Monday, November 15, 2010

ತೋಂಟದಾರ್ಯ ಜಾತ್ರೆ ಗದುಗಿನ ಅಜ್ಜಾ ಅವರು

ಹೈಸ್ಕೂಲು ವ್ಯಾಸಂಗದ ಸಾಹಿತ್ಯದ ಅಧ್ಯಯನ ವ್ಯಕ್ತಿತ್ವದಲ್ಲಿ ಬದಲಾವಣೆ ತಂದಿತ್ತು. ಸಮರ್ಪಕ ಮಾರ್ಗದರ್ಶಕರಿಗಾಗಿ ಮನಸು ಹಾತೊರೆಯುತ್ತಿತ್ತು. ಸಣ್ಣ ಹುಡುಗನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ವ್ಯವಧಾನ ನಮ್ಮವರಿಗೆ ಇರಲಿಲ್ಲ. ಆಂತರಿಕವಾಗಿ ಅರಳಿದ್ದೆ, ಅಕ್ಯಾಡೆಮಿಕ್ ಆಗಿ ವಿಫಲನಾಗಿದ್ದೆ.

ಈ ಕುರಿತು ವಿಷಾದವಿರಲಿಲ್ಲ. ಗೆಲ್ಲುತ್ತೇನೆ ಎಂಬ ಆಸೆಯೂ ಇತ್ತು. ೧೯೭೬ ರಲ್ಲಿ ಗದುಗಿನ ತೋಂಟದಾರ್ಯ ಮಠದ ಜಾತ್ರೆಗೆ ಬಂದಿದ್ದೆ. ಜಾತ್ರೆಯೆಂದರೆ ಗದ್ದಲ, ಉತ್ತತ್ತಿಗಳ ಹಾರಾಟ ಅಂದುಕೊಂಡಿದ್ದೆ.
ಉಪನ್ಯಾಸ, ಸಾಹಿತ್ಯ ಚರ್ಚೆ, ಪುಸ್ತಕ ಬಿಡುಗಡೆ, ಸಾಧಕರಿಗೆ ಸನ್ಮಾನದಂತಹ ಕಾರ್ಯಕ್ರಮಗಳು ಜಾತ್ರೆಯ ಗದ್ದಲದಲ್ಲಿ ನಡೆಯಬಹುದು ಎಂದು ಊಹಿಸದ ವಯಸ್ಸು. ಒಮ್ಮೆ ಕಾರಟಗಿಯಲ್ಲಿ ಪೂಜ್ಯ ಡಾ. ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಭಾಷಣ ಕೇಳಿ, ಪ್ರಭಾವಿತನಾಗಿದ್ದೆ. ಅವರು ಹೇಳಿದ ಜೋಳದ ಹಿಟ್ಟು, ರೊಟ್ಟಿಯಾದ ರಸವತ್ತಾದ ಕತೆಯನ್ನು ಆಸ್ವಾಧಿಸಿದ್ದೆ.

ಆಕರ್ಷಣೀಯವೆನಿಸಿದ ನನ್ನನ್ನು ಜಾತ್ರೆಗೆ ಕರೆದರು. ಆ ಆಹ್ವಾನದ ಎಳೆ ಹಿಡಿದು ಸಿದ್ದಲಿಂಗಣ್ಣ, ಶರಣುನೊಂದಿಗೆ ಜಾತ್ರೆಗೆ ಹೋಗಿದ್ದೆ. ಜಾತ್ರೆಯ ಗದ್ದಲದ ಮಧ್ಯ ತೂರಿಹೋಗುವ ಮೌಲ್ಯಗಳನ್ನು ಶ್ರೀಗಳು ಟೀಕಿಸಿ ಹೊಸ ಕ್ರಾಂತಿಕಾರಿ ನಿರ್ಣಯದ ಮೂಲಕ ಪಲ್ಲಕ್ಕಿಯನ್ನು , ತೇರಿನ ಗಾಲಿಗೆ ಅನ್ನ ಹಾಕುವ ಸಂಪ್ರದಾಯವನ್ನು ನಿರಾಕರಿಸಿ ಹೊಸ ಕ್ರಾಂತಿಗೆ ನಾಂದಿ ಹಾಡಿದ ಅಪರೂಪದ ಕ್ಷಣದಲಿ ಭಾಗವಹಿಸಿದೆ ಎಂಬ ಅಭಿಮಾನ ನನ್ನದಾಯಿತು.

ಅಂದು ಯಾರ್ಯಾರು ಭಾಷಣ ಮಾಡಿದರು ನನಗದು ನೆನಪಿಲ್ಲ. ಕೊನೆಯಲ್ಲಿ ಶ್ರೀಗಳು ಮಾಡಿದ ಆಶೀರ್ವಚನ ಅದ್ಭುತವಾಗಿತ್ತು. ಎಳೆಯ ಬಾಲಕರಿಂದ ಹಿರಿಯ ಸಾಹಿತಿಗಳಿಗೂ ತಿಳಿಯುವಂತೆ ಸರಿಸುಮಾರು ಎರಡು ತಾಸು ಶ್ರೀಗಳು ಪರಂಪರೆ ಹಾಗೂ ಲಿಂಗಾಯತ ಮೌಲ್ಯಗಳನ್ನು ಪ್ರತಿಪಾದಿಸಿ, ತಾವು ತೆಗೆದುಕೊಂಡ ಕ್ರಾಂತಿಕಾರಿ ನಿರ್ಣಯಕ್ಕೆ ಸಮರ್ಥನೆ ನೀಡಿ ಭಕ್ತರಿಗೆ ಸಾಂತ್ವನ ಹೇಳಿದರು.
ಬದಲಾವಣೆಗಳನ್ನು ಸಮಾಜ ಮುಕ್ತವಾಗಿ ಸ್ವೀಕರಿಸುವುದಿಲ್ಲ. ಆದರೆ ತಿಳಿಹೇಳಿದಾಗ ಒಪ್ಪಿಕೊಳ್ಳುತ್ತಾರೆ. ತಿಳಿಹೇಳುವ ಕಾರ್ಯವನ್ನು ಶ್ರೀಗಳು ಅರ್ಥಪೂರ್ಣವಾಗಿ ಮಾಡಿದ್ದರು. ಪರಿಣಾಮಕಾರಿ ಮಾತುಗಾರಿಕೆ ಅದ್ಭುತ ಪರಿಚಯ. ಎಳೆಯ ಪ್ರಾಯದಲ್ಲಿ ಆಯಿತು. ನನಗೆ ಕೇವಲ ಹನ್ನೊಂದು ವರ್ಷ ಭಾಷಣದ ತೀವ್ರತೆ ಹಾಗೂ ಪರಿಣಾಮವನ್ನು ಗ್ರಹಿಸಿಕೊಂಡು, ಉತ್ತಮ ಮಾತುಗಾರನಾಗಬೇಕೆಂದು ಸಂಕಲ್ಪಿಸಿಕೊಂಡೆ. ನನ್ನ ಸಂಕಲ್ಪವನ್ನು ಯಾರಿಗಾದರೂ ಹೇಳಿದ್ದರೆ ಅಪಹಾಸ್ಯ ಮಾಡಬಾರದು ಎಂದು ಸುಮ್ಮನಿದ್ದೆ, ಆದರೆ ಮರುದಿನ ಸಂಜೆ ಅಂತಹ ಗದ್ದಲದಲ್ಲಿಯೂ ಶ್ರೀಗಳನ್ನು ಭೇಟಿ ಆದೆ.

ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳು ಒಂದು ಸಮಾಜದ ಮಠಾಧೀಶರೊಬ್ಬರು ಹೀಗೆ ಸಣ್ಣ ಹುಡುಗನೊಂದಿಗೆ ಚರ್ಚೆ ಮಾಡಬಹುದು ಎಂದು ಊಹಿಸಿರಲಿಲ್ಲ. ದೊಡ್ಡವರು ಎನ್ನುವದು ಇದೇ ಕಾರಣಕ್ಕಲ್ಲವೇ? ನಿನ್ನೆಯ ನನ್ನ ಭಾಷಣ ತಿಳಿತೇನು ? ಅಂದರು. ನಾನು ಗ್ರಹಿಸಿದ ರೀತಿಯನ್ನು ಧೈರ್ಯದಿಂದ ವಿವರಿಸಿದೆ. ಭೇಷ್, ಭೇಷ್ ಎಂದರು. ಅಡ್ಡಿಯಿಲ್ಲ ಇಷ್ಟೊಂದು ಸಣ್ಣ ವಯಸ್ಸಿನಲ್ಲಿ ಅಪಾರ ಕುತೂಹಲ ಇಟ್ಟುಕೊಂಡಿದ್ದೀಯಾ. ನೀನು ಮನಸ್ಸು ಮಾಡಿದರೆ ಸಾಹಿತ್ಯ ವಿದ್ಯಾರ್ಥಿ ಆಗ್ತಿ. ಛಲೋತನ್ಯಾಗ ಅಭ್ಯಾಸ ಮಾಡು ಎಂದು ಆಶೀರ್ವದಿಸಿ ಒಂದೆರೆಡು ಪುಸ್ತಕಗಳನ್ನು ಕೊಟ್ಟರು. ಇನ್ನಷ್ಟು ಉತ್ತೇಜಿತನಾಗಿ ಧೈರ್ಯ ತಂದುಕೊಂಡು ಅಭ್ಯಾಸದ ನಿರಾಸಕ್ತಿಯನ್ನು ಹೇಳಿದೆ. ಧೈರ್ಯ ತುಂಬಿದರು.
ಇಲ್ಲಿ ನೀನು ಯಶಸ್ಸು ಆಗ್ತೀ. ಹೆದರಬೇಡ ಫೇಲ್ ಆದರೂ ಚಿಂತೆಯಿಲ್ಲ, ಓದುವದನ್ನು ಬಿಡಬೇಡ ಎಂದರು. ಓದಿದಾಗ ಕಣ್ಣೀರು ಬರುತ್ತೆ, ಅಧ್ಯಯನ ಏಕಾಗ್ರತೆಯ ಕೊರತೆಯನ್ನು ವಿವರಿಸಿದೆ. ಕತ್ತಲಿನಲ್ಲಿ ಮುಂಬತ್ತಿ ಹಚ್ಚಿ ಗೋಡೆಯ ಮೇಲಿನ ಚುಕ್ಕೆಯನ್ನು ಒಂದೆರಡು ನಿಮಿಷ ಗಮನಿಸುವ ದೃಷ್ಟಿಯೋಗ ಹೇಳಿಕೊಟ್ಟರು.

ಕಳೆದುಕೊಂಡ ಶ್ರೀಮಂತಿಕೆ, ಮನದ ದುಗುಡವನ್ನು ವಿವರಿಸಿದೆ. ಲಕ್ಷ್ಮೀ ದೂರಾದರೂ ಚಿಂತೆಯಿಲ್ಲ. ನಿನಗೆ ಸರಸ್ವತಿ ಒಲಿಯುತ್ತಾಳೆ ಎಂದು ಆಶೀರ್ವಾದ ಮಾಡಿದರು. ಈಗ ಪೂಜ್ಯರ ಅಂದಿನ ಆಶೀರ್ವಾದದ ಫಲದಂತೆ ಸರಸ್ವತಿ ಒಲಿದಿದ್ದಾಳೆ. ಎಂಟನೇ ತರಗತಿ ಪಾಸಾಗದ ಯೋಗ್ಯತೆ ಇಲ್ಲದ ನಾನು ಇಂದು ಎಂ.ಎ., ಪಿಎಚ್.ಡಿ. ಮಾಡಿದ್ದೇನೆ ಎಂಬುದೇ ಒಂದು ಪವಾಡವಲ್ಲವೇ ?
ಆತ್ಮ ವಿಶ್ವಾಸ ತುಂಬುವ ಇಂತಹ ಗೌರವಾನ್ವಿತ ಹಿರಿಯರನ್ನು ಪವಾಡ ಪುರುಷರು ಎಂದು ಕರೆಯುವುದು ಎನಿಸುತ್ತದೆ.
ಬಾಲ್ಯದ ಈ ಘಟನೆಂದಾಗಿ ಪರಮ ಪೂಜ್ಯರು ಇಂದಿಗೂ ನನಗೆ ಪವಾಡ ಪುರುಷರೆನಿಸಿದ್ದಾರೆ. ಅಂದು ಅವರು ಅಂತಹ ಸ್ಪಂದನಾತ್ಮಕ ಮಾತುಗಳನ್ನು ಆಡದಿದ್ದರೆ ನಾನು ಕಿರಾಣಿ ಅಂಗಡಿ ಗಲ್ಲೆ ಬಿಟ್ಟು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರಲಿಲ್ಲ. ಬಾಲ್ಯದಲ್ಲಿ ಅನೇಕ ದುರ್ಘಟನೆಗಳು ನಡೆದಾಗ ಪೂಜ್ಯ ಅಜ್ಜಾ ಅವರು ಧೈರ್ಯ ತುಂಬಿ ಆಶೀರ್ವದಿಸಿದರು. ತಾಯಯನ್ನು ಭೇಟಿ ಆಗುವ ಕರುವಿನ ಹಾಗೆ ದುಃಖವಾದಾಗಲೆಲ್ಲ ಗದುಗಿಗೆ ಓಡಿ ಬಂದು ಅಜ್ಜಾರೊಂದಿಗೆ ಒಂದೆರಡು ದಿನ ಇದ್ದು ಹೋಗುತ್ತಿದ್ದೆ.
ಅನೇಕ ಸಾಹಿತ್ಯ ಕೃತಿಗಳನ್ನು ಶ್ರೀಗಳು ಬಾಲ್ಯದಲ್ಲಿ ಓದಿಸಿ, ವಿವರಿಸಿದರು. ಆಗ ಭೈರಪ್ಪನನ ಕಾದಂಬರಿಯನ್ನು ಓದಿದೆ, ಅರ್ಥ ಮಾಡಿಕೊಂಡೆ ಎಂಬ ಅಭಿಮಾನ ನನ್ನದು. ಹೈಸ್ಕೂಲು ವ್ಯಾಸಂಗದ ಸಾಹಿತ್ಯಾಸಕ್ತಿಗೆ ದಿವ್ಯ ಅಜ್ಜಾ ಅವರು ಪ್ರೇರಣೆಯಾದರು. ಗಣಿತ, ವಿಜ್ಞಾನ ತಲೆಗೆ ಹೋಗಲೇ ಇಲ್ಲ. ಆದರೂ ಧೈರ್ಯ ತಂದುಕೊಂಡು ಹೈಸ್ಕೂಲಿನಲ್ಲಿ ಕೇವಲ ಸಾಹಿತ್ಯ ಓದಿದೆ. ಉಳಿದ ವಿಷಯಗಳ ನಿರಾಸಕ್ತಿಯನ್ನು ಲೆಕ್ಕಿಸಲಿಲ್ಲ. ಅಂದು ಬಾಲಕನಾಗಿ ಜಾತ್ರೆಯಲ್ಲಿ ಪ್ರೇಕ್ಷಕನಾಗಿ ಭಾಗವಹಿಸಿದ್ದೆ.
ಆದರೆ..... ಈಗ ಕಳೆದ ಇಪ್ಪತ್ತು ವರ್ಷಗಳಿಂದ ಅದೇ ಜಾತ್ರೆಯ ಪದಾಧಿಕಾರಿಯಾಗಿ, ಕಾರ್ಯಕ್ರಮ ನಿರೂಪಿಸಿ ಜಾತ್ರೆ ಯ ಭಾಗವಾಗಿದ್ದೇನೆ . ಇದೇ ಅಲ್ಲದೆ ಬೆಳೆಯುವ, ಬೆರೆಯುವ ಅಚ್ಚರಿ. ಇದನ್ನೆ ಆಧುನಿಕ ವಿಕಸನದ ಪವಾಡ ಅನ್ನುವುದು. ಗದುಗಿನ ಶ್ರೀಗಳು ಇಂದಿಗೂ ನನ್ನೊಂದಿಗಿದ್ದಾರೆ. ದಿವ್ಯ ಚೇತನವಾಗಿ.

No comments:

Post a Comment