Friday, May 28, 2010

ಕ್ರೇಜಿಸ್ಟಾರ್ ನೊಂದಿಗೆ ಕೆಲಕಾಲ



ಕನ್ನಡದ ಅಪರೂಪದ ತಂತ್ರಜ್ಞ, ಖ್ಯಾತ ನಟ ರವಿಚಂದ್ರನ್ ಪ್ರೇಕ್ಷಕರಿಗೆ ಕಚಗುಳಿ ಇಟ್ಟ ನಟ. ಸುಪರ್ ಸ್ಟಾರ್ ಪಟ್ಟದ ಪೈಪೋಟಿಗೆ ನಿಲ್ಲದೆ ಭಿನ್ನ ಸಿನೆಮಾಗಳ ನಿರ್ಮಾಣ ಹಾಗೂ ನಟನೆಯಿಂದಾಗಿ ಕ್ರೇಜಿಸ್ಟಾರ್ ಪಟ್ಟಗಳಿಸಿದ ಖ್ಯಾತಿ.
ರವಿಚಂದ್ರನ್ ಪ್ರೇಮಲೋಕದ ಮೂಲಕ ಚಿತ್ರರಂಗದಲ್ಲಿ ಹೊಸ ಇತಿಹಾಸ ನಿರ್ಮಿಸಿದ ನಟ-ನಿರ್ದೇಶಕ.
ಹೊಸತನ, ಸುಂದರ ಸೆಟ್ಟಿಂಗ್, ಸುಂದರ ನಟಿಯರೊಂದಿಗೆ ರೋಮಾಂಚನ ಉಂಟುಮಾಡಿದ ಹೆಗ್ಗಳಿಕೆ.
ನಾವು ವಿದ್ಯಾರ್ಥಿಗಳಾಗಿದ್ದಾಗ ರವಿಚಂದ್ರನ್ ಸಿನೆಮಾಗಳು ಕಚಗುಳಿ ಉಂಟು ಮಾಡಿ ಮೈ-ಮನಗಳು ಬೆಚ್ಚಗಾಗಿಸುತ್ತಿದ್ದವು.
ಸುಂದರ ನಟಿಯರನ್ನು ಸದುಪಯೋಗ ಪಡಿಸಿಕೊಂಡ ಖ್ಯಾತಿಯೂ ರವಿಚಂದ್ರನ್ ಗೆ ಸಲ್ಲುತ್ತದೆ. ನಟಿಯರನ್ನು ಸಮರ್ಥವಾಗಿ, ರೋಮ್ಯಾಂಟಿಕ್ ಆಗಿ expose ಮಾಡಿ ಬಿಗ್ ಸ್ಕ್ರಿನ್ ಮೇಲೆ ಹೂಮಂಚ ಹಾಸಿ ಮೈ ಬೆಚ್ಚಗಾಗಿಸಿದ ಅಚ್ಚು ಮೆಚ್ಚಿನ ನಟ ಕೂಡಾ!
ರವಿಚಂದ್ರನ್ ಹಲವಾರು ಸಿನೆಮಾಗಳ ಮೂಲಕ ಸಿನೆಮಾಕ್ಕೆ ಹೊಸ ಭಾಷೆ ಬರೆದ ತಂತ್ರಜ್ಞ. ಅದ್ಧೂರಿ ವೆಚ್ಚದ ಸಿನೆಮಾ ನಿರ್ಮಿಸಿ ಆರ್ಥಿಕ ರಿಸ್ಕ್ ತಗೆದುಕೊಂಡರೂ ಸಿನೆಮಾದ ಮೂಲಕವೇ ಬದುಕು ರೂಪಿಸಿಕೊಂಡ ಅಪ್ಪಟ ಕಲಾವಿದ.
ತೇಲುಗಣ್ಣಿನ ಕನಸುಗಾರ ಯುವಕರ ಹೃದಯಕ್ಕೆ ಕೊಳ್ಳಿ ಇಟ್ಟು ಪುಳಕಿತಗೊಳಿಸಿದ ರೋಮ್ಯಾಂಟಿಕ್ ಹೀರೋ.
ರಿಮೇಕ್ ನಲ್ಲಿಯೂ ಸ್ವಂತಿಕೆ, ಕ್ರಿಯಾಶೀಲತೆಯನ್ನು ಸೃಷ್ಠಿಸಿ ಹತ್ತಾರು ಬಾರಿ ಗೆಲ್ಲುತ್ತಾ, ಸೋಲುತ್ತಾ ಸಾಗಿದರೂ ಸಿನೆಮಾದೊಂದಿಗೆ ಬದುಕಿ - ಬಾಳುವ ರವಿಚಂದ್ರನ್ ರನ್ನು ಭೇಟಿ ಆಗುವ ಇರಾದೆ ಇತ್ತು.
ಮನುಷ್ಯನ ಗುಣ-ಧರ್ಮಗಳನ್ನು ಅರಿಯುತ್ತಾ, ವ್ಯಕ್ತಿತ್ವ ವಿಕಸನಕ್ಕಾಗಿ ವ್ಯಕ್ತಿತ್ವಗಳನ್ನು ಭೇಟಿ ಆಗುವ ನನ್ನ ಹುಚ್ಚು ಮನಸಿಗೆ ರವಿಚಂದ್ರನ್ ರೊಂದಿಗೆ ಮಾತನಾಡುವ ತವಕವಿತ್ತು. ನನ್ನ ಬಹುದಿನದ ಕನಸನ್ನು ಈಡೇರಿಸಿದವರು ಕಲಾವಿದ ಎಂ. ಎನ್. ಸುರೇಶ್.
ಮಧ್ಯಾನ್ಹ ಒಂದು ಗಂಟೆಗೆ ರವಿಚಂದ್ರನ್ ಮನೆ ಪ್ರವೇಶಿಸಿದೆ.
ಮನುಷ್ಯನ ಗುಣ ಸ್ವಭಾವ, ಜೀವನೋತ್ಸಾಹ, ಹೆಣ್ಣಿನ ಬಗೆಗಿರುವ ಆಕರ್ಷಣೆ, ಸೆಳೆತ ಹೀಗೆ ಚರ್ಚೆ ಸಾಗಿಯೇ ಇತ್ತು ಕೆಲ ನಿಮಿಷಗಳ ಭೇಟಿ ತಾಸುಗಳಿಗೆ ಮುಂದುವರೆಯಿತು.
ರವಿಚಂದ್ರನ್ ಗೂ ನನ್ನೊಂದಿಗೆ ಚರ್ಚಿಸಬೇಕೆನಿಸಿತಂತೆ, ತುಂಬಾ ಆಪ್ತವಾಗಿ ಮಾತನಾಡಿದರು. Off the record ಎನ್ನುತ್ತಾ ಅನೇಕ ವಿಷಯಗಳನ್ನು ಚರ್ಚಿಸಿದರು. ಎಲ್ಲವನ್ನು expose ಮಾಡುವ ಅಗತ್ಯವಾದರೂ ಏನಿದೆ?
ಬದುಕಿನ ಉತ್ಕೃಷ್ಟ ಆಕರ್ಷಣೆ ಎನಿಸಿರುವ ಹೆಣ್ಣು ತಮ್ಮನ್ನು ಕಾಡಿದ ಬಗೆಯನ್ನು ಹಂಚಿಕೊಂಡು, ಸಿನೆಮಾಗಳಲಿ ಬಳಸಿಕೊಂಡ ಕಾರಣಗಳನ್ನು ರಸವತ್ತಾಗಿ ವಿವರಿಸಿದರು.
ಹೆಣ್ಣಿನ ಬಗೆಗಿರುವ ನನ್ನ ಅಭಿಪ್ರಾಯಕ್ಕೆ ಸಮ್ಮತಿಸಿದ ಹೀರೋ ರಸಿಕತೆ ಹಾಗೂ ಫ್ಲರ್ಟಗಿರುವ ಅಂತರವನ್ನು convince ಮಾಡಿದರು.
ಸದಾ ಕಾಲ ಕಂಪ್ಯೂಟರ್ ಮುಂದೆ ಕುಳಿತು ಕನಸು ಕಾಣುತ್ತಾ, ಕಂಡ ಕನಸನ್ನು ಜನರಿಗೆ ತೋರಿಸುವ ಸಿನೆಮಾ ಅವರ ಪಾಲಿನ ಅದ್ಭುತ ಮಾಧ್ಯಮ. ಮನುಷ್ಯನನ್ನು ಮೂರು ತಾಸು ಒಂದು ಕಡೆ ಕೂಡಿಸಿ ಹೃದಯವನ್ನು ತಟ್ಟುವ, ಕಟ್ಟುವ ಪರಿಣಾಮಕಾರಿ ಮಹಾದೃಶ್ಯಕಾವ್ಯ.
ಒಂದು ಶ್ರೇಷ್ಠ ಕೃತಿ ನೀಡುವ ಪರಿಣಾಮವನ್ನು ಸಿನೆಮಾ ಕೊಡುತ್ತದೆ. ಓದು, ಬರಹದಂತೆ ಸಿನೆಮಾ ಕೂಡಾ ನನಗೆ ಪ್ರಿಯವೆನಿಸುತ್ತದೆ.
ಉತ್ತಮ ಚಿತ್ರಗಳು ಮನೋರಂಜನೆ ನೀಡುವುದರೊಂದಿಗೆ, ಮನೋಪರಿವರ್ತನೆಗೆ ಕೂಡಾ ಕಾರಣವಾದದ್ದನ್ನು ನೋಡಿದ್ದೇವೆ.
ಉತ್ತಮ ಸಿನೆಮಾಗಳನ್ನು ನಿರ್ಮಿಸಿದರೆ ಜನ ನೋಡುತ್ತಾರೆ ಎಂಬುದನ್ನು Industry ನಿರೂಪಿಸಿದೆ. ಎಲ್ಲ ವರ್ಗದ ಜನ ಸಿನೆಮಾ ನೋಡಬಯಸುತ್ತಾರೆ. ಜನರ ಅಭಿರುಚಿಗೆ ತಕ್ಕಂತೆ, ಸಿನೆಮಾ ತಯಾರಾಗುತ್ತವೆ, ಕೆಲ ತಂತ್ರಜ್ಞರ ಸಿನೆಮಾಗಳು ಹೀಗಿರಬೇಕು ಎಂದು ಕೂಡಾ ಜನ ಬಯಸುತ್ತಾರೆ. ಈ ಸಾಲಿನಲ್ಲಿ ರವಿಚಂದ್ರನ್ ಪ್ರಮುಖರು. ರವಿಚಂದ್ರನ್ ಸಿನೆಮಾ ಹೀಗಿರಬೇಕು ಎಂದು ಬಯಸುತ್ತಲೇ ಜನ ಥೇಟರ್ ಗೆ ಹೋಗುತ್ತಾರೆ. ಒಮ್ಮೆ ನಿರಾಶೆ, ಒಮ್ಮೆ ಭರವಸೆ ಹುಟ್ಟಿಸುವ ಸಿನೆಮಾ ನೀಡುವ ರವಿಚಂದ್ರನ್ ಅಭಿನಂದನಾರ್ಹರು.
ಅವರ ಹುಟ್ಟು ಹಬ್ಬದಂದು ರವಿಚಂದ್ರನ್ ಭೇಟಿಯನ್ನು ನೆನಪಿಸಿಕೊಳ್ಳಲು ಖುಷಿ ಎನಿಸುತ್ತದೆ. ಅವರ ಚರ್ಚೆಯ ವಿವರಗಳನ್ನು ಮತ್ತೊಮ್ಮೆ ವಿವರಿಸುತ್ತೇನೆ.
ಯುವಕರನ್ನು ಬೆಚ್ಚಿಸುವ, ಮನಸುಗಳನು ಬೆಚ್ಚಗಾಗಿಸುವ ಸಿನೆಮಾಗಳನ್ನು ಸದಾ ನಿರ್ಮಿಸಲಿ ಎಂದು ಹಾರೈಸುವೆ.

Thursday, May 27, 2010

ಒಂದು ಸುಂದರ ಕ್ಯಾಪ್ಟರ್ ಹಾರಾಟ


ರಜೆಯ ಅಲೆದಾಟದಲಿ ಬರೆಯುವ ಪುರುಸೊತ್ತಾಗಿಲ್ಲ ಎಂಬ ಬೇಸರ.
ಈ ಮಧ್ಯೆ ಕೆಲಸದ ಮೇಲೆ ಬಳ್ಳಾರಿಗೆ ಹೋಗಿದ್ದೆ, ಅಚಾನಕಾಗಿ ಹೆಲಿಕ್ಯಾಪ್ಟರ್ ಹಾರಾಟದ ಅವಕಾಶ ದೊರೆಯಿತು. ವಿಮಾನಯಾನದ ಅನುಭವ ಹೊಂದಿದ್ದರೂ, ಹೆಲಿಕ್ಯಾಪ್ಟರ್ ನಲ್ಲಿ ಹಾರಾಡುವುದು ಭಿನ್ನವಾಗಿರುತ್ತದೆ.
ಪುಟ್ಟ ಹಕ್ಕಿಯ ಹೆಗಲೇರಿ ಕುಳಿತ ಅನುಭವ. ಸಚಿವರಾದ ಶ್ರೀರಾಮುಲು, ಆಪ್ತ ಸಹಾಯಕ ಸೋಮನಾಥರೊಂದಿಗೆ ಬಳ್ಳಾರಿಯಿಂದ ನರಗುಂದಕ್ಕೆ, ನರಗುಂದದಿಂದ ಕನಕಗಿರಿ, ಅಲ್ಲಿಂದ ಬಳ್ಳಾರಿ ಹೀಗೆ 4 ತಾಸಿನ ಹಾರಾಟ ಖುಷಿ ಎನಿಸಿತು.
ಮೋಡಗಳ ಮೇಲೆ ತೇಲುವ ವಿಮಾನದಿಂದ ಏನೂ ಕಾಣಿಸುವುದಿಲ್ಲ. ಆದರೆ ಕ್ಯಾಪ್ಟರ್ ನಿಂದ ಲ್ಯಾಂಡ್ ಸ್ಕೇಪ್ ಸುಂದರವಾಗಿ ಗೋಚರವಾಗುತ್ತದೆ. ನಾವು ನೆಲದಲ್ಲಿ ಓಡಾಡಿದ ಊರುಗಳು ಚಿತ್ರದಲಿ ಬಿಡಿಸಿದ ಲೇಜಾಟ್ ನಂತೆ ಕಾಣಿಸುತ್ತವೆ.
ಇಂದು ಬಾನ ಹಾರಾಟವನ್ನು ರಿಸ್ಕ್ ಎಂದು ಕರೆದರೂ ಅದು ಅನಿವಾರ್ಯವಾಗಿದೆ. ಮೊನ್ನಿನ ವಿಮಾನ ಅಪಘಾತ ಬಾನ ಹಾರಾಟವನ್ನು ಬೆಚ್ಚಿ ಬೀಳಿಸಿದೆ.
ಆದರೂ ನಿಲ್ಲಲು ಸಾಧ್ಯವೆ? ದಿನಾಲು ರಸ್ತೆ ಅಪಘಾತಗಳು, ರೈಲು ಅಪಘಾತಗಳು ಆದಂತೆ ವಿಮಾನ ಅಪಘಾತಗಳು ಸಂಭವಿಸುತ್ತವೆ. ಇಂತಹ ಭೀಕರ ದುರಂತದಲ್ಲೂ ಏಳು ಜನ ಬದುಕಿ ಪುನರ್ಜನ್ಮ ಪಡೆದಿದ್ದಾರಲ್ಲ?
ಹೀಗೆ ಸಾವಿನ ಸೂತಕ ಭಾವ ಮೆಲಕು ಹಾಕುತ್ತ, ಸಾವಿನ ಸುದ್ದಿಯ ಪುಟಗಳನ್ನು ತಿರುವಿ ಹಾಕುತ್ತಾ ಆಕಾಶದಲ್ಲಿ ಹಾರಾಡಿದ್ದು ವಿಸ್ಮಯ. ಪ್ರತಿ ಹಾರಾಟದಲ್ಲೂ 'ಬಾರದು ಬಪ್ಪದು' ಅಂದುಕೊಳ್ಳುತ್ತೇನೆ, ಏರುತ್ತೇನೆ, ಇಳಿಯುತ್ತೇನೆ. ಕಭಿ ಖುಷಿ, ಕಭಿಗಮ್ ಎನ್ನುವ ವಿಮಾನಯಾನ ಒಂದು ರೀತಿಯ trill ಕೊಡುತ್ತದೆ. ಈ ವೇಗದ ಬದುಕಿನಲ್ಲಿ ಎಲ್ಲವೂ ಅನಿವಾರ್ಯ. ಸಚಿವ ಮಿತ್ರರಾದ ಶ್ರೀರಾಮಲು ತೋರಿದ ಪ್ರೀತಿಯ ಸಲುಗೆ ಎಲ್ಲ ಆತಂಕಗಳನ್ನು ನಿವಾರಿಸಿತು. ಎಲ್ಲ ಹಂತಗಳಲ್ಲಿ ಸಿಗುವ ಬ್ರಹ್ಮಾನುಭವವನ್ನು ಅನುಭವಿಸಬೇಕು.
ನೆಲ, ಜಲ, ಬಾನ ಹಾರಾಟಗಳು ಹೊಸ ಅನುಭವ ನೀಡುತ್ತವೆ. ಹೀಗೊಂದು ಕ್ಷಣದ ಖುಷಿ ಹಂಚಿಕೊಂಡೆ.

Friday, May 21, 2010

ಮನದ ವಿಚಿತ್ರ ವ್ಯಾಪಾರಗಳು


"ತನ್ನಿಚ್ಛೆಯ ನುಡಿದಡೆ ಮೆಚ್ಚುವದೀ ಮನವು,
ಇದಿರಿಚ್ಛೆಯ ನುಡಿದಡೆ ಮೆಚ್ಚದೀ ಮನವು,
ಕೂಡಲ ಸಂಗನ ಶರಣರ ನಚ್ಚದ ಮಚ್ಚದ ಮನವ ಕಿಚ್ಚಿನೊಳಗಿಕ್ಕು".
ಬಸವಣ್ಣನವರ ಈ ವಚನವನ್ನು ಗಮನಿಸಿದಾಗ, ಬಸವಣ್ಣನಿಗೆ ಇದ್ದ ವ್ಯಕ್ತಿತ್ವ ವಿಕಸನದ ಆಸಕ್ತಿ ವ್ಯಕ್ತವಾಗುತ್ತದೆ.
ಮನಸಾಕ್ಷಿಯ ಕುರಿತು ವ್ಯಾಖ್ಯಾನಿಸುವಾಗ ಮೇಲಿನ ಸಾಲುಗಳ ಗಂಭೀರತೆಯನ್ನು ಗಮನಿಸಬೇಕು.
ನಮ್ಮ ಮನಸ್ಸು ಸದಾ ತನ್ನಿಚ್ಛೆಯಂತೆ ನಡೆಯಲು ಬಯಸುತ್ತದೆ. ಮನಸಿನ ಇಚ್ಛೆಗಳು ಯಾವುದು ಎಂಬುದನ್ನು ವಿವೇಚಿಸುವವರು ಯಾರು ಎಂಬುದು ಅಷ್ಟೇ ಕುತೂಹಲದ ಪ್ರಶ್ನೆ.
ಅಂದರೆ ಜಾಗೃತಾವಸ್ಥೆಯ ಮನಸು ಸದಾ negative ಆಲೋಚನೆಗಳ ಕಡೆಗೆ ಹರಿಯುತ್ತದೆ. ಈ ರೀತಿಯ ಹರಿದಾಟವನ್ನು ಮನವೆಂಬ ಮರ್ಕಟ ಎಂದು ನುಡಿಯುತ್ತಾರೆ. ಈ ಹರಿದಾಟವನ್ನು ನಿಲ್ಲಿಸುವುದೇ balance of mind ಎನ್ನುತ್ತಾರೆ.
ಮನ ಮೆಚ್ಚುವಂತೆ ನಡೆಯದೇ, ಜನ ಮೆಚ್ಚುವಂತೆ ನಡೆ ಎಂಬ ಹೇಳಿಕೆಯೂ ಇದೆ. ವ್ಯಕ್ತಿತ್ವ ವಿಕಸನದ ಸಂದರ್ಭದಲ್ಲಿ ಈ ರೀತಿಯ ಉಕ್ತಿಗಳನ್ನು confuse ಮಾಡಿಕೊಳ್ಳುವ ಅಗತ್ಯವಿಲ್ಲ.
ಇಲ್ಲಿ ಅಣ್ಣ ಹೇಳುವುದು ನಿಯಂತ್ರಣವಿಲ್ಲದ ನಿತ್ರಾಣ, ದುರ್ಬಲ conscious mind ಕುರಿತಾಗಿ. ಹೀಗಾಗಿ ಸದೃಢ ಮನಸಿನ ಪರಿಕಲ್ಪನೆ ನಮಗೆ ಸ್ಪಷ್ಟವಿರಬೇಕು.
ಜನ ಮೆಚ್ಚುವ, ಹುಚ್ಚು ಮನಮೆಚ್ಚುವ ಕೆಲಸ ಮಾಡುವುದಕ್ಕಿಂತ ವಿವೇಚನಾ ಪೂರ್ಣ ಮನಸು ಹೇಳುವ ಆತ್ಮಸಾಕ್ಷಿಗೆ ಬೇಸರ ಎನಿಸದ ಕೆಲಸಗಳನ್ನು ಮಾಡಬೇಕು.
ಜನರ ನಿರೀಕ್ಷೆಗೆ ತಕ್ಕಂತೆ ವರ್ತಿಸಬೇಕು ಎಂಬುದು ಕೂಡಾಸರಿಯಲ್ಲ. ಇಂಗ್ಲಿಷ್ ಸಾಹಿತಿ George orwel ತನ್ನ shooting An elephant ಎಂಬ ಲೇಖನದಲ್ಲಿ ಜನರ ನಿರೀಕ್ಷೆಗಳ ಕುರಿತು ರಸವತ್ತಾಗಿ ವಿವರಿಸುತ್ತಾನೆ.
ಇಂಗ್ಲಿಷ್ ಅಧಿಕಾರಿಯ ಕೈಯಲ್ಲಿ ರೈಫಲ್ ಇದ್ದುದನ್ನು ಕಂಡ ನೆರೆದ ಸಾವಿರಾರು ಜನರು, ಅಧಿಕಾರಿ ಆನೆಯನ್ನು ಕೊಲ್ಲಲಿ ಎಂದು ಬಯಸುತ್ತಾರೆ. ಆದರೆ ಮಾನವೀಯತೆಯ ದೃಷ್ಠಿ ಇಟ್ಟುಕೊಂಡ orwel ಆನೆಯನ್ನು ಕೊಲ್ಲುವ ಮನಸು ಮಾಡುವುದಿಲ್ಲ.
ತನ್ನಲ್ಲಿ ಉಂಟಾದ ತಲ್ಲಣಗಳನ್ನು ಲೇಖಕ ಹೃದ್ಯಂಗಮವಾಗಿ ವಿವರಿಸುತ್ತಾನೆ. ಅಂತಿಮವಾಗಿ ಜನರನ್ನು ಓಲೈಸಲೆಂದೇ ಆನೆಯನ್ನು ಕೊಲ್ಲುತ್ತಾನೆ.
ತನ್ನ ಮನಸಾಕ್ಷಿಗೆ ವಿರುದ್ಧವಾಗಿ ನಡೆದುಕೊಂಡಿದ್ದಕ್ಕೆ ವ್ಯಥೆ ಪಡುತ್ತಾನೆ. ಒಂದು ಸುಂದರ ಲೇಖನಕ್ಕೆ ಒಂದು ಹೃದ್ಯಂಗಮ ಘಟನೆ ಕಾರಣವಾಯಿತು. ಇಂತಹ ಸಂಬರ್ಭಗಳನ್ನು ನಾವು ಅನೇಕ ಬಾರಿ ಎದುರಿಸಿದಾಗ ಮನಸಾಕ್ಷಿಯ ಪರವಾಗಿ ನಡೆದುಕೊಳ್ಳಬೇಕು ಎಂಬುದೇ ಲೇಖಕನ ಆಶಯ!
ಸಮಯ, ಸಂದರ್ಭ, ಜನರನ್ನು ಮೆಚ್ಚಿಸಲು, ಸಾರ್ವತ್ರಿಕವಾಗಿ ಒಮ್ಮೊಮ್ಮೆ hero ಆಗಲು ಇಂತಹ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ.
ಪ್ರತಿ ಕ್ಷಣದ ಆಲೋಚನೆಯಲ್ಲಿ ಎರಡು ರೀತಿಯ ವಿಚಾರಗಳು ನಮ್ಮ ಕಣ್ಮುಂದೆ ಬರುತ್ತವೆ. ಒಳ್ಳೆಯದು - ಕೆಟ್ಟದು, ಜನಪರ - ಜನವಿರೋಧಿ, ಜನಮೆಚ್ಚುವ-ಮನಮೆಚ್ಚುವ....... ಹೀಗೆ ಗೊಂದಲಗಳಲಿ ನಮ್ಮ ಆಲೋಚನಾ ಲಹರಿ ಮುಂದುವರೆಯುತ್ತದೆ. ನಮ್ಮ ನಿರ್ಧಾರಗಳು ಯಾವಾಗಲೂ sub conscious mind ನೀಡುವ ಪ್ರಿಯ ಸಲಹೆಗಳನ್ನು ಸ್ವೀಕರಿಸಿ ಬಿಡುವ weakness ಗೆ ಶರಣಾಗುತ್ತೇವೆ.
ಇದಕ್ಕೊಂದು ಉದಾಹರಣೆಯನ್ನು ಗಮನಿಸೋಣ. ತುಂಬಾ ಶ್ರೀಮಂತರೂ, ಉದಾರಿಗಳ ಹತ್ತಿರ ನೆರವು ಕೇಳಲು ಹೋಗುತ್ತೇವೆ. ನಮ್ಮ ನಿರೀಕ್ಷೆ ಒಂದು ಸಾವಿರ ರೂಪಾಯಿ ಇರುತ್ತದೆ ಎಂದು ಇಟ್ಟುಕೊಳ್ಳೋಣ. ಆದರೆ ಅವರು ಹತ್ತು ಸಾವಿರ ರೂಪಾಯಿ ನೀಡಿದರೆ, ನಾವು ಉಳಿದ ಒಂಬತ್ತು ಸಾವಿರ ರೂಪಾಯಿ ಮರಳಿ ನೀಡುತ್ತೇವೆಯೋ, ಹೇಗೋ, ಒಂದು ವೇಳೆ ನಾವು ಒಂಬತ್ತು ಸಾವಿರ ರೂಪಾಯಿ ಮರಳಿ ನೀಡಿದರೆ ಮಾತ್ರ ಮನಸಾಕ್ಷಿಗೆ ತಕ್ಕಂತೆ ನಡೆದುಕೊಂಡಂತೆ. ಆದರೆ ಹೀಗಾಗಲು ಸಾಧ್ಯವೆ?
ಇಂತಹ ನಿಲುವಿಗೆ ತುಂಬಾ ಆತ್ಮವಿಶ್ವಾಸ, integrety ಬೇಕು.
ಈ ಮನಸ್ಥಿತಿಯನ್ನು ಬಸವಣ್ಣ ಅರ್ಥಪೂರ್ಣವಾಗಿ ವಿವರಿಸುತ್ತಾನೆ. ಹೊನ್ನಿನೊಳಗೊಂದೊರೆಯ, ಸೀರೆಯೊಳಗೊಂದೆಳೆಯ ಇಂದಿಗೆ, ನಾಳಿಂಗೆ ಬೇಕೆಂದನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ಎಂದು ಖಡಾ ಖಂಡಿತವಾಗಿ ದೃಢ ಸಂಕಲ್ಪದಿಂದ ಹೇಳುತ್ತಾನೆ.
ಬಸವಣ್ಣನಿಗಿರುವ ದೃಢ ಸಂಕಲ್ಪ ನಮಗಿದೆಯೇ? ಎಂದು ಕನಿಷ್ಠ ಆತ್ಮಾವಲೋಕನ ಮಾಡಿಕೊಳ್ಳೋಣ.
ಹೊನ್ನು, ಹೆಣ್ಣು, ಮಣ್ನು ಮಾಯೆ ಎನ್ನುತ್ತಲೇ, ಅದನ್ನು ಸುಂದರವಾಗಿ ನಿರಾಕರಿಸುತ್ತಲೇ, ಸದಾ ಬಯಸುವ, ಬಯಸಿದ್ದನ್ನು ಮುಚ್ಚಿಡುತ್ತಾ ಪಡೆಯಲು ಆಪೇಕ್ಷಿಸುವ ಗೊಂದಲ ಅದೆಂತಹ ಕಿರಿಕಿರಿ.
ಇಂತಹ ಅನೇಕ ಗೊಂದಲಗಳನ್ನು ಎದುರಿಸುತ್ತಲೇ ಬದುಕನ್ನು ನರಕ ಮಾಡಿಕೊಳ್ಳುತ್ತೇವೆ. ಮನಸು ಒಡ್ಡುವ ಐಹಿಕ ಆಸೆಗಳನ್ನು ಪೂರೈಸಲು, ಆಸೆಯೇ ದು:ಖಕ್ಕೆ ಮೂಲ ಎಂದು ದು:ಖಿಸುತ್ತಲೇ ಕಾಲಹರಣ ಮಾಡುವ ವಿಪರ್ಯಾಸಕ್ಕಿಂತ ಹಂತಹಂತವಾಗಿ ಸಾಧ್ಯವಾದಷ್ಟು ನಿರ್ಲಿಪ್ತತೆಯನ್ನು ರೂಪಿಸಿಕೊಳ್ಳೋಣ.

Wednesday, May 19, 2010

ಮನಸೆಂಬ ಮಾಯೆಗೆ ಲಗಾಮು ಹಾಕೋಣ

ಮನಸು, mind ಇತ್ಯಾದಿ ಶಬ್ದಗಳಿಂದ ಕರೆಯುವ ಚೇತನ ಶಕ್ತಿ ಇಡೀ ನಮ್ಮ ಬದುಕನ್ನೇ ನಿಯಂತ್ರಿಸುತ್ತದೆ. ಅದೇ ಕಾರಣಕ್ಕೇ ಹೇಳುತ್ತಾರೆ ಮನಸ್ಸು ಮಾಡಬೇಕು ಎಂದು ಹಾಗಾದರೆ ಯಾವುದಕ್ಕೆ, ಹೇಗೆ ಮನಸ್ಸು ಮಾಡಬೇಕು ಎಂಬುದು ನಮ್ಮ ಕೈಯಲ್ಲಿರಬೇಕು.
ಇಂದು mind power ಬಗ್ಗೆ ತುಂಬಾ ಚರ್ಚೆ ನಡೆದಿದೆ. ವ್ಯಕ್ತಿಯ ವ್ಯಕ್ತಿತ್ವ ಬದಲಾವಣೆಗೆ mind, mentality, attitude ಆಡುವ ಆಟವನ್ನು ಜಗತ್ತು ಅರಿತಿದೆ.
ನಮ್ಮ ಮನೋಧರ್ಮ, ದೃಷ್ಠಿಕೋನ ಬದಲಿ ಆಗಲು 'ಮನಸು' ಮಾಡುವುದೇ ಮುಖ್ಯ ಎಂಬ ಕಾರಣಕ್ಕೆ ಮನಸು ಮಹತ್ವದ ಸ್ಥಾನ ಪಡೆದಿದೆ.
ಇದು ಕೇವಲ ಇಂದಿನ ಚರ್ಚೆಯಲ್ಲ, ಹಿಂದಿನಿಂದಲೂ ಸಾಗಿದೆ ಎನ್ನುವುದಕ್ಕೆ ನಮ್ಮ ಬಸವಾದಿ ಶರಣರ ವಚನಗಳೇ ಸಾಕ್ಷಿ. ನಮ್ಮ ಎಲ್ಲ ದು:ಖಗಳಿಗೆ ಮನದ ಮುಂದಿನ ಮಾಯೆಯೇ ಕಾರಣ ಎನ್ನುತ್ತಾರೆ. ಹೀಗಿರುವಾಗ ಆಧುನಿಕ ವೈಜ್ಞಾನಿಕ ಯುಗದಲ್ಲಿ ಮನದ ಮಾತಾಡುವುದು ಯಾವ ಲೆಕ್ಕ.
ಮನಸಿನ ಮೂರು ಹಂತಗಳನ್ನು ಚರ್ಚಿಸಲಾದಂತೆ subconscious mind ಗೆ ಪ್ರಾಧಾನ್ಯತೆ ಇರುವುದು ಸ್ಪಷ್ಟವಾಗುತ್ತದೆ.
ನಮ್ಮ ಬದುಕಿನಲ್ಲಿ ನಡೆದ ಹಲವಾರು ಘಟನೆಗಳಿಂದಾಗಿ ನಮ್ಮದೇ ಆದ ಒಂದು ಮನಸ್ಥಿತಿ ರೂಪಿತವಾಗಿರುತ್ತದೆ. ಆ ಮನಸ್ಥಿತಿಯಲ್ಲಿ ಅನೇಕ ಲೋಪದೋಷಗಳಿರುತ್ತವೆ. ಅವುಗಳನ್ನು ಶಾಸ್ತ್ರೋಕ್ತವಾಗಿ ಅರಿಷಡ್ ವರ್ಗಗಳು ಎಂದು ವಾಖ್ಯಾನಿಸುತ್ತಾರೆ. psychology ಯಲ್ಲಿ negative thoughts ಎನ್ನುತ್ತಾರೆ.
'ಇಲ್ಲ' ಎನ್ನುವ ಧೋರಣೆ 'ಹೌದು' ಎಂದಾಗಬೇಕಾದರೆ ಮನದ ಹಟಮಾರಿತನ ಕಡಿಮೆ ಆಗಬೇಕು. ಸಂಪೂರ್ಣ ನಿಲ್ಲಿಸಬೇಕು ಎಂದರೆ ಒಣ ಉಪದೇಶವಾಗುತ್ತದೆ. ಆದ್ದರಿಂದ ಎಲ್ಲ negative ಗುಣಗಳನ್ನು ಹಂತಹಂತವಾಗಿ ನಿಲ್ಲಿಸಲು ಸಾಧ್ಯ.
ಅದನ್ನೇ development ಎನ್ನುತ್ತೇವೆ. developing ಹಂತ ಮುಗಿದು ಪರಿಪೂರ್ಣವೆನಿಸಿದಾಗ transformation ಸಾಧ್ಯವಾಗುತ್ತದೆ.
ಇದನ್ನೇ ಸೂತ್ರವಾಗಿಟ್ಟುಕೊಂಡು ಬದುಕನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದ ಕರೆನೀಡಿದ್ದಾರೆ.
ನಮ್ಮ ಅತೀಯಾದ ವಿಮರ್ಶೆ, ಕ್ರಮಬದ್ಧ ಆಲೋಚನೆಗಳು ಯಶಸ್ಸನ್ನು ತಂದುಕೊಡುತ್ತವೆ ಎಂಬುದು ಕೂಡಾ ಅಷ್ಟೊಂದು ಸಮಂಜಸವಲ್ಲ. ಆದರೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇದ್ದು positive ಗುಣ ಇದ್ದರೆ ಸಾಕು ಎನ್ನುತ್ತಾರೆ.
Set your target and achieve it,
what ever it takes just do it.
Don't analyse too much.
Just do it. Problems only make you strong.
You are born to win ಎನ್ನುತ್ತಾರೆ. ಉದಾತ್ತ ಗುರಿ ಹಾಕಿಕೊಳ್ಳುವ ಮನಸು ಮಾಡಬೇಕು. ಕ್ರಮಿಸುವ ಹಾದಿಯಲಿ ಬರುವ ಎಲ್ಲ ತೊಂದರೆಗಳನ್ನು ಎದುರಿಸುವ ಮನೋಸ್ಥಿತಿ ನಿರ್ಮಾಣವಾದಾಗ ಯಶಸ್ಸಿನ ಅಹಂಕಾರವಾಗಲೀ, ಸೋಲಿನ ನೋವಾಗಲಿ ಕಾಡುವುದಿಲ್ಲ. ಎಲ್ಲವನ್ನು ಸಮಾನವಾಗಿ, ನಿರ್ಲಿಪ್ತವಾಗಿ ಸ್ವೀಕರಿಸುವ ಶಾಂತ ಸ್ವಭಾವ ನಮ್ಮದಾದಾಗ ನಮ್ಮ ನಡೆ ಸರಳವಾಗಿರುತ್ತದೆ.
ನಾವು ಶಾಂತಚಿತ್ತರಾಗಿ ಆಲೋಚಿಸಿ ನಮ್ಮ ಗುಣಧರ್ಮಗಳನ್ನು ವಿರಾಮರ್ಶೆಗೆ ಒಡ್ಡಬೇಕು. ಬೇರೆಯವರನ್ನು ಮೆಚ್ಚಿಸುವಂತೆ, ಒಪ್ಪಿಸುವಂತೆ ನಡೆದುಕೊಳ್ಳುವುದು ಬಹಳ ಸುಲಭ.
ಆದರೆ ಈ ಹಿಪೋಕ್ರಸಿ ಬೇಗ ಅಲ್ಲದಿದ್ದರೂ ಒಮ್ಮೆಯಾದರೂ expose ಆಗುತ್ತದೆ. ಒಮ್ಮೆ ಈ ಹಿಪೋಕ್ರಸಿ expose ಆದರೆ ನಮ್ಮ ವ್ಯಕ್ತಿತ್ವ ಶಿಥಿಲವಾಗುತ್ತದೆ.
ಈ ಕಾರಣದಿಂದಾಗಿಯೋ ನಾವು ಬೇರೆಯವರನ್ನು ಅತಿಯಾಗಿ ಹೊಗಳುವ, ತೆಗಳುವ ಕೆಲಸಕ್ಕೆ ಮುಂದಾಗುತ್ತೇವೆ. ನಮ್ಮ ಈ ಭಾವನೆಗಳು ಅವರಿಗಾಗಿ ಅಲ್ಲ ಕೇವಲ ನಮ್ಮ ಮನೋಧರ್ಮ ಸಾಬೀತಾಗಲು ಎಂಬುದನ್ನು ಅರಿಯಬೇಕಾಗುತ್ತದೆ. ಆದ್ದರಿಂದಲೇ ತುಂಬಾ ಜಾಣರು, ಪರಿಪೂರ್ಣ ವ್ಯಕ್ತಿತ್ವ ಹೊಂದಿದವರು ಹೊಗಳಿಕೆಗಾಗಲೀ, ತೆಗಳಿಕೆಗಾಗಲೀ ಬಗ್ಗುವುದಿಲ್ಲ. ಸುಮ್ಮನೆ ಮುಗುಳ್ನಗುತ್ತಾರೆ ಅಷ್ಟೇ!
ನಿಮ್ಮ ಹೊಗಳಿಕೆ, ತೆಗಳಿಕೆಯ ಹಿಂದಿನ ಉದ್ದೇಶ, agenda ಅವರಿಗೆ ಅರ್ಥವಾಗಿಬಿಡುತ್ತದೆ.
ಆದ್ದರಿಂದ ನಮ್ಮೊಳಗೆ ಅಡಗಿರುವ, ನಮ್ಮನ್ನು ಸದಾ ಕಾಯುತ್ತಿರುವ ಮನಸಾಕ್ಷಿಯನ್ನು ಮೆಚ್ಚಿಸುವ ಕೆಲಸ ಮಾಡೋಣ. ಆ ಮನಸಾಕ್ಷಿಯನ್ನು ಜಾಗೃತಿಗೊಳಿಸುವ ಕೆಲಸ ಮಾಡಲು ಮುಂದಾಗುವುದೇ ಮನಸು ಮಾಡುವುದು.
So let us mind to change ourselves.

ಮುನ್ನುಡಿ

ಕಾವ್ಯ ಬಾಯಿಪ್ರಸಾದವಲ್ಲ, ಋಣಾನುಸಂಬಂಧ
ನಾನು ಕನ್ನಡ ವಿಶ್ವವಿದ್ಯಾಲಯದ ಕುಲಸಚಿವನಾಗಿ ಕಾರ್ಯನಿರ್ವಹಿಸುತ್ತಿದ್ದೆ. ಈ ಅವಧಿಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಲವರು ಸರ್ಕಾರದಿಂದ ನಿಯುಕ್ತರಾದರು. ಅವರ ಪಟ್ಟಿ ಬಂದಾಗ ಪ್ರೊ. ಸಿದ್ದು ಯಾಪಲಪರವಿ ಎಂಬ ಹೆಸರಿತ್ತು. ನೇಮಕಗೊಂಡ ನಂತರ ಮೊದಲ ಸಭೆಗೆ ಕಾರ್ಯಕಾರಿ ಸಮಿತಿಯ ಸದಸ್ಯರು ಬಂದರು. ನಾನು ಕಛೇರಿಯಲ್ಲಿ ಕೂತಿದ್ದೆ. ನನ್ನ ಆಫಿಸಿನೊಳಕ್ಕೆ ಒಬ್ಬ ನಗುಮೊಗದ ದುಂಡನೆಯ ವ್ಯಕ್ತಿ ಬಂದು 'ನಮಸ್ಕಾರ ಸಾರ್, ನಾನು ಸಿದ್ದು ಯಾಪಲಪರವಿ' ಎಂದು ಪರಿಚಯ ಹೇಳಿಕೊಂಡರು. ಅವರ ಮಾತು -ಧ್ವನಿ-ಶೈಲಿ ನನಗೆ ತುಂಬಾ ಆಪ್ತ ಎನಿಸಿತು. ಈತ ಸ್ನೇಹಪರ ಎಂದೆನಿಸಿತು. ಮುಂದೆ ಮೂರು ವರ್ಷಗಳ ಅವಧಿಯವರೆಗೆ ಅವರು ಸದಸ್ಯರಾಗಿ ಕಾರ್ಯ ನಿರ್ವಹಿಸಿದರು. ಅವರು ನನ್ನೊಡನೆ ಹಲವಾರು ದಿನ ಕುಳಿತು ಕವಿತೆ, ಕತೆ, ಸಮಕಾಲೀನ ಕನ್ನಡ ಮನಸ್ಸು, ವೈಚಾರಿಕತೆ - ಇನ್ನು ಮುಂತಾದ ಹಲವಾರು ವಿಷಯಗಳನ್ನು ನನ್ನ ಜೊತೆ ಮಾತನಾಡುತ್ತಿದ್ದರು. ಅವರದು ಸಮಪಾತಳಿಯ ದೃಷ್ಠಿ. ಎಲ್ಲೂ ರೇಜಿಗೆ ಇಲ್ಲ. ತನಗೆ ತಿಳಿದ್ದನ್ನು ಮಾತ್ರ ಹೇಳುತ್ತಿದ್ದರು. ಇಲ್ಲದಿದ್ದರೆ ತಿಳಿದುಕೊಂಡು ಬಂದು ಮಾತನಾಡುತ್ತಿದ್ದರು. ಅವರು ನಾನು ಅನೇಕ ವಿಚಾರಗಳನ್ನು ಮಾತನಾಡಿದ್ದೇನೆ; ಜೊತೆಗೆ ಸಂವಾದ ನಡೆಸಿದ್ದೇವೆ.
ನನಗೂ ಸಿದ್ದು ಯಾಪಲಪರವಿಗೂ ಹೀಗೆ ಸ್ನೇಹ ಬೆಳೆದು ಬಂತು. ನನ್ನ ಬದುಕಿನ ಕಳೆದ ಏಳೆಂಟು ವರ್ಷ ಅವರೊಡನೆ ಹಿತವಾಗಿ ಕಳೆದಿದ್ದೇನೆ. ಅವರ ಸ್ನೇಹದ ಅಮೃತವರ್ಷದಲ್ಲಿ ನಿತಾಂತನಾಗಿ ಕಳೆದಿದ್ದೇನೆ. ಅವರು ಕಳೆದ ಎರಡು ತಿಂಗಳ ಹಿಂದೆ 'ನೆಲದ ಮರೆಯ ನಿಧಾನ' ಸಂಕಲನವನ್ನು ನನ್ನ ಕೈಗಿಟ್ಟು " ಇದಕ್ಕೊಂದು ಮುನ್ನುಡಿ ಬರೆದುಕೊಡಿ" ಎಂದರು. ನನಗೆ ಕವಿತೆಯು ಪ್ರೀತಿಯ ವಿಷಯ; ಅದನ್ನು ಬರೆದ ಕವಿ ನನ್ನ ಪ್ರೀತಿಯ ಸ್ನೇಹಿತ. ಇವೆರಡೂ ನನ್ನ ಮನಸ್ಸನ್ನೂ ಕಟ್ಟಿ ಬೆಳೆಯಿಸಿತು. ಈ ಸಂಕಲನ ಕಳೆದ ಒಂದು ತಿಂಗಳಿನಿಂದ ನನ್ನ ಜತೆ ಎಲ್ಲೆಲ್ಲೂ ಪ್ರಯಾಣ ಮಾಡಿದೆ. ನಾನು ಹೋದ ಕಡೆ ಈ ಕವಿತೆಯ ಕೆಲವು ಸಾಲುಗಳನ್ನು ಕಣ್ಣಾಡಿಸಿದ್ದೇನೆ. ಆಗಾಗ್ಗೆ ಶಿಷ್ಯಮಿತ್ರರಿಗೆ ಇಲ್ಲಿಯ ಕವಿತೆಗಳನ್ನು ಓದಿ ಹೇಳಿದ್ದುಂಟು. ನನಗೆ ಮೆಚ್ಚುಗೆಯಾದ ಕೆಲವು ಕವಿತೆಗಳನ್ನು ಗೆಳೆಯರ ಜೊತೆ ಓದಿ ಸವಿದಿದ್ದೇನೆ. ಕವಿತೆಯನ್ನು ಕೇಳಿದವರೂ ಸವಿದಿದ್ದಾರೆ. ಏನಿದ್ದರೂ ಕವಿತೆ ಕಿವಿಗೆ ಸೇರಿದ್ದು ತಾನೆ? ನವ್ಯ ಕವಿತೆ ಕಣ್ಣಿಗೆ ಸೇರಿದರೆ, ದೇಸಿ ಕವಿತೆ ಕಿವಿಗೆ ಸೇರಿದ್ದು.
ಕವಿತೆಗೂ ಕಿವಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಕೇಶಿರಾಜ 'ಶ್ರೋತ್ರದೊಳ್ ಉದ್ಭಾವಿಪ' ಎಂದು ಹೇಳಿದ್ದಾನೆ. 'ಕಿವಿವೊಕ್ಕಡಂ' ಎಂದು ಪಂಪ ಹೇಳಿದ್ದಾನೆ. 'ಕೇಳಲಕ್ಕುಂ,ಕೇಳ್ದೊಡಂ' ಎಂಬಂಥ ಪೂರ್ವವಾಕ್ಯಗಳು ಅಸಂಖ್ಯವಾಗಿವೆ. 'ಕೇಳುವ ಜಂಗಮ ಜನಾರ್ಧನರು' ಎಂದು ಕುಮಾರವ್ಯಾಸ ಹೇಳುತ್ತಾನೆ. 'ತಿಳಿಯ ಹೇಳುವೆ ಕೃಷ್ಣಕಥೆಯನು' ಎಂದು ಅವನೇ ಹೇಳುತ್ತಾನೆ. ನಮ್ಮ ದಿನನಿತ್ಯದ ವ್ಯವಹಾರ ಜಗತ್ತಿನಲ್ಲಿ ಕಿವಿಯೂ ಭಾಗವಹಿಸುತ್ತದೆ. ಸಾಹಿತ್ಯಕ್ಕೆ ಕಣ್ಣೆಂಬುದು ಗೌಣ; ಆರ್ದ್ರವಾಗುತ್ತದೆ. ಗಣೇಶನ 'ಮೊಗದಗಲದ ಕಿವಿ' ಸಾಂಕೇತಿಕವಾಗಿಯೂ ಇದೆ. ಹೀಗೆ ಕಾವ್ಯ, ಕವನ, ಕವಿತೆ,ಪದ್ಯ ಇವುಗಳಿಗೆಲ್ಲ ಕಿವಿಯೇ ಪ್ರಧಾನ, ಪ್ರಾಧಾನ್ಯ ಹೌದು!
ಪ್ರೊ. ಸಿದದು ಬಿ. ಯಾಪಲಪರವಿ ಅವರ ಕವಿತೆಗಳು ಕಣ್ಣಿಗೆ ಅಥವಾ ಕಣ್ಣಿನ ಓದಿಗೆ ಸಂಬಂಧಿಸಿಲ್ಲ; ಅದು ಕಿವಿಗೆ ಸಂಬಂಧಿಸಿದ್ದು. ಆದ್ದರಿಂದ ಇಲ್ಲಿಯ ಕವಿತೆಗಳನ್ನು ಗಟ್ಟಿಯಾಗಿ ಓದಿಸಿ ಕೇಳಬೇಕು. ನಾವು ಇಲ್ಲಿಯ ಕವಿತೆಗಳ ಮೇಲೆ ಕೇವಲ ಕಣ್ಣಾಡಿಸಿದರೆ ಏನೇನೂ ಸಿಗದೆ ಹೋಗಬಹುದು. ಹಾಗಾಗಿ, ಇದು ಶುದ್ಧ ದೇಸಿ ಕವಿತೆ. ದೇಸಿ ಕವಿತೆಗೆ ನಾದವೂ ಉಂಟು, ಲಯದ ಬಳುಕುಗಳೂ ಉಂಟು. ಪಂಪ 'ದೇಸಿಯೊಳ್ ಪುಗುವುದು' ಎಂದು ಹೇಳುತ್ತಾನಷ್ಟೆ! ಇದು ಬಹು ಮಹತ್ವದ ಮಾತು. ಈ ಮಾತಿನ ಜಾಡನ್ನು ಹಿಡಿದು ನಾವು ನಡೆಯಬೇಕು ಅಷ್ಟೆ. ಈ ಸಂಕಲನದ 'ಆರ್ತನಾದ' ಎಂಬ ಕವಿತೆ ಯಾಪಲಪರವಿಯವರ ಸಂಕಟಕ್ಕೆ ಹಿಡಿದ ಕನ್ನಡಿಯಾಗಿದೆ. ಇದು ಕವಿತೆಯಾಗಿಸುವ ಸಂಕಟವೂ ಹೌದು; ಇದರ ಜೊತೆಗೆ ಕವಿತೆಯ ಆಶಯದ ಹಿಂದಿರುವ ಆತಂಕವೂ ಹೌದು. ಇವೆರಡನ್ನೂ ಒಂದುಗೂಡಿಸುವ - ಆ ಮೂಲಕ ಪರಿಭಾವಿಸುವ - ವಿಫುಲ ಯತ್ನಗಳೂ ನಮ್ಮ ಮುಂದೆ ಈ ಕವಿ ತಂದು ತೋರಿಸುತ್ತಾರೆ. ಕವಿತೆ ಆರಂಭವಾಗುವುದು 'ಮನದ ಬಾಗಿಲು' ಗಳ ರೂಪಕದಿಂದ.
ಎಂದೋ ಮುಚ್ಚಿಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತರಗಳು
ಕೊಚ್ಚಿಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ,ತಟ್ಟಿ ತೆರೆಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿಹೋಗಲಿ ದು:ಖ-ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ (ಆರ್ತನಾದ)
ಈಗ ಲೋಕವು ಆನಂದದ ಸಮುದ್ರದಲ್ಲಿ ತೇಲುತ್ತಿಲ್ಲ. ಅಲ್ಲಿ ಗೋಳಿನ ರೂಪಕಗಳುಂಟು. ಅಲ್ಲಿ ಚಿಂತೆಯ ಬಿರುಗಾಳಿಗಳುಂಟು. ಅಲ್ಲಿ ಅರಳುವ ಕಲ್ಪನೆಗಳಿಲ್ಲ. ಅವೆಲ್ಲವೂ ಕರಗಿಹೋಗಿವೆ. ಇದು ವಾಸ್ತವದ ರೂಪಕ. ಇಂಥ ವಾಸ್ತವವು ಯಾಕೆ ನೆಲೆಯೂರಿತು. ಇಲ್ಲಿ ವ್ಯಕ್ತಿತ್ವಗಳು ನಾಶವಾಗುತ್ತಲಿವೆ. ವ್ಯಕ್ತಿಗಳು ವಿಜೃಂಭಿಸುತ್ತಿದ್ದಾರೆ. ಇಲ್ಲಿ ಆತ್ಮಾಭಿಮಾನಕ್ಕೆ ದಾರಿಗಳಿಲ್ಲ. ಅವು ಸೋಂಕುಗಳಿಂದ ಕೂಡಿವೆ. ಇಂಥ ಸನ್ನಿವೇಶದಲ್ಲಿ ಪ್ರೀತಿಯ ಅಪ್ಪುಗೆ ಬೇಕು. ಚಿಂತೆಯ ಕದ ಅಲ್ಲಿ ತೆರೆಯಬೇಕು. ಆಗ ಅಲ್ಲಿ ಪ್ರೀತಿಯ ನಗೆಯುಕ್ಕಿ ಆವರಿಸಿರುವ ಕತ್ತಲೆ ಓಡುತ್ತದೆ. ಇಡೀ ಕವಿತೆಯ ಆರ್ತನಾದ ವ್ಯಕ್ತಿ ನೆಲೆಯಿಂದ ಸಾಮೂಹಿಕ ನೆಲೆಗೂ, ಅಲ್ಲಿಂದ ವ್ಯಕ್ತಿ ನೆಲೆಗೂ ಸಂಚರಿಸುತ್ತದೆ. ಜೀವನಕ್ಕೆ ಏರುಮುಖದ ಚಲನೆ ಇರುವಂತೆ ಇಳಿಮುಖದ ಚಲನೆಯೂ ಉಂಟು. ಇವೆರಡೂ ಭಿನ್ನವೆಂದು ಕವಿ ಭಾವಿಸುವುದಿಲ್ಲ. ಅವೆರಡೂ ಪರಸ್ಪರ ಒಗ್ಗೂಡುವ ಪ್ರಯತ್ನ ಬೇಕು. ಕತ್ತಲೆಯೊಳಗಿಂದ ಬೆಳಕು ಬರುತ್ತದೆಯಷ್ಟೆ! ಬೆಳಕು ಕತ್ತಲೆಯನ್ನು ನುಂಗುತ್ತದೆ. ಆರ್ತತೆಯಲ್ಲಿಯೂ ನಾದವುಂಟು ಎಂಬ ರೂಪಕೋಕ್ತಿ ವಿಧಾನವು ಕವಿತೆಯ ಪ್ರಧಾನ ಆಶಯವಾಗಿರುವುದು ಗಮನೀಯ.
ಈ ಸಂಕಲನವು ಮುಖ್ಯವಾಗಿ ವ್ಯಕ್ತಿನೆಲೆಯ ಪ್ರೀತಿಮುಖಗಳನ್ನು ಹುಡುಕುತ್ತದೆ. ವ್ಯಕ್ತಿನೆಲೆ ತಿಳಿಯದೆ ಸಾಮೂಹಿಕ ನೆಲೆ ತಿಳಿಯುವುದು ಹೇಗೆ? ಈ ಸಂಕಲನದ ಚಿತ್ತ ಚಿತ್ತಾರ, ನಗ್ನಸತ್ಯ, ನಿನ್ನ ಕಣ್ಣ ಸೆಳೆತದಲಿ, ಸಂಗಾತಿ ಮುಂತಾದ ಕವಿತೆಗಳು ಗಂಡು-ಹೆಣ್ಣಿನ, ಸಖ-ಸಖಿಯರ, ಗೆಳೆಯ-ಗೆಳತಿಯರ ಸಂಬಂಧಗಳ ನಂಟನ್ನು ಹುಡುಕುತ್ತದೆ. ವ್ಯಕ್ತಿನೆಲೆಯ ಪ್ರೀತಿ ಮುಖಗಳಿಗೆ ಸಾರ್ವಜನಿಕ ಮುಖವೂ ಉಂಟು. ಆದರೆ, ಇದು ವ್ಯಕ್ತಿ ನೆಲೆಯ ವಿವಿಧ ಮುಖಗಳನ್ನು ನೋಡಲು ಇಚ್ಛಿಸುತ್ತದೆ. ಎಲ್ಲಿ ಗಂಡು-ಹೆಣ್ಣುಗಳ ಪ್ರೀತಿ ಮುಖಗಳೂ, ವಿರಸದ ಮುಖಗಳೂ ಪರಸ್ಪರ ತೆರೆದು ನಿಲ್ಲುತ್ತವೋ, ಅಲ್ಲಿ ವೈಚಾರಿಕ ಆಕೃತಿಯ ನೆಲೆಗಳು ಬರುತ್ತವೆ. ಈ ಸಂಕಲನದ 'ಸಂಗಾತಿ' ಎಂಬ ಕವಿತೆ ಈ ದೃಷ್ಟಿಯಿಂದ ತೀರಾ ಕುತೂಹಲಕಾರಿ. ಈ ಕವಿತೆಯು ಮೊದಲಿಗೆ ಶಿಶುನಾಳ ಶರೀಫನ ಕವಿತೆಯ ಎರಡು ಸಾಲನ್ನು ಹಾಕಿದೆ. ಅದಾದ ಮೇಲೆ ಕವಿತೆ ಆರಂಭವಾಗುತ್ತದೆ. ಈ ಕವಿತೆಯು ಎರಡು ಘಟಕಗಳನ್ನು ಹೊಂದಿದೆ. ಮೊದಲನೆಯ ಘಟಕ ಭೂತಕಾಲದ ಮುಖ. ಇಲ್ಲಿ ಭೂತಕಾಲವೂ ವರ್ತಮಾನಕ್ಕೆ ತಂದು ನಿಲ್ಲಿಸಿ ದಂತಿದೆ. ಮೊದಲನೆಯ ಘಟಕದ ಕವಿತೆಯ ಸಾಲುಗಳು ಹೀಗಿವೆ:
ತಲೆಯನೆತ್ತಿ ನಡೆಯದಂತೆ ತಿನ್ನುವ ಚಿಂತೆಗಳು
ಹುದುಗಿಕೊಂಡಿವೆ ನನ್ನ ಸಮಸ್ಯಗಳು
ಅರ್ಥರಹಿತ ವ್ಯವಹಾರಿಕ ಬದುಕು ಏನೆಲ್ಲಾ ಮರೆಸಿದೆ
ಚೈತನ್ಯ, ನೆಮ್ಮದಿ ಎಲ್ಲೂ ಸಿಗದೆ ತಬ್ಬಲಿಯಾದಾಗ
ಈ ಕವಿತೆಯ ಸಾಲುಗಳು ವೈಯಕ್ತಿಕ ಮುಖವನ್ನೂ ಹೇಳುತ್ತಿವೆ ಎನಿಸಿದರೂ ಅದು ಸಾರ್ವಜನಿಕವಾಗುವುದು ಅನಿವಾರ್ಯ. ವೈಯಕ್ತಿಕ ಮುಖದಲ್ಲಿ ಚಿಂತೆ-ಸಮಸ್ಯಗಳು ಮುಕ್ಕಿಬಿಡುತ್ತವೆ ನಿಜ. ಆದರೆ, ಚೈತನ್ಯ ನೆಮ್ಮದಿ ಬೇಕು. ಆದರೆ ಚೈತನ್ಯವಿಲ್ಲದೆ ನೆಮ್ಮದಿಗೆ ಅವಕಾಶವಿಲ್ಲ. ಆಗ 'ತಬ್ಬಲಿತನ' ಬಂದು ಮುಸುಕುತ್ತವೆ. ಇಲ್ಲಿರುವ 'ತಬ್ಬಲಿ' ಎಂಬ ರೂಪಕ ಪ್ರೀತಿಯ ಮುಖವೂ ಹೌದು. ತಬ್ಬಲಿತನದ ಚಿತ್ರವೂ ಹೌದು. ಮೊದಲು ತಬ್ಬಲಿತನ ಕಂಡರೂ ಅದರೊಳಗೆ 'ತಬ್ಬಲಿ' ಎಂಬ ಪ್ರೀತಿಪೂರ್ವಕವೂ ಇದೆ. ಇದು ಎರಡನೆಯ ಘಟಕಕ್ಕೆ ಚಂಗನೆ ನೆಗೆಯುತ್ತದೆ.
ನಿನ್ನ ಬಳೆಗಳ ನಾದ
ನಗುವ ತುಟಿ
ಬಳಸಿದ ತೋಳು
ಬಿಸಿ ಅಪ್ಪುಗೆ
ಮುದವಾದ ತಟ್ಟುವಿಕೆ
ಕಿಲಕಿಲ ನಗು
ಸಿಹಿ ಮುತ್ತುಗಳು
ವ್ಯಸನದಲೂ ಅರಳಿಸಿವೆ........
ಕವಿತೆ ಹೀಗೆ ಬೆಲೆಯುತ್ತದೆ. ಎರಡನೆಯ ಘಟಕದ ಪ್ರೀತಿಯ ಸಂಕೇತ ಹಾಗೂ ರೂಪಕಗಳು ವೈಯಕ್ತಿಕ ನೆಲೆಗೆ ತಂದು ಕೊಡುತ್ತವೆ. ಕವಿತೆಯ ಪೂರ್ವಸ್ಮೃತಿ 'ಕೊಡು; ಕವಿತೆಗೆ ಸದ್ದಿಲ್ಲದೆ ಅವಶ್ಯಕತೆಯನ್ನು ತಂದು ಉಕ್ಕಿಸಿದೆ. ಜೀವನವು ಕುಶಲದಿ ಕೂಡಿ ಹಗುರಾಗಿಸಿದೆ.' ಎಂಬ ಮಾತಿನೊಡನೆ ಈ ಕವಿತೆಯು ಮುಕ್ತಾಯಗೊಳ್ಳುತ್ತದೆ.
ಪ್ರೊ. ಸಿದ್ದು ಬಿ. ಯಾಪಲಪರವಿಯವರ ಕವಿತೆಗಳು ಬೇಗನೆ ಮೈದೆರೆಯುವುದಿಲ್ಲ. ಇಲ್ಲಿಯ ಕವಿತಾ ಶೈಲಿ ನಾರೀಕೇಳಪಾಕ. ಇದು ದ್ರಾಕ್ಷಾಪಾಕವೂ ಹೌದು. ಈ ಕವಿಯು ಎರಡು ಬಗೆಯ ಕಾವ್ಯ ಪಾಕವನ್ನು ಹುದುಗಿಸಬಲ್ಲರು. ಮೇಲೆ ಉದಾಹರಿಸಿದ 'ಸಂಗಾತಿ' ಕವಿತೆಯಲ್ಲೇ ಈ ಎರಡೂ ಶೈಲಿ ಇರುವುದನ್ನು ಗಮನಿಸಬಹುದು. ಮೊದಲನೆಯ ಘಟಕವು ನಾರೀಕೇಳಪಾಕ, ಎರಡನೆಯ ಘಟಕ ದ್ರಾಕ್ಷಾಪಾಕ. ಕವಿತೆಯ ವ್ಯಾಖ್ಯಾನಕ್ಕೆ ನಾನು ಬೇಕಾಗಿ ಎರಡು ಬಗೆಯ ಪಾಕಗಳ ಮಿಶ್ರಣ ಹೇಗಾಗಿದೆಯೆಂಬುದಕ್ಕೆ ಕಾವ್ಯಮೀಮಾಂಸೆಯ ಪರಿಕಲ್ಪನೆಯನ್ನು ಇಲ್ಲಿ ಬಳಸಿದ್ದೇನೆ. ಇಡೀ ಸಂಕಲನದ ಕವಿತೆಗಳು ನಾರೀಕೇಳಪಾಕ ವಾಗಿರುವುದೂ ಉಂಟು; ದ್ರಾಕ್ಷಾಪಾಕವಾಗಿರುವುದು ಉಂಟು. ಹಲವು ಕಡೆ ಒಂದರ ಮುಖ ಮತ್ತೊಂದು ಮುಖಕ್ಕೆ ಕೂಡಿಹಾಕಿಕೊಂಡಿರುವುದು ಉಂಟು. ಇದು ಕಾವ್ಯ ಶೈಲಿಯ ಪ್ರಮೇಯ. ಪ್ರಮಾಣಗಳನ್ನು ಒದಗಿಸಲು ಕವಿ ಎಲ್ಲೂ ತಿರುಗುವುದಿಲ್ಲ. ಅದಲು ತನ್ನ ಕವಿತೆಯ ಲೋಕದಿಂದಲೇ ಪ್ರತ್ಯಕ್ಷ ಸಾಕ್ಷ್ಯವನ್ನು ಒದಗಿಸಲು ಯತ್ನಿಸುತ್ತಾನೆ. ಇದು ಈ ಸಂಕಲನದ ಮಟ್ಟಿಗೆ ಒಂದು ಚೋದ್ಯವೇ ಸರಿ. ಕವಿಗೂ ಕವಿತೆಗೂ ಕವಿಯ ಲೋಕಕ್ಕೂ ಸಂಬಂಧಿಸಿದ ಮಾತೆಂದು ನಾನಂತೂ ಲಘುವಾಗಿ ಹೇಳಲಾರೆ. ಲಘುತ್ವದಿಂದ ಬಹುತ್ವದ ಕಡೆಗೆ ಸೆಳೆಯುವ ಸಂಚಲನ ಇಲ್ಲಿದೆ.
ಸಿದ್ದು ಯಾಪಲಪರವಿ ವೈಯಕ್ತಿಕ ನೆಲೆ ಮತ್ತು ಸಾರ್ವಜನಿಕ ನೆಲೆ ಎಂಬೆರಡು ಪಥಗಳಲ್ಲಿ ಸಂಚರಿಸುತ್ತಿದ್ದಾರೆ. ಅನೇಕಬಾರಿ ಇವೆರಡು ಒಮ್ಮುಖಗಳಾಗಿರುವುದೇ ಹೆಚ್ಚು. ಬದುಕು ಅರ್ಥವಾಗುವುದು ಇಮ್ಮುಖವಾದಾಗ ಅಲ್ಲ. ಅಲ್ಲಿ ಬದುಕಿನ ರಹಸ್ಯ ಕೋಣೆಗಳು ತೆರೆಯುವುದಿಲ್ಲ. ಇಮ್ಮುಖತೆಯ ಕವಿತೆಗೆ ಅರ್ಧಸತ್ಯದ ಎಳೆಗಳನ್ನು ಪ್ರದಾನ ಮಾಡುತ್ತದೆ. ಅದೇ ಜಾಗದಲ್ಲಿ ಒಮ್ಮುಖತೆಯು ಕವಿತೆಗೆ ಪೂರ್ಣ ಸತ್ಯದ ನೆಲೆಗಳನ್ನು ಕಾಣಿಸುವುವಂತೆ ಮಾಡುತ್ತದೆ. ಈ ಕವನಸಂಕಲನದ ಹಲವು ಕವಿತೆಗಳು ಇವೆರಡನ್ನೂ ಕೂಡಿಸಿಕೊಳ್ಳುವ ಬಗೆ ಹೇಗೆಂಬುದ್ನು ಚಿಂತಿಸುತ್ತದೆ. ಲೇಖಕ, ಕವಿ, ಸಾಹಿತಿ ಆದವನು ಇಂಥ ಅಗ್ನಿದಿವ್ಯದ ಕುಂಡದಿಂದ ಮೇಲೆರಬೇಕು. ಇದು ಮೊದಲಿಗೆ ತನ್ನನ್ನು ಸುಟ್ಟುಕೊಂಡು ಬೆಳಕು ನೀಡುವವನ ಪರಿ. ಈ ಗತಿಯು ಕವಿತೆಗೆ ಹೊಸ ಅರ್ಥದ ಪಳುಕುಗಳನ್ನು ತೊಡಿಸುತ್ತದೆ. ಸಿದ್ದು ಕವಿತೆಗೆ ಸೌಂದರ್ಯಾತ್ಮಕ ಆಭರಣಗಳನ್ನು ತೊಡಿಸುವುದಿಲ್ಲ. ಅಲ್ಲಿ ಚಿಂತನೆಯೇ ಮೇಲ್ಮೈಯಾಗುತ್ತದೆ. ಆಗ 'ಕಾವ್ಯ'ದ ಒಳಬನಿಯ ದನಿಯು ಕ್ಷೀಣಿಸುತ್ತದೆ. ಈ ಕವಿತೆಗಳ ಸಹಸ್ಪಂದನಕ್ಕೆ ಇರುವ ತೊಡಕು ಇದೊಂದೇ. ಕವಿತೆಯ ಲಯಗಳು ಸೂಕ್ಷ್ಮಗೊಳ್ಳಬೇಕು. ಗದ್ಯದ ಲಯಗಳನ್ನು ಪದ್ಯದ ಲಯಗಳಾಗಿ ನೋಡುವ ಉಪಕ್ರಮವೊಂದುಂಟುಷ್ಟೆ. ಇಂಥ 'ಲಯ'ಗಳನ್ನು ಹಿಡಿಯುವ ಕಡೆ ಸಿದ್ದು ಯತ್ನಿಸುತ್ತಾರೆ. ಆಗ ಚಂದದ ಸಾಲುಗಳನ್ನು ಕಾಣಬಹುದು. ಆದರೆ, ಕಾವ್ಯಕೌಶಲ್ಯವೇ ಸೌಂದರ್ಯ ಮತ್ತು ಚಿಂತನಾತ್ಮಕ ಅಂಶಗಳೆರಡನ್ನೂ ಒಟ್ಟಿಗೆ ಹಿಡಿಯುವ ಇರಾದೆಯನ್ನು ವ್ಯಕ್ತಪಡಿಸುವುದಿಲ್ಲ. ಅದು ಇನ್ನು ಮುಂದೆ ನಮ್ಮ ಕವಿ ಮಿತ್ರ ಸಿದ್ದು ಹಿಡಿಯಬೇಕಾದ ದಾರಿ. ಕಲೆ ಮತ್ತು ಚಿಂತನೆ ಸಮಪ್ರಮಾಣವಾಗಿ ಬೆರೆಯಬೇಕು. ಕೇವಲ ಸ್ಪೋಟಕವೊ, ಕೇವಲ ಚಿಂತನೆಯೊ, ಕೇವಲ ಸೌಂದರ್ಯವೊ ಕವಿತೆಗೆ ಜೀವಧಾತು ಒದಗಿಸಲಾರದು. ಇವೆಲ್ಲವೂ ಜೊತೆಜೊತೆಯಾಗಿ ಸಮಪ್ರಮಾಣದಲ್ಲಿ ಬೆರೆಯಬೇಕು. ಅಂಥ ಕಡೆ ಚಲಿಸಬಲ್ಲ ಶಕ್ತಿ ಈ ಕವಿಗಿದೆ ಎಂಬುದನ್ನು ಅನೇಕ ಕವಿತೆಗಳಲ್ಲಿ ತೋರಿಸಿಕೊಡುತ್ತಾರೆ. ಇದೊಂದು ಕಾವ್ಯಕಸುಬು, ಈ ಕಸಬುದಾರಿಕೆಗೆ ಮನಸ್ಸಿನ ಸ್ವಾಸ್ಥ್ಯ, ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಂಸ್ಕೃತಿಕ ಸ್ವಾಸ್ಥ್ಯಗಳು ನೆರವಿಗೆ ಬರಬೇಕು. ಅದು ಬರಲಿ ಎಂದು ನಾನು ಮನಸಾರೆ ಹಾರೈಸುತ್ತೇನೆ. ನಾನು ಕವಿತೆಗಳನ್ನು ಓದುತ್ತಿದ್ದಂತೆಲ್ಲಾ ಆಗಾಗ ಮೂಡಿದ ಅಭಿಪ್ರಾಯಗಳನ್ನು ಇಲ್ಲಿ ಹೇಳಿದ್ದೇನೆ. ಸದ್ಯದ ಕವಿತೆಯ ಲೋಕ ಹಿಡಿದಿರುವ ಹಾದಿಗೂ ಈ ಕವಿ ಹಿಡಿದಿರುವ ಹಾದಿಗೂ ಎಷ್ಟೋ ಭಿನ್ನತೆಗಳಿವೆ: ಮಾರ್ಗಾಂತರಗಳಿವೆ. ನಾನು ಅವುಗಳನ್ನು ಇಲ್ಲಿ ಚರ್ಚಿಸಿಲ್ಲ; ಚರ್ಚಿಸಲು ಹೋಗಿಲ್ಲ. ಅದು ಬೇರೊಂದು ಕಡೆ ನಮ್ಮನ್ನು ಕರೆದೊಯ್ಯುತ್ತದೆ. ಪ್ರಾಚೀನ ಅಥರ್ವಣ ವೇದದ ಕವಿಯೊಬ್ಬ ಹೇಳಿದ ಮಾತಿನೊಂದಿಗೆ ಮುನ್ನುಡಿಯನ್ನು ಮುಗಿಸುತ್ತೇನೆ-
'ಕಾವ್ಯಂ ನ ಮಮಾರ, ನ ಜೀರ್ಯತಿ'
(ಕಾವ್ಯಕ್ಕೆ ಮರಣವಿಲ್ಲ, ಮುಪ್ಪಿಲ್ಲ)
ಮೇ 20, 2007 -ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ
ಹಂಪಿ

Sunday, May 16, 2010

ಕೃತಿ ವಿಮರ್ಶೆ

ಎತ್ತಣ ಮಾಮರ ಎತ್ತಣ ಕೋಗಿಲೆ
ಇಂಗ್ಲೆಂಡ್ ಪ್ರವಾಸ ಕಥನ
ಪ್ರವಾಸ ಸಾಹಿತ್ಯಕ್ಕೆ ಎತ್ತಣ ಮಾಮರ ಎತ್ತಣ ಕೋಗಿಲೆ ಸೇರ್ಪಡೆ.
ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿರಳವಾಗಿರುವ ಪ್ರವಾಸ ಕಥನಕ್ಕೆ ಸಿದ್ದು ಯಾಪಲಪರವಿಯವರ ಇಂಗ್ಲೆಂಡ್ ಪ್ರವಾಸ ಕಥನ "ಎತ್ತಣ ಮಾಮರ ಎತ್ತಣ ಕೋಗಿಲೆ" ಅಪರೂಪದ ಕೊಡುಗೆಯಾಗಿದೆ.
ಗದಗದ ಸಾಂಗತ್ಯ ಪ್ರಕಾಶನ ದಡಿಯಲ್ಲಿ ಪ್ರಕಟಗೊಂಡಿರುವ ಈ ಕೃತಿ ಒಬ್ಬ ಪ್ರಬುದ್ಧ ಲೇಖಕನ ಕೈಚಳಕದಿಂದ ಹೊರಬಂದ ವಿಶಿಷ್ಟ ಕೃತಿಯಾಗಿ ಹೊರ ಹೊಮ್ಮಿದೆ.
ರೈಲನ್ನೇ ನೋಡದ ಊರಿನಿಂದ ಬಂದ ಸಿದ್ದು ಯಾಪಲಪರವಿಯವರಿಗೆ ವಿಮಾನ ಯಾನ ನೀಡಿದ ಖುಷಿಯಂತೆ ಈ ಕೃತಿಯ 37 ಅಂಕಣಗಳನ್ನು ಓದುವ ಓದುಗನಿಗೆ ಎಲ್ಲಿಯೂ ಬೇಸರವಾಗದಂತೆ ಪುಸ್ತಕ ಪ್ರವಾಸ ಕಥನದ ರಸಾನುಭೂತಿಯನ್ನು ನೀಡುವಲ್ಲಿ ಅತ್ಯಂತ ಯಶಸ್ವಿಯಾಗಿದೆ.
ಇಂಗ್ಲೆಂಡಿನ ಕಣ್ಣಾಗಿರುವ ಲಂಡನ್ 'ಐ' ನಂತೆ ಈ ಕೃತಿಯು 141 ಪುಟಗಳಲ್ಲಿಯೇ ಇಂಗ್ಲೆಂಡಿನ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಡುತ್ತದೆ. ಅಲ್ಲಿಯ ಜನರ ಶಿಸ್ತು ಬದ್ದ ಜೀವನ, ಸಮಯ ಪ್ರಜ್ಞೆ, ಮದುವೆಯಿಲ್ಲದ ದಾಂಪತ್ಯ, ಅಲ್ಲಿನ ಆಕ್ಸಫರ್ಡ ವಿಶ್ವವಿದ್ಯಾಲಯದ ಸಮಗ್ರ ಚಿತ್ರಣದ ಜೊತೆಗೆ ಅಲ್ಲಿನ ಜನರ ಅಧ್ಯಯನ ಶೀಲತೆಯ ತುಡಿತ ಮಿಡಿತಗಳನ್ನು ಕುರಿತಾಗಿ ವಿಶದವಾಗಿ ಈ ಕೃತಿಯಲ್ಲಿ ವಿಶ್ಲೇಷಿಸಲಾಗಿದೆ.
ಪ್ರಜಾ ಸತ್ತೆಯೊಂದಿಗೆ ರಾಜಸತ್ತೆಯ ಪಳಿಯುಳಿಕೆಯನ್ನು ಇನ್ನೂ ಜೀವಂತವಾಗಿಟ್ಟುಕೊಂಡಿರುವ ಬಕಿಂಗ್ ಹ್ಯಾಮ್ ಅರಮನೆ, ಅಲ್ಲಿಯ ಜನ ಪ್ರತಿನಿಧಿಗಳ " ಹೌಸ್ ಆಫ್ ಕಾಮಾನ್ಸ್" ನ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾ ಐರ್ಲೆಂಡಿನ ಕಣಿವೆಗಳಲ್ಲಿ ಓದುಗನನ್ನು ಅಲೆಸಿ, ಮಹಾಕವಿ ಶೇಕ್ಸಪಿಯರನ ಮಹಾಮನೆಯನ್ನು ದರ್ಶಿಸಿದ ದಿವ್ಯಾನುಭವವನ್ನು ಲೇಖಕರು ತಮ್ಮ ಕೃತಿಯ ಮೂಲಕ ನೀಡುತ್ತಾರೆ. ಪಾಶ್ಚಾತ್ಯರ ವೈಭವೋಪೇತ ಸ್ವೇಚ್ಚಾ ಜೀವನವನ್ನು ಆದರ್ಶವೆಂದು, ಮಾದರಿಯೆಂದು ಭಾವಿಸುವ ಭಾರತೀಯನಿಗೆ ಪಾಶ್ಚಾತ್ಯರ ಸಮಯ ಪ್ರಜ್ಞೆ ಕರ್ತವ್ಯ ನಿಷ್ಠೆ, ಅಧ್ಯಯನಶೀಲತೆ ಹಪಾಹಪಿ ಇಲ್ಲದಿರುವ ಬಗ್ಗ್ಎ ಸಿದ್ದು ಅವರು ಗಂಭೀರವಾಗಿ ಆರೋಪಿಸುತ್ತಾರೆ.
ಲಿಂಗ ಭೇದವಿಲ್ಲದೆ ಅಂಗ ಸಮಭೋಗದ ಪರಿ ಮತ್ತು ಸಲಿಂಗಕಾಮಗಳ ತಲ್ಲಣವನ್ನು ಆತಂಕದಿಂದ ಎದುರುಗೊಳ್ಳುವ ಲೇಖಕರು, ಇಂಗ್ಲೆಂಡಿನ ಯುವ ಸಮುದಾಯ ಹೆಚ್ಚು ಜವಾಬ್ದಾರಿಯಿಲ್ಲದೆ ಪಡ್ಡೆ ಹುಡುಗರಂತೆ ಅಲೆಯುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.
ಎತ್ತಣ ಮಾಮರ ಎತ್ತಣ ಕೋಗಿಲೆಯ ಮೂಲಕ ಇಂಗ್ಲೆಂಡಿನ ದರ್ಶನ ಮಾಡಿಸುವ ಲೇಖಕರು ಅಲ್ಲಿನ ಜನರು ಯಾವುದಾದರು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಬಿಡುವಿನ ವೇಳೆಯಲ್ಲಿ ಒಂದು ಕ್ಷಣವನ್ನು ವ್ಯರ್ಥ ಕಳೆಯದೆ ಅಧ್ಯಯನ, ಇಮೇಲ್ ಮೂಲಕ ಜಗತ್ತಿನ ವಿವಿಧ ವಿಷಯಗಳನ್ನು ಅರಿಯಬಲ್ಲವರಾಗಿದ್ದಾರೆ. ಇಲ್ಲಿ ಹರಟೆಯಲ್ಲಿ ತೊಡಗುವ ಜನ ಬಹಳ ಕಡಿಮೆ ಎನ್ನುವ ಮೂಲಕ ಆ ಜನರು ಸಮಯವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದನ್ನು ವಿವರಿಸುತ್ತಾರೆ.
ಒಟ್ಟಾರೆ ಈ ಕೃತಿ ಇಂಗ್ಲೆಂಡ್ ಪ್ರವಾಸ ಮಾಡಬಯಸುವವರ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ 16 ವರ್ಣ ಚಿತ್ರಗಳನ್ನು ಒಳಗೊಂಡ ಈ ಪುಸ್ತಕವು ಲಂಡನ್ ಬ್ರಿಡ್ಜನ ಆಕರ್ಷಕ ಮುಖಪುಟ ಹೊಂದಿದೆ.
- ನಿಷ್ಠಿ ರುದ್ರಪ್ಪ
ಅಧ್ಯಕ್ಷರು ಜಿಲ್ಲಾ ಕಸಾಪ, ಬಳ್ಲಾರಿ.

ಆತ್ಮಹತ್ಯೆ ಕೇವಲ ಮಹಾಪಾಪವಷ್ಟೇ ಅಲ್ಲ

ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ ಎಂಬ ಭೂತ ನಮ್ಮ ತಲೆಮಾರನ್ನು ಕಾಡುತ್ತಿದೆ. ಬದುಕಿನ ಏರಿಳಿತಗಳನ್ನು ಎದುರಿಸದೇ ಯಾವುದೇ ಒಂದು ರೀತಿಯ ಭಯದಿಂದ ಸಾವಿಗೆ ಶರಣಾಗುತ್ತಾರೆ. ಆತ್ಮಹತ್ಯೆ ಮಹಾಪಾಪ ಎಂದು ಧರ್ಮವೇನೋ ಹೇಳುತ್ತದೆ. ಇಂದು ದೇವರು ಮತ್ತು ಧರ್ಮದ ಮೂಲಕ ಜನರನ್ನು ಸರಿದಾರಿಗೆ ತರುವುದು ಅಸಾಧ್ಯವಾಗಿದೆ. ಯಾಕೆಂದರೆ ದೇವರು ಧರ್ಮದ ಹೆಸರಿನಲ್ಲಿ ಪ್ರವಚನ ಮಾಡುವವರು ತಮ್ಮ ವಿವಿಧ ಲೀಲೆಗಳಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಇಂದಿನ ಯುವಕರಿಗೆ ನಮ್ಮ ಪ್ರೀತಿಯ ಮಾತುಗಳ ಮೂಲಕ ಆತ್ಮವಿಶ್ವಾಸ ತುಂಬ ಬೇಕಾಗಿದೆ. ಪರಿಸರ, ಪಾಲಕರು, ಶೈಕ್ಷಣಿಕ ಕೆಂದ್ರಗಳು ಮಕ್ಕಳಮೇಲೆ ತೀವ್ರ ಪರಿಣಾಮ ಬೀರುವ ಅಂಶಗಳು ಬಾಲ್ಯದಲ್ಲಿ ಬೆಳೆದು ಬಂದ ಪರಿಸರ, ಪಾಲಕರ ಧೋರಣೆ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ.
ಪ್ರತಿಯೊಬ್ಬ ಮನುಷ್ಯನ ಬದುಕಿನಲ್ಲಿ ಕನಿಷ್ಟ ಒಮ್ಮೆಯಾದರೂ, ಹತಾಶರಾದಾಗ ಆತ್ಮಹತ್ಯಾಭಾವ ಸುಳಿಯುತ್ತದೆಯೆಂತೆ. ಒಮ್ಮೊಮ್ಮೆ ತೀರಾ ಸಣ್ಣ ಕಾರಣಕ್ಕಾಗಿ ಕೂಡಾ. ಬಹಳ ಪ್ರೀತಿಸುವ ಪಾಲಕರು ಬೈದರೆ ಸಾಯಬೇಕು ಅನಿಸುತ್ತದೆ. ಅತೀಯಾಗಿ ಪ್ರೀತಿಸುವಾಗಲೂ ಒಮ್ಮೊಮ್ಮೆ ಬೈಯ್ಯುವ ಪ್ರಸಂಗ ಬರುತ್ತದೆ ಎಂಬ ತಿಳುವಳಿಕೆ ನೀಡಬೇಕು. ಉಡದಂತೆ, ಕರಡಿಯಂತೆ ತಬ್ಬಿ, ಮುದ್ದಾಡಿ ಪ್ರೀತಿಸುವ ನಾವು ಸಹನೆ ಕಳೆದುಕೊಂಡಾಗ ಹುಲಿಯಂತೆ ಅರಚುತ್ತೇವೆ. ಪ್ರೀತಿಯ ವಿಷಯದಲ್ಲಿ ಈ ರೀತಿಯ ವೈರುಧ್ಯ ಒಳ್ಳೆಯದಲ್ಲ. ಎಲ್ಲದರಲ್ಲೂ balance ಬೇಕು.
ಕಾಲೇಜಿನ ಯುವಕರನ್ನು ಸಂದರ್ಶಿಸಿ counselling ಮಾಡುವಾಗ ಅವರಲ್ಲಿನ ಒತ್ತಡ ಗೊತ್ತಾಗುತ್ತದೆ. ತುಂಬಾ fees ಕೊಟ್ಟು ದೊಡ್ಡ college ಗೆ ಪ್ರವೇಶ ಕೊಡಿಸುತ್ತಾರೆ. ಓಡಾಡಲು bike, ಮಜ ಮಾಡಲು mobile ಕೊಟ್ಟು ಚೆನ್ನಾಗಿ ಅಂಕಗಳಿಸಲು ಒತ್ತಡ ಹೇರುತ್ತಾರೆ. ಈರೀತಿಯ ಒತ್ತಡ ಹೇರುವ ಪಾಲಕರು ಮಕ್ಕಳ ಶೈಕ್ಷಣಿಕ ಸಾಮರ್ಥ್ಯವನ್ನು ತಿಳಿದಿರುವುದಿಲ್ಲ. ಕೇವಲ ಅವರು ಗಳಿಸಿದ ಅಂಕಗಳ ಆಧಾರದ ಮೇಲೆ ಅವರು doctor ಆಗಲಿ engineer ಆಗಲಿ ಎಂದು ಬಯಸುತ್ತಾರೆಯೇ ಹೊರತು ಮಕ್ಕಳ ಆಸಕ್ತಿಯನ್ನು ಲೆಕ್ಕಿಸುವುದೇ ಇಲ್ಲ. ಕಾಲೇಜಿನಲ್ಲಿ classes regular ಆಗಿ ನಡೆಯುತ್ತಿದ್ದರೂ, ಹೆಚ್ಚು perfect ಆಗಲಿ ಎನ್ನುವ ಕಾರಣಕ್ಕೆ tution ಗೆ ಅಲೆದಾಡಿಸುತ್ತಾರೆ. ಹೀಗೆ ಹತ್ತು ಹಲವು ಕಾರಣಗಳನ್ನು ಯುವಕರು ತೋಡಿಕೊಳ್ಳುತ್ತಾರೆ.
ಇನ್ನು ದಡ್ಡ ವಿದ್ಯಾರ್ಥಿಗಳ ಕಥೆಯೇ ಬೇರೆ science, maths ಅರ್ಥವಾಗುತ್ತಿರುವುದಿಲ್ಲ. science ಹಚ್ಚಲು ಒತ್ತಾಯಿಸಿ, ನಂತರ ವಿಫಲರಾದಾಗ ಪಾಲಕರು ಕೇಳದಿದ್ದರೂ ಆತಂಕಕ್ಕೆ ಒಳಗಾಗುತ್ತಾರೆ. ಗ್ರಹಿಕೆಯ ವಿಫಲತೆ ಜಿಗುಪ್ಸೆಯನ್ನು ತರುತ್ತದೆ. ಈ pass,fail ಅನ್ನುವುದು ಬಾಲ್ಯದಲ್ಲಿ ಮಹತ್ವದ ಸಂಗತಿ ಎನಿಸುವುದಿಲ್ಲ. ಕಾಲೇಜು ಪ್ರವೇಶ ಪಡೆದಾಗ ಗಂಭೀರ ಎನಿಸುತ್ತದೆ. ನಾನು trainer. counseller ಆಗಿ ಬೆಳೆಯಲು ನನ್ನಿ ವೈಯಕ್ತಿಕ ಜೀವನದ ಕಹಿ ಅನುಭವಗಳೇ ಕಾರಣ. ಹಾಗೆಯೇ ವರ್ತಮಾನದ ಯಶಸ್ಸು ಕೂಡಾ ನನ್ನ ಹುಮ್ಮಸ್ಸನ್ನು ಹೆಚ್ಚಿಸಿದೆ. ನನ್ನ ಬದುಕಿನಲ್ಲಿ ಮುರುಬಾರಿ PUC ಫೇಲ್ ಆದಾಗ, ಒಂದು ಮಿಥ್ಯ ಆರೋಪ ಬಂದಾಗ, ಮೂರನೆಯದು ನೌಕರಿ ಸಿಕ್ಕಮೇಲೆ ಬೇಗ grant ಆಗದಿದ್ದಾಗ. ಮೂರುಬಾರಿ ನನ್ನ ಮನಸ್ಸಿನಲ್ಲಿ ಸುಳಿದ ದುರ್ಬಲ ಆಲೋಚನೆಗಳನ್ನು ನೆನೆದರೆ ಅಯ್ಯೋ ಎನಿಸುತ್ತದೆ. ಆಗ ನಮಗೆ ಧೈರ್ಯ ಹೇಳುವ ಜನರು ನಮ್ಮೊಂದಿಗಿರದಿದ್ದರೂ ಬದುಕಿನ ಆಶಾವಾದ ನನ್ನನ್ನು ಬದುಕಿಸಿತು. ಪರೀಕ್ಷೆ ಎಂದರೆ ಹೆದರುತ್ತಿದ್ದ ನಾನು ಎಷ್ಟೇ ಓದಿ perfect ಆದರೂ exam hallನಲ್ಲಿ ನೆನಪು ಹೆದರಿಕೆಯಿಂದಾಗಿ ಕೈಕೊಡುತ್ತಿತ್ತು. PUC ಫೇಲ ಆದಾಗ ಹಾಗೇಯೇ ಆಯಿತು. ಕಷ್ಟ ಪಟ್ಟು ಓದಿದ್ದೇ ನನಗೆ ಇಷ್ಟವಾದ psychology ವಿಷಯದಲ್ಲಿ exam fear ಕಾರಣದಿಂದ ಫೇಲ್ ಆದೆ. ಆಘಾತ ತಡೆದುಕೊಳ್ಳಲಾಗಲಿಲ್ಲ. ಸತ್ತೇ ಹೋಗಬೇಕು ಎನಿಸಿತು. ಗೆಳೆಯರು ಸಮಾಧಾನ ನೀಡಿದರೂ ತಡೆದುಕೊಳ್ಳಲಾಗಲಿಲ್ಲ. ಬಂಧುಗಳು ಹಾಸ್ಯ ಮಾಡಲು ಶುರು ಮಾಡಿದರು. ಮುಂದೆ ಅದನ್ನೇ ಸವಾಲಾಗಿ ಸ್ವೀಕರಿಸಿ ನನಗೆ ಅಸಾಧ್ಯವಾದ eglish, psychology ಓದಿ success ಆದೆ. ಒಮ್ಮೆ ಸಾಯುವ ಭ್ರಮೆಯಿಂದ ನೀವು ಹೊರಬಂದರೆ ಅನೇಕ ಸಂತಸದ ಸುಖದ ಕ್ಷಣಗಳು ನಿಮಗೆ ಸಿಗುತ್ತವೆ. ಯಾವುದಾದರೂ ಒಂದು ಕ್ಷೇತ್ರದ, ವೈಫಲ್ಯ ಇಡೀ ಬದುಕಿನ ವೈಫಲ್ಯವಲ್ಲ. ಸತ್ತವರ ಬಾಯಲ್ಲಿ ಮಣ್ಣು ಎಂದು ಹಳ್ಳಿಯಲ್ಲಿ ಬೈಯುತ್ತಾರೆ. ಅದು ಅರ್ಥಪೂರ್ಣವಾಗಿದೆ. ಸತ್ತವರು ಮಣ್ಣು ಸೇರಿದರೆ, ಇದ್ದವರು ಮಜಾ ಮಾಡುತ್ತಾರೆ. ಸತ್ತು ಬದುಕಿಗೆ fullstop ಇಡುವುದಕ್ಕಿಂತ, ಇದ್ದು ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸಬೇಕು. ಇರುವ ಆಯುಷ್ಯವೇ ಅನುಭವಿಸಲು, ನೋಡಲು, ಆಲಿಸಲು, ಸಂಚರಿಸಲು ಸಾಲದು ಎನಿಸುವಾಗ ಸಾವು ಬರುವ ಮುಂಚೆಯೇ ಸತ್ತರೆ ಏನು ಲಾಭ? ಎಂಬ ಪ್ರಶ್ನೆಯನ್ನು ಸಾಯಬೇಕು ಅನಿಸಿದಾಗ ನಾವೇ ಕೇಳಿಕೊಳ್ಳಬೇಕು.
10th ಹಾಗೂ PUC ಯಲ್ಲಿ fail ಆದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಪದವಿ ವಿದ್ಯಾರ್ಥಿಗಳು filure ನ್ನು sportive ಆಗಿ ತೆಗೆದುಕೊಳ್ಳುತ್ತಾರೆ. ಈ ಹಂತದಲ್ಲಿ ಪಾಲಕರು ತುಂಬಾ ಎಚ್ಚರಿಕೆಯಿಂದ, ಜವಾಬ್ದಾರಿಯಿಂದ ಮಕ್ಕಳನ್ನು handle ಮಾಡಬೇಕು.
ಪರೀಕ್ಷೆಗೆ ಮುನ್ನವೇ ಮಕ್ಕಳ performance ಅರಿತು fail ಆಗುವ ಲಕ್ಷಣ ಕಂಡು ಬಂದರೆ ಧೈರ್ಯ ಹೇಳಬೇಕು. Fail ಆಗಬೇಡ ಎಂಬ ಒತ್ತಡ ಹೇರಬಾರದು. ಮಕ್ಕಳ ಮುಂದೆ negative ಸಂಗತಿಗಳನ್ನು ವೈಭವಿಕರಿಸಿ, ಬೇರೆಯವರೊಂದಿಗೆ compare ಮಾಡಿ ಮಾತನಾಡಬಾರದು. Result ಬಂದಾಗ ಜೊತೆಯಲ್ಲಿರಬೇಕು. ಒಂಟಿಯಾಗಿ ಬಿಡಬಾರದು. ನೋವಿನ ಗಳಿಗೆಗಳಲ್ಲಿ ಒಂಟಿತನ ಹೆಚ್ಚು ಅಪಾಯಕಾರಿ. ಒಂಟಿಯಾಗಿ ನರಳುವುದಕ್ಕಿಂತ ಮುಕ್ತವಾಗಿ ಹೊರಬೀಳಬೇಕು. ಸೋಲಿಗೆ ಕಾರಣಗಳನ್ನು ಗೆಳೆಯರೊಂದಿಗೆ, ಸಮಾನ ಮನಸ್ಕರೊಂದಿಗೆ ಚರ್ಚಿಸಬೇಕು. ಸಿನೆಮಾ ನೋಡಿ, ಸಂಗೀತ ಕೇಳಿ, ಪ್ರವಾಸ ಹೋಗಿ, ಪ್ರೀತಿತೋರುವ ಬಂಧುಗಳ ಮನೆಗೆ ಹೋಗಿ ನೋವನ್ನು ಮರೆಯಬೇಕು.
conselling ಕೇಂದ್ರಗಳಿಗೆ ಭೇಟಿ ಕೊಟ್ಟು ಮನದ ನೋವನ್ನು ಹೇಳಿಕೊಳ್ಳಬೇಕು ಗಾಧೀಜಿ, ವಿವೇಕಾನಂದರ ಜೀವನ ಚರಿತ್ರೆಗಳನ್ನು ಓದಲೇಬೇಕು.
ಅದಕ್ಕಿಂತ ಮುಖ್ಯವಾಗಿ ನಮ್ಮ ಬದುಕು ನಮಗಾಗಿ ಎನ್ನುವ ಭಾವನೆ ಜಾಗೃತವಾಗಿ ನಾವು ನಮಗಾಗಿ ಬದುಕಲೇಬೇಕು. ಸಾವು ಕಣ್ಮುಂದೆ ಬಂದರೆ ದಯವಿಟ್ಟು ನನ್ನೊಂದಿಗೆ ಮಾತನಾಡಿ ಪರಿಹಾರ ಹೇಳುತ್ತೇನೆ.