Wednesday, November 3, 2010

ಲಿವಿಂಗ್ ಟುಗೆದರ್ ಕೇವಲ ಇಂದಿನ ಕತೆಯಲ್ಲ

ಮದುವೆಯಾಗದ ದಾಂಪತ್ಯ living together ಬಗ್ಗೆ ನಾವು ಅಚ್ಚರಿಪಡುತ್ತೇವೆ. ಈ ಪರಿಕಲ್ಪನೆಯನ್ನು ನಾನು ಬಾಲ್ಯದಲ್ಲಿಯೇ ನೋಡಿದ್ದೇನೆ.
ಮದುವೆಯಾದ ಸ್ತ್ರೀ - ಪುರುಷರೊಂದಿಗೆ ಸಂಬಂಧ ಹೊಂದಿದರೆ ಅನೈತಿಕವಾಗುತ್ತದೆ. ಈ ರೀತಿ extra affair ಗಳು ಅನೇಕ ಅವಘಡಗಳಿಗೆ ಕಾರಣವಾಗುತ್ತವೆ.
ಮದುವೆಯಾದ ಮೇಲೂ ಹೊಂದುವ ಇತರ ಸಂಬಂಧಗಳಿಗೆ ಭಿನ್ನ ಎನಿಸುವ living together ನ ಇನ್ನೊಂದು ಮುಖವನ್ನು ನಮ್ಮ ತಾತ ಹೊಂದಿದ್ದ ಸಂಬಂಧಗಳಲ್ಲಿ ಕಂಡಿದ್ದೇನೆ.
ಮದುವೆಯಾದ ನಮ್ಮ ತಾತನಿಗೆ ಅತ್ಯಂತ ಗೌರವಾನ್ವಿತ ಮಹಿಳೆಯೊಂದಿಗೆ ಸಂಬಂಧವಿತ್ತು. ಅದನ್ನು ಯಾರೂ ಅನೈತಿಕ, ಹಾದರ ಎಂದು ಕಿಳಾಗಿ ಕಾಣುತ್ತಿರಲಿಲ್ಲ.
ಅಂದಿನ ಕಾಲದಲ್ಲಿನ ಶ್ರೀಮಂತರು ಪ್ರತಿಷ್ಠೆ, ಸಾಮಿಪ್ಯ ರಸಿಕತನದಿಂದ ಪರಸ್ತ್ರೀ ಸಂಬಂಧ ಹೊಂದಿರುತ್ತಿದ್ದರು. ಈ ರೀತಿ ಶ್ರೀಮಂತರೊಂದಿಗೆ ಸಂಬಂಧ ಹೊಂದಿರುವ ಮಹಿಳೆಯರಿಗೆ ಪಾತರದವರು ಅಥವಾ ಸಾನಿಗಳು ಎಂದು ಕರೆಯುತ್ತಿದ್ದರು.

ನಮ್ಮ ಅಜ್ಜನೊಂದಿಗೆ ಸಂಬಂಧ ಹೊಂದಿದ ವೀರಮ್ಮ ಅಥವಾ ವೀರಾಸಾನಿ ಅಮ್ಮ ಅತ್ಯಂತ ಸಹೃದಯ ಮಹಿಳೆ, ಬೇರೆ ಯಾರೊಂದಿಗೆ ಮದುವೆಯಾಗದೇ ತನ್ನ ಇಡೀ ಬದುಕನ್ನು ತಾತನೊಂದಿಗೆ ಕಳೆದಳು.
ಆಕೆಯ ಮಕ್ಕಳು ತಾತನ ಹೆಸರನ್ನೇ ಹೇಳುತ್ತಿದ್ದರು. ಅವರನ್ನು ಸಮಾಜವೂ ಅಷ್ಟೇ ಗೌರವದಿಂದ ಕಾಣುತ್ತಿತ್ತು ಎಂಬುದು ಗಮನೀಯ ಸಂಗತಿ.
ನಮ್ಮ ಕುಟುಂಬದ ಎಲ್ಲ ಸಭೆ-ಸಮಾರಂಭಗಳಲ್ಲಿ ಮುಂಚೂಣಿಯಲ್ಲಿ ಅಮ್ಮ ವೀರಾಸಾನಿ ಇರುತ್ತಿದ್ದಳು. ಅಜ್ಜಿಗೆ ಈ ಸಂಬಂಧ ಗೊತ್ತಿದ್ದರೂ ಸ್ನೇಹಿತರಂತೆ ಅಕ್ಕ ಎಂದು ಕರೆಯುತ್ತಾ ಇದ್ದುದು ನನ್ನ ಬಾಲ್ಯದ ಗ್ರಹಿಕೆಗೆ ವಿಪರೀತವೆನಿಸುತ್ತಿತ್ತು.

ಎಷ್ಟೋ ಸಲ ತಾತನೊಂದಿಗೆ ನಾನು ವೀರಾಸಾನಿ ಅಮ್ಮನ ಮನೆಗೆ ಹೋಗಿ ಬರುತ್ತಿದ್ದೆ. ನನಗೆ ಈ ಸಂಬಂಧಗಳು ಗೋಜಲುಅರ್ಥವಾಗುತ್ತಿದ್ದಿಲ್ಲವಾದರೂ ವಯಸ್ಸಿಗೆ ಮೀರಿದ ಪ್ರಶ್ನೆ ಕೇಳಿ ತಿಳಿಯಲು ಪ್ರಯತ್ನಿಸುತ್ತಿದ್ದೆ. ಈಗ ಅಮ್ಮನ ಮಕ್ಕಳು, ಮೊಮ್ಮಕ್ಕಳು ಶ್ರೀಮಂತರೂ ಆಗಿ ಉತ್ತಮ ಸ್ಥಾನ ಪಡೆದುಕೊಂಡಿದ್ದಾರೆ.

ಬದುಕುವ ಶೈಲಿಯಲ್ಲಿ ಭಿನ್ನತೆಯಿದೆ. ಸಮಾಜವು ಅವರನ್ನು ಗೌರವದಿಂದ ಕಾಣುತ್ತದೆ. ನಾವು ಅದೇ ಪ್ರೀತಿ- ಸಂಬಂಧವನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದೇನೆ.

ಮದುವೆ-ಸಂಸಾರ-ಕುಟುಂಬ ನಿರ್ವಹಣೆಯ ಜಂಜಾಟದಲ್ಲಿ ಹೆಚ್ಚಿನ ಸುಖವನ್ನು ಕಾಣದ ಶ್ರೀಮಂತರು ಈ ರೀತಿಯ ಸಂಬಂಧ ಹೊಂದಿರುತ್ತಿದ್ದರು ಎಂದು ಸಮಾಜಶಾಸ್ತ್ರಜ್ಞರು ವಿಶ್ಲೇಶಿಸುತ್ತಾರೆ.
ಆರಂಭದ ಯೌವನದಲ್ಲಿ ಈ ರೀತಿಯ ಸಂಬಂಧಗಳು ಲೈಂಗಿಕ. ಕಾಮನೆಗಳ ಈಡೇರಿಕೆಗಾಗಿ ಮೀಸಲಾಗಿ ಬರುಬರುತ್ತಾ ವಯಸ್ಸಾದಂತೆಲ್ಲ ಪ್ರೀತಿ-ಅನುರಾಗವಾಗಿ ಮಾರ್ಪಟ್ಟು ಗಟ್ಟಿ ಬಂಧನವಾಗಿ ಉಳಿಯುತ್ತಿತ್ತು.
ವಯಸ್ಸಾದ ತಾತ ವೀರಾಸಾನಿಯ ಮನೆಗೆ ಹೋಗಲು ಲೈಂಗಿಕ ಕಾರಣವಿರಲು ಸಾಧ್ಯವಿಲ್ಲ. ಆದರೆ ಮಾನವ ಸಂಬಂಧಗಳು ಆಳವಾಗಿ ಬೆಳೆದಾಗ ವಿಚಾರ ಸಾಂಗತ್ಯವಾಗಿ ಉಳಿಯುತ್ತವೆ.

1972 ರಲ್ಲಿ ಕುಟುಂಬ ವಿಭಜನೆಯಾಗಿ ತಾತ ಮಾನಸಿಕವಾಗಿ ಬೇಸರಗೊಂಡಾಗ ವೀರಾಸಾನಿಯ ಮಕ್ಕಳ ಮೇಲೆ ಅದೇ ಮಮಕಾರವನ್ನು ತೋರಿದ್ದು, ತನ್ನ ಭಾವನೆಗಳನ್ನು ಹಂಚಿಕೊಂಡ ರೀತಿ ಈಗೀಗ ಅರ್ಥವಾಗುತ್ತಿದೆ.

ಗಂಡು-ಹೆಣ್ಣಿನ ಸಂಬಂಧಗಳನ್ನು ಲೈಂಗಿಕ ದೃಷ್ಟಿಕೋನದಿಂದ ನೋಡದೇ ಭಿನ್ನವಾಗಿ ಆಲೋಚಿಸುವ ಅಗತ್ಯವೂ ಇದೆ ಎಂಬ ಆಲೋಚನೆಯ ಬೀಜ ನೆಟ್ಟ ತಾತ-ಅಮ್ಮ ಈಗಲೂ ಆದರ್ಶಪ್ರಾಯರು.
ಈಗಿನ ಕಾಲಘಟ್ಟದಲ್ಲಿ ಈ ರೀತಿಯ ಗೌರವಯುತ ಸಂಬಂಧಗಳು ಕಳಚಿ ಹೋಗಿ. ಅಲ್ಲಿಯೂ ಏನು ಒಂದು agenda ಇದೆ ಅನಿಸುತ್ತದೆ.

ಯಾರು, ಯಾರೊಂದಿಗಾದರೂ'ಇದ್ದಾರೆ' ಎಂದರೆ ಏನೋ ಲಾಭಕ್ಕಾಗಿ ಎಂದು ಲೆಕ್ಕ ಹಾಕುವ ಸ್ಥಿತಿ ನಿರ್ಮಾಣವಾಗಿದೆ.

ಆಧುನಿಕ ದಿನಗಳಲ್ಲಿ, ಐರೋಪ್ಯ ಸಮದಾಯಗಳಲ್ಲಿ ಜನರ ಟೀಕೆ ಟಿಪ್ಪಣಿಗಳ್ನನ್ನು ಲೆಕ್ಕಿಸದೇ ಬದುಕುವುದನ್ನು ನಾನು ಇಂಗ್ಲೆಂಡ್ ಪ್ರವಾಸದಲ್ಲಿ ಕಂಡಾಗ ನನ್ನ ಬಾಲ್ಯದ ದಿನಗಳು ನೆನಪಾದವು.

ಒಮ್ಮೆ ಸಮಾಜದ ಹಂಗನ್ನು ತೊರೆದು ನಾವು ಪರಿಶುದ್ಧರಾಗಿ ಆಲೋಚಿಸಿದರೆ ಬೇರೆಯವರ ಟೀಕೆಗೆ ಅರ್ಥವಿರುವುದಿಲ್ಲ ಎಂಬುದನ್ನು ಈಗ ಐರೋಪ್ಯರು ಮನಗಂಡಿದ್ದಾರೆ.

ಆದರೆ 50 ವರ್ಷಗಳ ಹಿಂದೇಯೇ ಇಂತಹ ಸತ್ಯವನ್ನು ಏನೂ ಓದದ, ವ್ಯವಹಾರಿಕ ಬದುಕಿನಲ್ಲಿದ್ದ ನಮ್ಮ ತಾತ ಬಾಳಿದ್ದಾನಲ್ಲ ಎಂದು ನನಗೆ ಹೆಮ್ಮೆ ಎನಿಸಿತು.

ಇಂದು ಐರೋಪ್ಯರು ಪ್ರಗತಿ ಎಂದು ವಾಖ್ಯಾನಿಸುವುದನ್ನು ನಮ್ಮ ಹಿರಿಯರು ಹಿಂದೇಯೇ ಮಾಡಿ-ಆಡಿ ತೋರಿಸಿದ್ದಾರೆ.
ಎಲ್ಲ ಶಾಸ್ತ್ರಗಳಲ್ಲೂ ನಾವು ಮುಂದಿದ್ದೇವೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ!

ಡಾ|| ಸಿದ್ಧಲಿಂಗ ಪಟ್ಟಣಶೆಟ್ಟಿ ಸಾಹಿತ್ಯ ಪುರಸ್ಕಾರ ೨೦೧೦: ಕೆ. ಶರೀಫಾ, ಮಂಜುನಾಥ ಲತಾ ಇವರಿಗೆ



ಗದುಗಿನ ಸಾಹಿತ್ಯ ಪ್ರಕಾಶನ ಸಂಸ್ಥೆ ಸಾಂಗತ್ಯ ಪ್ರಕಾಶನ ಖ್ಯಾತ ಕವಿ, ಅನುವಾದಕ, ನಾಟಕಕಾರ, ವಿಮರ್ಷಕ ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ ಅವರ ಸಾಹಿತ್ಯ ಪುರಸ್ಕಾರವನ್ನು ೨೦೧೦ ರಿಂದ ನೀಡುವುದಾಗಿ ತಿರ್ಮಾನಿಸಿತ್ತು. ಅದಕ್ಕಾಗಿ ೨೦೦೫ ರಿಂದ ೨೦೦೯ ರವರೆಗೆ ಪ್ರಕಟಗೊಂಡ ಕವನ ಸಂಕಲನಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗೆ ಉತ್ತಮ ಪ್ರತಿಕ್ರಿಯೆ ದೊರಕಿ ನೂರಾ ಇಪ್ಪತ್ತೈದು ಕವಿಗಳು ಹಾಗೂ ಪ್ರಕಾಶಕರು ಸಂಕಲನಗಳನ್ನು ಸಾದರ ಪಡಿಸಿದ್ದರು. ಖ್ಯಾತ ಕವಿಗಳಾದ ಮೈಸೂರಿನ ಜಿ.ಕೆ.ರವೀಂದ್ರಕುಮಾರ, ಹಾವೇರಿಯ ಸತೀಷ ಕುಲಕರ್ಣಿ ಹಾಗೂ ಬೆಂಗಳೂರಿನ ಎಚ್. ಎಲ್. ಪುಷ್ಪಾ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿ ಅಂತಿಮವಾಗಿ ಹರಿಹರದ ಖ್ಯಾತ ಬಂಡಾಯ ಕವಿಯತ್ರಿ ಕೆ.ಶರೀಫಾ ಅವರ ಬುರ್ಖಾ ಪ್ಯಾರಡೈಸ್ ಮೈಸೂರಿನ ಸೃಜನಶೀಲ ಕಲಾವಿದ, ಕವಿ ಮಂಜುನಾಥ ಲತಾ ಅವರ ಆಹಾ ಅನಿಮಿಷ ಕಾಲ ಕಾವ್ಯ ಸಂಕಲನಗಳನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿತು. ಪ್ರಶಸ್ತಿಗೆ ಹತ್ತು ಸಾವಿರ ನಗದು ಪುರಸ್ಕಾರ ಹಾಗೂ ಸ್ಮರಣಿಕೆಗಳನ್ನು ನೀಡಲಾಗುವುದು. ಪ್ರಥಮ ವರ್ಷದ ಪುರಸ್ಕಾರವನ್ನು ಇಬ್ಬರೂ ಹಂಚಿಕೊಂಡಿದ್ದು ಪುರಸ್ಕೃತರಿಗೆ ತಲಾ ಐದು ಸಾವಿರ ನಗದು ಹಾಗೂ ಸ್ಮರಣೆಗಳನ್ನು ನೀಡಿ ಗೌರವಿಸಲಾಗುವುದೆಂದು ಸಾಂಗತ್ಯ ಪ್ರಕಾಶನದ ಸಂಚಾಲಕರಾದ ಡಾ ಜಿ. ಬಿ. ಪಾಟೀಲ ಹಾಗೂ ಸಿದ್ಧು ಯಾಪಲಪರವಿ ತಿಳಿಸಿದ್ದಾರೆ

ಕಾಲುವೆಯ ನೀರಾಟ - ಸಿದ್ದಣ್ಣನ ಸ್ನೇಹ

ಬಾಲ್ಯದಲ್ಲಿ ಧೈರ್ಯ ಕಲಿಸಿದ ಸೋದರ ಹಣವಾಳ ಸಿದ್ದಲಿಂಗಣ್ಣ ಮತ್ತೆ, ಮತ್ತೆ ನೆನಪಾಗುತ್ತಾನೆ.
ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣ ಮುಗಿದರೂ ನನ್ನ + ಅವನ ಸ್ನೇಹ ನಿರಂತರವಾಗಿತ್ತು.

ನನಗಿಂತ 10 ವರ್ಷ ಹಿರಿಯನಾದ ಸಿದ್ದಣ್ಣ, ಸಮಕಾಲೀನ ಸೋದರ ಶರಣು, ಎರಡು ವರ್ಷ ದೊಡ್ಡವನಿದ್ದ ಅರಳಿ ಅಪ್ಪಣ್ಣ ತುಂಬಾ ಆಪ್ತರಾಗಿದ್ದೆವು. ಸ್ನೇಹಕ್ಕೆ ವಯಸ್ಸಿನ, ಅಂತಸ್ತಿನ ಅಂತರ ಅಡ್ಡಿಯಾಗದು ಎಂಬುದನ್ನು ನನ್ನ ಬಾಲ್ಯ ನೆನಪಿಸುತ್ತದೆ.
ಬೆನ್ನಿಗೆ ಈಜು ಗುಂಬಳಕಾಯಿ ಕಟ್ಟಿ ಜವಳಿಯವರ, ಅರಳಿಯವರ ಭಾವಿಯಲ್ಲಿ ಈಜು ಕಲಿಸಿದ. ನಂತರ ದೊಡ್ಡ ಕಾಲುವೆಯಲ್ಲಿ ತೇಲಾಡುವುದನ್ನು ಕಲಿಸಿದ ಹೆಗ್ಗಳಿಕೆ ಸಿದ್ದಣ್ಣನಿಗೆ ಸಲ್ಲುತ್ತದೆ.
ಶಾಲಾ ಅಧ್ಯಯನದ ನಿರಾಸಕ್ತಿಯನ್ನು ಸಿದ್ದಣ್ಣನ ಒಡನಾಟ ಮರೆಸಿತ್ತು. ಗದುಗಿನಲ್ಲಿ ಓದುತ್ತಿದ್ದ ದೊಡ್ಡಪ್ಪನ ಮಗ ಶರಣು ಶಾಲೆಯಲ್ಲಿ rank student. ದುಂಡಾಗಿ ಅಕ್ಷರ ಬರೆಯುತ್ತಾ ಅಭ್ಯಾಸದಲ್ಲಿ ಜಾಣನಿದ್ದರೂ ನಮ್ಮ ಸ್ನೇಹಕ್ಕೆ ಮಾರುಹೋಗಿದ್ದ.
ಶರಣುನ ಆಕರ್ಷಣೆಯಿಂದಾಗ ಗದುಗಿಗೆ ಹೋಗುತ್ತಿದ್ದೆ. 1978 ರಿಂದ ಗದುಗಿನ ತೋಂಟದಾರ್ಯ ಅಜ್ಜಾ ಅವರ ಸಂಪರ್ಕ ಹೆಚ್ಚಾದಂತೆಲ್ಲ ಗದುಗು-ಶರಣುನ ನಂಟು ಹೆಚ್ಚಾಯಿತು. ಶರಣು-ಅಪ್ಪಣ್ಣ-ಸಿದ್ದಣ್ಣ-ನಾನು ಸದಾ ಚರ್ಚಿಸುತ್ತಾ ಹರಟೆ ಹೊಡೆಯುತ್ತಿದ್ದೆವು. ಸಿನೆಮಾ ಚಟ ಎಲ್ಲರಲ್ಲೂ ಇದ್ದ ಸಮಾನ ಹವ್ಯಾಸ.
ಹಣವಾಳ ಸಿದ್ದಣ್ಣ ಆರ್ಥಿಕವಾಗಿ ಕಷ್ಟದಲ್ಲಿದ್ದರೂ, ಸದಾ ಖುಷಿಯಲ್ಲಿರುತ್ತಿದ್ದ ಅವನ ಜೀವನೋತ್ಸಾಹ ಮಾದರಿ ಎನಿಸುತ್ತಿತ್ತು. ತುಂಡು ರೊಟ್ಟಿ-ಚಟ್ನಿ ತಿಂದರೂ ಸಂತಸದಿಂದ ಇರಬಹುದು ಎಂಬುದನ್ನು ಅವನ ಹಾಸ್ಯ ಪ್ರಜ್ಞೆ ಸಾಬೀತುಪಡಿಸಿತ್ತು.

ನಮ್ಮೂರಲ್ಲಿ ಸಣ್ಣವರಿದ್ದಾಗ ಹೋಟೆಲ್ಲಿಗೆ ಹೋಗುವುದನ್ನು ದುಶ್ಚಟ ಎಂದು ಪರಿಗಣಿಸುತ್ತಿದ್ದರು. ಹಿರಿಯರ ಕಣ್ಣು ತಪ್ಪಿಸಿ ಹೋಟೆಲ್ಲಿಗೆ ಹೋದರೆ ಅಂಗಡಿ ಮಾಲಕರೇ ಎಚ್ಚರಿಸುತ್ತಿದ್ದರು. ಧಣಿ ನಿಮ್ಮಂತವರು ಚಾದ ಅಂಗಡಿಗೆ ಬರಬಾರದಪ ಇಲ್ಲಿ ಸುಮಾರು ಜನ ಬರ್ತಾರ ಅಂತ ತಿಳಿ ಹೇಳುತ್ತಿದ್ದರು.
ನಮಗೆ ಕಾರಟಗಿ ಹೋಟೆಲ್ ಗಳಿಗೆ ನುಗ್ಗಿ ಮಂಡಾಳು-ಡಾಣಿ, ಮೆಣಸಿನಕಾಯಿ ಪುರಿ, ಚಪಾತಿ -ಚಟ್ನಿ ತಿನ್ನುವ ಆಸೆಯಾಗುತ್ತಿತ್ತು. ಊರ ಹೊರಗಿನ ಗುಡಿಸಲು ಚಹಾ ಅಂಗಡಿಗೆ ಸಿದ್ದಣ್ಣ ಕರೆದುಕೊಂಡು ಹೋಗಿ ನಮ್ಮ ಆಸೆ ತೀರಿಸುತ್ತಿದ್ದ. ಅಂಗಡಿಯ ಹಿಂದಿನ ಬಾಗಿಲಿನಿಂದ ಕರೆದುಕೊಂಡು ಹೋಗುತ್ತಿದ್ದ.
ನಮ್ಮದು ಲಿಂಗಾಯತ ಮಡಿವಂತ ಪರಿವಾರ ತತ್ತಿ ತಿನ್ನಲು ಅವಕಾಶವಿರುತ್ತಿರಲಿಲ್ಲ. ಆದರೆ ನನಗೆ ತಿನ್ನಬೇಕೆನ್ನಿಸಿತು.
ಈ ರೀತಿ ಮಾಂಸಹಾರ ತಿನ್ನುವುದನ್ನು ಕಪ್ಪು-ಕಡಿ ತಿನ್ನುವುದು ಎಂದು ಟೀಕಿಸುತ್ತಿದ್ದರು.

ಹೈಸ್ಕೂಲಿನಲ್ಲಿದ್ದಾಗ ಸಿದ್ದಣ್ಣ ಎರಡು ರೀತಿಯ ತತ್ತಿ ತಿನ್ನಿಸಿದ. ಹಸಿಹಾಲಿನಲ್ಲಿ ತತ್ತಿ . ನಂತರ ಕುದಿಸಿದ ತತ್ತಿಯನ್ನು ತಿನ್ನಿಸಿ ನಮ್ಮ ಜನ್ಮ ಸಾರ್ಥಕ ಮಾಡಿದ.
ತತ್ತಿ ತಿಂದರೆ ಹೊರಗಡೆ ನಿಲ್ಲಿಸಿ ನೀರು ಸುರುವಿ ಮಡಿ ಮಾಡಿ ಮನೆಯಲ್ಲಿ ಕರೆದುಕೊಳ್ಳುವ ಸಂಪ್ರದಾಯವಿತ್ತು. ಸ್ನಾನ ಮಾಡಿ ಮನೆಯಲ್ಲಿ ಹೋಗದಿದ್ದರೆ ಮನೆಯ ಜಂತಿಯಿಂದ ಚೇಳು ಬೀಳುತ್ತವೆ. ಮೈಲಿಗೆ ಆಗಿದೆ ಎಂದು ಮನೆ ಮೈಲಿಗೆಗೆ ಕಾರಣ ರಾದವರನ್ನು ಪತ್ತೆ ಹಚ್ಚುವಾಗ ನನಗೆ ಅಪರಾಧಿ ಭಾವನೆ ಕಾಡುತ್ತಿತ್ತು.

ಹೀಗಾಗಿ ಮುಂದೆ ಕದ್ದು - ಮುಚ್ಚಿ ತತ್ತಿ ತಿಂದಾಗಲೆಲ್ಲ ಕಾಲುವೆಯಲ್ಲಿ ಬೆತ್ತಲೆ ಸ್ನಾನ ಮಾಡಿ ಮಡಿಯಾಗಿ ಬಿಸಿಲಲ್ಲಿ ಮೈ ಒಣಗಿಸಿಕೊಂಡು ಮನೆಗೆ ಬರುತ್ತಿದ್ದೆ. ಇದಕ್ಕೆ ಅಲ್ಲವೇ ಭಕ್ತಿ- ಭಯ ಅನ್ನುವುದು.
ಪುರಿ,ಚಪಾತಿ ಆಸೆಗಾಗಿ ಹೋಟೆಲ್ ಗೆ ಅಲೆದು ಹೊಸ ಚಟ ರೂಪಿಸಿಕೊಂಡೆ. ಕಾಲುವೆ ದಾಟುವಾಗ ಹೆದರಿಕೆಯಾದರೆ ಸಿದ್ದಣ್ಣ ನನ್ನನ್ನು ಹೆಗಲ ಮೇಲೆ ಕೂಡಿಸಿಕೊಂಡು ದಾಟುತಿದ್ದ.
ಪ್ರತಿ ವರ್ಷ ಗದುಗಿನ ಜಾತ್ರೆಯಲ್ಲಿ ನಾನು, ಸಿದ್ದಣ್ಣ, ಶರಣು ಸಿನೆಮಾ ನೋಡುವ ಕಾರ್ಯಕ್ರಮ ಹಾಕಿಕೊಂಡು ಒಂದು ದಿನಕ್ಕೆ 3-4 ಸಿನೆಮಾ ನೋಡುತ್ತಿದ್ದೆವು. ಮುಂದೆ ಕೆಲ ವರ್ಷ ದುಡಿಯಲು ಆಂದ್ರ ಪ್ರದೇಶಕ್ಕೆ ಹೋದ. ರಜೆಗೆ ಬಂದಾಗಲೆಲ್ಲ ಒಟ್ಟಿಗೆ ಸೇರುತ್ತಿದ್ದೆವು.
ಕುಳ್ಳ ವ್ಯಕ್ತಿತ್ವದ ಹಸನ್ಮುಖಿ ಸಿದ್ದಣ್ಣ ಈಗ ಕೇವಲ ನೆನಪಾಗಿದ್ದಾನೆ. ಕೆಟ್ಟ ಕಾಯಿಲೆಗೆ ಸಿದ್ದಣ್ಣ ಬಲಿಯಾಗಿ ಏಳೆಂಟು ವರ್ಷಗಳ ಹಿಂದೆ ತೀರಿಕೊಂಡಾಗ ಎಲ್ಲಿಲ್ಲದ ವ್ಯಥೆ. ತೀವ್ರ ಅನಾರೋಗ್ಯದಲ್ಲಿದ್ದಾಗ ಗದುಗಿಗೆ ಚಿಕಿತ್ಸೆಗಾಗಿ ಬಂದಿದ್ದ. ಆಗ ಸ್ವಲ್ಪ ನೆರವು ನೀಡಿದ್ದೆ. 3 ಹೆಣ್ಣು ಮಕ್ಕಳು, ನಮ್ಮಂತಹ ಹತ್ತಾರು ಸ್ನೇಹಿತರನ್ನು ಅಕಾಲಿವಾಗಿ ಅಗಲಿದಾಗ ಯಾರಿಗೆ ತಾನೇ ವ್ಯಥೆಯಾಗುವುದಿಲ್ಲ.
ಇತ್ತೀಚಿಗೆ ಊರಿಗೆ ಹೋದಾಗ ಆತನ ಮಕ್ಕಳನ್ನು ಕಂಡಾಗ ಸಿದ್ದಣ್ಣನ ಬಾಲ್ಯದ ದಿನಗಳು ನೆನಪಾದವು.
ತಾನು ಅನೇಕ ಕೆಟ್ಟ ಚಟಗಳಿಗೆ ಬಲಿಯಾದರೂ, ನಮ್ಮನೆಂದು ಆ ಕೂಪಕ್ಕೆ ತಳ್ಳಲಿಲ್ಲ. ಅದೇ ಅವನ ದೊಡ್ಡತನ. ತನ್ನ ಅನಾಹುತಕಾರಿ ಕಾಯಿಲೆಯಲ್ಲೂ ಆತ ಜೀವನೋತ್ಸಾಹ ಕಳೆದುಕೊಂಡಿರಲಿಲ್ಲ.
ಆತನ ಕೊನೆಯ ದಿನಗಳನ್ನು ನಮ್ಮೊಂದಿಗೆ ಕಳೆಯಲು ಬಯಸಿದ. ನಾನು, ಅಪ್ಪಣ್ಣ, ಶರಣು ಸಾಧ್ಯವಾದಷ್ಟು ನೆರವು ನೀಡಿದೆವು ಎಂಬುದು ಕೇವಲ ನೆಪ. ಕೋಟಿಗಟ್ಟಲೆ ಹಣ ಸುರಿದರೂ ಕಳೆದು ಹೋದ ಇತಿಹಾಸವನ್ನು ಮರಳಿ ಕೊಳ್ಳವುದು ಅಸಾಧ್ಯ.
ಹಾಗೆ ಬಾಲ್ಯದ ನೆನಪುಗಳನ್ನು ದಿವ್ಯವಾಗಿಸಿ ಸಿದ್ದಣ್ಣ ನಮ್ಮೂರ ಮಧ್ಯೆ ಹರಿಯುವ ಕಾಲುವೆ ನೋಡಿದಾಗ, ಹಳೆ ಸಿನೆಮಾಗಳನ್ನು ನೋಡಿದಾಗ ನೆನಪಾಗುತ್ತಾನೆ.
ಬಾಲ್ಯದ ಕಾಲು ಭಾಗವನ್ನು ನಾನು ಆತನೊಂದಿಗೆ ಕಳೆದೆ. ಅಷ್ಟೇನು ವಿದ್ಯೆ ಕಲಿಯದಿದ್ದರೂ ಅವನ ಲೋಕಾನುಭವ ಚನ್ನಾಗಿತ್ತು. ಬಾಲ್ಯದ ಸ್ನೇಹದಷ್ಟು ಭಾವನಾತ್ಮಕತೆ ಈಗಿನ ಸ್ನೇಹದಲ್ಲಿ ಇರುವುದಿಲ್ಲ. ಎಲ್ಲರೂ ಅವರವರ ಪಾಡಿಗೆ busy ಅಗಿ ಬಿಡುತ್ತೇವೆ. ಅಪ್ಪಣ್ಣ ,ಶರಣು ಈಗ ಕೇವಲ mobile ಗೆಳೆಯರಿದ್ದಾರೆ ಅಷ್ಟೇ! ಈಗ ನಮಗೆ ಸಮಯವೂ ಇಲ್ಲ, ಭಾವನೆಗಳು ಇಲ್ಲ ಎನ್ನುವಂತಾಗಿದೆ.

ದೇವರ ಗುಡಿಯಲಿ, ಮರದ ನೆರಳಲಿ ನೀಡಿದ ಚಿರಕಾಣಿಕೆ

ನಿನ್ನಲ್ಲಿ ಇಷ್ಟೊಂದು ಸೌಂದರ್ಯ ಅಡಗಿದೆ ಎಂದು ಅಂದುಕೊಂಡಿರಲಿಲ್ಲ. ಹೆಣ್ಣಿಗೆ ಮದುವೆ ಎಂತಹ ಬದಲಾವಣೆಯನ್ನು ತರುತ್ತದೆ ಎಂದು ಆಗಲೇ ಅರಿತುಕೊಂಡೆ. ಎಳೆಯ ಹುಡುಗಿಯ ಹಾಗೆ ಬಟ್ಟೆ ಧರಿಸಿ ಶಾಲೆಯಲ್ಲಿ ಓಡಾಡುತ್ತಿದ್ದ ನಿನ್ನ ಹುಡುಗಾಟ ಸೀರೆಯಲ್ಲಿ ಮಾಯವಾಗಿ ಹೋಗಿತ್ತು.
ನಿನ್ನ ಮುಂದೆ ನಾನು ಬಚ್ಚಾನ ಹಾಗೆ ಕಾಣಿಸಿದೆ. ನೀನಂದು ಮಾತು ಕೊಟ್ಟಂತೆ ಊರ ಹೊರಗಿನ ಭವ್ಯ ಆಲದ ಮರದ ಕೆಳಗೆ ಕುಳಿತು ಮಾತಿಗಿಳಿದದ್ದು, ಅಂದಿನ ನಿನ್ನ ಕಣ್ಣ ಹೊಳಪು. ನಳನಳಿಸಿದ ಆಭರಣಗಳು, ಕೊರಳಿಗೆ ಅಂಟಿಕೊಂಡಿದ್ದ ತಾಳಿ, ಹಸಿರು ಗಾಜಿನ ಬಳೆಗಳು, ಅರಿಷಿಣದ ಹೊಳಪು, ಹೊಳೆಯುವ ಮೈಕಾಂತಿಗೆ ಕರಗಿ ನೀರಾಗಿದ್ದೆ.
ಹಿಂದಿನ ಆಕ್ರೋಶ ಕಡಿಮೆ ಆಗಿತ್ತು. ಆಗಲೇಬೇಕಿತ್ತು. ವಾಸ್ತವದ ದುಸ್ಥಿತಿ ಗೊತ್ತಾಗಿ ಹೋಗಿತ್ತು. ಎಂದೂ ನೋಡದವನ ಹಾಗೆ ಮನ:ತೃಪ್ತಿಯಾಗುವವರೆಗೆ ದಿಟ್ಟಿಸಿ ನೋಡಿದೆ. ಹಕ್ಕಿಗಳ ಚಿಲಿ-ಪಿಲಿ ಕಲರವ ನಮ್ಮನ್ನು ಒಂಟಿಯಾಗಿಸಲಿಲ್ಲ.

ಕಾಣಿಕೆಯ ಗೊಂದಲ ನನ್ನಿಂದ ಮಾಯವಾಗಿತ್ತು.
ನೀನು ಅಷ್ಟೇ ಶಾಂತವಾಗಿ ಹೇಳಿದ ಒಂದೊಂದು ಮಾತುಗಳು ನನ್ನ ವ್ಯಕ್ತಿತ್ವವನ್ನೇ ಬದಲಿಸಿದವು. ನೋಡು ಈಗ ಬಂದಿದ್ದೇನೆ. ಇಂದು ಸಂಜೆಯವರೆಗೆ ನಿನ್ನೊಂದಿಗಿರುತ್ತೇನೆ. ನೀನು ಏನೇ ಬಯಸಿದರೂ ಕೊಡುವ ನಿರ್ಧಾರ ಮಾಡಿದ್ದೇನೆ. ಎಲ್ಲಿಗೆ ಮುಟ್ಟಬಹುದು ಎಂದು ಗೊತ್ತಿಲ್ಲ.
ನಾಳೆಯಿಂದ ನಿನ್ನ ಬದುಕಿನಲ್ಲಿ ನಾನು ಕೇವಲ ನೆನಪಾಗುತ್ತೇನೆ. ಕಣ್ಣು ತಿಕ್ಕಿಕೊಂಡು, ಕಣ್ಣು ಮುಚ್ಚಿ ತೆರೆದು ಹೊಸ ಬೆಳಕನನು ಕಂಡಂತೆ ಹೊಸ ಜಗತ್ತನ್ನು ನೋಡು. ಆ ಜಗದ ತುಂಬೆಲ್ಲ ನಾನಿದ್ದರೂ, ಅಲ್ಲಿ ನಾನಿರುವುದಿಲ್ಲ.

ಬಹುಶ: ನಿನಗೆ ನನ್ನ ಮಾತುಗಳು ಅರ್ಥವಾಗದೇ ಇರಬಹುದು, ಆದರೆ ಮುಂದೊಂದು ದಿನ ಅರ್ಥವಾಗುತ್ತವೆ ಎಂಬ ನಂಬಿಕೆ ನನಗಿದೆ. ಒಂದೇ ಉಸುರಿನಲ್ಲಿ ಮಾತನಾಡಿದಾಗ ಸುಮ್ಮನೆ ಕುಳಿತುಕೊಂಡೆ,
ಗದ್ದಕ್ಕೆ ಕೈಯೂರಿ ಅಸಹಾಯಕನಾಗಿ .ಕುಳಿತುಕೊಂಡೆ.
ನಿನ್ನ ದಿಟ್ಟತನ, ಪ್ರಾಮಾಣಿಕತೆ ನನಗೆ ಅರ್ಥವಾಗಿದ್ದರೆ ಎಷ್ಟೊಂದು ಚಂದಿರುತ್ತಿತ್ತು. ಆದರೆ ಹಾಗಾಗಲಿಲ್ಲ.
ನಿಧಾನವಾಗಿ ಇಬ್ಬರೂ ಎದುರಿಗಿದ್ದ ದೇವರ ಗುಡಿಯನ್ನು ಹೊಕ್ಕಾಗ ಕತ್ತಲು. ಬರೀ ಕತ್ತಲು ದೇವರ ಮುಂದೆ ಬೆಳಗುತ್ತಿದ್ದ ದೀಪದಂತೆ ನಿನ್ನ ಕಣ್ಣುಗಳು ಪ್ರಕಾಶಿಸುತ್ತಿದ್ದವು.
ನಿಧಾನವಾಗಿ ಆಪ್ತವಾಗಿ ದೇವರ ಸನ್ನಿಧಿಯಲ್ಲಿ ಪವಿತ್ರವಾಗಿ ಮಗುವನ್ನು ಮುದ್ದಿಸಿದಂತೆ ಹಣೆ, ಕೆನ್ನೆ, ತುಟಿ ಮೇಲೆ ನರ್ತಿಸಿದ ನಿನ್ನ ತುಟಿಗಳ ಬಿಸಿಗೆ ಮತ್ತೇರಲಿಲ್ಲ.
ಮುತ್ತು ಕೇವಲ ಮತ್ತೇರಿಸುತ್ತದೆ ಅಂದುಕೊಂಡಿದ್ದೆ ಆದರೆ ಅಲ್ಲಿ ಮೌಲ್ಯವಿದೆ ಎಂಬುದನ್ನು ನೀನು ತೋರಿಸಿ ಹೊಸ ಭಾಷೆಗೆ ನಾಂದಿಹಾಡಿದೆ. ಕೇಳು ಏನು ಬೇಕು, ಕೊಡುತ್ತೇನೆ ಎಂದಾಗ ಗಳ-ಗಳ ಅಳಲು ಶುರು ಮಾಡಿದೆ. ಆಗ ಕೇಳಲು - ಹೇಳಲು ನನ್ನಬಳಿ ಏನೂ ಇರಲಿಲ್ಲ. ಸಂಪೂರ್ಣ ಖಾಲಿಯಾಗಿದ್ದೆ. ಆ ಖಾಲಿತನದ ತುಂಬೆಲ್ಲನಿನ್ನ ಪ್ರೀತಿ ಆವರಿಸಿತ್ತು.
ನಿನ್ನ ನಿರೀಕ್ಷೆಯನ್ನು ಮೀರಿಸಿದ ಕಾಣಿಕೆಯನ್ನು ನೀಡಲು ನಿರ್ಧರಿಸಿದೆ. ಪ್ರೀತಿ ಹೃದಯದಲಿ. ನರನಾಡಿಗಳಲಿ ಹರಿಯುತ್ತಿದೆ. ಆದರೆ ಪ್ರವಹಿಸುವ ಪ್ರೀತಿ ಕಣಗಳು ಯಾರಿಗೂ ಕಾಣುವುದಿಲ್ಲ. ಆದರೆ ಅವುಗಳನ್ನು ಸಾಂಕೇತಿಕವಾಗಿ ತೋರಿಸಲು ಹಪಹಪಿಸುತ್ತೇವೆ.
ತುಂಬಾ ಪ್ರಯಾಸಪಟ್ಟು ಹಣ ಹೊಂದಿಸಿ ತಂದಿದ್ದ ಕಾಣಿಕೆಯನ್ನು ಹೊರತಗೆದೆ. ಕಾಲುಂಗುರ, ಬೆಳ್ಳಿಗೆಜ್ಜೆಗಳನ್ನು ಅರಿಶಿಣ ಕೊಂಬಿನಲ್ಲಿ ಭದ್ರವಾಗಿ ಅಡಗಿಸಿಟ್ಟಿದ್ದೆ.
ನಿನ್ನ ಕಂಗಳ ಹೊಳಪನ್ನು ಮತ್ತೊಮ್ಮೆ ಅನುಭವಿಸಿದೆ.
ನೀನು ಅಷ್ಟೇ ಸಂಭ್ರಮದಿಂದ ಮದುವೆಯ ಸಂಕೇತವಾಗಿ ತೊಟ್ಟಿದ್ದ ಕಾಲುಂಗರ ತೆಗೆದು ಅಲ್ಲಿ ನಾನು ತಂದಿದ್ದ ಉಂಗುರವನ್ನು ತೊಡಿಸಲು ಹೇಳಿದಾಗ ಬೆಚ್ಚಿಬಿದ್ದೆ.

ಪ್ರೀತಿಯ ಯುದ್ಧದಲಿ ಎಲ್ಲವೂ ಸುಂದರ' ಎಂಬ ಮಾತು ಮತಿಸಿತು. ಮಾರ್ಧನಿಸಿತು.
ಅಲ್ಲ ಇವುಗಳನ್ನು ತಗೆದದ್ದು ಯಾರಿಗಾದರೂ ಗೊತ್ತಾದರೆ ಎಂದಾಗ, ನೀ ನಕ್ಕು ಸುಮ್ಮನಾದೆ.ಮದುವೆಯಲ್ಲಿ ತೊಟ್ಟಿದ್ದ ಕಾಲುಂಗುರ - ಗೆಜ್ಜೆಗಳನ್ನು ಸಂತಸದಿಂದ, ನಿರ್ಲಿಪ್ತ ಭಾವದಿಂದ ತಗೆದು ನನ್ನ ಕ್ಯಗಿಟ್ಟೆ.
ಸಾಧ್ಯವಾದರೆ ಇವುಗಳನ್ನು ಕಾಪಾಡು, ತುಂಬಾ ತೊಂದರೆ ಎನಿಸಿದರೆ ದೂರ-ಎಲ್ಲಿಗಾದರೂ ಸಾಗಿಸಿ ಬಿಡು ಎಂದಾಗ ಏನಾಗಿರಬೇಡ.
ದೇವರ ಸನ್ನಿಧಿಯಲ್ಲಿ ನಾನೇ ಕಾಲುಂಗುರ ಗೆಜ್ಜೆ ತೊಡಿಸಿ ಮನದ ಮದುವೆಯ ಮಲ್ಲಿಗೆ ಸುರಿದೆ. ಮತ್ತೊಮ್ಮೆ ಬಿಗಿದಪ್ಪಿ ಪ್ರೀತಿಯ ಮಳೆ ಸುರಿದೆ. ಅಲ್ಲಿನ ನಿಷ್ಕಾಮ ಪ್ರೀತಿ ಎಲ್ಲಿ ಹುಡುಕಿದರೂ, ಯಾವ ಮಾರುಕಟ್ಟೆಯಲ್ಲೂ ಈಗ ಸಿಗುವುದಿಲ್ಲ. ಈಗಲೂ ಸಿಗುತ್ತಿಲ್ಲ.
ಮೊನ್ನೆ ನಡೆದದ್ದು ಶಾಸ್ತ್ರದ ಮದುವೆ. ಇಂದು ನಡೆದದ್ದು ಆಚಾರಗಳನ್ನು ಮೀರಿದ ವಿಚಾರದ ಮದುವೆ ಎಂದ ನಿನ್ನ ಭಾಷೆ ಅರ್ಥವಾಗಲಿಲ್ಲ.
ಪರಸ್ಪರ ಕೈ ಹಿಡಿದು ಏಳಲ್ಲ ಹತ್ತಾರು ಸುತ್ತು ದೇವರಿಗೆ ಸುತ್ತು ಹಾಕಿದರೂ ಸುಸ್ತಾಗಲಿಲ್ಲ. ದೇವರಿಗೆ ನಮಿಸುವ ಭಕ್ತಿ. ಶ್ರದ್ಧೆ ಇರದಿದ್ದರೂ ಪ್ರೀತಿಗೊಂದು ಏಕಾಂತವನ್ನು ದೇವರು ದೇವಾಲಯ ಸೃಷ್ಟಿಸಿತ್ತು.
ಇರುವ ಒಂದು ವಾರ ದಿನಾ ಭೇಟಿ ಆಗೋಣ-ಮನಸ್ಸನ್ನು ತಿಳಿಗೋಳಿಸಿಕೋ, ಹೊಸ ಬದುಕಲಿ ಯಶಸ್ವಿ ಪಡೆದು ನನ್ನ ಪ್ರೀತಿಯ ನೆನಪನ್ನು ಚಿರಸ್ಥಾಯಿಗೊಳಿಸು ಒಂದು ವೇಳೆ ನೀನು ಬದುಕಲ್ಲಿ ವಿಫಲನಾದರೆ ನನ್ನನ್ನು ಕೊಂದಂತೆ ಎಂಬುದನ್ನು ಮರೆಯಬೇಡ ಎಂದಾಗ ಸುರಿದ ಕಣ್ಣೀರ ಧಾರೆ ಕೇವಲ ಮೂಕ ಸಾಕ್ಷಿಯಾದವು

Tuesday, November 2, 2010

ಹೊಸ ನೀರ ಸವಿಯುವ ಕನಸು

ಪರೀಕ್ಷೆ ಎದುರಿಸುವ ಧಾವಂತ ನನ್ನಲ್ಲಿ ಉಂಟಾಗಲಿಲ್ಲ. ನಿನ್ನ ಕಾಣಿಕೆಗಾಗಿ ಹಂಬಲಿಸುತ್ತಿದ್ದೆ. ಪರೀಕ್ಷೆ ಬರೆದದ್ದು ಆಯಿತು. ಈಗ ಉಳಿದದ್ದು ನಿನ್ನ ಕಾಣಿಕೆಯ ಫಲಿತಾಂಶ.
ಮೇ ಮೊದಲ ವಾರದ ಮದುವೆಗೆ ಸಿದ್ಧತೆಯಲ್ಲಿ ನೀನಿರುವ ಗೊಂದಲ ಅರ್ಥಮಾಡಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಹೊಸ ಸಮಸ್ಯಯನ್ನು ನಾವಿಬ್ಬರು ಎಳೆದುಕೊಂಡಿದ್ದೆವು.

ಪರೀಕ್ಷಾ ಪರಿಣಾಮ ಬೀರುವ ಮುನ್ನ ನಿನ್ನ ಮದುವೆ. ಒಬ್ಬ ಗೆಳೆಯನಾಗಿ, ಹಿತೈಷಿಯಾಗಿ ಉಳಿದಿದ್ದರೆ-ನನ್ನಲ್ಲಿಯೂ ಆ ಸಂಭ್ರಮವಿರುತ್ತಿತ್ತು.
ಆದರೆ ನಾನೀಗ ಕೇವಲ ಗೆಳೆಯನಾಗಿ ಉಳಿದಿರಲಿಲ್ಲ. ಅದೇ ನಮ್ಮಿಬ್ಬರ ದುರಂತ. ಪರೀಕ್ಷೆ ಮುಗಿದ ಒಂದೆರಡು ಸುಧೀರ್ಘ ಭೇಟಿಗಳಾದವು. ಏಕಾಂತ ನಮ್ಮ ಪಾಲಿಗೆ ಸುಲಭವಾಗಿ ದೊರಕುವ ಕಾರಣಕ್ಕೆ ನನ್ನ ಮನಸ್ಸು ಹೆಚ್ಚು ಚಂಚಲವಾಗುತ್ತಿತ್ತು. ಬೇಕಾದಾಗ, ಬೇಕಿದ್ದೆಲ್ಲ ಸಿಗುವ ವಾತಾವರಣವಿದ್ದರೆ ಮನುಷ್ಯ ಹೆಚ್ಚು ಚಂಚಲನಾಗುತ್ತಾನೆ.
ಮತ್ತದೇ ಹಟ. ನೀ ಕಾಲಾವಕಾಶ ಕೇಳಿದಾಗ ಎಲ್ಲಿಲ್ಲದ ಆಕ್ರೋಶ, ಕಳೆದು ಕೊಳ್ಳುವ ಭಯ. ನಾನಾಗಲೇ ಕುದ್ದು ಹೋಗಿದ್ದೆ. ಕಳೆದುಕೊಳ್ಳುವುದನ್ನು ನೆನಸಿಕೊಂಡರೆ ಸಾಕು ಜೀವಂತ ಹೆಣವಾಗುತ್ತಿದ್ದೆ.

ಕಾಣಿಕೆ ನೀಡಲು ಕಾಲಾವಕಾಶ ಕೇಳಿದ್ದರ ಕಾರಣ ಅರ್ಥವಾಗಲೇ ಇಲ್ಲ.
ನಿರಾಕರಿಸಿದಾಗ ಜೋರಾಗಿ ಕೆನ್ನೆಗೆ ಬಾರಿಸಿದೆ.

ಮೊಟ್ಟ ಮೊದಲ ಬಾರಿಗೆ ನಾನು ಕ್ರೂರಿಯಾಗಿದ್ದೆ. ನೀನೆಲ್ಲ ಇದನ್ನು ಊಹಿಸಿರಲಿಲ್ಲ. posessive ನ ಇನ್ನೊಂದು ಕರಾಳ ಮುಖದ ಪರಿಚಯ. ಚೇತರಿಸಿಕೊಳ್ಳುವ ಶಕ್ತಿ ನಿನ್ನಲ್ಲಿರಲಿಲ್ಲ. ನಡುಗಿ ಹೋದೆ. ಸುಂದರವಾದ ನಳನಳಿಸುವ ಕೆನ್ನೆಗಳ ಮೇಲೆ ಪೆಟ್ಟಿನ ರುದ್ರ ನರ್ತನವನ್ನು ನೀನು ನೀರಿಕ್ಷಿಸಿರಲಿಲ್ಲ. ಒಂದು ಕ್ಷಣ ಆಘಾತವಾಯಿತು. ನನ್ನನ್ನು ತೀವ್ರವಾಗಿ ನಿರಾಕರಿಸುವ ಎಲ್ಲ ಸಾಧ್ಯತೆಗಳಿದ್ದರೂ, ನೀನು ಅಂದು ಯಾಕೆ ಸಹಿಸಿಕೊಂಡೆಯೆಂಬುದೇ ಅರ್ಥವಾಗಲಿಲ್ಲ.
ಜೋರಾಗಿ ಅಳಲು ಶುರು ಮಾಡಿದೆ. ನನ್ನ ತಪ್ಪಿನ ಅರಿವಾಯಿತು. ನೀನು ನನ್ನ ಆತಂಕವನ್ನು ಅರ್ಥಮಾಡಿಕೊಂಡಿದ್ದರಿಂದ, ಅಗಲುವಿಕೆಯ ಹಿಂಸೆಯನ್ನು ಗ್ರಹಿಸಿದ್ದರಿಂದ, ಕೆನ್ನೆಯ ಪೆಟ್ಟು ಯಾವ ಲೆಕ್ಕ ಅನಿಸಿರಬೇಕಲ್ಲವೆ?
ಒಂದೆರಡು ತಾಸು ಪರಸ್ಪರ ಅಳು-ಸಮಾಧಾನ. ಆದರೂ ಸಮಸ್ಯಗೆ ಉತ್ತರ ಸಿಗಲಿಲ್ಲ. ಹುಡುಕುವ ಸಾಮರ್ಥ್ಯ ನನ್ನಲ್ಲಿ ಇರದ ಪ್ರಾಯವದು.
But you were quite matured to accept the situation. ನನ್ನನ್ನು ಸಮಾಧಾನಿಸಿ ಒಂದು ಒಪ್ಪಂದಕ್ಕೆ ಬಂದೆ. ಅದನ್ನು ನಾನು ಸಹನೆಯಿಂದ ಒಪ್ಪಿಕೊಂಡೆ.
ಮದುವೆ ಮುಗಿಸಿ ಊರಿಗೆ ವಾಪಾಸಾಗುತ್ತೇನೆ, ನಿನಗೆ ಸಹನೀಯ ಅನಿಸಿದರೆ ಮದುವೆಗೆ ಬಾ ಇಲ್ಲದಿದ್ದರೆ ಬೇಡ ಎಂದ ನಿನ್ನ ವಾಸ್ತವದ ಮಾತುಗಳಲ್ಲಿ ಎಂತಹ ಅರ್ಥವಿತ್ತು.
ನಿನ್ನನ್ನು ನೋಯಿಸಿದ್ದಕ್ಕೆ ಕ್ಷಮೆ ಕೋರಿ ಅಪರಿಮಿತ ವಿಶ್ವಾಸದಿಂದ ನಿರ್ಗಮಿಸಿದೆ. ಮದುವೆಯಾಗಿ ವಾಪಾಸು ಬರುತ್ತೇನೆ. ಒಂದು ವಾರ ನಾನು ಗಂಡನ ಮನೆಗೆ ಹೋಗಲು ಕಾಲಾವಕಾಶವಿರುತ್ತದೆ. ಆ gap ನಲ್ಲಿ ನಿನ್ನನ್ನು ಖಂಡೀತಾ ಭೇಟಿ ಆಗುವೆ.

ನಿನ್ನ ಆಸೆ ಈಡೇರಿಸುವೆ. ಆ ಕಾಣಿಕೆ ನನ್ನ ಆಯ್ಕೆ ಅಲ್ಲ. ಅದು ನಿನ್ನ ಆಯ್ಕೆಯಾಗಿರುತ್ತದೆ. ಆದದ್ದಾಗಲೀ ಬಂದದ್ದನ್ನು ಎದುರಿಸುತ್ತೇನೆ. ಆದರೆ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಎಂದಾಗ ದಿವ್ಯಮೌನಿಯಾದೆ.
ಹಾಗಾದರೆ ನಾನು ಬಯಸಿದ ಕಾಣಿಕೆಯಾದರೂ ಏನು ಎಂಬುದು ನನಗಂತೂ ಗೊತ್ತಿರಲಿಲ್ಲ. ನೀನು ಏನು ಕೊಡಲು ಬಯಸುತ್ತಿಯಾ ಎಂಬುದನ್ನು ಊಹಿಸಿರಲಿಲ್ಲ. ಮದುವೆಗೆ ಬರುವ ನಿರ್ಧಾರವನ್ನು ನನ್ನ ಕೊರಳಿಗೆ ಹಾಕಿದ್ದು ಕಠೀಣವೆನಿಸಿತು. ಅರೆ ಹುಚ್ಚನಂತಾಗಿ, ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನನಗೆ ಮದುವೆ ಮಂಟಪದಲ್ಲಿ ಕಾಣಿಸಿಕೊಳ್ಳುವ ಮನಸ್ಸಿರಲಿಲ್ಲ.

ಆ ಶಕ್ತಿಯೂ ಉಳಿದಿರಲಿಲ್ಲ.
ಕಳೆದುಕೊಳ್ಳುವ ವಾಸ್ತವದೆದುರು ಬೇರೊಂದು ದುರಂತವಿರಲಿಲ್ಲ. ಮುಂದಿನ ದಿನಗಳನ್ನು ಕಳೆಯುವದಾದರೂ ಹೇಗೆ? ಕಾಲೇಜು ವ್ಯಾಸಂಗ ಹೊಸ ಹಾದಿ ಸಿಗಬಹುದೆಂದು ನೀ ಅಂದುಕೊಂಡಿದ್ದೆ.
ಮದುವೆ ಅದ್ಧೂರಿಯಾಗಿ ನಡೆಯಿತು. ಗಂಡ ಸುಂದರವಾಗಿದ್ದಾನೆ ಎಂಬ ಗೆಳೆಯರ ವಾರ್ತೆ ನನ್ನನ್ನು ಇನ್ನೂ ವಿಚಲಿತನಾಗಿಸಿತು.
ಮದುವೆ ಮುಗಿದು ವಾರದ ಅವಧಿಯಲಿ ನಿನ್ನ ಭೇಟಿಗಾಗಿ ಕಾಯುತ್ತಿದ್ದೆ. ನೀನು ಈಗ ಹೊಸ ರೂಪದಲ್ಲಿ ಬರುತ್ತಿ ಎಂಬುದನ್ನು ನೆನೆದಾಗ ಹೇಗಾಗಿರಬೇಡ? ಕೊರಳಲ್ಲಿ ತಾಳಿ, ಮೈತುಂಬಾ ಸೀರೆ, ಝಗಮಗಿಸುವ ನಿನ್ನ ಭಿನ್ನ ರೂಪ ನೋಡುವ ಕುತೂಹಲವಿತ್ತು.
ಹೊಸ ನೀರ ಸಿಹಿಯ ಸವಿಯುವ ಕಾತರವಿರಬಹುದಲ್ಲವೆ?

Sunday, October 31, 2010

ಉಳಿಯದ ಸ್ನೇಹ- ಮರೆಯಲಾಗದ ಕಾಣಿಕೆ

ಮುಂದಿನ ಪ್ರವಾಸದಲ್ಲಿ ಕೊಂಚ ಗಂಭೀರವಾಗಿದ್ದರೂ, ನಿನ್ನ ಸಾಮಿಪ್ಯ ಬೇಕೆನಿಸುತ್ತಿತ್ತು. ಮನಸ್ಸು ನಿಯಂತ್ರಣ ಕಳೆದುಕೊಂಡರೂ ನಿನ್ನಯ ಅಳು ನೆನಪಾಗಿ ಮೌನಿಯಾದೆ.
ನನ್ನ ಮೌನವು ನಿನಗೆ ಇಷ್ಟವಾಗಲಿಲ್ಲ. ನಾನು ಸಹಜವಾಗಿ ಮೊದಲಿನಂತೆ ಲವ ಲವಿಕೆಯಿಂದ ಇರಲಿ ಎಂಬ ನಿನ್ನ ನಿರೀಕ್ಷೆ ಸುಳ್ಳಾಯಿತು. ನಾನು ಅಂತರ್ಮುಖಿಯಾದೆ. ಏನನ್ನೋ ಕಳೆದುಕೊಂಡೆ ಜೀವನೋತ್ಸಾಹ ಇಲ್ಲದಾಯಿತು. ನಿನ್ನನ್ನು ಕಳೆದುಕೊಳ್ಳುವುದು ನೆನಪಾದರೆ ಸಾಕು ಕುಗ್ಗಿಹೋಗುತ್ತೇವೆ.
ನಾನೇನು ನಿನ್ನನ್ನು ಬಯಸಿಯೇ ಇರಲಿಲ್ಲ. ಆದರೆ ಪ್ರಾಮಾಣಿಕ ಸ್ನೇಹ ನನ್ನನ್ನು ಆಳಕ್ಕೆ ನೂಕಿತ್ತು. ಅಲ್ಲಿಂದ ಮೇಲೇರಲು ಸಾಧ್ಯವಾಗಲೇ ಇಲ್ಲ.
ಹೀಗೆ ಗಟ್ಟಿ ಧೈರ್ಯ ತಗೆದುಕೊಂಡು, ಭವಿಷ್ಯವನ್ನು ಕಲ್ಪಿಸಿಕೊಂಡಾಗ ಭಯವಾಯಿತು. Insecure ಭಾವನೆ ಹೆಚ್ಚಾಯಿತು. ನಾಳೆ ರಾತ್ರಿ ಊರು ತಲುಪುತ್ತೇವೆ. ಹೋದ ಮೇಲೆ ಪರೀಕ್ಷಾ ತಯಾರಿ ಆರಂಭ.
ಆ ಪ್ರಾಯದಲ್ಲಿ ಜಾಣರ ಗುಂಪೊಂದು, ಹೆಣ್ಣು-ಗಂಡು ಎಂಬ ಭೇದವಿಲ್ಲದೆ ಒಟ್ಟಾಗಿ study ಮಾಡುವ ಯೋಜನೆಯನ್ನು ಶಿಕ್ಷಕರು ರೂಪಿಸಿದದರು. ಹೇಗಿದ್ದರೂ ಅಲ್ಲಿ ಮತ್ತೆ ಒಟ್ಟಾಗಿ ಇರುತ್ತೇವಲ್ಲ ಎಂಬ ನಂಬಿಕೆ ಬೇರೆ.
ನನ್ನ ತುಂಟತನವನ್ನು ನಿಯಂತ್ರಿಸಿಕೊಂಡು ಗಂಬೀರವಾಗಿ ನಿನ್ನೊಂದಿಗೆ ವರ್ತಿಸಲಾರಂಸಿದೆ. ಆದರೆ ಮೊದಲಿನ ಸಹಜತೆ ಉಳಿಯಲಿಲ್ಲ. ಇಷ್ಟೊಂದು ಸಣ್ಣ ವಯಸ್ಸಿಗೆ, ಇಷ್ಟೊಂದು ದೊಡ್ಡ ಪ್ರಮಾದ ನಡೆಯಬಹುದು ಅಂದುಕೊಂಡಿರಲಿಲ್ಲ.
ಒಂಚೂರು ಗಂಭೀರವಾಗಿ ಆಲೋಚಿಸಿದಾಗ ಭವಿಷ್ಯ ಕರಾಳವೆನಿಸಿತು. ಬದುಕಿನಲ್ಲಿ ಯಶಸ್ವಿಯಾಗದಿದ್ದರೆ ಹೇಗೆ? ಅದಕ್ಕೆ ಕಾರಣ ಯಾರು? ಎಂಬ ಆಲೋಚನೆಗಳು ಆರಂಭವಾದ ಕೂಡಲೇ ನಿನ್ನ ಮೇಲೆ ಬೇಸರ ಉಂಟಾಯಿತು. ನೀನು ಪ್ರೀತಿಯನ್ನು ತೋರಿಸದೇ ಇದ್ದರೆ, ಸಹಿಸಿಕೊಂಡಿದ್ದರೆ ನಾನು ಬಚಾವಾಗುತ್ತಿದ್ದೆ ಎಂಬ ಹುಸಿ ಆರೋಪಿಗಳು ಆರಂಭವಾದರೂ ಸುಮ್ಮನೆ ಸಹಿಸಿಕೊಂಡೆ. ಕೊನೆದಿನ, ಮೊದಲ ದಿನದಂತೆ ಅಪರಿಚಿತವಾಗಿಯೇ ಬಿಳ್ಕೋಟ್ಟಾಗ ತಳಮಳ.
ನಾಳೆಯಿಂದ study ಮಾಡಲು ಒಟ್ಟಾಗಿ ಸೇರೋಣ. ನಿನಗೆ difficult ಎನಿಸುವ ವಿಷಯಗಳನ್ನು ನಾನೇ ಚರ್ಚಿಸಿ ತಿಳಿಸುವೆ ಎಂದಾಗ ನಿನ್ನ maturity.ಅರ್ಥವಾಗಿ ಸಣ್ಣವನೆನಿಸಿ ಕುಬ್ಜನಾಗಿ ಹೋದೆ.
ಒಂದು ವಾರ ನಾನೇ ಒಂಟಿಯಾಗಿ ಕಳೆದು, ನಿನ್ನನ್ನು ಪೀಡಿಸದೆ. ವಿಶ್ವಾಸ ಹೆಚ್ಚಿಸಿಕೊಂಡೆ. ಅಲ್ಲಿ ಸಹಜತೆ ಇರದಿದ್ದರೂ ಆತ್ಮವಿಶ್ವಾಸವಿತ್ತು.
ಒಂದು ವಾರದಲ್ಲಿ ನಿಧಾನ ಬದಲಾಗುತ್ತ ಹೋದೆ. out of sight is out of mind ಎಂಬ ಮಾತು ದಿಟ ಎನಿಸಿತು.
ಆದರೆ ಮತ್ತೇನು combined study ನಮ್ಮನ್ನು ಒಂದು ಮಾಡಿದ್ದು ಎರಡನೇ ಅಪಾಯಕ್ಕೆ ನಾಂದಿಯಾಯಿತು. ವಿಶಾಲವಾದ ಮೈದಾನ ಹತ್ತಾರು ರೂಮುಗಳು combined study ಗೆ ಸುಂದರ ವಾತಾವರಣ ಕಲ್ಪಿಸಿತ್ತು ಆದರೆ ನಾನದರಲ್ಲಿ ಆಗಬೇಕಾದ ರೀತಿಯಲ್ಲಿ involve ಆಗಲಿಲ್ಲ.
ಒಂದೆರಡು like minded ಗೆಳೆಯರೊಂದಿಗೆ study ಚೆನ್ನಾಗಿ ಸಾಗಿತು. ಆದರೆ ಮನಸ್ಸು ಮತ್ತೆ ಹಿಂದೆ ತಿರುಗಿತು.
ಎಲ್ಲರೂ ಅವರವರ ಪಾಡಿಗೆ ಇರುತ್ತಿದ್ದರು. ನೀನು ಗಣಿತ ಹೇಳಿಕೊಡುವಾಗ ನನ್ನ ಲೆಕ್ಕಾಚಾರವೇ ಬೇರೆಯಿರುತ್ತಿತ್ತು. Study ಬಿಟ್ಟು ಉಳಿದ ವಿಷಯ ಆರಂಭಿಸಿದೆ.
ನಡುರಾತ್ರಿ ಎರಡು ಗಂಟೆಯವರೆಗೆ ನನ್ನ ಮಾತುಗಳನ್ನು ಸಹನೆಯಿಂದ ಕೇಳಿಕೊಂಡ ನಿನ್ನ ತಾಳ್ಮೆ ಗಾಂಭೀರತೆ ಬದುಕಿನ ಬಗೆಗೆರುವ ಜವಾಬ್ದಾರಿ ನನ್ನ ಮೇಲೆ ಇರುವ ಪ್ರೀತಿ ಹೀಗೆ ಯಾವುದನ್ನು ನೆನಪಿಸಿಕೊಳ್ಳಲಿ.
ನಾನೇ ಒಂದಿನ ಕೇಳಿದೆ. ಆಯಿತು, ನಿನ್ನನ್ನು ನಾನೆಂದು ಮುಂದೆ ಭೇಟಿ ಆಗುವುದಿಲ್ಲ. ನನ್ನ ಜೀವನದ ಕೊನೆಕ್ಷಣದ ವರೆಗೆ ನೆನಪಿನ ಆಳದಲ್ಲಿ ಉಳಿಯುವ ಕಾಣಿಕೆ ನೀಡು ಎಂಬ ಬೇಡಿಕೆಗೆ ನೀನು ವಿಚಳಿತಳಾದೆ.
ಇಲ್ಲ ನನಗೆ ನಿನ್ನ ಮರೆಯೋಕೆ ಸಾಧ್ಯವಿಲ್ಲ. ಪರಸ್ಪರ ಸ್ನೇಹಿತರಾಗಿ ಉಳಿದರೆ ಖಂಡಿತ ಭೇಟಿ ಆಗುತ್ತ ಇರೋಣ. ಅದಕ್ಕೆ ಕಾಣಿಕೆ ಇತ್ಯಾದಿ ಬೇಡ. ನಿರ್ಮಲ ಸ್ನೇಹ ನಿಷ್ಟೆಯ ಮನಸ್ಥಿತಿ ಸಾಕು ಎಂದ ನಿನ್ನ ವಾದ ಅರ್ಥವಾಗಿದ್ದರೆ ನನಗಿಂದು ಈ ಸ್ಥಿತಿ ಅಂದರೆ ನಿನ್ನನ್ನು ಅಗಲುವ ಸ್ಥಿತಿ ಬರುತ್ತಿರಲಿಲ್ಲ.
ನನ್ನ ಮನದಾಳದ ಅಳಲನ್ನು ಕಡ್ಡಾಯವಾಗಿ ಬೇಕಿರುವ ಕಾಣಿಕೆಯ ಸುಳಿವನ್ನು ನೀಡಿ ನಿನ್ನನ್ನು ತೀವ್ರವಾಗಿ ಚಿಂತಿಸುವಂತೆ ಮಾಡಿದೆ. ನನಗೆ ಗೊತ್ತಿತ್ತು ಪರೀಕ್ಷೆ ಮುಗಿದ ಮೇಲೆ ನೀನು ಸಿಗುವುದಿಲ್ಲ ವೆಂದು ಅದಕ್ಕೆ ಕಾಣಿಕೆಗಾಗಿ ಪದೇ ಪದೇ ಒತ್ತಾಯಿಸಿದಾಗಲೂ ನೀನು ಜಾರಿಕೊಳ್ಳುತ್ತಿದೆ. ಆದರೆ ನಾನು ಬಿಡಬೇಕಲ್ಲ.

Saturday, October 30, 2010

ಮನಕರಗಿಸಿದ ಅಳು-ಅರ್ಥವಾಗದ ನಾನು.

ಮೆಲ್ಲನೆ ಗುಸು ಗುಸು ಪ್ರಾರಂಬವಾಗಿತ್ತು. ನಿನ್ನ ಮೇಲೆ ಮೊದಲಿನ ನಂಬಿಕೆ ಎಲ್ಲರಿಗೂ ಕಡಿಮೆ ಆಗಿತ್ತು. ಇದಾವುದನ್ನು ಲೆಕ್ಕಿಸುವ ಸ್ಥಿತಿಯಲ್ಲಿ ನಾನಿರಲಿಲ್ಲ. ನಮ್ಮಿಬ್ಬರನ್ನು ಎಲ್ಲರೂ ಆಲಕ್ಷಿಸಿ, ತಮ್ಮ ಪಾಡಿಗೆ ತಾವಿದ್ದು ಪ್ರವಾಸವನ್ನು enjoy ಮಾಡಿದರು.
ನಮ್ಮ ಖಾಸಗಿ ಗೊಂದಲಗಳನ್ನು ಇಣುಕಿ ನೋಡುವ ತುಂಟತನ ಯಾರಲ್ಲಿ ಇರಲಿಲ್ಲ. ಆದರೂ ನಾವಿಬ್ಬರೂ dull ಆದ ಬಗ್ಗೆ ಅನುಮಾನ ಶುರು .
ಮತ್ತೆ ನಿನ್ನ ಉಪದೇಶ ಶುರು ಆಯ್ತು. ನೋಡು ನಿನಗೆ ಇಡೀ ಬದುಕಿನುದ್ದಕ್ಕೂ ನನ್ನನ್ನು ಕಳೆದುಕೊಳ್ಳಬಾರದೆಂಬ ಇರಾದೆ ಇದ್ದರೆ ಸಂಯಮದಿಂದ ನಡೆದುಕೊ.
ಇಲ್ಲಿಗೆ, ಇಷ್ಟಕ್ಕೆ, ಮುಗಿಸುವುದಾದರೆ ಎಲ್ಲವನ್ನು ಸಹಿಸುವೆ ಎಂಬ ನಿನ್ನ ವಾದವನ್ನು ಆಲಿಸುವ ಸಹನೆ ಉಳಿದಿರಲಿಲ್ಲ.
ನಿನ್ನ ಸೌಂದರ್ಯ, ನಿರ್ಮಲ ಪ್ರೀತಿ, ನಿರ್ವಾಜ್ಯ ಗೆಳೆತನವನ್ನು ಗಮನಿಸುವ ಮನೋಸ್ಥಿತಿಯನ್ನು ಕಳೆದುಕೊಂಡಿದ್ದೆ.
ಮುಂದಿನ ಪಯಣ uneasy ಆಯಿತು. ಊರು ಮುಟ್ಟಿದರೆ ಸಾಕು ಎಂಬ ನಿನ್ನ ಧಾವಂತ ಅರ್ಥವಾಯಿತು.
ಆದರೆ ನನಗೆ ಇದು ಬೇಕೆನಿಸಿತು. ಒಂದೇ ವಾರದಲ್ಲಿ ಹೀಗೆ ನಾನು ಬದಲಾಗಬಹುದು ಎಂದು ಅಂದುಕೊಂಡಿರಲಿಲ್ಲ.
ಇನ್ನೆರಡು ದಿನದಲ್ಲಿ ಊರು ತಲುಪುತ್ತೇವೆ. ಏಪ್ರಿಲ್ ನಲ್ಲಿ ಪರೀಕ್ಷೆ ಎದೆ ಧಸಕ್ ಎಂದಿತು. ವಾಸ್ತವದ ಸವಾಲುಗಳನ್ನು ಪ್ರೇಮ ಕುರುಡಾಗಿಸಿತ್ತು.
ಸಿರ್ಸಿ ಮಾರಿ ಕಾಂಬಾದೇವಿಯ ದರ್ಶನದಲ್ಲಿ ನೀನು ಗಂಭೀರಳಾದದ್ದನ್ನು ಗಮನಿಸಿದೆ. ನಿನ್ನ ಲ್ಲಿ ಪಾಪಪ್ರಜ್ಷೆ ಜಾಗೃತವಾಯಿತು. ಬೆಂಕಿಯಲ್ಲಿ ಕೈ ಇಟ್ಟವಳ ಹಾಗೆ ಒದ್ದಾಡಿದೆ. ಪ್ರೀತಿಯ ಮನದಾಳದ ಮಾತುಗಳನ್ನು ಕೇಳುವ ಸಹನೆ ನನ್ನಲ್ಲಿ ಇಲ್ಲದ್ದು ನಿನ್ನ ವ್ಯಥೆಗೆ ಕಾರಣವಾಯಿತು.

ನಿನ್ನ ಆಳದ ನೋವನ್ನು ಯಾರಿಗೂ ಹೇಳಲಾಗದ ನಿನ್ನ ದುಸ್ಥಿತಿಯ ಬಗ್ಗೆ ಈಗ ಕನಿಕರವೆನಿಸುತ್ತದೆ.
ಮತ್ತದೇ ಏಕಾಂತ. ಈಗ ನನ್ನ ಬಿಸಿ ಅಪ್ಪುಗೆ ನಿನ್ನ ಪಾಲಿಗೆ ಅಗ್ನಿ ಕುಂಡವಾಯಿತು. ಸಿಹಿ ಮುತ್ತುಗಳು ಹಾವಿನ ಹೆಡೆಯಾದವು.
ನಿನ್ನನ್ನು ನೀನು ನಿನಗರಿವಿಲ್ಲದಂತೆ, ಪ್ರಾಮಾಣಿಕ ಅಭಿವ್ಯಕ್ತಿಯಿಂದಾಗಿ ಕಳೆದುಕೊಂಡಿದ್ದೆ.

ನನಗೆ ಅದಾವುದನ್ನು ಗ್ರಹಿಸುವ ಶಕ್ತಿ ಇರಲಿಲ್ಲ. ವಿವೇಕ ನನ್ನಿಂದ ಮಾಯವಾಗಿತ್ತು. ಜಾಗೃತ ಗೊಳಿಸುವ ವಯಸ್ಸು ಅದಲ್ಲ ಬಿಡು. ಈ ಹುಡುಗಾಟ ಎಲ್ಲಿದ್ದವರನ್ನು ಎಲ್ಲಿಗೋ ತಲುಪಿಸಿತು.
ಒಮ್ಮೆಲೆ ನೀನು ಜೋರಾಗಿ ಅಳಲು ಶುರು ಮಾಡಿದಾಗ ಭಯವಾಯ್ತು. please leave me alone. ನನ್ನನ್ನು ಕಾಡಬೇಡ. ಕೈಮುಗಿತೇನೆ.

ಊರಿಗೆ ಹೋದ ಮೇಲೆ ಈ ರೀತಿ ಕಾಡಿದರೆ ತೊಂದರೆ ಅನುಭವಿಸಿ ಸಾಯ್ತೇನೆ ಅಂದಾಗ ಆಘಾತವಾಯಿತು.
ನಾನೇನು ಹುಡುಗಿ ಮದುವೆಯಾಗಿ ಹೋಗ್ತೇನೆ. ಆದರೆ ನೀನು ಮುಂದೆ ಕಾಲೇಜಿಗೆ ಹೋಗಿ ಜಾಣನಾಗಿ ಭವಿಷ್ಯ ರೂಪಿಸಿಕೊಳ್ಳಬೇಕು. ನನ್ನಿಂದ ನಿನ್ನ ಬಾಳು ಹಾಳಾಗಬಾರದು.

ಕೇವಲ ಆಪ್ತ ಅಪ್ಪುಗೆಗೆ ನೀನು ಹೀಗೆ ಕರಗಿ ಹೋಗಿ ಹಟಮಾರಿ ಆಗುತ್ತಿ ಎಂದು ಗೊತ್ತಿದ್ದರೆ ನಾನಿಂತಹ ತಪ್ಪು ಮಾಡುತ್ತಿದ್ದಿಲ್ಲ.
ದಯವಿಟ್ಟು ಕ್ಷಮಿಸು ಮಾರಾಯ, ಸ್ವಲ್ಪ ಸಹನೆ ತಗೋ, ನೀನು ತುಂಬಾ ಚಿಕ್ಕವನು.
ನನಗಿಂತ ಎಂಟು ತಿಂಗಳು ಸಣ್ಣವನು. ನನಗಿಂತ ಆರು ವರ್ಷ ದೊಡ್ಡವನನ್ನು ಮದುವೆಯಾಗಿ ಹೋಗುವ ಗೃಹಿಣಿ. ನನ್ನನ್ನು ಒಂಚೂರು ಆ ಪವಿತ್ರ ದೃಷ್ಟಿಯಿಂದ ನೋಡು.
ಇನ್ನೆರಡು ತಿಂಗಳಲ್ಲಿ ನಾನು ಬೇರೆಯವರ ಹೆಂಡತಿ. ಆಗ ನಿನಗೆ ಯಾವ ಅಧಿಕಾರವೂ ಇರುವುದಿಲ್ಲ. ಕೇವಲ ಒಂದೇ ವಾರದ ಸಲುಗೆಯಲ್ಲಿ ನನ್ನನ್ನು ಬಿಟ್ಟಿರುವುದು ಅಸಾಧ್ಯ ಎಂಬಂತೆ ವರ್ತಿಸಿದರೆ ಮುಂದೆ ಹೇಗೆ ಇರುತ್ತೀ.
ನಾನು ನಿನಗಾಗಿ ಚಿಂತಿಸುವಂತಾಯಿತು. please control your self, ಇಲ್ಲಂದರೆ ನೀನು ಹಾಳಾಗುತ್ತೀ ಎಂದು ಬಿಗಿದಪ್ಪಿ ಅಳಲು ಪ್ರಾರಂಭಿಸಿದಾಗ ಒಂದು ಕ್ಷಣ ಸ್ತಂಬೀ ಭೂತನಾದೆ. ಆಯ್ತು ನಿನ್ನನ್ನು ಅರ್ಥಮಾಡಿಕೊಳ್ಳುವೆ ದಯವಿಟ್ಟು ಅಳಬೇಡ ಅಂದಾಗ ನಿನಗೆ ಸಮಾಧಾನವಾಯ್ತು.
ನನ್ನ ಈ ಸಹನೆಯನ್ನು ನೀನು ತೃಪ್ತಿಯಿಂದ ಸ್ವೀಕರಸಿದೆ. ಆದರೆ ನನ್ನ ಈ ಸಹನೆ ಶಾಶ್ವತವಾಗಿ ಉಳಿಯುತ್ತೆ ಎಂಬ ನಂಬಿಕೆ ನನ್ನಲ್ಲಿರಲಿಲ್ಲ. ಕಣ್ಣೀರನ್ನು ವಾತ್ಸಲ್ಯದಿಂದ ಒರೆಸಿದೆ.
ಹೌದು ನಿನ್ನ ಬಾಳಿಗೆ ಮುಳ್ಳಾಗಬಾರದು ಇಷ್ಟು ಅನುಭವಿಸಿದ್ದು ಸಾಕು.
ಊರಿಗೆ ಹೋದ ಮೇಲೆ ಈ ಹಿಂದೆ ಇದ್ದಂತೆ, ಅಪರಿಚಿತನಾಗಿ serious ಆಗಿ ಉಳಿಯಬೇಕು ಎಂಬ ನಿರ್ಧಾರಕ್ಕೆ ಬಂದು ಹಾಸಿಗೆ ಸೇರಿದೆ.
ನಿನ್ನ ಕಣ್ಣಿರ ಹನಿಗಳು ಎದೆಯ ಮೇಲೆ ಹರಿದಾಡಿದಂತೆ ಭಾಸವಾಯಿತು.
ನನ್ನನು ಸಮಾಧಾನ ಪಡಿಸಿಕೊಳ್ಳಲು ಪ್ರಯತ್ನಿಸಿ ನಿದ್ರೆಗೆ ಜಾರಿದೆ.