Thursday, March 23, 2017

ಕಾವಲುಗಾರ

ಕಾವಲುಗಾರ

ಬುದ್ಧ ಬಸವ ಅಲ್ಲಮರ
ವಾರಸುದಾರ ನಾನು
ನನ್ನಷ್ಟು ಶ್ರೀಮಂತ
ಬೇರೆ ಯಾರೂ ಇಲ್ಲವೇ
ಇಲ್ಲ.
ಬುದ್ಧ ಬಿಟ್ಟು ಹೋದ
ಶಾಂತಿ ಸರೋವರಕೆ ಬೆಲೆ
ಕಟ್ಟುವ ತಾಕತ್ತು ಯಾರಿಗಿದೆ?
ಬಸವ ಬಿತ್ತಿ ಬೆಳೆದ ಸೌಹಾರ್ದ
ಎಂಬ ವಿಶಾಲ  ತೋಟವ ಉತ್ತಿ
ಬಿತ್ತಿ ಸಾಗುವಳಿ ಮಾಡಲಾದೀತೆ?
ಅಲ್ಲಮನ ಜ್ಞಾನ ಭಂಡಾರದಲಿ
ತೆರೆದು ಕೈಮಾಡಿ ಕರೆಯುತಿರುವ
ಕೋಟಿ ಕೋಟಿ ಅಸಂಖ್ಯ ಶಬ್ದಗಳ
ಅಳೆದು ತೂಗಿ ಅರಿಯುವ ಅನನ್ಯ
ಜ್ಞಾನಿ ಎಲ್ಲಿದ್ದಾನೆ?
ನಾನೂ ಅಷ್ಟೇ
ಯಾರಾದರೂ ಅರ್ಹರು
ಬಂದರೆ ಅವರವರ
ಪಾಲಿನದು ಅವರಿಗೆ ನೀಡಿ
ಮುಂದೆ ಸಾಗಲು ಕಾಯುತ್ತಲಿರುವೆ.
ಬುದ್ಧ ಬಸವ ಅಲ್ಲಮರ ಮಹಾ
ಸಂಪತ್ತಿನ ಕೇವಲ  ಕಾವಲುಗಾರ
ನಾ...ನು...
----ಸಿದ್ದು ಯಾಪಲಪರವಿ

Wednesday, March 22, 2017

ಬರೀ ತಿರುವುಗಳು

ಬರೀ ತಿರುವುಗಳು

ಈ ಬದುಕಿಗೆ ಬರೀ ತಿರುವುಗಳದೇ ಸೆಳೆತ
ಮೈಮಾಟದ  ವಿಧಿಯಾಟದ ನೂರೆಂಟು ಮಿಳಿತ

ಹರಿಯುವ ನದಿ ತನ್ನ ಹಾದಿ ಸೀಳಿಕೊಂಡು
ಹರಿವ ಪರಿ ನಿಲಿಸಲುಂಟೆ

ಎಲ್ಲವೂ ಎಲ್ಲರೂ ಅನಿರೀಕ್ಷಿತ ಯೋಜನೆ
ಯೋಚನೆ ಆಲೋಚನೆ ಬರೀ ಒಂದು ಲೆಕ್ಕದಾಟ

ಕೂಡಿಸಿ ಕಳೆದು ಗುಣಿಸಿ ಭಾಗಿಸುವ ಹುಮ್ಮಸ್ಸು
ಪರಿಣಾಮ ಅಗಣಿತ ಅಗೋಚರ
ಆದರೂ ನಿಲ್ಲದ ಲೆಕ್ಕಾಚಾರ
ಕಾಲನ ಹೊಡೆತಕೆ ಎಲ್ಲ ಉಲ್ಟಾ-ಪಲ್ಟಾ

ಮತ್ತದೇ ತಿರುವಿನ ತಿರುಗುಣಿಯ ಸುತ್ತ ತಿರುಗಾಟ
ಎಲ್ಲವೂ ಪೂರ್ವ ಲಿಖಿತ ದೇವನಾಟದಲಿ
ನಾ ಮಾಡಿದೆ ಹೀಗೆ ಮಾಡುವೆನೆಂಬ ಜಂಬದೂಟ

ಕಳೆದವರು ಕೂಡುತ್ತ , ಕೂಡಿದವರು ಕಳೆಯುತ್ತ
ಭಾಗವಾಗುವ ಹೊತ್ತು ನಾವೇ ಹೊರಗೆ ಬರೀ ಶೂನ್ಯ

ಆದರೂ ಹುಡುಕುತ್ತೇವೆ ಹೊಸ ಹಾದಿ ತಿರುವಿನೆದುರು
ತಳಮಳಿಸಿ ಎಲ್ಲಿಗೆ ಈ ದಾರಿ ಗೊತ್ತಿಲ್ಲ
ಆದರೂ ನಿಲ್ಲಲಾಗದು ಹೋಗಲೇಬೇಕು
ಸಾಗಲೇಬೇಕು ಕಾಲುಗಳು ಕಾಲನ
ಹೊಡೆತಕೆ ಸಿಕ್ಕು ದಣಿಯುವತನಕ
ಉಸಿರು ಹೆಸರಾಗಿ ಉಳಿಯುವತನಕ...

---ಸಿದ್ದು ಯಾಪಲಪರವಿ

Tuesday, March 21, 2017

ಆನೆ ಬಲ

ರಮ್ಯ ಪರಿಸರದ ಪಶ್ಚಿಮ ಘಟ್ಟದ ಮಡಿಲು

ಆನೆ ಬಲಕ್ಕಾಗಿ ಪ್ರಾರ್ಥಿಸೋಣ

ಮನಸ್ಸು ಪ್ರಫುಲ್ಲವಾಗಿದ್ದರೆ ಬದುಕು  ಅರ್ಥಪೂರ್ಣವೆನಿಸುತ್ತದೆ.

ನಮ್ಮ ಹಬ್ಬಗಳು , ಆಚರಣೆಗಳು  ಮನಸ್ಸು ಕಟ್ಟುವ ಕ್ರಿಯೆಯಾಗಬೇಕು.
ನಮ್ಮ ಪೂರ್ವಜರು ಆನೆ ಬಲ ಕೊಡು ಎಂದು ಪ್ರಾರ್ಥಿಸುತ್ತಿದ್ದರು.
ಹಾಗೆಂದರೇನು ?  ಯಾರಿಗೂ ಕೇಡು ಬಯಸದೇ ,
ಪಾಲಿಗೆ ಬಂದದ್ದು ಪಂಚಾಮೃತ ಎಂದು ನೆಮ್ಮದಿಯಿಂದ ಇರುತ್ತಿದ್ದರು.

ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಆತಂಕಗಳೂ ಹಂಚಿಹೋಗುತ್ತಿದ್ದವು.
ಈಗ ಒಂಟಿತನದ ಭಾರ ಹಾಗೂ generation gap ನಿಂದ  ತತ್ತರಿಸುತ್ತೇವೆ.

ಮತ್ತೆ ಹಿಂದಿನ ವ್ಯವಸ್ಥೆಗೆ ಮರಳುವ ಅನಿವಾರ್ಯತೆಯನ್ನು ನಮ್ಮ ಹಬ್ಬಗಳು , ಹಳ್ಳಿಗಳು  ನೆನಪಿಸುತ್ತವೆ.
ನನಗೀಗ ನನ್ನ ಬಾಲ್ಯವೇ ರಮ್ಯವೆನಿಸುತ್ತದೆ.

ಆದರೆ ಈಗ ಈ ಒಂಟಿ ಬದುಕಿನಲ್ಲಿ ಪರಿಸರವೇ ನಮ್ಮ ಸಂಗಾತಿ , ಏಕಾಂತದ ಧ್ಯಾನವೇ ನಮ್ಮ ಪ್ರಾಣ. ಬರಹವೇ ಸಂಗಾತಿ.
ಅವಕಾಶ ಸಿಕ್ಕಾಗ ಪರಿಸರದೊಂದಿಗೆ ಲೀನವಾಗಬೇಕು.

ಹಿರಿಯರ ಹಾಗೆ ಆ(ಆರೋಗ್ಯ)ನೆ(ನೆಮ್ಮದಿ) ಬಲಕ್ಕಾಗಿ ಪ್ರಾರ್ಥಿಸಬೇಕು .

---ಸಿದ್ದು ಯಾಪಲಪರವಿ.

Friday, March 17, 2017

ಸಂಬಂಧನ

ಸಂಬಂಧನ

ಸಂಬಂಧಗಳು ಎಂದರೆ ಹಸಿದ ನಾಯಿ
ಹಳಸಿದ ಅನ್ನದ ಕಥೆಯಲ್ಲ

ಬೇಕು ಬೇಡಗಳ ವ್ಯಥೆಯ ಕಥೆ
ಮನಸು ಭಾವನೆಗಳ ಮಧುರ ಮಿಲನ
ಕಡು ಕಷ್ಟಗಳ ಸಹಯೋಗ

ನೂಕು ನುಗ್ಗಲಿನ ಸಂತೆಯಲಿ ನಂಬಿ ಕೈ ಹಿಡಿದು
ಮುನ್ನಡೆಸುವ ಸಂಗಾತಿ

ಮೈಮನಗಳ ಪುಳಕಗೊಳಿಸಿ ಬದುಕ ಬವಣೆಗಳ
ಕೊಂಚ ದೂರ ದೂಡುವ ಸಾಂಗತ್ಯ

ಮೈ ಸೋಲುವ ಭ್ರಮೆಯಲ್ಲ ಮನ ಸೋಲುವ
ಅನನ್ನ ನಿರ್ಭಾವ ಲೋಕ

ತೆರೆದಷ್ಟೇ ಬಾಗಿಲು ಆಕಾಶ ನೋಡಲು ಇಲ್ಲ
ನೂಕು ನುಗ್ಗಲು

ಹೊಸ ಹುಮ್ಮಸ್ಸು ಉಳಿಯುವ ಭರವಸೆಯ
ಮಹಾ ಬೆಳಗು

ತಬ್ಬಿ ಬಿಗಿದಪ್ಪಿ ಮನಸು ಹಗುರಾಗಿಸುವ
ಜೀವಸೆಲೆ ಹೊಸದೊಂದು ನೆಲೆ

ಹಿಡಿದು ಬಿಡುವುದು ಬೇಡ  ಭಗವಂತನ
ದಯೆಯಲಿ ಸಿಕ್ಕ ವರ ಪ್ರಸಾದ

ದಕ್ಕಿದಷ್ಟು ದಕ್ಕಲಿ ಸಿಕ್ಕಷ್ಟು ಸಿಗಲಿ
ಧನಾತ್ಮಕ ಭಾವ ಬಂಧನ

ದೂರಾಗುವುದು ಬೇಡ ದೂರುವುದು ಬೇಡ
ಹೆಣ್ಣು-ಹೊನ್ನು-ಮಣ್ಣು ಋಣಾನುಬಂಧದ
ಹಂಗ ಹರಿಯುವುದು ಬೇಡ

ಒಲ್ಲೆನೆಂಬುದು ಇಲ್ಲದ ವೈರಾಗ್ಯ
ಒಲಿದುದು ಇರಲಿ ಬದುಕಲಿ ಎಂಬುದು
ಕಾಯ ಋಣ ಒಲಿದು ಒಲಿಸಿಕೊಂಡು
ಒಮ್ಮೆ ನಿಶ್ಚಿಂತರಾಗೋಣ.

---ಸಿದ್ದು ಯಾಪಲಪರವಿ

ಜೋಡಿ ಬೆಟ್ಟ

ಜೋಡಿ ಬೆಟ್ಟ

ಪರಿಸರದ ಮಡಿಲಲಿ ಬಾನೆತ್ತರಕೆ     
ಉಬ್ಬಿ ನಿಂತ ಜೋಡಿ ಬೆಟ್ಟಗಳ         
ಚಿತ್ತಾಕರ್ಷಣೆ ಅನನ್ಯ 
                 
ಬೀಸುವ ತಂಗಾಳಿಯ ಅಲೆಯಲಿ    
ಚಲಿಸುವ ಮೋಡಗಳ ಮರೆಯಲಿ   
ಮನವ ಕೆರಳಿಸುವ ಮೈ ಮಾಟ  
   
ಕಣ್ಣು ಕೀಳದೆ ದಿಟ್ಟಿಸಿ
ನೋಡುವ ಚಡಪಡಿಕೆ                      
ಮೇಲೇರಿ ಮನಸೋ
ಇಚ್ಛೆ ಹೊರಲಾಡಿ ತೇಲುವಾಸೆ        
      
ನಿಧಾನದಿ ಅಂಬೆಗಾಲಿಕ್ಕುತ
ನೆಕ್ಕುತ ಸುವಾಸನೆಯ ಮಲ್ಲುವಾಸೆ         
 
ಅಲ್ಲಿ ತುತ್ತ ತುದಿಯಲಿ ಕೊಬ್ಬಿ
ನಿಂತ ದ್ರಾಕ್ಷಿ ಹಣ್ಣ ತುಟಿಯಿಂದ       
ಮೃದುವಾಗಿ ಚೀಪಿ ಹೀರುವಾಸೆ      
                                           

ಅಂಗೈಯಲಿ ಬಿಗಿ ಹಿಡಿದು ಒಮ್ಮೆ  
ಉಸಿರು ಬಿಗಿ ಹಿಡಿದು ಕುಣಿದು
ಕುಪ್ಪಳಿಸುವಾಸೆ.

---ಸಿದ್ದು ಯಾಪಲಪರವಿ

Wednesday, March 15, 2017

ನಿಶ್ಚಿಂತನಾಗು

ನಿಶ್ಚಿಂತನಾಗು

ಹೇಳದೇ ಕೇಳದೇ ಒಮ್ಮೇಲೆ ನೀ
ಮರೆಯಾದೆ
ಚಿಂತೆ ಬೇಡ ಬೇಕು ಬೇಡಗಳ ಬಯಕೆ
ನನ್ನದಿರಬಹುದು ಆದರೆ ಬರುವುದು
ನಿನಗೆ ಸೇರಿದ್ದು

ಋಣಾನುಬಂಧದ ಬಂಧನದಲಿ ಸಿಕ್ಕವರು
ಕಳೆದು ಹೋಗುತ್ತಾರೆ ಕಳೆದವರು ಸಿಕ್ಕು
ಬಿಡುತ್ತಾರೆ

ಈ ಹಿಡಿಯುವ ಬಿಡುವ ಭರದ ಭರವಸೆಯಲಿ
ಕಳೆದು ಹೋಗುವ ಅಪಾಯದ ಅರಿವಿನೆಚ್ಚರ
ಇರಲಿ ನಾ ಕಳೆದು ಹೋಗುವ ಮುನ್ನ

ನೋಡಿ ನಕ್ಕು ಮನಸೋ ಇಚ್ಛೆ ಆಟವಾಡಿ
ಸೋತಂತೆ ನಾಟಕವಾಡಿ ಕೈ ಬೀಸಿ ಕರೆದು
ಆಸೆ ತೋರಿಸಿ ಓಡಿ ಹೋದವರ ಬೆನ್ನು
ಬೀಳಲಾದೀತೆ ?

ಕಳೆಯದೇ ಕೊಳೆಯದೇ ಕೊಳೆತು ಹೋಗದೇ
ಮನಸು ಹಗುರಾಗಿ ತಿಳಿಯಾಗಿ ಮನದ ತೊಳೆಯ
ಬಿಡಿಸಿ ನಿರುಮ್ಮಳಾಗಿ ನಿಶ್ಚಿಂತನಾಗಿ ಬಿಡುವೆ
ಬಿಡದ ಜಂಜಡವ ಹಂಗ ಹರಿದು...

---ಸಿದ್ದು ಯಾಪಲಪರವಿ

Thursday, March 9, 2017

ದೇಹ ಸವಾರಿ

ಕೆಂದುಟಿಗಳು ದೇಹ ಸವಾರಿ ಮಾಡಿ
ಉಗುರುಗಳು ಬೆನ್ನ ಮೇಲೆ ಹರಿದಾಡಿ
ಮೈ ರೋಮಗಳಿಗೆ ಬಿಸಿಯುಸಿರು ತಾಗಿ
ಎದೆಯಲರಳಿದ ತೊಟ್ಟುಗಳು  ಎಲ್ಲಂದರಲಿ ಕಚಗುಳಿ ಇಟ್ಟು
ನನ್ನ ಇನ್ನು ಕೆಣಕದಿರಲಿ

ಸಹಿಸುವುದು ಸಣ್ಣ ಮಾತಲ್ಲ ಇದು
ಸ್ವರ್ಗದಾಲಿಂಗನದ ಏದುಸಿರು
ಬೆತ್ತಲೆ ಹೊಳಪು ಕತ್ತಲೆಯ ರಂಗನು
ದೂರ ದೂಡಿ ಬರಸೆಳೆದು ಬಿಗಿದಪ್ಪಿದ
ಪರಿಗೆ ತತ್ತರಿಸಿದೆ ಜೀವ
ತಾಳಲಾರೆ ಹಿತಕರ ನೋವ

ನಿನ್ನ ಅಂಗೈ ಹಿಡಿ ಮುಷ್ಟಿಗೆ ಸಿಕ್ಕ
ನನ್ನತನದ ಹಾರಾಟ ಅನನ್ಯ

ಬೇಗ ಸೇರಿಸಿಕೋ ನಿನ್ನ ಆಳದ
ಒಳಗೆ ದಹಿಸಿ ನರ್ತಿಸಲಿ ಆಟ
ಮುಗಿದು ಹಿಂಡಿ ಹಿಪ್ಪಿ ಆಗುವವರೆಗೆ

ನೀನೊಂದು ಅನರ್ಘ್ಯ ಬಿಂದು
ಎಂದೂ ಅಗಲದ ಬಂಧು

ಮೈಮನಗಳ ಬೆತ್ತಲಾಗಿಸಿ ಸೋತು
ಶರಣಾಗಿ ಅಂಗಾತ ಮಲಗಿ
ಅಂಗಾಂಗ ಅರ್ಪಿಸಿಕೊಳುವುದು ಸಂತೆಯ ಸುದ್ದಿಯಲ್ಲ
ಸಣ್ಣ ಮಾತೂ ಅಲ್ಲ

ನನ್ನದೆಯ ಬಗೆದು ಅಡಗಿ ಕುಳಿತಿದ್ದ
ನೂರು ಭಾವಗಳ ತೆರೆದಿಟ್ಟ
ಅಮೃತ ಘಳಿಗೆ

ಬಾ ಸೇರಿಕೊಂಡು ಒಂದಾಗಿ ಮಿಂದು ಮಿಲನ ಮಹೋತ್ಸವದಾಚರಣೆಯ
ಸಂಭ್ರಮವ ಸವಿಯೋಣ

Monday, March 6, 2017

ನಮ್ಮ ಕನಕ

ಕುಲದ ಮೂಲ ಅರಿತ ಧೀರ ನಮ್ಮ ಕನಕ

ಮೈತುಂಬಾ ಆದ ಗಾಯ ಮಾಯಬಹುದು
ಆದರೆ ಎದೆಯಾಳದ ನೋವ ಮರೆಯಲಾಗದು
ಎಂಬ ದಿಟ ಸತ್ಯವ ಲೋಕಕೆ ಅರುಹಿದ
ದಾಸ ಶ್ರೇಷ್ಠ

ಮೇಲು-ಕೀಳು ಮಡಿ-ಮೈಲಿಗೆಗಳ ಜಾತಿ ಸೂತಕವ
ಶಬ್ದಗಳಲಿ ನಿಶಬ್ದಗೊಳಿಸಿ ಪಾಡಿ ನಲಿದ ಸಹನಶೀಲ
ಅನ್ನ ದೇವೋಭವ ಎಂದು ಬೀಗುತ ಶೂದ್ರರ ಹೊಟ್ಟೆಯ
ಬೆನ್ನಿಗಂಟಿಸಿ ಮೋಜು ನೋಡಿದ ಡೊಳ್ಳು ಹೊಟ್ಟೆಯ
ಧೂರ್ತರಿಗೆ ರಾಗಿ ಪಾಠ ಹಾಡಿ ಹೊಗಳಿ ಬೆಚ್ಚಿ ಬೀಳಿಸಿದ
ಮಹಾ ಜ್ಞಾನಿ

ಕುಲದ ನೆಲೆಯನರಿಯದೆ ಕುಣಿದು ಕುಪ್ಪಳಿಸಿ ಕೇಕೆ ಹಾಕಿ
ದೂರ ದೂಡಿದ ದುರುಳರನು ಜ್ಞಾನಾಸ್ತ್ರವ ಬೀಸಿ ಮಗ್ಗಲು
ಮುರಿದ ಯೋಧ

ಪಾಪ-ಪುಣ್ಯ ಸ್ವರ್ಗ-ನರಕಗಳ ಭ್ರಮೆ ಹುಟ್ಟಿಸಿ ಪಾಪದಲಿ
ನರಳುವ ಹುನ್ನಾರವಳಿಸಿ ಧರೆಯಲಿ ನೆಮ್ಮದಿ ತೋರಿದ
ಜಾದೂಗಾರ

ಅಂಗೈಯಲಿ ಅರಮನೆ ತೋರಿಸಿ ರಾಜ
ಮಹಾರಾಜರುಗಳಿಗೆ ಮಳ್ಳು ಹಿಡಿಸಿ ಬಡವರ ಕಳ್ಳು
ಹಿಂಡಿದ ಮಳ್ಳರ ಮಂಗನಾಟವ ಬೆತ್ತಲಾಗಿಸಿದ
ಮಂತ್ರ ದಂಡ

ಕುಲದ ಕಸವ ಬೇರು ಸಹಿತ ಕಿತ್ತಿ ಹರಗಿ ಮನದ
ಮಣ್ಣ ಹದಗೊಳಿಸಿದ
ಜಾಣ ರೈತ

ನಮಿಸುವೆ ನಿನಗೆ ನಿನ್ನ ಕೀರ್ತನವ ಹಾಡಿ-ಪಾಡಿ
ಕುಣಿದು-ನಲಿದು ಮನದ ಕೊಳಕ ಕಳೆಯಲು...

----ಸಿದ್ದು ಯಾಪಲಪರವಿ

Sunday, March 5, 2017

ಮಹಿಳಾ ದಿನಾಚರಣೆ

ತಾಯಾಗಿ ಹಡೆದು ಬದುಕಿನ
ಸೂತಕವ ಕಳೆದೆ 
    
ಸೋದರಿಯಾಗಿ ಒಡನಾಡಿ
ಗೆಳೆತನದ ಹಂಗು ಹರಿದೆ        

ಗೆಳತಿಯಾಗಿ ಕಾಡಿ        
ಭಾವನೆಗಳ ಅರಳಿಸಿದೆ        

ಸಂಗಾತಿಯಾಗಿ ಬಾಳ ಬೆಳಗಿ  
ಸಂತೃಪ್ತಿಯ ಸಂಭ್ರಮಿಸಿದೆ        
     
ಮಗಳಾಗಿ ಕರುಳಧಾರೆ
ಹರಿಸಿದೆ       

ಮತ್ತದೇ ಬಂಧನ
ಮಾಯಜಾಲದ  ಅನುಬಂಧ

ಕನಸ ಕಟ್ಟಿ ಕವಿತೆಯಾಗಿ 
ಹಾಡಲು ಶಬ್ದಗಳಲಿ ಜೊತೆಯಾದೆ    

ಕೊರಳ ರಾಗಕೆ ಶೃತಿ ಲಯವಾದೆ     
ಕನಸಲಿ ಬೆಳಗುತ ಮುಪ್ಪಿನ ಹಂಗು 
ದೂರಾಗಿಸುವ ಚೇತನವಾದೆ            

ತಾಯಾಗಿ ಸತಿಯಾಗಿ ಮಗಳಾಗಿ
ಸಖಿಯಾಗಿ ಹತ್ತಾರು ರೂಪದಲಿ

ನನ್ನ ಕಾಡಿ ಕಲಕುತ ಮನದ ಭಾವಗಳ
ಝೇಂಕರಿಸುತ                

ಒಳಗೊಳಗೇ ಹೂಂಕರಿಸುತ            
ಸರ್ವ ವ್ಯಾಪಕವಾದೆ                       

ಹುಸಿ ಮುನಿಸು ಪಿಸು ಮಾತು 
ಬಿಸಿಯಪ್ಪುಗೆಯ ಕಚಗುಳಿಯಲಿ
ಕರಗದ ಕ್ಷಣಗಳಿಲ್ಲ                          

ಈಗಲೂ ಅಷ್ಟೇ ಹಲವು
ರೂಪಗಳಲಿ ಅವತರಿಸಿ ಕಾಡುವ
ನೆಲಮುಗಿಲು           
                  
ಕಣ್ಣ ಮಿಂಚು ಹೊಳೆವ ರಂಗು          
ಎನ್ನ ಮಿತಿಯ ಹಂಗು          
          
ಬೇಡುವೆ ಕಾಡುವೆ ಸೋತು
ಗೆಲ್ಲುವೆ  ಅರಳುವೆ ಕೆರಳುವೆ

ಕರಗುವೆ ನಿನ್ನ ಮಡಿಲಲಿ
ಪುಟ್ಟ ಮುಗ್ಧ ಮಗುವಾಗಿ...                             
ನಿತ್ಯ ನೂತನವಾಗಿ

---ಸಿದ್ದು ಯಾಪಲಪರವಿ

ಡಾ.ಬಿ.ಎಫ್.ದಂಡಿನ

ಶಿಕ್ಷಣ ಸಂತ ಕನಕದಾಸ ಶಿಕ್ಷಣ ಸಮಿತಿಯ ರೂವಾರಿ ಡಾ.ಬಿ.ಎಫ್.ದಂಡಿನ

ದಾರಿ ಇರದ ಊರಲಿ ಉದಯಿಸಿದರೂ ಸಾವಿರಾರು ಜನರಿಗೆ ಮಹಾ ಮಾರ್ಗ ನಿರ್ಮಿಸಿದ ಅಕ್ಷರ ಅರಿವಿನ ಸಂತ.

ಉನ್ನತ ವ್ಯಾಸಂಗ ಉದಾತ್ತ ವಿಚಾರ ಮಂಥನಗಳಲಿ ಬಿತ್ತಿದ    ' ಕನಕದಾಸ ಶಿಕ್ಷಣ ಸಂಸ್ಥೆ ' ಯನು ಹೆಮ್ಮರವಾಗಿ ಬೆಳೆಸಿದ ಕಾಯಕ ಯೋಗಿ.
ಪ್ರತಿಭಾ ಸಂಪನ್ನ ಸರಸ್ವತಿ ಪುತ್ರರ ತವರು.

ಸಾತ್ವಿಕ ಹಟ , ಅವಿರತ ಹೋರಾಟದ ಪ್ರತಿಫಲ , ಕನ್ನಡದ ದೇಸಿಯ ಕಂಪಿನ ಇಂಪಲಿ ಅರಳಿದ ಮನ.

ಕಡು-ಕಷ್ಟಗಳ ಉಂಡು ಬೆಂದು ಸುಖವ ಹಂಚಿದ ಧೀಮಂತ.
ಆರೋಗ್ಯ ಭಾಗ್ಯಶಾಲಿ , ಸರಸ್ವತಿಯ ಹಿರಿಯ ಪುತ್ರ , ಜ್ಞಾನದಾಗರ ಕನಸಿನ ಸಾಗರ.

ಹಳ್ಳಿ-ಹೈದರ , ದೀನ-ದಲಿತ-ಬಡ ಮಕ್ಕಳ ಆಶಾಕಿರಣ.
ಅರಸಿ ಬಂದ ಬಿರುದು ಬಾವಲಿಗಳ ಧರಿಸಿದರೂ ಮಾಯವಾಗದ ಸರಳ ಬದುಕು.

ಕಟ್ಟಿರಿ ನೂರಾರು ಸಂಸ್ಥೆಗಳ , ಜಗಕೆ ಸಾರಿರಿ ಕನಕ ಸಿರಿಯ ವಿಶ್ವ ವಿದ್ಯಾಲಯವ.

ನನಸಾಗಲಿ ಕಂಡ ಕನಸು ,ಈಡೇರಲಿ ಮನದ ನನಸು.

---ಸಿದ್ದು ಯಾಪಲಪರವಿ

ಮುಂಜಾವಿನ ಹನಿಗಳು

ಮುಂಜಾವಿನ ಹನಿಗಳು

1

ಆಟ ಆಡಿ ತಮಾಷೆ ಮಾಡಿ
ಮರ ಹತ್ತಿಸಿರಬಹುದೆಂಬ
ಭ್ರಮೆ ಬೇಡ
ನಂಬಿಕೆ ನನ್ನ ದೌರ್ಬಲ್ಯ
ಪ್ರೀತಿ ನನ್ನ ಶಕ್ತಿ
ಮೋಜಿನಾಟದಲಿಯೂ
ಅಂತಿಮವಾಗಿ ಗೆಲ್ಲುವುದು
ಪ್ರೀತಿ.

2

ಮುಗುಳು ನಗು ನೀನಿತ್ತ
ಭರವಸೆಯ ಮಾತುಗಳು
ಭರದಲಿ ನಾ ಕಳೆದದ್ದು ನಿಜ
ಆದರೆ ಈಗ ನಾ ಬಿಡುವ
ನಿಟ್ಟುಸರಲಿ ನೋವಿರಬಹುದು
ದ್ವೇಶದ ನಂಜಿಲ್ಲ

3

ಫೇಸ್ಬುಕ್ಕಿನಲಿ ಭೇಟಿ ಆಗಿ
ವಾಟ್ಸ್ಯಾಪಿನಲಿ ಕಳೆದು
ಹೋಗುವ ಅಸಂಖ್ಯ
ಅಸಮಂಜಸ ಸಂಗಾತಿ
ನಾನಲ್ಲ
ಭಾವನೆಗಳ ಎದೆ ಬಿರಿದು
ಒಲವಧಾರೆ ಹರಿಸುವ
ಭಾವ ಜೀವಿ

4

ಯಾರಿಗೂ ಹೇಳದ ಸಾವಿರದ
ಭಾವನೆಗಳ ಓತ ಪ್ರೋತವಾಗಿ
ಹರಿಬಿಟ್ಟು ಹಗುರಾಗಿ
ನೂರಾರು ಮನಸುಗಳ
ತಲ್ಲಣಗಳಿಗೆ ಮೂಕ ಸಾಕ್ಷಿ

5

ಮನಸೊಂದು ಅರಿವಿನ ಆಗರ
ಮಹಾ ಬಯಲು
ಅಳಿಯದ ಸೃತಿ ಸಹಿಸುವ ಲಯ
ಮರೆಯದ ಮಹಾ ಮಂಥನ
ಇಲ್ಲಿ ಬಿತ್ತಿ ಬೆಳೆದುದಕೆ
ಇಲ್ಲವೇ ಇಲ್ಲ ವಿನಾಶ

---ಸಿದ್ದು ಯಾಪಲಪರವಿ

ಹನಿಗಳು

ಹನಿಗಳು

1

ಈ 38 ರ ತಾಪ
ಮಾನದ ಭಾರವ
ಸಹಿಸಿಕೊಳುವೆ ಮುಂದೆ
ಸುರಿವ ಮುಂಗಾರ
ಘಮಲಿನ ಸುವಾಸನೆಗಾಗಿ

2

ನಾನಂತೂ ಕರೆಯಲಾರೆ
ಮೌನರಾಗ ಒಂದೇ ಸಾಕು
ನಿನ್ನ ಬಿಗುಮಾನ ಬಿಡಿಸಲು

3

ಆಡಿದ ಆಟ ತೋರಿದ
ಮಾಟಕೆ ಮರುಳಾಗಿ
ಇರಬಹುದು ನನ್ನತನ
ಕಳೆದುಕೊಳ್ಳುವಷ್ಟಂತೂ
ಅಲ್ಲ !

4

ಮನದ ಚಲ್ಲಾಟವೊಂದೇ
ಸಾಕು ಮಧುರ ವೀಣೆಯ
ಮೀಟಲು
ದೇಹರಾಗ ಗೌಣ ಎಲ್ಲ
ಅರಳಿದ ಮೇಲೆ

5

ನಿನಗೆ ಸೋತಿದ್ದನ್ನು
ಹೇಳಿಕೊಂಡಿದ್ದು
ತಪ್ಪಿರಬಹುದು ನೀ
ಸೋತದ್ದೂ ಅಷ್ಟೇ
ನಿಜ ಹೇಳಿ
ಕೊಳದಿದ್ದರೂ

---ಸಿದ್ದು ಯಾಪಲಪರವಿ

Friday, March 3, 2017

ಮಾಯದಾಟ

ಹೆಣ್ಣು-ಹೊನ್ನು-ಮಣ್ಣು ಮಾಯದಾಟದೊಳು
ಆಡಿಸುವ ಬೊಂಬೆ ನೀನಲ್ಲ ಮನವೇ

ಹೆಣ್ಣಿನಾಸೆ ಬೆರಗ ನಂಬಿ
ಶ್ವಾನ ತೆರದಿ ಬೆಂಬತ್ತಿ ಏದುಸಿರ ಬಿಡದಿರು

ಹೊನ್ನ ಸಿರಿಯ ಮೆರುಗ ಹೊಳಪ ನಂಬಿ
ಬಣ್ಣಗೇಡಿ ಬವಣೆಗಳಲಿ ಬಸವಳಿಯದಿರು

ಮಣ್ಣಿಗಾಗಿ ಬಿಡದ ವ್ಯಾಜ್ಯ ವ್ಯಾಧಿ ಬೆಂಬಿಡದ
ಶನಿ ಮಣ್ಣು ಮುಕ್ಕೀಸಿತು ಬೇಗ

ಬೇಕು ಬೇಡಗಳ ಸೀಮೆ ಎಳೆದು ಮನದ ಚಪಲವ
ಕಟ್ಟಿ ಹಾಕಿ ಜಗದ ಲೀಲೆಯ ಸೊಗಸ ಹೀರು

ಬೇಕು ಬೇಕೆಂಬ ಮನದ ಹಟಕೆ ಆಸೆಯ ಚಪಲ
ಬೇಡ ಇರುವದಷ್ಟೇ ಸಾಕು ಇಹದ ಬೆಳಕಲಿ

ಆಸೆ ತೋರಿ ಆಟ  ಆಡಿ ಮೋಜು ಮಾಡಿ ಮನದ
ಮಡಿಯ ಕೆಡಿಸುವ ಮಾಯೆ ಇರಲಿ ದೂರ

ಮನದ ಮುಂದಣ ಆಸೆ ನೆನಪಿಸಲಿ ಹಿಂದೆ
ಕಳೆದು ಹೋದ ಕರಾಳ ಕಥೆಯ ವ್ಯಥೆಯ 

ಇರಲಿ ಇರುವದ  ಸ್ವೀಕರಿಸುವ ತೆರದಿ ಬಾಳು ಮುಂದೆ
ನಾಳೆ ಎಂಬುವದಿದೆ ಎಂಬುದೊಂದು ಬರೀ ಭರವಸೆ.
---ಸಿದ್ದು ಯಾಪಲಪರವಿ