Monday, October 17, 2016

ಹಳವಂಡ ಸುಮ್ಮನೇ ಆಗುವುದಿಲ್ಲ

ಹಳವಂಡ ಸುಮ್ಮನೇ ಆಗುವುದಿಲ್ಲ
ನಾವೇ ಕೆರೆದು ಗಾಯ ಮಾಡಿಕೊಳ್ಳುತ್ತೇವೆ
ಕೆರೆದೆರೆ ಗಾಯ ಎಂಬ ಸತ್ಯದ ಅರಿವು
ಸವಿಸುಖವಲ್ಲ ಆದರೂ ಕರೆಯದೇ ಕೆರೆದು
ಗಾಯದ ಹಿತ ಅನುಭವಿಸಲು
ಚಡಪಡಿಸುತ್ತೇವೆ.

ಮನಸೆಂಬ ಮಾಯಾಜಾಲದ ಸುಳಿಯಲಿ
ಮೋಹದಾಟದಲಿ ಮೈಮರೆತು ಪುಳಕ
ಗೊಳ್ಳುವ ಚಪಲ
ನನ್ನದಲ್ಲದ , ನನಗೆ ದಕ್ಕದ ಮಾಯಾವಿಯ
ಕಿಲ ಕಿಲ ನಗುವಿನ ತುಟಿಗೆ
ಗುಳಿ ಕೆನ್ನೆಯ ತಿರುವಿನಲಿಯೇ ಗರ ಗರ
ಗಿರಕಿಯ ತಿರುಗುಣಿಯಲಿ ತಿರುಗಿ ಎತ್ತಿ
ಒಗೆದಾಗ ವಾಸ್ತವದರಿವು.

ದೇಹ-ಮನಸು ಹಿಂಡಿ ಹಿಪ್ಪೆಯಾದ
ಸಿಪ್ಪೆಗಳಲಿ ಕಳಕೊಂಡ ಕಾರಣ ಹುಡುಕುವ
ಧ್ಯಾನಸ್ಥ ಸ್ಥಿತಿಯಲಿ ಮರುಕಳಿಸುವ
ಅನರ್ಥ ವ್ಯಥೆ.

ಈ ಭಾವನಾತ್ಮಕ ಶೋಷಣೆಗೆ ಸ್ವಯಂ
ಬಲಿಪಶು
ಮನದ ಈ ಕಳ್ಳ-ಮಳ್ಳಾಟಕೆ ಯಾರಿಲ್ಲ
ಸಾಕ್ಷಿ ಮನಸಾಕ್ಷಿಯ ಮುಂದೆ ನಾ
ಯಾವಾಗಲೂ ಹಿಂದೆ.

ಹೀಗೆ ಆಗಾಗ ಅರಿವಿದ್ದೂ ಬೀಳುವೆ
ಮಾಯಾಜಾಲದ ಸುಳಿಯಲಿ
ಎತ್ತಿ ಕೊಳ್ಳಪಟ್ಟಿ ಹಿಡಿದು ಚಟಾರನೇ
ಬಾರಿಸಿದಂತೆ ಭಾಸವಾದಾದಾಗ
ಹೌಹಾರಿ ಎಚ್ಚರಾಗಿ ದುಃಖಿಸುತ
ನನ್ನ ಮೈಮನಗಳ ನಾನೇ ದಡವಿ
ಸಮಾಧಾನಿಸುತ್ತೇನೆ ಸಾಕೀ ಮಳ್ಳಾಟ
ಮಲಗು ಮನವೇ ಎಂದು
ಎಚ್ಚರಿಕೆಯಲಿ ಮುಲುಗದೇ
ತಣ್ಣಗೆ ಮಗುವಾಗಿ ಮಲಗುತ್ತೇನೆ.

----ಸಿದ್ದು ಯಾಪಲಪರವಿ

No comments:

Post a Comment