Monday, December 24, 2018

ಕಳೆದ ಹೊತ್ತು

*ನಾನೀ ಕಳೆದ ಹೊತ್ತು*

ಬಾ ಎಂದು ಕರೆದ ಕೂಡಲೇ
ಬಂದದ್ದೇಕೋ ನಾ ಕಾಣೆ

ಕೊರಳ ದನಿಗೆ ತಲೆ ತೂಗಿದ
ಸರ್ಪ ತನ್ನ ತಾ ಮರೆತಂತೆ

ಜನುಮ ಜನುಮಾಂತರದ ಮಾತು
ಬರೀ ಮಾತು ಕತೆಗೆ

ಪ್ರೀತಿಯ ಭ್ರಮೆಗೆ ಅಂದುಕೊಂಡ
ಮಾಗಿಯ ಕಾಲದಲಿ

ಮನಸು ಅರಳಿದ ಹೊತ್ತಲಿ
ದೇಹವೂ ಅರಳಿತ್ತು ಮಲ್ಲಿಗೆಯ
ಮೊಗ್ಗಿನ ಹಿಗ್ಗಂತೆ ಸುಗ್ಗಿಯ
ರಾಶಿಯಂತೆ

ಬಿಡು ಅಂದಾಗ ಬಿಡಲು
ಬೇಕು ಎಂದಾಗ ಹಿಡಿಯಲು
ಇದು ಮುಟ್ಟಾಟ ಅಲ್ಲ

ಖೋ ಖೋ ಎಂದು
ಬೆನ್ನು ಚಪ್ಪರಿಸಿದರೆ ಓಡಲಾಗದು
ಕುಂತ ನೆಲ ಬಿಟ್ಟು
ಹಿಡಿದ ನೆಲೆ ಕೆಟ್ಟು

ನಂಬಿದ ಬಾಳಿಗೊಂದು ರೀತಿ
ನೀತಿಯನೂ ಹೊಸೆದಾಗ ಹೊಸದ
ಹೊಸೆದು ಬೆಸೆಯಲಾಗದು

ಬೆಸೆದ ಬಿಸಿ ಇನ್ನೂ ಬಿಗಿಯಾಗದು
ಅಂದುಕೊಂಡದ್ದೀಗ
ಬರೀ ಭ್ರಾಂತು ಎಲ್ಲ
ತಿರುವು ಮುರುವು ಹೊಸದು
ಬೆಸೆಯಿತು ಹಳೆಯದು
ಪಿಸಿದು ಪಿಸಿದು ಚೂರಾಯಿತು

ಆದರೂ

ಇಲ್ಲ ವಿಶಾದ
ವಿನಾಕಾರಣ ಏಕೆ ಹೀಗೆಂಬ
ತಳಮಳವೂ ದೂರ ಬಹು
ದೂರ

ಬೇಕಿದ್ದ ಹುಡುಕುತ್ತಿದ್ದ ಕಳ್ಳ
ಮನಸಿಗೀಗ ಬರೀ ಸಡಗರ

ಬೇಕಿದ್ದು ದಕ್ಕಿದ ನಿರಾತಂಕದಲಿ
ಎದೆಯರಳಿ ತೊಟ್ಟುಗಳು ತಡವರಿಸುವ
ತವಕಕೆ ಮೈಯಲ್ಲ ಕಾಲು

ನಡಗುವ ತೊಡೆಗಳಲಿ ಶಕ್ತಿ
ಸಂಚಲನ ಅರಳಿ ನಗುವ
ಚಂದ್ರ ಬಿಂಬಕೆ ಉಕ್ಕೇರಿದ
ತೆರೆಯ ಅಲೆಗಳ ಏರಿಳಿತ

ನಾ ಅರಳಿ ಕೆರಳಿದ್ದೀಗ
ಪೂರ್ಣ ಪರಿಪೂರ್ಣ ಸಂಪೂರ್ಣ

ಸಾರ್ಥಕ ಸಮರ್ಥ ಸಮರ್ಪಕ
ನಾ
ನೀ
ಕಳೆದು ಹೋದ ಹೊತ್ತಲಿ

ಬರೀ ಬೆಳಕು ಥಳ ಥಳ
ಹೊಳೆಯುವ ಮಹಾಬೆಳಗು.

*ಸಿದ್ದು ಯಾಪಲಪರವಿ*

ಒಳಗೆ ಕಾಡುವ

*ಒಳಗೆ ಕಾಡುವ ಪಂಚಮಹಾಭೂತ*

ನಿನ್ನ ದೇಹಕೆ ನೂರು ತುಟಿಗಳು ಮುತ್ತಿಕ್ಕಲು
ಎಂಬ ಭ್ರಾಂತಿಗಿಲ್ಲ ಕೊನೆ ಬೇಕೆನಿಸುವ ತವಕಕೆ

ಕೊಳೆತು ನಾರುತ ಮಣ್ಣ ಸೇರಿ ಮಾಯವಾಗುವ
ದೇಹಕೂ ನಿಲ್ಲದ ಬಯಕೆಗಳು

ಪಂಚಮಹಾಭೂತಗಳು ಹೊರಗು ಒಳಗೂ
ಹೊರಗೆಲ್ಲ ಘಮ ಘಮ
ಒಳಗೆ ಬರೀ ಕೊಳಕು ಮಲ ಮೂತ್ರ ನೆತ್ತರಿನ
ಕಮಟು ವಾಸನೆಗೆ ಚರ್ಮದ ಹೊದಿಕೆ
ಬಣ್ಣ ಬಟ್ಟೆಗಳ ಬಡಿವಾರದ ಸಿಂಗಾರ

ಜೋತು ಬಿದ್ದ ಮೊಲೆಗಳ ಎತ್ತಿ ಕಟ್ಟುವ ಸಡಗರ
ನಿಮಿರದ ಪೌರುಷಕೆ ಸುರಸುಂದರಿ ವಯಾಗ್ರ
ಕಾಂಡೂಮುಗಳ ಕನಸ ಕನವರಿಕೆ

ಮನಸಿಗೆ ಬರೀ ವಿಸರ್ಜನೆಯ ನಿರಾಳತೆ
ಬೆವರು-ಮಲ-ಮೂತ್ರ-ಧಾತು ಹೊರ ಹಾಕಿ
ಹಗುರಾಗುವ ಚಡಪಡಿಕೆಯಲಿ ಗಂಡು ಹೆಣ್ಣು
ಅರಿಯದ ಭೇದ ಭಾವ

ವಿಸರ್ಜಸಿ ಹಗುರಾಗಿ ನಿಟ್ಟುಸಿರು ಬಿಟ್ಟಾಗ
ಅಬ್ಬಾ ! ಅದೆಂತಹ ಆನಂದ ಮನಸಿಗಿಲ್ಲ ಹೇಸಿ
ಭಾವ ಹಗುರಾದ ಉನ್ಮಾದ ನೂತನ

ಮಿಲನಮಹೋತ್ಸವದ ಸಂಭ್ರಮದಿ ಬೆವರು
ಅಮೃತ,  ಬಿಸಿ ನೆತ್ತರಕೆ ಉಕ್ಕುವ ಚೈತನ್ಯ,
ಧಾತುವಿನ ಚಿಮ್ಮುವ ಧಾವಂತಕೆ

ನೀ ನನಗೆ
ನಾ ನಿನಗೆ
ನಾವು ನಮಗಾಗಿ
ಅನಿವಾರ್ಯ ಈ ಹೇಸಿ
ಜನುಮದಲೂ ನಿತ್ಯ ಮತ್ತೆ ಮತ್ತೆ ಹಗುರಾಗುವ
ಸಾಂಗತ್ಯದ ಸೆಳೆತಕೆ.

  *ಸಿದ್ದು ಯಾಪಲಪರವಿ*

Tuesday, December 11, 2018

ಪ್ರಜಾಪ್ರಭುತ್ವ...

*ಸಂವಿಧಾನ ಹಾಗೂ ಭಾರತೀಯ ಪ್ರಜಾಪ್ರಭುತ್ವ ಅಮರ*

ನಮ್ಮ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಅಮರ ಅಜರಾಮರ ಎಂಬುದನ್ನು ಮತದಾರ ಎತ್ತಿ ಹಿಡಿದಿದ್ದಾರೆ.
ಪಂಚರಾಜ್ಯಗಳ ಫಲಿತಾಂಶ ಈ ದೇಶದ ಪ್ರಜೆಗಳು ಏಕಚಕ್ರಾಧಿಪತ್ಯ ಸಹಿಸುವುದಿಲ್ಲ ಎಂಬುದ ನಿರೂಪಿಸಿದ್ದಾರೆ.

ಕಳೆದ ಲೋಕಸಭೆಯ ಫಲಿತಾಂಶದಿಂದಾಗಿ *ಕಾಂಗ್ರೆಸ್ ಮುಕ್ತ ಭಾರತ* ದಂತಹ ಅಹಂಕಾರದ ಮಾತುಗಳು ಮತದಾರರನ್ನು ಕೆಣಕಿದ್ದು ಸಹಜ.

ಆದರೆ ಜಾಣ ಮತದಾರ ಸದಾ ಜಾಗೃತನಾಗಿ ಬರುವ ಚುನಾವಣೆಗಾಗಿ ಮೌನವಾಗಿ ಕಾಯುತ್ತಾನೆ.

ನಮ್ಮ ಸಂವಿಧಾನದಲ್ಲಿ ವಿರೋಧ ಪಕ್ಷಕ್ಕೆ ಅದರದೇ ಆದ ಘನತೆ, ಗೌರವ ಇದೆ. ಅದನ್ನು ಅಣಕಿಸಿದ ಇಂದಿರಾಗಾಂಧಿ ಅವರಿಗೆ ಜನ ಪಾಠ ಕಲಿಸಿದ ಇತಿಹಾಸವನ್ನು ರಾಜಕೀಯ ಪಕ್ಷಗಳು ಮರೆಯಬಾರದು.

ರಾಜಕೀಯ ಪಕ್ಷ ಹಾಗೂ ಅದರ ನಾಯಕರು ಮತದಾರ ಮನಸು ಮಾಡಿದರೆ ಗೌಣವಾಗಿ ಬಿಡುತ್ತಾರೆ.

ದೇಶದಲ್ಲಿ ಅದ್ಭುತ ಬದಲಾವಣೆ ಬಯಸಿ ಮೋದಿಯವರಿಗೆ ವಿಪರೀತ ಬಹುಮತ ಕೊಟ್ಟು ಗೆಲ್ಲಿಸಿದರು. ಆದರೆ ಅವರ
ಅನೇಕ ನಿರ್ಣಯಗಳು ಜನಸಾಮಾನ್ಯರಿಗೆ ಪ್ರಯೋಜನವಾಗಲಿಲ್ಲ.
ನೋಟು ಅಮಾನ್ಯೀಕರಣ, ಜಿ.ಎಸ್.ಟಿ., ಇಳಿಯದ ಪೆಟ್ರೋಲಿಯಂ ಬೆಲೆಗಳು, ಜಮಾ ಆಗದ ಹದಿನೈದು ಲಕ್ಷ, ಅಪ್ರಸ್ತುತ ಮಂದಿರ ನಿರ್ಮಾಣ...ಇತ್ಯಾದಿ… ಇತ್ಯಾದಿ.

ಕಾಂಗ್ರೆಸ್ ಪಕ್ಷದಲ್ಲಿ ಮೋದಿಗೆ ಸಮಾನರಾದ ನಾಯಕರಿರದಿದ್ದರೂ, ಬಿಜೆಪಿ ಬೇಡವಾದ ಕಾರಣದಿಂದಾಗಿ ಕಾಂಗ್ರೆಸ್ ಅನಿವಾರ್ಯವಾಯಿತು.

ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಪರಿಣಾಮ ಕೊಡುವ ತಾಕತ್ತು ಭಾರತೀಯ ಮತದಾರನಿಗಿದೆ.

*ಹಾಗಂತ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದೇ ಟ್ರೆಂಡ್ ಇರುತ್ತದೆ ಎಂದು ತಪ್ಪಾಗಿ ಭಾವಿಸಲಾಗದು*.
ಅಂದಿನ ಮನಸ್ಥಿತಿ ಮತ್ತೆ ಬದಲಾಗಿರುತ್ತದೆ, ಈ ಪರಿಣಾಮದಿಂದ ಪಾಠ ಕಲಿತರೆ ಮತ್ತೆ ಮತದಾರ ಬದಲಾಗುತ್ತಾನೆ.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯಲೆಂದು ಮತದಾರ ಸದಾ ಬಯಸುವುದರಿಂದ ಈ ರೀತಿಯ ಆಟ ಆಡಿ ಪಾಠ ಕಲಿಸುತ್ತಾನೆ.

ನಮ್ಮ ರಾಜಕೀಯ ನಾಯಕರು ಬಹು ಬೇಗ ಇತಿಹಾಸ ಮರೆತುಬಿಡುವುದು ಬಹು ದೊಡ್ಡ ದುರಂತ. ‌

ಇತಿಹಾಸ ಮರೆಯದೇ ವರ್ತಮಾನದ ಜನಸಾಮಾನ್ಯರ ಭಾವನೆ ಗ್ರಹಿಸಿಕೊಂಡು ಆಡಳಿತ ನಡೆಸಲೆಂದು ಮತದಾರ ಬಯಸುತ್ತಾನೆ. ಪಕ್ಷಗಳ ಅಜೆಂಡಾ ಅವನಿಗೆ ಮುಖ್ಯವಾಗುವುದಿಲ್ಲ.

ಜನತಂತ್ರ ವ್ಯವಸ್ಥೆಯಲ್ಲಿ ಯಾರೂ ಮುಕ್ತಲಾಗಲಾರರು, ಆಗಲೂಬಾರದು, ಹಾಗಾದರೆ ಮನುಷ್ಯ ದುರಹಂಕಾರಿಯಾಗಿ ಡಿಕ್ಟೇಟರ್ ಆಗಿಬಿಡುತ್ತಾನೆ.‌

ಸರ್ವಾಧಿಕಾರಿ ಮನು ಮನೋಧರ್ಮ ಮಾನವನಿಗೆ ಬೇಡಾದ ಸಂಗತಿ ಎಂಬುದನ್ನು ತಿಳಿಹೇಳಲು ಈ ಚುನಾವಣಾ ಪರಿಣಾಮಗಳು ನೆರವಾಗಿಬಿಡುತ್ತವೆ.
ರಾಜಕೀಯ ಪಕ್ಷಗಳು ಪಾಠ ಕಲಿಯುತ್ತವೆ ಎಂಬ ಭರವಸೆ ಇಟ್ಟುಕೊಂಡು ರಾಜಕಾರಣದ ತಲ್ಲಣಗಳ ಸಕಾರಾತ್ಮಕವಾಗಿ ಎದುರಿಸೋಣ.

  *ಸಿದ್ದು ಯಾಪಲಪರವಿ*

Sunday, December 9, 2018

ಮೋಹನ್ ನಾಗಮ್ಮನವರ

*ನಾಗಮ್ಮನವರ ಬರೀ ನೆನಪಲ್ಲ*

ಕರ್ನಾಟಕ ಕಾಲೇಜಿನ ಸಂಗಾತಿಗಳೇ ಹಾಗೆ, ಆಯಸ್ಕಾಂತೀಯ ಸೆಳೆತ. ನನ್ನ ಸೀನಿಯರ್ ಮೋಹನ್ ಸೊಗಸಾದ ಮಾತುಗಾರ, ತುಂಬಾ ಜಾಣ ಆದರೂ ಪ್ರ್ಯಾಕ್ಟಿಕಲ್ ಪರೀಕ್ಷೆಗಳಲಿ ಪಾಸಾಗದಷ್ಟು ಜಗಳ ಆಡಿಬಿಟ್ಟಿದ್ದ.

ಪದವಿ ಪಾಸಾಗದಿದ್ರೂ ಬದುಕ ನದಿಗೆ ಈಸಿ ಬಿಟ್ಟಿದ್ದ.
ಹೋರಾಟಗಳ ಮೂಲಕ ಧಾರವಾಡ ನೆಲ ಹಿಡಿದುಬಿಟ್ಟ. ವಿದ್ಯಾವರ್ಧಕ ಸಂಘದ ಚಟುವಟಿಕೆಗಳ ಮೂಲಕ ನೆಲೆ ಕಂಡುಕೊಂಡ.
ಹಳ್ಳಿಯಿಂದ ಬಂದ ನನ್ನಂತ ಸಾವಿರಾರು ಹುಡುಗರ ಹೀರೊ ಆದ.
ಓದುವ, ಬರೆಯುವ,ಮಾತನಾಡುವ ಕಲೆ ಕಲಿಸಿಕೊಟ್ಟ ಗುರುವಾದ.

ನಿಸ್ವಾರ್ಥ ಸೇವೆ ಮೂಲಕ ಜನಾನುರಾಗಿಯೂ ಆದ. ಏನಾದರು ನೌಕರಿ ಮಾಡಬೇಕು ಅನಿಸದಷ್ಟು ಸಂತೃಪ್ತ ಭಾವ ಬೆಳೆಸಿಕೊಂಡ.
ಲಂಕೇಶ್ ಪತ್ರಿಕೆಯ ವಿಶಿಷ್ಟ ಬರಹಗಳ ಮೂಲಕ ನಾಡಿನ ಗಮನ ಸೆಳೆದು ಪತ್ರಿಕೋದ್ಯಮದ ಸೆಳೆತ ಹಚ್ಚಿಕೊಂಡು ನಿರಂತರ ಬರೆಯಲಾರಂಭಿಸಿ ಊಹಿಸದ ಎತ್ತರಕ್ಕೆ ಬೆಳೆದು ನಮ್ಮ ಪಾಲಿನ ಹೀರೊ ಆಗಿಬಿಟ್ಟ.

ಧಾರವಾಡಕ್ಕೆ ಹೋದಾಗಲೆಲ್ಲ ಭೇಟಿಯಾದಾಗ ಅದೇ ಹಳೆಯ ಗೆಳೆತನದ ವಾತ್ಸಲ್ಯದ ಹೊನಲು.
ಸಂಘದ ಚುನಾವಣೆಯಲ್ಲಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ. ಅಚ್ಚುಕಟ್ಟಾಗಿ ಕಾರ್ಯಕ್ರಮಗಳ‌ ಆಯೋಜಿಸುವ ಕುಶಲತೆ, ಸಂಘಟನಾ ಸಾಮರ್ಥ್ಯ.

ಹಿರಿಯರೊಂದಿಗೆ ನವಿರು ಸಂಬಂಧ, ಕಿರಿಯರೊಡನೆ ಆತ್ಮೀಯತೆ, ರಾಜಕಾರಣಿಗಳ ಜೊತೆ ಅಗತ್ಯಕ್ಕೆ ಬೇಕಾದಷ್ಟು ಒಡನಾಟಗಳ ಮೂಲಕ ಎಲ್ಲ ಗಳಿಸುತ್ತ ಹೋದ ಹಣ *ಹೊರತು ಪಡಿಸಿ*.

ಸರಕಾರದ ವಿವಿಧ ಸಮಿತಿಗಳು, ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಚಟುವಟಿಕೆಗಳಿಗೆ ಜೀವ ತುಂಬಿದ.
ಅತಿಯಾದ ಕೂಗಾಟ,ಹಾರಾಟ ಇರದ ತಣ್ಣನೆಯ ಚಳುವಳಿಗಳಿಗೆ ಹೊಸ ಆಯಾಮ ಕೊಟ್ಟ ಹೆಗ್ಗಳಿಕೆ ಮೋಹನ್ ನಾಗಮ್ಮನವರ ಅವರಿಗೆ ಸಲ್ಲುತ್ತದೆ.

ನಾನೂ ಧಾರವಾಡಕ್ಕೆ ಬರಲಿ ಎಂಬ ಆಸೆಯೂ ಇತ್ತು.‌ ಗದುಗಿನ ಪರಿಸರ ನನಗೆ ಸಾಲದು ಎಂದು ತಿವಿಯುತ್ತಿದ್ದ.
ಸರಕಾರಿ ಉದ್ಯೋಗ, ತೋಂಟದಾರ್ಯ ಮಠದ ಸೆಳೆತದಿಂದಾಗಿ‌ ಗದಗ ಬಿಡುವ ಮನಸಾಗಲಿಲ್ಲ.

ಆಹ್ವಾನಿಸಿದ ಕಾರ್ಯಕ್ರಮಗಳಿಗೆ ತಪ್ಪದೇ ಹಾಜರು, ನಾನೂ ಅಷ್ಟೇ ಕರೆದರೆ ಓಡಿ ಹೋಗುತ್ತಿದ್ದೆ. ಹತ್ತಾರು ಬೈಟಕ್ಕುಗಳು, ಕಳೆದ ಮಧುರ ಕ್ಷಣಗಳು ಒತ್ತರಿಸುತ್ತಲೇ ಇವೆ.
*ವೈಯಕ್ತಿಕ ಬದುಕಿನ ಖಾಸಗಿ ಸಂಗತಿಗಳಿಗೆ ಮೌನ ಸಾಕ್ಷಿಯಾದೆ*. ಹಲವು ಘಟನೆಗಳಿಗೆ ಇಬ್ಬರೂ ಅಸಹಾಯಕರು.

ರಾಜಕಾರಣದ ಹುಚ್ಚಿತ್ತಾದರೂ ಅದರ ಮಿತಿ ಮತ್ತು ಅಪಾಯ ಗೊತ್ತಿತ್ತು. ಹೀಗಾಗಿ ಸೂಜಿಗೆ ಕೊಟ್ಟ ಮುತ್ತಾಯಿತು.

ಹಿರಿಯ ತಲೆಮಾರಿನ ಸಾಹಿತಿಗಳಿಗೆ ನಾಗಮ್ಮನವರ ಊರುಗೋಲಾದ. ಧಾರವಾಡದ ಕಲ್ಯಾಣನಗರ  *Pensioners Paradise* ನಂತಾಗಿತ್ತು, ಅಲ್ಲಿ ನೆಲೆಸಿರುವ ಸಾಹಿತಿಗಳ ಮಕ್ಕಳೆಲ್ಲ ಈಗ ಅನಿವಾಸಿ ಭಾರತೀಯರು.‌ ಹಿರಿಯರ ಒಂಟಿತನ ದೂರ ಮಾಡಲು ಮೋಹನ್ ಮಗನಂತೆ ನೆರವಾದ.

ಅತಿಯಾದ ಓಡಾಟ, ಸಂಜೆಯ ಬೈಟಕ್ಕುಗಳು ಆರೋಗ್ಯ ಹಾಳಾಗಲು ಒಂದು ನೆಪವಿರಬಹುದು, ಆದರೂ ಇದು ಅರ್ಧಸತ್ಯ.

ಕೊನೆ ದಿನಗಳಲ್ಲಿ ತುಂಬ ಹಿಂಸೆ ಅನುಭವಿಸಿದ, ಡೈಲೆಸಿಸ್ ಅನಿವಾರ್ಯ ಆದಾಗ ಬದುಕು ಕಠಿಣ ಅನಿಸಿತು.

ಅನಾರೋಗ್ಯ-ಮುಪ್ಪು-ಸಾವು ಬದುಕಿನಲ್ಲಿ ಅನಿವಾರ್ಯ ಆದರೆ ಬೇಗ ಬರಬಾರದಲ್ಲ. ಅದೂ ಇಷ್ಟೊಂದು ಪಾದರಸದಂತೆ ಓಡಾಡುವ ಜೀವಗಳಿಗೆ. ಅದಕೆ ನೋವು, ತಲ್ಲಣ, ಹತಾಷೆ, ಹಳಹಳಿ, ಹೇಳಲಾಗದ ದುಃಖ.
ಈ ಹಿಂದೆ ಕುಲಕರ್ಣಿ ವೀಣಾ ಅಕಾಲಿಕವಾಗಿ ಹೋದಾಗ ಅಷ್ಟೇ ಒದ್ದಾಡಿದ್ದೆ, ಈಗ ಮೋಹನ್.
ಛೇ ! ಈ ಸಾವು ನ್ಯಾಯವಲ್ಲ ಖರೆ ಆದರೂ…

  *ಸಿದ್ದು ಯಾಪಲಪರವಿ*

Thursday, December 6, 2018

ನನಗಾಗಿ ನೀ

*ನನಗಾಗಿ ನೀ ನಾನಾಗಿಬಿಟ್ಟೆ*

ನನಗಾಗಿ ನೀ ಇಟ್ಟ ಹೆಸರ ಬಿಟ್ಟೆ
ಹೊಸ ಹೆಸರ ತೊಟ್ಟೆ

ನೀನೇ ಹಾಕಿಕೊಂಡ ಗಡಿ ಬಿಟ್ಟೆ
ಆಳಿದವನ ಸಂಗ ಬಿಟ್ಟು ಬಿಟ್ಟೆ

ಮೈಮನಗಳ ಕೊಟ್ಟು ನಿನ್ನ ನೀ ಬಿಟ್ಟೆ
ನಿಟ್ಟುಸಿರ ಬಿಟ್ಟು ಬಿಸಿಯುಸಿರ ಕೊಟ್ಟೆ

ನಿಶಬ್ದವಾದ ಬಂಧನವ ಬಿಗಿಯಲು ಕೊಟ್ಟೆ
ಶಬ್ದಗಳ  ಭಂಡಾರದ ಕೀಲಿ ಕೈಲಿಟ್ಟೆ

ಉಸಿರ ಹಸಿರಲಿ ಮೋಹಿಸಿ ಕಾಪಿಟ್ಟೆ
ತೋಳಬಂಧಿಯಲಿ ತಲೆ ಇಟ್ಟೆ

ಕೊಡುವುದೆಲ್ಲವ ಕೊಟ್ಟು ಅರಳಿದ
ಮನಸ ಕೆರಳಲು ಹರಿಬಿಟ್ಟೆ

ಇದು ಲೋಕದ ಮಾತಲ್ಲ ಎಂದರಿತು ಬಿಟ್ಟೆ
*ಅವನ* ಲೀಲೆಗೆ ಶರಣಾಗಿ ಮೈಛಳಿ ಬಿಟ್ಟೆ

ಬಿಡಲು ಇನ್ನು ಏನೂ ಉಳಿದಿಲ್ಲವೆಂದರಿತು
ನಂಬಿದ ಮನಸಿನಲಿ ಲೀಲವಾಗಿ ಬಿಟ್ಟೆ

ಬಿಡು ಬಿಡು ಎಂದಾಗ ಮೌನವಾಗಿ ಬಿಟ್ಟೆ
ಮತ್ತೆ ಮತ್ತೆ ಕೊಡುವ ಲೆಕ್ಕ ಇಟ್ಟೆ

ಭಾವನೆಗಳ ಉಸಿರ ತಳಮಳವ ಕೈಗಿಟ್ಟು
ಮಹಾ ಕಾವ್ಯವಾಗಿ ನನ್ನ ಕೂಡಿಬಿಟ್ಟೆ

ಮಹಾ ಬಿಡಿಸಲಾಗದ ಒಗಟ ಬಿಡಿಸಿಬಿಟ್ಟೆ
ಒಲವಲೋಕಕೊಂದು ಹೊಸ ಅರ್ಥ ಕೊಟ್ಟೆ

ಈಗ ನೀ ನಾನಾಗಿ ನಿಶ್ಚಿಂತವಾಗಿ ಬಿಟ್ಟೆ.

*ಸಿದ್ದು ಯಾಪಲಪರವಿ*

Thursday, November 29, 2018

ಎಚ್. ಕಾವ್ಯಶ್ರೀ ನಾಟಕ ಅಗ್ನಿದಿವ್ಯ

ಸಂಶಯದ ಮೇಲೆ ಮತ್ತೊಂದು ಗದಾಪ್ರಹಾರ
*ಎಚ್.ಕಾವ್ಯಶ್ರೀ ಅವರ ನಾಟಕ  ಅಗ್ನಿದಿವ್ಯ*

ಸಾಹಿತ್ಯದಲ್ಲಿ ಅಗ್ರಸ್ಥಾನ ಕಾವ್ಯಕ್ಕೆ  , ದೃಶ್ಯ ಮಾಧ್ಯಮದಲ್ಲಿ ನಾಟಕಕ್ಕೆ ಕಾರಣ ಬೀರಬಹುದಾದ ತೀವ್ರ ಪರಿಣಾಮ.

ಕಿರುತೆರೆ ಹಾಗೂ ಹಿರಿತೆರೆ ಮೇಲಿರುವ ಕೃತಕತೆ ಹಾಗೂ ಢಾಳತೆಯಿಂದ ಬಹು ದೂರವಿರುವ ರಂಗಭೂಮಿ ದೃಶ್ಯ ಪ್ರಕಾರದ ಹಿರಿಯಣ್ಣ.

ನಾಟಕದ ಮೂಲಕ ಅತ್ಯಂತ ಗಂಭೀರ ವಿಷಯಗಳನ್ನು ತೀಕ್ಷ್ಣವಾಗಿ ಪ್ರತಿಬಿಂಬಿಸಬಹುದು.

ಈ ಹಿನ್ನೆಲೆಯಲ್ಲಿ ಎಚ್.ಕಾವ್ಯಶ್ರೀ ಅವರು  *ಅಗ್ನಿದಿವ್ಯ*ದ ಮೂಲಕ ಹೊಸ  ಕಾಣಿಕೆ ನೀಡಿದ್ದಾರೆ.

ನಮ್ಮ ಮಹಾಕಾವ್ಯದ ಪಾತ್ರಗಳು ದಿನಕ್ಕೊಂದು ಬಗೆಯಲಿ ಕಾಡುತ್ತಲೇ ಇವೆ. ಸೀತೆ , ದ್ರೌಪದಿ , ಊರ್ಮಿಳೆ , ಶಾಕುಂತಲೆ , ಅನುಭವ ಮಂಟಪದ ಅಕ್ಕ , ಶೆಕ್ಷಪಿಯರ್ ನಾಟಕದ ಡೆಸ್ಡಿಮೋನಾ ಎಲ್ಲರೂ ಬಗೆ ಬಗೆಯಾದ ಅನುಭವ ನೀಡುತ್ತಾರೆ.

ಸೀತೆ ಎದುರಿಸಿದ ಅಗ್ನಿಪರೀಕ್ಷೆಯನ್ನು ಆಧುನಿಕ ಮಹಿಳೆಯರ ಸಮಕಾಲೀನ ಸವಾಲುಗಳ ಮೇಲೆ ಬೆಳಕು ಚಲ್ಲಿದ್ದಾರೆ.

ರಾಮಾಯಣ ದೃಶ್ಯಗಳನ್ನು ಆಧರಿಸಿ ನಡೆಯುವ ರಿಹರ್ಸಲ್ ಮೂಲಕ ನಾಟಕ ಪ್ರಾರಂಭವಾಗುತ್ತದೆ . ನಟರು ರಾಮಾಯಣದ ದೃಶ್ಯಗಳಲ್ಲಿ ಮುಳುಗಿಹೋಗಿ ತಮ್ಮನ್ನು ತಾವು ಸಮೀಕರಿಸಿಕೊಳ್ಳುವ ಬಗೆ ಕೂಡಾ ವಿಭಿನ್ನ.

ನಾಟಕ ಆರಂಭವಾದ ಕೆಲವೇ ನಿಮಿಷಗಳಲ್ಲಿ ವಸ್ತು ನವಿರಾಗಿ ತೆರೆದುಕೊಳ್ಳುತ್ತದೆ. ಅಗ್ನಿಪರೀಕ್ಷೆಗೆ ಒಳಗಾಗುವಾಗ ಸೀತೆ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟ .

ಅಗ್ನಿಪರೀಕ್ಷೆಗೆ ರಾಮ ಕೊಡುವ ಕಾರಣಗಳನ್ನು ಸೀತೆ ಕೇಳಿಸಿಕೊಂಡು ನಂತರ  ತಿರುಗೇಟಿನ ಮೂಲಕ ಕೊಡುವ ಪೆಟ್ಟು ಸಣ್ಣದಲ್ಲ.

ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ಸಂಪ್ರದಾಯದ ನೆಪದಲ್ಲಿ ಅನುಭವಿಸುವ ಯಮಯಾತನೆಯನ್ನು  ಅರ್ಥಪೂರ್ಣವಾಗಿ ಹೆಣೆಯಲಾಗಿದೆ.

ರಾಮ-ಸೀತೆಯರ ಪಾತ್ರಧಾರಿಗಳ ತೊಳಲಾಟದ  ಮನೋಕ್ಷೋಭೆಯನ್ನು ಪರಿಣಾಮಕಾರಿಯಾಗಿ ನಾಟಕಕಾರರು ಮುಖದ ಮೇಲೆ ಎಸೆಯುತ್ತಾರೆ .

ಅಗ್ನಿಪರೀಕ್ಷೆ ಹಾಗೂ ಅಗಸನ ಮಾತಿಗೆ ಮನ್ನಣೆ ಕೊಟ್ಟು ಕಾಡಿಗೆ ಅಟ್ಟುವ ಮೂಲ ಉದ್ದೇಶ ಕೇವಲ *ಸಂಶಯ* ಮಿಕ್ಕದ್ದೆಲ್ಲ ಬರೀ ನೆಪ.

ರಾಮಾಯಣದ ಸೀತೆ ಹಾಗೂ ಪಾತ್ರದಾರಿ ದಿವ್ಯ ಎದುರಿಸುವ ತಲ್ಲಣ ಒಂದೇ ಆದರೆ ಕಾಲ ಬೇರೆ.

ಸೀತೆ ಅನುಭವಿಸಿದ ಹಿಂಸೆಯನ್ನು ದಿವ್ಯ ಎದುರಿಸಿ ಅರಗಿಸಿಕೊಳ್ಳಲು ಪ್ರಯತ್ನಿಸುತ್ತಾಳೆ ಆದರೆ ಕೊನೆಗೆ ಅವಳು ತೆಗೆದುಕೊಳ್ಳುವ ನಿರ್ಣಯ !
ಅಬ್ಬಾ ! ಪ್ರೇಕ್ಷಕ ನಿಟ್ಟುಸಿರು ಬಿಡುತ್ತಾನೆ.

ಇಂತಹ ಕಠಿಣ ವಸ್ತುವನ್ನು ರಂಗದ ಮೇಲೆ ಪ್ರಯೋಗ ಮಾಡುವದೊಂದು ದೊಡ್ಡ ಸವಾಲು.
ಆ ಸವಾಲನ್ನು ನಿರ್ದೇಶಕ ಲಕ್ಷ್ಮಣ ಪೀರಗಾರ ಸಮರ್ಪಕವಾಗಿ ನಿರ್ವಹಿಸಿದ್ದಾರೆ.

ಮನುಷ್ಯನ ಮನಸ್ಸಿನ ಸೂಕ್ಷ್ಮಾತೀತ ಸಂಗತಿಗಳ ಎಳೆಹಿಡಿದು ನಮ್ಮ ಸಂಪ್ರದಾಯದ ಮೂಲಭೂತವಾದವನ್ನು ಕೆಣಕುತ್ತಾರೆ.

ಹೆಣ್ಣನ್ನು ಸಂಶಯಿಸಿ , ಸತಾಯಿಸಿ ಕಾಡುವ ರೀತಿ ರಿವಾಜುಗಳ ಮೇಲೆ  ನಾಟಕಕಾರರು ಗದಾಪ್ರಹಾರ ಮಾಡಿ ಕೊಂಚ ಆಲೋಚನೆಗೆ ಹಚ್ಚಲು ಯಶ ಸಾಧಿಸಿದ್ದಾರೆ.

ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಅರುಣೋದಯ ಕಲಾತಂಡದ ಶಂಕರಣ್ಣ ಸಂಕಣ್ಣವರ್ ಹಾಗೂ ಕಲಾವಿದರ ಶ್ರಮ ಸಾರ್ಥಕವೆನಿಸುತ್ತದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾತಂಡಗಳನ್ನು ಉತ್ತೇಜಿಸುವ ಹೊಸ ಯೋಚನೆಯ  ಪ್ರತಿಫಲವೇ *ಅಗ್ನಿದಿವ್ಯ*.

*ನೊಂದವರ ನೋವ ನೋಯದವರು ಎತ್ತ ಬಲ್ಲರು* ಎಂಬ ಮಹದೇವಿ ಅಕ್ಕನ ಸಾಲುಗಳು ಮನದ ತುಂಬೆಲ್ಲ ರಿಂಗಣಿಸುತ್ತಿರುವಾಗ ನೂರಾರು ಸೀತೆಯರ ಅಸಹಾಯಕತೆ ನೆನಪಾಯಿತು.

ಸೂಕ್ಷ್ಮ ವಿಷಯವನ್ನು ರಂಗಾಭಿನಯದ ಮೂಲಕ ಮನದಾಳದಲಿ ಅಚ್ಚೊತ್ತಲು ಕಾರಣರಾದ ಎಲ್ಲರಿಗೂ ಅಭಿವಂದನೆಗಳು.

ಮಹಿಳಾ ಸಬಲೀಕರಣ ಹಾಗೂ ಫೆಮಿನಿಸಮ್ ಕುರಿತ ರಂಗ ಪ್ರತಿಪಾದನೆಯ ಮುನ್ನೋಟ ಇದು.

---ಸಿದ್ದು ಯಾಪಲಪರವಿ.

ಗದ್ದುಗೆಯ ಗದಗ

ಅವಿಭಜಿತ ಧಾರವಾಡ ಜಿಲ್ಲೆಯ ಗದುಗಿನ ಹಿರಿಮೆ ಚಿರಕಾಲ ಸ್ಮರಣೀಯ.
ಸಾಹಿತ್ಯ, ಸಂಗೀತ, ಲಲಿತಕಲೆ, ಆಧ್ಯಾತ್ಮ, ಮುದ್ರಣ, ಸಹಕಾರ, ನೇಕಾರಿಕೆ, ಕೋಮುಸೌಹಾರ್ದತೆ ಹಾಗೂ ಬಸವೇಶ್ವರ ಪುತ್ಥಳಿಯಿಂದಾಗಿ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದೆ.

ಕುಮಾರವ್ಯಾಸ ತನ್ನ ಮಹಾಭಾರತವನ್ನು ಇಲ್ಲಿನ ವೀರನಾರಾಯಣ ಗುಡಿಯಲ್ಲಿ ರಚಿಸಿದ್ದರಿಂದ ವಿಶೇಷ ಸಾಹಿತ್ಯಕ ಮನ್ನಣೆ ಗದುಗಿಗೆ ಇದೆ.

ತೋಂಟದಾರ್ಯ ಮಠದ ಪೂಜ್ಯ ಡಾ.ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳು ಕನ್ನಡದ ಜಗದ್ಗುರು ಎಂದೇ ಖ್ಯಾತರಾದವರು. ತಮ್ಮ ಶಿವಾನುಭವ ಹಾಗೂ ಲಿಂಗಾಯತ ಅಧ್ಯಯನ ಸಂಸ್ಥೆಯ ಮೂಲಕ ಬಹುದೊಡ್ಡ ಸಾಹಿತ್ಯಕ  ಹಾಗೂ ಸಾಂಸ್ಕೃತಿಕ ಕ್ರಾಂತಿಯನ್ನೇ ಮಾಡಿದ್ದಾರೆ. ‌
ಅವರು ಪ್ರಕಟಿಸಿದ ಅಪರೂಪದ ಸಂಶೋಧನಾತ್ಮಕ ಕೃತಿಗಳು ಸಂಗ್ರಹಯೋಗ್ಯ ಗ್ರಂಥಗಳಾಗಿವೆ.

ಪಂಡಿತ್ ಪಂಚಾಕ್ಷರ ಗವಾಯಿಗಳು ಸ್ಥಾಪಿಸಿದ ವೀರೇಶ್ವರ ಪುಣ್ಯಾಶ್ರಮ ಸಾವಿರಾರು ಅಂಧ, ಅನಾಥ ಮಕ್ಕಳಿಗೆ ಸಂಗೀತ ಅಭ್ಯಾಸ ನೀಡಿ ಅಂತರರಾಷ್ಟ್ರೀಯ ಸಂಗೀತ ಕಲಾವಿದರನ್ನು ನಾಡಿಗೆ ನೀಡಿದೆ. ಅವರ ಶಿಷ್ಯಂದಿರಾದ ಪಂಡಿತ್ ಪುಟ್ಟರಾಜ ಗವಾಯಿಗಳು ಅದೇ ಪರಂಪರೆಯ ಮೂಲಕ ಹಿಂದುಸ್ತಾನಿ ಸಂಗೀತದ ಪರಂಪರೆಯನ್ನು ನಾಡಿನಾದ್ಯಂತ ಪಸರಿಸಿದರು.
ಖ್ಯಾತ ಹಿಂದುಸ್ತಾನಿ ಗಾಯಕ ಪಂಡಿತ್ ಭೀಮಸೇನ ಜೋಶಿ ಈ ನೆಲದ ಮಗ ಎಂಬುದು ಮರೆಯಲಾಗದು.

ಟಿ.ಪಿ.ಅಕ್ಕಿ ಅವರು ಪ್ರಾರಂಭಿಸಿದ ವಿಜಯ ಕಲಾ ಮಂದಿರದ ಕಲಾವಿದರು ಜಗತ್ತಿನ ತುಂಬ ಹೆಸರು ಮಾಡಿದ್ದಾರೆ. ವಿಜಯ ಕಲಾ ಮಂದಿರ  ಕಲಾಶಿಕ್ಷಕರ ತವರು ಮನೆ ಎನಿಸಿಕೊಂಡಿದೆ.

ಜಾತ್ಯಾತೀತ ಆಧ್ಯಾತ್ಮ ಪರಂಪರೆಗೆ ಹೊಸ ಭಾಷ್ಯ ಬರೆದ ಜಗದ್ಗುರು ಶಿವಾನಂದ ಮಹಾಸ್ವಾಮಿಗಳು ತಮ್ಮ ಮಠದ ಮೂಲಕ ನೂರಾರು ಸಂತರಿಗೆ ಶಿವ ದೀಕ್ಷೆ ಕರುಣಿಸಿದರು.
ಪೂಜ್ಯ ಸಿದ್ಧೇಶ್ವರ ಮಹಾಸ್ವಾಮಿಗಳ ಗುರುಗಳಾದ ಮಲ್ಲಿಕಾರ್ಜುನ ಸ್ವಾಮಿಗಳು ಇದೇ ಮಠದ ಶಿಷ್ಯರೆಂಬುದು ಅಭಿಮಾನದ ಸಂಗತಿ.

ಮುದ್ರಣ ಕಾಶಿ ಎಂದೇ ಖ್ಯಾತಿ ಹೊಂದಿರುವ ಇಲ್ಲಿನ ಪ್ರೆಸ್ಸುಗಳು ಮುದ್ರಿಸಿದ ಪಂಚಾಂಗ, ಕ್ಯಾಲೆಂಡರ್, ಶಬ್ದಕೋಶಗಳು ಹಾಗೂ ಪುಸ್ತಕಗಳು ಇಂದಿಗೂ ತಮ್ಮ ಮಾರುಕಟ್ಟೆ ಉಳಿಸಿಕೊಂಡಿವೆ.

ಏಷ್ಯಾ ಖಂಡದ ಮೊಟ್ಟ ಮೊದಲ ಸಹಕಾರ ಸಂಸ್ಥೆ ಇಲ್ಲಿನ ಕಣಗಿನಹಾಳದಲ್ಲಿ ಎಸ್.ಎಸ್.ಪಾಟೀಲ್ ಅವರಿಂದ ಸ್ಥಾಪಿಸಲ್ಪಟ್ಟಿತು.

ಬೆಟಗೇರಿ ನೇಕಾರರು ಖುದ್ದಾಗಿ ನೇಯುವ ಸೀರೆ, ಕುಪ್ಪಸಗಳ ಕಸುವುಗಾರಿಕೆಗೆ ಅಂತರರಾಷ್ಟ್ರೀಯ ಮಾರುಕಟ್ಟೆ ಇದೆ. ಬೆಟಗೇರಿ ನೇಕಾರಿಕೆ ಈಗ ಆಧುನಿಕ ಸ್ವರೂಪ ಪಡೆದುಕೊಂಡು ತನ್ನ ಕೌಶಲ್ಯ ಉಳಿಸಿಕೊಂಡಿದೆ.

ಇಲ್ಲಿನ ಜುಮ್ಮಾ ಮಸೀದಿ, ತ್ರಿಕೂಟೇಶ್ವರ ಹಾಗೂ ವೀರನಾರಾಯಣ ದೇವಾಲಯಗಳಿಗೆ ಒಂದೇ ಟ್ರಸ್ಟ್ ಕಮಿಟಿ ಹೊಂದಿದ ದೇಶದ ಮಾದರಿ ಕೋಮುಸೌಹಾರ್ದತೆಯ ಕೇಂದ್ರ ಎನಿಸಿಕೊಂಡಿದೆ.

ಭೀಷ್ಮ ಕೆರೆಯಲ್ಲಿ ಸ್ಥಾಪಿಸಿರುವ ನೂರಾ ಹದಿನಾರು ಅಡಿ ಎತ್ತರದ ಬೃಹದಾಕಾರದ ಬಸವೇಶ್ವರ ಪುತ್ಥಳಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.

ಗದುಗಿನ ಮಿರ್ಚಿ, ಬದನೆಕಾಯಿಗೂ ತನ್ನದೇ ಆದ ಸ್ವಾದಿಷ್ಟ ಸವಿರುಚಿಯಿದೆ.
ಹೀಗೆ ಹತ್ತು ಹಲವು ಆಯಾಮಗಳ ಬಹು ಸಂಸ್ಕೃತಿಯ ನಗರವನ್ನು ಹೆಮ್ಮೆಯಿಂದ ಸ್ಮರಿಸಿಕೊಳ್ಳುವೆ.‌