
ಬಾನೆತ್ತರಕೆ ಬೆಳೆದವರೊಂದಗಿನ ಸ್ನೇಹ ಎಂದು ಹೇಳಿಕೊಳ್ಳುವುದು ಫ್ಯಾಷನ್ ಆಗುತ್ತದೆ. ಆದರೆ ಜೊತೆಗಿದ್ದವರು ಬೆಳೆದಾಗ ಅಭಿಮಾನವೆನಿಸುವುದು ಸಹಜ !
ಬಳ್ಳಾರಿಯ ಸತ್ಯನಾರಾಯಣ ಪೇಟೆಯ, ಕರ್ನಾಟಕ ವಿಶ್ವವಿದ್ಯಾಲಯದ ಎಂ.ಎ.ಪದವೀಧರ, ಖಾಸಗಿ ಕಾಲೇಜಿನ ಉಪನ್ಯಾಸಕ, ಪತ್ರಕರ್ತ, ಹಾಯ್ ಮೂಲಕ ಕೋಟ್ಯಾಂತರ ಕನ್ನಡಿಗರ ಮನೆ-ಮನೆ ಸೇರಿದ ರವಿ ಬೆಳಗೆರೆ ಯಾರಿಗೆ ಗೊತ್ತಿಲ್ಲ.
ತುಂಬಾ ದಿನದಿಂದ ನನಗೆ ಗೊತ್ತು ಎಂದು ಹೇಳಿಕೊಳ್ಳುವ ಅನಿವಾರ್ಯತೆ ಇದೆ. ೧೯೮೬ ರಲ್ಲಿ ಬಿ.ಎ. ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದೆ. ಅಪರಾಧ ಶಾಸ್ತ್ರ, ನನ್ನ ಮೈನರ್ ವಿಷಯ.
ಜೈಲುಗಳ ಕುರಿತು ಅಧ್ಯಯನ ಮಾಡಲು ಬಳ್ಳಾರಿಗೆ ಹೋದೆ.
ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಸರ್, ಜಾಗರಕಲ್ ಎಂಬ ಅವರ ಪರಿಚಿತ ಪೋಲಿಸ್ ಅಧಿಕಾರಿಯನ್ನು ಪರಿಚಯಿಸಿದರು. ಜೈಲಿನ ಸುತ್ತಾಟ ಮುಗಿದ ಮೇಲೆ, ಮೇಜರ್ ವಿಷಯದ ಸಾಹಿತ್ಯ ನೆನಪಾತು.
ಜಾಗರಕಲ್ ಅವರಿಗೆ ಸಾಹಿತಿಗಳನ್ನು ಪರಿಚಯಿಸಲು ಹೇಳಿದೆ. ಅವರು ತಕ್ಷಣ ನನ್ನನ್ನು ಸತ್ಯನಾರಾಯಣ ಪೇಟೆಗೆ ಕರೆದುಕೊಂಡು ಹೋಗಿ ಕರ್ನಾಟಕ ಕ್ರೈಮ್ ಪತ್ರಿಕೆಯ ಸಂಪಾದಕರನ್ನು ಪರಿಚಯಿಸಿ, ಇವರು ಸಾಹಿತಿಗಳು ಸರ್ ಅಂದರು. ಪತ್ರಕರ್ತರು ಸಾಹಿತಿಗಳಿರಬಹುದು ಎಂದು ಲೆಕ್ಕ ಹಾಕುತ್ತ ಪರಿಚಯಿಸಿಕೊಂಡೆ.
ಕರಿ ಸಿಲ್ಕ್ ಜುಬ್ಬಾ, ಲುಂಗಿ ಉಟ್ಟುಕೊಂಡು, ಸಿಗರೇಟ್ ಸೇದುತ್ತಾ ವ್ಯಸ್ತಿ ಪರಿಚಯಿಸಿಕೊಂಡು ಕೊಡಲು ಹೇಳಿದರು.
ಮನೆಯ ಒಳಗಡೆ ಅಮ್ಮಾ ಮಲಗಿದ್ದಾರೆ ಅವರಿಗೆ ಡಿಸ್ಟರ್ಬ್ ಆಗುವುದು ಬೇಡ ಇಲ್ಲಿಯೇ ಹೊರಗೆ ಕೊಡೋಣ ಎಂದರು. ಆಯ್ತು ಎಂದೆ ನನ್ನ ಅಭ್ಯಾಸ ಸಾಹಿತ್ಯದ ಆಸಕ್ತಿ ಇತ್ಯಾದಿಗಳನ್ನು ಅತ್ಯಂತ ಪರಿಚಿತ ಹಿರಿಯಣ್ಣನಂತೆ ವಿಚಾರಿಸಿಕೊಂಡು.
". ಸಿದ್ದು ನೀವು ಚಿಕನ್ ತಿಂತೀರಿ ತಾನೇ ಎಂದರು. ಆಗಬಹುದು ಎಂದೆ. ಒಂದು ದೊಡ್ಡ ತಟ್ಟೆ ತುಂಬಾ ಮಿರಿ ಮಿರಿ ಮಿಂಚುವ ಖಾರದ ಚಿಕನ್ ನೋಡಿದಾಗ ಆಶ್ಚರ್ಯವಾಯಿತು. ಬಳ್ಳಾರಿಯ ಬ್ರಾಹ್ಮಣರ ಮನೆಯ ಆವರಣದಲ್ಲಿ, ಮಟ ಮಟ ಮಧ್ಯಾಹ್ನದಲ್ಲಿ, ಬಟಾಬಯಲಿನಲ್ಲಿ ಅಬ್ಬಾ ! ಚಿಕನ್ ತಿನ್ನೋದಾ ಎಂದು ಕೊಂಚ ಸಂಕೋಚ ಪಟ್ಟುಕೊಂಡೆ, ಬಾಯಲ್ಲಿ ನೀರೂರಿದ್ದನ್ನು ಸಹಿಸಿಕೊಳ್ಳಲಾಗದೇ ತಿನ್ನಲು ಶುರು ಮಾಡಿದೆ.
ಅದರವನ್ನು ಉರಿಸಿದ ಚಿಕ್ಕನ್, ಉದರಕ್ಕೆ ಹಿತವೆನಿಸಿತು. ಅಂತಹ ರುಚಿಕಟ್ಟಾದ ಚಿಕ್ಕನ್ನನ್ನು ಧಾರವಾಡದಲ್ಲಿ ತಿಂದಿರಲಿಲ್ಲ. ಏನಾದರೂ ಬರೀತಿಯಾ ಸಿದ್ದು ಎಂದರು. ಇಲ್ಲ ಸರ್ ಎಂದೆ ಸಂಕೋಚದಿಂದ. ನಾವು ಮೊದಲೇ ಹಿಂದುಳಿದ ಪ್ರದೇಶದಿಂದ ಬಂದವನು ಬಗ್ಗಲೇಬೇಕಲ್ಲ ಎಂದೆ. ಇಲ್ಲ, ಇಲ್ಲ ಅನಿಸಿದ್ದನ್ನು ಗೀಚುತ್ತಾ ಹೋಗು. ಮುಂದೊಂದು ದಿನ ಪರಿಶ್ರಮ ಪಟ್ಟರೆ ಬರಹ ಕೈ ಹಿಡಿಯುತ್ತೆ ಎಂಬ ಉಪದೇಶ ಬೇರೆ.
ಕಾರಟಗಿ ಕಡೆ ಎಂತಹ ಹಿರಿಯರನ್ನು ಬಹುವಚನದಿಂದ ಮಾತನಾಡಿಸುವುದಿಲ್ಲ. ಅಣ್ಣಾ, ಮಾಮ ಅಂತ ಮಾತನಾಡಿಸುವುದು ರೂಢಿ. ನಾನು ಹಂಗರೀ ಹಿಂಗರೀ ಅಂತ ಮಾತನಾಡುವುದನ್ನು ತುಂಡರಿಸಿ ಅಯ್ಯೋ ಏಕವಚನದಲ್ಲಿ ಮಾತಾಡು ಮಾರಾಯ ಅಂದರು.
ನನಗೂ ಧಾರವಾಡದ ಪರಿಸರದಲ್ಲಿ ಬಹುವಚನ ಮಾತನಾಡಿಸಬೇಕಾಗಿತ್ತು. ಆಯ್ತಣ್ಣ ಅಂದೆ. ಅಂದಿನಿಂದ ಖ್ಯಾತ ಪತ್ರಕರ್ತ ರವಿ ಬೆಳಗೆರೆ ನನ್ನ ಪಾಲಿನ ರವಿ ಅಣ್ಣ ಆದ. ನನಗಿಂತ ಎಂಟು ವರ್ಷ ಹಿರಿಯನಾದ ರವಿಯೊಂದಿಗಿನ ಆಪ್ತತೆ ಹಾಗೆ ಮುಂದುವರೆತು.
ಮುಂದೆ ರವಿ ಬಳ್ಳಾರಿ ಬಿಟ್ಟು ಹುಬ್ಬಳ್ಳಿ ಆಫೀಸಿಗೆ ಬರೋ ಹೊತ್ತಿಗೆ ನಾನು ಉಪನ್ಯಾಸಕನಾಗಿ ಗದಗ ಸೇರಿದ್ದೆ. ಹುಬ್ಬಳ್ಳಿ ಸಂಯುಕ್ತ ಕಚೇರಿಗೆ ಹೋಗಿ ನನ್ನ ಬರಹ ತೋರಿಸಿಬಂದಿದ್ದೆ. ನಾಡಿನ ಯಾವುದೇ ಪತ್ರಿಕೆಗಳನ್ನು ಅಲ್ಲಿಯವರೆಗೆ ನನ್ನ ಲೇಖನಗಳನ್ನ ಪ್ರಕಟಿಸಿರಲಿಲ್ಲ. ರವಿ ಕರ್ಮವೀರದಲ್ಲಿ ಪದ್ಯ ಪ್ರಕಟನೆ ನನ್ನನ್ನು ಕವಿಯಾಗಿಸಿದ.
ಬೆಂಗಳೂರು ಸೇರಿ ಕನ್ನಡ ಪ್ರಭ ಆಫೀಸಿನಲ್ಲಿದ್ದಾಗ ವೈ.ಎನ್.ಕೆ ಅವರನ್ನು ಕಂಡು ತಾತ್ಕಾಲಿಕವಾಗಿ ಕನ್ನಡ ಪ್ರಭ ವರದಿಗಾರನಾಗಿ ಬರುವಾಗ ರವಿಯನ್ನು ಕಂಡು ಬಂದೆ. ಮುಂದೆ ರವಿ ಹಾಯ್ ಪ್ರಾರಂಭಿಸುವ ಯೋಜನೆ ಪ್ರಕಟಿಸಿದಾಗ ಬೆಂಗಳೂರಿಗೆ ಹೋಗಿ ಏಜನ್ಸಿ ಪಡೆದುಕೊಂಡೆ.
ಅತಂತ್ರ ನೌಕರರಿಗೆ ಅನುದಾನ ಸಿಕ್ಕಿರಲಿಲ್ಲ. ಹೊಟ್ಟೆಪಾಡಿಗೆ ಏನಾದರೂ ಮಾಡಬೇಕಿತ್ತು. ಏಜನ್ಸಿ ಪಡೆದುಕೊಂಡರೆ ಆರ್ಥಿಕವಾಗಿ ಅನುಕೂಲವಾಗಬಹುದೆಂದು ಭಾವಿಸಿ ಏಜನ್ಸಿ ಹಿಡಿದೆ.
ಪತ್ರಿಕೆ ಪಾಪ್ಯೂಲರ್ ಆಯಿತು. ನೂರು ಕಾಪಿಗಳು ಗದುಗಿನಲ್ಲಿ ಸೇಲ್ ಆದವು. ಆದರೆ ಪತ್ರಿಕೆ ಮಾರುವ ಹುಡುಗರು ಸರಿಯಾಗಿ ಹಣ ಕೊಡಲಿಲ್ಲ. ಕೈಯಿಂದ ತುಂಬುವುದು ಸಾಕಾಗಿ ಏಜನ್ಸಿ ನಿಲ್ಲಿಸಿ ಬಿಟ್ಟೆ.
ಈ ಮಧ್ಯೆ ಗದುಗಿಗೆ ಸಂಬಂಧಿಸಿದ ವರದಿಯೊಂದು ಪ್ರಕಟವಾಯ್ತು. ಅದನ್ನು ನಾನೇ ಬರೆದಿರಬಹುದೆಂದು ಜನ ಸಂಶಯದಿಂದ ನೋಡಲು ಪ್ರಾರಂಭಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಯು ನೌಕರಿ ನನ್ನ ಧೈರ್ಯವನ್ನು ಕಿತ್ತುಕೊಂಡಿತ್ತು.
ಅನುದಾನ ಬೇರೆ ಸಿಕ್ಕಿರಲಿಲ್ಲ ತುಂಬಾ ಹೆದರಿಬಿಟ್ಟು ಏಜನ್ಸಿಯನ್ನು ಕೈಬಿಟ್ಟೆ.
ಹಾಯ್ ಪ್ರಸಾರ ಹೆಚ್ಚಾಯಿತು. ಏಜನ್ಸಿ ಬಿಟ್ಟದಕ್ಕೆ ರವಿ ಬೇಸರ ಮಾಡಿಕೊಳ್ಳಲಿಲ್ಲ. ಆಗಾಗ ನಿವೇದಿತಾ ಪೋನ್ ಮಾಡಿ ಉಳಿದಿರುವ ಎರಡು ಸಾವಿರ ಬಾಕಿ ಕಳಿಸಲು ಹೇಳಿದರು. ಸಾಧ್ಯವಾಗಲಿಲ್ಲ. ಮೊದಲನೇ ವಾರ್ಷಿಕೋತ್ಸವಕ್ಕೆ ಬೆಂಗಳೂರಿಗೆ ಬರುವ ಆಹ್ವಾನ ಬಂತು ಕೈಯಲ್ಲಿ ಹಣ ಇರಲಿಲ್ಲ. ಸಾಹಿತ್ಯ ಸಂಗಾತಿಗಳೊಬ್ಬರಿಂದ ಹಣ ಪಡೆದು, ರೆಕಾರ್ಡರ್ ತಗೊಂಡು ಬೆಂಗಳೂರಿಗೆ ಹೋದೆ.
ರವಿ ಖುಷವಂತಸಿಂಗ್ರನ್ನು ಪರಿಚಸಿದರು. ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದೆ. ಸಂಜೆ ಕಾರ್ಯಕ್ರಮದಲ್ಲಿ ರವಿ, ನಾಗತಿಹಳ್ಳಿ, ಖು ಷ್ವಂತ ಅಜ್ಜನ ಭಾಷಣ ಕೇಳಿ ಗದುಗಿಗೆ ಬಂದೆ.
ರವಿ ಎಷ್ಟೇ ಒತ್ತಾಸಿದರು. ಹಾಯ್ ಗೆ ಬರೆಯುವ ಧೈರ್ಯವಾಗಲೇ ಇಲ್ಲ. ರವಿಯೊಂದಿಗೆ ಸಂಪರ್ಕ, ಆತ್ಮೀಯತೆ ಸಾಧ್ಯವಾಗಲೇ ಇಲ್ಲ. ಮುಂದೆ ಅನುದಾನಕ್ಕಾಗಿ ಬೆಂಗಳೂರು ಅಲೆದಾಡಿ ಸಂಪೂರ್ಣ ಸಾಹಿತ್ಸ ಸಂಪರ್ಕ ಕಳೆದುಕೊಂಡೆ. ಆದರೆ ಈ ನೆಪದಿಂದ ಬೆಂಗಳೂರು ಓಡಾಟ ಹೆಚ್ಚಾಯಿತು.
ಹೋದಾಗಲೆಲ್ಲ ರವಿಯಣ್ಣನನ್ನು ಕಂಡು ಮಾತನಾಡಿ ಸಂಭ್ರಮಿಸುತ್ತಿದ್ದೆ. ಎಂದೂ ನನ್ನ ಕಷ್ಟ ಹೇಳಿಕೊಳ್ಳುವ ಮನಸ್ಸಾಗಲಿಲ್ಲ. ಮುಂದೆ ೧೯೯೭ ರಲ್ಲಿ ಅನುದಾನ ಸಿಕ್ಕಿತು. ಬರಹ ಓದಿಗೆ ಜೀವ ಬಂತು. ನಿವೇದಿತಾರ ಬಳಿ ರವಿಯ ಎಲ್ಲ ಪುಸ್ತಕ ಪಡೆದುಕೊಂಡು ಪಟ್ಟಾಗಿ ಓದಿದೆ. ಅಬ್ಬಾ ! ! ! ಅನಿಸಿತು. ರವಿ ಆಕಾಶಕ್ಕೇರಿದ್ದ, ನಾನು ಇಲ್ಲೇ ಆಳದಲಿ, ಪಾತಾಳದಲ್ಲಿದ್ದೇನೆ ಎನಿಸಿತು. ಬರೆಯುವ ಚೇತನ ಹೆಚ್ಚಾತು. ರವಿ ಬೆಳಗೆರೆಯ ಬರಹದಲ್ಲಿ ಅಪಾರ ಆಕರ್ಷಣೆಯಿದೆ. ಲಂಕೇಶದ ನಂತರ ಪಟ್ಟಾಗಿ ಕುಳಿತು ಬರೆಯುವ ತಾಕತ್ತು ರವಿಗಿದೆ.
ಪತ್ರಿಕೆಯ ಇಂಟಿಗ್ರಿಟಿ ಉಳಿದಿರುವುದು ರವಿಯ ಖಾಸ್ ಬಾತ್ ನಿಂದಾಗಿ ಸಿನಿಮಾ, ಧಾರವಾಹಿಗೆ ಶಾಲೆ ಹೀಗೆ ಅಲೆದ ಎಲ್ಲ ಕ್ಷೇತ್ರಗಳಲ್ಲೂ ರವಿ ಯಶಸ್ಸನ್ನು ಸಾಧಿಸಿದ. ಆದರೆ ನನಗೆ ಬರಹಗಾರನಾಗಿ ಮಾತ್ರ ಉಳಿದ. ಆತನ ಸೆಕ್ಸಿ ಬರಹದಿಂದ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ.
ಮುಂದೆ ನಾನು ಅಚಾನಕಾಗಿ ರವೀದ್ರ ರೇಷ್ಮೇಯವರ ವಿಕ್ರಾಂತದಲ್ಲಿ ರೆಗ್ಯೂಲರ್ ಆಗಿ ಬರೆಯಲು ಶುರು ಮಾಡಿ ಬರಹಕ್ಕೆ ಜೀವ ತುಂಬಿದೆ. ಇಂಗ್ಲೆಂಡಿಗೆ ಹೋದಾಗ ರವಿಯ ಮಗನ ಸಲುವಾಗಿ ಹುಡುಕಾಡಿದೆ. ಅಕ್ಕನ ಮದುವೆಗಾಗಿ ಆತ ಬೆಂಗಳೂರಿಗೆ ಬಂದಿದ್ದಾನೆ ಎಂದು ತಿಳಿದು ನಿರಾಶೆಯಾಯಿತು. ಮುಂದೆ ಆಗಾಗ ಫೋನಾಯಿಸಿದೆ, ರವಿಯನ್ನು ಹೆಚ್ಚು ಭೇಟಿ ಆಗುವ ಸ್ಥಿತಿಯನ್ನು ಆತ ದಾಟಿ ದೊಡ್ಡವನಾಗಿ ಹೋಗಿದ್ದ.
ಮುಂದೆ ನನ್ನ ಪ್ರವಾಸಕಥನ ಕಳಿಸಿ ಅಭಿಪ್ರಾಯ ಪಡೆದುಕೊಂಡೆ. ತುಂಬಾ ಚೆನ್ನಾಗಿ ಬರೆದಿದ್ದಿಯಾ ಅಂದಾಗ ಏನೋ ಕಳೆದುಕೊಂಡದ್ದನ್ನು ಪಡೆದ ಅನುಭವ ಆಯ್ತು.
ಈಗ ನನ್ನ ಬರಹ ರೆಗ್ಯೂಲರ್ ಆದ ಮೇಲೆ ರವಿ ಮೇಲಿಂದ ಮೇಲೆ ನೆನಪಾಗುತ್ತಾನೆ. ಪರೋಕ್ಷವಾಗಿ ರವಿ ಬರಹ ನನ್ನ ಮೇಲೆ ತೀವ್ರ ಪ್ರಭಾವ ಬೀರಿದೆ. ರವಿ ನಿತ್ಯ ಪೆನ್ನು ಹಿಡಿದಾಗಲೆಲ್ಲ ಕಾಡುತ್ತಾನೆ. ನಾನು ಬರೆಯುತ್ತಿರುವ ಬಾಲ್ಯದಾನುಭವಗಳಲ್ಲಿ ರವಿ ದಾಖಲಾಗಬೇಕು ಎಂಬ ಆಸೆಯಾತು. ಸಾಧ್ಯವಾದರೆ ಆ ಪುಸ್ತಕಕ್ಕೆ ರವಿಯಣ್ಣ ನಾಲ್ಕು ಮಾತು ಬರೆಯಲಿ ಎಂಬ ಆಸೆಯೂ ಇದೆ.
ಅಂದಿನಿಂದ ಇಂದಿನವರೆಗೆ ಸ್ನೇಹದ ನೆನಪುಗಳು ಹಚ್ಚಹಸುರಾಗಿವೆ. ಪಾಟೀಲ ಪುಟ್ಟಪ್ಪ, ಲಂಕೇಶ, ರವಿ ಬೆಳಗೆರೆ, ರವೀಂದ್ರ ರೇಷ್ಮೇ ಹಾಗೂ ವಿಶ್ವೇಶ್ವರ ಭಟ್ರಂತಹ ಸಮಕಾಲಿನ ಹಿರಿಯರ ಪ್ರೇರಣೆ ಬರೆಯುವ ಚೈತನ್ಯ ಹೆಚ್ಚಿಸುತ್ತದೆ.
ಈಗ ಮುಕ್ತವಾಗಿ ಬರೆಯುವ ಬ್ಲಾಗ್ ಜಗತ್ತು ಬರಹದ ಹರವನ್ನು ವಿಸ್ತರಿಸಿದೆ. ನನ್ನನ್ನು ತೀವ್ರವಾಗಿ ಕಾಡಿದ, ಪ್ರಭಾವಿಸಿದ ಹಲವರನ್ನು ಅಕ್ಷರಗಳಲ್ಲಿ ಹಿಡಿದಿಟ್ಟು ಸಂಭ್ರಮಿಸಬೇಕೆನಿಸಿದೆ.