Sunday, October 21, 2018

ಮುಚ್ಚಿಟ್ಟ ಕಾಮ...

*ಮುಚ್ಚಿಟ್ಟ ಕಾಮ ಹಾವಿನ ಹೆಡೆಯಾಗಿ ಕಾಡಿತ್ತು*

ಈಗ #metoo , ಈ ಹಿಂದೆ ನಿರಂತರ ಅತ್ಯಾಚಾರಗಳು.
ವಿವಿಧ ಕ್ಷೇತ್ರಗಳಲ್ಲಿ ದುಡಿಯುವ ಮಹಿಳೆಯರ ಲೈಂಗಿಕ ಶೋಷಣೆ ಬಯಲಿಗೆ ಬರುವುದೇ ಇಲ್ಲ.

ಈಗ ತಾರಾಮಣಿಗಳು, ಸಾಮಾಜಿಕ ಜಾಲತಾಣಗಳಲಿ ವೈರಲ್ ಆಗುವ ಸಾಮರ್ಥ್ಯ ಇದ್ದವರು, ಮುಂದೆ ದುಡಿಯುವ ಅನಿವಾರ್ಯತೆ ಇಲ್ಲದೆ ಬದುಕುವ ಸಾಮರ್ಥ್ಯ ಇದ್ದವರು ದನಿ ಎತ್ತಿದ್ದು ಸ್ವಾಗತಾರ್ಹ.

ಅತಿಯಾದ ಮಹತ್ವಾಕಾಂಕ್ಷೆ ಇಟ್ಟುಕೊಂಡು,  ಹೇಗಾದರೂ ಆಗಲಿ ಹಣ, ಖ್ಯಾತಿ ಗಳಿಸಲು give and take ತಂತ್ರ ಬಳಸಿರುವುದು ಕೂಡ open secret.

ಆದರೂ ಬಳಸುವ ಪ್ರಕ್ರಿಯೆಯಲ್ಲಿ ಹೆಣ್ಣೇ ಬಲಿಪಶು.
‘ ನಿನ್ನ ಅವಕಾಶಕ್ಕಾಗಿ ಅವನಿಗೆ ದಕ್ಕಿದ್ದೀಯಾ ನಾನೂ ಯಾಕೆ ಒಂದು ಕೈ ನೋಡಬಾರದು ‘ ಎಂಬ ಮನೋಧರ್ಮದ ವಿಕೃತ ಮನಸ್ಥಿತಿಯಿಂದಾಗಿ ಶೋಷಣೆ ಈಗಲೂ  ಸಾಗಿಯೇ ಇದೆ.

ಈಗ ನಡೆದಿರುವ ವಾದ ವಿವಾದ ಸರಣಿಯಲಿ ಎಲ್ಲರೂ ಕಳ್ಳರೆಂಬ ಪಾಪಪ್ರಜ್ಞೆಯ ರುದ್ರನರ್ತನ.‌ ಸರಿ-ತಪ್ಪು, ಗಂಡು-ಹೆಣ್ಣು ಎಂಬ ಭಾವದಾಚೆಗಿನ ಅನುಸಂಧಾನ ಇದಾಗಬೇಕು.

ತುಂಬಾ ಪರಿಶ್ರಮ ಪಡದೆ ಮೇಲೆ ಬರಬೇಕೆಂದು ಬಯಸುವವರು ಮಾತ್ರ #metoo ಸುಳಿಗೆ ಸಿಕ್ಕಿ ಬಿದ್ದಿದ್ದಾರೆ‌. ಬೇಡ ಎಂದು ತಿರಸ್ಕರಿಸಿದವರು ತಮ್ಮ ಸ್ವಯಂ ಪ್ರಭೆಯಿಂದ ಕೊಂಚ ನಿಧಾನವಾಗಿ ಮೇಲೇರಿದ್ದಾರೆ.

Godfather ಎಂಬ white collar ವ್ಯಕ್ತಿಗಳ ತೆವಲಿಗೆ ಮನಸಿರದಿದ್ದರೂ ಮಹತ್ವಾಕಾಂಕ್ಷೆ ಬಲಿತೆಗೆದುಕೊಳ್ಳುತ್ತದೆ.

*ಹೆಣ್ಣು ಮಾಯೆಯಲ್ಲ, ಹೊನ್ನು ಮಾಯೆಯಲ್ಲ, ಮಣ್ಣೂ ಮಾಯೆಯಲ್ಲ, ಮನದ ಮುಂದಣ ಆಸೆಯೇ ಮಾಯೆ* ಎಂಬ ಶರಣರ, ಸಂತರ ಮಾತುಗಳ ಅರ್ಥ ಮಾಡಿಕೊಳ್ಳಲಾರದಷ್ಟು ನಾವು ಮೂರ್ಖರಲ್ಲ. ನಮ್ಮ ಪುರಾತನರು ಗುರುತಿಸಿದ ಮೊದಲ ಮಾಯೆಯೇ ಗಂಡಿಗೆ ಹೆಣ್ಣು, ಹೆಣ್ಣಿಗೆ ಗಂಡು. ಅರ್ಥಾತ್‌ ಕಾಮ.

ಆದರೆ ನಮಗೆ ಕಾಮದ ಕುರಿತು ಸಾರ್ವಜನಿಕ ಮಾತುಕತೆ, ಸಂವಾದ, ಚರ್ಚೆ, ಜನಜಾಗೃತಿ ಏನೂ ಬೇಡ. ಏನಿದ್ದರೂ ಎಲ್ಲ ಗುಟ್ಟಾಗಿಯೇ ನಡೆಯಬೇಕು.

ಯಾಕೆಂದರೆ ನಮ್ಮದು ಶೀಲವಂತ ಸಂಸ್ಕೃತಿ.  ಕಾಮದ ಕುರಿತ ಮಡಿವಂತಿಕೆ, ಲೈಂಗಿಕ ಶಿಕ್ಷಣದ ಕೊರತೆ ನಮ್ಮನ್ನು ಈ ಕಾಮ ಕೂಪಕೆ ದೂಡಿದೆ.

ನೀರಡಡಿಕೆ-ಊಟ-ನಿದ್ದೆಯಂತೆ ಕಾಮವೂ ಮನುಷ್ಯನ ಅಗತ್ಯ, ಇದನ್ನು ಉಳಿದ ಅಗತ್ಯಗಳಂತೆ ಹೇಗೆ ಮಿತವಾಗಿ ಜಾಗರೂಕತೆಯಿಂದ ಬಳಸಬೇಕೆಂದು ಹೇಳುವ ಸಂಕೋಚದಿಂದಾಗಿ *ಕಾಮ* ಭಯ, ಕುತೂಹಲ ಹಾಗೂ ಮನೋರೋಗವಾಗಿ ನಮ್ಮನ್ನು ಕಾಡಿ ಮೆತ್ತಗೆ ಮಾಡಿದೆ.

ಅದು ತಾನಾಗಿಯೇ ಅರ್ಥವಾಗುವ ವಿದ್ಯೆ ಎಂಬ ನಂಬಿಕೆ ಇಂದಿನ ಈ ಸ್ಥಿತಿಗೆ ಕಾರಣ. ಆಹಾರ, ವಿಹಾರ ಕ್ರಮಗಳಲಿ ಗಂಟೆ ಗಟ್ಟಲೆ ಮಾತನಾಡುವ ನಾವು ಕಾಮದ ವಿಷಯ ಬಂದ ಕೂಡಲೇ ಗಪ್ ಚುಪ್. ಶ್ ! ಎಂಬ ಸನ್ನೆ ಸೂಕ್ಷ್ಮತೆ.

ಜಗತ್ತಿನ ಯಾವುದೇ ಮುಂದುವರೆದ  ರಾಷ್ಟ್ರಗಳ ಬಹು ದೊಡ್ಡ ಸಂಗತಿ ಕಾಮವಾಗಿ ಉಳಿದಿಲ್ಲ.
ಆದರೆ ನಾವದನ್ನು ವ್ಯಾಖ್ಯಾನಿಸುವ ರೀತಿಯೇ ವಿಪರೀತ. ಅವರದು ಸ್ವೇಚ್ಛಾಚಾರ, ಸಂಸ್ಕೃತಿ‌ ಹೀನ ಎಂಬ ಹೀಗಳಿಕೆ. ಮುಚ್ಚಿಡಬೇಕಾದ ಕಾಮ ಹೀಗೆ ಬಟಾ ಬಯಲಾಗಬಾರದೆಂಬ ಮಡಿವಂತ ಮಾತು ಆದರೆ ಮನಸಿನ ತುಂಬ ಹೀನ ಆಲೋಚನೆಗಳ ಹಾದರ.

*ಕಂಡವರ ಖಾಸಗಿ ಕಾಮುಕ ಬದುಕಿನ ಬಗ್ಗೆ ಟೀಕೆ ಮಾಡಿ ಕಾಲಹರಣ ಮಾಡುವ ಬಾಯಿಚಪಲ, ಒಣ ವೇದಾಂತ*.

ಬಾಲ್ಯದಿಂದಲೇ ನೀಡದ ಲೈಂಗಿಕ ಶಿಕ್ಷಣದ ಅರಿವು ಈ ಎಲ್ಲ ದುರಂತಗಳ ಆಗರ.
ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗೆ, ಪಾಲಕರಿಗೆ ಸಂಕೋಚವಾದರೆ ಸೂಕ್ತ ವೈದ್ಯರು ಹಾಗೂ ಮನೋವಿಜ್ಞಾನದ ಆಪ್ತಸಮಾಲೋಚಕರ ಮೂಲಕ ಹೇಳಿಸುವ ಔದಾರ್ಯವೂ ಕಾಣದಾಗಿದೆ.

*ಧರ್ಮದ ಹೆಸರಿನಲ್ಲಿ, ಮಡಿವಂತಿಕೆ ನೆಪದಲ್ಲಿ ಮುಚ್ಚಿಟ್ಟ ಕಾಮ ಬೆಳೆದಾದ ಮೇಲೆ ತೊಡೆಯ ಮೇಲೆ ಸುಳಿದಾಡುವ ಘಟಸರ್ಪವಾಗಿ ಬುಸುಗುಟ್ಟು ಯುವಕರನ್ನು ಕಚ್ಚಿ ಸಾಯಿಸುತ್ತಿದೆ*.

ಮೊನ್ನಿನ ನನ್ನ #metoo ಲೇಖನ ಓದಿ ಪ್ರತಿಕ್ರಿಯಿಸಿದ  ಅಮೆರಿಕಾ ನಿವಾಸಿ ಕನ್ನಡಿಗ ಸ್ನೇಹಿತೆ ವೃತ್ತಿಯಿಂದ ವೈದ್ಯರು.
ಇದೇ ವಿಷಯ ಚರ್ಚಿಸಿದರು. ನಮ್ಮ ಕುಟುಂಬ ಹಾಗೂ ಶಿಕ್ಷಣ ವ್ಯವಸ್ಥೆ ಕುರಿತು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಆರಂಭದಲ್ಲಿ ಅಲ್ಲಿನ ಮುಕ್ತ ಕಾಮದ ಬಗ್ಗೆ ಹೇಸಿ ಭಾವ ಇತ್ತಂತೆ. ಇಲ್ಲಿ ತಮ್ಮ ಮಕ್ಕಳು ಹಾಳಾದರೆ ಹೇಗೆಂಬ ಆತಂಕವೂ ಇತ್ತಂತೆ. ಆದರೆ ಅಲ್ಲಿನ ಶಾಲೆಗಳಲ್ಲಿ ನೀಡುವ ಲೈಂಗಿಕ ಶಿಕ್ಷಣದ ವಿಧಾನದಿಂದಾಗಿ ಅವರ ಆತಂಕ ದೂರಾದ ಬಗೆ ವಿವರಿಸಿದರು.

ನಮ್ಮದೇನಿದ್ದರೂ ಅಪೂರ್ಣ ವಿಧಾನ. ಯಾವುದರಲ್ಲೂ ಆಳ, ತಲಸ್ಪರ್ಶಿ ಅಧ್ಯಯನ ಇರುವುದಿಲ್ಲ. ಧೈರ್ಯದಿಂದ, ಆತ್ಮವಿಶ್ವಾಸ ಮೂಡುವ ರೀತಿಯ ಆಳ ನಿರೂಪಣೆ ಇರದ superficial ಗೌಪ್ಯ ನೀತಿಯಿಂದ ಪರಿಪೂರ್ಣ ಶಿಕ್ಷಣ ದಕ್ಕುವುದಿಲ್ಲ. ಕೆಲವೊಮ್ಮೆ ಇದರಿಂದಾಗಿ ಅದನ್ನು ನೀಡುವ ಜನರೇ ಶೋಷಕರಾಗುವ ಅಪಾಯ ಉಂಟಾಗುತ್ತದೆ.

ಮುಕ್ತ ಮಾತುಗಳ ಸಹಿಸುವ ಮನೋಧರ್ಮ ನಮ್ಮದಲ್ಲ. *ಏ ಹಾಗೆ ಮಾತಾಡಬೇಡ, ಮಕ್ಕಳು ಮಹಿಳೆಯರಿದ್ದಾರೆ* ಎಂಬ ಎಚ್ಚೆರದ ಹಿಂಜರಿತ.

ಆಧ್ಯಾತ್ಮದ ಕೆಲವು ಭಾಗವಾಗಿ ಕಾಮದ ಕುರಿತು ಮಾತನಾಡಿದ ಆಧ್ಯಾತ್ಮ ಚಿಂತಕ  ಓಶೋನನ್ನು ಸೆಕ್ಸ್ ಗುರು ಎಂದು ಹೀಯಾಳಿಸಲಾಯಿತು.  ಅನುಭವ ಚಿತ್ರಕ್ಕೆ ಎ ಸರ್ಟಿಫಿಕೇಟ್ ನೀಡಲಾಯಿತು.

ಮನದ ಮುಂದಣ ಆಸೆಯ ನಿಯಂತ್ರಿಸುವ ಕಲೆಯನ್ನು ನಮ್ಮ ಧಾರ್ಮಿಕ ಮುಖಂಡರು ಹೇಳಿ ಕೊಡಲೇ ಇಲ್ಲ.

ಅವರು ಕೂಡ “ *ಹೆಣ್ಣು-ಹೊನ್ನು-ಮಣ್ಣು* ಮಾಯೆ ನೀವು ಅವುಗಳಿಂದ ದೂರ ಸರಿಯಿರಿ” ಎಂಬ ಅವಾಸ್ತವ, ಅಸಾಧ್ಯ ಹಿತವಚನಗಳ ಹೇಳುತ್ತ ಅವರೇ ಅವುಗಳ ದಾಸರಾಗಿ ಒದ್ದಾಡುತ್ತಾರೆ. ನಾವು ಅಂತಹ impractical ಸಂತರ ಕಾಲು ನೆಕ್ಕಿ ಕೃತಾರ್ಥರಾಗುತ್ತೇವೆ.

ಮುಚ್ಚಿಡ ಬಯಸುವ ಕಾಮದ ಕುರಿತು ಮುಕ್ತವಾಗಿ ಮಾತಾನಾಡಿ ಬರೆಯುವವರ ಮೇಲೆ ಸಂಸ್ಕೃತಿಯ ಹೆಸರಿನ ನೈತಿಕ ಪೋಲಿಸಗಿರಿ.

ಕೃಷಿ ಮಹಿಳೆಯರು, ಗಾರ್ಮೆಂಟ್ ಫ್ಯಾಕ್ಟರಿಗಳಲಿ ಹೊಟ್ಟೆ ಪಾಡಿಗಾಗಿ ದುಡಿಯುವ ಮಹಿಳೆಯರು ಮೇಸ್ತ್ರಿಗಳ ಕಾಮತೃಷೆಗಾಗಿ ಬಲಿಯಾಗುವವರ ಕಣ್ಣೀರು ಒರೆಸುವರಾರು?

ಸಾಮಾಜಿಕ ಜಾಲತಾಣದ ಗಂಧ ಗಾಳಿ ಗೊತ್ತಿರದ ಲಕ್ಷಾಂತರ ಮಹಿಳೆಯರಿಗೂ #metoo ಚಳುವಳಿ ನ್ಯಾಯ ಒದಗಿಸಲಿ.
ಇದು ಕೇವಲ ತಾರಾಮಣಿಗಳ ತಳಮಳ ಎಂಬ ನೆಪ ಮಾಡಿ  ಹತ್ತಿಕ್ಕುವ ಹುನ್ನಾರ ಸರಿಯಲ್ಲ.

*ಬಾಯಿ ಬಿಟ್ಟರೆ ಬಣ್ಣಗೇಡು*  ಎಂಬಂತಾಗಿ ಎಲ್ಲರೂ ಕಂಗಾಲಾಗದೇ ಧೈರ್ಯದಿಂದ ಎದುರಿಸಿ ಹೋರಾಟಕ್ಕೆ ಪರಿಹಾರ ಕಂಡು ಕೊಳ್ಳಬೇಕು.

ಹಿಂದಿನ  ವ್ಯವಸ್ಥೆಯ ತಪ್ಪಿನಿಂದಾಗಿ ನಾವು ತಪ್ಪು ಮಾಡಿದ್ದೇವೆ ಆದರೆ ಮುಂದೆ ಹೀಗಾಗುವುದನ್ನು ತಡೆಯಬೇಕೆಂಬ ಸಂಕಲ್ಪ ಮಾಡಬೇಕು.
ಈ ಚಳುವಳಿ ದುರುಪಯೋಗ ಮಾಡಿಕೊಂಡು ಸೆಲೆಬ್ರಿಟಿ ಪುರುಷರ ಮಾನ ಕಳೆಯುವ ಸಣ್ಣತನ ಬಿಡಬೇಕು.

ಶಿಕ್ಷಣ, ಮಾಧ್ಯಮ, ಹಾಗೂ ಧಾರ್ಮಿಕ ಮುಖಂಡರು ಸಕಾರಾತ್ಮಕ ಬೆಂಬಲ ನೀಡಬೇಕು.

ಎಷ್ಟೇ ಪರ-ವಿರೋಧ ಚರ್ಚೆಯಾದರೂ ಚಳುವಳಿ‌ಯನ್ನು ಹತ್ತಿಕ್ಕಬಾರದು.

#metoo #wetoo ಘೋಷವೂ ಮೊಳಗಲಿ…

*ಸಿದ್ದು ಯಾಪಲಪರವಿ*

ಪೊಯೆಟಿಕ್ ಜಸ್ಟಿಸ್

*Poetic justice- ವಿಜಯದಶಮಿ ಮತ್ತು ವರ್ತಮಾನ*

ವಿಜಯ ದಶಮಿ ನಿಮಿತ್ಯ ಅನೇಕ ಕತೆಗಳು. ದುಷ್ಟ ಸಂಹಾರದ ಸಂಕೇತಗಳಿಂದ ಆರಂಭವಾಗಿ ಮನದೊಳಗಿನ ದುಷ್ಟತನದ ಸಂಹಾರದ ವ್ಯಾಖ್ಯಾನಗಳ ಸಂದರ್ಭದಲ್ಲಿ ನೆನಪಾದ #Poetic justice ಎಂಬ ಪದ.

ನಮ್ಮ ಬದುಕಿನಲ್ಲಿ ನ್ಯಾಯ-ಅನ್ಯಾಯ, ಧರ್ಮ-ಅಧರ್ಮ, ಸೋಲು-ಗೆಲುವು ಅನಿಸಿದಾಗಲೆಲ್ಲ “ ಅಯ್ಯೋ ಯಾಕೆ ಹೀಗಾಯಿತು ? “ ಎಂಬ ಹಳಹಳಿಕೆ.

*ಬಾರದು ಬಪ್ಪದು ಬಪ್ಪುದು ತಪ್ಪದು* ಎಂಬ ವಚನದ ಸಾಲುಗಳ ಜಾಡ ಹಿಡಿದು ಹೋಗುವಾಗ ಮಾಡದ ತಪ್ಪಿಗೆ ಶಿಕ್ಷೆಗಾಗಿ ತಲ್ಲಣಿಸುತ್ತೇವೆ. ಹಾಗಾದರೆ ನಾವು ತಪ್ಪು ಮಾಡಿಲ್ಲ ಅಂದುಕೊಳ್ಳುವುದೇ ಮಾಹಾ ತಪ್ಪು.

ತಪ್ಪು ನಮ್ಮ ಮನದ ಮುಂದಣ ದುರಾಸೆ, ಮಹತ್ವಾಕಾಂಕ್ಷೆಯಿಂದಾಗಿಯೇ ನಡೆದಿರುತ್ತದೆ.

ನಮ್ಮ ಮಹಾಕಾವ್ಯಗಳು ಹೇಳುವದು ಅದನ್ನೇ.
*ಹೆಣ್ಣು-ಹೊನ್ನು-ಮಣ್ಣು* ನೆಪ ಇಟ್ಟುಕೊಂಡು ಘಟಿಸಿದ ರಾಮಾಯಣ, ಮಹಾಭಾರತದ ಕತೆಗಳಿಂದ ಪಾಠ ಕಲಿಯದೇ ಅವೇ ತಪ್ಪನ್ನು ಮಾಡುತ್ತ ರಾಮ ರಾವಣರಾಗಿ ಸಂಭ್ರಮಿಸುತ್ತೇವೆ.

ರಾಮ ರಾವಣ, ಪಾಂಡವ ಕೌರವರಾಗುವ ಅವಕಾಶ ನಮ್ಮಲ್ಲಿದ್ದರೂ ಅಧರ್ಮದ ಹಾದಿ ಹಿಡಿಯುತ್ತೇವೆ.

ವಿಲಿಯಂ ಶೇಕ್ಸ್‌ಪಿಯರ್ ಬಳಸಿದ poetic justice ಎಲ್ಲ ಕಾಲಕ್ಕೂ ಹೊಸ ಅರ್ಥ ಪಡೆಯುತ್ತದೆ.

ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ದೌರ್ಬಲ್ಯವನ್ನು *Tragi flaw* ಎಂದು ಗುರುತಿಸಿ ಅವನ ದುರಂತಕೆ ಅವನ flaw ಕಾರಣ ಎಂಬ ಜಾಣ Poetic justice ಭಿನ್ನ ಆಯಾಮ ಪರಿಚಯಿಸುತ್ತಾನೆ. ಹಣೆಬರಹ, ವಿಧಿ ಅವನ ದುರಂತ ನಾಟಕಗಳಲಿ ಎರಡನೇ ಸ್ಥಾನ ಪಡೆಯುತ್ತವೆ‌.  ಮೊದಲ ಆದ್ಯತೆ ದೌರ್ಬಲ್ಯ.

ಮನುಷ್ಯ ತನ್ನ ಮಿತಿ ಅರಿತುಕೊಳ್ಳದೇ ನರಳುತ್ತಾನೆ, ಅದರ ಮುಂದುವರೆದ ವಿವರಣೆಯೇ ಆತ್ಮಾವಲೋಕನವೆಂಬ #SWOT analysis.

ಅವನ ನಾಟಕಗಳ ದುರಂತ ನಾಯಕರಿಗೆ ನ್ಯಾಯ ಸಿಗಲಿಲ್ಲ ಎಂಬ ಕೊರಗು ಪ್ರೇಕ್ಷಕರಿಗೆ ಉಂಟಾಗದೇ flaw ವಿಶ್ಲೇಷಣೆ ಮಾಡುತ್ತ ಮರುಗುತ್ತಾರೆ.

*ಅನುಮಾನಿಸುವ ಒಥೆಲೋ , ಮಂದಗತಿಯ ಹ್ಯಾಮ್ಲೆಟ್, ಮಹತ್ವಾಕಾಂಕ್ಷೆಯ ಮ್ಯಾಕ್ ಬೆತ್ ಹಾಗೂ ವಯೋಮಾನದ ಮಿತಿ ಅರಿಯದ ಮುಪ್ಪಿನ ಕಿಂಗ್ ಲಿಯರ್* ನಮಗೆ ಎಚ್ಚರಿಕೆ ಗಂಟೆಯಾಗಬೇಕು.

ಮನುಷ್ಯ ಈ ನಾಲ್ಕು ಹಂತಗಳನ್ನೂ ದಾಟಿ ಅಂತ್ಯ ಕಾಣುತ್ತಾನೆ. ಯೌವನದಲ್ಲಿ ಈ ನಾಲ್ಕು ಪಾತ್ರಗಳನ್ನು ಅರ್ಥಮಾಡಿಕೊಂಡರೂ ನಾವೂ ದುರಂತ ನಾಯಕರಾಗಿ ಮರೆಯಾಗುತ್ತೇವೆ.
ಹಾಗೆ ದುರಂತದಲ್ಲಿ ಮರೆಯಾಗುವಾಗ ಮೊದಲು ನಮ್ಮೊಳಗಿದ್ದ tragic flaw ಮರೆತು ದುಃಖ ಪಡುತ್ತೇವೆ. ಅವೇ ಹೆಣ್ಣು-ಹೊನ್ನು-ಮಣ್ಣು ಮತ್ತು ಅದರಾಚೆಗಿನ ತಳಮಳ.

ನಮ್ಮ ಶರಣರು, ಸಾಧು ಸಂತರುಗಳು, ಬುದ್ಧ ಹೇಳಿದ್ದು ಇದನ್ನೇ ಅಲ್ಲವೇ?
*ಆಸೆಯೇ ದುಃಖಕ್ಕೆ ಮೂಲ, ಮನದ ಮುಂದಣ ಆಸೆಯೇ ಮಾಯೆ*.

ಮನದ ಮುಂದಣ ಅಂದದ ಮಾಯೆಗೆ ಬೆನ್ನು ಹತ್ತಿ ನರಳಿ ವರ್ತಮಾನದ ಸುಖ ಕಳೆದುಕೊಳ್ಳುತ್ತೇವೆ.
ಕೀರ್ತಿ ಶನಿಯ ಹೆಗಲೇರಿಸಿಕೊಂಡು ಅದರ ಮೂಲಕ ಹೆಣ್ಣು-ಹೊನ್ನು-ಮಣ್ಣು ಸುಲಭವಾಗಿ ದಕ್ಕಲಿ ಎಂಬ ಹೊಸ ಖಯಾಲಿ.

ಅದಕ್ಕಾಗಿಯೇ ಈ #metoo, #wetoo ರೋಗಗಳ ಹರಿದಾಟ. ಎಲ್ಲ ಕಾನೂನು ಹಾಗೂ ನಿಯಮಗಳ ದುರುಪಯೋಗದ ಹಪಾಹಪಿ. 

ಕೀರ್ತಿ ಗಳಿಸಲು, ಮೇಲೆರಲು ಕಂಡ ಕಂಡವರ ಕಾಲು ನೆಕ್ಕಿ, ಹಿಡಿದು, ಹೊಗಳಿ, ಸಾಧ್ಯವಾದರೆ ತಲೇನೂ ಹಿಡಿಯುವ ಅಸಹ್ಯ.
ಹೀನ ಕೆಲಸ  ಮಾಡದವರು ಬೇಗ ಮೇಲೇರುವುದಿಲ್ಲ, ಸ್ವಯಂಪ್ರತಿಭೆ ಇದ್ದವರು ನಿಧಾನವಾಗಿಯಾದರೂ ಮೇಲೇರುತ್ತಾರೆ.
ಹಾಗೆ ಸಾಧಿಸಲು ಅಪಾರ ಸಹನೆ, ಸಂಯಮ ಬೇಕು.
ಆ ಸಂಯಮ ಇದ್ದರೆ ಖಂಡಿತವಾಗಿ ಪೊಯಟಿಕ್ ಜಸ್ಟಿಸ್ ತನ್ನ ಅರ್ಥ ಉಳಿಸಿಕೊಳ್ಳುತ್ತದೆ.

ಜಗದ ಮೊಟ್ಟ ಮೊದಲ ಲಿಬರೇಟೆಡ್ ಮಹಿಳೆ, ಮೊದಲ ಕವಿ, ಆಧ್ಯಾತ್ಮ ಸಾಧಕಿ *ಅಕ್ಕಮಹಾದೇವಿ* ಯಾವುದೇ #metoo ಆರೋಪ ಮಾಡದೇ ದಟ್ಟ ಕಾಡಲಿ ಏಕಾಂಗಿಯಾಗಿ ಸಂಚರಿಸಿ ಮಹಿಳೆಯ ನೈತಿಕ ಮಟ್ಟದ ಹಿರಿಮೆ ಮರೆದ ಮಹಾ ಚಲುವೆ. ಅನುಭವ ಮಂಟಪದ ಶರಣರ ಪಾಲಿನ ದೊಡ್ಡಕ್ಕಳಾದಳು.
ಕೌಶಿಕ ಮಹಾರಾಜನ ದುಷ್ಟ ಬಾಹುಗಳಿಗೂ ದಕ್ಕಲಿಲ್ಲ.

ನಮಗೆ ಅಕ್ಕ ಹಾಗೂ ಈ ದೇಶದ ಲಕ್ಷಾಂತರ ಗ್ರಾಮೀಣ ಮಹಿಳೆಯರು, ಆದರ್ಶ ಗೃಹಿಣಿಯರು ಮಾದರಿಯಾಗಬೇಕು. ಅವರು ತಮ್ಮನ್ನು ಕೆಣಕುವ ಕಾಮುಕರಿಗೆ *ಯಾಕೋ ಭಾಡ್ಕೋ ಹೆಂಗಿದೆ ಮೈಗೆ* ಎಂದು ಅಲ್ಲೇ ಜಾಡಿಸಿ ಒದ್ದು ಹೋಗಿ ಕಣ್ಣು ತೆರೆಸುತ್ತಾರೆ, #ಮೀಟೂ #ಮಿಟೂ ಎಂದು ಆರೋಪ ಮಾಡದೇ. ಯಾವುದೇ ಕಾನೂನು ಕೈಗೆ ತೆಗೆದುಕೊಳ್ಳದೆ ಚಾರಿತ್ರ್ಯವೆಂಬ ಆತ್ಮವಿಶ್ವಾಸದ ಆಯುಧದ ಮೂಲಕ ತಮ್ಮನ್ನು ಸಂರಕ್ಷಿಸಿಕೊಂಡಿರುತ್ತಾರೆ.

ಮಹತ್ವಾಕಾಂಕ್ಷೆ, ಹಣ, ಪ್ರಚಾರದ ಬೆನ್ನು ಹತ್ತಿದವರು, ಕೀರ್ತಿ ಶನಿಯ ಹೆಗಲಿಗೆ ಏರಿಸಿಕೊಂಡವರ ದೌರ್ಬಲ್ಯವ ಗುರುತಿಸಿ ಕಾಮುಕರು ಕೌಶಿಕರಾಗುತ್ತಾರೆ.
ಅಸಹಾಯಕತೆ ಹೇಳಿಕೊಂಡು ನೆರವು ಕೇಳಲು  ಬರುವವರನ್ನು ಸಹಾಯದ ಮುಖವಾಡದಿ ಶೋಷಣೆ ಮಾಡುವ ಜನ ಕೂಡ ಇದ್ದಾರೆ. ಮುಖವಾಡಗಳ ಅರಿಯುವ ವಾತಾವರಣ ಸೃಷ್ಟಿ ಮಾಡಬೇಕು.

ಆಂತರಿಕ ನೈತಿಕ ತಾಕತ್ತು ಹೊಂದಿದ, ಗಟ್ಟಿ ಮನಸಿನ ಸುಂದರ ಮಹಿಳೆಯರ ತಂಟೆಗೆ ಕಾಮುಕರು ಯಾಕೆ ಹಾಯುವುದಿಲ್ಲ?.
ಇಲ್ಲಿ ಕೂಡ ಕೊಂಡುಕೊಳ್ಳುವ ಪ್ರಯೋಗದ ನಂತರ ನಿರ್ಧರಿಸುತ್ತಾರೆ.

*ಕಡೇ ಮಾತು*

*ಮನದ ತುಂಬ ಆಸೆಗಳ, ಕಣ್ಣ ತುಂಬ ಕನಸುಗಳ,  ಮೈತುಂಬ ಸೌಂದರ್ಯ ಇಟ್ಟುಕೊಂಡಿರುವ ನನ್ನ ಮಕ್ಕಳ ಸಮಾನರಾದ ಹುಡುಗಿಯರ ಮನಸ್ಥಿತಿ ಗಟ್ಟಿಗೊಳಿಸಲು ಮಿಟೂ ಬಳಕೆಯಾಗಲಿ*.

ಯಾವುದೋ ಕಾಲದಲ್ಲಿ ನಡೆದ ಘಟನೆಗಳನ್ನು ಕೆದಕಿ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡಬಾರದು. ಆಗ ಸುಮ್ಮನಿದ್ದು ಏಣಿ ಏರಿದ ಮೇಲೆ ಈಗ ಹಾರಾಡಿ ವಿಕೃತರನ್ನು ಇನ್ನೂ ವಿಕೃತಗೊಳಿಸಬಾರದು.

ಹೋರಾಟಗಳು ಹಾದಿ ತಪ್ಪಿ ದುರುಪಯೋಗಬಾರದು.

  #ಸಿದ್ದು ಯಾಪಲಪರವಿ.

ತೋಂಟದಾರ್ಯ ಸ್ವಾಮಿಗಳು

*ಸಾಮಾಜಿಕ ನ್ಯಾಯ, ಜನಪರ ಹೋರಾಟಗಳ ಸಂತ: ಕನ್ನಡದ ಜಗದ್ಗುರು ಡಾ.ತೋಂಟದಾರ್ಯ ಸ್ವಾಮಿಗಳು*

ಧಾರ್ಮಿಕ ಮಡಿವಂತನೆಗಳನ್ನು ಸಾರಾಸಗಟ ತಿರಸ್ಕರಿಸಿ ಮೂಲಭೂತ ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದ ಶ್ರೇಯಸ್ಸು ಗದುಗಿನ ತೋಂಟದಾರ್ಯ ಸಿದ್ಧಲಿಂಗ ಸ್ವಾಮಿಗಳಿಗೆ ಸಲ್ಲುತ್ತದೆ.
೧೯೭೪ ರಲ್ಲಿ ಪೀಠಾರೋಹಣದ ನಂತರ ಅನೇಕ ಗೊಡ್ಡು ಸಂಪ್ರದಾಯಗಳಿಗೆ ತಿಲಾಂಜಲಿ ಇಟ್ಟರು. ಪೀಠ ಪರಂಪರೆಯ ನೆಪದಲ್ಲಿ ಆಚರಿಸುತ್ತಿದ್ದ ಮೂಢ ನಂಬಿಕೆಗಳನ್ನು ಜನರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಬದಲಾಯಿಸಿದರು.‌
ಜಾತ್ರೆಯ ಸಂದರ್ಭದಲ್ಲಿ ತೇರಿನ ಗಾಲಿಗೆ ಅನ್ನ ಹಾಕುವುದನ್ನು ತಡೆದರು. ಹಸಿದವರು ತಿನ್ನುವ ಅನ್ನ ಪ್ರಸಾದಕ್ಕೆ ಸಮ, ಅದನ್ನು ಗಾಲಿಗೆ ಸುರಿಯುವುದು ಮೂರ್ಖತನವನ್ನು ವೈಚಾರಿಕವಾಗಿ ಪ್ರಶ್ನಿಸಿದ್ದನ್ನು ಅನೇಕ ಮಠಾಧೀಶರು ಇಷ್ಟಪಡಲಿಲ್ಲ.
ಸ್ವಾಮಿಗಳು ಭಕ್ತರು ಹೊರುವ  ಪಲ್ಲಕ್ಕಿಯಲ್ಲಿ ಕುಳಿತುಕೊಂಡು ಮೆರೆಯುವುದು ಅಮಾನವೀಯ ಎಂದು ಘೋಷಿಸಿ ಪಾದಯಾತ್ರೆ ಮೂಲಕ ಜಾತ್ರೆಯಲ್ಲಿ ಭಾಗವಹಿಸಿದರು.
ಇವರ ಸಿಂಹ ಘರ್ಜನೆಯ ಮಾತುಗಳ ಕೇಳಿ ಸಂಪ್ರದಾಯವಾದಿಗಳು ಬಾಲ ಮುದುರಿಕೊಂಡರು.
ಬಸವಾದಿ ಶರಣರ ವಚನಗಳನ್ನು, ಕನ್ನಡ ಸಾಹಿತ್ಯದ ಪ್ರಗತಿಶೀಲ, ನವ್ಯ ಸಾಹಿತ್ಯದ ಒಡನಾಡಿಯೂ ಆಗಿದ್ದ ಶ್ರೀಗಳು ಹಂತ ಹಂತವಾಗಿ ಸರಳೆತೆಯನ್ನು ಜಾರಿಗೊಳಿಸಿದರು.

ಸ್ವಾಮಿಗಳು ಪೂಜೆ, ಧ್ಯಾನಗಳ ಮೂಲಕ ಭಕ್ತರು ಕೊಡುವ ಕಾಣಿಕೆ, ಪ್ರಸಾದ ತಿಂದು ಕಾಲ ಕಳೆಯಲಿ ಎಂಬ ವಾದವನ್ನು ಕಠೋರವಾಗಿ ಪ್ರಶ್ನಿಸಿದರು. ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕಲಿಸಿದ ಜಾತ್ಯಾತೀತ ಮೌಲ್ಯಗಳ ಅನುಸಂಧಾನವನ್ನು ಪ್ರತಿ ಸೋಮವಾರದ ಶಿವಾನುಭವ ಚಿಂತನ ಗೋಷ್ಟಿಗಳ ಮೂಲಕ ಚರ್ಚೆಗೆ ಒಡ್ಡಿದರು.
ಎಡಪಂಥೀಯ ವಿಚಾರವಾದಿಗಳಿಗೆ ವೇದಿಕೆ ಮೇಲೆ ಅಭಿಪ್ರಾಯ ಹಂಚಿಕೊಳ್ಳುವ ಅವಕಾಶ ಕಲ್ಪಿಸಿದರು.
ಈಗ ಎರಡು ಸಾವಿರ ಗಡಿ ದಾಟಿರುವ ಶಿವಾನುಭವಗಳಿಗೀಗ ಗಿನ್ನಿಸ್ ದಾಖಲೆ.

ದೀನ ದಲಿತರು, ಮುಸ್ಲಿಂ , ಕ್ರಿಶ್ಚಿಯನ್ ಹಾಗೂ ಇತರ ಸಮುದಾಯದ ಹಬ್ಬಗಳನ್ನು ಮಠದ ಶಿವಾನುಭವಗಳಲ್ಲಿ ಆಚರಿಸಿದ ಮೊದಲ ಲಿಂಗಾಯತ ಮಠಾಧೀಶರು.
ಅನ್ಯ ಧರ್ಮೀಯರನ್ನು ಮಠದಲ್ಲಿ ಅಷ್ಟೇ ಅಲ್ಲ, ತಮ್ಮ ಪೂಜಾ ಮಂದಿರದಲ್ಲಿ ಕರೆದುಕೊಂಡು ಊಟ ಮಾಡಿದರು.
ಮಠಕ್ಕೆ ಬರುವ ಅತಿಥಿಗಳ ಜೊತೆ ಸಮೂಹ ಪಂಕ್ತಿ ಭೋಜನ ಮಾಡಲಾರಂಭಿಸಿದರು. ದಲಿತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಮುಕ್ತ ಪ್ರವೇಶ ನೀಡಿದರು. ಜಾತಿ ಕೇಳುವ ಅಮಾನವೀಯತೆಯ ಕೈ ಬಿಟ್ಟರು. ಭಕ್ತ ಸಮೂಹಕ್ಕೆ ಆರಂಭದಲ್ಲಿ ಇದು ಆಘಾತಕಾರಿ ಅನಿಸಿದರೂ, ತಮಗೆ  ಮನಸ್ಸಿರದಿದ್ದರೂ ಪೂಜ್ಯರ ಇಚ್ಛಾಶಕ್ತಿಗೆ ಶರಣಾಗಿ ಮೌನ ತಾಳಿದರು.

ಸ್ವಾಮಿಗಳಿಗೂ ಸಾಮಾಜಿಕ ಹೋರಾಟಕ್ಕೂ ಸಂಬಂಧವೇ ಇಲ್ಲದ ಕಾಲಘಟ್ಟದಲ್ಲಿ ಕನ್ನಡ ಪರ ಗೋಕಾಕ ಚಳುವಳಿಯಲ್ಲಿ ಭಾಗವಹಿಸಿ ಅನೇಕ ಸಂಪ್ರದಾಯವಾದಿ ಮಠಾಧೀಶರ ಪಾಲಿನ ಬಿಸಿ ತುಪ್ಪವಾದರು.

“ಸ್ವಾಮಿ ಮಠದ ಒಳಗ ಗೌಪ್ಯವಾಗಿ ಕುಂತರ ಕೆಡತಾನ , ಅವನ ಖಾಸಗಿ ಬದುಕು ತೆರೆದ ಪುಸ್ತಕಧಂಗ ಇರಬೇಕು” ಎಂದು ಸಾರ್ವಜನಿಕ ಜೀವನ ಪ್ರವೇಶಿಸಲು ಕರೆ ಕೊಟ್ಟರು.
ಗೋಕಾಕ ಚಳುವಳಿ ತೀವ್ರ ಸ್ವರೂಪ ಪಡೆಯಲು ತೋಂಟದಾರ್ಯ ಶ್ರೀಗಳ ಭಾಷಣ ಕಾರಣವಾಯಿತು.
ವೇದಾಂತ ಉಪದೇಶ ಮೂಲೆಗೆಸೆದು ವಾಸ್ತವ ಸಂಗತಿಗಳನ್ನು ಭಕ್ತರೊಡನೆ ಹಂಚಿಕೊಳ್ಳಲಾರಂಭಿಸಿದರು.
ಕಾಯಕ, ದಾಸೋಹದ ಪರಿಕಲ್ಪನೆಗೆ ಹೊಸ ಆಯಾಮ ಒದಗೊಸಲು ಡಂಬಳದ ಬಂಜರು ಭೂಮಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಬಾವಿ ತೋಡಿ ನೀರು ಬರಿಸಿ ವ್ಯವಸಾಯ ಪ್ರಾರಂಭಿಸಿದ್ದನ್ನು ಅನೇಕರು ಮರೆತಿಲ್ಲ.

“ಸ್ವಾಮಿತ್ವ ಅಂದರೆ ಅರಸೊತ್ತಿಗೆಯಲ್ಲ, ನಿಜ ಕಾಯಕವಾಗಬೇಕು ಎಂಬುದನ್ನು ಸ್ವತಃ ದುಡಿದು ತೋರಿಸಿದರು.
ಆಧುನಿಕ ಮಠಾಧೀಶರು ತಮ್ಮ ಪೂಜಾ ಕೊಠಡಿ ಬಿಟ್ಟು ಹೊರ ಬಂದ ಉದಾಹರಣೆಗೆ ಆಗ ಇರಲಿಲ್ಲ.‌
ಮುಂಡರಗಿ ತಾಲೂಕಿನ ಹಿಂದುಳಿದ ಹಳ್ಳಿ ಡಂಬಳದ ಅಭಿವೃದ್ಧಿಗೆ ತಾವೇ ಮುಂದಾದರು. ರೈತರ ಕಲ್ಯಾಣ ಹಾಗೂ ಶೈಕ್ಷಣಿಕ ವಾತಾವರಣ ಕಲ್ಪಿಸಲು ಗದುಗಿನಿಂದ ಡಂಬಳಕೆ ಪ್ರತಿ ಅಮವಾಸ್ಯೆಯೆಂದು ಹತ್ತು ವರ್ಷ ಪಾದಯಾತ್ರೆ
ಮಾಡಿದರು. ಅಭಿವೃದ್ಧಿ ಕಾಣುವ ತನಕ ನಿಲ್ಲಿಸಲೇ ಇಲ್ಲ.
ಧಾರ್ಮಿಕ ಜಾತ್ರೆ ರೈತರ ರೊಟ್ಟಿ ಜಾತ್ರೆಯಾಗಿ ಪರಿವರ್ತನೆಯಾಯಿತು. ಪ್ರತಿ ಮನೆಯಿಂದ ರೊಟ್ಟಿ ಸಂಗ್ರಹಿಸಿ ಸಾಮೂಹಿಕ ಊಟ ಮಾಡುವ ಪಾಲ್ಗೊಳ್ಳುವಿಕೆ ಗ್ರಾಮ ಸಾಮರಸ್ಯ ಕಾಪಾಡಲು ಕಾರಣವಾಯಿತು.

ತೊಂಬತ್ತರ ದಶಕದ ಅದ್ವಾನಿಯವರ ರಥಯಾತ್ರೆಯ ಪುರುಷಾರ್ಥವನ್ನು ಧಾರವಾಡದ ಸಭೆಯಲ್ಲಿ ಬಹಿರಂಗವಾಗಿ ಪ್ರಶ್ನಿಸಿ ತಮ್ಮ ದಿಟ್ಟ ಎಡಪಂಥೀಯ ನಿಲುವನ್ನು ನಿರೂಪಿಸಿದರು.
ಭಗವಾ ಧ್ವಜದ ಟೀಕೆಯನ್ನು , ರಾಷ್ಟ್ರ ದ್ವಜದ ಟೀಕೆ ಎಂದು ತಿರುಚುವ ಪ್ರಯತ್ನಕ್ಕೆ ಸಮರ್ಪಕ ಉತ್ತರ ನೀಡುವ ಎದೆಗಾರಿಕೆ ತೋರಿಸಿದರು.

ಬಸತತ್ವ ನಿಷ್ಠೆಯುಳ್ಳ ಇಲಕಲ್ಲ ಮಹಾಂತ ಸ್ವಾಮಿಗಳು ಜಂಗಮೇತರ ಸಮಾಜದ ವ್ಯಕ್ತಿಯನ್ನು ಉತ್ತರಾಧಿಕಾರಿಯಾಗಿ ನೇಮಿಸುವ ಸಂದರ್ಭದಲ್ಲಿ ಉಂಟಾದ ಗಲಭೆಯನ್ನು ತಮ್ಮ ಗಟ್ಟಿ ಬೆಂಬಲದಿಂದ ನಿಯಂತ್ರಿಸಿದರು.
ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಡಾ.ಎಂ.ಎಂ.ಕಲಬುರ್ಗಿಯವರ ಮಾರ್ಗದರ್ಶನದಲ್ಲಿ ನೂರಾರು ಸಂಶೋಧನಾ ಗ್ರಂಥಗಳು,  ಸಾವಿರಾರು ಸಾಹಿತ್ಯೇತರ ಅಪರೂಪದ ಐತಿಹಾಸಿಕ ಪುಸ್ತಕ ಪ್ರಕಟಿಸಿ ಪುಸ್ತಕ ಸ್ವಾಮೀಜಿ ಎಂದು ಖ್ಯಾತರಾದರು.
ಮಲಗಿ ಮುಲುಗುತ್ತಿದ್ದ ವಿಶ್ವವಿದ್ಯಾಲಯದ ಪ್ರಸಾರಾಂಗಗಳು ಎಚ್ಚರಾಗುವಂತೆ ಮಾಡಿದರು.
ಡಾ. ಎಂ.ಎಂ‌. ಕಲಬುರ್ಗಿ ಅವರ ಬಸವ ತತ್ವ ಚಿಂತನೆಗಳಿಗೆ ಗಟ್ಟಿ ಧ್ವನಿಯಾದರು. ಅವರು ಗುಡುಗಿದರೆ ಮಡಿವಂತ ಪರಂಪರೆಗೆ ನಡುಕ ಹುಟ್ಟುತ್ತಿತ್ತು.

ಕಪ್ಪತಗುಡ್ಡ ವಿನಾಶದ ಅಂಚಿಗೆ ದೂಡುವ ರಾಜಕೀಯ ಸಂಚನ್ನು ಬಯಲು ಮಾಡಿ ರಕ್ಷಣೆಗೆ ಬದ್ಧರಾದರು. ಪೋಸ್ಕೋ ಬಹುರಾಷ್ಟ್ರೀಯ ಕಂಪನಿ ಜಿಲ್ಲೆಗೆ ಬರುವ ಸುಳಿವು ಸಿಕ್ಕ ಕೂಡಲೇ ಬೀದಿಗಿಳಿದರು.
ರೈತರಿಗೆ ಭೂಮಿ ಹಾಗೂ ಮಣ್ಣಿನ ಮಹತ್ವ ವಿವರಿಸಿ ಭೂಮಿ ನೀಡದಂತೆ ತಡೆಯೊಡ್ಡಿದರು

ಆ ಸಂದರ್ಭದಲ್ಲಿ ಪ್ರಭಾವ ಬೀರಲು ಯತ್ನಿಸಿದ ಸಚಿವರುಗಳನ್ನು ಹತ್ತಿರ ಸೇರಿಸಿಕೊಳ್ಳದೇ ಜಾಣ, ನಿಸ್ವಾರ್ಥ ನಡೆ ತೋರಿದರು.
“ನ್ಯಾಯ ನಿಷ್ಟುರಿ ನಾ, ದಾಕ್ಷಿಣ್ಯ ಪರನಲ್ಲ” ಎಂಬ ಬಸವ ತತ್ವ ನಾಡಿಗೆ ಸಾರಿದರು. ಆಂತರಿಕ ರಾಜಕಾರಣದ ಒತ್ತಡ ಲೆಕ್ಕಿಸದೇ ರೈತರ ಮನ ಒಲಿಸಿದರು.
ಹಣದ ಆಸೆಗೆ ಭೂಮಿ ಮಾರಲು ಪ್ರೇರೇಪಿಸಿದ ಸಂಘಟನೆಗಳಿಗೆ ಆಘಾತ ನೀಡಿದರು.
ನಂತರ ಕಪ್ಪತಗುಡ್ಡವನ್ನು ಅಧಿಕೃತ ಗಣಿಗಾರಿಕೆ ನೆಪದಲ್ಲಿ ಬಲ್ದೋಟಾ ಕಂಪನಿಗೆ ನೀಡುವ ಆದೇಶವನ್ನು ಮರಳಿ ಪಡೆಯಲು ಅಹೋರಾತ್ರಿ ಧರಣಿ ನಡೆಸಿದರು.
ಎರಡನೇ ಬಾರಿ ಸಂಕಷ್ಟ ಎದಿರಿಸಿದ್ದ ಕಾಡನ್ನು ಉಳಿಸಿದರು.
ರಾಜಕಾರಣಿಗಳ ಒಳ್ಳೆಯ ಕಾರ್ಯಗಳನ್ನು ಹೊಗಳುತ್ತಿದ್ದರೂ ಅವರು ಹಾದಿ ಬಿಟ್ಟಾಗ ಮೂಗು ಹಿಡಿಯುತ್ತಿದ್ದರು.
ಹೊಗಳಿಕೆಯಷ್ಟೇ, ಟೀಕೆಯೂ ಉಗ್ರವಾಗಿರುತ್ತಿತ್ತು.

ಅವರ ನೇರ ಮಾತುಗಳಲಿ ಜನಪರ ಕಾಳಜಿ ಲಾಸ್ಯವಾಡುತ್ತಿತ್ತು, ಅವ್ವನ ಮಮತೆ ತುಂಬಿರುತ್ತಿತ್ತು.
ಒಮ್ಮೆ ಹೊಗಳಿಸಿಕೊಂಡವರು ತಪ್ಪು ಮಾಡಿದರೇ ಅಷ್ಟೇ ನಿರ್ದಾಕ್ಷಿಣ್ಯವಾಗಿ ಟೀಕೆ ಮಾಡಿ ಎಚ್ಚರಿಸುತ್ತಿದ್ದರು.

ಕಟ್ಟಾ ಬ್ರಹ್ಮಚರ್ಯ ಪೂಜ್ಯರ ನೈತಿಕ ಶಕ್ತಿಯಾಗಿತ್ತು. ಕಾಮ ನಿಗ್ರಹಕೆ ಕಾಯಕವೊಂದೇ ಸಾಕು ಎಂದು ಘಂಟಾಘೋಷವಾಗಿ ಹೇಳುವ ತಾಕತ್ತು ಅವರಿಗಿತ್ತು.
ನಿರಂತರ ಜನರ ಕಷ್ಟ ಸುಖ ಆಲಿಸುವ ತಾಳ್ಮೆಯೂ ಇವರ ಹೆಚ್ಚುಗಾರಿಕೆ.
ಆಧುನಿಕ ಮಠಗಳ ಐಷಾರಾಮಿ ಸಂಸ್ಕೃತಿಗೆ ತೋಂಟದಾರ್ಯ ಮಠದಲ್ಲಿ ಅವಕಾಶವಿರಲಿಲ್ಲ. ಇಲ್ಲಿ ಎಲ್ಲರೂ ಸರಿ ಸಮಾನ.
ಐಷಾರಾಮಿ ಜೀವನ ಶೈಲಿ ನಿರಾಕರಿಸಿ ಕೊನೆ ತನಕ ಸಾಮಾನ್ಯರೊಡನೆ, ಸಾಮಾನ್ಯರಂತೆ ಬಾಳಿದರು.

ದೇಸಿಯ ಖಡಕ್ ಮಾತು, ಆಳ ಅಧ್ಯಯನ, ಅಪಾರ ಸಾಮಾನ್ಯ ಜ್ಞಾನ ಹೊಂದಿದ್ದ ಪೂಜ್ಯರು ಲಕ್ಷಾಂತರ ಭಕ್ತರ ನೇರ ಸಂಪರ್ಕ ಹೊಂದಿದ್ದರು. ಅವರ ಕಷ್ಟ ಸುಖ ಖುದ್ದಾಗಿ ವಿಚಾರಿಸುವ ಮಾನವೀಯತೆ ಅವರಲ್ಲಿತ್ತು.

ಡಾ.ಕಲಬುರ್ಗಿಯವರ ಹತ್ಯೆಯ ನಂತರ ವ್ಯವಸ್ಥೆ ಕ್ರೂರತನಕೆ ನೊಂದುಕೊಂಡರು.
ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದ ಸಂದರ್ಭದಲ್ಲಿ ಬಹಿರಂಗ ಬೆಂಬಲಕೆ ನಿಂತು ತಾತ್ವಿಕ ಸಂಗತಿಗಳ ಸರಕಾರದ ಗಮನಕ್ಕೆ ತಂದರು. ಹೋರಾಟ ಕಾವೇರಲು ಬೆನ್ನೆಲುಬಾಗಿ ನಿಂತರು. 

ಹೀಗೆ ನಿರಂತರ ಓದು, ಓಡಾಟ, ಚಳುವಳಿ, ಪ್ರಖರ ಮಾತುಗಳ ಮೂಲಕ ಮಲಗಿದ ರಣ ಹೇಡಿ ಮನಸುಗಳ  ಎಚ್ಚರಿಸುತ್ತಲೇ ಇದ್ದರು.

ನಿನ್ನೆ ರಾತ್ರಿಯೂ ಎಂದಿನಂತೆ ವಿಜಯದಶಮಿ ಸಾರ್ವಜನಿಕ ಕಾರ್ಯಕ್ರಮದಲಿ ಭಾಗವಹಿಸಿ ಕೊನೆಯ ಆಶಿರ್ವಚನ ನೀಡಿದರು.
ಕನ್ನಡ ಪ್ರಗತಿಪರ ಮನಸುಗಳ ಅನಾಥ ಮಾಡಿ,
ಯಾರಿಗೂ ಸಾವಿನ ಸುಳಿವು ನೀಡದೇ ಮೌನವಾಗಿ ಹೊರಟೇ ಬಿಟ್ಟರು.

*ಸಿದ್ದು ಯಾಪಲಪರವಿ*

ಹೋರಾಟಕೀಗ

*#metoo ಹೋರಾಟಕೀಗ ಎಡ-ಬಲ ರೋಗ*

ನಮ್ಮ ಸಮಾಜದ ಒಳನೋಟದಲಿ, ಆಲೋಚನಾ ಕ್ರಮದಲ್ಲಿ ಸೈದ್ಧಾಂತಿಕ ವಾಸನೆ ಹೊಡೆಯುತ್ತಲೇ ಇರುತ್ತದೆ.
ಎಡ-ಬಲ, ಮೇಲು-ಕೀಳು, ಗಂಡು-ಹೆಣ್ಣು, ಕಪ್ಪು-ಬಿಳಿ,ಬಡವ-ಬಲ್ಲಿದ…
ಹೀಗೆ ತರತಮದ ಪೆಟ್ಟಿಗೆ ಎಲ್ಲ ಹೋರಾಟಗಳು ನಲುಗಿ ಹೋಗುತ್ತವೆ.

ಅಮೇರಿಕಾ ಮೂಲದ ಚಳುವಳಿ metoo ಭಾರತಕ್ಕೆ ಕಾಲಿಟ್ಟ ಕೂಡಲೇ ರಾಜಕಾರಣ ಶುರುವಾಯಿತು.
ನಮ್ಮದು ಮೊದಲೇ ಮಡಿವಂತ ದೇಶ. ಚಾರಿತ್ರ್ಯಹರಣವೆಂಬ ಅಸ್ತ್ರ ಹಿಡಿದು ಮಾನ ಹರಾಜು ಹಾಕುವ ಕುತಂತ್ರ ಮನಸ್ಥಿತಿ.
ಒಬ್ಬ ವ್ಯಕ್ತಿಯನ್ನು ಭ್ರಷ್ಟಾಚಾರ ಆರೋಪದ ಮೇಲೆ ಅಧಿಕಾರದಿಂದ ಕೆಳಗಿಳಿಸಲು ನೈತಿಕ ಹೊಣೆಗಾರಿಕೆಯೆಂಬ ಎಂಬ ಪದ ಬಳಕೆ ಚಾಲ್ತಿಯಲ್ಲಿತ್ತು.

ಆದರೀಗ ಭ್ರಷ್ಟಾಚಾರ ದೊಡ್ಡ ಸಂಗತಿಯಾಗಿ ಉಳಿಯಲಿಲ್ಲ. ಸಾರ್ವಜನಿಕ ಬದುಕಿನಲ್ಲಿ ಬೆಳೆಯಬೇಕಾದರೆ ಹಣದ ಚಲ್ಲಾಟ ಅನಿವಾರ್ಯವೆಂಬ ವಾತಾವರಣ.

ಈಗ ಕಡೆಯ ಅಸ್ತ್ರವಾಗಿ ಚಾರಿತ್ರ್ಯ ಹರಣದ ಸೆಕ್ಸ್ ಸ್ಕ್ಯಾಂಡಲ್ ತೀವ್ರ ಚಾಲ್ತಿಯಲ್ಲಿದೆ.
ಸೆಲಿಬ್ರಿಟಿಗಳ ಮುಖಕ್ಕೆ ಮಸಿ ಬಳಿಯಲು ಅದೇ ರಂಗದಲ್ಲಿ  ಪೈಪೋಟಿಯಲ್ಲಿರುವ ಇನ್ನೊಬ್ಬ ಪ್ರಯತ್ನಿಸುತ್ತಿರುತ್ತಾನೆ.
Professional jealous ಎಂಬ ರೋಗ ಇಂದಿಗೂ ವಾಸಿಯಾಗಿಲ್ಲ, ಆಗುವುದೂ ಇಲ್ಲ.

ಸ್ಟಾರಡಮ್ ದುನಿಯಾಗಳಾದ ಸಿನೆಮಾ, ಕ್ರೀಡೆ, ರಾಜಕಾರಣ, ಅಕ್ಯಾಡೆಮಿಕ್, ಪತ್ರಿಕೋದ್ಯಮದಂತಹ ಬಹು ಚರ್ಚಿತ ರಂಗಗಳಲ್ಲಿ ಹಣದೊಂದಿಗೆ ಪ್ರತಿಷ್ಟೆಯ ರುದ್ರನರ್ತನ.

ಪೈಪೋಟಿಯ ನೆಪದಲ್ಲಿ ಪರಸ್ಪರ ಮುಖಕ್ಕೆ ಮಸಿ ಬಳಿಯುವ ಹುಮ್ಮಸ್ಸಿನಲ್ಲಿ ಎಲ್ಲರ ಮಾನ ಹರಾಜು.
ಮಹಾಭಾರತ ಓದಿ ಬೆಳೆದವರು ನಾವು. ಧರ್ಮ,ಅಧರ್ಮಗಳ ತಾಕಲಾಟದಲ್ಲಿದ್ದುಕೊಂಡೆ ಅಧರ್ಮೀಯ ಒಲುಮೆ.

ನಮ್ಮ ಪಾಡಿಗೆ ನಾವು ನಮ್ಮ ಮನೆಯಲ್ಲಿದ್ದರೆ ಮಾನಾಪಮಾನದ ಮಾತೇ ಇರೋಲ್ಲ.
ಆದರೆ ಪ್ರತಿಯೊಂದು ಜೀವಕಿರುವ ಜನಪ್ರಿಯತೆಯ ತುಡಿತ, ಸಾರ್ವಜನಿಕ ಜೀವನದ ಸೆಳೆತ, ಹಣ,ಕೀರ್ತಿಯ ಹುಚ್ಚು ತಪ್ಪಲ್ಲ ಅನಿಸಿ ಅದು ಉಲ್ಬಣಗೊಂಡಾಗ ರೋಗವಾಗಿ ಸಮಾಜದ ಆರೋಗ್ಯ ಹಾಳಾಗುತ್ತೆ.

ದ್ರೌಪದಿಯ ಕುಹಕ ನಗು ದುರ್ಯೋಧನನ್ನು ಅವಮಾನಿಸಿತು. ವಸ್ತ್ರಾಪಹರಣದ ಮೂಲಕ ಸೇಡು ತೀರಿಸಿಕೊಳ್ಳುವ ದ್ವೇಶದಿಂದ ಕುರುಕ್ಷೇತ್ರ ಕಾಳಗ ನಡೆಯಿತು.

ಅಲ್ಲೂ ಅದೇ ಹೆಣ್ಣು ಕೇಂದ್ರಿತ ಯುದ್ಧ, ಹೆಣ್ಣಿಗಾಗಿ ಹೊಡೆದಾಟವೆಂಬ ಮರು ವ್ಯಾಖ್ಯಾನ.
ಆಧುನಿಕ ದಿನಮಾಗಳಲ್ಲೂ ಅದೇ ಸ್ತ್ರೀ ಕೇಂದ್ರಿತ ರಾಮಾಯಣ, ಮಹಾಭಾರತ.

ದ್ರೌಪದಿಯರ ಮಾನಾಪಹರಣ‌ ಭಿನ್ನ ರೀತಿಯಲ್ಲಿ.
ಏನೋ ಗಳಿಸುವ ಭರದಲ್ಲಿ ಮತ್ತೇನನ್ನೊ ಕಳೆದುಕೊಳ್ಳುವುದೇ ಹೆಚ್ಚು.

ಈಗ ಮತ್ತದರ ಪುನರ್ ಸೃಷ್ಟಗೆ #metoo ಬಳಕೆ, ಸೆಲಿಬ್ರಟಿಗಳ ಮಾನ ಅಲ್ಲ ಹೆಸರು ಕೆಡಿಸಲು.
ಇಷ್ಟು ದಿನ ಗಂಡು ಹೆಣ್ಣಿನ ಮಿತಿಯಲ್ಲಿ ಓಡಾಡುತ್ತಿದ್ದ ಚಳುವಳಿ ಬಹುಬೇಗ ರಾಜಕಾರಣದ ಸ್ವರೂಪ ಪಡೆದುಕೊಂಡಿದೆ.
ಈ ಹೋರಾಟಕ್ಕೆ ಎಡಪರ,ಬಲಪರ ಸಿದ್ಧಾಂತಗಳ ಮಾನದಂಡದ ಅಗತ್ಯವಿರಲಿಲ್ಲ.

ಗಂಡು-ಹೆಣ್ಣು ತುಂಬಾ ಹತ್ತಿರವಾಗಿ ಮೈಮನಗಳ ಸಾಮಿಪ್ಯದ ಸುಳಿಗೆ ಸಿಗುವ ಅವಕಾಶ ಸಿನೆಮಾ ರಂಗದಲ್ಲಿ ಎಲ್ಲಕ್ಕಿಂತ ಹೆಚ್ಚು. ಮಾನಸಿಕವಾಗಿ ಹತ್ತಿರವಾಗಿ ಭಾವನೆಗಳ ಹಂಚಿಕೊಳ್ಳುವ ಮೂಲಕ ಮನಸಿನೊಂದಿಗೆ ಮೈ ಕೂಡ ಕರಗಿ ಹೋಗುವುದು ಅಸಹಜವಲ್ಲ. ಇದು ಸೃಷ್ಟಿ ಸಮ್ಮತ ಕೂಡುವಿಕೆ, ಹಾದರದ ಬಣ್ಣ ಬಳಿಯಲಾಗದು, ಬಳಿಯಬಾರದು ಕೂಡ.

ಪರಸ್ಪರ ಆಸಕ್ತಿ, ಸೆಳೆತ, ಸ್ನೇಹವೂ ಇಲ್ಲದಾಗ ಮೀಟೂ ಅನಿಸುವುದು ಸಹಜ. ತಿರಸ್ಕರಿಸಿದ ಕೂಡಲೇ ಸೂಕ್ಮವಾಗಿ ಅರ್ಥಮಾಡಿಕೊಂಡು ದೂರ ಸರಿಯುವುದು ಜಾಣತನ.
ಮನದೊಳಗಿನ ತುಮುಲ, ವಿಕಾರ ಆಸೆಗಳು ದೊಡ್ಡವರೆನಿಕೊಂಡು ಬೆಳೆದವರಿಗೆ ಅಷ್ಟೇ ದೊಡ್ಡದಾಗಿ ಜೀವ ಹಿಂಡುತ್ತವೆ.
ನಿರ್ಲಜ್ಯ ಮನಸು, ಹಣ, ಖ್ಯಾತಿಯ ಮದದಿಂದಾಗಿ ಪಿತ್ತ ನೆತ್ತಿಗೇರಿರುತ್ತದೆ.

ಅಮೇರಿಕ ಹಾಗೂ ಯುರೋಪಿಯನ್ ಸಂಸ್ಕೃತಿಗಳ ಬದುಕನ್ನು ನೋಡಿ, ಕೇಳಿದ ಮೇಲೂ ಹೀಗೆ ನಡೆದುಕೊಳ್ಳುವದು ಎಷ್ಟೊಂದು ಸಮಂಜಸ.
ಮುಕ್ತ ಲೈಂಗಿಕ ವಾತಾವರಣದ ದೇಶಗಳಲ್ಲಿ ಜನ ಸಾಮಿಪ್ಯ ಬಯಸಿ propose ಮಾಡುತ್ತಾರೆ, reject ಮಾಡಿದಾಗ ಸಹಜವಾಗಿದ್ದುಬಿಡುತ್ತಾರೆ. ಪ್ರತಿಭಟಿಸುವ ಮಟ್ಟಕ್ಕೆ ಇಳಿಯುವುದಿಲ್ಲ.

ಮನಸಿನ ಕಹಿಯ ಮರೆತು ಸ್ನೇಹಿತರಾಗಿ ನಂಜಿಲ್ಲದೆ ಬೆರೆಯುವ ಮುಕ್ತ ವಾತಾವರಣದ ಅಗತ್ಯವಿದೆ.
*ಪರಸ್ಪರ* ಎಂಬ ಅನುಸಂಧಾನ ಅರಿಯದವರಂತೆ ನಡೆದುಕೊಂಡಾಗ ಇನ್ನಿಲ್ಲದ ರಾದ್ಧಾಂತ.
ಅನೇಕ ಕಾರಣಗಳ ಮೇಲೆ ವಿದೇಶ ಸುತ್ತುವ ಈ ಸೆಲಿಬ್ರಿಟಿಗಳಿಗೆ ಇಂತಹ ಸೂಕ್ಷ್ಮ ಸಂಗತಿಗಳು ಯಾಕೆ ಅರ್ಥವಾಗುವುದಿಲ್ಲ.

ಅಂತಹ ಮುಜುಗರದ ಪ್ರಸಂಗ ಎದುರಾದಾಗ ತಕ್ಷಣ ನಿರಾಕರಿಸದೇ ಸಹಿಸಿಕೊಂಡು ಕೆಲಸ ಮುಗಿದ ತುಂಬಾ ದಿನಗಳ ನಂತರ ಬೀದಿ ರಂಪ ಮಾಡುವುದು ಕೂಡ ಅಷ್ಟೇ ಅಪ್ರಬುದ್ಧ ನಡೆ.

ಊಟ,ನಿದ್ರೆ,ನೀರಿನಷ್ಟು ಸಹಜವಿರಬೇಕಾದ ಕಾಮದ ವೈಭವೀಕರಣ ನಮ್ಮ ದೌರ್ಬಲ್ಯ.
ನಾನು, ನೀವು ಯಾರು ಇದಕೆ ಹೊರತಾಗಲಿಲ್ಲವಲ್ಲ ಎಂಬ ಬೇಸರ, ಒಳಗೊಳಗೆ. ನಮ್ಮೊಳಗೆ.
ಇವರು ಯಾವುದೋ ರಾಜಕೀಯ ಪಕ್ಷಕ್ಕೆ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಮೀಟೂ ವಿಷಯವನ್ನು ಇದರ ವ್ಯಾಪ್ತಿಗೆ ಸೇರಿಸುವುದು ಅಸಂಗತ, ಅಪ್ರಸ್ತುತ. 

“ನಟ ಕ್ಷಮೆ ಕೇಳಬೇಕು” ಎಂದು ಇನ್ನೊಂದು ಗುಂಪು ಹೇಳುವ ಮೂಲಕ ಪ್ರಕರಣಕ್ಕೆ ರಾಜಕೀಯ ವಾಸನೆ ಬಡಿದುಕೊಂಡಿತಲ್ಲ ಎಂಬ ವಿಷಾದ.

*ಸಿದ್ದು ಯಾಪಲಪರವಿ*‌