Saturday, May 8, 2010

ಕೇರಳ ಲಿಂಗಾಯತ ಸಂಗಾತಿಗಳು


ಲಿಂಗಾಯತ ಎನ್ನುವುದು ಈಗ ಒಂದು ಜಾತಿಯಲ್ಲ. ಒಂದು ಧರ್ಮ - ಸಮೂಹ - ಪ್ರಜ್ಞೆ ಎನ್ನುವುದು ಸಾಬೀತಾಗಿದೆ. ಆದರೂ ಜಾತಿ ಲಿಂಗಾಯತರು, ಜಾತಿ ಮಠಾಧೀಶರು ಒಮ್ಮೊಮ್ಮೆ ಗುತ್ತಿಗೆ ಹಿಡಿದವರಂತೆ ಮಾತನಾಡುತ್ತಾರೆ.
ಎಡಪಂಥೀಯ ಸರಕಾರವಿರುವ ಕೇರಳದಲ್ಲಿ ಬಸವ ಪ್ರಜ್ಞೆಗೆ, ತತ್ವಕ್ಕೆ ಹೆಚ್ಚು ಮನ್ನಣೆಯಿದೆ. ಕಾಯಕ ಸಿದ್ದಾಂತದ ಮೇಲೆ ಆಡಳಿತ ನಡೆಸುತ್ತಿರುವ ಕೇರಳಿಗರು ನಿಜಾರ್ಥದ ಬಸವ ಧರ್ಮ ಪರಿಪಾಲಕರು. ಪೂರ್ಣಪ್ರಮಾಣದ ಸಾಕ್ಷರತೆ, ಕೇರಳವನ್ನು ಪ್ರವಾಸಿ ಕೇದ್ರವನ್ನಾಗಿ ಅಭಿವೃದ್ಧಿ. ರಾಷ್ಟ್ರೀಯ ಸ್ಪರ್ಧಾತ್ಮಕ ಪರಿಕ್ಷೆಗಳಲ್ಲಿ ಯಶಸ್ಸು. ಮನೆಗೊಬ್ಬ ಅನಿವಾಸಿ ಭಾರತೀಯ ಉದ್ಯೋಗಿ ಹೀಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸೈದ್ಧಾಂತಿಕವಾಗಿ ಅಭಿವೃದ್ಧಿ ಹೊಂದಿದ್ದಾರೆ.
ಇಪ್ಪತ್ತು ಲಕ್ಷದಷ್ಟು ಜನ ಲಿಂಗಾಯತರಿದ್ದಾರೆ. ಆದರೆ ಅವರಿಗೆ ಸೈದ್ದಾಂತಿಕ ಗೊಂದಲಗಳಿವೆ. ಕೇವಲ ಲಿಂಗಾಯತರಲ್ಲಿ ಸಂಬಂಧ ಬೆಳೆಸುತ್ತಾರೆ. ಅಲ್ಲಿನ ಪರಿಸರದ ಪ್ರಧಾನ ಆಹಾರ ಮಾಂಸಹಾರವನ್ನು ಸ್ವೀಕರಿಸುತ್ತಾರೆ. ಕೇರಳದ ಎಲ್ಲ ದೇವರುಗಳ ಆರಾಧನೆಯಜೊತೆಗೆ ಇಷ್ಟಲಿಂಗಧಾರಿಗಳಾಗಿದ್ದಾರೆ. ಕಳೆದ ದಶಕದಿಂದ ಬಸವ ಸಮಿತಿಯ ಅರವಿಂದ ಜತ್ತಿ ಹಾಗೂ ವೀರಶೈವ ಮಹಾಸಭಾದ ಪದಾಧಿಕಾರಿಗಳು ಲಿಂಗಾಯತರನ್ನು ಒಗ್ಗೂಡಿಸಿದ್ದಾರೆ. ಹಿರಿಯರಾದ ಡಾ. ಕೆ. ಸದಾಶಿವನ್, ತ್ರಿಸ್ಪೂರದ ಗೋಪಾಲಕೃಷ್ಣ ಪಿಳೈ ,ಕುಂಜುಮನ್, ಪ್ರೊ.ಎ.ಆರ್ ಜ್ಯೋತಿ, ಕೆ.ಎನ್. ಪಿಳೈ, ಶಶಿಕುಮಾರ, ಮಹಿಳಾ ಘಟಕದ ಶೋಭಾಕುಮಾರಿ ಹೀಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಚಟುವಟಿಕೆಗಳು ಪ್ರಾರಂಭವಾಗಿವೆ. ಅವರೆಲ್ಲರಿಗೆ ಬಸವಧರ್ಮದ ಬೋಧನೆಯನ್ನು ಮಲೆಯಾಳಿನ ಬಸವ ಪಥಂ ಮೂಲಕ ಅದರ ಸಂಪಾದಕ ಪ್ರಸನ್ನಕುಮಾರ ನೀಡುತ್ತಿದ್ದಾರೆ. ಅಧ್ಯಯನದ ಶೀಲ ಪ್ರವೃತ್ತಿಯ ಪ್ರಸನ್ನಕುಮಾರ 2000 ಇಸವಿಯಲ್ಲಿ ಜರುಗಿದ ಕಾರು ಅಪಘಾತದಲ್ಲಿ ಬದುಕುಳಿದ ನಂತರ ಹೆಚ್ಚು ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಬಸವ ಸಮಿತಿಗಳನ್ನು ಪ್ರಾರಂಭಿಸಿ 'ಬಸವ ಪಥಂ' ಓದುಗರನ್ನು ಹೆಚ್ಚಿಸಿದ್ದಾರೆ. ಕೇರಳದ ವೀರಶೈವರನ್ನು, ಲಿಂಗಾಯತರನ್ನಾಗಿ ಪರಿವರ್ತಿಸುವ ಸಕಾಲ ಇದಾಗಿದೆ ಎಂದು ನಂಬಿದ್ದಾರೆ. ಮಲೆಯಾಳದಲ್ಲಿ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವ ಪ್ರಸನ್ನಕುಮಾರ, ವ್ಯಕ್ತಿತ್ವ ವಿಕಸನ ಕೋರ್ಸಗಳನ್ನು ನಡೆಸುತ್ತಾರೆ. ಅವರೊಂದಿಗಿನ ಚರ್ಚೆ ಸಂವಾದ ನನಗೆ ಹೆಚ್ಚು ಖುಷಿ ನೀಡಿತು. ದೂರದೂರಿನ ಬಂಧುಗಳನ್ನು ಭೇಟಿ ಆಗಿಬಂದ ಅನುಭವ ಈಗ ನನ್ನ ಪಾಲಿಗೆ.

ತ್ರಿಸ್ಸೂರ ಬಸವ ಸಮಿತಿ ಕಾರ್ಯಕ್ರಮ

ಕೇರಳ ಬಸವ ಸಮಿತಿಯ ಚೇತನದಂತಿರುವ ಪ್ರಸನ್ನ ಕುಮಾರ ವೃತ್ತಿಯಿಂದ ಉದ್ಯಮಿ 'Glow hot' ಎಂಬ ಗೃಹ ಬಳಕೆ ವಸ್ತುಗಳ ಉದ್ಯಮ ಇಟ್ಟುಕೊಂಡು ನೂರಾರು ಜನಯುವಕರಿಗೆ ಉದ್ಯೋಗ ನೀಡಿ, ತಾವು ತೃಪ್ತಿಯಿಂದ ಇದ್ದಾರೆ. ಕಾಯಕ-ದಾಸೋಹದಲ್ಲಿ ನಂಬಿಕೆ ಇಟ್ಟುಕೊಂಡಿರುವ ಪ್ರಸನ್ನ ಕುಮಾರ ತ್ರಿರುವಳ್ಳಿ ಹತ್ತಿರದ ತೆಂಗಿಲ್ ನವರು. ಬಿ.ಎ. ಪದವೀಧರ, 46 ವರ್ಷದ ಪ್ರಸನ್ನಕುಮಾರ ಬಸವ ಸಾಹಿತ್ಯವನ್ನು, ಲಿಂಗಾಯತ ಧರ್ಮವನ್ನು ವ್ಯಾಪಕವಾಗಿ ಕೇರಳದಲ್ಲಿ ಪರಿಚಯಿಸಿದ್ದಾರೆ. ವೀರಶೈವ ಮಹಾಸಭಾ ಪದಾಧಿಕಾರಿಗಳಿಗೆ ಲಿಂಗಾಯತ ಧರ್ಮದ ಬಗ್ಗೆ confusion ಗಳಿವೆ. ಇತ್ತೀಚಿಗೆ ಹಂತ ಹಂತವಾಗಿ ಕೇರಳದ ಲಿಂಗಾಯತರು ಬಸವಣ್ಣನ ಮೌಲ್ಯಗಳನ್ನು ಗ್ರಹಿಸುತ್ತಲಿದ್ದಾರೆ.
ಲಿಂಗಾಯತ ಧರ್ಮವನ್ನು ಅರಿಯುವ, ಆಚರಿಸುವ ವಿವಿಧ ಹಂತಗಳನ್ನು ವಿವರಿಸುವ ಜವಾಬ್ದಾರಿಯನ್ನು ನನಗೆ ಕೊಟ್ಟಿದ್ದರು. ಕಾಯಕ-ದಾಸೋಹ-ಏಕದೇವೋಪಾಸನೆ ನಮ್ಮ ಎದುರಿಗಿರುವ ಸವಾಲುಗಳು. ಹೇಗೋ ಕಷ್ಟ ಪಟ್ಟು ಕಾಯಕ-ದಾಸೋಹಗಳನ್ನು ರೂಢಿಸಿಕೊಳ್ಳಬಹುದು. ಆದರೆ ಏಕದೇವೋಪಾಸನೆ ಸುಲಭದ ಮಾತಲ್ಲ. ಭಯ-ಭಕ್ತಿ ಎಂತಲೇ ಹಲವು ದೇವರುಗಳ ಬೆನ್ನು ಹತ್ತಿರುವ ನಮ್ಮನ್ನು ಏಕದೇವೋಪಾಸನೆ ಇಷ್ಟಲಿಂಗ ಆರಾಧನೆಗೆಸುಲಭದ ಮಾತಲ್ಲ. ಅಂದು ಬಸವಾದಿ ಶರಣರು, ಅನುಭವ ಮಂಟಪದ ಮೂಲಕ ನಿರಂತರ ಜ್ಞಾನ ನೀಡಿ, ವಚನಗಳ ರಚನೆಯ ಮೂಲಕ ಜನರನ್ನು ಸಂಘಟಿಸಿದ್ದು ಸಾಮಾನ್ಯ ಸಂಗತಿಯಲ್ಲ.
ಇಂತಹ ವೈಜ್ಞಾನಿಕ ಯುಗದಲ್ಲಿಯೂ ಜನ ದೇವರು-ಧರ್ಮದ ಹೆಸರಿನಲ್ಲಿ ಹುಚ್ಚರಂತೆ ವರ್ತಿಸುವುದನ್ನು ಕಂಡರೆ ಅಚ್ಚರಿ ಎನಿಸುವುದು.
ನೂರಾರು ದೇವರ ಆರಾಧನೆಯಿಂದ - ಶಿವನ ಆರಾಧನೆಯೇ ಶ್ರೇಷ್ಠ, ಶಿವನೇ ಶ್ರೇಷ್ಠ ಎಂದು ಬಿಂಬಿಸುವ ಶಿವಪುರಾಣ ಲಿಂಗಾಯತರನ್ನು ಪ್ರಾಥಮಿಕ ಹಂತಕ್ಕೆ ತರುವ ಕೆಲಸ.
ಕಪೋಲ ಕಲ್ಪಿತ ಶಿವನಿಗಿಂತ ಶರಣರು ನೀಡಿದ ಇಷ್ಟಲಿಂಗ ಆರಾಧನೆಯನ್ನು ರೂಢಿಸಿಕೊಂಡು, ಗುಡಿ-ಗುಂಡಾರಗಳ ಹಂಗನ್ನು ತೊರೆದು ಆತ್ಮವಿಶ್ವಸವನ್ನು ಬೆಳೆಸಿಕೊಳ್ಳುವುದು ಲಿಂಗಾಯತ ಧರ್ಮದ ಪದವಿ ಪಡೆದ ಹಾಗೆ. ಈ ಪದವಿಯ ಹಂತದಲ್ಲಿರುವವರು, ಗುಡಿಗಳಿಗೂ ಹೋಗುತ್ತಾರೆ. ಲಿಂಗವನ್ನು ಧರಿಸಿ confusion ನಲ್ಲಿರುತ್ತಾರೆ. ಪೂರ್ಣ ಪ್ರಮಾಣದ ಲಿಂಗ ಆರಾಧನೆಯ ಮೂಲಕ ಏಕಾಗ್ರತೆ, ಮನೋನಿಗ್ರಹ, ಧ್ಯಾನದ ಮೂಲಗಳನ್ನು ಹಿಡಿಯುವುದು ವಿಕಸನದ ಸಂಕೇತವಾಗುತ್ತದೆ. ಇಷ್ಟಲಿಂಗದ ಆರಾಧನೆ ಪ್ರಭುತ್ವದ ಸಂಕೇತವಾಗಿ ಶುದ್ಧ ಲಿಂಗಾಯತರಾಗಲು ಸಾಧ್ಯ.
ಕೆಲವರು ಗುಡಿ - ಗುಂಡಾರಗಳನ್ನು ನಿರಾಕರಿಸಿ ಏಕದೇವೋಪಾಸಕರಾಗಿ ಲಿಂಗ ನಿಷ್ಠೆಯನ್ನು ರೂಪಿಸಿಕೊಂಡರೂ ಮನದ ಕೊಳೆಯನ್ನು ಪೂರ್ಣವಾಗಿ ತೊಳೆದುಕೊಳ್ಳದೇ ಅಹಂಕಾರಿಗಳಾಗಿರುತ್ತೇವೆ. ಮನದ ಮುಂದಣ ಆಸೆ, ಒಳಗಿನ ಮನದ ಕೊಳೆಯನ್ನು ನಿವಾರಿಸಿ ಪೂರ್ಣ ಪ್ರಮಾಣದ personality ಆಗಲು ಬಸವ ಪ್ರಜ್ಞೆ, ಬಸವಾದಿ ಶರಣರ ವಚನಗಳು ನೆರವಾಗುತ್ತವೆ ಎಂಬ ಸತ್ಯವನ್ನು ಲಿಂಗಾಯತರು ಅಥವಾ ಬಸವ ತತ್ವದಲ್ಲಿ ನಂಬಿಕೆ ಇಟ್ಟವರು ಆಳವಾಗಿ ಅರಿತು ಸ್ವೀಕರಿಸಬೇಕಿದೆ. ಈ ವಿಷಯದಲ್ಲಿ ಮಠಾಧೀಶರಿಗೆ ಅನೇಕ ಗೊಂದಲಗಳಿವೆ.
ಬಸವ ಪ್ರಜ್ಞೆಯಿಲ್ಲದೇ ಕೇವಲ ಯಾವುದೋ ಒಂದು ಸೂತ್ರ ಹಿಡಿದು ಬಡಿದಾಡುತ್ತಾರೆ. 'Total Basava consciousness will develop our personality' ಎಂಬ ವಾದ ಈಗ ಜಗದ ತುಂಬೆಲ್ಲ ಸಾಬೀತಾಗಿದೆ.
ಈ ಹಿನ್ನಲೆಯಲ್ಲಿ ಗೆಳೆಯರಾದ ರಂಜನ್ ದರ್ಗಾ ಅವರ 'ಬಸವ ಪ್ರಜ್ಞೆ' ಹೆಚ್ಚು ಪ್ರಸ್ತುತ.
ಈ ಎಲ್ಲ ಹಂತಗಳನ್ನು ಅರ್ಥಪೂರ್ಣವಾಗಿ ಗ್ರಹಿಕೆ ಬಸವ ಪ್ರಜ್ಞೆಯನ್ನು ರೂಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಬೇಕು. ಅಂದಾಗ ನಾವು ನಿಜವಾದ ಬಸವ ತತ್ವ ಅನುಯಾಯಿಗಳು. ಇಂದು ಈ ಕೆಲಸ ಅಂತರಾಷ್ಟ್ರೀಯ ಮಟ್ಟದಲ್ಲಿ, ಹೊರರಾಜ್ಯಗಳಲ್ಲಿ ನಡೆದಿದೆ ಎನ್ನುವುದಕ್ಕೆ ಅದ್ಧೂರಿ ಬಸವ ಜಯಂತಿಯ ಆಚರಣೆಗಳೇ ಸಾಕ್ಷಿ! Now the globe realiged Basava consciousness.
ಕೇರಳದ ಗೆಳೆಯ ಪ್ರಸನ್ನ ಕುಮಾರ ಅಂತಹ ಸಾಹಸಕ್ಕೆ ಕೈ ಹಾಕಿ ನನ್ನಿಂದ ಬಸವ ಪ್ರಜ್ಞೆಯ ಕುರಿತು ಒಂದುತಾಸು ವಚನಗಳ ಉದಾಹರಣೆಗಳೊಂದಿಗೆ ಮಾತನಾಡಿಸಿ ತಾವೇ ಮಲೆಯಾಳಿಗೆ ತರ್ಜುಮೆ ಮಾಡಿದರು. ಸಭೆಯಲ್ಲಿ ಪಾಲ್ಗೊಂಡ ನೂರಾರು ಬಸವಾಭಿಮಾನಿಗಳು, ಬಸವ ತತ್ವ ಆಚರಣೆಯಲ್ಲಿ ತಾವು ಯಾವ ಹಂತದಲ್ಲಿದ್ದೇವೆ ಎಂದು ಒರೆಗಲ್ಲಿಗೆ ಹಚ್ಚಲು ಈ ಸಂವಾದ ನೆರವಾಯಿತು. ಬಸವ ಪ್ರಜ್ಞೆಯ ಪದವಿ ಸ್ನಾತಕೋತ್ತರ ಹಾಗೂ ಪಿ.ಎಚ್.ಡಿ. ಹಂತಗಳನ್ನು ನಾವು ತಲುಪುವ ಬಗೆಯನ್ನು ಅರ್ಥಪೂರ್ಣವಾಗಿ ಚರ್ಚಿಸಿದರು. ಈ ಹಂತವನ್ನು ತಲುಪುತ್ತೇವೆಯೋ, ಇಲ್ಲವೋ ಆ ಮಾತು ಬೇರೆ ಆದರೆ Self evaluation ಮೂಲಕ ನಾವು ಪಡೆದಿರುವ ಅಂಕಗಳನ್ನು ತಿಳಿಯುವುದು ಇಂದಿನ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ನನ್ನ ಕೇರಳ ಭೇಟಿ ಸಾರ್ಥಕವಾಯಿತು. ಕಾರಣರಾದ ಅರವಿಂದ ಜತ್ತಿ ಹಾಗೂ ಪ್ರಸನ್ನಕುಮಾರ ಅವರಿಗೆ ಋಣಿಯಾಗಿದ್ದೇನೆ.

Friday, May 7, 2010

ಸ್ವಚ್ಛ, ಸುಂದರ kovalam Beach


ಕೇರಳದ ಪ್ರಕೃತಿ ಸೌಂದರ್ಯದ ಬಗೆ. ಪ್ರತಿ ಸಲವೂ ಹೊಸತನ ಕಾಣುತ್ತದೆ. ರಾಜಧಾನಿ ತಿರುವನಂತಪುರದಿಂದ 12 ಕಿಲೋ ಮೀಟರ್ ದೂರದಲ್ಲಿರುವ ಕೋವಲಮ್ ಬೀಚ್ ಜಗತ್ತಿನ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ.
ಪೂರ್ವ ಹಾಗೂ ಉತ್ತರಾಭಿಮುಖವಾಗಿ ಸದಾ ಅಬ್ಬರಿಸುವ ಕೋವಲಮ್ ಕೇರಳದ ದೊಡ್ಡ ಪ್ರವಾಸೋದ್ಯಮವಾಗಿ ಬೆಳೆದಿದೆ. ಏಪ್ರಿಲ್ 30 ರಂದು ಕೇರಳ ತಲುಪಿದಾಗ ಬಸವ ಸಮಿತಿ ಪದಾಧಿಕಾರಿ, ಉದ್ಯಮಿ ಶಶಿಕುಮಾರ್ ವಸತಿ ವ್ಯವಸ್ಥೆಯನ್ನು ಇಲ್ಲಿನ ಸ್ವಾಮಿ ಗೆಸ್ಟಹೌಸ್ ನಲ್ಲಿ ಕಲ್ಪಿಸಿದರು. ಗದುಗಿನಿಂದ ಬೆಂಗಳೂರಿನ ಎಂಟು ತಾಸು ಹಾಗೂ ಬೆಂಗಳೂರಿನಿಂದ - ತಿರುವನಂತಪುರದ ಹದಿನಾರು ತಾಸುಗಳ ಬಸ್ ಪ್ರಯಾಣದ ದಣಿವನ್ನು ತಣಿಸಲು ಕೋವಲಂ ನೆರವಾಯಿತು. ಇಡೀ ಒಂದು ದಿನದ 24 ತಾಸುಗಳ ನನ್ನ ಧ್ಯಾನಸ್ಥ ಸ್ಥಿತಿಯ ಕುಳಿತಿರುವಿಕೆ ಶಿಕ್ಷೆಯಾಗದಿರುವುದೇ ಅಚ್ಚರಿ.
ಮಧ್ಯಾನ್ಹದ ಬೆವರಿಳಿಸುವ ಬೆಚ್ಚಗಿನ ವಾತಾವರಣದಲ್ಲಿ ವಿದೇಶಿ ಪ್ರವಾಸಿಗರು ಮುಕ್ತವಾಗಿ ಬೀಚ್ ನುದ್ದಕ್ಕೂ ತಿರುಗಾಡುತ್ತಿದ್ದರು.
ಈ ಬೀಚ್ ನುದ್ದಕ್ಕೂ ಸರಿಸುಮಾರು ನೂರಕ್ಕೂ ಹೆಚ್ಚು ಹೋಟೆಲ್ ಗಳಿವೆ. ವಿದೇಶಿ ವೆಚ್ಚಕ್ಕೆ ಸರಿಸಮಾನವೆನಿಸುವ 'ದುಬಾರಿ' ತನ ಎಲ್ಲೆಲ್ಲೂ ಕಾಣುತ್ತದೆ. ಇದನ್ನು ನಾವು richness ಅನ್ನಬಹುದು.
Like minded ಗೆಳೆಯರೊಂದಿಗೆ ಅಥವಾ family ಯೊಂದಿಗೆ ಇಲ್ಲಿಗೆ ಬರುವುದು ಸೂಕ್ತ, ಒಂಟಿಯಾಗಿದ್ದರೆ ತುಂಬಾ ಬೇಸರ. ಅಂತಹ ಒಂಟಿತನದ ಬೇಸರದ ಮಧ್ಯ ಬೀಚ್ ತುಂಬಾ ತಿರುಗಾಡಿದೆ.
ನಿಧಾನವಾಗಿ ಸುತ್ತಿಕೊಳ್ಳುತ್ತಾ, ಅಷ್ಟೇ ವೇಗವಾಗಿ ಅಪ್ಪಳಿಸುವ ಸಮುದ್ರದ ತೆರೆಗಳು ಬದುಕಿನ ಹೊರಾಟವನ್ನು ನೆನಪಿಸುತ್ತವೆ.
Sea level ಎಂದೇ ಗುರುತಿಸಲ್ಪಡುವ ಸಮುದ್ರ ಮಟ್ಟ ನಾವಿರುವ ನಿಜ ನೆಲದ ಸ್ಥಿತಿಯನ್ನು ಹೇಳುತ್ತದೆ. ನಾವು ಎಷ್ಟು ಎತ್ತರದಲ್ಲಿರುತ್ತೇವೆ ಎಂಬುದನ್ನು Sea level ಮಾಪನದ ಮೂಲಕವೇ ಗುರುತಿಸುವುದರಿಂದ ಅಲ್ಲಿ ನಿಂತಾಗ ಅನಿಸಿತು. I ವಾಸ್ at the bottom.
ನಮ್ಮ ಬದುಕಿನ ಸ್ಥಿತಿಯೂ ಹಾಗೆಯೇ ಒಮ್ಮೆ ಎತ್ತರಕೆ ಜಿಗಿದರೆ, ಮತ್ತೊಮ್ಮೆ ಕೆಳಗೆ ಅಂದರೆ ತೀರಾ ಕೆಳಗೆ ಇಳಿಯುತ್ತದೆ. ಈ ಏರಿಳಿತದಲ್ಲಿ ಒಂದು ರೀತಿಯ ಮಜವಾದ ಅನುಭವ.
ಸಮುದ್ರದ ಅಲೆಗಳು ಯಾರಿಗಾಗಿ ಕಾಯುವುದಿಲ್ಲ. ಯಾರಾದರೂ ತಡೆದರೆ ನಿಲ್ಲುವುದೂ ಇಲ್ಲ. ಅದಕ್ಕೇ ಹೇಳುವುದು Time and Tide wait for none! ಎಂದು.
ಸ್ವಚ್ಛತೆ, ಶುದ್ಧತತೆ ಹಾಗೂ ಶುಭ್ರತೆಯನ್ನು ಕಾಪಾಡಿಕೊಂಡಿರುವ ಕೋವಲಮ್ ಬೀಚ್ ನ ವ್ಯಾಪಾರಿಗಳು ಕೋಟಿಗಟ್ಟಲೆ ಗಳಿಸುತ್ತಾರೆ ಆದರೆ ವಿದೇಶಿಗರನ್ನು ಅನಗತ್ಯವಾಗಿ ವಂಚಿಸುವುದಿಲ್ಲವಂತೆ ಅದೇ ಕಾರಣಕ್ಕೆ ಬೀಚ್ ನ ಸೌಂದರ್ಯ ಅನುಭವಿಸಲು ವಿದೇಶಿಗರು ತಿಂಗಳುಗಟ್ಟಲೇ ಇಲ್ಲಿಯೇ ಠಳಾಮಿಸುತ್ತಾರೆ.
ಸದಾ ತಂಪಾದ cold countries ಗಳಲ್ಲಿರುವ ವಿದೇಶಿಗರಿಗೆ ಸಮುದ್ರ ತೀರ ಇಷ್ಟವಾಗಲು ವೈಜ್ಞಾನಿಕ ಕಾರಣಗಳಿವೆ. ದೇಹದಲ್ಲಿರುವ ಕೊಳೆಯನ್ನು ಕಿತ್ತೊಗೆಯಲು Sweat - ಬೆವರು ನೆರವಾಗುತ್ತದೆ.
ಈ ರೀತಿ ಬೆವರಿಳಿಸಿಕೊಳ್ಳಲು ನಾವು ಗಂಟೆಗಟ್ಟಲೆ walk ಮಾಡುತ್ತೇವೆ. ದೇಹ ದಂಡಿಸುತ್ತೇವೆ. ಆದರೆ ಇಲ್ಲಿ ಯಾವುದೇ ರೀತಿಯ physical exercise ಇಲ್ಲದೇ ಬೆವರಿಳಿಸಿಕೊಳ್ಳುವುದೇ ಉತ್ತಮ ಎಂದು, ಉರಿಯುವ ಸೂರ್ಯನ ಕಿರಣಗಳು ತಮ್ಮ ಮೈಮೇಲೆ ಮುಕ್ತವಾಗಿ ಹರಿದಾಡಲಿ ಎಂದು ವಿದೇಶಿಗರು ಸಮುದ್ರ ಸ್ನಾನ ಬಯಸುತ್ತಾರೆ. ಸದಾ ಉರಿಬಿಸಿಲಿನಲ್ಲಿ ಒದ್ದಾಡುವ ನಮಗೆ ಸಮುದ್ರ ಸ್ನಾನ ಸಖ್ಯವೆನಿಸದಿದ್ದರೂ ವಿದೇಶಿಗರ ಮೋಜು ನೋಡಲು ಖುಷಿ ಎನಿಸುತ್ತದೆ. ಮಧ್ಯಾನ್ಹ ಒಂಚೂರು ತಿಂದಿದ್ದಕ್ಕೆ ಕೇವಲ ಕೇವಲ ರೂ. 600/- ಎಂದಾಗ ಒಂಚೂರು ಕಸಿವಿಸಿಯಾಯಿತು. ಇದೇ ಊರ ಹೊರಗಡೆ ಕೇವಲ ನೂರು ರೂಪಾಯಿಗೆ ಸಿಗುತ್ತದೆ ಅನಿಸಿತ್ತು. ನನ್ನ ಹಳವಂಡವನ್ನು ಕಂಡ waiter ಒಳಗೊಳಗೆ ನಕ್ಕಿರಬೇಕು. ಯಾಕೆಂದರೆ ಇದು ಕೋವಲಮ್ ಅಲ್ಲವೇ? ವೀರಶೈವ ಮಹಾಸಭಾದ ಪದಾಧಿಕಾರಿ ಕೆ.ಎನ್. ಪಿಳೈ ಒಡೆತನದಲ್ಲಿ ಎರಡು Home stay ಗಳಿವೆ. ಅವರ swamy Guest Home ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿದ್ದರು. ನಿರ್ಜನ ರಾರ್ತಿಯ ಚಂದ್ರನ ಬೆಳಕಲ್ಲಿ ಅಬ್ಬರಿಸುವ ಅಲೆಗಳು ಬದುಕನ್ನು ಸಮರ್ಥವಾಗಿ ಎದುರಿಸುವ ಪಾಠ ಕಲಿಸುತ್ತವೆ. ಮರುದಿನ ನಸುಕಿನಲ್ಲಿ ಬೆಸ್ತರು ಮೀನು ಹಿಡಿಯಲು ಸಮುದ್ರಕ್ಕೆ ಇಳಿಯುವ ಸಾಹಸ ಮಾಡುತ್ತಿದ್ದರೆ, ಸುಂದರ ಯುವತಿಯರು ತಮ್ಮ ದೇಹ ಬೆಚ್ಚಗಿನ thrill ಅನುಭವಿಸಲು ನೀರಿಗಿಳಿಯುತ್ತಿದ್ದರು. ನೀರಿಗಿಳಿಯಲು ಇಬ್ಬರೂ ಅರೆಬೆತ್ತಲಾಗಿದ್ದಾರೆ ಆದರೆ ಉದ್ದೇಶ ಬೇರೆ, ಬೇರೆ. ಅರೆಬೆತ್ತಲೆಯ ಬೆಸ್ತರನ್ನು, ಯುವತಿಯರನ್ನು ಹೋಲಿಸುತ್ತ ನೀರಿಗಿಳಿದೆ.

ಕೇರಳದ ಮನೋರಮ ವರದಿ...


Thursday, May 6, 2010

ನೆಲದ ಮರೆಯ ನಿಧಾನ
ಪ್ರೊ. ಸಿದ್ದು ಯಾಪಲಪರವಿ ಸೊಗಸಾದ ಮಾತುಗಾರ. ಸಂಪರ್ಕಕ್ಕೆ ಬಂದ ಯಾವ ವ್ಯಕ್ತಿಯೂ ಸುಲಭವಾಗಿ ಮರೆಯಲಾರದ ವ್ಯಕ್ತಿತ್ವ. ನಾಡಿನ ಅನೇಕ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂಪರ್ಕ ಮತ್ತು ಒಡನಾಟ ಇವರಿಗೆ ಬಲು ಸರಳ. ಮಾತನಾಡುತ್ತ, ವಯಸ್ಸಿಗೆ ತಕ್ಕ, ಅನುಭವಕ್ಕೆ ಮೀರಿದ ಮಾತನಾಡುತ್ತಿರುವರೇನೋ ಅನಿಸುವಾಗಲೆ ತಮ್ಮ ಛಾಪನ್ನು ಎದುರಿಗಿರುವವರ ಮೇಲೆ ಒತ್ತಿಬಿಟ್ಟು ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಬಹಳ ಜನರ ಅನಿಸಿಕೆ. ನೇರ ಮತ್ತು ವಿಡಂಬನೆಯ ಮಾತುಗಳಿಂದ ಸ್ನೇಹಿತರನ್ನು ಪಡೆದಂತೆ ವಿರೋಧಿಸುವವರನ್ನು ಪಡೆದದ್ದು ಹೆಚ್ಚು.
ಆಳಕ್ಕಿಳಿಯದೆ ಸರಳವಾಗಿ ಅರ್ಥವಾಗದ ನೆಲದ ಮರೆಯ ನಿಧಾನದಂತಹ ವ್ಯಕ್ತಿತ್ವ - ಲೇಖಕ, ವಾಗ್ಮಿ, ಉತ್ತಮ ನಿರೂಪಕ, ಸಾಕ್ಷ್ಯಚಿತ್ರ ನಿರ್ಧೇಶಕ, ಸಂದರ್ಶಕ, ಆಕಾಶವಾಣಿ ಕಲಾವಿದ, ಕವಿ, ವಿಮರ್ಶಕ, ಅದ್ಭುತ ಸಾಂಸ್ಕೃತಿಕ ಸಂಘಟಕ, ರಂಗನಟ, ಹೀಗೆ ಹಲವಾರು ಪ್ರತಿಭೆಗಳನ್ನು ಮೇಳೈಸಿಕೊಂಡಿದ್ದು, ಎಲ್ಲದರಲ್ಲಿಯೂ ಹಿಡಿತ ಸಾಧಿಸಿದ್ದರೂ ಯಾವುದಾದರೂ ಕ್ಷೇತ್ರಕ್ಕೆ ಆದ್ಯತೆ ನೀಡಿ ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇ ವಿರಳ. ಅನೇಕ ಕವಿಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ ಇವರ ಕವಿತೆಗಳು ಅಭಿವ್ಯಕ್ತವಾಗಿದ್ದರೂ ಕವನಸಂಕಲನ ಇಷ್ಟು ಕವನಗಳನ್ನು ಹೊಂದಿರುವ ಈ ಕವನ ಸಂಕಲನದಂತೆ ಇನ್ನೂ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೊ. ಸಿದ್ದು ಯಾಪಲಪರವಿ ನೀಡಲಿ.

- ಡಾ.ಜಿ.ಬಿ.ಪಾಟೀಲ
ಕೇರಳ ರಾಜಧಾನಿ ತಿರುವನಂತಪುರದಲ್ಲಿ ಸರಳ- ಸುಂದರ - ಅರ್ಥಪೂರ್ಣ - ವಿಶ್ವ ಕಾಯಕ ದಿನ
ಕೇರಳದ ತಿರುವನಂತಪುರದ 'ವಿಶ್ವ ಕಾಯಕ ದಿನ' ಮೇ ಒಂದರಂದು ಆಯೋಜಿಸಿದ್ದು ಅರ್ಥಪೂರ್ಣ. ಕೇರಳದ ಬಸವ ತತ್ವ ಅನುಯಾಯಿಗಳು ತುಂಬ ನಿಷ್ಠರಾಗಿದ್ದಾರೆ ಎಂಬುದು ಈ ಸರಳ-ಸುಂದರ ಕಾರ್ಯಕ್ರಮದಿಂದ ಸಾಬೀತಾಯಿತು.
ಕೇರಳ ಸರಕಾರದ LDF ನಾಯಕ ಕೃಷಿ ಮಂತ್ರಿ ಶ್ರೀ ಮುಲ್ಲಕರ ರತ್ನಾಕರನ್ ಕಾರ್ಯಕ್ರಮ ಉದ್ಘಾಟಿಸಿದರು. ಬಸವ - ಗಾಂಧೀಜಿ- ವಿವೇಕಾನಂದ ಹಾಗೂ ನಾರಾಯಣ ಗುರು ಅವರ ಸಿದ್ಧಾಂತಗಳು ನಮಗೆಲ್ಲ ದಾರಿದೀಪವಾಗಬೇಕು. ಕೇರಳದ ವೀರಶೈವರು ಬಸವಣ್ಣನನ್ನು ನಮಗೆ ಪರಿಚಯಿಸಿದ್ದು ಹೆಮ್ಮೆ ಎನಿಸಿದೆ.
ಬಸವಣ್ಣ ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೇ ಇಡೀ ಜಗತ್ತಿಗೆ ಗುರುವಾಗಿದ್ದಾರೆ. ಅವರ ಕಾಯಕ ಸಿದ್ಧಾಂತ ಶ್ರಮ ಸಂಸ್ಕೃತಿಯ ಪ್ರತೀಕವಾಗಿದೆ. ಧ್ಯಾನ, ಪೂಜೆಗಿಂತ ಮಿಗಿಲಾದದ್ದು ನಿಜವಾದ ಧರ್ಮವೆಂದರೆ ಕಾಯಕ.
ಕಾಯಕದ ಮೂಲಕವೇ ಒಂದು ಧರ್ಮವನ್ನು ಕಟ್ಟಿ ಬೆಳೆಸಿದ ಬಸವಣ್ಣನವರು ನಮಗೆಲ್ಲ ಆದರ್ಶ ನಾಯಕ ಎಂದರು.
ಬಸವಣ್ಣನವರ ತತ್ವಾದರ್ಶಗಳನ್ನು ಕೇರಳದ ಪಠ್ಯಕ್ರಮದಲ್ಲಿ ಅಳವಡಿಸುವುದು ಹೆಚ್ಚು ಸೂಕ್ತ ಎಂದರು.
ಉತ್ತಮ ಕಾರ್ಯಕ್ರಮ ಆಯೋಜಿಸಿದ ಬಸವ ಸಮಿತಿಯನ್ನು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕರ್ನಾಟಕ ದ ಸಾಹಿತಿ - ಚಿಂತಕ ಪ್ರೊ. ಸಿದ್ದು ಯಾಪಲಪರವಿ ಕಾಯಕ - ದಾಸೋಹ ಹಾಗೂ ಅನುಭವ ಮಂಟಪದ ಪರಿಕಲ್ಪನೆಯನ್ನು ವಚನಗಳ ಆಧಾರದ ಮೂಲಕ ವಿವರಿಸಿದರು. ಅಕ್ಷರ-ಅರಿವು, ಕಾಯಕ - ದಾಸೋಹ ಪರಿಕಲ್ಪನೆಯಿಂದಾಗಿ ಧರ್ಮ ಅರ್ಥಪೂರ್ಣವಾಗಿ ಬೆಳೆಯಲು ಸಾಧ್ಯವಾಯಿತು. ವಚನಗಳಲ್ಲಿನ ವಿಚಾರಧಾರೆಗಳು, ಕಾವ್ಯಸೂಕ್ಷ್ಮತೆ, ಸಂಕೇತ, ಪ್ರತಿಮೆಗಳು ಹಾಗೂ ಸುಂದರ ಭಾಷೆ ವಚನ ಸಾಹಿತ್ಯವನ್ನು ಶ್ರೇಷ್ಠ ಕಾವ್ಯದ ಮಟ್ಟಕ್ಕೆ ತಲುಪಿಸಿವೆ ಎಂದರು. ಇವರು ವಿವರಿಸಿದ ಎಲ್ಲ ವಚನಗಳ ಸಾಲುಗಳನ್ನು ಮಲೆಯಾಳಿಗೆ ಪ್ರಸನ್ನ ಕುಮಾರ ಅನುವಾದಿಸಿದರು. ನಂತರ ಸಂವಾದ ಕಾರ್ಯಕ್ರಮದಲ್ಲಿ ಅನೇಕರಿಗೆ ಪ್ರೊ. ಯಾಪಲಪರವಿ ಉತ್ತರಿಸಿದರು. ಬಸವ ಪಥ ಚರ್ಚೆಗೆ ಭಾಷೆ ಅಡ್ಡಗೋಡೆಯಾಗದಿದ್ದದು ವಿಶೇಷ. ಕೇರಳ ಸರಕಾರದ ಗ್ರಾಮೀಣ ಇಲಾಖೆಯ ಸಲಹೆಗಾರ ಪ್ರೊ. ಎ.ಆರ್. ಜ್ಯೋತಿ ಅತಿಥಿಗಳನ್ನು ಪರಿಚಯಿಸಿದರು. ಕೇರಳ ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಂತ್ರಿಗಳನ್ನು, ಚಿಂತಕ ಯಾಪಲಪರವಿ ಅವರನ್ನು ಅಭಿನಂದಿಸಿದರು. ರಾಜ್ಯ ವೀರಶೈವ ಮಹಾಸಭಾದ ಅಧ್ಯಕ್ಷ ಕುಂಜುಮನ್ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಕೇರಳದಲ್ಲಿ ಬಸವ ತತ್ವಮನೆಮನೆಯಲ್ಲಿ ಬೆಳಗುತ್ತದೆ.
ಸರಕಾರ ಕೂಡಾ ಕಾಯಕ ದಿನದಲ್ಲಿ ಪಾಲ್ಗೊಂಡಿರುವುದು ಲಿಂಗಾಯತ ಧರ್ಮಕ್ಕಿರುವ ಸಾಮರ್ಥ್ಯವನ್ನು ತೋರುತ್ತದೆ ಎಂದರು. ಬಸವ ಸಮಿತಿಯ ಅರವಿಂದ ಜತ್ತಿ ಅನೇಕ ಉಪಯುಕ್ತ ಗ್ರಂಥಗಳನ್ನು ನಮ್ಮ ಭಾಷೆಗೆ ಪರಿಚಯಿಸಿ, ಶ್ರೇಷ್ಠ ತಜ್ಞರನ್ನು ನಾಡಿಗೆ ಕಳಿಸುತ್ತಿರುವುದು ಅಭಿನಂದನೀಯ ಎಂದರು. ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಶೋಭನಾ ಕುಮಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ತಿರುವಂನಂತಪುರದ ಅಧ್ಯಕ್ಷ ಕೆ.ಎನ್.ಪಿಳೈ, ಕೇರಳಾಧ್ಯಕ್ಷ ಟಿ.ವಿ. ಶಶಿಕುಮಾರ ವಿವಿಧ ಕಾರ್ಯಚಟುವಟಿಕೆಗಳನ್ನು ವಿವರಿಸಿದರು.
ಲಿಂಗಾಯತ ಧರ್ಮದ ವಿವಿಧ ಆಯಾಮಗಳ ಕುರಿತು ನಂತರ ಚರ್ಚಿಸಲಾಯಿತು.
ವರದಿ-ಪ್ರಸನ್ನಕುಮಾರ

ಅಂತರದ ನಂತರ.............




ಏನೋ ಕಳೆದುಕೊಂಡ ಹಳವಂಡ. ವಾರದಿಂದ ಸಂಪೂರ್ಣ ಅಲೆದಾಟ. ಕೇರಳದ ಬಸವ ಸಮಿತಿ ಹಾಗೂ ವೀರಶೈವ ಮಹಾಸಭಾದ ಆಹ್ವಾನದ ಮೇರೆಗೆ ಕೇರಳದಲ್ಲಿ ರಾಜಧಾನಿ ತಿರುವನಂತಪುರದಲ್ಲಿ ಆಯೋಜಿಸಿದ್ದ may day ಕಾರ್ಮಿಕರ ದಿನಾಚರಣೆಯನ್ನು ಬಸವತತ್ವ ಅನುಯಾಯಿಗಳು 'ವಿಶ್ವ ಕಾಯಕ ದಿನ' ಎಂದು ಆಚರಿಸಿದ್ದು ಅರ್ಥಪೂರ್ಣ, ಅನುಕರಣೀಯ!
ಕೇರಳಿಗರು ಪ್ರತಿಭಾವಂತರು ಸಾಹಿತ್ಯ, ರಾಜಕೀಯ, ಉದ್ಯಮವನ್ನು ಚನ್ನಾಗಿ ಬಲ್ಲವರು ಕಳೆದ ಒಂದು ದಶಕದಿಂದ ಬಸವಣ್ಣನ ತತ್ವಗಳನ್ನು ಅರ್ಥಮಾಡಿಕೊಳ್ಳುತ್ತಲಿದ್ದಾರೆ. ಬಸವಾದಿ ಶರಣರ ವಚನಗಳನ್ನು ಬಸವ ಸಮಿತಿ ಮಲೆಯಾಳಿ ಭಾಷೆಗೆ ಅನುವಾದಿಸಿ ಕೊಟ್ಟಿದೆ. ನಾಲ್ಕಾರು ಶತಮಾನಗಳಿಂದ ವೀರಶ್ವೆವರು ಎಂದು ಗುರುತಿಸಿಕೊಂಡಿದ್ದ ಅಲ್ಲಿನ ಲಿಂಗಾಯತರಿಗೆ ಮಾನ್ಯ ಡಾ. ಜತ್ತಿಯವರು ಬಸವಣ್ಣನನ್ನು ಪರಿಚಯಿಸಿದರು. ವೀರಶೈವ ಮಹಾಸಭಾದ ಹೆಸರಿನ ಮೇಲೆ ಒಂದುಗೂಡಿದ್ದ ಲಿಂಗಾಯತ ಸಮಾಜ ತಾತ್ವಿಕವಾಗಿ ಬಸವಣ್ಣನನ್ನು ಅಷ್ಟಾಗಿ ತಿಳಿದುಕೊಂಡಿರಲಿಲ್ಲ. ಈಗ ಅರವಿಂದ ಜತ್ತಿಯವರ ಮಾರ್ಗದರ್ಶನದಲ್ಲಿ ಉತ್ಸಾಹಿ ಯುವಕ, ಬಸವ ತತ್ವ ರಾಯಭಾರಿಯಂತೆ ಕೇರಳದ ತುಂಬಾ ಓಡಾಡುತ್ತಲಿರುವ ಶ್ರೀ ಪ್ರಸನ್ನ ಕುಮಾರ ಪಿಳೈ ಅವರ ಸಂಘಟನೆಯಲ್ಲಿ ಹೊಸ ಸಂಚಲನ ಉಂಟಾಗಿದೆ.
ಇದು ನನ್ನ ಎರಡನೇ ಭೇಟಿ. ಈ ಹಿಂದೆ ಹೋದಾಗ ಪ್ರಸನ್ನ ಕುಮಾರ, ಹಾಗೂ ಪ್ರೊ.ಎ.ಆರ್. ಜ್ಯೋತಿ ಸಣ್ಣ ಕಾರ್ಯಕ್ರಮ ಆಯೋಜಿಸಿದ್ದರು. ಈ ಬಾರಿ ಕೇರಳದ ಸಚಿವರ ಸಮ್ಮುಖದಲ್ಲಿ ಬಸವಣ್ಣನ ಕಾಯಕ ಸಿದ್ಧಾಂತವನ್ನು ಸರಕಾರಿ ಕಾರ್ಯಕ್ರಮದಂತೆ ಆಯೋಜಿಸಿದ್ದು ಬಸವಣ್ಣ ನೆಲದ ಮಕ್ಕಳಾದ ನಾವು ಹೆಮ್ಮೆ ಪಡಬೇಕು. ಅರವಿಂದ ಜತ್ತಿ ಹಾಗೂ ಪ್ರಸನ್ನ ಕುಮಾರ ಅವರ ಅಪೇಕ್ಷೆಯಂತೆ ಮುಖ್ಯ ಮಾತುಗಾರನಾಗಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ತುಂಬಾ ತಯಾರಿ ಮಾಡಿಕೊಂಡಿದ್ದೆ ಕಾಯಕ, ದಾಸೋಹ ಹಾಗೂ ತ್ರಿಸ್ಪೂರ ಸಭೆಗಳಲ್ಲಿ ಮಾತನಾಡಿದೆ. ಇಂಗ್ಲಿಷ್ ಭಾಷಣವನ್ನು ಪ್ರಸನ್ನ ಕುಮಾರ ವೇದಿಕೆ ಮೇಲೆ ಅನುವಾದಿಸಿದರು ಹೀಗೆ ಹಲವು ಸಂಗತಿಗಳು ಈಗ ನಿಮ್ಮೊಂದಿಗೆ.............