Sunday, July 2, 2017

ಒಮ್ಮೆ ಪಡೆಯೋಣ

ಒಮ್ಮೆ ಪಡೆಯೋಣ

ರಾಜಮಾರ್ಗದಲಿ ನಡೆಯುವಾಗ
ನೂರೆಂಟು ಅಡೆತಡೆಗಳು
ಬೇಕಿದ್ದ ಪಡೆಯಲು ಕಳ್ಳ
ಹಾದಿ ಬೇಡ ಬದುಕಿನ ಬೆಲೆ
ಇರುವುದು ಕೊನೆಯ ಅಧ್ಯಾಯದಲಿ

ಇರುವವರು ಇರುತ್ತಾರೆ ಹೋಗುವವರು
ಹೋಗುತ್ತಾರೆ ತಡೆಯಲಾಗದು
ಯಾರನೂ

ಇರಲಿ ಬರಲಿ ಮುದ ನೀಡಲಿ
ಎಂಬ ಹಟ ಬೇಡ
ಎಲ್ಲವೂ ಎಲ್ಲರೂ ದಕ್ಕಲಿ
ಎಂಬ ದಾಹವೂ ಬೇಡ

ಸಿಹಿ ಕನಸುಗಳು ಸವಿ ಸಂಬಂಧಗಳ
ಬೆಸುಗೆ ಮುಳ್ಳಾಗದಿರಲಿ ಬಾಳಿಗೆ
ಎಲ್ಲದನು ನಿಭಾಯಿಸುವ ಭರದ
ನಡಿಗೆಯಲಿ ಎಡುವದೇ ಮುಂದೆ
ಸಾಗೋಣ

ದೇವನೊಲುಮೆಯ ಜಗದಲಿ ಸಿಗುವುದು
ಸಿಕ್ಕೀತು ದಕ್ಕುವುದು ದಕ್ಕೀತು

ಒಲ್ಲೆನೆಂಬ ಇಲ್ಲದ ವೈರಾಗ್ಯ ಒಲವ
ಕಸಿದೀತು ಇರಲಿ ಒಂದಿನಿತು ಅರಿವು
ಸಿಕ್ಕುದ  ಕಳೆದುಕೊಳ್ಳದ ಹಾಗೆ

ಬಾಳೊಂದು ಯುಗಳ ಗೀತೆ ಒಂಟಿಯಾಗಿ
ಹಾಡಲಾಗದು ರಾಗ ತಾಳ ಮೇಳೈಸಿದರೆ
ಹಾಡುವುದು ಅನಿವಾರ್ಯ ಮುಂದೆ ಸಾಗಲು

ಅರಿವಿನೆಚ್ಚರದಲಿ ನೆಚ್ಚಿದವರನು ಬೆಚ್ಚಿ
ಬೀಳಿಸದೇ ಸಾಗುತಿರಲಿ ಜೀವನ

ಮನಸು ಮಲ್ಲಿಗೆಯ ಸುವಾಸನೆಯ
ತಡೆಯಲಾಗದು ಬೇಡವಾದುದ
ಮೂಸಲಾಗದು ಆದರೆ ಮೂಗ
ಕೊಯ್ಯಲಾದೀತೆ ?

ನನ್ನ ಪ್ರಶ್ನೆಗಳಿಗೆ ನನ್ನ ಬಳಿ
ಉತ್ತರಗಳೂ ಇವೆ ಮತ್ತೆ ಪ್ರಶ್ನೆ ಬೇಡ

ಬೇಕು-ಬೇಡ ಜೀಕಾಟದಲಿ ಒಮ್ಮೆ
ನಿಲ್ಲಲೇಬೇಕು ನಿಂತು ದೇವನೊಲುಮೆಯ
ಒಲವ ಪಡೆದು ಮುಂದೆ ಸಾಗೋಣ

ಮತ್ತೆ ಮತ್ತೆ ಮತ್ತೆ ಬಯಸದೇ
ಒಮ್ಮೆಯೇ ಪಡೆಯೋಣ
ಪಡೆದುದಲಿ ಸಂತೃಪ್ತಿ ಹೊಂದೋಣ.

---ಸಿದ್ದು ಯಾಪಲಪರವಿ

ಕಾವ್ಯಸಿರಿಯ ಕಲರವ

* ಲವ್ ಕಾಲ *

ಕಾವ್ಯಸಿರಿಯ ಕಲರವ

ಸುಂದರ ನಗು ಮೋಹಕ ಸಿರಿಗೆ ಬೆರಗಾಗಿರಬಹುದು ಆದರೆ ಅನಿಸಿದನು ನೇರವಾಗಿ ಹೇಳಿದಾಗ ನೀ ಒಪ್ಪಿಕೊಂಡದ್ದು ಅಷ್ಟೇ ಅಪ್ಯಾಯಮಾನ . ಮಾತುಕತೆ , ಹರಿದು ಬಂದ ಹತ್ತಾರು ಕವನಗಳಿಗೆ ನೀ ಉನ್ಮಾದಗೊಂಡದ್ದೂ ಸುಳ್ಳಲ್ಲ. ಪರಸ್ಥಿತಿ ಕೈಮೀರಿ ನೀ ನನ್ನಲಿ ಕಳೆದುಹೋಗುವೆ ಎಂಬ ಅನುಮಾನ ಬಂದ ಕೂಡಲೇ...

ದೂರಾಗುವ ಸುಳಿವು. ಅಕ್ಷರ ಲೋಕದ ಗೆಳೆತನದ ಹಂಗಾಮಾವೇ ಹೀಗೆ , Very deep but short.
ಮನೆತನದ ಜವಾಬ್ದಾರಿ , ಗಂಡ-ಮಕ್ಕಳ possessiveness ಬಗ್ಗೆ ನೂರೆಂಟು ವಿವರಣೆ.

ಕೇಳಿಸಿಕೊಳ್ಳಬೇಕಲ್ಲ ಆದ್ದರಿಂದ ಕೇಳಿಸಿಕೊಂಡೆ. ನೀನು ಅಷ್ಟೇ ನನ್ನ ಶಬ್ದಗಳಲಂಕಾರದ ಮಾಲೆಯ ಗುಟ್ಟಾಗಿ ಧರಿಸಿ ನನ್ನೊಂದಿಗೆ ಸಂಭ್ರಮಿಸಿದೆ. ಒಂದೆರಡು ಬಾರಿ Skype ನಲ್ಲಿ ಕೊಟ್ಟ ದರ್ಶನಕೆ ಹುಟ್ಟಿಕೊಂಡ ಕವನ ಕೇಳಿ ಉಬ್ಬಿ ಹೋದದ್ದನ್ನು ನಾನು ಗಮನಿಸಿಲ್ಲ ಅಂದುಕೊಳ್ಳಬೇಡ.

ಸಾಮಾಜಿಕ ಕಟ್ಟುಪಾಡು , ಸಾಂಸಾರಿಕ ಜವಾಬ್ದಾರಿ ಇಂತಹ ನೂರೆಂಟು ಸಂಬಂಧಗಳನ್ನು ನುಂಗಿ ಹಾಕಿಬಿಡುತ್ತವೆ. 'ನಮ್ಮೂರಿಗೆ ಬಾ ಎಂದಿದ್ದೆ ' ಬಂದಿದ್ದೇನೆ .
ಆದರೆ ನೀ ಬರುವುದಿಲ್ಲ ಎಂದು ಗೊತ್ತಿದೆ.

ನಿರಪೇಕ್ಷ ಭಾವದ  ಸ್ನೇಹವೇ ಹಾಗೆ ಎಲ್ಲ ಆಘಾತಗಳನ್ನು ಸಹಿಸಿಕೊಳ್ಳುತ್ತದೆ , ಸಹಿಸಿಕೊಳ್ಳಲೇಬೇಕು ಇಲ್ಲದಿರೆ ಬದುಕು ಮೂರಾಬಟ್ಟೆ.

ಮಾಗಿದ ಮನಸ್ಸು , ದೇಹದ ವಯಸ್ಸಿನ ಬಯಕೆಗಳನು ತಡೆಯುತ್ತದೆ.

ನಮ್ಮಿಬ್ಬರ ಕೆಲದಿನಗಳ ಅದ್ಭುತ , ಪವಿತ್ರ , ನಿಷ್ಕಾಮ ಸ್ನೇಹ ನಿನ್ನನ್ನು ಕೊಂಚ ದಿನ ಕಲಕಿದ್ದಂತು ಸತ್ಯ .

ಈ ಬಂಧನದಲಿ ನನ್ನ ಭಾವಗಳಿಗೆ ಬೆಲೆ ಇಲ್ಲ ಎಂದು ಗೊತ್ತಿದ್ದರೂ ನಾ ನಿತಾಂತವಾಗಿ ವಿಹರಿಸಿ ಸಂಭ್ರಮಿಸಿದೆ .
ಒಮ್ಮೆಲೇ ದೂರ ಸರಿಯುವ ಆತಂಕದ ಮಾತುಗಳನ್ನಾಡಿ good bye ಹೇಳಿದಾಗ ಹೇಗಾಗಿರಬೇಡ?

ನಾನು ಈ ನಮ್ಮ ತಾತ್ಕಾಲಿಕ ಬಂಧನವನ್ನು ಗುಟ್ಟಾಗಿ ಇಡುವಷ್ಟು ಒಳ್ಳೆಯವನು ಎಂದು ನಂಬಿದೆಯಲ್ಲ that's really great.
ನಿನ್ನ ಖಾಸಗಿ ಬದುಕಿನೊಂದಿಗೆ ಚಲ್ಲಾಟವಾಡುವಷ್ಟು ಸಣ್ಣವನಲ್ಲ ಎಂದು ನಂಬಿದ್ದು ದೊಡ್ಡ ವಿಷಯ.

ನಿನ್ನ ಹೊಳೆಯುವ ಕಂಗಳ ಕಾಂತಿಯ ಹೊಳಪು ನನ್ನ ನೆನಪಲಿ ಇಮ್ಮಡಿಸಲಿ. ಐವತ್ತರ ಗಡಿ ದಾಟಿದ ಮೇಲಿನ ಈ ಪ್ರೇಮದಾಟದಲಿ ಸೋಲು-ಗೆಲುವುಗಳ ಪ್ರಶ್ನೆಯೇ ಇಲ್ಲ. ನನ್ನ ' ಕಾವ್ಯಸಿರಿ ' ನಿನ್ನ ನೆನಪಲಿ ನೂತನವಾಗಿರಲಿ ಎಂದು ಹಾರೈಸು ಈ ಜನುಮಕೆ ಇಷ್ಟೇ ಸಾಕು !

---ಸಿದ್ದು ಯಾಪಲಪರವಿ

Saturday, July 1, 2017

ಏಕಾಂತವಲ್ಲ

ಏಕಾಂತವಲ್ಲ

ಯೋಜನೆಗಳು ಯೋಚನೆಗಳು
ಓಡಾಟಗಳು ನಿರಂತರ
ಚಟುವಟಿಕೆಯ ಚಡಪಡಿಕೆಗಳು

ಸಾವಿರದ ಕನಸುಗಳು
ಬತ್ತದ ಜೀವನೋತ್ಸಾಹದ ಚಿಲುಮೆಗಳು

ಜೊತೆಗಿದ್ದಂತೆ ನಟಿಸಿ ಮಾರ್ಗ
ಮಧ್ಯೆ ಬಿಟ್ಟು ಮಾಯವಾಗುವ
ಮಾಯಾಂಗನೆಯರು

ಎಲ್ಲರೂ , ಎಲ್ಲದೂ ಇದ್ದು ಇಲ್ಲದ
ಮಾಡಿಯೂ ಮಾಡದ ಮಾಯದಾಟ

ಗೊತ್ತು ಗುರಿಯಿಲ್ಲದ ಅಲೆದಾಟದಲೆಗಳಲಿ
ತೇಲುತ ಈಜಾಡಿ ಸಾಗಲೇಬೇಕು

ವಿಶಾಲ ಜೀವಸರೋವರದಲಿ
ದಂಡೆಗೆಲ್ಲಿಯ ಕೊನೆ ಅರಿತವರಾರು

ಹೀಗೆ ಸಾಗುತಿರಲಿ ಜೀವಪಯಣ
ಉಳಿದವರು ಉಳಿಯುತ್ತಾರೆ

ಹಳಿಯುವವರು ಅಳಿಯುತ್ತಾರೆ
ಅಳೆಯುತ್ತಾರೆ ಹಳಹಳಿಸುತ...

ಹಗಲಿರುಳು ದೇಹಮನಸುಗಳ
ಸವಿಮಿಲನ ನೋವುನಲಿವುಗಳ
ಬಿಗಿದಪ್ಪಿ ಮುದ್ದು ಮಾಡಿ

ನಮಗೆ ನಾವೇ ರಮಿಸುತ ವಿರಮಿಸುವ
ಹೊತ್ತು ಬರೀ ಏಕಾಂತವಲ್ಲ...

---ಸಿದ್ದು ಯಾಪಲಪರವಿ

ಕಾವ್ಯ ಕನ್ನಿಕೆ

ಕಾವ್ಯ ಕನ್ನಿಕೆ

ಮಾತೇ ಹೊರಡಲಿಲ್ಲ ಎಂಬುದರ
ಅರ್ಥ ಇಂದೇ ತಿಳಿಯಿತು

ಶಿಲಾ ಬಾಲಕಿಯ ಪ್ರತಿರೂಪ
ಅನುಪಮ ದಿವ್ಯಾನುಭವ
ಜೀವಂತಿಕೆಯ ನವ ಚೇತನ

ಎಲ್ಲೋ ಇದ್ದು ಇಷ್ಟು ದಿನ
ಒಂದಿನಿತು ಸದ್ದು ಮಾಡದೇ
ಅಡಗಿ ಕುಳಿತು ಅಣಕಿಸಿದೆ

ದೇಹದ ಪ್ರತಿ ಅಂಗುಲದಲಿ
ಜೀವಸೆಲೆಯ ನಲಿವಿನ ನರ್ತನ

ಎದೆಗಾರಿಕೆ ಬೇಕು ಕಣ್ಣು
ಕೊರೆಯುವ ಮೈಮಾಟ
ದಿಟ್ಟಿಸಲು ದಿಟ್ಟತನವೂ ಬೇಕು

ಕಣ್ಣು ಪಿಳುಕಿಸದೇ ತದೇಕದಿ
ನೋಟ ಕೀಳದೇ ನೋಡುತ್ತ
ನೋಡುತ್ತಾ ಬೆರಗಾದೆ

ಹುಡುಕುತ್ತಲೇ ಇದ್ದೇನೆ ನನ್ನ ನಾ
ನಿನ್ನಲಿ ಕಳಕೊಂಡು
ಹುಡುಕಿದರೆ ಹೊರಗೆ ಸಿಕ್ಕೇನು ಹೇಗೆ ?

ಅಪ್ಪಟ ದೇಸಿಯ ಚಲುವಿನ ಒಲವ
ಧಾರೆ ಎಲ್ಲಂದರಲ್ಲಿ ಹರಿಯುತಿರಲು
ಹಿಡಿದು ಕಟ್ಟುವುದು ಕನಸಿನ ಮಾತು

ಚಂದಿರನ ಕಾಂತಿ ನಕ್ಷತ್ರಗಳ ನಲಿವು
ಹಾಲು ಗಲ್ಲಕೆ ಬೆಲ್ಲದ ಸೊಗಡು

ನೀಳ ನಾಸಿಕದ ಮೇಲೆ ಗಿಣಿಯ ಆಟ
ಕೆಳಗೆ ತುಟಿಗಳ ರಂಗು ರಂಗಿನಾಟ

ಸಾಕು ಬಿಡು ಈ ಜನುಮಕೆ ಹೆಚ್ಚು
ಹೇಳಿದರೆ ಹುಚ್ಚು ಹಿಡಿಸಿಕೊಂಡು
ಬೆನ್ನು ಬಿದ್ದಾರು ?

ದೃಷ್ಟಿ ತೆಗೆಯಲು ಸಾವಿರ ಪೊರಕೆ ಸಾಲದು
ನಾ ದೃಷ್ಟಿ ಕೀಳುವತನಕ ನಿರ್ಗಮಿಸದಿರು
ಹಿಡಿದು ಬಚ್ಚಿಡುವೆ ಮನೋಮಂದಿರದಲಿ
ಮಹಾ ರಾಣಿಯ ಹಾಗೆ

ಶಬ್ದಗಳು ನಿಶಬ್ದವಾಗಿ ಮಾತು
ಮೌನವಾದ ಹೊತ್ತಲಿ
ಶಬ್ದಗಳಲಿ ಪೋಣಿಸಿ ಮಾಲೆಯ
ಧರಿಸಿ ನಲಿದು ಹಾಡಿ
ಕುಣಿಯುವೆ ನಿನ್ನ ಒಲುಮೆಗಾಗಿ.

---ಸಿದ್ದು ಯಾಪಲಪರವಿ

Thursday, June 29, 2017

VRL ಸಂಕೇಶ್ವರ

Weekend with VRL : An inspiring story.

ಒಂದಿಷ್ಟು ನೆನಪು

ಇಂದು ಮತ್ತೊಂದು ಕುತೂಹಲಕರ ಸಾಧಕರ ಕಥೆ .
ಹೆಚ್ಚು ಆಪ್ತವೆನಿಸಲು ಕಾರಣ ನಾನು ಅವರನ್ನು ನಾನು ತೊಂಬತ್ತರ ದಶಕದಿಂದ ಹತ್ತಿರದಿಂದ ಬಲ್ಲೆ ಹಾಗಂತ he is very close to me ಅನ್ನಲು ಭಯವಾಗುವಂತ ವ್ಯಕ್ತಿತ್ವ.

ಶಿಸ್ತು , ಪರಿಶ್ರಮ, ಸಾತ್ವಿಕ ಹಟ , ಕೊಂಚ moody ಆದರೂ ಅದ್ಭುತ ಸಾಧಕ . ಕನ್ನಡ ನಾಡು ಪಕ್ಷದ ವಿಫಲತೆ ಬಿಟ್ಟರೆ ಮುಟ್ಟಿದ್ದೆಲ್ಲ ಚಿನ್ನ. ಉಳಿದ ಕಥೆ ನಿಮಗೆ ಗೊತ್ತೇ ಇದೆ.

ಆದರೆ ನನ್ನ ಅವರ ಬಾಂಧವ್ಯ ನೆನಪಿಸಿಕೊಳ್ಳಲು ಖುಷಿ.
ಮೊದಲ ಬಾರಿ ಲೋಕಸಭೆಗೆ ಸ್ಪರ್ಧಿಸಿದಾಗ ಒಂದು ಪತ್ರಿಕೆಯ ಪರವಾಗಿ ಒಂದು ತಾಸು ಚರ್ಚಿಸಿದ್ದನ್ನು ಅವರು ಇಂದಿಗೂ ಮರೆತಿಲ್ಲ.
ನಂತರ ಅನೇಕ ವೇದಿಕೆಗಳಲ್ಲಿ ಅವರನ್ನು ಕೆಣಕುತ್ತ ಹತ್ತಿರವಾದೆ.
ಆಗಾಗ ಭೇಟಿ, ಅಗತ್ಯಕ್ಕೆ ತಕ್ಕಷ್ಟು ಮಾತು.

ಕಳೆದ ವರ್ಷ ' ಒಂದು ಬಿರುಗಾಳಿಯ ಕಥೆ ' ಗೆ ಬರೆದ ಮುನ್ನುಡಿ , ಬಿಡುಗಡೆಗೆ ಬಂದದ್ದು , ವೇದಿಕೆ ಮೇಲೆ ಒಂದೆರಡು ತಾಸು ಕಳೆದದ್ದು ಅವಿಸ್ಮರಣೀಯ.
ಅಂದು ಯಾರೋ ನನ್ನನ್ನು ಪರಿಚಯಿಸಿದ ಕೂಡಲೇ ' ಅಯ್ಯೋ ಯಾಪಲಪರವಿ ನನ್ನ ಗುರುಗಳು ' ಅಂದು ಎಲ್ಲರನ್ನೂ ಹಾಗೆ ನನ್ನನ್ನು ಬೆರಗುಗೊಳಿಸಿದರು(ಇದನ್ನು ಹೇಳಲು ಸಂಕೋಚ ಹಾಗೂ ಸಂತೋಷ ).

ಒಮ್ಮೆ ನಾನು ಅವರನ್ನು ನೀವು ಬಲಪಂಥೀಯರು ಎಂದು ರೇಗಿಸಿದ್ದೆ. ನನ್ನನ್ನು ತಮ್ಮ ಹುಬ್ಬಳ್ಳಿ ಆಫೀಸಿಗೆ ಕರೆಸಿ ಜಾತ್ಯಾತೀತ ವೃತ್ತಿಪರತೆಯನ್ನು ಪರಿಚಯಿಸಿ ಬೆರಗು ಮೂಡಿಸಿದ್ದರು.

ನಿಮ್ಮ biography ಬರೆಯೋ ಆಸೆ ಅಂದೆ ನಕ್ಕು ಸುಮ್ಮನಾದರು.

ನಾನು ಉದ್ಯೋಗಕ್ಕೆ ಅಂಟಿಕೊಂಡು risk ತೆಗೆದುಕೊಳ್ಳಲು ಹಿಂದೇಟು ಹಾಕುವುದಕ್ಕೆ ಗದರಿದರು. ' You are wasting your time ' ಅನ್ನುತ್ತಲೇ ಇದ್ದಾರೆ.

He is expecting something from me , I too realised it of course !

I will fulfill your desire Vijjanna but waiting for right time.

ನನ್ನೊಳಗಿನ ನೂರಾರು ಕನಸುಗಳಿಗೆ ಇಂದು ಪ್ರೇರಣೆ ನೀಡಿದ ನಿಮಗೆ ಶರಣು ಶರಣಾರ್ಥಿ.

ಬೇಗ ನಿಮ್ಮ ಆಸೆ ಈಡೇರಿಸಿ ನಿಮ್ಮೆದುರು ಬಂದು ನಿಲ್ಲುತ್ತೇನೆ.

ನಿಮ್ಮ ಪ್ರೀತಿಯ

---ಸಿದ್ದು ಯಾಪಲಪರವಿ

Tuesday, June 27, 2017

ಸಾಕು ಅನಿಸುವದ್ಯಾಕೋ

ಒಮ್ಮೆ ಎಲ್ಲವೂ ಸಾಕು ಅನಿಸುವದ್ಯಾಕೋ ?

ಹಗಲಿರುಳು ದುಡಿಮೆ , ಓಡಾಟ ಲೆಕ್ಕವಿಲ್ಲದಷ್ಟು ಕನಸುಗಳು , ನೂರೆಂಟು ಯೋಜನೆಗಳು. ಹೆಸರು , ಹಣ , ಕೀರ್ತಿ , ಗೆಳೆಯರು , ಸಂಗಾತಿಗಳು , ಅಂತರಂಗ ಬಹಿರಂಗದ ರಹಸ್ಯಗಳು. ಕಣ್ಣಾ-ಮುಚ್ಚಾಲೆ ಆಟಗಳು. ಹೇಳಲಾಗದ ಬಯಕೆಗಳು.

ಏನೇನೋ ಗಿಮಿಕ್ಕುಗಳು, ಅನರ್ಥ ಪ್ರಯತ್ನಗಳು. ತುಂಬಾ ದೂರ ನಿರಂತರ ಕ್ರಮಿಸುವ ವಾಹನ ಗಕ್ಕನೇ ನಿಂತಾಗ...

ಏಕೆ ಹೀಗೆ ? ಯಾರಿಗಾಗಿ ಈ ಹಾರಾಟ ? ಎಂಬ ಪ್ರಶ್ನೆಗಳು ನಮ್ಮನ್ನು ಕಾಡಲಾರಂಭಿಸುತ್ತವೆ.
ಒಂದು ಕ್ಷಣ ಎಲ್ಲವೂ ಬೇಡವೆನಿಸಿಬಿಡಬೇಕಾ !
ಈ ಖಾಲಿತನವನ್ನು ಆಗಾಗ ಅನುಭವಿಸಿ ಮುಂದೆ ಸಾಗುವ ಅನಿವಾರ್ಯತೆ.
ಏನಾದ್ರೂ ಸಾಧಿಸಬೇಕು ಅನ್ನೋ ಕಾರಣಕ್ಕೆ ವಿಪರೀತ ಹೊಂದಾಣಿಕೆ. ಕಂಡವರೊಂದಿಗೆ ಶಾಮೀಲಾಗುವ ಮಾನಸಿಕ ಕಿರಿಕಿರಿ. ಸಾಕಪ್ಪ ಸಾಕು ಅನಿಸಿದರೂ ಅನಿವಾರ್ಯ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದ ಒದ್ದಾಟ.
ಎಲ್ಲ ಒತ್ತಡಗಳನ್ನು ಸಹಿಸಿಕೊಂಡು ಓಡಾಡುವಾಗ ಏಕಾಂತದಿ ಈ ರೀತಿಯ ಖಾಲಿತನ ಹೆಚ್ಚಾಗಿ ಖಿನ್ನತೆಗೆ ಒಳಗಾಗಬಾರದೆಂಬ ಎಚ್ಚರಿಕೆಯಿಂದ ಮುಂದೆ ಸಾಗಬೇಕು ಕೊಂಚ ವಿರಮಿಸಿ.

---ಸಿದ್ದು ಯಾಪಲಪರವಿ

ರಾಜಕಾರಣ

ರಾಜಕಾರಣ ಹಾಗೂ  ತಲ್ಲಣಗಳ nostalgia.

'ಈಗ ತತ್ವ ಸಿದ್ಧಾಂತ ಏನೂ ಬೇಡ ರಾಜಕೀಯ ಪರಿಜ್ಞಾನ ಇಲ್ಲ . ಏನೋ ಕೇಳಿದರೆ ಏನೋ ಹೇಳ್ತಾರೆ ಹೆಚ್ಚು ಕಮ್ಮಿ ಆದರೆ ಜಗಳಕ್ಕೆ ಬರ್ತಾರೆ '
ಇಂತಹ ಮಹನೀಯರು ಒಂದೆರಡು ಬಾರಿ ಶಾಸಕರು ಮಂತ್ರಿಗಳು ಆಗಿರ್ತಾರೆ.

ಪಕ್ಷದ ಸಿದ್ಧಾಂತ , ಗಾಂಧಿ,ಬಸವ ,  ಅಂಬೇಡ್ಕರ್ ಊಹೂಂ ಎಲ್ಲವೂ ಅಯೋಮಯ. ಜಾತಿ , ಹಣ , ತೋಳ್ಬಲ ಒಂದಿಷ್ಟು ಕುತಂತ್ರ , ಏನೋ ಒಂದಿಷ್ಟು ತಂತ್ರ ಸಾಕು ಶಾಸಕ ಆಗಲಿಕ್ಕೆ ಅನ್ನೋ ವಾತಾವರಣ. ಯಾರಾದರೂ ಯೋಗ್ಯರು ಬರ್ತಾರೆ ಅಂದ್ರೆ ' ಅಯ್ಯೋ ಅವರ ಹತ್ರ ಹಣ ಇಲ್ಲ ಬಿಡಿ ಗೆಲ್ಲಲ್ಲ ' ಎಂಬ immediate reply.
ಪ್ರತಿ ಮಾತು ನಡೆಯಲಿ political milage ಹುಡುಕುವ ಹುಚ್ಚು. ಮಾಧ್ಯಮಗಳ ಎದುರು ಅದೇ ಕಚ್ಚಾಟ.

ಬರೀ negative ಅನ್ಕೋಬೇಡಿ. ಕರ್ನಾಟಕ ಕಾಲೇಜಿನಲ್ಲಿ ನಮ್ಮ ಸಾಹಿತ್ಯದ ಪ್ರಾಧ್ಯಾಪಕರುಗಳಿಗೆ ಸಮಾಜವಾದ , ಲೋಹಿಯಾ ವಾದ  ಹಾಗೂ ಜೆ.ಪಿ.ಚಳುವಳಿ ನಂಟು. ಪಿಯುಸಿ ಇದ್ದಾಗ ಗೋಕಾಕ ಚಳುವಳಿ.
ಹುಚ್ಚು ಹಿಡಿಸಿಕೊಂಡು ಓದಲು ಲಂಕೇಶ್ ಪತ್ರಿಕೆ. ಅಬ್ಬಾ ಈಗ ನೆನಪಿಸಿಕೊಂಡರೆ ಹೊಟ್ಟೆಯಲ್ಲಿ ತಳಮಳ.
ಈಗ ಎಲ್ಲಾ ಮಾಯ ಬರೀ nostalgia. ಯೋಗ್ಯರೆಲ್ಲ ಮಂಗ ಮಾಯ .

ಆ ಎಲ್ಲ ಹೋರಾಟಗಳಲ್ಲಿದ್ದ ಪರಿವಾರದ ನಾಯಕರುಗಳಿಗೆ ವಯಸ್ಸಾಗಿದೆ , ಮತ್ತೆ ಕೆಲವರು ಕಣ್ಮರೆಯಾಗಿದ್ದಾರೆ ,ಬಹುಪಾಲು ನಮ್ಮ ಸಮಕಾಲೀನರು ಬೇರೆ ಬೇರೆ ಪಕ್ಷಗಳಲ್ಲಿದ್ದು ಸೈದ್ಧಾಂತಿಕ ಗೊಂದಲದಲ್ಲಿದ್ದಾರೆ.
Nostalgia ಬಿಟ್ಟರೆ ಇನ್ನೇನು ಮಾಡಲಾದೀತು ಎಂಬ confusion.

ಹಿರಿಯರು, ನನ್ನ ಹಿತೈಷಿಗಳೂ ಆಗಿದ್ದ ಎಂ.ಪಿ.ಪ್ರಕಾಶ ಸಣ್ಣ ವಯಸ್ಸಿನಲ್ಲಿ ಹಂಪಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯತ್ವ ನೀಡಿ ಸಾಂಸ್ಕೃತಿಕ ಲೋಕದ ವ್ಯಾಪ್ತಿ ವಿಸ್ತರಿಸಿದರು.
ಆಗಾಗ ಸಿಗುತ್ತಿದ್ದ ಗೋವಿಂದಗೌಡರು , ಪಟೇಲ್ ಅವರು ಪ್ರೀತಿಯಿಂದ ಮಾತನಾಡಿ ಬೆನ್ನು  ತಟ್ಟಿ ಪ್ರೇರೇಪಿಸುತ್ತಿದ್ದರು.

ಸಮಾಜವಾದಿ ಚಿಂತಕ ಬಾಪು ಹೆದ್ದೂರಶೆಟ್ಟಿ ಸದಾ ನೆರಳಾಗಿದ್ದಾರೆ. ನಿತ್ಯವೂ ಮಾತಿಗೆ ಸಿಗುವ ಪ್ರೊ.ರವೀಂದ್ರ ರೇಷ್ಮೆ , ಪ್ರೊ.ಆರ್.ಎಂ.ರಂಗನಾಥ್ ಸರ್ ಆ ದಿನಗಳ ನೆನಪಿಸುತ್ತಾರೆ.

ಅಪ್ಪಿ ತಪ್ಪಿ ಉತ್ತಮ ಅನಿಸಿದ ಬಿಜೆಪಿಯವರನ್ನು ಮಾತನಾಡಿಸಿದರೆ ಚಡ್ಡಿ ಅಂತಾರೆ. ಕಾಂಗ್ರೆಸ್ ಅವರ ಜೊತೆಗಿದ್ದರೆ leftist ಅಂತಾರೆ. ಎಲ್ಲಿಯೂ ಸಲ್ಲದ ಪ್ರೇತಾತ್ಮದ ಸ್ಥಿತಿ.
ಎಲ್ಲದಕೂ ನಕ್ಕು ಸುಮ್ಮನಾಗಿ ಮುಂದೆ ಸಾಗಬೇಕು.

ಈಗ ಅನಿಸಿದ್ದೆಲ್ಲ ಬರೆಯಲಿಕ್ಕೆ social media ಗಳಿವೆ ಅದೇ ಸಮಾಧಾನ !
ಜನ ಓದಲಿ ಬಿಡಲಿ ಬರೆದು ಹಗುರಾಗುವ ಅನಿವಾರ್ಯತೆ !!

ಜಾತ್ಯಾತೀತತೆ , ಸಾಮಾಜಿಕ ನ್ಯಾಯ , ಆರೋಗ್ಯಪೂರ್ಣ ಸಂವಾದ ಎಲ್ಲವೂ ಈಗ ಬರೀ text .
ರಾಜಕೀಯ ಅನಿವಾರ್ಯತೆಯ ನೆಪದಲಿ ಎಲ್ಲವೂ,
ಎಲ್ಲರೂ ಮಾಯ. ಆದರೆ ಹುಡುಕಾಟದ ತಲ್ಲಣ ಮಾತ್ರ ನಿಂತಿಲ್ಲ.
ನಿನ್ನೆ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರ ಮಾತು ಕೇಳಿ ಇಷ್ಟೆಲ್ಲ ಹೇಳಬೇಕೆನಿಸಿತು.

---ಸಿದ್ದು ಯಾಪಲಪರವಿ