ಕಹಿ ಮತ್ತು ಸಹನೆ
ಅನಿವಾರ್ಯತೆಯೋ,ಅಸಹಾಯಕತೆಯೋ ನಾ ಕಾಣೆ ಎಲ್ಲವನ್ನು ವಿಪರೀತ ಅನ್ನುವಷ್ಟು ಸಹಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ವ್ಯಕ್ತಿಯ ವರ್ತನೆಯ ಹಿಂದೆ ಅವನ ಬಾಲ್ಯದ ಘಟನೆಗಳ ಪ್ರಭಾವ ಅಡಗಿರುತ್ತದೆ. ಬಾಲ್ಯದ ಕಾಣದ ಸಂಗತಿಗಳು ಈಗಲೂ ನಮ್ಮನ್ನು ನಮಗೆ ಅರಿವಿಲ್ಲದಂತೆ ಆಳುತ್ತಿರುತ್ತವೆ.ಅಂತಹ ಆಳುವ ಒಂದು ಪ್ರಸಂಗವನ್ನು ಹಂಚಿಕೊಳ್ಳಬೇಕೆನಿಸಿದೆ.
'ಮಗು ಆರೋಗ್ಯವಾಗಿರಲು ನಿತ್ಯ ಮುಂಜಾನೆ ಒಂದು ಲೋಟ ಬೇವಿನ ರಸ ಕುಡಿಸಬೇಕು' ಎಂದು ಅವ್ವನಿಗೆ ಯಾರೋ ಹೇಳಿದ್ದರಂತೆ, ಅದರ ಪ್ರಯೋಗ ನನ್ನ ಮೇಲೆ ಮಾಡಲು ನಿರ್ಧರಿಸಿ, ಮನೆಕೆಲಸದ ಹಿರಿಯ ಮುದುಕಪ್ಪನಿಗೆ ಜವಾಬ್ದಾರಿ ನೀಡಿದ ನೆನಪು.
ಮೊದಲ ದಿನ ವಿಷ ( ಕಹಿಗೆ ಬಳಸುವ ಸಾಮಾನ್ಯ ಪದ) ಕುಡಿಯುವ ಸರದಿ ನನ್ನದು. ವಿಪರೀತ ಕಹಿಯಾಗಿ ವಾಂತಿ ಮಾಡಿಕೊಂಡೆ. ಇಲ್ಲಿಗೆ ಈ ಪ್ರಹಸನ ಮುಗಿಯಬಹುದು ಅಂದುಕೊಂಡೆ. ಮುಗಿಯಲಿಲ್ಲ.
ಮರುದಿನ ನಸುಕಿನಲ್ಲಿ ಎಬ್ಬಿಸಿದಾಗ ಭಯ ಭೀತನಾದೆ, ವಿಷ ಕುಡಿಯುವ ಶಿಕ್ಷೆ ನೆನೆದು.
ಅವ್ವ ಮತ್ತು ಮುದುಕಪ್ಪ ಸೇರಿ ಹೊಸ ಸಂಚು ಹೂಡಿದವರಂತೆ ನಾಲಿಗೆ ಮೇಲೆ ನಾಲಿಗೆ ಗಾತ್ರದ ಪ್ಲ್ಯಾಸ್ಟಿಕ್ ಹಾಕಿ ಮೂಗು ಮುಚ್ಚಿ ನೇರವಾಗಿ ಗಂಟಲಿನಲ್ಲಿ ಬೇವಿನ ರಸ ಸುರುವಿ ವಾಂತಿಯಿಂದ ಪಾರು ಮಾಡಿದರು.
' ಅಯ್ಯೋ ವಾಂತಿಯಾದರೆ ಚನ್ನಾಗಿತ್ತು ಈ ವಿಷ ಕುಡಿಯುವ ಹಿಂಸೆ ತಪ್ಪುತ್ತಿತ್ತು' ಎಂದು ನೆನೆದು ಗಂಭೀರವಾಗಿ ಆಲೋಚನೆ ಮಾಡುತ್ತ ಹೊಟ್ಟೆಯೊಳಗೆ ವಿಷ ಹೇಗೆ ಕೆಲಸ ಮಾಡುತ್ತಿರಬಹುದೆಂದು ಕಲ್ಪಿಸಿಕೊಂಡೆ.
ಹೀಗೆ ಬೇವಿನ ರಸ ಕುಡಿದು ದಕ್ಕಿಸಿಕೊಂಡ ಮಗನಿಗೆ ರೋಗ ರುಜಿನಗಳು ಮಗನಿಗೆ ತಟ್ಟುವುದಿಲ್ಲ ಎಂಬ ಸಮಾಧಾನ ಅವ್ವನಿಗೆ.
ನನಗೋ ಒಳಗೊಳಗೆ ಇನ್ನಿಲ್ಲದ ಆತಂಕ. ಈ ಪ್ರಕ್ರಿಯೆ ತಿಂಗಳುಗಟ್ಟಲೆ ನಡೆಯಿತು.
ನನಗೂ ಅನೇಕ ಕಲ್ಪನೆಗಳು ಆರಂಭವಾದವು. ನಾ ಬಹಳ ಗಟ್ಟಿಯಾದೆ. ಹಾವು ಕಡಿದರೂ ವಿಷ ಏರುವುದಿಲ್ಲ ಎಂಬ ದಂತಕತೆಗಳು ಕಿವಿಗೆ ಅಪ್ಪಳಿಸಲಾರಂಭಿಸಿ ಸಂಭ್ರಮಿಸಿದೆ.
ಮುಂದೆ ಈ ರಹಸ್ಯ ಮಾಹಿತಿ ಅಪ್ಪನ ತಾಯಿ ಅಮರಮ್ಮ ಅಮ್ಮನಿಂದಾಗಿ ಸ್ಪೋಟಗೊಂಡಿತು.
ಆಗ ಜನ ಭಿನ್ನ ವಿಭಿನ್ನ ಸುದ್ದಿ ಹಬ್ಬಿಸಲಾರಂಭಿಸಿದರು.
"ಈ ರಸ ಕುಡಿದರೆ ಮುಂದೆ ಯಾವುದೇ ಔಷಧ ಹತ್ತುವುದಿಲ್ಲ…
ರೋಗ ಬರದೇ ಇರಬಹುದು ಬಂದರೆ ಗುಣವಾಗುವುದೇ ಇಲ್ಲ…ನಾಲಿಗೆ ರುಚಿ ಹಾಳಾಗಿ ಹೋಗುತ್ತೆ..." ಇಂತಹ ಅನಾಹುತ ಸುದ್ದಿಗಳಿಗೆ ಅವ್ವ ಥಂಡಾ ಹೊಡೆದಿರಬೇಕು.
ಮುಂದೆ ಮುದುಕಪ್ಪನ ವಿಷಪ್ರಾಶನ ಪ್ರಸಂಗ ಇದ್ದಕಿದ್ದ ಹಾಗೆ ಬಂದ್ ಆಯಿತೆನ್ನಿ.
ಪ್ರೀತಿ, ಕಾಳಜಿ,ಅನುಕಂಪ,ಅವಮಾನಗಳ ಪ್ರಯೋಗ ಶಾಲೆ ನನ್ನ ಬಾಲ್ಯ.
ದುಂಡು ದುಂಡಾದ ಗುಳಿ ಕೆನ್ನೆಯ ಹುಡುಗನ ತಲ್ಲಣ, ಹುಡುಕಾಟದ ಕುತೂಹಲಗಳಿಗೆ ನನ್ನ ನಾ ಒಡ್ಡಿಕೊಂಡು ಎಲ್ಲ ಪ್ರಯೋಗಗಳಿಗೆ ತೆರೆದುಕೊಂಡು ಜೀವನಾನುಭವ ಹೆಚ್ಚಿಸಿಕೊಂಡೆ.
ಈಗ
ಯಾರು ಎಷ್ಟೇ ಅವಮಾನ ಮಾಡಿದರೂ ಪ್ರತಿಕ್ರಿಯಿಸಿದಿರುವಾಗ, ತಟ್ಟೆಯ ಆಹಾರಕೆ ಹೆಸರಿಡದೆ ಮೌನವಾಗಿ ಊಟ ಮಾಡುವಾಗ, ಮಾಟ ಮಂತ್ರಗಳಿಗೆ ಮನಸು ಹೆದರದೇ ಇದ್ದಾಗ ಈ ಬೇವಿನ ರಸ ಕುಡಿದ ಪ್ರಸಂಗ ನೆನಪಾಗಿ ಮನಸು ನಾಲ್ಕು ದಶಕಗಳ ಹಿಂದೆ ಓಡುತ್ತದೆ.
*ಸಿದ್ದು ಯಾಪಲಪರವಿ*