Monday, May 14, 2018

ಕಟಗ ರೊಟ್ಟಿ-ಕಡ್ಲಿ ಪುಡಿ ಮತ್ತು ಹಸಿವು


*ಕಟಗ ರೊಟ್ಟಿ-ಕಡ್ಲಿ ಪುಡಿ ಮತ್ತು ಹಸಿವು*

ಹಸಿವು ಎಲ್ಲರಿಗೂ. ಇದ್ದವರಿಗೆ ಇಲ್ಲದವರಿಗೂ.
ಕೆಲವರಿಗೆ ಬೇಕೆಂದ ಕೂಡಲೇ ಸಿಗುತ್ತದೆ, ಮತ್ತೆ ಕೆಲವರಿಗೆ ಬೇಕೆಂದಾಗಲೂ ಸಿಗುವುದಿಲ್ಲ.

ಬಡತನ-ಹಸಿವು ಬಡ ರಾಷ್ಟ್ರಗಳ ಚಿತ್ರಣ. ಹಸಿವೇ ಮಹಾಕಾವ್ಯ.

ನಮ್ಮ ಗುರುಗಳಾದ ಸಿದ್ಧಲಿಂಗ ಪಟ್ಟಣಶೆಟ್ಟಿ ಸರ್ ತಮ್ಮ ಕವಿತೆಯೊಂದರಲ್ಲಿ ' ಬಡತನ‌‌ ತಿಳಿದಿರಲಿ ಆದರೆ ಬಾರದಿರಲಿ' ಎಂದು ಮಗಳಿಗೆ ಹಾರೈಸುತ್ತಾರೆ.

ಆದರೆ ತಿಳಿದವರು,ಅನುಭವಿಸಿದವರೂ ಅಹಂಕಾರದ ಕಾರಣದಿಂದ ಹಸಿವನ್ನು ಮರೆತವರಂತೆ ಆಡುತ್ತಾರೆ.

ಮದುವೆಗಳಲಿ ಹತ್ತಾರು ಜನರಿಗೆ ಬೇಕಾಗುವಷ್ಟು ತಟ್ಟೆಯಲ್ಲಿ ಹಾಕಿಸಿಕೊಂಡು ಹಾಗೆಯೇ ಕೆಡಿಸಿ ವಿಕೃತ ಅಜ್ಞಾನ ಮೆರೆಯುತ್ತಾರೆ.

ವಿದೇಶಗಳಿಗೆ ಹೋದಾಗ,ಕಾಡಿನ ಸಂಚಾರದಲಿ,ನಡು ಮಾರ್ಗದಲ್ಲಿ ಜೇಬಿನಲ್ಲಿ ಸಾಕಾಗುವಷ್ಟು ಹಣ ಇದ್ದರೂ ತುತ್ತು ಅನ್ನ‌‌ ಸಿಗದೇ ಪರದಾಡುವ ಸ್ಥಿತಿ ಬಂದಾಗ ಅನ್ನ ಪ್ರಸಾದವೆನಿಸುತ್ತದೆ.

ನಮ್ಮ ಶರಣರು ತುಂಬ ಅನುಭವಿಗಳು,ವಾಸ್ತವವಾದಿಗಳು. ನಮ್ಮ ಬದುಕು ಹಸನಾಗಿರಲು ಕಾಯಕ-ದಾಸೋಹ ಸಾಕು ಎಂದವರು. ಅವೇ ತತ್ವಗಳನ್ನು ಉದ್ಧರಿಸುತ್ತ ಎರಡನ್ನು ಅರಿಯದ ಮೂಢರು ನಾವು.

ಮೈತುಂಬ ಅನ್ ಪ್ಲ್ಯಾನ್ಡ್ ಕೆಲಸಗಳ ಒತ್ತಡದಿಂದ ಒಮ್ಮೆ ರಾತ್ರಿ ಊಟ ಮಾಡದೇ ರೈಲು ಹತ್ತಿದೆ. ನಡುರಾತ್ರಿ ಹನ್ನೆರಡರ ನಂತರ ಹಸಿವು ಇರಿಯಲಾರಂಭಿಸಿತು.ಅಷ್ಟೊತ್ತಿನಲ್ಲಿ ಎಷ್ಟೇ ರೊಕ್ಕ ಕೊಟ್ಟರೂ ಏನೂ ಸಿಗುವುದಿಲ್ಲ. ಕಣ್ಣು‌ ಮುಚ್ಚಿ ಧೇನಿಸಿ ಊಟ ಸಿಗಲಿ ಎಂದು ಕಾಣದ ಕೈಗಳ ಬೇಡಿದೆ.

ಅಲ್ಲಿ ಕೆಲಸ ಮಾಡುವ ಹುಡುಗ 'ಏನಾದರೂ ಬೇಕಿತ್ತಾ?' , ತಕ್ಷಣ ಊಟ ಎಂದುಬಿಟ್ಟೆ.

' ನನಗೆ ತಂದ ಊಟ ಉಳಿದಿದೆ ಸರ್, ನೀವು ಏನೂ  ಅನ್ಕೊಳಲ್ಲ ಅಂದ್ರೆ ಅದನ್ನೇ ಕೊಡ್ತೀನಿ.'
' ಅಯ್ಯೋ ಕೊಡು ಮಾರಾಯ ' ಅಂದು ಗಬ ಗಬನೆ ತಿಂದು ಸಂತೃಪ್ತನಾದೆ. ತಕ್ಷಣ ಹಣ ಕೊಟ್ಟರೆ ಅಹಂಕಾರ ಅಂದುಕೊಳ್ಳಬಾರದೆಂದು ಸುಮ್ಮನಾದೆ.

ಮರುದಿನ ಪರೋಕ್ಷವಾಗಿ ಟಿಪ್ಸ್ ನೆಪದಲಿ ಥ್ಯಾಂಕ್ಸ್ ಹೇಳಿ ಮುಕ್ತನಾದೆ.

                           ***

ನಿನ್ನೆ ಜೋರು ಮಳೆ. ಮನೆಯಲ್ಲಿ ಒಡತಿಯೂ ಇಲ್ಲ. ಹೊರಗೆ ಹೋಗುವದು ಅಸಾಧ್ಯ.

ಫ್ರಿಜ್ ಖಾಲಿ. ಗ್ಯಾಸ್ ಬಂದ್. ನನಗೆ ಏನೂ ಬರಲ್ಲ.
ಬುಟ್ಟಿಯಲಿ ತಂಗಳು ರೊಟ್ಟಿ ಅರಳಿ ನಿಂತು ಕೈಮಾಡಿ ಅವ್ವನ ಹಾಗೆ ಕರೆದವು.

ಹಲ್ಲಿ ಓಡಾಡಿರುತ್ತವೆ ಎಂಬ ಗುಮಾನಿ ಬೇರೆ.
ರೊಟ್ಟಿಗಳನ್ನು ತೊಳೆದೆ.
ಮುರಿದು ಹಾಕಿ ಕಡ್ಲಿಪುಡಿ ಸುರುವಿ ಮೇಲೊಂಚೂರು ಎಣ್ಣೆ ಹಾಕಿಕೊಂಡು ನಿಧಾನವಾಗಿ ಒಂದು ತಾಸು ಖುಷಿಯಿಂದ ತಿಂದಾಗ ಏನೋ ಸಾಧಿಸಿದ ಸಂತೃಪ್ತ ನಿರಾಳ ಭಾವ.

ಅನ್ನ,ಮದುವೆ,ಅಹಂಕಾರ, ಆಹಾರ ಕೆಡಿಸುವ ಅಜ್ಞಾನ, ಹಣ,ಬಡತನ, ಹಸಿವು ಹೀಗೆ ಹತ್ತಾರು ಸಂಗತಿಗಳು ಕಣ್ಣ ಮುಂದೆ ಸುಳಿದಾಡಿದವು.

*ಆಹಾರವ ಕಿರಿದು ಮಾಡಯ್ಯ* ಎಂದು ಹಾಡಿದ ಮಹಾದೇವಿ ಅಕ್ಕ, *ತಾನುಂಬುವ ಊಟ* ಎಂದ ಬಸವಣ್ಣ. ಅನುಭವ ಮಂಟಪ, ದಾಸೋಹ. ಕಾಡಿನಲ್ಲಿ ಸರಿಯಾದ ಅನ್ನ ನೀರು ಸಿಗದೆ ಧ್ಯಾನ ಮಾಡಿ ಕಾಲ ಕಳೆಯುವ ಮುನಿಗಳು... ಎಲ್ಲರೂ ಎಲ್ಲವೂ ಅರಳಿ ನಿಂತವು.

ಅನ್ನ ನಮ್ಮ ಅರಿವಾದಾಗ ಪ್ರಸಾದವಾಗುತ್ತದೆ.
ಅಹಂಕಾರ ಮಾಯವಾದಾಗ ಸರಳತೆ ಅವತರಿಸುತ್ತದೆ.

ಊಟದ ವಿಷಯದಲ್ಲಿ ಸರಳತೆ ಅಗತ್ಯ. 'ಅದು ಬೇಕು, ಇದೇ ಬೇಕು' ಎಂದು ಊಟದ ವಿಷಯವಾಗಿ ಅರಚಾಡಿ ತಟ್ಟೆ ತೂರುವ ಜಂಬದವರು ಹಸಿವಿನ ಮಹತ್ವ ಅರಿತಿರಲಿ ಅನಿಸಿತು.

*ಹಸಿವನೊಮ್ಮೆ ನೀವೂ ಅನುಭವಿಸಿ ಆನಂದಿಸಿ*

     *ಸಿದ್ದು ಯಾಪಲಪರವಿ*

ಅಬ್ಬಿಗೇರಿ-ಮಣ್ಣು-ಗಿರಡ್ಡಿ

*ಅಬ್ಬಿಗೇರಿ-ಮಣ್ಣು-ಗಿರಡ್ಡಿ*

ಗದಗ ಜಿಲ್ಲೆಯ *ಅಬ್ಬಿಗೇರಿ‌* ಗಿರಡ್ಡಿ ಸರ್ ಅವರ ಊರು ಹಾಗೂ ಕಥೆಗಳ ಪಾತ್ರವೂ ಹೌದು.

*ಮಣ್ಣು* ,
*ಒಂದು ಬೇವಿನ ಮರದ ಕತೆ* ಗಳಲಿ ಅಬ್ಬಿಗೇರಿಯ ವಿವರಗಳ ಓದಿದ ನೆನಪು.

ಅಂತ್ಯಕ್ರಿಯೆಯ ವಿವರಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದು ಹಳ್ಳಿಯ ಸಂಸ್ಕೃತಿಯನ್ನು ನಿರೂಪಿಸಿದ್ದು, ಇಂದು ಅವರ ಮಣ್ಣಿನ ಸಂದರ್ಭದಲ್ಲಿ ನೆನಪಾಯಿತು.

ಊರಿಂದ ಬೀಗರು ಬರುವವರೆಗೆ ಹೆಣ ಎತ್ತುವುದಿಲ್ಲ. 'ಇನ್ನೇನು ಬಂದೇ ಬಿಟ್ರು' ಅಂತ ಕಾಯ್ತಾರೆ.

ಗಿರಡ್ಡಿಯವರ ಮಣ್ಣಿನಲ್ಲೂ ಅದೇ ಕಾಯುವಿಕೆ. ಕಾದದ್ದು ಅವರ ಆತ್ಮೀಯ ಗೆಳೆಯ ಸಂಕ್ರಮಣದ ಸಂಗಾತಿ ಪ್ರೊ.ಚಂಪಾ ಅವರಿಗಾಗಿ.
ಬೆಂಗಳೂರಿಂದ ಮುಂಜಾನೆ ಹೊರಟು ಬರುವ ದಾರಿಯಲ್ಲಿದ್ದರು.

ಅವರು ಬಂದು ಅಂತಿಮ ನಮನ ಸಲ್ಲಿಸಿದ ಮೇಲೆ ಅಂತಿಮ ಯಾತ್ರೆ ಆರಂಭ.
ನಿರ್ಭಾವುಕ ಚಂಪಾ ಅವರು ಭಾವುಕರಾದ ಕ್ಷಣಗಳ ದಾಖಲಿಸುವ ವೇದನೆ.

ನಗು-ಹಾಸ್ಯ-ಜಗಳ ಇತ್ಯಾದಿ ಹೊತ್ತು ತಿರುಗುತಿದ್ದ ಗುರುಗಳು ಇಂದು ಆತಂಕಕೆ ಒಳಗಾಗಿದ್ದರು.
ಸಾವೇ ಹಾಗೆ ನಮ್ಮನ್ನು ಕೆಲ ಕ್ಷಣ ಎಲ್ಲಿಗೋ ಕೊಂಡೊಯ್ಯುತ್ತೆ. ದುಃಖ ಉಮ್ಮಳಿಸುತ್ತೆ.

ಮಣ್ಣಿಂದ ಮಣ್ಣಿಗೆ ಸೇರುವ, ಬಯಲಿಂದ ಬಯಲಲಿ ಬಯಲಾಗುವ ಹೊತ್ತೇ ಹಾಗೆ.
ಶೂನ್ಯ ಭಾವ. ಶೂನ್ಯ ಸಂಪಾದನೆ.

ಧಾರವಾಡದ ಸಂಭ್ರಮದ ಸಂಗಾತಿಗಳಾದ ಸಮೀರ ಜೋಷಿ, ಎಚ್.ವಿ.ಖಾಕಂಡಕಿ, ಬಾಳಣ್ಣ ಸೀಗಿಹಳ್ಳಿ, ಜಾಡರ ಸರ್, ಪ್ರಕಾಶಕ ಸುಬ್ರಮಣ್ಯ,ಬಸವರಾಜ ಸೂಳಿಬಾವಿ, ಶಂಕರ ಹಲಗತ್ತಿ, ಶಂಕರ ಕುಂಬಿ, ಬಸಯ್ಯ ಶಿರೋಳ, ಶಶಿಧರ ತೋಡ್ಕರ್ ಇತರರು ಬಂದಿದ್ದರು.

ಗದುಗಿನಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶರಣು ಗೋಗೇರಿ, ಡಾ.ಜಿ.ಬಿ.ಪಾಟೀಲ, ಡಾ.ಎಸ್.ಎ.ಪಾಟೀಲ ಹಾಗೂ ಅಬ್ಬಿಗೇರಿಯ ಎಲ್ಲ ಗೆಳೆಯರೂ ಇದ್ದರು.

ಸರ್ ಮಗ ಸುನಿಲ್ ನನ್ನ ಕಾಲೇಜಿನ ಸಂಗಾತಿ. ಅವನ ಜೊತೆ ಮಾತಾಡಿದೆ.

ಇಂದು ಚುನಾವಣೆಯ ಅಬ್ಬರ ಬೇರೆ.
ರಾಜಕಾರಣಿಗಳೂ ಹಾಜರಿ ಹಾಕಿದರು.

ಅವರ ಸಾಹಿತ್ಯದ ಪಯಣ. ಕಥೆಗಳು, ವಿಮರ್ಶೆ.
ಅವರು ಹಾಕಿಕೊಟ್ಟ ಮಧ್ಯಮ ಮಾರ್ಗ.
ದಿವ್ಯ ಮೌನವಾಗದಿರಲಿ. ಇದು  ಹಲವರ ಆಶಯವೂ ಹೌದು.

ಅವಮಾನ ಎದುರಿಸಿ, ಸಹಿಸಿಕೊಂಡು ಎದುರಿಸಿದ ಮಧ್ಯಮ ಮಾರ್ಗದ ಚರ್ಚೆ ಇಲ್ಲಿಗೇ ನಿಲ್ಲದಿರಲಿ.

ಧಾರವಾಡ ಸಾಹಿತ್ಯ ಸಂಭ್ರಮ ಆರಂಭಿಸಿದ ಡಾ.ಕಲಬುರ್ಗಿ ಅವರು ಹೋದ ಮೇಲೆ ಈಗ ಗಿರಡ್ಡಿ ಸರ್.

*ಮುಂದೆ ಸಂಭ್ರಮ ಹೇಗೆ?* ಎಂಬ ಆತಂಕ ಧಾರಾವಾಡದ ಗೆಳೆಯರ ಮುಖದ ಮೇಲಿತ್ತು.
ಕಾಲ ನಿಲ್ಲುವುದಿಲ್ಲ ತನ್ನ ಹಾದಿ ತಾನೇ ಕಂಡುಕೊಳ್ಳುತ್ತೆ.

ಆದರೂ ಸಾವು ಸಾವೇ. ಅದು ಉಂಟು ಮಾಡುವ ತಲ್ಲಣ ಭಯಾನಕ.

ಓಡಾಡಿಕೊಂಡು ಲವಲವಿಕೆಯಿಂದ, ಗಟ್ಟಿಮುಟ್ಟಾಗಿದ್ದವರು ಹೀಗೆ ಏನೂ ಹೇಳದೇ ಕೇಳದೇ, ಆಸ್ಪತ್ರೆಯ ಹಾಸಿಗೆ ಹಿಡಿಯದೇ ಥಟ್ ಅಂತ ಹೋಗುವುದಕ್ಕೆ *ಪುಣ್ಯದ ಸಾವು* ಅಂತಾರೆ.

ಎಂಬತ್ತರ ಆಸುಪಾಸಿನ ಸರ್ ಸಾಕಷ್ಟು ಬರೆದು ಓದಲು ಬಿಟ್ಟು ಹೋಗಿದ್ದಾರೆ.

ನಾವು ಇದ್ದವರು ಹೋಗುವುದರೊಳಗೆ ಓದಿ,ಬರೆದು ಅವರನ್ನು ನೆನಪಿಸಿಕೊಳ್ಳುತ್ತಲೇ ಇರೋಣ.

ಇಂದು ಅವರು,ನಾಳೆ ಮತ್ಯಾರೋ, ಮುಂದೊಂದು ದಿನ ನಾವೂ.
ಇದ್ದಷ್ಟು ದಿನ ಅರ್ಥಪೂರ್ಣವಾಗಿ ಬಾಳಲು *ಮಣ್ಣು* ಎಚ್ಚರಿಸುತ್ತದೆ.
ನಮಗಿದು ಸ್ಮಶಾನ ವೈರಾಗ್ಯ ಆಗದಿದ್ದರೆ ಸಾಕು.

ಹೋಗಿ ಬರ್ರಿ ಸರ್. ನಿಮಗಿದು ಅಂತಿಮ ನಮಸ್ಕಾರ.

      *ಸಿದ್ದು ಯಾಪಲಪರವಿ*

Sunday, May 13, 2018

ಕಾವ್ಯದಲಿ ಅರಳುವ ಅವ್ವ

*ಕಾವ್ಯದಲಿ ಅರಳುವ ಅವ್ವ*

ಮಗುವಿಗೆ ಅವ್ವ ಕಾವ್ಯಾನುಸಂಧಾನದ
ಅನುಬಂಧ ಈಗ ಎಲ್ಲಂದರಲಿ ಅರಳಿ
ಕಾಡುವ ಪರಿಗೆ ಸಂಭ್ರಮಿಸುತಲಿದೆ ಈ
ಜೀವ

ಶಬ್ದಗಳು ನಿಶಬ್ದದಲಿ ಬಸಿರಾಗಿ ಹೆರುವಾಗ
ನಸುನಗುತ್ತಾಳೆ ನೋವಿನಲು ಥೇಟ್
ಅವ್ವನ ಹಾಗೆ ಈ ಕಾವ್ಯ

ಬರೆಯುವ ತುಡಿತಕೆ ಅನುಕ್ಷಣದ
ಅನುಬಂಧದ ಬಿಗಿ ಬಂಧನ
ಮುಗಿಸೆಂದರೂ‌ ಮುಗಿಯದ
ಮಾಗಿದ ಸೆಳೆತ

ಮೈಮಾಟ ಕಣ್ಣೋಟ ಭಾವ ಬುದ್ಧಿ
ಅವ್ವನಿತ್ತ ಕೊಡುಗೆ ನನಗೆ
ನಾ ಹೇಗೆ ಮರೆಯಲಾದೀತು ?

ಬಿಡುವ ಉಸಿರ ಬಿಸುಪಲಿ
ತುಟಿಯ ನಗುವಂಚಿನ ಮಿಂಚಲಿ
ಗುಳಿ ಕೆನ್ನೆಯ ಸೆಳೆತದಲಿ
ಅವ್ವನದೇ ಪಡಿಯಚ್ಚು

ತಪ್ಪು ಮಾಡಿ ಹೆಣ್ಣ ಕಾಡುವಾಗ
ಕಣ್ಣ ಕಿಸಿಯುವಾಗ ಅವ್ವ ಒಳಗಿಂದ
ಝಾಡಿಸಿ ಒದೆಯುತ್ತಾಳೆ
ಹೊಟ್ಟೆಯೊಳಗಿನ ಕೂಸಿನಂತೆ

ನೀ ಶ್ಯಾಣಾ ಆಗಲಿಲ್ಲವಲ್ಲೋ
ಎಂಬ ಕರುಳ ಕರೆಯ ಕೂಗಿಗೆ
ಕರಗುವ ಮನಕಿಲ್ಲದ ಚಡಪಡಿಕೆ

ಕಣ್ಣು ಬಿಟ್ಟು ಜಗವ ಕಂಡ ಬೆರಗಲಿ
ಜೋರಾಗಿ ಅತ್ತಾಗ ನಸು ನಕ್ಕಿದ್ದಳು

ಸದಾ ನಗುತಿರಲೆಂಬ ಆಶಯ
ನಗು ಹೆಚ್ಚಾದಾಗ ದೃಷ್ಟಿ ಬೊಟ್ಟು
ಒಂದಿಷ್ಟು ಸಿಹಿ ಮುತ್ತುಗಳ ಮಳೆ

ಮತ್ತೆ ಮುಂದೆ...

ಮುತ್ತು ಕೊಟ್ಟವಳ ದಾಳಿಗೆ
ಮರುಗಿದ ಮನ ಕಳೆದುಕೊಂಡೆನೆಂಬ
ಅನುಮಾನ

ಅತ್ತೆ ಸೊಸೆಯಂದಿರ ಶೀತಲ
ಸಮರದ ದಂಡನಾಯಕ‌

ಸೋಲೇ ಇಲ್ಲದ ಗೆಲುವಿನಾಟದಲಿ
ನಾ ಕಳೆದು ಹೋದಾಗ ಮತ್ತೆ
ಹುಡುಕಿಕೊಟ್ಟಳು ಅವ್ವ

ಈಗ ಇಲ್ಲಿ ಅಲ್ಲಿ ಎಲ್ಲ ಕಡೆ
ಕಾವ್ಯದ ಸಾಲುಗಳಲಿ ಬೆಳಗುವ
ಸಾಲು ಸಾಲು ಸಾಲುದೀಪ.

        *ಸಿದ್ದು ಯಾಪಲಪರವಿ*

Saturday, May 12, 2018

ಅರ್ಥವಾಗದ ಕಾವ್ಯ ಅವ್ವ

*ಅರ್ಥವಾಗದ ಕಾವ್ಯ:ಅವ್ವ*

ಅವ್ವನ ಒಡಲ ಪ್ರೀತಿಯಲಿ ಬೆಳೆಯದ ಮಕ್ಕಳು ಖಂಡಿತ ಅಬ್ಬೇಪಾರಿಗಳಾಗುತ್ತಾರೆ.

ತನ್ನೆಲ್ಲ ಸಂಕಟಗಳನ್ನು ಸಹಿಸುವ ಶಕ್ತಿ ತಾಯ್ತನಕ್ಕೆ ಮಾತ್ರ ಇದೆ.

ಅದರಲ್ಲೂ ಭಾರತೀಯ ಅವ್ವ ಜಾಗತಿಕ ದಂತಕತೆ.
ಮಗುವಿಗಾಗಿ ಮಿಡಿಯುವ ಅವ್ವ ಒಮ್ಮೊಮ್ಮೆ ಅರ್ಥವಾಗದ ಮಹಾಕಾವ್ಯ.

ಓದಿದಷ್ಟು ಹೊಸ ಹೊಳವು.
ಮಕ್ಕಳ ಲಾಲನೆಗೆ ಹೈರಾಣಾಗದೇ ದುಡಿಯುವ ಜೀವ ಜೀವಂತ ಇರುವಾಗ ಅರ್ಥ ಆಗುವುದೇ ಇಲ್ಲ.

ಪ್ರೀತಿ-ಪ್ರೇಮ-ಪ್ರಣಯ ಹಿಡಿದು ಕಟ್ಟಿಕೊಟ್ಟಂತೆ ಅವ್ವನ ಅಂತಃಕರಣವನ್ನು ಹಿಡಿದಿಡಲಾಗದೇ ಬರೀ ಅನುಭವಿಸಬೇಕು.

ಮಕ್ಕಳಿಗಾಗಿ ಕೂಗಾಡುತ್ತಿದ್ದ ನನ್ನ ಅವ್ವ, ಈಗಲೂ ತನ್ನ ಮಕ್ಕಳಿಗಾಗಿ ಕೂಗಾಡುವ ಹೆಂಡತಿ...

ಅರ್ಥಮಾಡಿಕೊಳ್ಳವುದು ಬೇಡ. ನಮಗೆ ಆ ಯೋಗ್ಯತೆ ಇಲ್ಲ ಬಿಡಿ.

ಹೆಂಡತಿಗಾಗಿ ಅವ್ವನನ್ನು, ಅವ್ವನಿಗಾಗಿ ಹೆಂಡತಿಯನ್ನು ದೂರುತ್ತ ಕಾಲ ಕಳೆಯುದರೊಳಗೆ ಇಬ್ಬರೂ ಕಳೆದುಹೋಗಿರುತ್ತಾರೆ.

ಅನಾರೋಗ್ಯದಲಿ ನರಳುತ್ತಿದ್ದ ಅವ್ವ ಕೇಳುತ್ತಿದ್ದ ಒಂದೇ ಪ್ರಶ್ನೆ *ಊಟ ಮಾಡಿದೆಯಾ* ?

'ಊಟ ಕಡಿಮೆ ಮಾಡಿ ಆರೋಗ್ಯ ಕಾಪಾಡಿ' ಎಂದು ಹೇಳುವವರನ್ನು ನೋಡಿದ್ದರೆ ಅವ್ವ ಹೊಡೆದುಬಿಡುತ್ತಿದ್ದಳು.

ಕಳೆದುಕೊಂಡ ಕಳವಳದ ಸಂಕೇತ ಅವ್ವ. ಓದಿದಷ್ಟು ಮತ್ತೆ ಮತ್ತೆ ಮೆಲುಕು ಹಾಕಿ ಓದಬೇಕೆನಿಸುವ ಕಾವ್ಯ.
ಪ್ರತಿ ಓದಿನಲ್ಲೂ ಹೊಸ ಅರ್ಥ.

*ನಾನಿದನ್ನೆಲ್ಲ ನನ್ನ ಮಕ್ಕಳಿಗಾಗಿ ಸಹಿಸಿಕೊಂಡಿದ್ದೇನೆ* ಎಂದು ತಮ್ಮ ಅಸಹಾಕತೆಯನ್ನು ತೋಡಿಕೊಳ್ಳವ ನೂರಾರು ಅವ್ವಂದಿರು ನನಗೆ ದೇವರಂತೆ ಕಾಣಿಸುತ್ತಾರೆ.

*ತಾಯ್ತನದ ತಾಳ್ಮೆ ಉಪಮಿಸಲಾಗದು*.

ನಿರ್ಮಲವಾಗಿ ಪ್ರೀತಿಸುವ ಸಂಗಾತಿಗಳಲಿ, ಮುದ್ದು ಮಕ್ಕಳಲಿ, ಓದುವ ಕಾವ್ಯದ ಅಕ್ಕರೆಯ ಸಾಲುಗಳಲಿ , ಆಗೀಗ ಸಿಟ್ಟು ಮಾಡುವ ಹೆಂಡತಿಯಲಿ ಅವ್ವ ಪ್ರತ್ಯಕ್ಷಳಾಗಿಬಿಡುತ್ತಾಳೆ.

ಬರೀ ನೆನಪುಗಳ ಹಳಹಳಿಕೆಯ ಭಾವಪರವಶತೆಯಲಿ ಜೀವ ನರಳುವಾಗ,
ಹೇಳಲಾಗದ ತಲ್ಲಣಗಳಲಿ ನಿಟ್ಟುಸಿರು ಬಿಡುತ್ತ ಕಾಲ ಹಾಕುವಾಗ ಅವ್ವನ ಮಡಿಲು ಸಿಕ್ಕರೆ?

ಹುಡುಕುವ ಹುಡುಕಾಟದ ಒಲವಿನ ಸಖಿಯಲಿ ಅವ್ವ ಇದ್ದರೆ ಇನ್ನೂ ಛಂದ.

'ಗಂಡೊಂದು ಹೆಣ್ಣಾರು' ಎಂಬ ಮಾತಿಗೊಂದು ಮರುವ್ಯಾಖ್ಯಾನ.

ಅವ್ವ, ಅಕ್ಕ,ಗೆಳತಿ,ಸಂಗಾತಿ,ಬಾಳಸಂಗಾತಿ,ಮಗಳ ರೂಪದಲಿ ಕಾಡುವ ಹೆಣ್ಣು ನನಗಂತೂ ಮಾಯೆಯಲ್ಲ ಮಮತಾಮಯಿ.

ಹೆಣ್ಣಿನ ವ್ಯಾಮೋಹ ನಮ್ಮ ದೌರ್ಬಲ್ಯ ಅಲ್ಲ. ಬಳಸಿಕೊಳ್ಳುವ ಹೊಸ ಬಗೆಯ ಚೈತನ್ಯದ ಚಿಲುಮೆ.
ನಿಷ್ಕಾಮದಿಂದ,ನಿರ್ಮಲವಾಗಿ ಹೆಣ್ಣನ್ನು ಕಂಡು ಸಹಿಸಿಕೊಳ್ಳುವ ಮನಸ್ಥಿತಿ ಬೆಳೆಸಿಕೊಳ್ಳಬೇಕು.

ಆ ಮನಸ್ಥಿತಿ ಬೆಳೆಸಿಕೊಳ್ಳುವ ತೊಳಲಾಟ ದೂರ ಮಾಡಿಕೊಳ್ಳಲು ಅವ್ವನ ನೆನಪಿಸಿಕೊಂಡರೆ ಸಾಕು.ಎಲ್ಲೆಲ್ಲೂ ತಾಯ್ತನ.

*ಎಲ್ಲ‌ ನಿಸ್ವಾರ್ಥ ಅವ್ವಂದಿರುಗಳಿಗೆ ಸಾವಿರದ ಶರಣು*

      *ಸಿದ್ದು ಯಾಪಲಪರವಿ*

Friday, May 11, 2018

ಮನದೊಡತಿ ಮನೆಯೊಳಿಲ್ಲ

*ಮನದೊಡತಿ ಮನೆಯೊಳಿಲ್ಲ*

ದೊಡ್ಡ ಮನೆ ಮನೆ ತುಂಬಾ
ಮಂದಿ ಮನುಷ್ಯರು

ಆದರೂ ಮನದೊಡತಿಯ ಸುಳಿವಿಲ್ಲ
ಜಗದ ಜಂಜಡದ ಕೀಸರಿಕೆಯಲಿ
ಮನೆಯೊಡತಿ ಮನಸಿಗೆ ಮುನಿಸು

ಸಾಲಾಗಿ ಕಾಡುವ ಸಾಲದ ಕಂತುಗಳ
ಲೆಕ್ಕ ಮಗಳ ಹಲ್ಲಿಗೆ ಕ್ಲಿಪ್ಪು
ಒತ್ತೆಯಿಟ್ಟ ದಾಗೀನ ಕಿರಾಣಿ ಸಂತಿಯ
ಬಾಕಿ ಕಟ್ಟಾದರೂ ಕಟ್ಟದ ಕರೆಂಟು ಬಿಲ್ಲು

ಖಾಲಿಯಾದ ಗುಳಿಗಿ ಡಬ್ಬಿ
ಆಗೀಗ ಸುಸುಳಿ ಆತಂಕಗೊಳಿಸುವ
ವಾಟ್ಸಪ್ಪು ಮೆಸೇಜುಗಳು
ಲಲನೆಯರಲ್ಲದ ಹುಡುಗಿಯರೂ ಅಲ್ಲ
ದವರ ಕಾಲುಗಳ ಹೆಗ್ಗುರುತು

ಬರೆದದ್ದು ಓದಲಾಗದ ಧಾವಂತ
ಕೆಲಸಗಳ ಗಡಿಬಿಡಿಯಲಿ ಮನ
ದೊಡತಿ ಈಗ ಬರೀ ಮನೆಯೊಡತಿ

ಕಳೆದು ಹೋಗಬಾರದೆಂಬ ಕಳವಳಕೆ
ಮದುವಿಯ ಬೆಳ್ಳಿ ಹಬ್ಬ ಮೇಲೋಂದಿಷ್ಟು
ಬಿಸಿ ನೆನಪುಗಳ ಹೂ ಮಾಲೆ

ಉಂಡು ಹೋದವರ ಮುಯ್ಯಿ ಮತ್ತೆ
ತೀರಿಸುವ ಲೆಕ್ಕ ಆಚಾರ ವಿಚಾರಗಳಲಿ
ಮನದೊಡತಿ ಮನೆಯೊಡತಿಯಾದ
ಹಳವಂಡ

ಆದರೂ ಹುಡುಕಿ ಎಳೆದು ತಂದು
ಮನದೊಳಗೆ ನುಸುಳುವ ಪಡಿಪಾಟಲು

ಮನೆಯೊಡತಿ ಮನದೊಡತಿಯ ಪೈಪೋಟಿ
ಯಲಿ ಒಲವ ರಿಂಗಣ ಮೆಲ್ಲುಸಿರ ಸವಿಗಾನ
ಒಮ್ಮೊಮ್ಮೆ ಅಬ್ಬರದ ಕಿರುಚಾಟ ಪರಚಾಟ
ನಮಗೆ ನಾವೇ ಚೂಟಿಕೊಂಡು ಇನ್ನೂ
ಉಳಿದ  ಖಾತರಿ...

    *ಸಿದ್ದು ಯಾಪಲಪರವಿ*

Thursday, May 10, 2018

ಸಂಗಾತಿ

ಸಂಗಾತಿ

ನೀ
ಎದುರಿಗಿದ್ದಾಗ ಮಾತೇ
ಇಲ್ಲದ ದಿವ್ಯ ಮೌನದ
ಖಾಲಿತನ

ಮೌನದ ಗಾನಲಹರಿಯಲಿ
ನಿನ್ನ ಅಗತ್ಯವಿಲ್ಲವೇನೋ
ಎಂಬ ರಾಗ  ಭಾವ

ನೀ
ಕ್ಷಣ ಮರೆಯಾಗಿ
ದೂರಾದರೆ
ನೀರವ ಮೌನ

ಏನೋ ಕಳಕೊಂಡ
ಹಳವಂಡ
ಮನ-ಮನೆ
ಬಣ ಬಣ

ಮನದೊಡತಿ
ಮರೆಯಾದರೆ
ಸಹಿಸಬಹುದು

ಮನೆಯಲಿ
ಮನೆಯೊಡತಿ
ಮರೆಯಾದರೆ
ನೀರು ನೀರಡಿಸಿ
ಬಿಕ್ಕಿದಂತೆ .

----ಸಿದ್ದು ಯಾಪಲಪರವಿ

ಚಾಲನೆ ಮತ್ತು ಧ್ಯಾನ

*ಚಾಲನೆಯೂ ಧ್ಯಾನಸ್ಥ‌ ಹಂತ*

ಓದು-ಬರಹ-ಕಾಮದಷ್ಟೇ ಡ್ರೈವಿಂಗ್ ಕೂಡಾ ಪರಮಧ್ಯಾನ. ಒಂಚೂರು ಎಚ್ಚರ ತಪ್ಪಿದರೆ ನಮ್ಮ ಕಥೆ ಮುಗಿಯಿತು.

ರಸ್ತೆ ಮೇಲೆ ನಿಗಾ ಇಟ್ಟು ಗಾಡಿ ಓಡಿಸುವ ಚಾಲಕರ ನಿಷ್ಠೆಯನ್ನು ನಾನು ಅಪಾರವಾಗಿ ಗೌರವಿಸುತ್ತೇನೆ.

ಹತ್ತಾರು ವರ್ಷದಲ್ಲಿ ಲಕ್ಷಾಂತರ ಮೈಲು ಕಾರು ಓಡಿಸಿ ಏಕಾಗ್ರತೆಯ ಮಹತ್ವ ಜೀರ್ಣಿಸಿಕೊಂಡಿದ್ದೇನೆ.

ಕಾರು ಓಡಿಸುವ passion ಹೆಚ್ಚಾಗಿ ಕಾರು ಇಟ್ಟುಕೊಂಡಿದ್ದೆ. ಅಗತ್ಯ, ಅನಗತ್ಯ ಲೆಕ್ಕಿಸಿರಲಿಲ್ಲ.

ಈಗ ಮೊಬೈಲ್‌ ದುನಿಯಾದಲ್ಲಿ ಏಕಾಗ್ರತೆಗೆ ಹೊಡೆತ ಬೀಳುವ ಕಾರಣದಿಂದ ಡ್ರೈವರ್ ಬೇಕೆನಿಸುತ್ತದೆ.

ಪ್ರೀ ಇದ್ದರೆ ಇಷ್ಟವಾದ ಹಾಡುಗಳು, ಗೆಳೆಯರು ಜೊತೆಗಿದ್ದರೆ ನೂರಾರು ಮೈಲು ಸರಾಗವಾಗಿ ಓಡಿಸುತ್ತೇನೆ.

ಆದರೆ ಈಗ ಇವೆಲ್ಲ expensive hobbies ಅನಿಸಿ ಸುಮ್ಮನಾಗುತ್ತೇನೆ. ಇವು ಲಕ್ಸರಿ ಅಲ್ಲ.ಅನಿವಾರ್ಯ.

ನೂರಾರು ಕಂಪನಿಗಳ ಉದ್ಯಮ ಇದಾಗಿದೆ.ಕಾರ್ ಕಾರ್ ಎಲ್ನೋಡಿ ಕಾರ್ ಈಗ ಇಂಡಿಯಾದ ಹಾಡಾಗಿದೆ.

ನಿನ್ನೆ ಐದು ತಾಸು ಏಕಾಗ್ರತೆಯಿಂದ ಓಡಿಸಿದ ಸಡಗರ.
ಮಗಳ ಫೊಟೋ ನೋಡಿ ಬರೆಯಬೇಕೆನಿಸಿತು.

       *ಸಿದ್ದು ಯಾಪಲಪರವಿ*