Wednesday, April 18, 2018

ಲವ್ ಕಾಲ


ಲವ್ ಕಾಲ

*ಬರೀ ಸ್ನೇಹವಿರಲಿ ಸಾಕು*

ಈಗ ಮನಸು ಅರಳಿದ ಸಮಯ. ನಿನ್ನ ಚಡಪಡಿಕೆ ಅರ್ಥವಾಗಿದೆ.

ನಾನು ವೇದಿಕೆ ಮೇಲಿಂದ ನಿನ್ನ ಗಮನಿಸಿದ ಮರುಕ್ಷಣವೇ ಕರಗಿ ಹೋಗಿದ್ದೆ. ಆ ದಟ್ಟ ಹಳದಿ ಬಣ್ಣದ ಉಡುಗೆ...
ಅಯ್ಯೋ ಸಾಕು ನನ್ನ ಕರಗಿಸಲು.

ಕೆಳಗಿಳಿದ ಮೇಲೆ ನೀ ಬಳಿ ಬರುತ್ತೀ ಎಂಬ ಒಳಮನಸಿನ ಹಂಬಲ ಈಡೇರುವ ಭರವಸೆ.
ಅದೇ ನಡೆಯಿತು. 'Wonderful sir, card ಇದ್ದರೇ ಕೊಡಿ' ಅಂದಾಗ flat. ಆದರೆ ತೋರಿಸಿಕೊಳ್ಳಲಿಲ್ಲ.

ಅನಿರೀಕ್ಷಿತ ಸೆಳೆತಗಳಿಂದ ನಮಗರಿವಿಲ್ಲದಂತೆ ಕಳೆದುಹೋಗುತ್ತೇವೆ. ಆದರೂ ಸಹಿಸಿಕೊಳ್ಳುವದು ಸಾರ್ವಜನಿಕ ಸಭ್ಯತೆ.ಶಿಷ್ಟಾಚಾರ.

ಕೆಲ ದಿನಗಳ‌ ನಂತರ ಫೋನ್ ರಿಂಗಣವಾಡಿತು. ಮಾತಾಡಲು ಏನೇನೋ ನೆಪ. ಮಾತನಾಡಿದೆವು.
ಕೊಂಚ ಬಿಗುಮಾನ ಸಹಜ. ಸೋತೆ ಎನಿಸಬಾರದೆಂಬ ಅಭಿಮಾನ. ಅದೂ ನಿಜ ಅನ್ನು.

ನಾನೂ ನನ್ನ ಗುಟ್ಟು ಬಿಟ್ಟು ಕೊಡಲಿಲ್ಲ.
ಒಮ್ಮೆ ನೀನು rude ಆಗಿ ಮಾತನಾಡಿದ ಮೇಲೆ ಫೋನ್ ತೆಗೆದುಕೊಳ್ಳುವದನ್ನೇ ನಿಲ್ಲಿಸಿದೆ. ನನಗೂ ಸ್ವಾಭಿಮಾನ ಕಾಡಿತು.

*ಪ್ರೀತಿ ಎಲ್ಲವನ್ನೂ ಸಹಿಸುತ್ತದೆ ಆದರೆ ಅಹಂಕಾರವನ್ನಲ್ಲ* ಎಂಬುದ ನಿನಗೆ ತಿಳಿಸಬೇಕಾಗಿತ್ತು.

ಈಗ ಅರ್ಥವಾಗಿರಬಹುದೆಂದುಕೊಳ್ಳುವೆ. ಮೊನ್ನೆ ಫೋನ್ ತೆಗೆದುಕೊಂಡೆ. ನಿಮ್ಮೂರಿಗೆ ಬಂದರೂ ಹಾಗೆ ಮರಳಿದ್ದ ತಲ್ಲಣ ಗ್ರಹಿಸಿದೆ.

I didn't want to be rude like you.

ಪ್ರತಿ ಮಾತಲ್ಲೂ ನೀ ಹೇಳಿದ್ದು ಅದೇ ' ಇದು ಬರೀ ಸ್ನೇಹ ಮಾತ್ರ ಮತ್ತೇನು ಇಲ್ಲ, ಬೇರೇನೂ ಭಾವಿಸಬಾರದು. ಆದರೆ ನಿಮ್ಮ ಭೇಟಿ ಮಾತುಕತೆ ಇರಲಿ.'

ನಾನೆಲ್ಲಿ ಬೇರೆ ಹೇಳಿದೆ. ಏನೂ ಇಲ್ಲ. ನೀ ಅದನ್ನು ವಿವರಿಸುವ ಅಗತ್ಯವೇ ಇಲ್ಲ. ನನ್ನದೂ ಬರೀ ಸ್ನೇಹ.

*All are equal but some are more equal* ಎಂಬ ಮಾತು ಇಲ್ಲಿ ಅರ್ಥಪೂರ್ಣ.

ಹಲವು ಆಯಾಮಗಳೂ, ನೂರೆಂಟು ಅರ್ಥಗಳೂ...

ಇದು ಬರೀ ಸ್ನೇಹ ಆದರೂ ಏನೋ ಹೇಳಲಾಗದ್ದೂ ಇದೆ. ನೀನಾಗಿ ಅರ್ಥ ಮಾಡಿಕೊಳ್ಳುವರೆಗೆ ನಾ ಹೇಳಲಾರೆ. ಹೇಳಲೂಬಾರದು.

ಅದನ್ನು ನೀ ಹೇಗೆ ಸ್ವೀಕರಿಸಬಹುದೆಂಬ ಅರಿವೂ ನನಗಿದೆ. ಸಂಯಮ ಕಳೆದುಕೊಳ್ಳುವ ಮಾತೇ ಇಲ್ಲ.

ಇದು‌ ಮನಸಿನ ಮಾತು. ಜೀವದ ಗುಟ್ಟು. ರಟ್ಟು ಮಾಡಲಾಗದು. ಮಾಡಲೂ ಬಾರಾದು.

ಆ ಭರವಸೆ ನೀಡುವೆ. Just you have to believe me.

ಮುಂದೆ ಮುಖಾಮುಖಿ ಆದಾಗ ಸ್ನೇಹದ ವಿಸ್ತಾರವ ವ್ಯಾಖ್ಯಾನಿಸುವೆ.

*Let us wait until the precious and pretty moment*.

ಲವ್ ಕಾಲ

*ಲವ್ ಕಾಲ*

*ಸಮಯ-ಸಾಮಿಪ್ಯ-ಸಾಂಗತ್ಯ* ಮರೆತು ಕಳೆದುಹೋಗಬೇಡ.

ಈ ಬದುಕೇ ಹೀಗೆ. ಎಲ್ಲಿಂದ ಮತ್ತೆಲ್ಲಿಗೋ. ಎಲ್ಲವೂ ಎಲ್ಲರೂ ಇರಲಿ ಎಂಬ ತವಕ. ಸಂಬಂಧಗಳು ಕಪ್ಪೆ ತೂಗಿದ ಹಾಗೆ. ಎಲ್ಲರಿಗೂ ಅವರದೇ ಲೆಕ್ಕಾಚಾರಗಳು.

ಆದರೂ ನಾವು gentleman ಆಗಿ ಉಳಿಯುವ ಗೊಂದಲದಲಿ ನಿಜವಾಗಿ ಪ್ರೀತಿಸುವ ಮನಸುಗಳ ನೋಯಿಸಿಬಿಡುತ್ತೇವೆ.

ಅವರು ಅಸಂತೋಷದಿ ದೂರ ಸರಿದ ಮೇಲೆ ' ಅಯ್ಯೋ ಹೀಗಾಗಬಾರದಿತ್ತು ' ಎಂದು ಹಳಹಳಿಸುತ್ತೇವೆ.

ಅಷ್ಟೊತ್ತಿಗೆ bondage ಸಡಿಲಗೊಂಡಿರುತ್ತೆ.
ನಾವು ಅನಿರೀಕ್ಷಿತವಾಗಿ ಒಂಟಿಯಾಗುತ್ತೇವೆ.

ತುಂಬಾ ಪ್ರೀತಿಸುವ ಮನಸುಗಳ ನೋಯಿಸಬಾರದೆಂಬ ಸುಪ್ತ ಎಚ್ಚರ ಅನಿವಾರ್ಯ.

ಸ್ವಾರ್ಥ, ವ್ಯಕ್ತಿ ಕೇಂದ್ರಿತ ಮನಸುಗಳು ನಮಗರಿವಿಲ್ಲದಂತೆ ನಮ್ಮನ್ನು ಆವರಿಸಿ ಆಳುತ್ತಲೇ ಇರುತ್ತವೆ. ನಾವು ಆ ಮನಸುಗಳ ದಾಸರಾಗಿ ಕಳೆದು ಹೋಗಿ, ನಿಜವಾಗಿ ಪ್ರೀತಿಸುವ ಮನಸುಗಳ ಮೇಲೆ ಮಾತಿನ ದಾಳಿ ಮಾಡಿ ಘಾಸಿಗೊಳಿಸುತ್ತೇವೆ.

ಮಾತುಗಳು ವ್ಯರ್ಥವಾಗಿ ಖರ್ಚಾದರೂ ಪರಿಣಾಮ ಶೂನ್ಯ.

ಪ್ರೀತಿಸುವ ವ್ಯಕ್ತಿಯ
*ಸಮಯ-ಸಾಮಿಪ್ಯ-ಸಾಂಗತ್ಯ* ಮೆಲುಕು ಹಾಕಿ ಸಂಭ್ರಮಿಸಿ ಬೆಲೆ ಅರಿಯುವ ಸಾರ್ಥಕ ಮೆರೆಯಬೇಕು.

*ಕಳೆದುಹೋಗಬೇಡ, ಕಳೆದುಕೊಳ್ಳಬೇಡ*.

ಸ್ವಾರ್ಥಿಗಳು ತಮ್ಮ ಕೆಲಸ ಮುಗಿದ ಮೇಲೆ ಕೈ ಒರೆಸಿಕೊಂಡು ಮರೆಯಾಗಿ ಮರೆತುಬಿಡುತ್ತಾರೆ ನಮ್ಮ ಸೇವೆಯ.

ಅಯ್ಕೆ ನಿಚ್ಚಳವಾಗಿ ಇರಲಿ.
ಕಳೆದ ಸಮಯದ ಆಪ್ತತೆ ಸದಾ ಅನುರಣಿಸುತಿರಲಿ.
ಸಾಮಿಪ್ಯದ ಸವಿ ಸುಖ, ಬಿಸಿಯಪ್ಪುಗೆ, ಸವಿಮುತ್ತುಗಳ ಸರಮಾಲೆ ಜಾರದಿರಲಿ.

ಹೂ ಮೈಮನ ಬಾಡದಿರಲಿ.
ಈ ಬಂಧನ ವಾದ-ವಿವಾದಗಳ ಮಧ್ಯೆ ಮತ್ತೆ ಮತ್ತೆ ಅರಳಿ ಬೆಳಗುತಲಿರಲಿ.

ಇರುತ್ತೀಯನ್ನುವ ಭರವಸೆಯ ಬೆಳಕಲಿ ಮಾತು ಖರ್ಚಾದರೂ ಸಹಿಸಿಕೊಳ್ಳವೆ.

ಅರಳುವ ಹೂ ನಗೆಗಾಗಿ...

       *ಸಿದ್ದು ಯಾಪಲಪರವಿ*

ಬಸವನೆಂಬ ಮಹಾಬೆಳಗು

*ಬಸವನೆಂಬ ಮಹಾಬೆಳಗು*

ಅಂದು...

ಅಸಂಖ್ಯ ಕನವರಿಕೆಯಲೂ ಬರೀ‌
ನಿನದೇ ಧ್ಯಾನ

ಅರಿವಿನ ಕುರುಹು ಕೊಟ್ಟು ಪ್ರಜ್ಞೆಯ
ಬೀಜ ಬಿತ್ತಿ ಆಧ್ಯಾತ್ಮದ ತಳಹದಿ ಮೇಲೆ
ನೆಲೆ ನಿಂತ ಅನಭಾವದ ಮಹಾ ಮಂಟಪ

ಸ್ಥಾವರವಳಿಸಿ ಜಂಗಮವ ಉಳಿಸಿ
ಇವರೆಲ್ಲ‌ ನಮ್ಮವರೆಂದೆನಿಸಿ
ಮನೆಯ ಮಗನಾದ ಮಹಾಮಾನವ

ಸಂತೆಯ ಸದ್ದಲೂ ಮೌನದ ಮೆರವಣಿಗೆ
ಬೆಟ್ಟದ ಮೇಲೂ ಮನುಜ ಪಥ
ಮೃಗಗಳಿಗಿಲ್ಲ ಒಂದಿನಿತು ಜಾಗ
ನಿಂದೆಗಳ ನೆರೆ-ತೊರೆಗಳಿಗೆ ಜಗ್ಗದೆ
ಕುಗ್ಗದೇ ನಡೆದದ್ದೇ ಆನೆ ಮಾರ್ಗ

ಇದು ಬರೀ ಬೀದಿ ಹೋರಾಟ ಹಾದಿ
ಜಗಳವಲ್ಲ ಅದರಾಚೆಗಿನ ಅರಿವಿನ
ಅಂತರಾಳದ ಮಹಾ ಬೆಳಗಿನ ಬೆರಗು

ರಾಜ ಮಹಾರಾಜರ ಕಿರೀಟದ ಕೀರ್ತಿ
ಅಲುಗಾಡಿತು ಶೂನ್ಯ ಸಿಂಹಾಸನದ
ಜ್ಞಾನರತ್ನದ ದಿವ್ಯ ಹೊಳಪಿನ ಪ್ರಭೆಗೆ

ಅಲ್ಲಮ ಪ್ರಭುವಾಗಿ ಅಕ್ಕ ಮಹಾದೇವಿಯಾಗಿ
ಮರೆವ ಮರೆಸಿ
ತಾನೇ ತಾನಾಗಿ ಬೆಳೆದು
ಸಂಸಾರದ ಹಂಗ ಹರಿದು ಹಾಡುತ
ಹಾಡುತ್ತ ವಚನಗಳ ಮಾಲೆ ಧರಿಸಿ
ಅಮರ ಅಜರಾಮರ

ಸಂಸಾರ ನೊಗ ಹೊತ್ತ ಶರಣರ ಕಾಯಕ
ದಲಿ ಕೈಲಾಸ ಹಿತವೆನಿಸಿದ ಸತಿ-ಪತಿ
ಒಂದಾದ ಭಕ್ತಿಗೆ ಕಾಮದ ಗುಂಗಿಲ್ಲ

ಒಲಿದಷ್ಟೇ ಉಂಡ ಉಪವಾಸಿಗಳು
ಹಸಿವಿಂದ ಹಪಹಪಿಸದ ದಾಸೋಹ

ಜಾತಿ-ಧರ್ಮ ರೀತಿ-ನೀತಿ
ಸನ್ಯಾಸ-ಸಂಸಾರ ಆಳು-ಅರಸರ
ಸಮತೆಯ ಸಮಪಾಲು ಸರ್ವರಿಗೂ
ಸಮಚಿತ್ತ

ಕಾಮದ ಗುಂಗಿನ ಸನ್ಯಾಸವ ಧಿಕ್ಕರಿಸಿ
ಶರಣ‌ ಪಥದಲಿ ಸಂಚರಿಸಿ ಒಲ್ಲೆನೆಂದು
ಗೊಣಗದೆ ಬೇಕೇ ಬೇಕೆಂದು ಪರಿತಪಿಸದ
ನಿರ್ವಿಕಾರ ನಿರ್ಲಿಪ್ತ ಸಂಕಲ್ಪ

ಲಿಂಗ ಜಾತಿ ವಯೋಮಾನಗಳ ದೂರ
ಸರಿಸಿ ಪ್ರಜ್ಞೆಯ ಜ್ಯೋತಿಯ ಬಲದಿಂದ
ಕತ್ತಲೆಯ ಕಳೆದ ಜ್ಞಾನಿಗಳ‌ ಕೂಡಲ
ಮಹಾಸಂಗಮ

ಇಂದು...

ಲಿಂಗಾಂಗ ಸಾಮರಸ್ಯದ ಶರಣರಿಗೀಗ
ಬರೀ ಹಸಿವು
ತುಂಬಲಾಗದ ಹೊಟ್ಟೆ ನೀರಿಗೂ ದಾಹ
ಬೆಳಕಿಗೂ ಕತ್ತಲೂ
ಕಾಯ ಭಾರದಿ ಕಾಯಕ ಮಾಯ

ಸನ್ಯಾಸವೆಂಬುದೊಂದು ಅರಸೊತ್ತಿಗೆ
ಹೊದಿಕೆಗೆ ಕಾವಿ ಪೊದೆಯೊಳು ಕಾಮ
ಮಠ-ಪೀಠಗಳ ಮತಿಗೆಟ್ಟ ಮಠೀಯ
ವಾದ-ವಿವಾದ

ಅವಕಾಶವಾದವೆಂಬ ಯೋಗ-ಧ್ಯಾನದ
ರಣಕಹಳೆ ತಲೆಚಿಟ್ಟು ಹಿಡಿಯುವ
ಪದಮಾಲಿನ್ಯ

ವಿವಾದಗಳ‌ ಆರ್ಭಟದಲಿ ಶಬ್ದಸೂತಕ
ಮಾತು ಮಂಗ
ಮಾನದ ಬಹಿರಂಗ ಹರಾಜು

ಆದರೂ

ವಚನ ಸಾಲುಗಳ ಸೆಳೆತದಿ
ಹಾಡಿ ನಲಿದು ಕುಣಿದು ನಮ್ಮನು
ನಾವೇ ರಮಿಸಿಕೊಂಡಾಗ ಮೈಮನಗಳ
ಸುಳಿಯಲಿ ಬಸವಪ್ರಜ್ಞೆಯ ಮಹಾಬೆಳಗಿನ
ಮಹಾಬೆರಗು ಮಹಾಬೆರಗು ಮಹಾಬೆರಗು.
  
        *ಸಿದ್ದು ಯಾಪಲಪರವಿ*

Saturday, April 14, 2018

ಮುಗ್ಧ ಹುಡುಗಿ ಹಾಗೂ ದೇಸಿಯತೆ

*ಮುಗ್ಧ ಹುಡುಗಿ ಹಾಗೂ ದೇಸಿಯತೆ*

ಕರ್ನಾಟಕದ ಆಕ್ಸ್‌ಫರ್ಡ್ ಎನಿಸಿಕೊಂಡಿದ್ದ ಕರ್ನಾಟಕ ಕಾಲೇಜು ಅನೇಕಾನೇಕ ಪ್ರತಿಭಾವಂತರನ್ನು ಸೃಷ್ಟಿಸಿದೆ.

ಹಳ್ಳಿಯಿಂದ ಬಂದವರು, ಪ್ಯಾಟಿ ಹುಡುಗರು, ಇಂಗ್ಲಿಷ್ ಬರದವರು, ಬಂದವರು ಹೀಗೆ ಎಲ್ಲರನ್ನೂ ಸಹಿಸಿಕೊಂಡು ಬೆಳೆಸುತ್ತಿತ್ತು.

ಬಹುಪಾಲು ಕಲಿಯುವ ಛಲ ಇಟ್ಟುಕೊಂಡು ಬರುತ್ತಿದ್ದ ಹಳ್ಳಿ ಹುಡುಗರು ಪರಿಶ್ರಮದಿಂದ ಮೇಲೇರುತ್ತಿದ್ದರು.

ಲಂಗ-ದಾವಣಿ, ಚುಡಿ, ಜೀನ್ಸ್ ಹಾಗೂ ಸೀರೆಯನ್ನು ಉಟ್ಟುಕೊಂಡು ಬರುತ್ತಿದ್ದ ಹುಡುಗಿಯರ ದಂಡೇ ಇರುತ್ತಿತ್ತು.
ಅವರ ಕಡೆ ಕಣ್ಣೆತ್ತಿ ನೋಡುವ ಧೈರ್ಯ ಬರುತ್ತಿರಲಿಲ್ಲ.
ಮಾತುಕತೆ, ಪ್ರೀತಿ ಪ್ರೇಮ ದೂರದ ಮಾತು.

ಅಂತಹ ಸಂಕೋಚದ ಕಾಲದಲ್ಲಿ ಈ ಮುಗ್ಧ  ಹುಡುಗಿಯ ಮುಖ ಹೇಗೆ ನೆನಪಾದೀತು?

ಈಗಿನ ಅವತಾರ, ಧೈರ್ಯ, ಯಶಸ್ಸು, ಮುಕ್ತತೆಯನ್ನು ನೋಡಿದರೆ ಥ್ರಿಲ್ ಆಗುತ್ತೆ.

ಒಂದು ಕಾಲದ ಆ ಅಮಾಯಕ ಹುಡುಗಿಯೇ ಈಗಿನ ದೂರದರ್ಶನದ ಹಿರಿಯ ಅಧಿಕಾರಿ, ದಿಟ್ಟ ಮಹಿಳೆ, ಕವಿ ನಿರ್ಮಲಾ ಎಲಿಗಾರ.

ಆಗ ನಾನೂ ಹಾಗೆ ಇದ್ದೆ. ಆ ಅಮಾಯಕ ಮುಗ್ಧತೆ ಈಗ ಹುಡುಕುವುದು ಕಷ್ಟ. ಆದರೆ ಒಳಗೊಳಗೆ ಸಣ್ಣ ಸಂಕೋಚ ಇದ್ದೇ ಇದೆ.

ನಿರ್ಮಲಾ ಎಲಿಗಾರ ಸಾಧನೆ ಅನುಕರಣೀಯ. ಪ್ರಸಾರ ಭಾರತಿ ಎಂಬ ದೈತ್ಯ ಇಲಾಖೆಯ ಸೂಕ್ಷ್ಮ ವಾತಾವರಣಲ್ಲಿ ಸಿಡಿದೇಳುವುದು, ಬೆಳೆಯುವುದು ತುಂಬಾ ಕಠಿಣ.

ಒಳಕೋಣೆಯಲಿ ಕುಳಿತು, ಹೊರ ಜಗದ ಜನರ ಬದುಕನ್ನು ಅಲುಗಾಡಿಸುವ ತಾಕತ್ತು ಮಾಧ್ಯಮಕ್ಕಿದೆ.

ಸುದ್ದಿಯಾಗುವ ತವಕದಲಿ ಹಪಹಪಿಸುವ ಸಾರ್ವಜನಿಕ ಬದುಕಿನ ಜನರ ದೌರ್ಬಲ್ಯಗಳನ್ನು ಹಿಡಿದು ಹಡೆಮುರಿಗೆ ಕಟ್ಟುವ ವಿಚಿತ್ರ ಕ್ಷೇತ್ರವಿದು.

ಬಹುಪಾಲು ವಿಐಪಿಗಳಿಗೆ ಮಾಧ್ಯಮವೆಂದರೆ ಭಯ-ಭಕ್ತಿ.
ತೋರಿಸುವ, ತೋರಿಸಬಾರದ ಸಂಗತಿಗಳನ್ನು ಕಾಪಾಡುವ ಕೇಂದ್ರ.

ಉತ್ತರ ಕರ್ನಾಟಕದ ದೇಸಿಯ ಗಟ್ಟಿತನದ ನಿರ್ಮಲಾ ಎಲ್ಲಾ ಸವಾಲುಗಳನ್ನು ಸಮರ್ಥವಾಗಿ ದಕ್ಕಿಸಿಕೊಂಡು ಬೆಳೆದಿದ್ದಾರೆ.
ಕೇವಲ ಅಧಿಕಾರದ ಕುರ್ಚಿ ಹಿಡಿದಿಲ್ಲ. ಅಧಿಕಾರದಾಚೆಗಿನ ಚಿಂತನಾ ಲಹರಿಯನ್ನು ಬೆಳೆಸಿಕೊಂಡಿದ್ದಾರೆ.

ಕಾಲ ಮಾಗಿದಂತೆ, ಕೊಂಚ ವಯಸ್ಸಾದಂತೆ ಧೈರ್ಯ ಪುಟಿದೇಳುತ್ತದೆ. ಪುಟಿದೇಳಲೇಬೇಕು.

ಪ್ರತಿ ಬಾರಿಯ ಭೇಟಿಯಲ್ಲೂ ಆ ಧೈರ್ಯವನ್ನು, ಮುಕ್ತತೆಯನ್ನು ನಾ ಅನುಭವಿಸುತ್ತೇನೆ.

ಗಂಡು-ಹೆಣ್ಣಿನ ಸಂಬಂಧ, ಸಾಂಸ್ಕೃತಿಕ ಲೋಕದ ಮುಖವಾಡಗಳು, ಓಲೈಸುವ ನೆಪದಲಿ ಪಟಾಯಿಸುವ ತವಕಗಳು. ಗಳಿಸುವ ಅನುಕಂಪಗಳು. ಒಂದಾ, ಎರಡಾ ಇನ್ನೂ ಏನೇನೋ. ಮಾತಾಡಿ ನಕ್ಕಿದ್ದೋ ನಕ್ಕಿದ್ದು.

*I'm not happy and comfortable with my wife* ಎಂಬ ವರಾತ ತೆಗೆದು ಹುಡುಗಿಯರ ಅನುಕಂಪ ಗಳಿಸುವ, ಸಿದ್ಧಾಂತ, ಸಾಹಿತ್ಯ, ಸಂಸ್ಕೃತಿಯ ನೆಪದಲಿ ಶಬ್ದ ಸೆಳೆತದಲಿ ಆಟ ಆಡಿ ಮಜಾ ಉಡಾಯಿಸುವ ಸಂಪನ್ನರ ಗುಣಗಾನ ತಮಾಷೆಯಿಂದ ಸಾಗಿಯೇ ಇತ್ತು.

ಇಂತವರ ಮಧ್ಯೆ ಹೆಣ್ಣು ಗಟ್ಟಿ ವ್ಯಕ್ತಿತ್ವ ಬೆಳೆಸಿಕೊಂಡು , ಚರಿತ್ರೆ-ಚಾರಿತ್ರ್ಯ ಉಳಿಸಿಕೊಂಡು ಬೆಳೆಯುವ ಅಗತ್ಯವನ್ನು ವರ್ಣಿಸುವ ಬಗೆ ಖುಷಿ ಎನಿಸಿತು.

ಯುರೋಪ್ ಹಾಗೂ ಅಮೇರಿಕ ಸುತ್ತಾಟದ ಅನುಭವ, ಅಲ್ಲಿ ಜನ ಅನುಭವಿಸುವ ಜೀವನೋತ್ಸಾಹ.

ಬದುಕನು ಸಂಭ್ರಮಿಸುವ ಬಗೆ ನಾನು ವಿವರಿಸುವ Joyful living ಗೆ ತಳುಕು ಹಾಕಿ, ವಯಸ್ಸು ಮುಚ್ಚುವ ಉಡುಗೆ,ತೊಡುಗೆ, ಟಿಂಕರಿಂಗ್-ಕಲರಿಂಗ್ ಕುರಿತೂ ನಮ್ಮನ್ನು ನಾವೇ ಚುಡಾಯಿಸಿಕೊಂಡು ಖುಷಿ ಪಟ್ಟ ಸಂಭ್ರಮ.

ಸ್ವಯಂ ಮರುಕದಿಂದ ವಯಸ್ಸಾದಂತೆ ಹೊರಬರುವ ಅನಿವಾರ್ಯತೆ.

ನಿರ್ಮಲಾ ವಿವರಿಸಿದ ಮುಕ್ತ ತೂಕಬದ್ಧ, ವಾಸ್ತವದ ಮಾತುಗಳ ರಸಗವಳ, ಪ್ರೀತಿಯಿಂದ ತಂದಿದ್ದ ಮನೆ ಚಪಾತಿ ತಿಂದು ಅಷ್ಟೇ ಖುಷಿಯಿಂದ ಕಾಲೇಜಿನ ಮುಗ್ಧ ದಿನಗಳ‌ ನಮ್ಮನ್ನು ಮನದಲ್ಲಿ ಮರುಸ್ಥಾಪಿಸಿಕೊಂಡು ಹೊರ ಬಂದಾಗ ಬಾನಲಿ ರವಿ ನಸು ನಗುತ್ತಿದ್ದ.

*Congratulations for your achievement Nirmala Yaligar*

-----ಸಿದ್ದು ಯಾಪಲಪರವಿ.

ಮಂಗಳಾ ನಾಗರಾಜ ಹಾಗೂ ಕಲಾದೇಗುಲ ಶ್ರೀನಿವಾಸ

*ಸಮರ್ಥ ನಿರೂಪಕರು: ಕಲಾದೇಗುಲ ಶ್ರೀನಿವಾಸ ಹಾಗೂ ಮಂಗಳಾ ನಾಗರಾಜ*

ನೇರ ಸಂದರ್ಶನಗಳ ಮಾಡರೇಟ್ ಮಾಡುವುದು ಸರಳವಲ್ಲ. ಅನೇಕ ಸವಾಲುಗಳು ಎದುರಾಗುತ್ತವೆ. ಎದುರಿಗೆ ಕುಳಿತ ಸಾಧಕರು ನೇರ ಪ್ರಸಾರಗಳಲ್ಲಿ ಮಾತಿನ ಮಧ್ಯೆ ಕಳೆದುಹೋಗುತ್ತಾರೆ.

ಅದೂ ಎರಡು ತಾಸು ಅವರನ್ನು ಹಿಡಿದು ಹಾಕಿ ಮಾತಿಗಿಳಿಯುವಂತೆ ಮಾಡುವುದು ಬಹು ದೊಡ್ಡ ಸವಾಲು.

Yapal's Show time ನಿರೂಪಕನಾಗಿ ಸ್ಥಾನಿಕ ಚಾನಲ್ ಗಾಗಿ ಕೆಲಸ ಮಾಡುವಾಗಿನ ನನ್ನ ಅನುಭವದ ಆಧಾರದ ಮೇಲೆ ಈ ಇಬ್ಬರೂ ನಿರೂಪಕರನ್ನು ಗಮನಿಸುತ್ತಲೇ ಎರಡು ತಾಸು ಮಾತನಾಡಿದೆ.

ಇಡೀ ಬದುಕಿನ ಘಟನೆಗಳನ್ನು ಹೆಕ್ಕಿ ತೆಗೆಯಲು ಒಂದು ಸಣ್ಣ ರಿಹರ್ಸಲ್ ಬೇಕಾಗಿತ್ತು. ಆದರೆ ನನಗದು ಸಾಧ್ಯವಾಗಿರಲಿಲ್ಲ.

ಬೆಳಿಗ್ಗೆ ಆರಕ್ಕೆ ಪ್ರತ್ಯಕ್ಷರಾದ ಗೆಳೆಯರಿಗೆ ಸಣ್ಣ ಅನುಮಾನವಿದ್ದರೂ ನನ್ನ ಅನುಭವದ ಆಧಾರದ ಮೇಲೆ all the best ಹೇಳಿ ಆತಂಕ ನಿವಾರಿಸಿದೆ. ಹಿಂದಿನ ರಾತ್ರಿ ನಿದ್ರೆ ಇಲ್ಲದೆ ಚಡಪಡಿಸಿ mind mapping ಮಾಡಿಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದೆ.

ಆದರೆ ನನ್ನ ಆಶಯಗಳಿಗೆ ಸ್ಪಂದಿಸದ ನಿರೂಪಕರಿದ್ದರೆ...

ಅಂದುಕೊಂಡದ್ದು ಕಾರ್ಯಕ್ರಮ ಪ್ರಾರಂಭವಾದ ಕೂಡಲೇ ದೂರಾಯಿತು.
ನಗುತ, ನಸುನಗುತ ಸುಲಲಿತ ಮಾತುಗಳ ಮೂಲಕ ನನ್ನನ್ನು ಆವರಿಸಿ ನಯವಾಗಿ ಅಲುಗಾಡಿಸಿದ ಶ್ರೀನಿವಾಸ ಹಾಗೂ ಮಂಗಳಾ ಅದ್ಭುತ ಎನಿಸಿದರು.

ಗಾಯಕ,ನಟ, ಸಂಗೀತ ನಿರ್ದೇಶಕ, ಬರಹಗಾರ ಕಲಾದೇಗುಲ ಶ್ರೀನಿವಾಸ ಸಮರ್ಥ ನಿರೂಪಕ.

ಕಾರ್ಯಕ್ರಮದ ಮಧ್ಯೆ ಬೇಸರವಾಗದಂತೆ ಲಿಂಕ್ ಕೊಡುತ್ತ ಕಾವ್ಯಾತ್ಮಕವಾಗಿ ಹರಳು ಹುರಿದಂತೆ ಮಾತನಾಡಿ ನನ್ನ ಕವಿತೆಯನ್ನು ಅಷ್ಟೇ ಸೊಗಸಾಗಿ ಓದಿದರು.

ನನ್ನನ್ನು ಮಾತನಾಡಲೂ ಬಿಟ್ಟರು.

ಇತ್ತೀಚಿನ ಕೆಲವು ಖಾಸಗಿ ವಾಹಿನಿಗಳಲ್ಲಿ ನಿರೂಪಕರು ಅತಿಥಿಗಳ ತಿಥಿ ಮಾಡಿ ತಮ್ಮ ಪ್ರಭುತ್ವದ ಪ್ರಭಾವ ಮೆರೆಯುತ್ತಾರೆ. ಅವರಿಗಿರಬಹುದಾದ ಜ್ಞಾನ ಪ್ರದರ್ಶನದ ಮೂಲಕ ಅತಿಥಿಗಳನ್ನು ದಿಕ್ಕು ತಪ್ಪಿಸಿ ಅವಮಾನ ಮಾಡುತ್ತಾರೆ.

*ಆದರೆ ಈ ಇಬ್ಬರೂ ತಮ್ಮ ಮಿತಿಯನ್ನು ಗ್ರಹಿಸಿ they made me quite comfortable*.

ಶ್ರೀನಿವಾಸ ಒಬ್ಬ ನಟ ಗಾಯಕ ಆದ್ದರಿಂದ ಎದುರಿಗಿರುವವರ ಮನಸ್ಥಿತಿ ಗ್ರಹಿಸುತ್ತಾರೆ.

ಮಂಗಳಾ ವಾರ್ತಾವಾಚಕಿ, ಮಾದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಿದ ಅನುಭವ. ಅವರ ಬದುಕಿನ ವೈಯಕ್ತಿಕ ತಲ್ಲಣ ನನಗೆ ಗೊತ್ತಿದ್ದರೂ ನಾನು ಅಲ್ಲಿ ಕಳೆದುಹೋಗದಂತೆ ಮಂಗಳಾ ಎಚ್ಚರವಹಿಸಿದರು.

ಕೇಳುವ ಪ್ರಶ್ನೆಗಳಿಗೆ ಯಾವ ರೀತಿಯ ಉತ್ತರ ಬರಬಹುದೆಂಬ ಆತ್ಮವಿಶ್ವಾಸ‌ ಅವರದು. *ಹಸನ್ಮುಖಿ ಸದಾ ಸುಖಿ* ಎಂಬಂತೆ ಸಾವಿರ ನೋವುಗಳ ಆಚೆ ನೂಕಿ ಕ್ಯಾಮರಾ ಮುಂದೆ ಸಹಜವಾಗಿ, ಲೀಲಾಜಾಲವಾಗಿ ಅಭಿನಯಿಸಬೇಕು.

ಸಾರ್ವಜನಿಕವಾಗಿ ನಮ್ಮನ್ನು ಕೋಟ್ಯಾಂತರ ಮನಸುಗಳು ವೀಕ್ಷಿಸುತ್ತಾರೆ ಎಂಬ ಜಾಗೃತಿ ಬೇರೆ!

ಆ ಎಲ್ಲ ಎಚ್ಚರಗಳನ್ನು ಮಂಗಳಾ ನಾಜೂಕಾಗಿ ನಿರ್ವಸಿದರು.

ಸಾಹಿತ್ಯ, ಶಿಕ್ಷಣ, ಸಂಸ್ಕೃತಿ ಹಾಗೂ ಜೀವನಶೈಲಿ ನಿರ್ವಹಣೆಯಂತಹ ಸಂಗತಿಗಳು ನನ್ನೊಳಗೆ ಉಳಿಯದಂತೆ  positive expose ಮಾಡಿದರು.

ಎರಡು ದಿನ ಮುಗಿದರೂ ಇವರೀರ್ವರ ನಗು ಮೊಗ ಮರೆಯಲಾಗುತ್ತಿಲ್ಲ.

ಅಭಿನಂದನೆಗಳನ್ನು ನಾನೊಬ್ಬನೇ ಸ್ವೀಕರಿಸಿ ಸಣ್ಣವನಾಗಲಾರೆ. ಅದಕ್ಕೆ ನೀವೂ ಪಾಲುದಾರರು, ಕಾರಣಕರ್ತರು.

*ನಿಮ್ಮಿಬ್ಬರನ್ನು ಮತ್ತೆ ಮತ್ತೆ ಸೇರಬೇಕೆಂಬ ಸೆಳೆತ*

Thanks a lot  ಚಿರಸ್ಥಾಯಿಯ ಮಂಗಲಾ ಚಿನ್ಮಯ, ಕಲಾದೇಗುಲ ಶ್ರೀನಿವಾಸ.

Stay blessed and always be happy.

----ಸಿದ್ದು ಯಾಪಲಪರವಿ.

Friday, April 6, 2018

ಲವ್ ಕಾಲ

*ಲವ್ ಕಾಲ*

*ಭಾವುಕ‌ ತಲ್ಲಣಗಳು*

ನಿನ್ನೆಯಿಂದ ವಿಪರೀತ ಭಾವುಕನಾಗಿದ್ದೇನೆ.
ವಯೋಮಾನಕ್ಕನುಗುಣವಾಗಿ ಬರುವ ಅನಾರೋಗ್ಯ ಎದುರಿಸುವ ಮನೋಸ್ಥೈರ್ಯ ಬೇಕಾದಷ್ಟಿದೆ.

ಬೇಕಾದದ್ದನ್ನು ಪಡೆದು ನನ್ನ ಇಚ್ಛೆಯಂತೆ ಪರಿವರ್ತಿಸಲು ಯಶಪಡದೆ ಎಂಬ ಸಮಾಧಾನ ನೆಲೆಗೊಂಡಿದೆ.

ನನ್ನ ಮುದ್ದು ಮಹಾರಾಣಿ ನನ್ನ ಕೊಳಲ ನಿನಾದಕೆ ಮನಸೋತು ಓಡಿ ಬರುವದ ನೆನೆದು ಪುಳಕಿತನಾಗಿದ್ದೇನೆ.

ಆದರೂ...

ಯಾಕೀ ಆತಂಕ... ಅರ್ಥವಾಗುತ್ತಿಲ್ಲ. ನನ್ನ ಮನದಾಳದಲಿ ಹುದುಗಿದ್ದ ಭಾವನೆಗಳನ್ನು ಹರಿಬಿಟ್ಟು ಬರೆದು ನಿಶ್ಚಿಂತನಾಗಿರುವ ಈ ಹೊತ್ತಲಿ ತಲ್ಲಣವೇಕೋ ನಾನರಿಯೆ.

ಇಡೀ ಬದುಕಿನಲ್ಲಿ ಏನೇನೋ ಕಾರಣಗಳಿಗೆ ಬಂದು ಆಡಿ ಹೋದವರ ಸಾಲಿನಲ್ಲಿ ನೀ ಅಲ್ಲ ಎಂದು ಗೊತ್ತಿದೆ.

You are totally different, unselfish,tolerant and more lovable ಸಾಕಲ್ಲ ನಾ ಬಯಸಿದ ಒಡವೆಯ ಧಾರಣ ಮಾಡಲು ಆ ದೇವ ಆದೇಶ ನೀಡಿದ್ದಾನೆ.

ಅವನ ಮೇಲಿನ ಅಚಲ ನಿಷ್ಠೆ ನನ್ನ ಬದುಕಿನ ದಿಕ್ಕನ್ನೇ ಬದಲಿಸಿದೆ.

ಬೇಕಾದುದನ್ನು ಕಳೆದುಕೊಂಡರೆ ಸೂತಕ ಎನ್ನುತ್ತಾರೆ. ಆ ಸೂತಕ ದುಃಖವನ್ನುಂಟು ಮಾಡುತ್ತದೆ.

ಅತಿಯಾದ ದುಃಖ ಸೂತಕವಾದರೆ, ಅತಿಯಾದ ಸಂತೋಷವು ಸೂತಕವೇನೋ ಎಂಬ ಆತಂಕ ಕಾಡುತ್ತಲಿದೆ.

ಇದಕ್ಕೆ ಪರಿಹಾರ ನೀನೇ. ನಿನ್ನ ಅನುಪಸ್ಥಿತಿ, ಅಲಭ್ಯತೆ ತೀವ್ರವಾಗಿ ಭಾದಿಸುತ್ತದೆ.
ಒಂದರಗಳಿಗೆ ಬಿಟ್ಟಿರಲಾಗದೆಂಬ ಚಡಪಡಿಕೆ.
ನಿನ್ನ ಉಪಸ್ಥಿತಿ ನಿರಂತರವಾಗದ ಹೊರತು ಈ ತಲ್ಲಣಕೆ ಕೊನೆಯೆಂಬುದಿಲ್ಲ.

ಬೇಗನೇ ಬಾ..............

Thursday, April 5, 2018

ಲವ್ ಕಾಲ

*ಲವ್ ಕಾಲ‌*

*ಪುಟ್ಟ ಮನೆಯ ದೊಡ್ಡ ಮನಸು*

'ಈಗ ಅನಿಸುತ್ತೆ ಅಷ್ಟೊಂದು ಪುಟ್ಟ ಮನೆಯಲ್ಲಿ ಇರಲು ಸಾಧ್ಯಾನಾ ?'

ಆದರೂ ಇದ್ದೆವಲ್ಲ, ಅದೂ ತುಂಬ ಖುಷಿಯಿಂದ.
ನಾನೊಬ್ಬ so called professor ನೆಲದ ಮೇಲೆ ಕುಳಿತುಕೊಳ್ಳಬಾರದೆಂಬ ಭ್ರಮೆಯಿಂದ ಒಂದು ಕುರ್ಚಿ ತಗೊಂಡಿದ್ದೆ.

ಆಗೀಗ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದ ದೊಡ್ಡಮನೆಯ ಹುಡುಗಿಯರು ಯಾಕೆ ಪಿಸುಪಿಸು ಗುಸುಗುಸು ಮಾತನಾಡಿಕೊಳ್ಳುತ್ತಿದ್ದರು ಎಂಬುದು ಈಗ ಅರ್ಥವಾಗಿದೆ.

ಹೊಸದಾಗಿ ಮದುವೆಯಾದ ನಮಗೆ ಬೆಡ್ ರೂಮ್ ಇಲ್ಲ ಎಂಬ ಕೊರಗು ಅವರದು.

ಇಡೀ ಮನೆಯ ಅಳತೆ 10/15 ಅದರಲ್ಲಿನ ಗೋಡೆಯ ಆಚೆ ಅಡುಗೆಮನೆ, ಬಚ್ಚಲು, ಮೂಲೆಯಲಿ ದೇವರು.
ಬಾಗಿಲು ತಗೆದ ಕೂಡಲೇ ಹಗಲು ಹಾಲ್ ,ರಾತ್ರಿ ಮಲಗಿದ ಮೇಲೆ ಅದೇ ಬೆಡ್ ರೂಮ್.

ನಮಗದು ಏನೂ ಅನಿಸಲೇ ಇಲ್ಲ. ಅದೇ ಮನೆಗೆ ಬರುತ್ತಿದ್ದ ಸಂಬಂಧಿಕರು, ಸ್ವಾಮಿಗಳು, ಸಾಹಿತಿಗಳು ಪುಟ್ಟ ಅಶೋಕ ಸ್ಟೋವ್ ಮೇಲೆ ಮಾಡುತ್ತಿದ್ದ ಊಟ ಸವಿದು ಹರಸುತ್ತಿದ್ದರು.

ರಾಮಕೃಷ್ಣ ಮಠದ ಪೂಜ್ಯ ನಿರ್ಭಯಾನಂದ ಶ್ರೀಗಳು ಒಮ್ಮೆ 'ಊಟಕ್ಕೆ ಬರುವೆ' ಎಂದಾಗ ಹೇಗಾಗಿರಬೇಡ. ಬಂದದ್ದು ಒಟ್ಟು ನಾಲ್ಕು ಜನ.

ಇರುವ ಒಂದೇ ಸ್ಟೋವ್. ಗ್ಯಾಸ್ ಸಿಲೆಂಡರ್ ಊಹೆಗೂ ಮೀರಿದ ಕಾಲವದು. ಆದರೂ ಚಪಾತಿ, ಪಲ್ಯ ಅರ್ಧ ಗಂಟೆಯಲಿ ರೆಡಿ. ಯಾಕೆ ತಡವಾಯಿತು ಎಂದು ಸ್ವಾಮಿಗಳಿಗೆ ನಂತರ ತಿಳಿಯಿತು.

ಈಗವರು ದೊಡ್ಡ ಆಶ್ರಮವಾಸಿಗಳು. ನಾನೂ ಅಷ್ಠೇ ಅದರೂ ನಾ ಆ ಪುಟ್ಟ ಸ್ವರ್ಗ‌ ಮರೆತಿಲ್ಲ. ಮರೆಯುವದೂ ಇಲ್ಲ.

ಮದುವೆಯಾದ ಹೊಸದರಲ್ಲಿ ಮಲಗಲು ಹಾಸಿಗೆ ಬೇಕೆಂದು ಅನಿಸಲೇ ಇಲ್ಲ ಅದರೂ ಒಳಗಿದ್ದ ಒಲವಧಾರೆಯಿಂದಾಗಿ, ಜೀವನ ಸುಖಮಯ
ಅನಿಸಿದ್ದರಿಂದಲೇ ಮಗಳು ಹುಟ್ಟಿದಳು.

ಅದೇ ಮನೆಯಲ್ಲಿ ನಮ್ಮನ್ನು ಕಂಡವರು ಈಗ ದೊಡ್ಡಮನೆ ನೋಡಿದಾಗ ಖುಷಿ ಪಡುತ್ತಾರೆ.
ಆದರೆ ನನಗೆ ಮತ್ತೆ ಮತ್ತೆ ಆ ಖುಷಿ ಬೇಕೆನಿಸುತ್ತದೆ.

*ಈ ದೊಡ್ಡ ಮನೆಯ ಮೂಲೆ ಮೂಲೆಯಲ್ಲೂ ಒಲವ ವರತೆ ಹುಡುಕುತ್ತಲೇ ಇದ್ದೇನೆ*

----ಸಿದ್ದು ಯಾಪಲಪರವಿ.