೂ, ತ್ಯಾಗದಿಂದಾಗಿ ಎಲ್ಲವನ್ನು ಸಹಿಸುವ ಅನಿವಾರ್ಯತೆ ಇರುತ್ತದೆ.

ಪ್ರಾಯದಲ್ಲಿ ವಿಧವೆಯಾದ ಅಮರಮ್ಮ ಅಮ್ಮ ಅಪ್ಪನನ್ನು ಅಕ್ಕರೆಂಯಿದ ಬೆಳೆಸುವುದರೊಂದಿಗೆ, ಅಮರಣ್ಣ ತಾತ (ಅಂದರೆ ಅಮ್ಮನ ಭಾವ) ನ ಮಕ್ಕಳನ್ನು ತನ್ನ ಮಕ್ಕಳಂತೆ ಜೋಪಾನ ಮಾಡಿದರು.
ತಾತನ ಅಗಲಿಕೆಯ ನಂದತರ ಅಮ್ಮ ತವರುಮನೆ ಬಪ್ಪುರವನ್ನು ಸೇರಿಕೊಂಡಿದ್ದರೆ ನಾವಿಂದು ಈ ಸುಸ್ಥಿತಿಯಲ್ಲಿ ಇರುತ್ತಿರಲಿಲ್ಲ. ವರ್ತಮಾನ ಸುಖದಲ್ಲಿ ನಮಗರಿವಿಲ್ಲದಂತೆ ಅನೇಕರ ತ್ಯಾಗವಿರುತ್ತದೆ. ಅಮ್ಮ ತುಂಬು ಸಂಸಾರದಲ್ಲಿ ಎಲ್ಲ ಕಷ್ಟಗಳನ್ನು ಆನುಭವಿಸಿ ಬಾಳಿದ್ದರಿಂದ, ಅಮರಣ್ಣ ತಾತ ನಮ್ಮ ಅಪ್ಪನನ್ನು ಅಕ್ಕರೆಯಿಂದ ಬೆಳೆಸಿ, ಬೆಲೆ ಬಾಳುವ ಆಸ್ತಿ ನೀಡಿದ.

ಜನವರಿ ೨೬, ೨೦೦೪ ರಂದು ನಿಧನರಾದ ಅಮ್ಮ ತುಂಬು ಜೀವನ ನಡೆಸಿದರು. ಸರಿಸುಮಾರು ನೂರು ವಷ ಅಮ್ಮ ಸಾಯುವವರೆಗೆ ಆರೋಗ್ಯವಾಗಿದ್ದರು. ನಮ್ಮ ತಾಯಿಗೆ ಹತ್ತು ಮಕ್ಕಳು, ಅವರೆಲ್ಲರ ಹೆರಿಗೆ ಬಾಣಂತನಕ್ಕೆ ಅವ್ವ ಕುಷ್ಟಗಿ ಹಾಗೂ ಗದುಗಿಗೆ ಹೋಗುತ್ತಿದ್ದಳು. ಅಂತಹ ಸಮಯದಲ್ಲಿ ಅಮ್ಮನೇ ನಮ್ಮನ್ನು ಪಾಲನೆ ಮಾಡಿದಳು.
ಆರೋಗ್ಯ ವಿಷಯದಲ್ಲಿ ಅಮ್ಮ ಕಟ್ಟು ನಿಟ್ಟು ಊಟವಾದ ಮೇಲೆ ನೂರು ಹೆಜ್ಜೆ ನಡೆಯಬೇಕು ಎಂಬ ಅಮ್ಮನ ಮಾತುಗಳು ಇಂದಿಗೂ ನೆನಪಾಗುತ್ತವೆ. ತುಂಬಾ ರುಚಿಕಟ್ಟಾಗಿ ಹೋಳಿಗೆ ಮಾಡುತ್ತಿದ್ದ ಅಮ್ಮ ವಿಪರೀತ ಸಿಹಿ ತಿನ್ನುವ ಹವ್ಯಾಸ ಬೆಳೆಸಿದಳು. ಒಬ್ಬನೇ ಮಗ ಅಪ್ಪನ ಮೇಲೆ ಹಾಗೂ ಸೋದರತ್ತೆ ಶಂಭಮ್ಮ ಅತ್ತೆಮ್ಮನ ಮೇಲೂ ಅಷ್ಟೇ ಅಕ್ಕರೆ.
ಕಷ್ಟದಲ್ಲಿದ್ದ ಶಂಭಮ್ಮ ಅತ್ತೆ ಮೇಲೆ ವಿಶೇಷ ಕಾಳಜಿ ಇತ್ತು. ಅತ್ತೆಮ್ಮಳ ಒಳ್ಳೆಯತನಕ್ಕೆ ತಕ್ನಂತೆ ಮನೆತನ ಸಿಗಲಿಲ್ಲ ಎಂಬ ಕೊರಗು ಬೇರೆ. ಆಕೆಯ ಮಕ್ಕಳಾದ ಚಂದ್ರು, ನಾಗರಾಜ ರ ಮೇಲೆ ಪ್ರೀತಿ ತೋರುತ್ತಿದ್ದ ಬಗೆಗೆ ನನಗೇನು ಬೇಸರ ಆಗುತ್ತಿರಲಿಲ್ಲ. ಹೆಣ್ಣು ಮೊಮ್ಮಕ್ಕಳ ಮೇಲಿನ ಮಮಕಾರ ನಮ್ಮಲ್ಲಿ ಸಹಜ ಕಾಣುತ್ತದೆ. ಸರಿಸುಮಾರು ಏಳು ದಶಕಗಳ ಕಾಲ ವಿಧವೆಯೂಗಿ ಬಾಳಿದ ಅಮ್ಮ ಯಾರಿಗೂ ಕಿರಿ-ಕಿರಿ ಅನಿಸಿ ಹೊರೆಯಾಗಲಿಲ್ಲ.

ಅಮರಣ್ಣ ತಾತ, ಕೊಟ್ರಮ್ಮ ಅಮ್ಮ ಹಾಗೂ ಅವರೆಲ್ಲ ಮಕ್ಕಳಿಗೆ ಅಮ್ಮ ಇಷ್ಟವಾಗುತ್ತಿದ್ದಳು. ನಾವು ೧೯೭೨ರಲ್ಲಿ ಬೇರೆ ಆದ ನಂತರವೂ, ಅವ್ವನ ಅನಾರೋಗ್ಯದಿಂದಾಗಿ ಅಮ್ಮ ನಮ್ಮನ್ನು ಜೋಪಾನ ಮಾಡಿದಳು. ಒಮ್ಮೊಮ್ಮೆ ಮುಗ್ಧೆಯಂತೆ, ಮತ್ತೊಮ್ಮೆ ಜಾಣೆಯಂತೆ ಕಾಣುತ್ತಿದ್ದ ಅಮ್ಮ ಹಲವು ವಿಸ್ಮಯಗಳನ್ನು ಮೂಡಿಸಿದಳು.
ಮೈ ತುಂಬಾ ಎಣ್ಣೆ ಹಚ್ಚಿ, ಹಂಡೆ ನೀರು ಕಾಸಿ ಮೈ ಹಗುರವಾಗುವಂತೆ ಅಮ್ಮ ಮಾಡಿಸುತ್ತಿದ್ದ ತಲೆ ಸ್ನಾನ, ಹರಪ್ಪ, ಮೊಹಂಜೋರ ಕಾಲದ ಗ್ರೇಟ್ ಬಾತ್‌ನ್ನು ನೆನಪಿಸುತ್ತಿತ್ತು. ವಿಶಾಲವಾದ ಬಚ್ಚಲು, ಹಂಡೆ ನೀರು ಈಗ ಮಾಯವಾಗಿ ಸಣ್ಣಗೆ ನೀರು ಸುರಿಯುವ ಗೀಜರುಗಳು ಸ್ನಾನದ ಸಂಭ್ರಮವನ್ನು ದೂರ ಮಾಡಿವೆ.

ಬಾಲ್ಯದಲ್ಲಿ ಸ್ನಾನ ಮಾಡುವದೆಂದರೆ ಎಲ್ಲಿಲ್ಲದ ಖುಷಿ, ಈಗ ಸ್ಟಾರ್ ಹೋಟೆಲ್ಲುಗಳು ಬಾತ್ ರೂಂಗೆ ಹೋದರೆ ಬೇಸರವಾಗುತ್ತದೆ. ಸ್ನಾನ, ಧ್ಯಾನ, ಕಾಮ ಮುಕ್ತವಾಗಿದ್ದರೆ ಚಂದ ಅಲ್ಲವೇ ? ಆದರೆ ಈಗ ಎಲ್ಲಿಯೂ ಆ ಮುಕ್ತತೆ ಸಿಗುವುದಿಲ್ಲ ಅನಿಸಿದೆ.
ಈಗ ಮನಃಪೂರ್ತಿ ಸ್ನಾನ ಮಾಡುವ, ಹೊಟ್ಟೆ ತುಂಬಾ ಊಟಮಾಡುವುದನ್ನೇ ಮರೆತಂತಾಗಿದೆ. ಬೆನ್ನು ಪರದೇಶಿ ಅದನ್ನು ನಾನೇ ಸ್ವಚ್ಛಗೊಳಿಸುತ್ತೇನೆ ಎಂದು ಅಮ್ಮ ಹೇಳುತ್ತಿದ್ದಳು.
ನಾನು ಬಾಲ್ಯದಲ್ಲಿ ಅಪ್ಪ-ಅಮ್ಮನ ಜೊತೆ ಜಗಳ ತೆಗೆದರೆ ಅಮ್ಮ ನನ್ನ ಪರವಹಿಸುತ್ತಿದ್ದಳು. ಕಾಲೇಜು ವ್ಯಾಸಂಗದಲ್ಲಿಯೂ ಅಮ್ಮ ನನ್ನನ್ನು ಅಷ್ಟೇ ಪ್ರೀತಿಸಿದಳು. ಆಕೆಯು ಮುದ್ದು ಹೆಣ್ನುಮೊಮ್ಮಕ್ಕಳಾದ ಚಂದ್ರು, ನಾಗರಾಜ ಸಣ್ಣ ಪ್ರಾಯದಲ್ಲಿ ತೀರಿಕೊಂಡಾಗ ತುಂಬಾ ನೊಂದುಕೊಂಡರು.
ಒಂದು ವೇಳೆ ಚಂದ್ರು, ನಾಗರಾಜ ಸಾಯದಿದ್ದರೆ ಅಮ್ಮ ಇನ್ನೂ ಬದುಕುತ್ತಿದ್ದಳು. ಅಮ್ಮನ ಅನೇಕ ಆಸೆಗಳನ್ನು ನಮಗೆ ಪೂರೈಸಲಾಗಲಿಲ್ಲ. ಅತ್ತೆಯ ಮಕ್ಕಳೊಂದಿಗೆ ಮದುವೆ ಸಂಬಂಧ ಬೆಳೆಯಲಿಲ್ಲ ಎಂಬ ವಿಷಾಧವಿತ್ತು. ವಿದ್ಯಾವಂತನಾದ ನನಗೆ ರಕ್ತ ಸಂಬಂಧದಲ್ಲಿ ನಂಬಿಕೆ ಇರಲಿಲ್ಲ.
ಈಗಲೂ ಅಷ್ಟೇ ದೀಪಾವಳಿಗೆ ಊರಿಗೆ ಹೋಗಿ, ಸಣ್ಣ ಬಾತ್ ರೂಂನಲ್ಲಿ ಮುಕ್ತವಾಗಿ ಸ್ನಾನ ಮಾಡುವಾಗಲೆಲ್ಲ ಅಮ್ಮ ನೆನಪಾಗುತ್ತಾಳೆ. ಬಿಸಿ ಹೋಳಿಗೆ ತುಪ್ಪದ ಸವಿಯಲ್ಲಿ ಅಮರಮ್ಮ ಅಮ್ಮ ಜೀವಂತವಾಗಿದ್ದಾಳೆ. ಆಕೆಯ ತ್ಯಾಗದ ಫಲ ನಾವು ಅನುಭವಿಸುತ್ತೇವೆ ಎಂಬ ಸಂಭ್ರಮದಲ್ಲಿ ಆಕೆ ಜೀವಂತವಾಗಿದ್ದಾಳೆ.

1 comment:

  1. ""Bennu paradeshi"" I like this, Go ahead sirjee!!

    ReplyDelete