Monday, December 13, 2010

ನೆನಪಿಗೆ ಬಾರದ ನೆನಪಿರದ ಗಳಿಗೆ


ಅಂದು ಏಪ್ರಿಲ್ ೧೨ ರ ಸೋಮವಾರ ಕುಷ್ಟಗಿಯ ಪಟ್ಟಣಶೆಟ್ಟರ ಗುರುಸಿದ್ದಪ್ಪ ವಕೀಲರ ಮನೆಯಲಿ ಸಂಭ್ರಮದ ಆತಂಕ. ರಾಯಚೂರ ಜಿಲ್ಲೆಯ ಮೂಲೆಯಲ್ಲಿನ ದೊಡ್ಡ ಹಳ್ಳಿಯಂತಹ ತಾಲೂಕ ಕೇಂದ್ರ ಕುಷ್ಟಗಿ ಬರದ ನಾಡೆಂದನಿಸಿದರೂ, ಜಿಲ್ಲೆಯ ಊಟಿ ಅನಿಸಿಕೊಂಡಿದ್ದು ತಂಪಾದ ಹವಾಮಾನಕ್ಕಾಗಿ.
ಗುರುಸಿದ್ದಪ್ಪ ಪಟ್ಟಣಶೆಟ್ಟರು ಹಾಗೂ ಕಾಶಮ್ಮ ದಂಪತಿಗಳಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಎರಡನೇ ಮಗಳು ಸುಶೀಲ ಹೆರಿಗೆಗೆ ಬಂದಿದ್ದಳು. ಹೆಂಗರಳಿನ ವಕೀಲರಿಗೆ ಎಲ್ಲಿಲ್ಲದ ಆತಂಕ. ಎರಡನೇ ಮಗಳು ಸುಶೀಲಾಗೆ ಕೇವಲ ೧೭ ವರ್ಷ. ಚೊಚ್ಚಲು ಹೆರಿಗೆ ನೋವಿಗೆ ಸಣ್ಣ ವಿರಾಮ ಸಿಕ್ಕದ್ದು ಮಧ್ಯಾಹ್ನ ೩.೨೦ ಕ್ಕೆ. ಸೂಲಗಿತ್ತಿಯ ಪ್ರಯತ್ನದಿಂದ ಆದ ಸಹಜ ಹೆರಿಗೆಗೆ ಎಲ್ಲಿಲ್ಲದ ಸಂಭ್ರಮ.
ಹುಟ್ಟಿದ್ದು ಗಂಡು ಮಗು ಬೇರೆ ! ಮೇಲಿಂದ ಮೇಲೆ ನಾಲ್ಕು ಹೆಣ್ಣು ಹಡೆದ ವಕೀಲರಿಗೆ ತಮ್ಮ ಮಕ್ಕಳು ಗಂಡು ಹಡೆಯಲಿ ಎಂಬ ಹಿರಿದಾಸೆ ಬೇರೆ, ಅಂತೆಯೇ ಸುರಕ್ಷಿತ ಹೆರಿಗೆ, ದುಂಡಾದ ಮುದ್ದು ಗಂಡು ಮಗುವಿನೊಂದಿಗೆ.
ಫೋನು, ಮೊಬೈಲು ಇಲ್ಲದ ದಿನಗಳಲ್ಲಿ ಮಗಳ ಗಂಡನ ಮನೆ ಕಾರಟಗಿಗೆ ಪತ್ರ ರವಾನೆ
ಕಾರಟಗಿಯ ವ್ಯಾಪಾರಿ ಮನೆತನ ಯಾಪಲಪರವಿ ಬಸವರಾಜಪ್ಪ ಕೇವಲ ಇಪ್ಪತ್ತರ ಪ್ರಾಯದಲಿ ಗಂಡು ಮಗುವಿನ ತಂದೆಯಾದ ಸಂದೇಶ ರವಾನೆ. ಮೂರನೆ ಮಗಳು ನಿರ್ಮಲಾ ಹಾಗೂ ಬೇಬಿಯವರಿಗೆ ಎಲ್ಲಿಲ್ಲದ ಖುಷಿ. ದುಂಡಾದ ರಬ್ಬರ್ ಚಂಡಿನಂತಹ ಮಗುವಿನೊಂದಿಗೆ ಆಟ ಆಡಲು ಸಂತಸವೇ ಸಂತಸ.
ಶ್ರೀಮತಿ ಪಾರಮ್ಮ ಉರ್ಫ್ ಸುಶೀಲಮ್ಮ ಹಾಗೂ ಬಸವರಾಜಪ್ಪ ಯಾಪಲಪರವಿ ದಂಪತಿಗಳಿಗೆ ಅಷ್ಟೇ ಖುಷಿ !
ಹೈದ್ರಾಬಾದ್ ಕರ್ನಾಟಕದಲಿ ಪ್ರತಿಯೊಬ್ಬರು ಗಂಡು ಹುಟ್ಟಲೆಂದೇ ಬಯಸುವ ಕಾಲ. ಹೆಣ್ಣು ಹುಟ್ಟಿದರೆ ಹೇಗೆ ಎಂಬ ಆತಂಕ ಸಹಜವಾಗಿತ್ತು. ಆ ನಿರಾಸೆ ಎಲ್ಲರಿಂದ ಮಾಯವಾಗಿತ್ತು.
ಮಗು ಹುಟ್ಟಿದ ಹದಿನಾರು ದಿನಕ್ಕೆ ನಾಮಕರಣದ ಅದ್ದೂರಿ ಸಮಾರಂಭ. ಕುಷ್ಟಗಿ ಮನೆತನದ ದೇವರು ಎಡೆಯೂರ ಸಿದ್ದಲಿಂಗೇಶನ ಕಾರಟಗಿಯ ಮನೆ ದೇವರು ಹಳ್ಳದ ಬಸವೇಶ್ವರ ಎರಡರ ಸಮಾಗಮವೇ ಸಿದ್ಧಬಸವ ಎಂಬ ತಾರ್ಕಿಕ ನಾಮಕರಣ. ಇಲ್ಲಿ ವಕೀಲರ ಜಾಣತನ, ವ್ಯಾಪಾರಿಗಳ ಸಮೀಕರಣ ಇತ್ತಲ್ಲವೇ?

ಒಂದೂವರೆ ವರ್ಷದವರೆಗೆ ಬಾಲಕ ಸಿದ್ದಬಸವ ಬೆಳೆದದ್ದು ಕುಷ್ಟಗಿಯಲ್ಲಿಯೇ, ಯಾಕೆಂದರೆ ಒಂದೂವರೆ ವರ್ಷಕ್ಕೆ ಮತ್ತೆ ಸುಶೀಲಮ್ಮ ಎರಡನೇ ಹೆರಿಗೆಗೆ ಹಾಜರ್ ಅಂದಿನ ದಿನಗಳೇ ಹಾಗೆ ಹತ್ತಾರು ವರ್ಷ ಹಡೆಯುವ ಕಾಲ !
ಆದ್ದರಿಂದ ಅಜ್ಜ, ಅಮ್ಮ, ಕಕ್ಕಿಯರ ಕೈಯಲ್ಲಿಯೇ ಕಳೆದ ಸುಂದರ ಬಾಲ್ಯ. ಅದರಲ್ಲೂ ವಿಶೇಷವಾಗಿ ಸಣ್ಣ ಕಕ್ಕಿ, ಬೇಬಿ ಕಕ್ಕಿಯ ಅಕ್ಕರೆಯ ಮಡಿಲಲಿ ಬೆಳೆದ ಹರುಷ. ತಲೆ ತುಂಬಾ ಬೆಳೆದ ದಟ್ಟ ಕೂದಲು, ಅದರ ಮೇಲೊಂದು ಜುಟ್ಟು, ಆ ಜುಟ್ಟಿನ ತುಂಬಾ ಹೂಗಳ ಸುತ್ತು. ಮೈತುಂಬಾ ಧರಿಸಿದ ಆಭರಣಗಳ ದಾಖಲೆ ಇರಲಿ ಎಂಬ ಕಾರಣಕ್ಕೆ ಫೋಟೋ ತೆಗೆಸುವ ಆಸೆ. ಕುಷ್ಟಗಿಯಲ್ಲಿ ಸ್ಟುಡಿಯೋ ಇರಲಿಲ್ಲ. ಎಂಟು ತಿಂಗಳ ಮಗುವನ್ನು ಸಿಂಗರಿಸಿಕೊಂಡು ಇಲಕಲ್ಲಿಗೆ ಪಯಣ.
ಅಲ್ಲಿ ಸ್ಟುಡಿಯೋದಲ್ಲಿ ಕ್ಲಿಕ್ಕಿಸಿದ ಕ್ಯಾಮರಾಕ್ಕೆ ನೀಡಿದ ಮುಗ್ಧ ಫೋಟೋ ಇತಿಹಾಸದಲ್ಲಿ ದಾಖಲಾದ ಮಗುವಿನ ಮೊದಲ ಫೋಟೋ ಎಂಬ ಸಂಭ್ರಮ ಬೇರೆ.

ಮೂರು ವರ್ಷದಲ್ಲಿ ಹುಟ್ಟಿದ ನಂತರ ಮಕ್ಕಳು ಯಾಕೋ ದಕ್ಕಲಿಲ್ಲ. ಎಲ್ಲರಿಗೆ ಆತಂಕ, ಮಗುವನ್ನು ಹೊಸಿಲು ಮೇಲೆ ಕೂರಿಸಿ, ಬೆನ್ನಿಗೆ ಸುಡಿಸಿದರೆ, ಅಚ್ಚೆ ಹಾಕಿಸಿದರೆ ಬೆನ್ನ ಮೇಲೆ ಹುಟ್ಟುವ ಮಕ್ಕಳು ಸಾಯುವದಿಲ್ಲ ಎಂಬ ನಂಬಿಕೆ.
ಹುಟ್ಟಿದ ಮೂರೇ ವರ್ಷಕ್ಕೆ ಬೆನ್ನಿಗೆ ಬರೆ ಹಾಕಿಸಿಕೊಳ್ಳುವ ಶಿಕ್ಷೆ. ಒಡಹುಟ್ಟಿದವರು ಉಳಿಯಲಿ ಎಂಬ ಕಾರಣಕ್ಕೆ ಬಾಲ್ಯದಲ್ಲಿಯೇ ಹಿರಿಯ ಮಗನಿಗೆ ಶಿಕ್ಷೆ.
ಬೆನ್ನಿನ ಮಚ್ಚೆ ನಿಜ ಆಯ್ತು ನಂತರ ಹುಟ್ಟಿದ ಮಗಳು ನಾಗರತ್ನ ಆರಾಮಾಗಿ ಉಳಿದಳು. ಮುಂದೆ ನಾಲ್ಕುಮಕ್ಕಳು ಸತ್ತರೂ ಅಂತಿಮವಾಗಿ ಉಳಿದದ್ದು ನಾಲ್ಕು ಜನ. ಸಿದ್ಧಬಸವನಿಗೆ ಬಾಲ್ಯದಲ್ಲಿ ಹಾಕಿಸಿಕೊಂಡ ಬರೆ ನೆನಪಿನಲ್ಲಿ ಉಳಿದಿಲ್ಲವಾದರೂ ಎಲ್ಲೋ ಒಂದು ಅಭಿಮಾನವಿದೆ. ಹೀಗೇ ನಾಲ್ಕು ವರ್ಷದವರಗೆ ನೆನಪಾಗದ ಬಾಲ್ಯಕ್ಕೆ , ನೆನಪಾಗದ ಬಾಲ್ಯವನ್ನು ಕೆದಕುವ ಕುತೂಹಲ ಬೇರೆ. ನೆನಪಾಗದ, ನೆನಪಿರದ ಘಟನೆಗಳ ಬೇರುಗಳ ಹಿಡಿದಲ್ಲವೆ ಮುಂದೆ ಇಷ್ಟುದ್ದ ಬೆಳೆದದ್ದು . . .

No comments:

Post a Comment