Thursday, November 4, 2010

ಈಗ ನಿತ್ಯವೂ ದೀಪಾವಳಿ-ಒಮ್ಮೊಮ್ಮೆ ಹೋಳಿ

ಇಡೀ ದೇಶ ಸುತ್ತಿ ಹತ್ತಾರು ಹಬ್ಬಗಳನ್ನು, ಉತ್ಸವಗಳನ್ನು ನೋಡಿದ್ದೇನೆ. ಇತ್ತೀಚಿಗೆ ಆಚರಿಸಿದ ಅಖಿಲಭಾರತ ಸಾಹಿತ್ಯ ಸಮ್ಮೇಳನದಲ್ಲಿ ಸಂಘಟಕನಾಗಿ ದೊಡ್ಡ ಹಬ್ಬ ಆಚರಿಸಿದ್ದೆ.

ಆದರೆ ಯಾವುದೇ ಹಬ್ಬಗಳು ಬಾಲ್ಯದಲ್ಲಿ ಕಾರಟಗಿಯಲ್ಲಿ ಆಚರಿಸಿದ ದೀಪಾವಳಿ ಹಬ್ಬಕ್ಕೆ ಸರಿಸಮಾನವಾಗಿ ನಿಲ್ಲುತ್ತಿಲ್ಲ.
ಪ್ರತಿ ವರ್ಷ ದೀಪಾವಳಿ ಸಂದಂರ್ಭದಲ್ಲಿ ನಮ್ಮ ಎಲ್ಲ ವಾಹನಗಳನ್ನು ಒಟ್ಟಿಗೆ ನಿಲ್ಲಿಸಿ ಫೋಟೋ ತೆಗೆಯುತ್ತಿದ್ದರು. ಲಾರಿ, ಜೀಪು, ಸ್ಕೂಟರ್ ಹಾಗೂ ಸೈಕಲ್ಲು ಗಳನ್ನು ಸಾಲಾಗಿ ಜೋಡಿಸಿ ಪೂಜೆ ಮಾಡುತ್ತಿದ್ದರು.

ಹಲಗೆಗಳಿಂದ ಜೋಡಿಸಿದ ಪಾವಟೆಗಳ ಸದರಿನ ಮೇಲೆ ಹಣ್ಣು, ದವಸ ಧಾನ್ಯಗಳನ್ನು ಇಟ್ಟು ಲಕ್ಞ್ಮಿಯನ್ನು ಸಂಭ್ರಮದಿಂದ ಮನೆಯಲ್ಲಿ ಅಡಗಿಸಿಟ್ಟಿದ್ದ ಇಲ್ಲ ಆಭರಣಗಳನ್ನು ಹಾಕಿ ಝಗಮಗಿಗಿಸುವ ಹಾಗೆ ಪೂಜೆ ಮಾಡುತ್ತಿದ್ದರು.

ದೀಪಾವಳಿಯ ಲಕ್ಷ್ಮಿಯನ್ನು ಹಗಲು-ರಾತ್ರಿ ಕಾಯುವ ನೆಪದಲ್ಲಿ ಇಸ್ಪೀಟ್ ಆಡಲು ಮುಕ್ತ ಅವಕಾಶವಿರುತ್ತಿತ್ತು.

ಕಾರಟಗಿಯಲ್ಲಿ ಆಚರಿಸುವಂತಹ ದೀಪಾವಳಿ ಬೇರೆ ಎಲ್ಲಿ ಆಚರಿಸುವುದಿಲ್ಲ ಎಂಬ ಪ್ರತೀತಿ ಇತ್ತು. ದೀಪಗಳ ಸಾಲಿನ ಸಂಭ್ರಮವಲ್ಲದೆ. ಇಸ್ಪೀಟ್ ಆಟಕ್ಕೂ ನಮ್ಮೂರು ಪ್ರಸಿದ್ಧಿ ಪಡೆದಿತ್ತು.

ರಸ್ತೆ ಬದಿಯಲ್ಲಿ ಇಸ್ಪೀಟ್ ಅಡ್ಡ ಹಾಕಲಾಗಿತ್ತು. ಜಿಲ್ಲೆಯ ಬೇರೆ ಊರುಗಳಿಂದ ಜನ ಲಕ್ಷಾಂತರ ರೂಪಾಯಿ ಕಟ್ಟಿಕೊಂಡು ಇಸ್ಪೀಟ್ ಆಡಲು ಬರುತ್ತಿದ್ದರು. ಅವರು ಲಕ್ಷ ಗೆದ್ದರಂತೆ, ಇವರು ಲಕ್ಷ ಸೋತರಂತೆ ಎಂಬ ಸುದ್ದಿಗಳು ಕೇಳಿಬರುತ್ತಿದ್ದವು.

ನಮಗೂ ಇಸ್ಪೀಟ್ ಆಡಲು ಅನುಮತಿ ಇರುತ್ತಿತ್ತು. ಕೂಡಿಸುವ ಹಾಗೂ ಅಂದರ್ - ಬಾಹರ್ ಇಸ್ಪೀಟ್ ಆಟವನ್ನು ದೀಪಾವಳಿ ಸಮಯದಲ್ಲಿಯೇ ಕಲಿತೆ. ಹಗಲು-ರಾತ್ರಿ ಲಕ್ಷ್ಮಿಯನ್ನು ಕಾಯುವ ನೆಪದಲಿ ಇಸ್ಪೀಟ್ ಆಡುವುದನ್ನು ಸಂಭ್ರಮಿಸುತ್ತಿದ್ದೆ.
ದೀಪಾವಳಿ ಎಲ್ಲಿಲ್ಲದ ಖುಷಿ ತರುತ್ತಿತ್ತು. ಟೇಲರ್ ರಾಮಣ್ಣ ಹೊಸ ಬಟ್ಟೆಗಳನ್ನು ಕೊಡುತ್ತಿದ್ದ, ಒಮ್ಮೊಮ್ಮೆ ಧೋತ್ರ ಉಟ್ಟು ಸಂಭ್ರಮಿಸಿದ್ದೇನೆ.

ಎಲ್ಲರ ಅಂಗಡಿ ಪೂಜೆಗೆ ಹೋದರೆ ಬಾಳೆಹಣ್ಣು ಎಲೆ ಅಡಿಕೆ ನೀಡುತ್ತಿದ್ದರು. ಅಂಗಡಿಯಲ್ಲಿ ಕೆಲಸ ಮಾಡುವ ಜನ 'ಹಬ್ಬದ ಖುಷಿ' ಕೇಳಿ ಪಡೆಯುತ್ತಿದ್ದರು. ಹಣ-ಬಟ್ಟೆ ಒಡವೆ ವಸ್ತ್ರಗಳನ್ನು 'ಹಬ್ಬದ ಖುಷಿ' ಯಾಗಿ ಪಡೆಯುತ್ತಿದ್ದರು.
ರಂಗು-ರಂಗಿನ ದೀಪಾವಳಿ ಮುಗಿದ ಕೂಡಲೆ ಬೇಸರವಾಗುತ್ತಿತ್ತು.

ಮುಂದೆ ವ್ಯಾಪಾರ ಹಾನಿಯಾಗಿ ಅಂಗಡಿಗಳು ಬಂದಾದಾಗಲೂ ದೀಪಾವಳಿ ಆಚರಣೆ ನಿಲ್ಲಲಿಲ್ಲ. ಮನೆಯಲ್ಲಿಯೇ ಲಕ್ಷ್ಮಿ ಪೂಜೆ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ತಿಜೂರಿಯಲ್ಲಿ ಅಡಗಿ ಕುಳಿತಿದ್ದ ಆಭರಣಗಳನ್ನು ಹೊರ ತೆಗೆದು ಲಕ್ಷ್ಮಿ ಮೈಮೇಲೆ ಹಾಕುವ ಸಂಭ್ರಮವೇ ದೀಪಾವಳಿ.

ಕಾಲೇಜು ವಿದ್ಯಾರ್ಥಿಯಾದ ಮೇಲೂ ರಜೆಗೆ ಊರಿಗೆ ಹೋಗುತ್ತಿದ್ದೆ. ಈಗಲೂ ಅಷ್ಟೇ ನನ್ನ ಹಾಗೆ ನನ್ನ ಮಕ್ಕಳು ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗಲು ಇಷ್ಟ ಪಡುತ್ತಾರೆ.

ಈಗ ಊರಲ್ಲಿ ದೀಪಾವಳಿ ತನ್ನ ಸ್ವರೂಪವನ್ನು ಉಳಿಸಿಕೊಂಡು ಬೃಹದಾಕಾರವಾಗಿ ಬೆಳೆದಿದೆ. ಹತ್ತಾರು ಸಂಖ್ಯೆಯಲ್ಲಿದ್ದ ಅಂಗಡಿಗಳು, ನೂರರ ಸಂಖ್ಯೆಯಲ್ಲಿವೆ. ಸರಿಸುಮಾರು ಎರಡು ನೂರು ಮಿಲ್ಲುಗಳಿವೆ.
ಕಾರಟಗಿ ಈಗ ಅಂತರಾಷ್ಟ್ರೀಯ ಖ್ಯಾತಿ ಪಡೆದಿದೆ.
ಊರಲ್ಲಿನ ನಮ್ಮ ಧಣಿತನ ಮಾಯವಾದರೂ, ಪ್ರತಿ ದೀಪಾವಳಿ ಕಳೆದು ಹೋದ ಸಿರಿ-ಸಂಭ್ರಮವನ್ನು ನೆನಪಿಸುತ್ತದೆ.
ಈಗ ಹಬ್ಬಗಳು ನನ್ನ ಪಾಲಿಗೆ ವಿಶೇಷ ಎನಿಸುವುದಿಲ್ಲ. ಹೊಸ ಬಟ್ಟೆ ಖುಷಿ ಎನಿಸಿದಾಗ ಧರಿಸುತ್ತೇನೆ. ಊರಿಗೆ ಹೋದಾಗ ಹಬ್ಬದ ನೆಪಕ್ಕೆ ಹೊಸ ಬನಿಯನ್ ಲುಂಗಿ ಖರೀದಿಸುತ್ತೇನೆ.

'ಎಮ್ಮವರು ಬೆಸಗೊಂಡರೆ ಶುಭ ಲಗ್ನವೆನ್ನಿರಯ್ಯ' ಎಂಬ ವಚನದ ಸಾಲು ತಿಳಿದ ಮೇಲೆ ಆಚರಣೆಗಳು ಅಥ ಕಳೆದುಕೊಂಡಿವೆ. ಸಂಭ್ರಮ ಎನ್ನುವುದು ನಮ್ಮ ಬದುಕಿನ ಪ್ರತಿ ಕ್ಷಣದಲ್ಲಿಯೂ ಇರಬೇಕು.
ಪ್ರತಿ ಕ್ಷಣವನ್ನೂ ವರ್ತಮಾನದಲ್ಲಿ ಹರ್ಷದಿಂದ ಕಳೆಯಬೇಕು ಎಂಬ ಸೂತ್ರ ಗೊತ್ತಾದ ಮೇಲೆ ನಿತ್ಯವೂ, ನೋವಿನಲ್ಲಿಯೂ ಹಬ್ಬದಾಚರಣೆ ಹೇಗೆ ಎಂಬುದು ಗೊತ್ತಾಗಿದೆ.
ಅದಕ್ಕೆ ದೀಪಾವಳಿಯೂ ಅಷ್ಟೆ ,ಹೋಳಿಯೂ ಅಷ್ಡೆ.
ದೀಪಾವಳಿ ಹಬ್ಬದ ನೆಪದಲಿ ಮನಸು ದಶಕಗಳ ಹಿಂದೆ ಓಡಿತು. ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

3 comments:

  1. ತಮಗೂ ದೀಪಾವಳಿ ಹಬ್ಬದ ಶುಭಾಶಯಗಳು

    ReplyDelete
  2. This comment has been removed by a blog administrator.

    ReplyDelete
  3. ಕಾರಟಗಿಯ ನೆನಪುಗಳು ನನಗೆ ಪಕ್ಕದ ನನ್ನೂರು, ಗಂಗಾವತಿಯ ದೀಪಾವಳಿ ಆಚರಣೆಯ ನೆನಪುಗಳ ಬುತ್ತಿಯನ್ನು ಬಿಚ್ಚಿದಂತಾಯಿತು.

    ReplyDelete