Thursday, November 11, 2010

ಶೌಚಾಲಯದ ಹಿಂಸೆ

ನೆನಪಿನಾಳದಲ್ಲಿ ಬಾಲ್ಯದ ಘಟನೆಗಳು ಇಷ್ಟೊಂದು ಸ್ಪಷ್ಟವಾಗಿ ನೆನಪಿರಲು ಕಾರಣಗಳೇನು? ಎಂದು ಸದಾ ಆಲೋಚಿಸುತ್ತೇನೆ. ನಾಲ್ಕಾರು ವರ್ಷದ ಹಿಂದಿನ ಸಂಗತಿಗಳು ಅಸ್ಪಷ್ಟವಾಗಿ ಬಿಡುತ್ತವೆ. ಹಾಗೆ ವ್ಯಕ್ತಿಗಳು ಕೂಡಾ. ಆದರೆ ಬಾಲ್ಯದ ಘಟನೆಗಳು ಸ್ಮೃತಿ ಪಟಲದ ಮೇಲೆ ಸಿನಿಮಾದಂತೆ ಚಲಿಸುತ್ತಾ ಸಾಗುತ್ತವೆ. ವ್ಯಕ್ತಿ ಬೆಳೆದು ದೊಡ್ಡವನಾಗಿ ಉನ್ನತ ಸ್ಥಾನಕ್ಕೇರಿದರೂ ಬೆಂಬಿಡದ ಭೂತದಂತೆ ಆರದ ಗಾಯದಂತೆ ಬಾಲ್ಯದ ಆಘಾತಗಳು ಉಳಿದುಕೊಂಡು ಬಿಡುತ್ತವೆ. ಅವುಗಳನ್ನೇ ಚೈಲ್ಡಹುಡ್ ಟ್ರಾಮಾಸ್ ಎನ್ನುತ್ತಾರೆ.

ಇಂದು ಎಲ್ಲ ಐಷಾರಾಮಿ ಜೀವನದ ಹೊಸ್ತಿಲಲಿದ್ದರೂ ಅವುಗಳನ್ನು ಎಂಜಾಯ ಮಾಡಲು ಬಾಲ್ಯದ ಆಘಾತಗಳು ಅಡ್ಡಿಪಡಿಸುತ್ತವೆ. ಸ್ಟಾರ್ ಹೋಟೆಲಗಳಲ್ಲಿ ಬಾತರೂಮ್ ಬಳಸುವಾಗ, ರಸ್ತೆ ಬದಿಯಲ್ಲಿ ಕತ್ತಲೆ ರಾತ್ರಿಯಲಿ ವಿಸರ್ಜನೆಗೆ ಒದ್ದಾಡುವ, ದೀಪದ ಬೆಳಕು, ಬಿದ್ದ ಕೂಡಲೇ ಅಸಹಾಯಕರಾಗಿ ಎದ್ದು ನಿಲ್ಲುವ ಗ್ರಾಮಿಣ ಮಹಿಳೆಯರನ್ನು ಕಂಡಾಗ ಆಘಾತವಾಗುತ್ತದೆ.

ಬಯಲು ಶೌಚಾಲಯದ ಯಾತನೆಯನ್ನು ಬಾಲ್ಯದಲ್ಲಿ ವಿಪರೀತ ಅನುಭವಿಸಿದ್ದೇನೆ. ನಾವು ತುಂಬಾ ಶ್ರೀಮಂತರು, ಆದರೆ ಮನೆಯಲ್ಲಿ ಶೌಚಾಲಯ ಕಟ್ಟುವಂತಿಲ್ಲ. ಅದು ಮೈಲಿಗೆ ಎಂಬ ಭಾವನೆ. ಹೀಗಾಗಿ ಎಲ್ಲರೂ ಹೊರಗಡೆ ಬಯಲು ಜಾಗೆಯನ್ನು ಹುಡುಕಿಕೊಂಡು ಹೋಗಬೇಕು. ಮಹಿಳೆಯರಿಗೆ ನಮ್ಮ ಮನೆಯ ಹಿಂದಿದ್ದ ಪ್ರದೇಶದಲ್ಲಿ ಹೋಗುವ ಯಮಯಾತನೆ ನೆನಸಿಕೊಂಡರೆ ಭಯವಾಗುತ್ತದೆ.
ಆದ್ದರಿಂದ ನಮ್ಮ ಮನೆಯ ಹೆಣ್ಣು ಮಕ್ಕಳು ನಸುಕಿನಲ್ಲಿ, ಇಲ್ಲವೇ ರಾತ್ರಿ ಆಗುವವರೆಗೆ, ಉಸಿರು ಬಿಗಿಹಿಡಿದುಕೊಂಡು ಬಯಲಿಗೆ ಹೋಗಲು ಚಡಪಡಿಸುತ್ತಿದ್ದರು. ಏನೇ ಮೃಷ್ಠಾನ್ನ ಸೇವಿಸಿದರೂ ಏನೂ ಪ್ರಯೋಜನ. ವಿಸರ್ಜನೆಗೆ ಅನುಭವಿಸುವ ನರಕ ಯಾತನೆ ಮುಂದೆ ವೈಭವ ಯುವ ಲೆಕ್ಕ.
ಮಹಿಳೆಯರದು ಈ ದುಸ್ಥಿತಿಯಾದರೆ, ಗಂಡಸರ ಪಾಡಂತೂ ಇನ್ನೂ ವಿಪರೀತ. ಊರ ಹೊರಗೆ, ಬಯಲು ಜಾಗೆಯನ್ನು ಹುಡುಕಿಕೊಂಡು ಹೋಗಬೇಕು. ಈ ರೀತಿ ಚರಗಿ ಹಿಡಿದುಕೊಂಡು, ಉಸಿರು ಬಿಗಿದ ಹಿಡಿದುಕೊಂಡು ಮೈಲುಗಟ್ಟಲೆ ನೆಡೆಯುವ ಹಿಂಸೆ ನೆನಪಾದರೆ ಇಂದಿಗೂ ಬೇಸರವಾಗುತ್ತದೆ. ಬಾಲ್ಯದಲ್ಲಿ ಹೇಗೋ ಅನುಭವಿಸಿದೆವು ಮುಂದೆ ಊರು ಬೆಳೆದಂತೆಲ್ಲ ತೊಂದರೆಯಾತು.
ನಾವು ಹೋಗುತ್ತಿದ್ದ ಖಾಸಗಿ ಒಡೆತನದ ಜಾಗೆಯಲ್ಲಿ ಆಗ ಜಾಗೆಯ ಮಾಲಕರು ಕಟ್ಟಡ ಕಟ್ಟಲು ಪ್ರಾರಂಭಿಸಿ. ಬೆಳಗಿನ ವೇಳೆ ಅಲ್ಲಿ ಕುಳಿತುಕೊಂಡು ಯಾರೂ ಹೋಗದಂತೆ ಕಾಯಲು ಪ್ರಾರಂಭಿಸಿದರು. ಅವರಿಗೆ ಹೆದರಿದ ಜನ ಅಯ್ಯೋ ಧಣಿ ಕುಂತಾನಪ್ಪೋ ಎಂದು ಬೇರೆ ಮುಂದಿನ ಜಾಗ ಹುಡುಕುತ್ತಾ ಬೈದುಕೊಳ್ಳುತ್ತಾ ಸಾಗುತ್ತಿದ್ದರು.
ಆದರೆ ನಾನು ತುಂಬಾ ಹಟಮಾರಿ. ಆ ಬಯಲಲ್ಲಿ ಹೋಗುವುದು ನನ್ನ ಹಕ್ಕು ಎಂದು ತಿಳಿದಿದ್ದೆ. ಧಣಿ ಅಲ್ಲಿ ಕುಳಿತದ್ದನ್ನು ಲೆಕ್ಕಿಸದೇ ಹೊರಟೆ,ಅದನ್ನು ಕಂಡ ಅವರು, ಲೇ ತಮ್ಮಾ ಇಲ್ಲಿ ಎದುಕ ಕುಂತಿನೀ ಅಂತ ಮೂಡಿ ಅಂದರು, ನೀವು ಎದಕರ ಕುಂದರ್ರಿ ನಾ ಚರಗಿ ತಗೊಂಡ ಹೋಗಬೇಕು ಅಂದೆ.
ಅಲ್ಲೋ ನಾನು ಕಲ್ಲು ಕುಂತಂಗ ಕುಂತು ಬ್ಯಾಡ ಅಂತೀನಿ ಎಷ್ಟು ಸೊಕ್ಕು ನಿಂದು ಅಂದರು. ಅಲ್ಲ ನೀವಾದರ ಈಗ ಇದ ಬಯಲಾಗ ಹೋಗಿ ಬಂದೀರಿ, ನಾಯಾಕ ಹೋಗಬಾರದು ಎಂದಾಗ ಮಾಲಿಕರಿಗೆ ಹೇಗಾಗಿರಬೇಡ? ಹೋಗಿಯೇ ಹೋಗುತ್ತೇನೆ ಎಂದು ಹಕ್ಕು ಚಲಾಸಿದಾಗ ಅವರಿಗೆ ಎಲ್ಲಿಲ್ಲದ ಸಿಟ್ಟು ಬಂದು, ನನ್ನ ಚರಗಿ ಕಸಿದು ನೀರು ಚಲ್ಲಿಬಿಟ್ಟರು. ಸಿಟ್ಟಿಗೆದ್ದು ಅಪಮಾನದಿಂದ ಕುದ್ದು ಹೋದೆ. ವಿಸರ್ಜನೆಯ ನೋವಿನಲ್ಲಿಯೂ ಅಳುತ್ತಾ ಜಗಳ ತೆಗೆದೆ. ಅಲ್ಲಿದ್ದ ಆಳುಗಳು ನನ್ನನ್ನು ಸಮಧಾನಿಸಿದರು.
ಅಲ್ಲಪಾ ಧಣಿ, ಧಣೇರು ಕುಂತಾಗ ಹಿಂಗ ಹಟ ಮಾಡಬಾರದು ಎಂದು ತಿಳಿಹೇಳಿ ಚರಗಿ ನೀರು ತುಂಬಿ ಕೊಟ್ಟು ಮುಂದೆ ಸಾಗು ಹಾಕಿದರು.
ಈ ಘಟನೆಯನ್ನು ಅವರು ಊರೆಲ್ಲ ಹೇಳಿ ನಕ್ಕದ್ದು ಆಮೇಲೆ ಗೊತ್ತಾ ಯಿತು. ಅಬಾಬಾ ಸಿದ್ದಪ್ಪ ಧಣಿ ಏನೂ ಬೆರಕೆಪ್ಪೊ ಜಾಗದ ಧಣಿರೊಂದಿಗೆ ಜಗಳ ಆಡಿದ ಎಂದು ಹೆಮ್ಮೆಯಿಂದ ತಮಾಷೆಯಿಂದ ಸುದ್ದಿ ಹಬ್ಬಿಸಿ ನನ್ನನ್ನು ಹೀರೋ ಮಾಡಿದರು.
ಅವರು ಊರಿಗೆ ಶ್ರೀಮಂತರು ಆವರೆದುರು ನಿಂತು ಮರು ಮಾತನಾಡುತ್ತಿದ್ದಿಲ್ಲ. ಆದರೆ ಶೌಚಾಲಯದ ಹಕ್ಕು ಪ್ರತಿಪಾದಿಸಿ ತಪ್ಪು ಬಂಡಾಯ ಎದ್ದಿದ್ದೆ. ಅವರ ಜಾಗೆಯಲ್ಲಿ ಹೋಗುವುದು ತಪ್ಪೆಂದು ಆಗ ಅನಿಸಲಿಲ್ಲ. ಅಂದು ನಾನು ಅಪಮಾನಗೊಂಡದ್ದು ನನ್ನಲ್ಲಿ ಕೊನೆ ತನಕ ಶೌಚಾಲಯದ ಬ್ರಾಮಾ ಆಗಿ ಉಳಿಯಿತು. ಮುಂದಿನ ದಿನಗಳಲ್ಲಿ ಅದಕ್ಕಿಂತಲೂ ದೂರ ಜಾಗೆ ಹುಡುಕಿ ಹೋಗುವ ಹಿಂಸೆ ಆರಂಭವಾತು. ಲ್ಯಾಟ್ರಿನ ಹೋಗುವ ಹಿಂಸೆ ನೆನಪಾಗಿ ಹೊಟ್ಟೆ ತುಂಬಾ ಊಟಮಾಡಲು ಭಯವಾಗುತ್ತಿತ್ತು. ಈಗ ಆ ಗಲೀಜನ್ನು ,ಹಿಂಸೆಯನ್ನು ನೆನಸಿಕೊಂಡರೆ ಲ್ಯಾಟ್ರಿನ್ ಹೇಗೆ ನಾಗರಿಕತೆಯ ಒಂದು ಭಾಗ ಎಂಬುದು ಅರ್ಥವಾಗಿದೆ.

1 comment: