Friday, May 25, 2018

ಕಾವ್ಯಾಮೃತ

ಕಾವ್ಯಾಮೃತ

ನೀ ಕೊಟ್ಟದ್ದು ವಿಷ ಎಂದು
ಗೊತ್ತಿದ್ದರೂ ಗಟ ಗಟನೆ ಕುಡಿದೆ
ನನ್ನ ಮೈತುಂಬ ನಿನ್ನೊಲವ ಅಮೃತವಿತ್ತು.

***

ನೀ ನಿಲ್ಲದೇ ಓಡಿ ಹೋಗುವೆ
ಇಲ್ಲದ ನೆಪ ಹೇಳಿ ಎಂದು
ಗೊತ್ತಿದ್ದೂ ನಂಬಿದೆ
ನಾ ಓಡಿ ಹೋಗುವುದಿಲ್ಲ
ಎಂಬ ನಂಬಿಗೆಯಿಂದ.

***

ಕನಸುಗಳಿಗೆ ಬಣ್ಣ ತುಂಬಿ
ಸುಂದರವಾದ ಚಿತ್ರ ಬಿಡಿಸಿ
ಹೆಸರು ಹಾಕದೆ ಮರೆಯಾದೆ
ಆಗಲೇ ಹೆಸರು ಅಚ್ಚೊತ್ತಿತ್ತು
ನನ್ನೆದೆಯ ಗೋಡೆಯಲಿ.

***

ಕಣ್ಣಲ್ಲಿ ಆಟ ಆಡಿದೆ ಮನದಲಿ
ತಳ ಹೂಡಿದೆ
ಶಬ್ದಗಳಲಿ ಮಾತು ಕೊಡದೆ
ನಿಶಬ್ದವಾದೆ
ಮಾತಿಗೆ ಮೀರಿದ ಮಮಕಾರದಿ
ಮರೆಯಾದೆ.

***

ಅಪರಿಚಿತಳಾಗಿ ಉಳಿಯುವ ಹುನ್ನಾರ
ಅರಿತೂ ನಿತಾಂತವಾಗಿ ಆಟವಾಡಿದೆ
ಮೊದಲೇ ಒಪ್ಪಿಕೊಂಡ ಸೋಲೆಂಬಂತೆ.

***

ಈ ಕಳ್ಳಾಟವೇ ಹೀಗೆ ತುಂಬಾ ರುಚಿ
ತಿನ್ನಲು ಬಾರದು ಬಿಡಲು ಬಾರದು
ತಿಂದುದ ಮೀರಿಸುವ ಅಪರಿಮಿತ ಸಿಹಿ.

***

ನೀ ಹೋದ ಮೇಲೆ ನಾ ಸುಖಿ
ಅಂದುಕೋ ಬೇಡ ಸಖಿ
ಚೂರಿದ ಗಾಯ ಮರೆಯಾಗದಿರಲಿ
ಎಂದು ನಿತ್ಯ ಕೆರೆಯುತಲಿರುವೆ.

***

ಹಗಲು ಕತ್ತಲೆ ಬೇಕೆನಿಸುತ್ತದೆ
ರಾತ್ರಿ ಹಗಲಾಗುತ್ತದೆ ನಿನ್ನ
ಬೆಳದಿಂಗಳ ಬೆಳಕಿನ ಹೊಳಪಲಿ
ಮರೆಯುವದಾದರೂ ಹೇಗೆ
ಈ ನೆಳಲು-ಬೆಳಕಿನಾಟದಲಿ.

***

---ಸಿದ್ದು ಯಾಪಲಪರವಿ

Tuesday, May 22, 2018

ನಿನ್ನಾಟ ಸಾಕು‌

ನಿನ್ನಾಟ ಸಾಕು

ಸುರ ಸುಂದರ ಚಿತ್ತಾರಗಳು
ಕಣ್ಣು ಕುಕ್ಕುವ ಸೌಂದರ್ಯ
ಗತಕಾಲದ ಬಣ್ಣದ ಬದುಕು
ಚಿಗುರು ಮೀಸೆಯ ಚಲುವನ ಸಾಮಿಪ್ಯ
ಅವನೊಡನೆ ಬಿಗಿದಪ್ಪಿ ಮುದ್ದಿಸಿದರೆ
ನನಗೇನು ?

ನಾ ನಾನು ನಾನೇ ನೀ
ನೀನೇ ಎಲ್ಲಿದ್ದರೇನು ಹೇಗಿದ್ದರೇನು
ಎನಗಿಲ್ಲದ ಎನದಲ್ಲದ ಸೊತ್ತು ನೀ
ಇರು ನಿನ್ನ ಪಾಡಿಗೆ ಎನ್ನ ಕೆಣಕದೇ

ನನಗೆ ಗೊತ್ತು ನನ್ನ ಮೇಲೆ ನೀ
ಹೊಂದಿರುವ ಅಪಾರ ಪ್ರೇಮ ಅದ
ಮುಚ್ಚಿ ಮರೆಮಾಚುವ ಹುಸಿ ತಂತ್ರಕೆ
ಬೆಚ್ಚಿ ಬೀಳಲಾರೆ ಅತ್ತು ದುಃಖಿಸಲಾರೆ
ನೋವನರಿಯದವರೊಡನೆಯ ಸಂಗ
ಸುಮ್ಮನೇ ಗರ್ವಭಂಗ

ಹೇಳಿದ್ದೇನೆ ತೋರಿದ್ದೇನೆ ಎದೆ ಬಗೆದು
ನನ್ನಾಸೆಯ ವ್ಯಾಮೋಹವ

ನಟ್ಟ ನಡು ರಸ್ತೆಯಲಿ ನಿರ್ದಯವಾಗಿ
ಬಿಟ್ಟು ಹೋದವರ ಆಳದರಿವು ಕಾಣಲಾಗದೆ ?

ನಿನ್ನ ಹುಚ್ಚಾಟಗಳ ಅರಿತೂ ಅರಿಯದಂತೆ
ಕಂಡೂ ಕಾಣದಂತೆ
ಮುಂದೆ ಸಾಗುವೆ
ವಾಸ್ತವದಲೆಗಳ ಮೇಲೆ ಭಾವನೆಗಳ
ಸವಾರಿ ಮಾಡುತ್ತ ಮಾಡುತ್ತ.

---ಸಿದ್ದು ಯಾಪಲಪರವಿ

Saturday, May 19, 2018

ಜಗದ ಸುಖ ತಾಯಿ-ಮಗು

*ಜಗದ ಸುಖ ತಾಯಿ-ಮಗು*

ವಿಸ್ಮಯದ ದಿವ್ಯಾಘಾತ ಅಂಗಾಂಗಳ
ಸಂಗದಲಿ ಅನನ್ಯ ಭಿನ್ನ ಭಾವ

ನೆಚ್ಚಿನ ಪುರುಷನಿಗೆ ಒಡ್ಡುವ
ಅಂಗಾಂಗಳಲಿ
ಇನ್ನಿಲ್ಲದ ಕಾಮೋದ್ರೇಕದ
ಪರಮ ಸುಖ

ಹಿಂಡಿ ಹಿಪ್ಪೆಯಾದ ಮೃದು ಎದೆ
ಮೇಲೆ
ಹಿತಕರ ಹಿಂಸೆ
ಆದರೂ
ಮೈಮನಗಳ ಕೆರಳಿ ಅರಳಿ ಅಗಲುವ
ತೊಡೆಗಳ ಸಂಚಲನ ಸೀಳಿ ನುಗ್ಗುವ
ಪುರುಷೇಂದ್ರಿಯ ರಭಸದ
ಸಂಘರ್ಷದ ಪ್ರತಿಫಲ

ತಾಯಿ ಭಾಗ್ಯ

ಮಗುವಿನ ಮಿಲನದ
ಸುಖವೇ
ಭಿನ್ನ ವಿಭಿನ್ನ

ಕಾಮದ ಸುಳಿವು ಮಾಯ

ಮಗುವಿನ ಮೊಲೆ ಉಣಿಸುವ
ಭರದಲಿ ಇಲ್ಲ
ಪುರುಷನ ಕಾಮ ಬಿಂಬ

ಅಂಗ ಅದೇ
ಸಂಗ ಬೇರೆ
ನಿಷ್ಕಾಮ ಮಮತೆ

ತೊಡೆಯಲರಳಿದ ಕಮಲವಾದರೂ ಕಾಮಿಯಲ್ಲ
ವಾತ್ಸಲ್ಯದ ಅರಗಿಣಿ

ಹೆಣ್ಣೊಂದು �ಮಹಾ ವಿಸ್ಮಯ
ಅದೇ ದೇಹದ ಅಂಗಾಂಗಳ
ಮೇಲೆ ಅಪರಿಮಿತ
ಹಿಡಿತ

*ನೆಚ್ಚಿನ ಪುರುಷನಪ್ಪುಗೆಯಲಿ ಕಾಮ
ಮುದ್ದು ಮಗುವಿನಪ್ಪುಗೆಯಲಿ ನಿಷ್ಕಾಮ*

ಶರಣು ತಾಯೇ ಶರಣು ನಿನ್ನ ಬೆತ್ತಲ
ಮಹಿಮೆಯ ಮಹಾಮಾಯೆಯ
ದಿವ್ಯ ಪಾದಕೆ.

---ಸಿದ್ದು ಯಾಪಲಪರವಿ.

ಪ್ರೀತಿ ಪರಮಾಪ್ತ ಆದರೆ ಭಕ್ತಿ ಪರಮಾತ್ಮ

*ಪ್ರೀತಿ ಪರಮಾಪ್ತ ಆದರೆ ಭಕ್ತಿ ಪರಮಾತ್ಮ*

ಪ್ರೀತಿ ನದಿಯಂತೆ ಕೆಳಮುಖವಾಗಿ ಶಾಂತವಾಗಿ ಹರಿದು ಸಮುದ್ರ ಸೇರಿ‌ ಮುಕ್ತಿ ಹೊಂದಿ ಲೀನವಾಗುತ್ತದೆ.

ಎಷ್ಟೇ ಕಷ್ಟ,ಅಡೆ ತಡೆ ಬಂದರೂ ಹರಿಯುವುದು ಮಾತ್ರ ನಿಲ್ಲುವುದಿಲ್ಲ.

ಕಲ್ಲು-ಮುಳ್ಳು,ಕಾಡು-ಬೆಟ್ಟ,ಮನುಷ್ಯ-ಪ್ರಾಣಿಗಳ ಸ್ಪರ್ಷಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸುತ್ತ ಸಾಗಿಯೇ ಸಾಗುತ್ತದೆ. ಪ್ರೀತಿಯಿಂದ ಹರಿಯುವುದು ಮಾತ್ರ ನಿಲ್ಲುವುದಿಲ್ಲ.

ತನ್ನ ಮೂಲ ನೆಲೆಬಿಟ್ಟು, ದೂರ ಬಹುದೂರ ಹರಿಯುತ್ತಲೇ ಸಹನೆ ರೂಪಿಸಿಕೊಳ್ಳುತ್ತದೆ.
ಪ್ರೀತಿಯೂ ಹಾಗೇಯೇ ಎಲ್ಲ ಸಂಕಷ್ಟ ಎದುರಿಸಿ ಸುಖದ ಹಾದಿ ಹಿಡಿಯುತ್ತದೆ.

ನಿರ್ಮಲ ಪ್ರೀತಿಗೂ ನದಿಗಿರುವ ಸಹಿಸುವುಕೆ ಅನಿವಾರ್ಯ. ಏಕೆಂದರೆ ಅದೂ ದಡ ಸೇರಲೇಬೇಕು. ಹಾಗೆ ಸೇರುತ್ತದೆ ಕೂಡಾ!

ಪ್ರೀತಿಗೆ ಅನೇಕ ಬಗೆಯ ತಡೆಗಳು,ವಿಘ್ನಗಳು ಹಾಗಂತ ಪ್ರೀತಿಸುವುದನ್ನು ಬಿಡಲಾಗದು, ಹರಿಯುವ ನದಿಯಂತೆ.

                              ***

ಭಕ್ತಿಯೂ ನದಿಯಂತೆ ಆದರೆ ಅದು ಮೇಲ್ಮುಖವಾಗಿ ಹರಿದು ಸಮುದ್ರದಿಂದ ಮೂಲ ಸ್ಥಾನ ಸೇರುತ್ತದೆ. ಅದೇ ಪ್ರೀತಿಗೂ ಭಕ್ತಿಗೂ ಇರುವ ಬಹುದೊಡ್ಡ ಅಂತರ. ಉದ್ದೇಶ ಒಂದೇ. ರೀತಿ ಬೇರೆ,ಬೇರೆ.

*ಪ್ರೀತಿ ನದಿಯಂತೆ ಕೆಳಮುಖವಾಗಿ ಹರಿದು ಸಮುದ್ರ ಸೇರಿದರೆ,ಭಕ್ತಿ ಮೇಲ್ಮುಖವಾಗಿ ಹರಿದು ಮೂಲ ಸ್ಥಾನ ಅಂದರೆ ದೇವರ ಸನ್ನಿಧಿ ಸೇರುತ್ತದೆ*

ಮನುಷ್ಯನೂ ಅಷ್ಟೇ ತನ್ನ ಒಳ್ಳೆಯತನದಿಂದ ಪ್ರೀತಿಸುತ್ತಾನೆ.ಪ್ರೀತಿಸುವ ಹಾಗೂ ಪ್ರೀತಿಸುವ ವ್ಯಕ್ತಿಗಳಿಗೆ ಪರಮಾಪ್ತನಾಗುತ್ತಾನೆ.

ನಿಷ್ಕಾಮ‌ ಪ್ರೀತಿಯೂ ಭಕ್ತಿಯ ಮೂಲವೇ.ಆದರೆ ಭಕ್ತಿ ಮಾರ್ಗ ನೀಡುವ ಧನ್ಯತೆಗೆ ಮುಪ್ಪೇ ಇಲ್ಲ.

ಪ್ರೀತಿ ಕೆಲವೊಮ್ಮೆ ದೇಹ ಅವಲಂಬಿತವಾದರೆ ಭಕ್ತಿ ಆತ್ಮಾವಲಂಬಿತ.
ಎರಡಕ್ಕೂ ಮೈಮನಗಳ ನಿಷ್ಟೆ ಹಾಗೂ ಸದೃಢತೆ ಅಗತ್ಯ.

ನಿಸ್ವಾರ್ಥದಿಂದ ಪ್ರೀತಿಸಲಾಗದ ಮನಸು, ಶ್ರದ್ಧೆಯಿಂದ ಪೂಜಿಸಲೂ ಆಗದು.

ನಿಸ್ವಾರ್ಥ ಎರಡರಲ್ಲೂ ಬೇಕು ಹರಿಯುವ ಜೀವ ಜಲದಂತೆ.

ಪ್ರೀತಿಸಿ ವ್ಯಕ್ತಿಗಳ ಒಲವು ಅನುಭವಿಸಿದರೆ, ಭಕ್ತಿಯಿಂದ ಭಗವಂತನ ಸಾನಿಧ್ಯದ ಧನ್ಯತೆ ಅನುಭಾವಿಸುತ್ತೇವೆ.

ಪ್ರೀತಿಮಾರ್ಗದಿಂದ ಭಕ್ತಿಮಾರ್ಗದೆಡೆಗೆ ಸಾಗೋಣ.

ಬಸವಪ್ರಜ್ಞೆ-ಜೋಳಿಗೆಯ ಹರಿಕಾರ

*ಬಸವಪ್ರಜ್ಞೆ-ಜೋಳಿಗೆಯ ಹರಿಕಾರ: ಮಹಾಂತ ಅಪ್ಪಗಳು*

ಇಲಕಲ್ಲಿನ ಪೂಜ್ಯ ಮಹಾಂತ ಅಪ್ಪಗಳು ದೈಹಿಕವಾಗಿ ದೂರವಾದರಷ್ಟೇ.

ಬಾಲ್ಯದಿಂದ ಮನದ ಮೇಲೆ ಮರೆಯಲಾಗದ ಪ್ರಭಾವಳಿ. ಬಸವಪ್ರಜ್ಞೆ ಬಿತ್ತಿ ಬೆಳೆಸಿ, ಭಾಷಣ ಮಾಡಲು ಕರೆದು ವೇದಿಕೆಯನೇರಿಸಿ ಹರಸಿದವರು.

ಮೊದಲ ಸಾರ್ವತ್ರಿಕ ಕಾರ್ಯಕ್ರಮ 90 ರ ದಶಕದಲಿ.

ಈಗ ಸಾವಿರದ ಗಡಿ. ನನ್ನ ವಚನ ಚಳುವಳಿಯ ಮಾತು ಮಂಥನ ಚಿಂತನೆಗೆ.

ಪೂಜ್ಯರದು ಮುಖವಾಡವಿಲ್ಲದ ಬಸವ ನಿಷ್ಟೆ. ಅಂಜದ ಅಳುಕದ  ಚೇತನ.

ಉತ್ತರಾಧಿಕಾರಿ ವಿಷಯವಾಗಿ ತೆಗೆದುಕೊಂಡ ನಿರ್ಣಯ ಅವಿಸ್ಮರಣೀಯ.

ಪಂಪಿಗಳ ಕೆರಳಿಸಿದ ಮೊಟ್ಟ ಮೊದಲ ಘಟನೆ.
ಕಲ್ಲುಗಳ ತೂರಾಟದಂಥ ಹೀನ ಕೆಲಸ.
ಆಚಾರ-ವಿಚಾರಗಳಲಿ ಕಟ್ಟರ್ ನಿಲುವು. ಮಾತೂ ಹಾಗೆ.ಒಮ್ಮೊಮ್ಮೆ ನುಂಗಲಾಗದ ಬಿಸಿ ತುಪ್ಪ.

                            ***

ನನ್ನ ಮದುವೆಯ ಘಟನೆ ನೆನಪಾಗುತ್ತದೆ.
ಸಂಪ್ರದಾಯವಾದಿಗಳು ಇಲಕಲ್ ಅಜ್ಜಾ ಅವರು ಬರುವದರೊಳಗೆ ಸುರಗಿ ಸುಡುಗಾಡು ಮಾಡಿ ತಮ್ಮ ಹಟ ತೀರಿಸಿಕೊಂಡರು.

ಅಜ್ಜಾ ಅವರು ಬಂದ ಮೇಲೆ ಎಂದಿನಂತೆ ಹೂ ಹಾಕಿ ಶರಣ ಪರಂಪರೆಯ ಕಲ್ಯಾಣದ ಸೋಗು.
ನಾನು ಅಸಹಾಯಕ. ಸಹಿಸಿಕೊಂಡೆ.

ಮದುವೆ ಮುಗಿದ ಒಂದೇ ವಾರದಲ್ಲಿ ಬಾಗಲಕೋಟೆಯ ಶಿರೂರಿನಲ್ಲಿ ಶಿವಾನುಭವ ತರಬೇತಿ ಶಿಬಿರ.
ನಾನು ಸಂಪನ್ಮೂಲ ವ್ಯಕ್ತಿ. ಒಳಗೊಳಗೆ ಇನ್ನಿಲ್ಲದ ಪಾಪಪ್ರಜ್ಞೆ.

*ಎನ್ನ ತಪ್ಪು ಅನಂತ ಕೋಟಿ ನಿಮ್ಮ ಸೈರಣೆಗೆ ಲೆಕ್ಕವಿಲ್ಲ* ಎನ್ನುತ್ತಲೇ ಮಾತನಾಡುತ್ತ ವಾರದ ಹಿಂದಿನ ನನ್ನ ಮದುವೆಯ ಅಪರಾಧ ಒಪ್ಪಿಕೊಂಡೆ.

*ಪೂಜ್ಯರ ಕಣ್ಣಾಲೆಯಲಿ ನೀರು*
'ಕ್ಷಮಿಸಿದೆ ಮಗನೇ' ಎಂಬಂತೆ.

ಅವರಿಗೂ ವಿಷಯ ಗೊತ್ತಿದ್ದರೂ ಹೇಳದೇ ಸಹಿಸಿಕೊಂಡು, ನಾನು ಒಪ್ಪಿಕೊಳ್ಳುತ್ತೀನೋ ಇಲ್ಲವೋ ಎಂಬ ಕುತೂಹಲ.
ಒಪ್ಪಿಕೊಂಡ ಕೂಡಲೇ ಭಾವುಕರಾದರು.

ನಿರಂತರ ಒಡನಾಟ. ಅನೇಕರು ನನ್ನ ಬಗ್ಗೆ ಪೂಜ್ಯರಿಗೆ ದೂರಿದರು.

*ನಾನು ಇಷ್ಟಲಿಂಗ ಪ್ರೇಮಿಯಲ್ಲ ಲಿಂಗ ಧಾರಣೆ,ಲಿಂಗ ಪೂಜಕನಲ್ಲ ಇತ್ಯಾದಿ ಇತ್ಯಾದಿ...*

ಹೌದು ಈಗಲೂ ಅಷ್ಟೇ ತೋರಿಕೆಯ ಬಸವ ನಿಲುವು ನನ್ನದಲ್ಲ.
ಅಪ್ಪಟ ಬಸವಪ್ರಜ್ಞೆ.

ಒಲವು, ನಿಲುವು, ಭಕ್ತಿ, ಭಾವ. ಎಲ್ಲದರಲ್ಲೂ.
ಅದಕೆ ಕಾರಣ ನೀವೇ. ನಿಮ್ಮ ಕ್ಷಮಾ ಗುಣ.*ತಾಯಿ ಪ್ರೀತಿ ಮರೆಯಲಾದೀತೇ?*

                            ***

ನಾಲ್ಕಾರು ತಿಂಗಳ ಹಿಂದೆ ಅನಾರೋಗ್ಯದ ಸ್ಥಿತಿಯಲ್ಲೂ ಅದೇ ವಾತ್ಸಲ್ಯ ತೋರಿ ಹೆಸರು ಉಂಡಿ ತಿನಿಸಿದರು.

                             ***

*ಗುರುಮಹಾಂತ ಅಪ್ಪಗಳ‌ ಸೇವೆಯೂ ಅನನ್ಯ*
ಪೂಜ್ಯರನ್ನು ಮಗುವಿನಂತೆ ಜೋಪಾನ ಮಾಡಿದರು.

ಅವರ ಶ್ರದ್ಧೆ ಅನುಪಮ. ಅವಿಸ್ಮರಣೀಯ.

ಶ್ರೀಗಳು ಹಾಕಿಕೊಟ್ಟ ಹಾದಿಯಲ್ಲಿ ಸಾಧ್ಯವಾದಷ್ಟು ನಡೆಯುವ ಶಕ್ತಿ, ತಾಕತ್ತು ಉಳಿದರೆ ಸಾಕು.

ನಿಮ್ಮ ಆಶಿರ್ವಾದ ನಮ್ಮ ಮೇಲೆ ಇದ್ದೇ ಇದೆ. ಅದಕ್ಕೆ ಇನ್ನೂ ಜೀವಂತವಾಗಿದ್ದೇವೆ. ಇರುತ್ತೇವೆ ಕೂಡಾ.

ನೀವು ಅಷ್ಠೇ.  ಈಗ ದೈಹಿಕ ನಿರ್ಗಮನ. ಮೌಲಿಕ ಚೈತನ್ಯವಾಗಿ ಸದಾ ನಮ್ಮ ಒಡಲೊಳಗೆ.

ಈಗಲೂ ನಾವು ಸ್ವಾರ್ಥಿಗಳು. ತಮ್ಮ ಕೃಪೆ ಸದಾ ನಮ್ಮ ಮೇಲಿರಲಿ ಎಂದೇ ಬೇಡುತ್ತೇವೆ.

*ಶರಣರಿಗೆ ಮರಣವೇ ಮಹಾನವಮಿ*
*ಭಕ್ತರಿಗೆ ನಿಮ್ಮ ನೆನಹೆ ಶಿವರಾತ್ರಿ*

        *ಸಿದ್ದು ಯಾಪಲಪರವಿ*

Wednesday, May 16, 2018

ಖಾಲಿತನ-ಧ್ಯಾನ ಮತ್ತು ಏಕಾಂತ


*ಖಾಲಿತನ-ಧ್ಯಾನ ಮತ್ತು ಏಕಾಂತ*

ತುಂಬಾ ಆತ್ಮೀಯರು, ಇನ್ನರ್ ಸರ್ಕಲ್ ನಲ್ಲಿ‌ ಇದ್ದವರೂ ಅರಿವಿಲ್ಲದಂತೆ ನೋಯಿಸಿಬಿಡುತ್ತಾರೆ ಯಾವುದೇ ದುರುದ್ದೇಶವಿಲ್ಲದೇ.

ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ನಮ್ಮನ್ನು ಕಿತ್ತು ತಿನ್ನುತ್ತವೆ. ಹತ್ತಿರವಿದ್ದವರು ಬೇಗನೇ ಆರೋಪಿಸಿಬಿಡುತ್ತಾರೆ.

ನಾವೇ ಸರಿ ಎಂಬ ಅಹಮಿಕೆಯಲಿ ಮನಸು ಮುರಿಯಬಾರದು. ಹಾಗೆ ಮುರಿಯುವ ಪ್ರಸಂಗ ಎದುರಾದಾಗ ಯಾರಾದರು ಒಬ್ಬರು ಮೌನವಹಿಸಬೇಕು‌‌.

ಆದರೆ ಕೆಲವೊಮ್ಮೆ ಮೌನ ಮುರಿಯುವ ಅನಿವಾರ್ಯತೆ. ಮುರಿಯುವ ಮನಸು ಮುರಿಯದಂತೆ ಎಚ್ಚರವಹಿಸಬೇಕು.

ಆ ತಲ್ಲಣ ಚಡಪಡಿಕೆ ಒಮ್ಮೆಲೇ ತಣ್ಣಗಾಗುವುದಿಲ್ಲ.
ತಣ್ಣಗಾಗಲಾರದು.

ಸರಿ, ತಕ್ಷಣದ ಶಮನಕೆ ಜಾಗ ಬದಲಿಸಬೇಕು.
ಆ ಜಾಗದಲಿ ನಮ್ಮ ವಾದವನು ಸಮರ್ಥಿಸುವ ಅಥವಾ ಅಲ್ಲಗಳೆಯುವ ಜನರ ಮಧ್ಯೆ ಇರಬಾರದು.‌

ನಾವೇ ಏಕಾಂತವಾಗಿದ್ದುಕೊಂಡು ಸರಿ ತಪ್ಪುಗಳ ಆತ್ಮಾವಲೋಕನಕಿಳಿಯಬೇಕು.

ಏಕಾಂತದಲಿ ಮನಸನು ಪೊಸೆಟಿವ್ ಆಲೋಚನೆಯಲ್ಲಿ ತೊಡಗಿಸಬೇಕು.

' ನಮ್ಮ ಅಭಿಪ್ರಾಯಗಳನ್ನು ಪ್ರಶ್ನಿಸಿ ವಿರೋಧಿಸಿದವರನ್ನು ನೀಚರು, ಅಧಮರು' ಎಂದು ಬೈಯುತ್ತ ಹಲ್ಲು ಕಡಿಯಬಾರದು.

ಎಲ್ಲರೂ ಅವರವರ ನೆಲೆಯಲ್ಲಿ ತಪ್ಪಿದ್ದರೂ ಸರಿ ಎಂದೇ ಆಲೋಚಿಸಿ ತಪ್ಪು ಮಾಡುತ್ತಾರೆ.

ಆತ್ಮೀಯರ ಭಿನ್ನ ವಿಚಾರಧಾರೆಗಳ‌ ಸಹಿಸುವ ಮನಸ್ಥಿತಿ ರೂಪಿಸಿಕೊಳ್ಳಲು *ಏಕಾಂತ* ನೆರವಾಗುತ್ತದೆ.

                             ***

ಹಾಗಾದರೆ ಏಕಾಂತದಲಿ‌ ಏನು‌ ಮಾಡಬೇಕು. ಏಕಾಂತ ಒಂಟಿತನವೆನಿಸಿ ಇನ್ನೂ ಹಿಂಸೆಯಾದರೆ?

ಹಾಗಾಗಲು ಬಿಡಬಾರದು. ನಮಗಿಷ್ಟವಾದ ಮನೋಲ್ಲಾಸ ಹೆಚ್ಚಿಸುವ ಪುಸ್ತಕ ಓದಬೇಕು.
ಓದುವ ಹವ್ಯಾಸ ಇರದಿದ್ದರೆ ಸಂಗೀತ ಆಲಿಸಬೇಕು.
ಮನೋರಂಜನಾತ್ಮಕ ಸಿನೆಮಾ ನೋಡಬೇಕು.

ಧ್ಯಾನ ಮಾಡುವ ಪ್ರವೃತ್ತಿ ಇದ್ದರೆ ದೀರ್ಘಕಾಲದ ಧ್ಯಾನ ಮಾಡಬೇಕು. ಧ್ಯಾನಸ್ಥ ಸ್ಥಿತಿ ನಮ್ಮ ಆಲೋಚನಾ ದಿಕ್ಕನ್ನೇ ಬದಲಿಸಿ ಮನಸನ್ನು ಪ್ರಫುಲ್ಲಗೊಳಿಸುತ್ತದೆ.

ಏಕಾಂತದಷ್ಠೇ ಪ್ರಿಯವಾಗುವ ಸಂಗಾತಿಗಳ ಸಾಮಿಪ್ಯ ಸುಖ ಇನ್ನೂ ಉತ್ತಮ. ಆದರೆ ಆ ಸಂಗಾತಿಗಳು 'ನೀನು ಮಾಡಿದ್ದು ಸರಿಯಲ್ಲ' ಎಂಬ ಅಪ್ರಿಯ ಹಿತೋಪದೇಶ ಮಾಡುವ ಮನೋಭಾವ ಹೊಂದಿರದೇ ನಾವು ಮಾಡಿದ್ದೇ ಸರಿ ಎಂದು ಒಪ್ಪಿಕೊಳ್ಳುವ ಉದಾರಿಗಳಾಗರಬೇಕು.

ಮೈಮನಗಳಿಗೆ ಚೈತನ್ಯ ತುಂಬುವ ಪಾರ್ಟನರ್ ಆಗಿದ್ದರೆ ಇನ್ನೂ ಎಕ್ಸಲೆಂಟ್. ಮೈಮನಗಳ ಹಗುರಾಗಿಸುವ ಸಾಮಿಪ್ಯ ಇದಾಗಿರಬೇಕು.ಮತ್ತಿಷ್ಟು ಭಾರ ಹೆಚ್ಚಿಸಬಾರದು‌.

*ಗಾನ-ಧ್ಯಾನ-ಕಾಮ‌* ಸೂತ್ರ ಸೂಕ್ಷ್ಮಾತಿ ಸೂಕ್ಷ್ಮ. ಸಹ್ಯವಿರದಿದ್ದರೆ ಮಾತ್ರ ಹಿತಕರ. ಇಲ್ಲದಿರೆ ಇನ್ನೂ ಅಸಹ್ಯ.

*ಹಾಡಿದರೆ ಎನ್ನೊಡೆಯನ ಹಾಡುವೆ
ಬೇಡಿದರೆ ಎನ್ನೊಡೆಯನ ಬೇಡುವೆ
ಒಡೆಯಂಗೊಡಲ‌ ತೋರಿ ಬಡತನವ
ಬಿನ್ನಹಿಸುವೆ* ಎಂಬ ಅಣ್ಣನ ವಚನದ ಸಾಲುಗಳ ಧೇನಿಸುತ ಒಂದೆರಡು ದಿನ ಕಾಲ ಕಳೆದು ಮತ್ತೆ ಯಥಾಪ್ರಕಾರ ನಮ್ಮ ಗೂಡ ಸೇರೋಣ.

ಇನ್ನರ್ ಸರ್ಕಲ್ ನವರು ಹೊರಗೆ ಹೋಗಿದ್ದಾರೆ  ಅನಿಸಿದರೆ ಒಳಗೆಳೆದು ಕಟ್ಟಿ ಹಾಕೋಣ.‌

     *ಜಾಯ್ ಫುಲ್ ಲಿವಿಂಗ್‌*

          *ಸಿದ್ದು ಯಾಪಲಪರವಿ*

      

Tuesday, May 15, 2018

ಕಣ್ಣೋಟದ ಕಾವ್ಯಾರಾಧನೆ


*ಕಣ್ಣೋಟದ ಕಾವ್ಯಾರಾಧನೆ*

ನೋಡಬೇಕು ನೋಡದಂತೆ ಎನಲಾದೀತೇ
ಹೀಗೆ ನೋಡಿದ ಮೇಲೆ ನೋಡದಿರಲಾದೀತೇ

ಉತ್ತರಿಸಲಾಗದ ಪ್ರಶ್ನೆಗಳಿಗೆ ಮನ ಸೋಲದೇ
ಇರಲಾದೀತೇ
ಕೇಳುವ ಮಾಟದೊಳು ಮೈಮರೆತರೂ ಎಚ್ಚರ
ತಪ್ಪಲಾದೀತೇ

ಆಡುವ ಮಾತಿನ ಮಂಥನದಿ ಬರೆದ
ಮುನ್ನುಡಿ ನುಣುಚಿಕೊಳ್ಳಲಾದೀತೇ

ಬದುಕ ಬವಣೆಯಲಿ ಬೇಯದೇ ಒಳಗೊ
ಳಗೆ ಕುದಿಯಲಾದೀತೇ

ಬೇಕು ಬೇಕೆಂಬ ಹಟ ಮಾಡದೇ ಪಡೆಯುವ
ತವಕವ ದೂರ ದೂಡಲಾದೀತೇ

ನೋಡ ಬೇಡವೆನಲು ನಾ ಯಾರು ನನಗಿದರ
ಹಂಗಿಲ್ಲದೆ ಜಾರಲಾದೀತೇ

ಬದುಕೊಂದು ಅರ್ಥವಾಗದ ಗಪದ್ಯ
ಆದರೂ ಓದದೇ ಇರಲಾದೀತೇ

ಅರಿಯುವ ಬೆರೆಯುವ ಬರಯುವ
ಮರೆಯುವ ಮಾತ ಮರೆತು ಒಲಿದಂತೆ
ಹಾಡಿ ಕೂಡಿ ನಲಿದು ಅವನಣತಿಯ
ತಿರುಳನರಿತು ಒಳಗೊಳಗೆ ಕರಗಿದರೂ
ನೀರಾಗದೇ ನಿರಾಶೆಯ ದೂರ ದೂಡಿ

ಸಾಗುತಲೇ ಇರೋಣ ಮೆಲ್ಲ ಮೆಲ್ಲಗೆ
ಮೆಲ್ಲುಸಿರ ಕಾವ್ಯಸಿರಿಯ ಹೂದೋಟದ
ಕಂಪಿನ ಇಂಪಿನ ಸವಿಗಾನದಲಿ.

       *ಸಿದ್ದು ಯಾಪಲಪರವಿ*