Wednesday, November 30, 2016

ನಾ ಮರೆಯಲಾರೆ

ನಾ ಮರೆಯಲಾರೆ
ದಟ್ಟಡವಿಯಲಿ ಅಂಡಲೆಯುವಾಗ
ಕೈಹಿಡಿದು ಸನ್ಮಾರ್ಗವ ತೋರಿ ದಡ
ಸೇರಿಸಿದ ಗುರುವಿಗೆ ಗುಲಾಮನಾಗಿರುವೆ
ಸಾಕಿ ಸಲಹಿ ಕಷ್ಟ ಕೋಟಲೆಗಳ
ಜೀರ್ಣಿಸಿಕೊಂಡು ಬದುಕಿನ ಬೆಲೆಯ ಅಳೆದು
ತೂಗಿದ ಹೆತ್ತೊಡಲ ಋಣವ ತೀರಿಸಲಾರೆ
ಮೈಮನಗಳಲಿ ಸುಳಿದಾಡಿ ಭಾವನೆಗಳ
ರಮಿಸಿ ಸುಖದ ಸೋಪಾನದಲಿ ತೇಲಿಸಿ
ವಾಸ್ತವದಲೆ ಅಪ್ಪಳಿಸಿದಾಗ ತೇಲಿ ಹೋದ
ಸಂಗಾತಿಗಳ ಸಂಗತಿಗಳ ಮರೆಯಲಾರೆ
ಕಂಡ ಕನಸುಗಳ ಕಸುವು ಹೆಚ್ಚಿಸಲು
ನೀರೆರೆದ ಕೈಗಳಿಗೆ ನಮಿಸದಿರಲಾರೆ
ಸಾವಿರಾರು ಕನಸುಗಳಿಗೆ ಬಣ್ಣ ತುಂಬುವೆ
ಎಂದು ಪಾಠ-ಪ್ರವಚನಗಳ ಮಂತ್ರ ಮುಗ್ಧರಾಗಿ
ಆಲಿಸಿದ ಕಿವಿಗಳ ರಿಂಗಣವ ನಿಲ್ಲಿಸಲಾರೆ
ನಕ್ಕು ನಲಿದು ಮುಗ್ಧತೆಯ ಪಾಠ ಕಲಿಸಿ
ಅಪ್ಪುಗೆಯ ಆಲಿಂಗನದಲಿ ನನ್ನ ನಾ
ಮರೆಯುವಂತೆ ಮಾಡಿದ ಮಕ್ಕಳ
ಬಿಸಿಯಪ್ಪುಗೆಯ ಪ್ರೀತಿಯುಸಿರ
ಹಿತವ ಆರಲು ಬಿಡಲಾರೆ
ಅಲ್ಲಿ ಇಲ್ಲಿ ಎಲ್ಲೆಲ್ಲೂ ಅಲೆಯುವಾಗ
ಪರಿಚಯವಾದ ಅಪರಿಚಿತರು ಚಿತ್ತವಲುಗಾಡಿಸಿ
ಹೊಸ ಚಿತ್ರ ಬಿಡಿಸಿ ನನ್ನೆದೆಯ ಬಗೆದು ಒಳ
ಹೊಕ್ಕು ಹಿತವಾಗಿ ಗೀಚಿ ಗಾಯ ಮಾಡಿ
ಕೆರಳಿಸಿ ಕೆರೆಯುವಂತೆ ಮಾಡಿ ಉಗುರು
ಸಂದಿಯ  ನೆತ್ತರು ಕಲೆಗಳ ಚೀಪಿದಾಗ
ನೆನಪಾಗಿ ನನ್ನ ನಾ ಪರಚಿಕೊಳಲು
ಪ್ರೇರೇಪಿಸುವ ಚಲುವೆಯರ ಮಧುರತೆಯ
ಮೀಟದಿರಲಾರೆ
ಸೋತಾಗ ಎಲ್ಲರೂ ಓಡಿ ಹೋಗಿ ಮೈದಾನದಲಿ
ಒಂಟಿಯಾಗಿ ಅಳುತ ನಿಂತಿರುವಾಗ ಓಡಿ ಬಂದು
ಧೈರ್ಯ ಹೇಳಿ ಮತ್ತೆ ಆಟ ಆಡಲು ಉತ್ತೇಜಿಸಿ
ಗೆದ್ದಾಗ ದೂರದ ಮೂಲೆಯಲಿ ನಿಂತು ಚಪ್ಪಾಳೆ
ತಟ್ಟಿ ಸಂಭ್ರಮಿಸುವ ನಿಷ್ಪ್ರಹ ಕೆಲವೇ ಕೆಲವು
ಗೆಳೆಯರ ಕೈ ಬಿಡಲಾರೆ
ಹೊಸ ಕನಸುಗಳ ಗಾಳ ಹಾಕಿ ಮೋಸ ಮಾಡಿ
ಕೈ ಕೊಟ್ಟು ಕೇಕೆ ಹಾಕಿ ಹೊಸ ಪಾಠಗಳನು
ದಯಪಾಲಿಸಿದವರನು ಹಿತಶತ್ರುಗಳು ಎಂದು
ಜರಿಯಲಾರೆ ದಟ್ಟ ಕತ್ತಲಲಿ ಕೈಬಿಟ್ಟು
ಚೀರಾಡಿಸಿ ಬೆಳಕಿನ ಮಹಿಮೆಯ ಸಾರಿದವರ
ಮರೆಯಲಾದೀತೇ ?
ಬಾಳ ಪಯಣದಲಿ ಭೇಟಿಯಾದ ಎಲ್ಲರೂ
ಎಲ್ಲರೂ ಭಿನ್ನ ವಿಭಿನ್ನ ಅಂತವರನು ದಕ್ಕಿಸಿಕೊಂಡ
ನಾ ನಿಜವಾಗಲೂ ಧನ್ಯ ಧನ್ಯ...
----ಸಿದ್ದು ಯಾಪಲಪರವಿ

Wednesday, November 16, 2016

ಕವಿತಾ

ಕಳವಳವ ದೂರಾಗಿಸುವ ಕವಿತಾ

ಲೆಕ್ಕವಿಲ್ಲದಷ್ಟು ಕಳವಳಗಳು
ನೂರೆಂಟು ಆತಂಕಗಳು
ಮನೋಮಂದಿರವ ಹೊಕ್ಕು
ಚಲ್ಲಾಟವಾಡುವ ಅರಗಿಣಿಗಳು
ಭಾವನೆಗಳ ಜೊತೆ ಕಣ್ಣಾ-ಮುಚ್ಚಾಲೆ
ಆಡುವ ಸಂಗತಿಗಳು

ಹತ್ತಿರವಾದಂತೆ ಭ್ರಮೆ ಹುಟ್ಟಿಸಿ
ಫಕ್ಕನೆ ಛಕ್ಕನೆ ದೂರಾಗಿ
ಬೆರಳು ತೋರಿಸಿ ಬೆರಗು ಹುಟ್ಟಿಸುವ
ಮಾಯಾಂಗನೆಯರು

ಹೆಣ್ಣು-ಹೊನ್ನು-ಮಣ್ಣು
ಮಾಯೆಯಲ್ಲ ಎಂದರಿಯುತ
ಮಾಯದ ಬಲೆಯಲಿ ಮತ್ತೆ
ಮತ್ತೆ ಸಿಕ್ಕು ಗಿರಕಿ ಹೊಡೆಯುವ
ಹೊತ್ತು ತಪ್ಪಿಸಿಕೊಳ್ಳಲಾಗದ
ಗಮ್ಮತ್ತು

ಮನದ ಮುಂದಣ ಆಸೆಗೆ
ನಿತ್ಯ ಪರಿತಪಿಸಿ ಹಪಾಹಪಿಸಿ
ಬಳಲಿ ಬೆಂಡಾದಾಗ

ಕೈ ಹಿಡಿದು ನಡೆಸಿ , ಕೈ ಕೊಟ್ಟವರ
ಮುಖವಾಡ ಕಳಚಿ ಅಂಗೈಯಲಿಟ್ಟು
ಭ್ರಮಾಲೋಕದ ಭೂತವ ಬಿಡಿಸಿ
ವಾಸ್ತವದಲೆಯ ನಡೆಸುವ
ಅಂದಗಾತಿ

ನೀ ನಿರದಿರೆ ನಿದಿರೆಯೂ ಬಹು
ದೂರ
ತೋಳ ದಿಂಬಾಗಿಸಿ ಬೆಚ್ಚಗೆ ಮುದದಿ
ಮಲಗಿಸುವ ನೀ ನಿತ್ಯ ನೂತನ
ಕಾವ್ಯ ಕನ್ನಿಕೆ...

----ಸಿದ್ದು ಯಾಪಲಪರವಿ

Saturday, November 12, 2016

ನಾವೂ ಬಿಕ್ಷುಕರು

ಈಗ ನಾವೂ  ಬಿಕ್ಷುಕರು

'ಅಮ್ಮಾ ತಾಯೇ ಹತ್ತು ರೂಪಾಯಿ
ಚಿಲ್ರೆ ಕೊಡಿ ಖರ್ಚಿಗೆ ಬೇಕಾಗಿದೆ
ನನ್ನ ಹತ್ರ ಸಾವಿರ ರೂಪಾಯಿ ಇದೆ
ಚಿಲ್ರೆ ಕೊಡಿ ಬಿಳಿ ಮಾಡ್ಕೋತೀನಿ '
ಎಂಬುದು
ಸರತಿ ಸಾಲಿನ ಪಾಳೆಯದಲಿ
ಹಗಲು ರಾತ್ರಿ ಬ್ಯಾಂಕಿನ ಮುಂದೆ
ಆಕ್ರೋಶ

ಸತ್ಯದ ಆಳಗಲ ಅವರಿಗೂ ಇವರಿಗೂ
ಇಬ್ಬರಿಗೂ ಗೊತ್ತಿಲ್ಲ
ಕೊಡಿ ಖಂಡಿತಾ ಬಿಳಿಯಾಗಿಸುತ್ತೇನೆ
ಎಂಬ ಹುಸಿ ಕನಸು ಮಾರುವ ಕತ್ತಲೆ
ಖದೀಮರ ಕಹಳೆಗೆ ಬೆಚ್ಚಿಬಿದ್ದವರದು
ನಾಯಿಪಾಡು

ಬಿಸಿತುಪ್ಪದ ರುಚಿ ಅನುಭವಿಸಲಾಗದ
ಚಡಪಡಿಕೆಯಲಿಯೂ ಧನಿಕರಿಗೆ ಸಾವಿರ
ದಾರಿ ಸಾವಿನಿಂದ ಪಾರಾಗಲು
ನಿಶ್ಚಿಂತರವರು ಈ ಕರಾಳ ರಾತ್ರಿಯ
ಕಳವಳದಲೂ

ಕಾಲಪ್ರವಾಹದಲಿ ಕೊಚ್ಚಿ ಹೋಗುವ
ಇಲ್ಲವೇ ಸಿಕ್ಕು ನರಳುವ ಕರ್ಮ
ಕೇವಲ ಬಡಪಾಯಿಗಳಿಗೆ

ಸರತಿ ಸಾಲಿನಲಿ ನಿಂತವರಿಗೆ
ನೀರುಣಿಸುವ ಕುಹಕ ಉದಾರತೆಯ
ಕಾಳ ಧಣಿಗಳ ಮಸಲತ್ತುಗಳ ಅರಿಯದ
ಅಮಾಯಕರ ಮುಖದ ಮೇಲೆ
ಧಾರಾಕಾರ ಬೆವರು

ರಾಜಕಾರಣದ ಮಸಲತ್ತುಗಳ
ಆಳದಲಿ ಅಡಗಿರಬಹುದಾದ
ಉದ್ದೇಶವ ಅರಿಯುವದ ಮರೆತ
ಅಮಾಯಕರು

ದೇಶೋದ್ಧಾರದ ಸೋಗಲಾಡಿತನಕೆ
ನಿರಂತರ ಜಯಕಾರದ ಅಬ್ಬರದಲಿ
ಕಪ್ಪು ಹಣ ಸದ್ದಿಲ್ಲದೆ ಬೆಳಗಾಗುತ್ತಲೇ
ಇದೆ...

----ಸಿದ್ದು ಯಾಪಲಪರವಿ

ಆರ್ಥಿಕ ತಲ್ಲಣ

Financial Emergency ಹಾಗೂ ಸಾಮಾನ್ಯರ ತಲ್ಲಣಗಳು

ಕೈ ಖಾಲಿ ಆಗೋ ಅನುಭವ ನನಗೇನು ಹೊಸದಲ್ಲ. ಕಿಸೆಯಲ್ಲಿ ದುಡ್ಡಿಲ್ಲದೆ ಎಲ್ಲಂದರಲ್ಲಿ ತಿರುಗುವ ಸ್ವಭಾವ , ಈ ನಿಷ್ಕಾಳಜಿ ಸ್ವಭಾವದಿಂದ ಅನೇಕ ಮುಜುಗರಗಳನ್ನು ಎದುರಿಸಿದ್ದೇನೆ.
ವ್ಯಕ್ತಿ ಯಾವುದೇ ವೃತ್ತಿಯಲ್ಲಿದ್ದರೂ ತನ್ನ ಯೋಗ್ಯತೆಗೆ ತಕ್ಕಂತೆ ಆರ್ಥಿಕ ಶಿಸ್ತನ್ನು ರೂಪಿಸಿಕೊಂಡಿರುತ್ತಾನೆ. ಅದು ವ್ಯಕ್ತಿಯ ಸಹಜ ಗುಣಧರ್ಮವೂ ಹೌದು ।
  ನಾನು ಆ ಶಿಸ್ತನ್ನು ರೂಪಿಸಿಕೊಂಡಿಲ್ಲ ಎಂಬುದು ಹಿತೈಷಿಗಳ ಆರೋಪ , ಅದು ನಿಜವೂ ಹೌದಲ್ಲ !
ಈಗ್ಯಾಕೆ ಈ ಆತ್ಮರತಿ ಅಂತೀರಾ ?
ಮಧ್ಯಮ ವರ್ಗದ ಶಿಸ್ತಿನ ಜನ financial emergency ಯಿಂದ ತಲ್ಲಣಗೊಂಡು ತಮ್ಮ ರಕ್ತ ಸುಟ್ಟುಕೊಂಡು ನೋಟುಗಳ ಭಜನೆ ಮಾಡುವ ಈ ಹೊತ್ತಿನಲ್ಲಿ ನಾನು ಹಣವಿಲ್ಲದೇ ನಿಶ್ಚಿಂತನಾಗಿರಲು ನನ್ನ zero balance ಕಾರಣ ನನ್ನ ಈ ಅಶಿಸ್ತು ಈಗ ವರವಾಗಿರಬಹು ಎಂಬ positive ಭಂಡತನ ಇರಬಹುದಾ ?

ಈ ತಲ್ಲಣವನ್ನು ಒಂದು ಕ್ಷಣ ಗಂಭೀರವಾಗಿ ಆಲೋಚಿಸುವ ಅಗತ್ಯವೂ ಇದೆ. ಸಾವಿರಾರು ಕೋಟಿ ಕಪ್ಪು ಹಣ ಬಿಳಿ ಆಗುವುದು ಆ ದೇವರಿಗೆ ಗೊತ್ತು ಆದರೆ ಮಧ್ಯಮ ವರ್ಗದವರ ತಲ್ಲಣಕ್ಕೆ ಸರಿಯಾದ guidelines ಅಗತ್ಯವಿದೆ.

ಈ ಸಮಸ್ಯೆ ಎಷ್ಟು ದಿನ ?  ಜನಸಾಮಾನ್ಯರು even bank ನವರು confusion ನಲ್ಲಿದ್ದಾರೆ. ಜನಜೀವನ ಅಸ್ತವ್ಯಸ್ತವಾಗಿ ಸಣ್ಣಪುಟ್ಟ ಕೆಲಸ ಮಾಡುವವರು ಕೆಲಸ ಕಳೆದುಕೊಳ್ಳುವಂತಾಗಿದೆ. ಮಧ್ಯಮ ವರ್ಗದವರು ಅತೀ ಶ್ರೀಮಂತರ ನೆರವಿನಿಂದ ಪಡೆಯುತ್ತಿದ್ದ ಅನುಕೂಲಗಳಿಗೆ ತಡೆಬಿದ್ದಿದೆ.
ಅನೇಕ ಸ್ತಿತ್ಯಂತರಗಳನ್ನು ಸಮರ್ಥವಾಗಿ ಎದುರಿಸಿದ ನಾವು ಇದನ್ನೂ ಎದುರಿಸಬಹುದು ಎಂಬ ವಿಶ್ವಾಸ ಕೊಂಚ ಕ್ಷೀಣಿಸಿದೆ .
ಜನಸಾಮಾನ್ಯರ ಬಾಳು ತುಂಬಾ ಅಸ್ತವ್ಯಸ್ತವಾದರೆ ಆಗಬಹುದಾದ ರಾಜಕೀಯ ಪರಿಣಾಮಗಳು ಅಯೋಮಯ , ಇದು ಕೂಡಾ 'ಬಡವನ ಕೋಪ ದವಡೆಗೆ ಮೂಲ ' ಎಂಬಂತಾಗಿದೆ.

ಅತೀ ಶ್ರೀಮಂತರು , ಕಪ್ಪು ಹಣವುಳ್ಳವರು ಮೇಲ್ನೋಟಕ್ಕೆ silent ಆಗಿ ಕಾಣಿಸುತ್ತಾರೆ ಆದರೆ ಮಧ್ಯಮ ವರ್ಗದವರ ಸಪ್ಪಳ ಜೋರಾಗಿ ಕೇಳಿಸುತ್ತಿದೆ ಇದಕ್ಕೆ ನೀವೇನಂತೀರಿ ?

    ----ಸಿದ್ದು ಯಾಪಲಪರವಿ

Thursday, November 10, 2016

ಮೊಬೈಲ್ ಎಡವಟ್ಟು

ಮತ್ತೊಂದು ಮೊಬೈಲ್ ಎಡವಟ್ಟು

ಸಾರ್ವಜನಿಕ ಬದುಕು ಯಾಕೋ ಹಳಿ ತಪ್ಪುತ್ತಲಿದೆ. ಅಧಿಕಾರದಲ್ಲಿರುವವರು ಸಾರ್ವಜನಿಕ ಬದುಕಿನಲ್ಲಿ ತುಂಬಾ ಎಚ್ಚರಿಕೆಯಿಂದಿರಬೇಕು.
ಜನರು ಕೂಡಾ ತುಂಬಾ ನಿರೀಕ್ಷೆ ಇಟ್ಟುಕೊಂಡು ಮಂತ್ರಿ -ಮಹೋದಯರ ಖಾಸಗಿತನ ಕಿತ್ತುಕೊಳ್ಳುತ್ತಾರೆ ಹಾಗಂತ ಸಂಯಮ ಕಳೆದುಕೊಳ್ಳಬಾರದು. ಜನರ ಮಧ್ಯೆ ಹಾಗೂ ಸಭೆ ಸಮಾರಂಭಗಳಲ್ಲಿರುವಾಗ ಮೈ ಮರೆಯಬಾರದು. ಸುತ್ತಲೂ ಅಸಂಖ್ಯ ಕಣ್ಣುಗಳು, ಕ್ಯಾಮೆರಾಗಳು ಕುತೂಹಲದ ನಿಗಾ ಇರುತ್ತದೆ  ಎಂಬ ಅರಿವಿರಬೇಕು.
ಪ್ರೀತಿಪ್ರೀತಿ-ಪ್ರೇಮ-ಪ್ರಣಯ ಎಲ್ಲರ ಆಸಕ್ತಿ , ನೋಡೋದು ಇತ್ಯಾದಿ ಸರಿಯಲ್ಲ ಅಂತ ಹೇಳೋ ಅಧಿಕಾರ ಯಾರಿಗೂ ಇಲ್ಲ ಆದರೆ ಸಾರ್ವಜನಿಕ ಜವಾಬ್ದಾರಿ ಇರುವುವವರು ಅನೇಕ ಖಾಸಗಿ ತೆವಲುಗಳನ್ನು ಸಹಿಸಿಕೊಳ್ಳಬೇಕು .
ಅಧಿಕಾರದ ಮದದಲ್ಲಿ ಇತಿಹಾಸವನ್ನು ಮರೆತು ಮಾಡಿದ ತಪ್ಪನ್ನೇ ಮಾಡುತ್ತಾರೆ.
ಈಗ history has repeated , ಪಕ್ಷ ಬೇರೆ ಅಷ್ಟೆ ಆದರೆ ಪ್ರಮಾದ ಒಂದೇ, ಇತಿಹಾಸದಿಂದ ಪಾಠ ಕಲಿಯದೇ ಅನಾಹುತ ಮಾಡಿಕೊಂಡಿದ್ದಾರೆ.
----ಸಿದ್ದು ಯಾಪಲಪರವಿ

Wednesday, November 9, 2016

ನಗುತಲಿರೋಣ

ನಗುತಲಿರೋಣ

ಸೋಲಿಗಾಗಲಿ ಗೆಲುವಿಗಾಗಲಿ
ನಗೆಯ ಕಸಿದುಕೊಳ್ಳುವ
ಅಧಿಕಾರ ನೀಡದೇ
ನಗುತಲಿರುವುದೇ ಜೀವನ.
ಗೆದ್ದರೆ ಅಸೂಯೆಯ ಮಾಯೆ
ಸೋತರೆ ಅನುಕಂಪದ ಛಾಯೆ
ನಗುತ ನಗಿಸುತ ಬಾಳುವ
ಹಂಗಿಲ್ಲದ ಸಿರಿಮನದ
ಅರಮನೆಯಲಿ.
----ಸಿದ್ದು ಯಾಪಲಪರವಿ

ಬಿಡಲಿಲ್ಲ

ಹೀಗೊಂದು ಕ್ಷಣ
ಎಷ್ಟೊಂದು ಆಹ್ಲಾದಕರ
ನನ್ನ ತೋಳ ಮೇಲಿನ
ನಿನ್ನ ಗಾಢ ನಿದ್ರೆ ಯ ಸದ್ದು
ಏರಿಳಿತದ ಉಸಿರು ಒಮ್ಮೆ
ಪ್ರೀತಿ ಸೆಲೆ ಹರಿಸಿದರೆ ಮತ್ತೊಮ್ಮೆ
ಕಾಮದಲೆ ಚಿಮ್ಮಿಸುತದೆ
ಪ್ರೇಮ ಕಾಮದ ಸವಿ ಸುಖ
ನೀ ನಿದಿರೆಯಲಿದ್ದಾಗಲೂ
ಬಿಡಲಿಲ್ಲವಲ್ಲ
ಎನ್ನ ಕಾಡುವದ!