Tuesday, August 23, 2016

ಚಡಪಡಿಕೆ

ತವಕ-ತಲ್ಲಣಗಳು ಹಾಗೂ ಚಡಪಡಿಕೆ

ಆಧುನಿಕ ಕಮ್ಯುನಿಕೇಶನ್ ದುನಿಯಾ ವಿಚಿತ್ರ ವೇಗದಲ್ಲಿದೆ.
ನಸುನಗುತ್ತ ಪರಿಚಯವಾದ ಸಾಮಾಜಿಕ ಜಾಲತಾಣಗಳ ಸಂಗಾತಿಗಳು ಬೇಗ ಹತ್ತಿರವಾಗಿ ಅಷ್ಟೇ ವೇಗದಲ್ಲಿ ಸಿಡಿದು ಹೋಗುತ್ತಾರೆ.

ತೋಳ ಮೇಲೆ ಮಲಗಿದ ಮಗು , ಮಾತು ಮಂಥನ ಜಗಳಕ್ಕೂ ಸಿಗದ ಸಂಗಾತಿ , ತಲೆ ತುಂಬಾ ನೂರಾರು ಆಲೋಚನೆಗಳು , ಯಾವುದಕ್ಕೂ ಟೈಮ್ ಇಲ್ಲ ಎನ್ನುತ್ತಲೇ ತಾಣಗಳಿಗೆ ಸೆರೆಯಾಗಿಬಿಡುತ್ತೇವೆ .

ಇಲ್ಲಿ ಸಿಗುವ ಅನೇಕರ ಸಂಬಂಧಗಳು ಯಾವ ಹಂತಕ್ಕೆ ತಲುಪುತ್ತವೆಯೋ ಗೊತ್ತಾಗುವುದಿಲ್ಲ.
ಸ್ನೇಹಿತರಾಗಿ , ಹಿತೈಷಿಗಳಾಗಿ , ಒಲುಮೆಯ ಗೆಳತಿಯೂ ಆಗಿ ಪ್ರೊಪೊಜ್ ಮಾಡುವ ಧಾವಂತ ಹುಟ್ಟಿಸಿ , I'm not like that ಅಂತ ಕೆನ್ನೆಗೆ ಬಾರಿಸಿ ಮಂಗ ಮಾಯವಾದರೂ ಬಿಡದ ಮಾಯೆ.

ಪರಿಣಾಮ ಮಾತ್ರ ಶೂನ್ಯ ಯಾಕೆಂದರೆ ಎಲ್ಲವೂ ಅಮೂರ್ತ , ಶೂನ್ಯದಿಂದ ಶೂನ್ಯಕ್ಕೆ
ಆದರೂ ಬಿಡದೀ ಮಾಯೆ.

ಉಳಿಯುವ , ಉಳಿಸಿಕೊಳ್ಳುವ ಇರಾದೆ ಯಾರಿಗೂ ಇಲ್ಲವಾದರೂ ಹುಟ್ಟುವ ಸಂಬಂಧಗಳಿಗೆ ಲೆಕ್ಕವಿಲ್ಲ.

ಇದೊಂದು ಅಂತರ್ಜಾಲದ ಮಾಯಾವಿ
ದಕ್ಕಲಿ , ದಕ್ಕದಿರಲಿ ಯಾರಿಗೂ ಹೇಳದ ಕಣ್ಣಾ-ಮುಚ್ಚಾಲೆ ನಡದೇ ಇದೆ , ಇರುತ್ತದೆ...

ಇರುವುದೆಲ್ಲವ ಬಿಟ್ಟು
ಇರದುದರ ಎಡೆಗೆ
ತುಡಿಯುವುದೇ....

----ಸಿದ್ದು ಯಾಪಲಪರವಿ

Monday, August 22, 2016

ಡಾ.ಆರ್.ಎಂ.ರಂಗನಾಥ್

ಮರೆಯಬಾರದ ಚೇತನ . .

ಇವರು ಡಾ.ಆರ್.ಎಂ.ರಂಗನಾಥ್ . ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರುವರೆ ದಶಕಗಳ ಕಾಲ ಸಸ್ಯಶಾಸ್ತ್ರ ಪ್ರೊಫೆಸರ್.

ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಗೈಡ್ , ಗೆಳೆಯರಿಗೆ ಆತ್ಮೀಯ ಸಂಗಾತಿ , ಕುಟುಂಬಕ್ಕೆ ಹಿರಿಯಣ್ಣ , ಅಮ್ಮನ ಮುದ್ದಿನ ಮಗ , ಹಿರಿಯರಿಗೆ ನೆರವಿನಾಸರೆ , ಎಲ್ಲರೊಳು ಬೆರೆಯುವ ಹಸನ್ಮುಖಿ . ಪ್ರತಿಭೆ , ಅಧಿಕಾರ , ಅಂತಸ್ತು , ಬೆಂಗಳೂರಿನ ಭವ್ಯತೆ ಇದಾವುದು ಇವರನ್ನು ಅಲುಗಾಡಿಸಲೇ ಇಲ್ಲ !

ಎಂಬತ್ತರ ದಶಕದಲ್ಲಿ ಜನತಾ ಪರಿವಾರದ ಅಬ್ದುಲ್ ನಜೀರ್ ಸಾಬ್ ಹಾಗೂ ಕೆ.ಆರ್. ರಮೇಶ್ ಕುಮಾರ್ ಅವರ ಆತ್ಮೀಯ ಒಡನಾಟವಿದ್ದರೂ ಕಿಂಚತ್ತು ರಾಜಕೀಯ ಲಾಭ ಪಡೆಯದ ನಿಶ್ಪ್ರಹ ಸ್ನೇಹ .
ಅಮ್ಮನನ್ನು ಸಾಕುವ , ತಮ್ಮ -ತಂಗಿಯರ ಬಾಳು ಬೆಳಗಿಸುವ , ಸ್ನೇಹಿತರಿಗೆ ಸಹಾಯ ಹಸ್ತ ಚಾಚುವ ಭರದ ನಡಿಗೆಯಲ್ಲಿ ಸಂಸಾರ ಬಂಧನದಲಿ ಬಂಧಿಯಾಗದ ನಿರ್ಲಿಪ್ತ ಸಂತ.
  ಯುರೋಪಿನ ಸಮ್ಮೇಳನ , ಅಪಾರ ಅಧ್ಯಯನದ ಹರವು , ಅನಿರೀಕ್ಷಿತವಾಗಿ ಒಲಿದ ಕುಲಸಚಿವ ಹುದ್ದೆ ಇವರ ಸರಳತೆಯನ್ನು ಕಿತ್ತುಕೊಳ್ಳಲಿಲ್ಲ. ಕುಲಸಚಿವರಾಗಿದ್ದಾಗ ಖಾಸಗಿ ಕೆಲಸಗಳಿಗೆ ಕಾರು ಆಟೋದಲ್ಲಿಯೇ ಸುತ್ತಾಟ . ಈಗಲೂ ಅಷ್ಟೇ ತಮಿಳು ಮೂಲದ ಭೂಪಾಲನ್ ಇವರ ಆಟೋ ಸಾರಥಿ .
ಐಷಾರಾಮಿ ಬದುಕು ಇವರ ಬಳಿ ಸುಳಿಯಲಾರದು . ಅವರ ಹಿತೈಷಿಗಳು ಇಂದಿಗೂ ಅವರನ್ನು ಆಟೋ ರಂಗನಾಥ್ ಎಂದೇ ತಮಾಷೆಯಿಂದ ಗೌರವಿಸುತ್ತಾರೆ. ಆನೆ ನಡೆದದ್ದೇ ದಾರಿ ಎಂಬಂತೆ , ಅವರು ಎಲ್ಲಿಂದ ಹೇಗೆ ಬರುತ್ತಾರೆ ಎಂಬುದು ಅಮುಖ್ಯ .

ಇದಿಷ್ಟು ಇವರ ಖಾಸಗಿ ಜೀವನ ಶೈಲಿಯಾದರೆ , ಒಬ್ಬ ಆಡಳಿತಗಾರರಾಗಿ ಅತ್ಯಂತ ವಿಶಿಷ್ಟ ಶೈಲಿ ಇವರದು . ಕುಲಸಚಿವರಾಗಿದ್ದಾಗ ಅತ್ಯಂತ ಜವಾಬ್ದಾರಿಯುತವಾಗಿ , ಕಾಳಜಿಯಿಂದ ಕಾರ್ಯ ನಿರ್ವಹಿಸಿ ಕಳಂಕ ಅಂಟಿಸಿಕೊಳ್ಳದೆ ಪ್ರಾಮಾಣಿಕತೆ ಮೆರೆದರು 'ಅವರ ಜಾಗದಲ್ಲಿ ಯಾರಿದ್ದರೂ ಕೋಟ್ಯಾಧಿಪತಿಯಾಗುತ್ತಿದ್ದರು ' ಎಂದು ವಿಶ್ವವಿದ್ಯಾಲಯದ ಕಲ್ಲುಗಳೂ ಹೇಳುತ್ತವೆ .
ಶಿಸ್ತು , ದಕ್ಷತೆ ಹಾಗೂ ಆಡಳಿತ ಪ್ರೌಢಿಮೆಯೊಂದಿಗಿನ 'ಪ್ರಾಮಾಣಿಕತೆ' ಅನುಕರಣೀಯ. ಅಧಿಕಾರ ಮುಗಿದ ಕೂಡಲೇ ನಸು ನಗುತ್ತಾ ಭೂಪಾಲನ್ 'ನ ಆಟೋ ಏರಿ ನಿರ್ವಿಕಾರವಾಗಿ ಹೋಗಲು ಕಪ್ಪು ಚುಕ್ಕೆಯಿಲ್ಲದ ವ್ಯಕ್ತಿತ್ವವೇ ಕಾರಣ. ಬ್ರಷ್ಟ ವ್ಯವಸ್ಥೆ ಇರದೆ , ಕೇವಲ ಅಕ್ಯಾಡೆಮಿಕ್ ಎಕ್ಸಲೆನ್ಸ್ ಗೆ ಬೆಲೆ ಇದ್ದರೆ ಎಂದೋ ಕುಲಪತಿಯಾಗುತ್ತಿದ್ದರು . ಆದರೆ ಆ ಭಾಗ್ಯ ವಿಶ್ವವಿದ್ಯಾಲಯಗಳಿಗೆ ಇಲ್ಲ ಬಿಡಿ !

ಹಿಪೊಕ್ರಸಿಯ ಸುಳಿವಿಲ್ಲದ ನೇರ ನಡೆಯ , ಪರಿಶುದ್ಧ ಮನದ ಹಿರಿಯರೊಂದಿಗೆ ಎರಡು ವರ್ಷ ಇದ್ದದ್ದೇ ನನ್ನ ಪುಣ್ಯ . ಅತಿಯಾದ ಭಾವುಕನಾದ ನನಗೆ ವಾಸ್ತವ ಜಗತ್ತಿನ ಮಸಲತ್ತುಗಳ ಪರಿಚಯ ಮಾಡಿಸಿ ಅವುಗಳಿಂದ ಇರಬೇಕಾದ ಅಂತರ ಹೇಳಿಕೊಟ್ಟ ಮಹಾನ್ ಸಂತನ ಮನಸ್ಥಿತಿ ಪ್ರೊ. ಆರ್.ಎಂ. ರಂಗನಾಥ್ ಅವರದು . ಆಟೋದಲ್ಲಿ ಅಲೆದಾಟ , ನಿರಂತರ ಸಂಶೋಧನೆ , ಸಂಜೆ ಕೋಶಿಸ್ ಎಂಬ ಚಿಂತಕರ ಚಾವಡಿಯಲಿ ಬೆಚ್ಚಗಿನ ಹರಟೆ ಇವರ ದಿನಚರಿ . ಇಂತಹ ದಿವ್ಯ ಚೇತನವನ್ನು ನನಗೆ ಪರಿಚಯಿಸಿದ ಹಿರಿಯಣ್ಣ , ಮಾಧ್ಯಮ ಲೋಕದ ಎನ್ ಸೈಕ್ಲೋಪಿಡಿಯಾ , ನೇರ ನುಡಿಯ ಪತ್ರಿಕೋದ್ಯಮಿ ಪ್ರೊ. ರವೀಂದ್ರ ರೇಷ್ಮೆ ಅವರಿಗೆ ಚಿರಋಣಿ. ಈಗಲೂ ಅಷ್ಟೇ ಇವರಿಬ್ಬರೂ ಹಲೋ ಹೇಳದಿದ್ದರೆ ನನಗೆ ಬೆಳಕಾಗುವುದಿಲ್ಲ.

----ಸಿದ್ದು ಯಾಪಲಪರವಿ

Tuesday, August 16, 2016

ನೀ ನಿಲ್ಲಲಾರೆ

ನೀ ನಿಲ್ಲಲಾರೆ ನಾ ಬಿಡಲಾರೆ.

ಹರಿದಾಡುವ ನಿನ್ನ ಹಿಡಿದು ಹಾಕುವುದು ಕಡು ಕಷ್ಟ
ಹಾಗಂತ ಸುಮ್ಮನೇ ಬಿಡಲಾದತೇ?

ಸುಪ್ತ , ಜಾಗೃತ , ಶವಾವಸ್ಥೆಯಲೂ ನೀನು
ಸದಾ ಎಚ್ಚರ
ನಿರಂತರ ಬೆಂಬತ್ತುವ
ನಿನ್ನ
ಬಿಟ್ಟರೆ ಅವಿವೇಕಿ
ಹಿಡಿದರೆ ಹುಚ್ಚ

ಹೆಣ್ಣು-ಹೊನ್ನು-ಮಣ್ಣು
ಮಾಯೆಯಂಬ ಭ್ರಮೆ ಹುಟ್ಟಿಸುತ್ತ
ನೀ ಪಾರಾಗುವ ಜಾದೂಗಾರ

ಮಾಯೆಯ ಕೂಪದಲಿ ಅರಿವಿಲ್ಲದೆ ನೂಕಿ
ಸಾಯದೆ ಬದುಕಿಸದೇ ಜೀವಂತ ಹೆಣವಾಗಿಸಿ
ಅಂತ್ಯಕ್ರಿಯೆಯಿಲ್ಲದೆ ಪ್ರೇತಾತ್ಮವಾಗಿಸುವ
ಹುನ್ನಾರ

ಆಸೆ ಹುಟ್ಟಿಸಿ ಅಂಡಲೆಯುವಂತೆ
ಮಾಡುವ ಮಾಟಗಾರ
ಬಾಲ ಅಲ್ಲಾಡಿಸುತ್ತ , ಜೊಲ್ಲು ಸುರಿಸುತ್ತ
ತಿರುಗುವುದ ಕಂಡು ಕೇಕೆ ಹಾಕುವ ಖದೀಮ

ಪಂಚಮಹಾಭೂತಗಳಲಿ , ಪಂಚೇಂದ್ರಿಯಗಳಲಿ
ನಿತ್ಯ ವಾಸಿಯಾದರೂ ಕಣ್ಣಿಗೆ ಕಾಣದ ಮಾಯಾವಿ

ಬಯಲಲಿ ಹುಟ್ಟಿ ಬಯಲಲಿ ಬೆಳೆದು
ಬಯಲಲಿ ಅಡಗಿ ಅಣಕಿಸುವ ಮಂಗ

ಹಿಡಿಯಲೆತ್ನಿಸಿದಂತೆ ಮೇಲಕೆ ಹಾರುವ ಗೂಬೆ
ರಣಹದ್ದಿನ ಹಾಗೆ ಅರಿವಿಲ್ಲದೆ ಅಪ್ಪಳಿಸುವ
ನೀ
ಮಹಾ ಚತುರ

ನೀ ನಿಲ್ಲದೇ
ನೀ ಇಲ್ಲದೆ

ಯಾರೂ ಬದುಕಲಾರರು
ಯಾರೂ ಸಾಯಲಾರರು
ಎಂದರಿತ ನೀ
ಆಡುವ ಆಟಕೆ ಎಲ್ಲರೂ ಬಲಿ

ಬಲ್ಲಿದವರ ಬೆಲ್ಲದ ಮಾತಿಗೂ
ವಿಷ ಸವರುವ ಕುಟಿಲ

ಎಷ್ಟು ಜರಿದರೂ ನಕ್ಕು ನಿನ್ನ ಪಾಡಿಗೆ ನೀ
ನಿದ್ದು ಎಲ್ಲವ ನಿನಗೆ ಸರಿಕಂಡಂತೆ
ಅಳೆದು ತೂಗುವ ಜಾಣ ಶೆಟ್ಟಿ

ಆದರೆ


ರೆ

ನಿನ್ನ ಹಿಡಿದು ಕಟ್ಟಿ ಆಳಿದ ಧೀರರು
ಮೆರೆದಿಹರು
ಸಾಧು-ಸಂತ-ಮುನಿಗಳಾಗಿ

ನಿನ್ನ ಕಳ್ಳಾಟ ಮಳ್ಳಾಟ ಅರಿತವರೇ
ಮಹಾನುಭಾವರು

ಕಟ್ಟಿ ಹಾಕಿ ನಿಗ್ರಹಿಸಿ ಧ್ಯಾನಸ್ಥ ಸ್ಥಿತಿಯಲಿ
ಸಮತೆಯ ಶಮದಲಿ ನಿನ್ನನೇ ದಿಟ್ಟಿಸಿ
ಉಸಿರು ಬಿಗಿ ಹಿಡಿದು ಒಳಗಣ್ಣ ಇಳಿಬಿಟ್ಟು
ನನ್ನಷ್ಟಕೆ ನಾನೇ ಬೇಟೆಯಾಡಿ ನಾಲ್ಕು ಬಾರಿಸಿ
ಐವರು ಕಾವಲುಗಾರರ ಕೈಗೊಪ್ಪಿಸಿ ನವ
ದ್ವಾರಗಳ ಮುಚ್ಚಿ ಕೂಡಿಟ್ಟು ಕೂಳಿಲ್ಲದೆ
ಕೆಡವಿದರೆ
ನೀ ಒಲಿದೇ ಒಲಿಯುವ ಜೀತದಾಳು

ಹಿಡಿದು ಆಳಿದರೆ ನಮ್ರ ಸೇವಕ
ಕೈ ಬಿಟ್ಟರೆ ದುಷ್ಟ ಒಡೆಯ

ಈಗ ನಿನ್ನಾಟವ ಮೆಲ್ಲಗೆ ಅರಿತು
ಉಸಿರ ಬಿಗಿ ಹಿಡಿದು ನಿಧಾನ
ನಿಧಾನವಾಗಿ ಹಿಡಿತ ಸಾಧಿಸಲೆತ್ನಿಸುತ್ತಿರುವೆ
ನಿನ್ನ ಮಾಯಾ ಪಾಶವ
ಕಳಚುತ.

----ಸಿದ್ದು ಯಾಪಲಪರವಿ

ದಣಿದ ದೇಹ

ದಣಿದ ದೇಹ

SLEEP IS A TEMPORARY DEATH
DEATH IS A PERMANENT SLEEP

ದಣಿದ ದೇಹ -ಮನಸಿಗೆ
ಕೋಟಿ ಸುರಿದರೂ ನೆಮ್ಮದಿ
ದೊರಕೀತೆ ?

ಆಳರಸ ದುಡಿವ ಕೂಲಿಯಿರಲಿ
ಎಲ್ಲರಿಗೂ ಒಡೆಯ ಈ
ದೇಹವೆಂಬ ದೇವಾಲಯ

ನಿರಂತರ ದೇಹಾಲಯದ
ಆಸರೆಯ ಮನಕೆ
ಸುಖ ನಿದಿರೆಯೇ
ಜೀವಾತ್ಮ.

ಗಪ್ಪನೆ ಜಪ್ಪನೆ ಮಲಗಿ
ಸುಖಿಸುವಾಸೆ ಈ
ದಣಿದ ಜೀವಕೆ

ಅವ್ವನ ಮಡಿಲು
ಗೆಳತಿಯ ತೋಳಿನಾ
ಸೆರೆಗೆ ಸೆರಗಿನ ಮರೆಗೆ
ಮರೆಯಾಗುವ ತುಡಿತ

ನಿದಿರೆಯೆಂಬುದು ತಾತ್ಕಾಲಿಕ
ಸಾವು
ಸಾವೆಂಬುದು ಶಾಶ್ವತ
ನಿದಿರೆ
ಎಂಬ ಸಂತವಾಣಿ
ಸವಿನುಡಿಯ ಸವಿಯುತ
ಒಮ್ಮೊಮ್ಮೆ ನಿನ್ನ
ನಿನ್ನ ಬಿಸಿಯಪ್ಪುಗೆಯ
ಬಂಧಿಯಾಗಿ
ಬೆಚ್ಚಗೆ ಮಲಗಿ
ಹಗುರಾಗುವಾಸೆ.

----ಸಿದ್ದು ಯಾಪಲಪರವಿ

Monday, August 15, 2016

ಮನದ ಮುಂದಣ ಆಸೆ

ಮನದ ಮುಂದಣ ಆಸೆ

ಮುತ್ತಿಕ್ಕುವ ಬಯಕೆಗಳಿಗೆ ಲೆಕ್ಕವಿಲ್ಲ
ಮೈಮನಗಳ ಸುಳಿಯಲಿ ಅದಮ್ಯ
ಆಸೆಗಳು

ಹೆಣ್ಣು ಗಂಡೊಲುಮಿಯ ಬಿಸಿ ಹಸಿ
ಭಾವನೆಗಳ ಕೇವಲ ರಮಿಸಲಾದೀತೆ ?

ಈಡೇರದ ಆಸೆಗಳ ಹುಲಿ ಸವಾರಿಯ
ಭ್ರಮಾಲೋಕ
ನಡೆಯುವುದು ರಾಜಮಾರ್ಗ
ಅಲ್ಲವಾದರೂ ಮಹಾರಾಜನೆಂಬ
ಜಂಬ
ಕಾಣದಾಗಿದೆ ಸ್ಪಷ್ಟ
ಬಿಂಬ

ರಮ್ಯ ಪರಿಸರದಿ ಮಗುವಾಗಿ ಮಲಗುವ
ಇರಾದೆಯನು ಲೆಕ್ಕಿಸದ ಮನಕೆ ನೂರೆಂಟು
ತಾಕಲಾಟ

ಕಂಡದ್ದೆಲ್ಲ ದಕ್ಕಿಸಿಕೊಳ್ಳುವ ಹಪಾಹಪಿಯ
ಹಳವಂಡದ ಹಳೇ ಚಾಳಿ
ಬಿಡಬೇಕೆಂದರೂ ಬಿಡದ ಮಾಯೆ

ಕೂಳುಬಾಕ ಕೊಳ್ಳುಬಾಕ ಮನಕೆ ಇಂಗದ
ದಾಹ
ಸಿಗದಿದ್ದರ ಬೆಂಬತ್ತುವ ಮೊಂಡು ಹಟ

ಇತಿಹಾಸದ ಪಾಠಗಳು ಮರೆಯಾಗಿ
ಮತ್ತದೇ ಇತಿಹಾಸವಾಗುವ ಜಾಣಮರೆವು

ಅರಿತವರ ಅನುಭವಗಳ ಆಲಿಸದ
ಜಾಣಕಿವುಡು

ಮನದೊಳಗಣ ವಿಕಾರ ವಿನಿಮಯಕೆ
ನಿರಂತರ ಬಲಿಯಾಗುವ ಹಗಲುಗನಸಿನ
ಹಾಸಿಗೆ ಮೇಲೆ ಎಚ್ಚರಾಗದ ನಿದ್ರೆ

ಮಲಗದ ಮನವ ಎಬ್ಬಿಸುವ ಇಬ್ಬಗೆಯ
ನಿಲುವಿನ ಜೀವಜಾತ್ರೆಯ ಕೇವಲ
ಪಾತ್ರದಾರಿ
ಮೇಲಿನ ಸೂತ್ರದಾರನ
ಆಟದಲಿ...

----ಸಿದ್ದು ಯಾಪಲಪರವಿ

Friday, August 12, 2016

ಕಳೆದು ಹೋದ ರಸಮಯ ಕ್ಷಣಗಳು

ಕಳೆದು ಹೋದ ರಸಮಯ...

ಮಬ್ಬುಗತ್ತಲ ಸಂಜೆ ಸಜೆಯಲಿ ಎಂತಹ
ಮಜವಿತ್ತು
ಎದುರಿಗಡೆ ಬಣ್ಣ ಬಣ್ಣದ ಗಾಜಿನ ಬಾಟಲಿಗಳ
ಗ್ಲಾಸುಗಳ ಸದ್ದಿನ ನಿಶ್ಯಬ್ದ

ಹರಡಿ ಅಸ್ತವ್ಯಸ್ತಗೊಂಡ ಸ್ನಾಕ್ಸುಗಳ
ಘಮಲು

ನೀರು - ಸೋಡಾಗಳ ಅವಿನಾಭಾವ
ಸಂ-ಬಂಧ
ಭಿನ್ನ - ಭಾವಗಳ ಬಿನ್ನಾಣವಿಲ್ಲದ
ಸೊಗಡು

ಬೇಸಿಗೆಯಾದರೆ ಸಾಕು ಬೀರ-ಬಲ್ಲರ
ಥಕ-ಥಕ ಕುಣಿತ
ಸೇಂಗಾ , ಬಜಿ ಆಮಲೆಟ್ಟುಗಳ
ಆಮೆಯ ನಡಿಗೆ

ಕೊರೆಯುವ ಛಳಿಯಾದರಂತೂ ಅಬ್ಬಾ
ಅದರ ಮಜವೇ ಬೇರೆ !

ಕಾಸಿದ್ದರೆ ಸ್ಕಾಚುಗಳ ರಮ್ಯತೆಯ ರಂಗು
ರಾತ್ರಿ ಕಳೆಯುವವರೆಗೆ ಅದೇ ಗುಂಗು
ಇಲ್ಲದಿರೆ ವಿಸ್ಕಿ ರಮ್ಮು ಜಿನ್ನು ಎಂಬ ಬೇದ
ಭಾವಗಳ ಹಂಗಿಲ್ಲದ ತೀರ್ಥ-ಯಾತ್ರೆ

ಮಬ್ಬುಗತ್ತಲಲಿ ಎಲ್ಲವೂ ಕುಲ್ಲಾ-ಖುಲ್ಲಾ
ಮುಚ್ಚು ಮರೆಯಿಲ್ಲದ ಭಾವನೆಗಳ ಹರಿದಾಟ
ಮಾತು ಮಂಥನ ಚಿಂತನಗಳದೇ ಕಾರುಬಾರು

ಎಲ್ಲವೂ . ಎಲ್ಲರೂ ಖುಷಿ ಎಲ್ಲಿಲ್ಲದ ಸಂಭ್ರಮ
ಹಳ್ಳಿಯಿಂದ ದಿಲ್ಲಿಗೆ , ಅಲ್ಲಿಂದ ಅಮೇರಿಕೆಗೆ
ಅಲೆದಾಟ
ಮೈ-ಮನಗಳಲಿ ಅದೆಂತದೋ ಪುಳಕ
ಮುಕ್ತ ಮಾತು-ಕತೆಗಳ ಚಲ್ಲಾಟ
ಅನೇಕಾನೇಕ ನಗ್ನಸತ್ಯಗಳ ಬಯಲಾಟ
ಅದುಮಿಡಲಾಗದ ಭಾವನಗಳ ಚಲ್ಲಾಟ

ಆಹಾ ! ಆ ಸಂಜೆಗಳು ರಾತ್ರಿಗಳಾಗಿ
ಬೆಳಕು ಹರಿದುದರ ಪರಿವೇ ಇಲ್ಲದ
ಜಾಗರಣೆ
ಅದೇನು ಖುಷಿ ! ಅದೇನೋ ಮಜಾ
ಮುಚ್ಚು ಮರೆಯಿಲ್ಲದ ನಿರ್ಮಲ ಮುಗಿಯದ
ಪಯಣ....

----ಸಿದ್ದು ಯಾಪಲಪರವಿ

Thursday, August 11, 2016

ಹಾಗೆ ಸುಮ್ಮನೇ

Shooting...
----------------------
ಒಂದು ಕಾಲಕ್ಕೆ ನನ್ನನ್ನು ಕಾಡುತ್ತಿದ್ದ ಹವ್ಯಾಸ , ತುಂಬಾ ದುಬಾರಿ ಅನಿಸಿ ಕೈಬಿಟ್ಟದ್ದೆ. ಎಪ್ಪತ್ತರ ದಶಕದಲ್ಲಿ ನಾನಾಗ ಹೈಸ್ಕೂಲ್ ವಿದ್ಯಾರ್ಥಿ , ನಮ್ಮ ಕಟ್ಟಡದಲ್ಲಿ ಸ್ಟುಡಿಯೋ ಇತ್ತು ಅದರ ಒಡೆಯ ನ್ಯೂಯ್ ಕರ್ನಾಟಕ ಸ್ಟುಡಿಯೋ ಮಾಲೀಕ ಪ್ರಭು ಇಲ್ಲದಾಗ ಉಳಿದ ಉದ್ಯೋಗಿಗಳ ನೆರವಿನಿಂದ dark room ಕೆಲಸ ಕಲಿತೆ, ನನ್ನ ಫೋಟೋ ತೆಗೆಸಿಕೊಂಡು ನಾನೇ ಪ್ರಿಂಟ್ ಹಾಕುತ್ತಾ ಇದ್ದುದು ಮಜಾ ಅನಿಸುತ್ತಿತ್ತು. ಆಗ ಕ್ಯಾಮರಾ ಬಳಸುವುದನ್ನೂ ಕಲಿತೆ.
ಮನೆತನದ ಉದ್ಯೋಗ ವ್ಯಾಪಾರದಲ್ಲಿ ಅಷ್ಟೊಂದು ಆಸಕ್ತಿ ಇರದೇ ಅಂಗಡಿಗೆ ಹೋದರೆ ವ್ಯಾಪಾರ ಬಿಟ್ಟು dark room ಸೇರುತ್ತಿದ್ದೆ.
ಇದು ಅತಿಯಾಗಿ ಓದಿನ ಕಡೆಗೂ ಗಮನ ಕೊಡದೆ ಹತ್ತನೇ ವರ್ಗದಲ್ಲಿ ಡುಮ್ ಕಿ ಹೊಡೆದದ್ದು , ನಂತರ ಕಷ್ಟಪಟ್ಟು ಕಾಲೇಜಿನ ವ್ಯಾಸಂಗದಲ್ಲಿ ನಿಧಾನವಾಗಿ ಮೇಲೇರುತ್ತ ಈಗ ಈ ಹಂತ ತಲುಪಿದ್ದು ಒಂದು ಸಣ್ಣ
ಇತಿಹಾಸ
ನಂತರ ಕ್ಯಾಮರಾ ಆಗಾಗ ಹೇಗಲೇರಿತಾದರೂ ದುಬಾರಿ ಎನಿಸಿ ಕೊಂಚ ದೂರಾಗಿದ್ದೆ
ಆದರೆ ಈಗ ಡಿಜಿಟಲ್ ಹಾಗೂ ಸೋಸಿಯಲ್ ಮೀಡಿಯಾ ಯುಗ ದುಬಾರಿಯೂ ಅಲ್ಲವಾದ್ದರಿಂದ ಖುಷಿಗಾಗಿ ಇಂದು ಒಂದಿಷ್ಟು ಫೋಟೋ ಕ್ಲಿಕ್ಕಿಸಿ ಸಂಭ್ರಮಿಸಿದೆ.
ಕಾಲ ಕೂಡಿ ಬಂದರೆ ಬಿಡುವಾಗಿಸಿಕೊಂಡು ಕ್ಯಾಮರಾ ಹೇಗಲಿಗೇರಿಸುವ ಇರಾದೆ.
----ಸಿದ್ದು ಯಾಪಲಪರವಿ