Monday, January 27, 2014

ನೆಲದ ಮರೆಯ ನಿಧಾನ


ಹುಡುಕಾಟ ಹುಡುಕಾಟ ಕಳೆದು
ಪಡೆದುಕೊಳ್ಳುವ ತಡಕಾಟ
ಅಗೆದಂತೆಲ್ಲ ನೆಗೆಯುವ ನಿಧಿಗಾಗಿ
ಇಲ್ಲಿರುವವರದೆಲ್ಲ ಅವರಷ್ಟಕ್ಕೆ ಅವರೇ
ಕೂಡಿಸಿ-ಕಳೆವ ಲೆಕ್ಕದಾಟ
ನಾನೊಂದ
ಬಿಂದು
ಗರಗರನೆ ತಿರುತಿರುಗಿ ಅಲೆ
ದಂತೆ ಎಲ್ಲಾ ತಲೆ ತುಂಬ ಶೂನ್ಯ
ಯಾರನೂ ಅಳೆಯುವದು
ಹಳಿಯುವುದು ಸಲ್ಲ
ಜಗದ ವ್ಯಾಪಾರದಲಿ
ಈ ಜಗ ಜಾತ್ರೆಯಲಿ
ದೇವರ ತೇರನೆಳೆಯುವ ಹಗ್ಗದಾಟದ
ಮೂಕ ಸ್ಪರ್ಧೆಯಲಿ ಸಾಗುತ್ತಿಲ್ಲ ತೇರು
ಜಾರುತಿದೆ ಕೈ - ಹಗ್ಗ
ಮನದ ತುಂಬೆಲ್ಲಾ ಹಿಗ್ಗಾ-ಮುಗ್ಗ
ಭಾವನೆಗಳ ಕಗ್ಗ
ಬಳಸಿ ಬಿಸಾಡಿದವರು ಹುಡುಕುತ್ತಾರೆ
ನನ್ನ ಕೆಳಗೆ
ತಮ್ಮ ಕೆಳಗೆ ಅಪ್ಪಚ್ಚಿಯಾಗಿಲ್ಲ
ಇನ್ನೂ ಯಾಕೆ ಹೀಗೆ ಎಂದು?
ಅಂದು
ಹೇಳಿದವರೆಲ್ಲರ ಕಥೆ ಕೇಳಿ ನಂಬಿದ್ದೇನೆ.
ಬಿಕ್ಕಿದ್ದೇನೆ ಅವರ ದು:ಖಕೆ
ಹಳ್ಳಕೆ ಬಿದ್ದು ಅವರಿವರು ನಕ್ಕಾಗ.
ಇಂದು
ಅರೆಪ್ರಜ್ಞೆಯಲಿ ಎಚ್ಚರಾಗಿದ್ದೇನೆ 

ಹೇಳುವವರ ಕಥೆ ಕೇಳುತ್ತೇನೆ

ಅಂದಿನಂತೆ ನಂಬಿ ನಟಿಸುತ್ತೇನೆ - ಪೆದ್ದನಾನಾಗದೆ
ಇದ್ದೂ ಇರುವದ ಕಂಡು
ಭಾರಿ ಕಳ್ಳ ದರೋಡೆಕೋರ ಕದಿಯುತ್ತೇನೆ
ಅವರಿವರ ಭಾವನೆಗಳ ಅಂದುಕೊಳ್ಳುತ್ತಾರೆ
ನಾನು ಅಡಗಿಸಿಟ್ಟ ಗಂಟಿಗಾಗಿ
ಹಲವರು ಹಲುಬುತ್ತಾರೆ,
ಬೇಯದೆ ಕುದಿಯುತ್ತಾರೆ,
ನಿಂದಿಸುತ್ತಾರೆ, ಅವಿವೇಕಿಯೆಂದು ಜರಿಯುತ್ತಾರೆ
ಬೆನ್ನ ಹಿಂದೆ.
ಥಟ್ಟನೆ
ಎದುರಿಗೆ ಕಂಡರೆ ಅದೇ ನಗು, ನಗುವಿನಂತೆ
ಮಾತು, ಅದೇ ಪ್ರೀತಿ.
ನಂಬಿದಂತೆ ನಾ ನಟಿಸಿದರೆ
ಆನೆ ಸೊಂಡಿಯಲಿ ಇರುವೆ.
ಹಗಲ ತುಂಬೆಲ್ಲ ಬಣ್ಣ ಬಣ್ಣದ ಕನಸುಗಳು
ರಾತ್ರಿ ಜಾರುತಿದೆ ಬಣ್ಣ ಕಳೆದು
ಕಪ್ಪು ಬಿಳುಪಿನ ಚಿತ್ತಾರ
ಅಂತೆಯೇ ಹಗಲಿದ್ದ ಸಂಭ್ರಮ ರಾತ್ರಿ
ಮಂಗಮಾಯ........
ಜೀವ ಪಯಣದ ಜಾಲದಲಿ ಸಿಕ್ಕೂ ಸಿಗದಂತೆ
ಇದ್ದೂ ಇರದಂತೆ ಮಾಡಿಯೂ ಮಾಡದಂತೆ
ನೋಡಿಯೂ ನೋಡದಂತೆ
ಮಾಡುವ ಮಾಟದಲಿ ನಾನಿರದಂತೆ ಇರಲೆತ್ನಿಸುತ
ಜೀವದಾದಿಯಲಿ ಹುಡುಕುತ್ತೇನೆ.
ಹುಡುಕುತ್ತೇನೆ ಕಂಗಾಲಾಗದೆ
ನಿಧಾನದಿ ನಿಧಾನದಿ ಎಲ್ಲೋ
ಎಲ್ಲೆಲ್ಲೋ ನನಗಾಗಿ ಅಡಗಿರುವ ನಿಧಿಗಾಗಿ
ಕಬ್ಬಲಡಗಿರುವ ಬೆಲ್ಲದಂತೆ ನಾ
ನೆಲದ ಮರೆಯ ನಿಧಾನದಂತೆ.

ನಾನೊಂದ ನದಿ


ಮೈಮನಗಳ ಕಾತರಿಸುವ
ಜೀವಸೆಲೆ
ಬಳಸಿದಷ್ಟು ಬಳಕೆಯಾಗುವ
ನಿತ್ಯ ಶ್ಯಾಮಲೆ
ಬಾನು-ಭುವಿ
ಬೆಳ್ಳಿ-ಚುಕ್ಕೆಗಳ ಮಿಲನೋತ್ಸವದ ನಿತ್ಯ ಸಾಕ್ಷಿ
ನಿಂತಲ್ಲೆ ನಿಲ್ಲಲಾರದೆ ಹರಿಯುವ
ಜಂಗಮ ಶೀಲೆ
ಹಕ್ಕಿಗಳು ಗೂಡು ಬಿಚ್ಚುವ ಮುನ್ನ
ಲಲನೆಯರ ಬಿಂದಿಗೆಯ ಬಂದಿಯಾಗಿ
ದಾಹ ತಣಿಸುವ ನಿರ್ಮಲ ನೀರು
ಹರಿದ ಬೆಳಕಿಗೆ ತೆರೆವ ಜಗಕೆ
ಎಮ್ಮೆ-ಕೋಣಗಳ ಮೈದಾಳಿಗೆ
ಚಲ್ಲಾಟವಾಡುವೆ
ನನ್ನ ಎದೆ ಬಗೆದು ಕ್ಯಾಕರಿಸಿ-ಹೂಂಕರಿಸಿ
ಮೈಮಾಟದ ನನ್ನಲಿ ಅದ್ದಿ ತಿಕ್ಕಿದರೂ
ಪುಳಕಗೊಳ್ಳದ ನಿರ್ಲಿಪ್ತ ನಾ
ಮಾನವಂತರು ಬಟ್ಟಬಯಲಲಿ
ಬಿಚ್ಚಿಡದ ಬಯಕೆಯನು
ನನ್ನೊಳು ಧುಮುಕಿ
ಬಿಡುತ್ತಾರೆ ಖುಷಿಯ ನಿಟ್ಟುಸಿರು
ನನ್ನೊಳಗೆ ಹೇಸಿ ಮಾಡಿದವರು
ನನ್ನನೆ ಸೇವಿಸಿ ಪೂಜಿಸಿ-ನಮಿಸಿ
ಹವಣಿಸುವರು
ತಾವೆಂದು ಪಡೆಯದ ಮೋಕ್ಷಕೆ
ಹಿಂಸೆ-ಅನಾಚಾರಗಳ ಮೂಕ ಸಾಕ್ಷಿಗೆ
ನಿಸ್ತೇಜನಾಗದೇ;
ದಟ್ಟ ತಾತ್ರಿಯಲಿ ಮೌನದ
ಸುಳಿಯಲಿ ಶಾಂತವಾಗಿ ಹರಿಯುತ್ತಾ
ಹರವುತ್ತಾ ಸಾಗಿದ್ದೇನೆ
ಮೈಥುನದಿ ಕೊಳೆಯಾಗಿಸಿದವರ ಹಳಿಯದೆ
ಹಳವಂಡದಿ ಹಳಹಳಿಸದೆ
ಬೊಗಸೆಯಲಿ ನನ್ನ ಪಡೆದು
ಧನ್ಯತೆಯಲಿ ಬಂಧಿಸಿ
ಬಿಂದಿಗೆಯಲಿ ಬಂಧಿಸಿ ಪೂಜಿಸುವ ನಾರಿ
ನಿತ್ಯ ನನ್ನೊಳು ನನ್ನಂತೆ ಸಂಭ್ರಮದಿ
ನನ್ನ ಮೈ ಮನಗಳಲಿ ಸುಳಿಯುತ್ತಾರೆ
ಅದಕ್ಕೆ ನಾ ಹರಿಯುತ್ತೇನೆ, ನಲಿಯುತ್ತೇನೆ
ನಿರಾತಂಕದಿ
ಚಲಿಸುತ್ತೇನೆ ನನ್ನದೇ ಹಾದಿ ಕಂಡು

ನಾನು ಮತ್ತು ಪಾಲೀಸು ಹುಡುಗ


ಅಂಗಲಾಚಿದ ರಸ್ತೆ ಬದಿಯಲಿ
ಹುಡುಗ,ಬೂಟು ಪಾಲೀಸು
ಮಾಡಿಸೆಂದು
ಚೌಕಾಶಿ ಶುರು ಆಯ್ತು
ನಾಕಾಣೆ, ಎಂಟಾಣೆಯಿಂದ ರೂಪಾಯಿಗೆ
ಥಳ-ಥಳ ಹೊಳೆದರೂ ಬೂಟು
ಕೊಟ್ಟು ಹನ್ನೆರಡಾಣೆ,
ಚೆನ್ನಾಗಿಲ್ಲ ನಿನ್ನ ಪಾಲೀಸೆಂದೆ.
ಮಾತು ಕೊಟ್ಟ ಹಣಕ್ಕಾಗಿ ಹುಡುಗ ಬೇಡಿದರೆ
ಮುಂದೆ ಹೋಗೆಂದೆ
ಹೊಳೆಯುವ ಬೂಟು ಅಣಕಿಸಿದ ನಡಿಗೆಯಲಿ
ಛಲ ಹೊತ್ತ ಹುಡುಗನಿಗಾಗಿ
ಕರುಳು ಮಿಡಿಯಲಿಲ್ಲ
ನಾಚಿಕೆ ಎನಿಸಲಿಲ್ಲ.
ಬಂದೆ ಮುಂದೆ ಗಣೇಶಗುಡಿಗೆ
ಕಂಡೆ ಎಲ್ಲದಕೂ
ಚೌಕಾಶಿಯಿಲ್ಲದ ರೇಟಿನ ಬೋರ್ಡು
ಕಾಯಿ-ಕರ್ಪೂರಕೆ
ಅಡ್ಡ ಉದ್ದ ಬೀಳಲಿಕೆ
ರೇಟೇ ರೇಟು ಉಕ್ಕಿತು ಭಕ್ತಿ ಉಬ್ಬಿದ
ಪೂಜಾರಿಯ ಹೊಟ್ಟೆ ಕಂಡು
ಧನ್ಯನಾದೆ ಹಣ ಹಾಕಿ
ಉರಿಯುವ ತಟ್ಟೆಗೆ
ಭಕ್ತಿಭಾವದಿ ತೃಪ್ತಿಯಾಗಲಿಲ್ಲ
ಆಶೀರ್ವಾದವನು ತೋರಲಿಲ್ಲ,
ದುರಾಸೆ ಪೂಜಾರಿಗೆ ಸಾಕೆನಿಸದ
ಚಿಲ್ಲರೆ ಕಂಡು
ರಸ್ತೆಗೆ ಬಂದೆ,
ಪಾಲೀಸು ಡಬ್ಬ ಹಿಡಿದ ಪ್ರಾಮಾಣಿಕ ಹುಡುಗ,
ಉರಿಯುವ ತಟ್ಟೆ ಹಿಡಿದ ಪೂಜಾರಿ
ಅಣಕಿಸಿದಂತೆ ಭ್ರಮಿಸಿ

ಮಣ್ಣಿನ ಹಾಡು

ತಂಗಾಳಿ ಬೀಸುವದಿಲ್ಲ
ಕೋಗಿಲೆ ಹಾಡುವುದಿಲ್ಲ
ಮಾಮರಗಳ ಎಲೆಗಳ ನಾದ
ಝೇಂಕರಿಸುವುದಿಲ್ಲ
ದೇಶಕೆಲ್ಲ ಮೂರು ಕಾಲ
ನಮ್ಮೂರಿಗೆ ಎರಡೇ ಕಾಲ
ಸದಾ ಬೇಸಿಗೆ!
ಉರಿಯುವ ಬೇಸಿಗೆ!!
ಥಟ್ಟನೆ ಮಳೆಹನಿ ಬೀಳುವುದಿಲ್ಲ
ಸದಾ ಹರಿಯುವ ನದಿ ನಿಲ್ಲುವದಿಲ್ಲ
ಮೇಲೆಲ್ಲ ಸುಡುವ ಸೂರ್ಯ
ಕೆಳಗೆ ಜುಳು ಜುಳು ಹರಿವ ಗಂಗೆ.
ಗಟ್ಟಿಯಾಗಿಸಿದೆ ಮೈಮನಗಳ
ಹುಡಿಧೂಳು-ಉರಿಬಿಸಿಲು
ಮೈ ಸುಟ್ಟರೂ ಬೆವರು
ಧಾರಾಕಾರ ಸುರಿದರೂ
ಹಗಲಿರುಳು ಗದ್ದೆ-ಮಿಲ್ಲುಗಳಲಿ
ದುಡಿಯುವ ಧೀರರು
ನಮ್ಮೂರ ವೀರರು.
ಬರಿಶಾಲೆ ಅಕ್ಷರ ಸಾಕೆ ಬದುಕಲು?
ದುಡಿದ ಚೈತನ್ಯ ಸಾಕು ಬೆವರಿಗೆ
ಬರುವ ಲಾರಿ ನೆಲ್ಲು ಅಕ್ಕಿ ಧನ ಧಾನ್ಯಕೆ.
ಬಾಯಿಬಿಟ್ಟರೆ 'ಖೋಡಿ'.'ಟಿಕ್ಕ'
ಒರಟು ಭಾಷೆ
ಮನದಲೆಲ್ಲ ಜೇನು ತುಪ್ಪ
ಸುರಿವ ಅಭಿಲಾಷೆ
ಮುನಿದಳಿಲ್ಲಿ ನಿಸರ್ಗ ಲಕ್ಷ್ಮಿ
ನಲಿವಳಿಲ್ಲಿ ಧನಲಕ್ಷ್ಮಿ
ಅಂತು ಇಂತೂ ಎಂತೂ
ಉರಿವ ಬಿಸಿಲಲು ತಂಪು ಕೊಡುವದೆನಗೆ
ನನ್ನ ತವರನಾಡು
ಇದೇ ನನ್ನ ಮಣ್ಣಿನ ಹಾಡು

ದೇಹಯಜ್ಞ


ಹೆಡೆ ಎತ್ತಿದೆ ಹಾವು
ತೊಡೆಯ ಮೇಲೆ
ತೊಡರಾಗಿದೆ ನಡೆಯುವ
ಹಾದಿಗೆಲ್ಲ
ಸುಲಭ ದಾರಿ, ಹಾವ
ಹೆಡೆ ತಪ್ಪಿಸಿಕೊಂಡರೆ
ತಪ್ಪಿಸಿಕೊಳ್ಳಲಾರೆ ನಾ-
ನೀವೆಲ್ಲ ಈ ಹಾವಿಂದ
ಹಾದಿ ತಪ್ಪಿಸಿದೆ ಹಾವು
ವಿಷದ ಬೇರು ಬಿತ್ತಿ
ಚಿತ್ತವನೆಲ್ಲ ಎಲ್ಲೆಲ್ಲೊ ಸುತ್ತಿ
ಅತೃಪ್ತ ವಿಷವಿದು
ಬೇಡಿದಷ್ಟು
ನೀಡಿದಂತೆಲ್ಲ ಪಡೆಯಲೆತ್ನಿಸುವ
ಹಾವಿಗೆ ತೃಪ್ತಿಯೆಂಬುದಿಲ್ಲ
ಹೇಗೆ ಚಿಮ್ಮಲಿ
ಹಗೆಯ ಬರಿಸದೆ
ಕಳೆದುಕೊಳ್ಳಲಾರೆ
ತಡೆದುಕೊಳ್ಳಲಾರೆ
ಈ ನೋವ ದಹಿಸುವ
ಸಹಿಸುವ ಶಕ್ತಿ ಎಲ್ಲಿದೆಯೋ
ಕಾಣೆ? ಕಾರ್ಗತ್ತಲ ದಟ್ಟಡವಿಯಲಿ
ಹಾದಿ ತಪ್ಪಿ ನಡೆಯುವ ನನಗೆ
.

ಸಂಗಾತಿ


ಕುಶಲದಿ ಕೂಡಿದೆ ನನ್ನ ಹೆಣ್ತಿ
ವ್ಯಸನದಿ ನಗಿಸಿದೆ ನನ್ನ ಹೆಣ್ತಿ
- ಶಿಶುನಾಳ ಶರೀಫ್


ತಲೆಯನೆತ್ತಿ ನಡೆಯದಂತೆ
ತಿನ್ನುತಿವೆ ಚಿಂತೆಗಳು
ಹುದುಗಿಸಿಕೊಂಡಿವೆ ನನ್ನ
ಸಮಸ್ಯಗಳು
ಅರ್ಥರಹಿತ ವ್ಯವಹಾರಿಕ
ಬದುಕು ಏನೆಲ್ಲಾ ಮರೆಸಿದೆ
ಚೈತನ್ಯ, ನೆಮ್ಮದಿ ಎಲ್ಲೂ
ಸಿಗದೆ ತಬ್ಬಲಿಯಾದಾಗ
ನಿನ್ನ ಬಳೆಗಳ ನಾದ
ನಗುವ ತುಟಿ
ಬಳಸಿದ ತೋಳು
ಬಿಸಿ ಅಪ್ಪುಗೆ
ಮುದವಾದ ತಟ್ಟುವಿಕೆ
ಕಿಲ,ಕಿಲ ನಗು
ಸಿಹಿ ಮುತ್ತುಗಳು
ವ್ಯಸನದಲೂ ಅರಳಿಸಿವೆ
ನನ್ನ ಮನದ ಭಾವಗಳ
ಮಾತಾಡಿ, ಮಾತಾಡಿಸಿ
ಮಾತು, ಮಾತಿಗೆ ಮಾತು
ಬೆರೆಸಿ ನನ್ನನೇ ಮರೆಸಿ
ಕುಶಲದಿ ಕೂಡಿ ಹಗುರಾಗಿಸಿದೆ
ಮೈಮನವೆಲ್ಲ.

ಕಳೆದುಹೋಗಿದ್ದೇನೆ


ಇಲ್ಲಿ ಒಲೆ ಹತ್ತಿ,ಧರೆಯೂ ಹೊತ್ತಿ
ಉರಿಯುತಿದೆ ಗುಲಾಬಿ ಗಿಡಗಳ
ನಾಡೀಗ 'ಲಾಬಿ'ಗಳ ಮುಳ್ಳಿಗೆ ಸಿಕ್ಕು
ನಿಧಾನಸೌಧದಿ ಹಲವು ವಿಧಾನಗಳಲಿ
ಯಾರದೋ ತೊಡೆಯೇರಿ
ಮುದುಡಿ ಬೀಳುತಿದೆ.
ಗಂಟೆಗಟ್ಟಲೆ ಹಾರಾಟ
ಗಾರ್ಡನ್ ಸಿಟಿಯಲಿ ಕಾರ್ಬನ್ ಊಟದೊಂದಿಗೆ
ನಿತ್ಯ ಮಾರಾಟಕೆ ಕಾದು ನಿಂತಿವೆ
ಹಳೆ ಕಾರುಗಳು, ಕುಡಿದ ಬಾಟಲಿಗಳು
ಎಲೆ ಉದುರಿಸಿ ಬರಡಾಗಿ ನಿಂತ
ಅಂಡಲೆವ ಹೂಗಳ-ಪಕಳೆಗಳು.
ಅಧಿಕಾರ ಹಿಡಿದವರ ಓಲೈಸಲು
ನಾಯಿ ಬಾಲ ನೆಟ್ಟಗಾಗಿಸಲು ನಿತ್ಯ ಕ್ಯೂನಲಿ
ಹಲ್ಕಿರಿತ ಅಧಿಕಾರ ಬಿಟ್ಟವರ ಪಾಡು
ಬೀದಿ ನಾಯಿಯ ಹಾಡು
ಕುಂಯ್ ಗಟ್ಟರೆ ಕೇಳುವವರು ಇಲ್ಲಿ ಯಾರು?
ಹಲ್ಕಿರಿಯುತ್ತಾರೆ, ಕೈಕುಲುಕುತ್ತಾರೆ, ಒಮ್ಮೊಮ್ಮೆ
ಮೈಯನ್ನು ತಮ್ಮ ತಮ್ಮ ಮೈ-
ದಾನದಲ್ಲಿ ಕುಲುಕೇ ಕುಲುಕುತ್ತಾರೆ
ಶಬ್ದಗಳು ಬಾಯಿಂದ, ನಗು ತುಟಿಯಿಂದ
ತೂರಿ ಬರುತ್ತವೆ ಬ್ರ್ಯಾಂಡಿಗೆ ತಕ್ಕಂತೆ
ಬದುಕ ಮಾರುಕಟ್ಟೆಯಲಿ
ಇಲ್ಲಿ ಎಲ್ಲವೂ ಸೆಕೆಂಡ್ ಹ್ಯಾಂಡ್,
ಪ್ರೀತಿ, ಬದುಕು, ನೀತಿ, ರೀತಿ
ನನಗರಿವಿಲ್ಲದಂತೆ ಗದ್ದಲಗಳ
ಮಧ್ಯ ಕಳೆದುಹೋದ ನಾನೂ
ಕೂಡಾ ಈ ತಂಗಳೂರಲಿ

ಮರುಭೂಮಿ ಪಯಣಿಗ


ಗುಹೆಯೊಳಗೆ ಅವಿತು ನಿರಾತಂಕ
ನಗೆ ನಡಿಗೆಯಲಿದ್ದ ಪಯಣಿಗ
ಒಂದೇ ಉಸಿರಲಿ ಉಸುರಿದ-
ನನಗೇನು ಗೊತ್ತಿಲ್ಲ ನಾನೀಗ
ಪರಮ ಸುಖಿ ತುತ್ತು ಚೀಲವ
ತುಂಬಿಸಲು ಹೆಣಗಿ ಹೆಣವಾಗಿದ್ದ
ನನಗೆ ಮದ್ದು ಬಾಂಬುಗಳ ಮಾಲೆ
ಹಾಕಿ ಮೆರೆಸಿದರು.
ಕರುಳು ತುಂಬಿಸುವ ಕೂಳು;
ಕೈಗೆ ಸಿಕ್ಕ ಗನ್ನು ಹಿಮದ ಮನೆಯಲಿ
ಬೆಚ್ಚಗಿನ ಧರ್ಮಯುದ್ಧ ಬೋಧನೆ
ನಿತ್ಯ ಹರಿಸುತ್ತೇನೆ ರಕ್ತ ಕಾಲುವೆ
ಕಂಡವರ ಕರುಳು ಬಗೆಯಲು
ಕಾರಣ ಏಕೆ ಬೇಕು?
ಆಕಾಶ ನೋಡಿ ಕೇಕೆ ಹಾಕುತ್ತೇನೆ
"ಓ ದೇವರೆ ನಿನಗೆ ಪ್ರಿಯ
ಕೆಲಸ ಮುಕ್ತಿ ಕೊಡು"
ವೈರಿಗಳ ರುಂಡ ಚಂಡಾಡಿದರೆ ಅದು
ಪಾಪವಲ್ಲ
ಅದು ಧರ್ಮಯುದ್ಧ
ದೇವರೆ ಹೇಳಿದ್ದಾನಂತೆ,
ನಮ್ಮ ಗುರುವಿನ ಗುರುವಿಗೆ.
ಅದಕೆ
ನೀರು ಸೂರಿಲ್ಲದ ನನಗಿದು ಮಕ್ಕಳಾಟ
ಆಕಾಶಕ್ಕೆ ಕೈಮಾಡಿ ಅಹಂಕಾರದಿ
ಎದೆ ಉಬ್ಬಿಸಿ ಬೆಂಕಿ ಉಗುಳುವ
ರಾಕ್ಷಸರ ಯುದ್ಧಸೌಧ ನುಚ್ಚುನೂರಾಗಿದೆ
ನನ್ನ ತಮ್ಮಂದಿರ ಕೈಗೆ ಸಿಕ್ಕು.
ಮಕ್ಕಳು ನಿದ್ದೆಯನಪ್ಪಿದಾಗ
ಅಧರ್ಮಿಯರು ಬೆಂಕಿ ಸಿಡಿಸಿದ್ದಾರೆ.
ಕರಕಲಾದ ಮಕ್ಕಳ ದೇಹ
ನನಗೆ ಪಾಠ ಕಲಿಸುವದು ಬೇಡ
ನನಗೇನು ಗೊತ್ತಿಲ್ಲ!
ಧರ್ಮಯುದ್ಧವನೊಂದು ಬಿಟ್ಟು
ಕತ್ತಲೆಯಲಿ ಕೇಕೆ
ಹಾಕುತ್ತ ಮರೆಯಾದ
ಧ್ಯಾನಾಸಕ್ತ ಬುದ್ಧ
ಚೂರುಚೂರು ವಿಗ್ರಹಗಳ ತುಣುಕಿನಲ್ಲಿ
ನಸುನಗುತ್ತಿದ್ದ
"ದೇವರೇ ಇವರಿಗೆ ಬುದ್ಧಿಕೊಡು"

ಎಡ-ಬಲ



ಎಡ-ಬಲ ಯಾವುದೋ
ಅಂತರ ಕೈ ಚಾಚಿದರೆ
ಎರಡೂ ಹತ್ತಿರ
ಸದಾ ನನಗೆ ಬಲದ
ಸೆಳೆತ ಆದರೆ ಆದರೆ
ಅದರ ಆಳವೂ ಭಯಾನಕ
ಆದರೂ ಇಣುಕುವೆ
ಇಳಿಯುವ ಧೈರ್ಯವಿಲ್ಲ
ಕೈಬಿಡುವ ಇಚ್ಛೆಯಿಲ್ಲ
ನಿದ್ರೆ ತುಂಬಾ ಬಲದ
ಕನಸುಗಳು
ರಾತ್ರಿ ಮಬ್ಬಿನಲಿ ಚುಚ್ಚುತಿವೆ
ಬೆಚ್ಚಿಸುತಿವೆ
ಎಡವೋ
ಎತ್ತರ, ಬಾನೆತ್ತರ
ಹಾ! ಅದೆಂಥ
ಸುಂದರ
ಏರುವೆ ನಾನು ಅದರೆತ್ತರ
ಗೊಂದಲ, ಭ್ರಮೆ
ಸೊಂಡಿಯನೇರುವ
ಇರುವೆ
ಎಡವನೇರದೆ
ಇರುವೆ
ಸಾಕು ನನಗೆ ಈ ಗೊಂದಲಾಟ
ಬೇಡ
ಎಡ-ಬಲ
ನಡೆದೇ ನಡೆಯುವೆ
ನನ್ನ ದಾರಿಯಲ್ಲೇ
ನನ್ನ ದಾರಿಯಲೆ.

ವಸ್ತು ಏನು? ಬದುಕ ಕಾವ್ಯಕೆ

ಗುಲಾಬಿ ಹೂ ಮೇಡಂಗೆ
ಕೊಟ್ಟು ಖುಷಿ ಪಡುವ ಮಗಳು
"ನಮ್ಮ ಮೇಡಂ
ಥ್ಯಾಂಕ್ಸ ಹೇಳಿ ಮುಡಿದುಕೊಳ್ಳುತ್ತಾರೆ"
ಎಂದಾಗ ಅನಿಸಿತು. ಅರೆ ಇಲ್ಲಿ ಇನ್ನೂ
ಥ್ಯಾಂಕ್ಸ ಹೇಳುವವರು ಇದ್ದಾರೆಯೇ?
ಕರಣಗಳ ಭರಾಟೆಯಲಿ ಸದ್ದಿಲ್ಲದೆ
ಸಾವಾದ ರೈತರು ಮಾಧ್ಯಮಗಳ
ದೊಡ್ಡ ಸುದ್ದಿಯಾಗುತ್ತಾರೆ
ಮೋಡಗಳಿಗೆ ಮುತ್ತಿಕ್ಕಿ ಮಳೆಸುರಿಸುವ
ವಿಮಾನಗಳ ಭರಾಟೆಯಲಿ ಕರಗಿ ಹರಡಿದೆ
ಬರಗಾಲ
ಅಪಘಾತಗಳಲ್ಲಿ ಸ್ವಲ್ಪದರಲೆ ಪಾರಾಗುವ-
ನ್ಯಾಯಾಲಯದಲಿ,
ನಿರ್ದೋಷಿಗಳು ಎಂದು ಸಾಬೀತಾಗುವವರು
ನಿತ್ಯ ಪತ್ರಿಕೆಗಳಿಗೆ ಹಲ್ಕಿರಿಯುತ್ತಾರೆ
ಯಾರಿಗೂ ಥ್ಯಾಂಕ್ಸ ಹೇಳದೆ!
ಮಾತುಗಳು ಮೌನ ಪಡೆದ ಹೊತ್ತು
ಕೆರೆಗಳು ಬಾಯಿ ತೆರೆದ ನೀರಿಗಾಗಿ
ಹಾಹಾಕರಿಸಿದ ಹೊತ್ತು ಯಾರು
ಯಮದಾಹ ತೀರಿಸಿಯಾರು?
ಗೇಯತೆ ಕಾವ್ಯ ವಾಚ್ಯತೆ ಅಲಗಿಗೆ
ನಲುಗಿದಾಗ ವಿಮರ್ಶಕರು ಕೇಕೆ ಹಾಕಿ
ವಿಷಯವನರಸದೆ ನಂಜಸುರಿಸುವಾಗ
ಕಾವ್ಯಕ್ಕೆ ವಸ್ತು ಏನು ಎಂದು ಸಾಗಿದೆ
ಚರ್ಚೆ. ಮುಖ ಗಂಟಿಕ್ಕಿದರೂ ಸುರಿಯದ
ಮೋಡದ ಹಾಗೆ

ನೀನು ಹಿತ

ಮರೆಯುತ್ತೇನೆ ಎಲ್ಲ ಹಿಂಸೆಗಳ
ನಿನ್ನ ಹಿತ
ಹಿಡಿತದ ಅಪ್ಪುಗೆಯಲಿ
ನಂಜುಂಡ ತುಟಿ
ಸವಿಯಾಗುತ್ತದೆ
ನಿನ್ನ ಸಿಹಿ ಮುತ್ತಿಗೆ
ನಿನ್ನ ಮೃದು ಹಸ್ತ
ಮೈದಡವಿದಾಗ
ಎಂಥದೋ ಚೈತನ್ಯ
ಸೇರುತಿದೆ ಮನಸ್ಸು-ಮೈಗೆ
ನಿನ್ನ ಬಿಸಿಯುಸಿರು
ಕಂಗಳ ಬಳಿ ಬೀಸಿದಾಗ
ಆಹ್ಲಾದ ಉಕ್ಕಿ ಬರುತಿದೆ
ಮಂಪರು ಆವರಿಸುತಿದೆ
ಯಾವ ವೈನೂ
ತಾರದ ಮತ್ತು.
ಬೆಟ್ಟದಷ್ಟು ಸುಖ ತರುವ
ನಿನ್ನ ಸನಿಹವ ಕೆಲಕ್ಷಣವೂ
ಮರೆಯದೆ ಸೃಷ್ಠಿ ಹುಟ್ಟಿಸಿದೆಯೇ
ನನ್ನಲ್ಲಿ ಸಿಟ್ಟು ಬೆಂಕಿಯ. ನೀನು
ಎಲ್ಲಿಯಾದರೂ ಹೋಗಿ ಬರುವೆನೆಂದಾಗ
ಅಗಲಿಕೆಯ ಭೀಕರತೆ ನೆನಸಿಕೊಂಡಾಗ
ನಾನು-ನಾನಾಗುವುದೇ ಇಲ್ಲ.

ನಿನಗೆ ನೀನೇ ಸಾಟಿ

ಅಂದವಲ್ಲವೆ ಹಗಲುಗನಸುಗಳು
ಹೆಣೆಯಲು?
ಜೇಡರ ಬಲೆಯ ಸಾಹಸವೂ
ಬೇಕಿಲ್ಲ ಈ ಕನಸುಗಳಿಗೆ
ಕಣ್ಣು ಬಿಟ್ಟರೆ ಸಾಕು ನಿತ್ಯ
ಸತ್ತವರ, ರಕ್ತ ಹರಿಸಿದವರ
ಹಗಲುಗಳ್ಳ ರಾಜ-
ಕಾರಣಗಳ ದೊಂಬರಾಟದ
ಅರ್ಥರಹಿತ ಸುದ್ದಿ ತರುವ
ಪತ್ರಿಕೆ.
ಹೊರಗೆ ಹೊರಟರೆ
ಅಸಹ್ಯ ಬರಿಸುವ, ಹೆಣ್ಣು
ಮಣ್ಣಿಗೆ ಬಡಿದಾಡುವ
ವ್ಯಸನಿಗಳ ಕೂಟ
ನಾ ಭಂಡನಾದರೆ ಬದುಕುವೆ
ಆದರ್ಶಗಳ ಮೂಲೆಗೆಸೆದು ಗಂಟುಕಟ್ಟಿ
ಷಂಡನಾಗುವೆ ಏನೇನು ಪಡೆಯದೇ
ನನ್ನ ಮತ್ತಲಿ ನಾನಿದ್ದರೆ
ದಕ್ಕದು ನನಗಿನ್ನೇನು ಎಂದು ಅಂದುಕೊಳ್ಳುವೆ
ಅದಕೆ ಬಾ-
ಎಲ್ಲ ಬಿಟ್ಟು ಒಂದೆಡೆ
ಹಗಲುಗನಸ ಹೆಣೆಯಲು
ಕೆಲಕ್ಷಣ ನೀಡುವ
ನೆಮ್ಮದಿಗಾದರೂ

ಇರುಳು


ಇರಿಯುವ ಕತ್ತಲು
ಹಿಂಸಿಸುವ ಕನಸುಗಳು
ಹಾಸಿಗೆಯುದ್ದಕ್ಕೂ ಚಾಚಿರುವ
ಒಂಟಿತನ
ರೆಪ್ಪೆ ಕೂಡಿದರೂ
ಆವರಿಸುವ ನಿದ್ರೆ....
ಅಬ್ಬಾ! ಯಾರಿಗೆ ಬೇಕು
ಈ ಭೀಕರ ರಾತ್ರಿ
ನಗುತ್ತಾ ನಗಿಸುತ್ತಾ
ಅರಳಿದ ಮುಖಗಳ,
ಮಾಸದ ನಗುವಿನ ಬೆರೆವ
ಮನಕೆ ಹಗಲೇ ವಾಸಿ
ಕನಸುಗಳ ಬೆಸೆಯಲು
ಅಂದದ ಹರೆಯದ
ಹುಡುಗರ ನಲುಮೆಯ
ಹಾರಾಟ, ಮರೆಸುವದೆನ್ನ
ಹಸಿ,ಹಸಿ ಗಾಯವ
ಬರುವದು ಬೇಡವೇ ಬೇಡ
ಧುತ್ತೆಂದು ಕತ್ತಲೆ
ಸುರಿಸುವ ಅಹೋರಾತ್ರಿ

ನಮ್ಮಲ್ಲಿಯೇ ಪಡೆಯೋಣ

ಎತ್ತ ಹೊರಳಿದರೂ ಮತ್ತೆ
ಮತ್ತೆ ಸುತ್ತುತಲಿದೆ ಮನ
ನಿನ್ನೆಡೆ ಗೆಳತಿ-
ನೊಂದ ಜೀವಕೆ ಬೇಕೆ
ಸಮ-ಭೋಗದ ಸವಿಪಾಲು?
ಸಮ-ಭಾಗಿಯಾಗಿ ಹೆಕ್ಕಿ
ಕಿತ್ತುಕೋ ಬೆಳೆದ ಕಸವ
ಸವಿನುಡಿ, ಅಪ್ಪುಗೆ
ಸಾಂತ್ವನದಿ ಆರಿಸು
ಉರಿವ ನೋವ ಜ್ವಾಲೆ
ಉರುಳುತಿವೆ ಹಗಲಿರುಳು
ಎಣಿಕೆ-ಗುಣಿಕೆಗಳಲಿ
ಬೆಲೆ ಇಲ್ಲ ಜೀವಕಿಲ್ಲ
ಏರುತಿರುವ ಬೆಲೆಯಲ್ಲಿ
ಅಬ್ಬರ, ಆಡಂಬರ ಕೃತಕ
ತುಟ್ಟಿ-ದಿನ-ಮಾನದಲಿ
ಮನಸು-ಹೃದಯವಂತಿಕೆ
ಕಳೆದುಹೋಗುವ ಮುನ್ನ
ಅಪ್ಪು ಬಾ ಗೆಳತಿ
ನಂಬಿಕೆ-ವಿಶ್ವಾಸ ಯಾರೋ
ದೋಚುವ ಮುನ್ನ
ಎಲ್ಲಿಯೂ ಹುಡುಕಿ ದುಡುಕುವದು
ಬೇಡ ಕೈಗೆಟಕುದ ಸುಖವ
ನಮ್ಮಲ್ಲಿಯೇ ಪಡೆಯೋಣ
ನಾವು ಮುಳುಗುವ ಮುನ್ನ

ಹಗಲುಗನಸು


ಹೋಲಿಸಲಾರೆ ನಿನ್ನ
ಆಗಸದ ಚಂದ್ರಂಗೆ?
ಸಿಗುವುದಿಲ್ಲ ಅಂವ ಬೇಕು ಬೇಕೆಂದಾಗ
ಹೊಗಳಿ ಚಿನ್ನ-ಮುದ್ದೇ ಅನ್ನಲಾರೆ
ಕೈಗೆಟುಕದಂತೆ ಏರಿದ ಬೆಲೆಗೆ
ಅವರಿವರ ಕದಿಯುವ ಭಯಕ್ಕೆ!
ನೀ ನನ್ನ ಪ್ರಾಣ ಅನ್ನಲಾರೆ
ಅದು ಯಾವಾಗ ಹಾರಿ
ಹೋಗುವುದೋ ಗೊತ್ತಿಲ್ಲೆನಗೆ
ಹೇಳು ಗೆಳತಿ ನನಗೆ ಹೋಲಿಸಲು
ಯಾಕೆ ಬೇಕು ಅವರಿವರ ಹೋಲಿಕೆ
ನಿನ್ನ ಭಾವ, ನಿನ್ನ ನೋವ
ನಿನ್ನ ತನು ನಿನ್ನ ಮನ ಎಲ್ಲದಕೂ ನಿನಗೆ
ನೀನೆ ಸಾಟಿ
ನನ್ನ ಹೃದಯ ಕದ್ದ ಮೋಸವ
ನರಿಯದ ಮಾಟಗಾತಿ ನೀನು
ನಿನ್ನ ಹೃದಯ ಸಿರಿಯಲಿ
ನನ್ನನು ಹಿಡಿದಿಡು ನಾನಿರುವ ತನಕ
ಕೊನೆ ತನಕ ಎಂದರೆ
ಕೃತಕದ ಮಾತಾದೀತು
ಹೋಲಿಸಲಾರೆ ನಿನ್ನ
ಆಗಸದ ಚಂದ್ರಂಗೆ?
ಸಿಗುವುದಿಲ್ಲ ಅಂವ ಬೇಕು ಬೇಕೆಂದಾಗ
ಹೊಗಳಿ ಚಿನ್ನ-ಮುದ್ದೇ ಅನ್ನಲಾರೆ
ಕೈಗೆಟುಕದಂತೆ ಏರಿದ ಬೆಲೆಗೆ
ಅವರಿವರ ಕದಿಯುವ ಭಯಕ್ಕೆ!
ನೀ ನನ್ನ ಪ್ರಾಣ ಅನ್ನಲಾರೆ
ಅದು ಯಾವಾಗ ಹಾರಿ
ಹೋಗುವುದೋ ಗೊತ್ತಿಲ್ಲೆನಗೆ
ಹೇಳು ಗೆಳತಿ ನನಗೆ ಹೋಲಿಸಲು
ಯಾಕೆ ಬೇಕು ಅವರಿವರ ಹೋಲಿಕೆ
ನಿನ್ನ ಭಾವ, ನಿನ್ನ ನೋವ
ನಿನ್ನ ತನು ನಿನ್ನ ಮನ ಎಲ್ಲದಕೂ ನಿನಗೆ
ನೀನೆ ಸಾಟಿ
ನನ್ನ ಹೃದಯ ಕದ್ದ ಮೋಸವ
ನರಿಯದ ಮಾಟಗಾತಿ ನೀನು
ನಿನ್ನ ಹೃದಯ ಸಿರಿಯಲಿ
ನನ್ನನು ಹಿಡಿದಿಡು ನಾನಿರುವ ತನಕ
ಕೊನೆ ತನಕ ಎಂದರೆ
ಕೃತಕದ ಮಾತಾದೀತು

ಸಂಕ್ರಮಣ



ಮಿಂದೆವು ಹಬ್ಬದಂದು
ಮೈ ಹಗುರಾಗಿಸಲು
ತಿಂದೆವು ಎಳ್ಳು-ಸಕ್ಕರೆ
ಬಾಯಿ ಸಿಹಿಯಾಗಿಸಲು
ಆದರೂ-
ಮೈಭಾರ ಬಾಯೆಲ್ಲ ಕಹಿ-ಕಹಿ
ಹಿಂಸೆ ರಕ್ತ ಪಾತಕೆ
ಗುಡಿ-ಮಸೀದಿ ನೆವ ಬೇಕಿತ್ತೆ
ಅರಿಯದ ಹಸಿವಿನಿಂದ
ಕಂಗೆಟ್ಟ ಮುಗ್ಧ ಜೀವಿಗಳೊಂದಿಗಿನ
ಚೆಲ್ಲಾಟ.
ಭಾರತ ಮಾತೆಯ
ಮಡಿಲಲಿ ರಕ್ತದೋಕುಳಿಯೆದ್ದಿರೆ
ಹಾಹಾಕಾರ ನೋವ ಮಾರ್ದನಿ
ಮುಗಿಲು ಮುಟ್ಟಿರೆ
ಸಕ್ಕರೆ ಸಿಹಿ ಆದೀತು ಹೇಗೆ?
ಸಂಕ್ರಮಣ ಶುಭ ತಂದೀತು ಹೇಗೆ?

ಆರ್ತನಾದ




ಎಂದೋ ಮುಚ್ಚಿ ಹೋಗಿದೆ
ಮನದ ಬಾಗಿಲು
ಚಿಂತೆಯ ಬಿರುಗಾಳಿಗೆ
ಅರಳುವ ಕಲ್ಪನೆಗಳೆಲ್ಲ
ಕರಗಿ ಹೋಗುತಲಿವೆ
ಭಾವಕೆ ನೆಲೆ ಇಲ್ಲದೆ
ತಳಮಳದ ಜೀವ ಚಡಪಡಿಸುತಿದೆ
ಬಂಧನವ ಬಿಡಿಸಲು
ಚಿಂತೆ, ಭಯ, ಕಾತುರಗಳು
ಕೊಚ್ಚಿ ಹೋಗಬಾರದೇ ಆತ್ಮಾಭಿಮಾನದ
ಸೋಂಕು ತಟ್ಟಲು
ನಿನ್ನಪ್ಪುಗೆ ಕರಗಿಸಲಿ
ಚಿಂತೆಯ ಚಿತೆಯ
ತಟ್ಟಿ ತಟ್ಟಿ ತೆರಸಲಿ ಮುಚ್ಚಿದ ಕದವ
ಬೆಳಗಲಿ ಪ್ರೀತಿ ನಗೆ
ಓಡಿಸಲಿ ಆವರಿಸಿದ ಕತ್ತಲೆ
ಕೊಚ್ಚಿ ಹೋಗಲಿ ದು:ಖ ದುಮ್ಮಾನ
ಎಲ್ಲಿರುವೆ ನಲ್ಲೆ?
ಬದುಕಿಸಬಾರದೇ ನನ್ನೀ ನರಳಾಟದಿ

ಚಿತ್ತ ಚಿತ್ತಾರ




ಯಾಕೆ ಹೀಗೆ ಎತ್ತೆತ್ತಲೋ
ಓಡುತಿದೆ ಚಿತ್ತ
ಕೀಲಿಯಿಲ್ಲದ ಬಂಡಿಯ ಹಾಗೆ
ದುಡುಕು, ಸಿಡುಕು ಎಲ್ಲ ಕೆಡುಕಾಗಿ
ಕಾಡುತಲಿವೆ ವ್ಯರ್ಥ ಅನುಮಾನದ
ನೋವ ಗ್ರಹಿಸುವ ಮನಕೆ
ನೋವಲು ಪ್ರೀತಿ ನಗೆ
ಬೀಸುವ ನಲ್ಲೆಗೂ ನೀಡುವುದು
ಬೇಡವೆ ಸವಿ-ಸುಖದ ಆತ್ಮೀಯ ಹೃದಯ
ಕೆಸರಾಗಿದೆ ಮನ ಅರಳಬಾರದೆ
ನಲುಮೆಯ ಕಮಲ,
ಸಾಕಾಗಿದೆ ಹಿಂಡುವ ಸಮಸ್ಯಗಳ
ಹಿಂಡುಗಳ ಮಧ್ಯ ದಂಡೆತ್ತಿ ಹೋಗುವದು.
ಎಲ್ಲಿ ಹೋಯಿತು ಸ್ಥೈರ್ಯ ಹೆಕ್ಕಿ ಓದಿದ
ಪುಸ್ತಕದ ಹಿತವೆಲ್ಲ ವ್ಯರ್ಥವಾಗಿ ಸೋರುತಲಿದೆ
ನನ್ನ ಮಾತಲಿ ನಗುಮುಖದ
ಹಸುಳೆಗಳೆದುರು ನೀಡುವ
ಉಪನ್ಯಾಸವೆಲ್ಲ

ಯಾರಿವನು?

ಹೇಸಿಗೆ ಮೇಲೆ ಕುಳಿತಿರುವ
ಘಮಘಮ ಪರಿಮಳ
ಹೀರಿದ ತೆರದಿ ನಗೆ ಬೀಸುವ
ಮಾತಲಿ ಮನೆ ಕಟ್ಟುವ
ಮನದಲಿ ಗೋರಿಗಡಿಗಲ್ಲಿಡುವ
ಪರರ ಧನ, ಸ್ತ್ರೀ, ಆಸ್ತಿ
ಎಲ್ಲವ ತನ್ನದೆಂದು ಬಗೆವ
ಕಾಲಕ್ಕೊಂದು ಬಗೆಬಗೆಯ ವೇಷದಿ
ಮೆರೆವ
ಒಮ್ಮೊಮ್ಮೆ ಓಟಿಗಾಗಿ ನೋಟ
ಹಂಚಿ ಭಿಕ್ಷೆಯನೂ ಬೇಡುವ ಹೈ
ಕ್ಲಾಸ್ ಭಿಕ್ಷುಕ
ರಾಷ್ಟ್ರದ ಧನಧಾನ್ಯ
ಲೂಟಿಯಾಗಿಸಲು ಸನ್ನದ್ಧನಾಗಿರುವ
ಭಂಡನಿವ.
ಬಿಟ್ಟಿದ್ದಾನೆ ನಾಚಿಕೆ, ಭಯ
ಆತ್ಮಸಾಕ್ಷಿಯ
ಇಹದ ಸಂಪತ್ತೆಲ್ಲಾ ಎಲ್ಲೆಲ್ಲೊ
ಅಡಗಿಸಿ ಮೆರೆವ ತಲೆಹಿಡುಕನಿವ
ಅಂತೂ, ಇಂತೂ, ಹೀಗೋ ಹೇಗೋ
ಮೆರೆದು ಮರೆಯಾಗುವ ರಾಷ್ಟ್ರಕೆ ಹಿಡಿದಿರುವ
ಅಳಿಸಲಾಗದ ಗ್ರಹಣನಿವ
.

ಕುಡಿದು ಸಾಯೋಣ




ಸಂತೋಷದ ವಿಷಯ
ಹೊಸ ವರುಷದಂದು ಶೆರೆ ಕುಡಿದು
ಸತ್ತವರಿಗೆ ಹತ್ತುಸಾವಿರ ಬಹುಮಾನ.
ಕುಡಿಯೋಣ ಎಲ್ಲರೂ
ಕುಡಿ,ಕುಡಿದು ಸಾಯೋಣ
ಅಯ್ಯೋ ಪಾಪ!
ಕುಡಿದು ಸತ್ತ
ಎಂದನುಕಂಪವ ತೋರಿ
ಘೋಷಿಸುವರು ಪರಿಹಾರ ಧನವ
ಹಗಲಿರುಳು ಬೆವರು ಸುರಿದ
ವರಿಗೆಲ್ಲ ಈ ದೇಶದ
ಬೊಕ್ಕಸದಿ ಹಣ
ಓದಿ, ಬರೆದು ಇಳಿವಯದಲ್ಲಿ
ಪಡೆಯುವ ಸಾಹಿತಿಗೆ ಬರೀ
ಸಾವಿರ ಪ್ರಶಸ್ತಿ ಹೆಸರಲಿ!
ಅದಕೆ ಕುಡಿಯೋಣ ಎಲ್ಲರೂ
ದುಡಿಯೋದ ಬಿಟ್ಟು ಖಾದಿಗಳು
ನೀಡುವ ಪರಿಹಾರಕೆ

ನಗ್ನ ಸತ್ಯ





ನಿನ್ನ ವಿಕಾರ ಕಣ್ಣನ್ನು
ನಕ್ಷತ್ರ ಎಂದೆ
ನಿನ್ನ ಜೋಲು ಮುಖ
ಚಂದಿರನೆಂದೆ
ನಿನ್ನ ತೋಲು ಮೈ
ಬಳುಕುವ ಬಳ್ಳಿ ಎಂದೆ
ನಿನ್ನ ಆನೆಯ ನಡಿಗೆ
ನವಿಲಿನ ನಾಟ್ಯ ಎಂದೆ
ಅಪ್ಸರೆ, ರತಿ ಚೆಲುವೆ
ಎಂದೆಲ್ಲ ಹೊಗಳಿ ಹಾಡಿದೆ
ಯಾಕೆ?
ವಾಸ್ತವ ಹೇಳಲೆ ಗೆಳತಿ?
ನಿನ್ನ ಮೇಲಿನ ಅಪ್ರತಿಮ
ಪ್ರೀತಿಯಿಂದಲ್ಲ, ನನ್ನ ಪ್ರೇಮ
ಕುರುಡು ಅಲ್ಲ.
ನಿಮ್ಮಪ್ಪ ಕೊಡಿಸಿದ ನೌಕರಿ
ನೀ ತಂದ ಚಿನ್ನ - ಬೆಳ್ಳಿ
ಕೊಡಿಸಿದ ಕಾರು-ಬಂಗಲೆ
ಎಲ್ಲ ಪ್ರೀತಿಯೆನಗೆ ಅದೇ
ಅಪ್ಪಟ ಚೆಲುವೆನಗೆ

ಸಂಬಂಧಗಳು




1. ಸಂಬಂಧಗಳು
ಇವೆ
ಸುತ್ತಲೂ-
ಮೈರಕ್ತ ಹೀರುವ ತಿಗಣೆಗಳು
ತಲೆತುಂಬ ಮುತ್ತುವ ಹೇನುಗಳು
ಹೆಕ್ಕಿ ಹೆಕ್ಕಿ ಕೊಲ್ಲುವ ಹದ್ದುಗಳು
ಮತ್ತೆ
ಎಲ್ಲ ಇವು ಇಷ್ಟೂ ಸಾಲದೇ
ಚಿಕ್ಕಾಡು ಗುಂಗಾಡು-ನೊರಜುಗಳ
ಕೈ ಮಾಡಿ ಕರೆದು ಇದ್ದ ಜಾಗವನ್ನೆ
ಅಗಲಿಸಿ ಭರ್ತಿ ಮಾಡಿಕೊಳ್ಳುತ್ತವೆ.
ಇವೆಲ್ಲವಕ್ಕೂ ಕೊಳ್ಳಿ ಇಟ್ಟು
ಸುಟ್ಟು ಬಿಡಬೇಕು ಎಂದಾಗಲೆಲ್ಲ-
ಅದೇನೋ ಅವ್ಯಕ್ತ ಮನ ಒಡ್ಡುವ
ಮೌನ ವಿರೋಧ ನೆನಸಿಕೊಂಡಾಗ
ಅಂದುಕೊಳ್ಳುತ್ತೇನೆ.
ಇವು ನನ್ನ ವಿಚಿತ್ರ ಚಿತ್ರಹಿಂಸೆಗೆ
ಒಳಪಡಿಸುವ ಮತ್ತೆ, ಮತ್ತೆ ಸೆಳೆಯುವ
ಸಂಬಂಧಗಳು.

2. ಸಂಬಂಧಗಳು
ಬಿಗಿಯಾಗಿ ಎಳೆದುಬಿಟ್ಟ
ಸರಕು ಗಂಟು
ಬಿಚ್ಚಲೆತ್ನಿಸಿದಷ್ಟೂ
ಕಗ್ಗಂಟು

ಬತ್ತಿ ಹೋಗಲಿ ಕಣ್ಣೀರು


ಬತ್ತಿ ಹೋಗಲಿ ಕಣ್ಣೀರು
ನಿತ್ಯ ಗೋಳನು ಕಂಡು
ಸುರಿಯದಂತೆ
ಯಾಕೆ ಅಳಬೇಕು ಹೃದಯ
ಸಿರಿಯಲಿ ಅಡಗಿದ್ದವರು
ತಿರುಗಿ ಬಾರದೆ ಹೋದರೆ
ಅತ್ತರೆ ಆತ್ಮ ಶಾಂತಿ
ಯಾರಿಗೆ?
ಅಳಿದವರಿಗೋ, ಉಳಿದವರಿಗೋ
ದು:ಖ-ದುಮ್ಮಾನ ನಿತ್ಯ ಕಾಡುತಲಿರಲು
ಅರ್ಥವೆಲ್ಲಿದೆ ಈ ಅಳುವಿಗೆ
ನರಳುವ ಜೀವಿಗಳ
ರಸ್ತೆ ಬದಿಯಲಿ ಛಳಿಯಲಿ
ಬೀಳುವವರ ಮೈನಡುಕವ ಕಂಡೋ
ದ್ಯಾಸದಲಿ ಕೊರಗುವ. ಅಕ್ಷರವ
ಅರಿಯದ ಅಮಾಯಕರ ದಂಡುಗಳ ಕಂಡೋ
ಅಳುವದು ಕೊರಗುವದು ಯಾರಿಗಾಗಿ
ಯಾರಿಗಾಗಿ?
ಅದಕೆ ಬೇಡವೇ ಬೇಡ
ಕಣ್ಣೀರು ಬತ್ತಿ ಹೋಗಲಿ
ಮತ್ತೆ ಚಿಮ್ಮದಂತೆ

ಸಾವು




1
ನಾಡಿಯ ಮಿಡಿತ
ಭಾವನೆಯ ತುಡಿತ
ಒಮ್ಮೆಲೇ ನಿಲ್ಲಿಸಿ
ಬಿಡುವ ಗಾರುಡಿಗ
2
ದೇಹ ಮನಸ್ಸುಗಳ
ನಿಸ್ತೇಜಗೊಳಿಸುವ
ಆವರಿಸುವ ಘೋರ
ಕಾರ್ಗತ್ತಲು
3
ಕನಸುಗಳ ಹೆಣೆಯುತ್ತ
ನನಸುಗೊಳಿಸುವ
ಹವಣಿಕೆಯಲಿರುವಾಗಲೇ
ಅನಿರೀಕ್ಷಿತವಾಗಿ ಬಡಿಯುವ
ಸಿಡಿಲು.

ನಿನ್ನ ನೆನಪು




ನೆನಪು ಕಾಳುಗಳ
ಮುಷ್ಠಿಯಲಿ ಹಿಡಿದು
ಮುಕ್ಕು ಮಾಡಿ ಕಲ್ಲಿನೊಳು
ಹಾಕಿ ಗರಗರನೆ ತಿರುಗಿಸಿದರೆ
ಮತ್ತೆ-ನೀನೋ
ಬಿದ್ದ ಕೆಳ ಸೀರೆ ಪದರೊಳು
ಜಲ್ಲನೆ ಉದುರುತ್ತಿ

ಸಾವು



1
ನಾಡಿಯ ಮಿಡಿತ
ಭಾವನೆಯ ತುಡಿತ
ಒಮ್ಮೆಲೇ ನಿಲ್ಲಿಸಿ
ಬಿಡುವ ಗಾರುಡಿಗ
2
ದೇಹ ಮನಸ್ಸುಗಳ
ನಿಸ್ತೇಜಗೊಳಿಸುವ
ಆವರಿಸುವ ಘೋರ
ಕಾರ್ಗತ್ತಲು
3
ಕನಸುಗಳ ಹೆಣೆಯುತ್ತ
ನನಸುಗೊಳಿಸುವ
ಹವಣಿಕೆಯಲಿರುವಾಗಲೇ
ಅನಿರೀಕ್ಷಿತವಾಗಿ ಬಡಿಯುವ
ಸಿಡಿಲು.

ನಿನ್ನ ನೆನಪು



ನೆನಪು ಕಾಳುಗಳ
ಮುಷ್ಠಿಯಲಿ ಹಿಡಿದು
ಮುಕ್ಕು ಮಾಡಿ ಕಲ್ಲಿನೊಳು
ಹಾಕಿ ಗರಗರನೆ ತಿರುಗಿಸಿದರೆ
ಮತ್ತೆ-ನೀನೋ
ಬಿದ್ದ ಕೆಳ ಸೀರೆ ಪದರೊಳು
ಜಲ್ಲನೆ ಉದುರುತ್ತಿ
ನಿನ್ನ ನೆನಪ ಹುಡಿ ಹಾರಿಸುತ್ತೀ

ಆಶಾವಾದ


ಹಗಲು-ಇರುಳು ಒಂದೇ ಆಗಿದೆ
ನಿರಾಶಾವಾದ ಕವಿದ ಬದುಕಿಗೆ
ಎಲ್ಲವೂ ಸಪ್ಪೆ ಅರ್ಥರಹಿತ
ಅಂದುಕೊಂಡದ್ದೆಲ್ಲ ಕೈಗೆಟುಕದಾದಾಗ
ಹುಳಿಯಲ್ಲವೆ ದ್ರಾಕ್ಷಿ ಕೈಗೆ ನಿಲುಕದಿದ್ದಲಿ
ಮಿನುಗುವ ನಕ್ಷತ್ರಗಳುಳ್ಳ
ಆಗಸದಿ ಕತ್ತಲವಷ್ಟೇ ಗೋಚರಿಸುವದೇಕೆ?
ಹುಡುಕೋಣ ಹಸನಾದ ಬದುಕ
ಕತ್ತಲು ತುಂಬಿದ ಬದುಕಲಿ ಬೆಳಕ
ಕಂಡಂತೆ

ಏಕಿಲ್ಲ ಕೊನೆ?




ನಕ್ಷತ್ರಗಳು ಸಾವಿರಾರು
ಕನಸುಗಳು ನೂರಾರು
ಹೆಣೆಯುವ ಭಾವನೆಗೆ
ಮಿತಿ ಎಲ್ಲಿ?
ಕೈಗೆಟುಕಬಹುದೆ
ಹಿಡಿಯಬಯಸಿದ್ದೆಲ್ಲ
ಸಿಗಬಹುದೆ
ಪಡೆಯಲೆತ್ನಿಸಿದೆಲ್ಲ
ವಾಸ್ತವದ ಅಬ್ಬರದ
ಮುಂದೆ ಕನಸಿನ
ಹಿಮ ನಿರಾಯಾಸವಾಗಿ
ಕರಗುವದೇಕೆ?
ಹುಟ್ಟುತಿವೆ ನೂರಾರು
ಆಸೆಗಳು ಕೈಗೂಡದಿರೆ
ಬಿಟ್ಟಿಲ್ಲ ಎಲ್ಲ
ವ್ಯರ್ಥವೆಂದರಿತರು
ವಾಸ್ತವ ಕನಸಿನ
ಗುದ್ದಾಟಕಿಲ್ಲವೇ ಕೊನೆ.

ಸಾಧನೆಗಳು




1
ಬರೀ ಜ್ಯೂಸ್, ಹಾಲು
ಕುಡಿಯುತ್ತಿದ್ದ ಗೆಳೆಯ
ನನ್ನ ಪ್ರೀತಿಯ ಒತ್ತಾಯಕ್ಕೆ
ಮಣಿದು ಹೊಸ ವರ್ಷದ
ಖುಷಿಯಲಿ ಆಲ್ಕೊಹಾಲು
ಕುಡಿದದ್ದಷ್ಟೇ ಸಾಧನೆ!
2
ಏನೆಲ್ಲ ಸಾಧಿಸಬೇಕಾಗಿದ್ದ
ಹಲವು ಉಪಯುಕ್ತ ದಿನದ
ಕ್ಷಣಗಳು, ಪಟ್ಟನೆ ಥಟ್ಟನೇ
ಹಾರಿ ಹೋದಂತಾಗಿ ಏನೋ
ಮರೆಯಲು ನಿಶೆ ಏರಿಸಿ
ಖುಷಿ ಪಟ್ಟು ನೋವ
ಮರೆತ ಗೆಳೆಯ!
ಹೊಸ ವರುಷದಂದು

ಆಶಯ


ಮಬ್ಬಿದ ಮುಸುಕು
ಆವರಿಸಿದ ಕತ್ತಲು
ಬಂದ ತಳಮಳ
ಎರಗಿ ನಲುಗಿಸಿದ ಹಿಂಸೆಗಳು
ಬಿಸಿಲ ಕಂಡ ಹಿಮದಂತೆ
ಕರಗಿ ಹೋಗಲಿ
ತರಲಿ ಹಚ್ಚ ಹಸುರ
ಬರುವ ಹೊಸ ವರುಷ

ಪ್ರೀತಿ


ಎರಡು ಬಿಂದುಗಳನ್ನು
ಒಂದುಗೂಡಿಸಿ
ಅವುಗಳ ಅಸ್ತಿತ್ವವನ್ನೇ
ಕಳೆದು
ತಾನೇ ತಾನಾಗಿ
ವಿಜೃಂಭಿಸುವ
ಸರಳರೇಖೆ.

ಮರೆವು: ಶಾಪ - ವರ


ಕಾಲಗರ್ಭದಲಿ ಕರಗಿ
ಹೋಗಿವೆ ಹಲವಾರು
ನೆನಪಿನ ಕೂಸುಗಳು
ಮತ್ತೆ ಗರ್ಭ ಧರಿಸುತಿವೆ
ಹೊಸ,ಹೊಸ ಆಸೆಗಳು
ಮರೆವು ಔಷಧಿಯಾಗಿದೆ
ಹುಟ್ಟುತಿರುವ ಆಸೆಗಳಿಗೆ
ಮರೆವು ಶಾಪ ಅಂದು
ಕೊಂಡಿದ್ದೆ
ಎಲ್ಲ ಮರೆತು ಹೊಸ
ಬದುಕು ಹುಟ್ಟು ಹಾಕಿದೆ
ನನಗೆ ಮರೆವು ಬ್ರೆಹ್ಮನಾದದ್ದೂ
ಹೀಗೆಯೇ?

ಅಗಲಿಕೆ


ನಿನ್ನ ಅಗಲಿಕೆ
ಹಿಟ್ಟಿಸಿದೆ ಮನಸ
ಗರ್ಭದಲಿ ಅನುಮಾನದ
ಶಿಶುವ ಮರಳಿ ಬಂದು ಕರಗಿಸಿ
ಬಿಡು ಸಂಶಯದ
ಕೂಸಾಗಿ
ಬೆಳೆಯುವ
ಮುನ್ನ.

ನನ್ನ ಅಜ್ಜಾ ಅವರು

ಕಾರ್ಗತ್ತಲಲ್ಲಿ ಕಣ್ ಕಟ್ಟಿಕೊಂಡು
ಅಂಡಲೆಯುವಾಗ ಕೈ ಹಿಡಿದು
ಬೆಳಕ ತೋರಿ ಕಡಲ ತೀರವ
ಸೇರಿಸಿ ಬೆಳಕ ತೋರಿದ
ಜಗದ ಗುರು ನೀ----
ಹತಾಶೆ - ನೋವುಗಳು ತಳ
ಮಳದಿ ತಾಳ ಹಾಕಿದಾಗ ದಿಕ್ಕು
ತಪ್ಪಿ ದಿಕ್ಕನರಸುವಾಗ ದಿಕ್ಸೂಚಿಯಾದ
ಗುರುವಿನ ಗುರು ನೀ---
ಮಾತಲಿ ಮಮತೆ, ಮನದಲಿ ತಾಯ್ತನ
ನಿತ್ಯ ನಾ ಪಡೆವೆ ಹೊಸ ಹಾದಿ
ನಿಮ್ಮ ಪ್ರೀತಿ-ಬೈಗುಳಲಿ. ಗದರಿದರೆ ತಾಯಿ
ಮುನಿಸಿಕೊಳುವದುಂಟೆ ಮಗು?
ಬಾಳಪಯಣದಿ ಹಚ್ಚಹಸುರಾಗಿ ಇರಲಿ ಸದಾ
ಗುರುವೆ ನಿಮ್ಮ ಕೃಪೆ

ಮಹಾದಾನಿ




ದಾನದಿಂ ಮೆರೆದು ಮರೆಯಾಗದೇ
ಸುಳಿದು ಸೂಸುವ ಗಾಳಿಯಲಿ
ಅರಳುವ ಪ್ರತಿಭೆಗಳಲಿ
ನಿತ್ಯ ನೂತನವಾಗಿ ಕಂಗೊಳಿಸುವ
ದಿವ್ಯ ಚೇತನಕೆ ಸದಾನಮನಗಳು
.

ಜಗದಣ್ಣ



ಗೋಮುಖ ವ್ಯಾಘ್ರರು ಒಲೆ-ಧರೆ ಹತ್ತಿಸಿ
ಉರಿವಾಗ-ಉರಿಯಲಿ ಮೈಕಾಸಿಕೊಂಡಾಗ
ಜ್ಞಾನದ ಬಲದಿಂದ ಹೊತ್ತಿಕೊಂಡ ಚಿಜ್ಯೋತಿ.
ಉಳ್ಳವರ ಶಿವಾಲಯಗಳ ಉರುಳಿಸಿ ಇಷ್ಟ
ದೇವರ ಅಂಗೈಗಿಟ್ಟವ, ಗುಡಿಗೋಪುರ ಮಂಟಪ
ಗಳ ಗಾಳದಿ ಸಿಕ್ಕವರ 'ಅನುಭವ' ಮಂಟಪದಿ ಪ್ರತಿಷ್ಠಾಪಿಸಿದವ.
ಅಕ್ಕ, ಅಲ್ಲಮರ ವಚನ ಗಾನಕೆ ತಪ್ಪದೇ
ತಾಳ ಹಾಕಿದವ, ಎಲ್ಲರನು ಇವ ನಮ್ಮವ
ಎಂದೆನಿಸಿದರೂ ದುಷ್ಟ ದುರುಳರಿಗೆ ದುರಾಚಾರಿಗಳಿಗೆ
ಇವನಾರವ-ಎನಿಸಿದರೂ ಲೆಕ್ಕಿಸದೆ ತಲೆದಂಡ
ಹಿಡಿದು ರಾಜಮಾರ್ಗ ಸೃಷ್ಠಿಸಿದವ.
ಸಾವಿರ ವರುಷಗಳುರುಳಿದರೂ ಸಾವಿರದ ಸರದಾರ
ಸುಳಿದು ಸೂಸುವ ಗಾಳಿಯಲಿ ಪಡೆದು ಧನ್ಯವಾಗುವ
ಉಸಿರಿನಲಿ ಸದಾ ನೀನೇ ಅಣ್ಣ ಬಸವಣ್ಣ-ಜಗದಕಣ್ಣಣ್ಣ

ನನ್ನ ಸರ್



ಬದುಕು ಮಕ್ಕಳಾಟವಲ್ಲ ಖರೆ
ನಾವೇ ಮಕ್ಕಳಾಗಿ ಸಿಕ್ಕ ಸಿಕ್ಕವರು ಆಟ
ಆಡಿದರೆ ಹೇಗೆ ಸರ್? ಕಣ್ಣ ತುಂಬ ಕನಸು
ಮುಖದ ತುಂಬ ಮಾಸದ ಯಾರೂ
ಕಸಿಯದ ನಗೆ. ನಗೆ ಕೊಂಡವರು
ಖುಷಿಮತ್ತರಾಗಿ ತಿರುಗಿ ತೋರಲಿಲ್ಲ
ಸೌಜನ್ಯ ಪ್ರೀತಿ-ಹಣ. ಆದರೂ
ಮುನಿಸಿಕೊಳ್ಳಲಿಲ್ಲ ಜೀವ-ತುಂಬೆಲ್ಲ ಭಾವ
ಪ್ರೀತಿ-ಪ್ರೀತಿ ನಿಟ್ಟುಸಿರು. ನಿಮ್ಮನರಿಯದ
ಸಂಗಾತಿಗಳು ಎಲ್ಲಿ ಕಳೆದಿದ್ದಾರೆ ತಮ್ಮ ತಮ್ಮ
ಅಮೂಲ್ಯ ಸಮಯವ? ಸಿಕ್ಕರೆ ತಿರುಗಿ
ಕೊಡಲಿ ಪಡೆದ ಪ್ರೀತಿ ವಿಶ್ವಾಸ ನಗೆ ಸಂಭ್ರಮವ
ಕಾಲನ ಹಾದಿಯಲಿ ತೊಡರಿಗೆ ಸಿಕ್ಕವರ ಎಬ್ಬಿಸಿ ತಟ್ಟುವ
ಸಾಗಲಿ ಜೀವ ಪಯಣ


ಪಂಡಿತ




ನಡೆಗಿಂತ ನಗೆ ಗಂಭೀರ
ಮೌನದಲಿ ಸಾವಿರಾರು ಭಾವಗಳ
ಸರದಾರ
ಪಾಂಡಿತ್ಯ-ಅಧ್ಯಯನ ಹೂಂಕಾರ
ಝೇಂಕಾರಗಳ ಗ್ರಹಿಸಿ ಗಮನಿಸುವ
ಕಾವಲುಗಾರ
ಬ್ರಹ್ಮಾನುಭವದ ಬ್ರಾಹ್ಮಣ್ಯ
ಸಂಸ್ಕೃ-ಸಂಸ್ಕೃತಿಗಳ ಮಂಥನದಿ
ಬೀಗುವ ಛಲಗಾರ
ಟೀಕೆ-ಟಿಪ್ಪಣಿಗೆಲ್ಲ ಇಲ್ಲಿ
ಇಲ್ಲ ಉತ್ತರ
ಜ್ಞಾನದಾಗರದ ಕನ್ನಡಕದ ಹಿಂದಿನ ಕಂಗಳ ಮಿಂಚು
ತುಟಿ ಮೇಲಿನ ಕಿರುನಗೆ ಸಾಗಿಯೇ
ಇರಲಿ ಹೀಗೆ ನಡೆದದೆಲ್ಲ ರಾಜಮಾರ್ಗ

ಸ್ನೇಹ




ಜಗದ ಮಾರುಕಟ್ಟೆಯಲೆಲ್ಲೂ ಲಭ್ಯವಿರದ
ಮಂದಹಾಸ
ಪ್ರೀತಿ-ವಿಶ್ವಾಸ ನಿತ್ಯ ಶ್ವಾಸಕೋಶ
ಕನಸ ಕಾಣುವದು ಕಂಡ ಕನುಸುಗಳಿಗೆ
ಬಣ್ಣ ತುಂಬಲು ಹೆಣಗುವದು
ಚಿತ್ತಾರ ಸುಂದರವಾದಾಗ ಮಕ್ಕಳ ಹಾಗೆ
ನಗು ಕೇಕೆ ಯಾರಿಗೆ ಬೇಕಿತ್ತು ಸದಾ ಗಡಿಬಿಡಿ
ಕ್ರಿಯಾಶೀಲತೆಗೆ ಒಂಚೂರು ವಿರಾಮ ಕೊಡಿ
ಟೋಪಿ ಹಾಕಲು ಯಾವ ಗೂಟವಾದರೇನು?
ಗರಿಗರಿ ಇಸ್ತ್ರಿ ಕೆಡದಿದ್ದರೆ ಸಾಕು - ತಲೆ
ಮಾಸದಿರಲು ಟೋಪಿಯೂ ಬೇಕು, ಗೂಟವೂ ಬೇಕು
ಸುಂದರ ಕನಸುಗಳಿಗೆ ಬಣ್ಣ ತುಂಬುವದಿದ್ದರೆ ಹಗಲು
ಬರುವದೇ ಬೇಡ ಬಾಳಿನ ಪಯಣ ಮುಗಿಯದೇ
ಸಾಗಿರಲಿ ಸ್ನೇಹ ಬಂಡಿ.

ಜಡದ ಹಾಡು

ಬದುಕು ಸುತ್ತೆಲ್ಲ ಜಂಜಡದ ಗಂಟು
ಗಳ ನಂಟು
ಹೊರಬರಲೆತ್ನಿಸಿದಂತೆ ಸಿಕ್ಕುವೆವು
ಸಿಂಬಳದ ನೊಣದಂತೆ
ಅಂತೆ-ಕಂತೆಗಳ ಬದುಕಿಗೆ
ನೂರೆಂಟು ಜಡತೆಯ ಗಂಟು
ಬಿಚ್ಚಲೆತ್ನಿಸಿದಂತೆಲ್ಲ ಬೀಳುವದು
ಮತ್ತೆ ಕಗ್ಗಂಟು
ಹಸಿದ ಹೊಟ್ಟೆ ಹಿಟ್ಟ ಪಡೆದರೆ,
ಬಟ್ಟೆಗೆ ಪರದಾಟ
ಒಂದಿದ್ದರೆ, ಇನ್ನೊಂದರ ಕೈ ಬಿಡುವ
ನಿತ್ಯ ಬದುಕಿನ ಹೋರಾಟ
ಹಸನದ ಬಾಳು ಕನಸಿನ ಹಾಡಾಗಿ
ಕರ್ಕಶದಿ ಹಾಡುವ ಪಕ್ಷಿ
ಚೀರುತಿದೆ ಹಾಹಾಕಾರದಿ
ನಿತ್ಯ ಸಮಸ್ಯೆಯ ಸುತ್ತ
ನಳನಳಿಸುವ ಜೀವಕೆ-
ತ್ಯಾಗ, ಪ್ರೀತಿ, ವಿಶ್ವಾಸಗಳೆಲ್ಲ ಸವಕಲುನಾಣ್ಯ
ಜಣ, ಜಣ,ಜಾರಿ ಹೋಗಿವೆ
ಹೊಟ್ಟೆ ಬಟ್ಟೆಗಳ ಚಿಂತೆಯಲೂ
ಜುಟ್ಟಿಗೆ ಹೂವ ಸಿಗಿಸುವ ಕೃತಕತೆಯಲಿ
ಸೋರಿಹೋಗಿದೆ ಬದುಕ ಬೆಲೆ
ಬಾಳಿಗಿಲ್ಲ ನೀತಿ, ಬದುಕಿಗಿಲ್ಲ ರೀತಿ
ಹೊಂದಿಯೂ ಹೊಂದದಂತೆ
ಪಡೆದೂ ಪಡೆಯದಂತೆ
ದೂರಾಗಿವೆ ಸಂಗತಿ-ಸಂಗಾತಿಗಳೆಲ್ಲ
ಮನದ ಮೂಲೆಯಿಂದ ಎಲ್ಲವೂ ಯಾಂತ್ರಿಕ, ತಾಂತ್ರಿಕ,
ವೇಗದ ಬದುಕು ನಿರ್ಜೀವ ಯಂತ್ರ?
ಇದಕೆ ಬೇಕಿಲ್ಲ ಚಾಲಕನ ತಂತ್ರ
ಕೊನೆಯಿಲ್ಲ
ಈ ತಾಳ ತಪ್ಪಿದ ಬಾಳ ಹಾಡಿಗೆ

ಸಿಟ್ಟು


ನುಂಗಿದರೆ
ವಿಷ
ಕಾರಿದರೆ
ಬೆಂಕಿ

ನಾಯಿಗಳಿವೆ ಎಚ್ಚರಿಕೆ



ಹತ್ತಿರದ ಬಂಧುಗಳ ಮನೆ
ಮುಂದಿನ ಗೇಟಿಗೆ ತಗುಲಿದ
ಬೋರ್ಡ್ 'ಇಲ್ಲಿ ನಾಯಿಗಳಿವೆ ಎಚ್ಚರಿಕೆ'
ಕೆಲ ಕ್ಷಣ ತಡೆಯಿತು ನನ್ನ
ನಿ----ಧಾನ ಹೆದರುತ್ತ...... ತೆಗೆದ
ಗೇಟಿಗೆ ಕಾಣಿಸಲಿಲ್ಲ ನಾಯಿಗಳು
ನನಗೆ ಅಚ್ಚರಿ!
ಸಪ್ಪಳಕೆ ತೆರೆದ ಬಾಗಿಲಿನ ಹಿಂದೆ
ಕರೆದರು ಬಂಧುಗಳು ಅಕ್ಕರದಿ
ಒಳಗೆ ಹೋದೆ ಅವರ ಮಾತುಕತೆ
ತೋರಿದ ಪ್ರೀತಿ ವಿಶ್ವಾಸ ಅನುಭವಿಸಿದಾಗ
ಅನ್ನಿಸಿತು
"ಇಲ್ಲಿ ನಾಯಿಗಳಿವೆ ಎಚ್ಚರಿಕೆ!"
ನಾಯಿಗಳಿವೆ ಎಚ್ಚರಿಕೆ!! ಎಂದು.

ನವರಸಗಳ ಅಲೆದಾಟ


ಹೀಗೇಕೆ ಒಂದೊಂದು ಶಕ್ತಿಗೆ ಒಂದೊಂದು ರೂಪ
ಪ್ರೀತಿ ಸುರಿಸುತ್ತೇನೆ, ಸಿಟ್ಟು ಕಾರುತ್ತೇನೆ, ಕೆಂಡವಾಗುತ್ತೇನೆ
ಕರಡಿಯಂತೆ, ಉಡದಂತೆ ತಬ್ಬುತ್ತೇನೆ ಪ್ರೀತಿಯಿಂದ
ಸಂಗಾತಿಯ
ಪ್ರೀತಿ ತಬ್ಬುಗೆ ಕೊಸರಲಾರಳು
ಸಿಟ್ಟಿನ ಬೆಂಕಿಯ ಸಹಿಸಲಾರಳು
ಪ್ರೀತಿಯ ಕಂಗಳ ಪುಳಕ ರೋಮಾಂಚನಕೆ ಹೆದರಿ
ಎದುರಿಸಲಾರಳು
ಒಮ್ಮೊಮ್ಮೆ-
ಸಿಟ್ಟಿನ ಕೆಂಡದ ಕಣ್ಣುಗಳ
ಬೆದರಿ ಸಹಿಸದೇ ತಪ್ಪಿಸಿಕೊಳುವಳು
ಕರಗಿ ನೀರಾಗಿ ರಸಮಯ ಪಿಸುಮಾತಿಗೆ
ಸುಟ್ಟು ಬೂದಿಯಾಗುವಳು
ಅಬ್ಬರಿಸಿ ಬರುವ ಕೆಂಡದಂಥ ಬೈಗುಲಕೆ.
ನಿತ್ಯ ಹೊರಾಟದ ಬದುಕು
ಆಕೆ ನನ್ನ ಎದುರಿಸಲು.
ಬಿಡಲಾರಳು ಹಿಡಿಯಲಾರಳು
ಅತೀ ಆದರೆ ಪ್ರೀತಿಯೂ
ಭಯವೇ, ಸಿಹಿಯೂ ಕಹಿ
ಹವದಲ್ಲ ಅಂದುಕೊಳ್ಳುತ್ತೇನೆ ಕರೆದಾಗ ಬರಲಿಲ್ಲ ಅಂದರೆ
ಮತ್ತೆ,ಮತ್ತೆ, ಮತ್ತೆ ಎಲ್ಲ ಮರೆತು
ಕೆಂಡವಾಗುತ್ತೇನೆ.
ನಿತ್ಯ ಬದುಕಿನ ಪುಸ್ತಕದಲಿ ಬರೆದಿರುವ
ವಿಪರ್ಯಾಸದ ಅಧ್ಯಾಯಗಳೇ
ಈ ಬದುಕಿನ ಮುಖಗಳು

ಕನ್ನಡಕ್ಕಾಗಿ ಚಂಪಾ ತೆಗೆದ ರಂಪಾ


ಗಾಬರಿಯಾಗಿದ್ದಾರೆ ಕನ್ನಡದ
ಕಣ್ ಮಣಿಗಳು ಜ್ಞಾನ
ಪೀಠದ ಮೇಲೆ ಕುಳಿತು
ಪಿಳಿ ಪಿಳಿ ಕಣ್ ಬಿಡುತ
ಯಾಕೆ ಬೇಕಿತ್ರಿ ಆಳುವವರ
ಉಸಾಬರಿ ಎಂದುಸುರುತ್ತಲೇ
ಕನ್ನಡಕ್ಕಾಗಿ ಚಂಪಾ ತೆಗೆದ ರಂಪವನು
ಅಣಕಿಸುತ್ತಾರೆ.
ಸಾಹಿತ್ಯ ಇರುವದೇ ಆಳುವ
ವರ ಹೊಗಳಲೆಂದೇ ಹೊಗಳಿಕೆಗೆ
ಮರುಳಾದ ರಾಜರುಗಳ ಕಿರೀಟಗಳು
ಹಾರಿದವು; ಸಿಂಹಾಸನದ ಕಾಲುಗಳು
ಕೀಲು ಕಳೆದುಕೊಂಡವು. ಹೊಗಳು
ಭಟರು ಕನ್ನಡ ಕನ್ನಡಕ ಬದಿಗಿರಿಸಿ
ಜುಬ್ಬಾ ಸರಿಯಾಗಿಸಿ, ಒಮ್ಮೆ ದಾಡಿ ನೀಟಾಗಿಸಿ
ಎಳೆಯುತ್ತಾರೆ ಆಳುವವರ ತೇರನು
ಕನ್ನಡಕೆ ಕನ್ನ ಹಾಕಿ. ಕುರ್ಚಿ ಕಬಳಿ
ಸಲು, ಸೈಟು ಹೊಡೆಯಲು ಜ್ಞಾನ - ಸು
ಜ್ಞಾನ ಪೀಠಗಳನೇರಲು ಬೇಕೇ ಬೇಕು
ಕನ್ನಡ-ಬೇಕಿಲ್ಲದವರಿಗೆ ಈ ಜಲ
-ನೆಲ-ಜನರ ರಕ್ಷಣೆ ಕನ್ನಡಿಗರಿಗೆ ಇವರು
ಕೊಟ್ಟದ್ದೇ ಕಟ್ಟಪ್ಪಣೆ!
ಸೆಟಗೊಂಡ ರಾಜ
ಕುಮಾರಣ್ಣಗಳು ಕೊಂಚ ವಿಷಣ್ಣರಾದರೂ
ತಪ್ಪಿಸಿಕೊಳ್ಳದೇ ಹಾಡಿದರು ಅದೇ ರಾಗವ
ಕನ್ನಡದ ತಾಳದಿ
ಕ್ಯಾತೆ ತೆಗೆದವರು ಖ್ಯಾತಿ ಪಡೆದವರು
ಸದ್ದಿಲ್ಲದೆ ಏರುತ್ತಾರೆ ನಿಧಾನ
ಸೌಧವ ರಮಿಸುತ್ತಾರೆ ಗದ್ದ ತುಟಿ ಹಿಡಿದು
ಸೆಟಗೊಂಡವರ
ಎಪ್ಪತ್ತರ ಹರೆಯದವರಿಗೆ
-ಆಟ ಹತ್ತಬಾರದು, ಚಂಪಾರ
ಬಾಯಿಗೆ ಭಂಡರು ಸಿಗಬಾರದು.
ಶಿವನ ಮೊಗ್ಗಿನಲಿ ಅರಳಿದ ಕನ್ನಡ
ಕಣ್ಣುಗಳು ಖುಷಿಯಲಿ ಹಾಡಿ
ಹರಸಿವೆ ಕನ್ನಡಕಾಗಿ ಚಂಪಾ
ತೆಗೆದ ರಂಪವನು.
ಬಿರುದು ಬಾವಲಿಗಳ ಹೊಡಕೊಂಡವರು
ಸೆಟಗೊಂಡು ನೇತಾಡುತಿಹರು ತೊಗಲು
ಬಾವಲಿಗಳ ಹಾಗೆ ಇಂಗ್ಲಿಷ್ ಟೊಂಗೆಯಲಿ
.

ಮ್ರತ್ಯುಂಜಯ


ಮೃತ್ಯುವನು ಗೆಲ್ಲದ
ಮೃತ್ಯುಂಜಯ
ಸದಾ ಮಂದಹಾಸವ
ಬೀರುವ ನಿಮ್ಮ ಮೊಗ
ಯಾರು, ಎಲ್ಲಿಯೂ ತರಲಾರರು
ಮತ್ತೆ,
ಪಕ್ಕನೆ ಕೈಯ ಹಕ್ಕಿ
ಹಾರಿ ಹೊಡೆದಂತೆ ವಿಧಿ
ಕಿತ್ತುಕೊಂಡ ಕ್ರೂರತೆ
ನೆನೆದರೆ ನಿಮ್ಮ ನಗು
ಬಲ್ಲವರ ಹೃದಯದಲಿ ನಿಲ್ಲದ ನಡುಕ
ಎಲ್ಲೆಲ್ಲೂ ಮಾರ್ದನಿಸುತಿದೆ
ಮಾತುಗಳ ಮಾರ್ಧನಿ ಸವಿದ
ಹೃದಯಗಳಲಿ
ಯಮ ನೀವು ರೋದದಳಿಗೆ
ಬ್ರಹ್ಮ ನೀ ರೋಗಿಗಳಿಗೆ
ಹಣ, ಅಧಿಕಾರ, ವೃತ್ತಿ
ಅಹಂಕಾರದಿ ತೊಡರಾಗಲಿಲ್ಲ
ನಿಮ್ಮ ನಿಶ್ಚಿಂತ ನಡಿಗೆಗೆ
ಒಮ್ಮೆಲೇ ಹಾರಿಹೋಯಿತು
ಜೀವ
ಮೊದಲೆ ಬಿದ್ದಿತು ಪರದೆ
ಜೀವನ ನಾಟಕ ಮುಗಿಯುವ
ಮುನ್ನ
ನಿತ್ಯನೂತನ ಹಚ್ಚ
ಹಸಿರು ನಿಮ್ಮ ನೆನಪಿನ
ನಗೆ
ರಾಜಕೀಯ ವಿಷವರ್ತುಲ
ಕಿರಿದಾಗಿಸಿತು ನಿಮ್ಮ ಹಿರಿತನವ.

ನಿನ್ನ ಕಣ್ಣ ಸೆಳೆತದಲಿ



ಏನು ಬರೆಯಲಿ
ಹೇಗೆ ಹಾಡಲಿ
ನಿನ್ನ ಅನುರೂಪ ಸೌಂದರ್ಯ
ರಾಶಿಯೆದುರು ನಿಂತ ಬಳಿಕ
ನಿನ್ನರಳಿದ ಕಂಗಳು
ಕಸಿದಿವೆ ಅಕ್ಷರಗಳ
ಮರೆಸಿವೆ ಭಾವನೆಗಳ
ಅವ್ಯಕ್ತ ಆಸೆ ಹುಡುಕುತಲಿದೆ
ಎಲ್ಲಿಯಾದರೂ ಸಿಗಬಹುದೆ ನೆಮ್ಮದಿ
ದಿನವು ಈ ದೇಶದ ನಾಗರಿಕರು
ಕಲೆದುಕೊಳ್ಳುತ್ತಿರುವ ಹಕ್ಕುಗಳು
ಹಗಲುಗಳ್ಳರು ಹುಟ್ಟಿಸುತಿರುವ
ಸಮಸ್ಯಗಳ ಸುಳಿಗೆ ಸಿಕ್ಕ ಮನುಷ್ಯರು
ಫೈಲು ಹೊತ್ತು ಅಲೆದಾಡುವ ಪದವೀಧರರಿಗೆ
ನೌಕರಿ ಎಲ್ಲಿ?
ಕಾಡುಗಳ್ಳರ ಬಂಧಿಸಲು ಯತ್ನಿಸುವ
ಪೋಲಿಸರು
ದೇಶ ರಕ್ಷಿಸಲು ಪರದಾಡುತಿರುವ
ರಾಜಕಾರಣಿ
ಇಲ್ಲ,ಇಲ್ಲ, ಇದೆಲ್ಲ ಶುದ್ಧ
ಭ್ರಮೆ, ಕನಸು
ಹೇಗೆ ಸಿಕ್ಕೀತು ತಿರುಗಿ ಬಾರದ
ಎಂದೋ ಕಳೆದುಹೋಗಿರುವ ಕುಸಿಯುತ್ತಿರುವ
ಮೌಲ್ಯ ಈ ಭ್ರಷ್ಟ ದೇಶದಲಿ
ಎಲ್ಲ ಆಸೆಗಳು ಮಣ್ಣು
ಗೂಡಿದರೂ ನಲ್ಲೆ
ನಿನ್ನ ಕಣ್ಣ ಸೆಳೆತ ಕೆಲ
ಕ್ಷಣಕಾದರೂ ಮರೆಸಿದೆ ಎಲ್ಲವ
ಅಸ್ಥಿರ ಬದುಕಿನ ದಿವಾಳಿತನವ


ಏನು ಬರೆಯಲಿ
ಹೇಗೆ ಹಾಡಲಿ
ನಿನ್ನ ಅನುರೂಪ ಸೌಂದರ್ಯ
ರಾಶಿಯೆದುರು ನಿಂತ ಬಳಿಕ
ನಿನ್ನರಳಿದ ಕಂಗಳು
ಕಸಿದಿವೆ ಅಕ್ಷರಗಳ
ಮರೆಸಿವೆ ಭಾವನೆಗಳ
ಅವ್ಯಕ್ತ ಆಸೆ ಹುಡುಕುತಲಿದೆ
ಎಲ್ಲಿಯಾದರೂ ಸಿಗಬಹುದೆ ನೆಮ್ಮದಿ
ದಿನವು ಈ ದೇಶದ ನಾಗರಿಕರು
ಕಲೆದುಕೊಳ್ಳುತ್ತಿರುವ ಹಕ್ಕುಗಳು
ಹಗಲುಗಳ್ಳರು ಹುಟ್ಟಿಸುತಿರುವ
ಸಮಸ್ಯಗಳ ಸುಳಿಗೆ ಸಿಕ್ಕ ಮನುಷ್ಯರು
ಫೈಲು ಹೊತ್ತು ಅಲೆದಾಡುವ ಪದವೀಧರರಿಗೆ
ನೌಕರಿ ಎಲ್ಲಿ?
ಕಾಡುಗಳ್ಳರ ಬಂಧಿಸಲು ಯತ್ನಿಸುವ
ಪೋಲಿಸರು
ದೇಶ ರಕ್ಷಿಸಲು ಪರದಾಡುತಿರುವ
ರಾಜಕಾರಣಿ
ಇಲ್ಲ,ಇಲ್ಲ, ಇದೆಲ್ಲ ಶುದ್ಧ
ಭ್ರಮೆ, ಕನಸು
ಹೇಗೆ ಸಿಕ್ಕೀತು ತಿರುಗಿ ಬಾರದ
ಎಂದೋ ಕಳೆದುಹೋಗಿರುವ ಕುಸಿಯುತ್ತಿರುವ
ಮೌಲ್ಯ ಈ ಭ್ರಷ್ಟ ದೇಶದಲಿ
ಎಲ್ಲ ಆಸೆಗಳು ಮಣ್ಣು
ಗೂಡಿದರೂ ನಲ್ಲೆ
ನಿನ್ನ ಕಣ್ಣ ಸೆಳೆತ ಕೆಲ
ಕ್ಷಣಕಾದರೂ ಮರೆಸಿದೆ ಎಲ್ಲವ
ಅಸ್ಥಿರ ಬದುಕಿನ ದಿವಾಳಿತನವ

ಹೋಳಿಹಬ್ಬ



ಹೊಲಸು ಹಾಡ ಹಾಡುತಾ
ಲಬೋ,ಲಬೋ, ಬೈಗುಳ
ವರ್ಷದುದ್ದಕ್ಕೂ ತಡೆದಿಟ್ಟ
ಭಾವನೆಗಳ ಆಸ್ಫೋಟ.
ಏರುವ ಬೆಲೆಗಳ ಕಂಡು,
ದೊರಕದ ರೇಶನ್ ಗೆ ಕ್ಯೂ ಹಚ್ಚಿ
ಸಿಕ್ಕಾಪಟ್ಟೆ ಹಣ ತೆತ್ತರೂ ನಿಂತೋ
ಬಸ್ಸಿನ ಮೇಲೆಯೋ ಪ್ರಯಾಣಿಸಿ,
ಉರುಳಿ ಉರುಳಿ ಮತ್ತೆ ಅಧಿಕಾರ
ಕೇರಲು ಓಟ ಕೇಳಲು ಬರುವ
ರಾಜಕಾರಣಿಗಳ ಕಂಡು.
ನಿತ್ಯ ಹೋಳಿ ಹಬ್ಬ ಬದುಕಿನಲಿ
ಆದರೆ ಹೊಯ್ಕೊಳ್ಳುತ ಅಸಭ್ಯತೆಯ
ತೋರದ ಮನ ಕಾಯ್ದು ಕುಳಿತಿತ್ತೆ?
ಎಲ್ಲ ಒಮ್ಮೆಲೆ ಸೇರಿಸಿ ಆಚರಿಸುವ
ಹೋಳಿಯ ರಂಗು ರಂಗಿನಲಿ
ಅಂತೂ, ಇಂತೂ ವರ್ಷಕ್ಕೊಮ್ಮೆಯಾದರೂ
ಹಗುರವಾಗಬಹುದು ಹೋಳಿಯ
ನೆಪದಲಿ

ನಮ್ಮ ರಕ್ತ ಹಂಚಿಕೊಂಡು
ಹುಟ್ಟಯೂ ದೂರ ತಳ್ಳಲ್ಪಟ್ಟ
ನತದೃಷ್ಟರಿವರು
ಓಟಗಿಟ್ಟಿಸಲು ಪುಂಡರು
ಇವರನು ಛಿದ್ರವಾಗಿಸಲು ಹೊರಟಿದ್ದಾರೆ
ಜಾತಿಯ ಪಟ್ಟ ಕಟ್ಟಿ
ದೂರ, ದೂರ ಸರಿಯುತಲಿಹರು
ಭಿನ್ನ ಭೇದಗಳ ಸೃಷ್ಟಿಸಿದವರ ಮಾತ ನಂಬಿ
ಯಾರಿಲ್ಲ ಇವರ ಸುತ್ತ
ಶೋಷಣೆಗೊಳಗಾದಾಗಲೆಲ್ಲ
ಪೇಪರಿನಲ್ಲಿ ಬರೆಸಿಕೊಳ್ಳಲು, ಶಬ್ಬಾಸಗಿರಿ
ಗಿಟ್ಟಿಸಲು ಎಲ್ಲರೂ ಹೋಗೋಗಿ ಬರುತಾರೆ
ಕೇರಿಗೆ, ತಕ್ಷಣ ತಪ್ಪದೆ ಸ್ನಾನ ಮಾಡು ತಾರೆ
ಮೈಲಿಗೆ ಆಯಿತೆಂದು ಬಡಬಡಿಸಿ
ಗಾಂಧಿ, ಬಸವ, ಅಂಬೇಡ್ಕರ ಸಿಕ್ಕು
ನರಳುತಿರುವರು ಪುಢಾರಿಗಳ ಬಾಯಲಿ
ದಲಿತೋದ್ಧಾರ ನೆಪದಲಿ
ಇನ್ನೂ ಮಲ ತಿನ್ನುವ, ಚಾಟಿಗೆ ಮೈ
ಒಡ್ಡುವ ಕಣ್ಣಲಿ ನೋವ ರಕ್ತ ಸುರಿಸುವರ
ಕಣ್ಣೊರೆಸಲು ಆಗೀಗ ಬರುವರೆಲ್ಲ
ಯಾರಿಗೂ ಬೇಕಿಲ್ಲ ಮನಸಾರೆ ಕೊಡುವದು
'ರಿಜರ್ವೇಶನ್' ತಮ್ಮ ಹೃದಯದಲಿ

ನನ್ನ ಹಾಡು

ಮಾತೆಲ್ಲ ಹಾಡಾಗಹತ್ತಿದೆ
ಭಾವವಿಲ್ಲದೆ, ಓದುವರಿಲ್ಲ
ಕೇಳುವರಿಲ್ಲ ನಾ ಹಾಡಿದ
ಹಾಡುಗಳ
ಆದರೂ ಹುಟ್ಟುತಿವೆ ಲೆಕ್ಕವಿಲ್ಲದೆ
ಯಾರು ಆಲಿಸುವದು, ಕಣ್ಣರಳಿಸುವದು
ಬೇಡ ಈ ಹಾಡಿಗೆ
ಕೆರಳಿದ ಭಾವ ತಳಮಳಿಸಿದ
ಜೀವ
ನನ್ನ ನಾ ರಮಿಸಲು ಹಗುರ
ಪೋಣಿಸಿದರೆ ಈ ಹಾಡು ನುಡಿಯ
ನೋವೆಲ್ಲ ಮಂಗ ಮಾಯ
ಹಂಚಿಕೊಂಡಾಗ
ಭಾವಕೂ ಪದಕೂ ತಾಳ ಬೇಕೇ?
ಬೇಕೆ ಏನಾದರೂ ಕಟ್ಟಿ ಹಾಡಲು
ಕವಿಯಾಗುವದು ಬೇಡೆನಗೆ
ಶಬ್ದಗಳು ಹದಗೊಳ್ಳಲಿ
ಮಾತು ಮತಿಯಾಗಿಸಲಿ
ನನ್ನೆತ್ತರಕೊಯ್ಯಲಿ ನನ್ನ ಬದುಕ
ಹಸನಾಗಿಸಿ ಜೀವ ಉಳಿಸಲಿ
ಈ ಹಾಡು ಯಾರಿಗೂ ಹಾಡಾಗದಿದ್ದರೂ
ಕೇಳುವದು ಬೇಡವಾದರೂ

ವಿಷವ್ರಕ್ಷ

ಚಿತ್ತಾಕರ್ಷಕ ಹೂ-ಎಲೆಗಳ
ಬಲಿತು ಕೊಬ್ಬಿದ ರೆಂಬೆ-ಕೊಂಬೆಗಳ
ಫಲಭರಿತ ಮಾವಿನ ಹಣ್ಣುಗಳ
ಬಲಿತ ಬಡ್ಡೆಯ ವೃಕ್ಷ
ಬೇಡ ಬೇಡವೆಂದರು ಸೆಳೆಯಿತಲ್ಲ ನನ್ನ ಕಣ್ಣು
ಪಾಪ! ಗೆಳೆಯ ಕಷ್ಟದಿ ನಿಟ್ಟುಸಿರನುಣಿಸಿ
ಕಣ್ಣೀರ ಕೋಡಿ ಹರಿಸಿ ಹಗಲು-ರಾತ್ರಿ
ಕಣ್ಣಲಿ-ಕಣ್ಣಿಟ್ಟು ಬೆಳೆಸಿಯೇ ಬಿಟ್ಟನಲ್ಲ
ತನ್ನ ಮನೆಯಂಗಳದಲಿ
ನಗುಮೊಗದ ಮಾವಿನ
ರುಚಿಯ ಗೆಳೆಯನಳೆಯದೆ
ತಪ್ಪಿಸಿಕೊಳ್ಳಲಿಲ್ಲ ಧೃತ ಆಲಿಂಗನದಿ
ಬಾನಂಗಳದ ಚುಕ್ಕೆಗಳ ಬೊಗಸೆಯಲಿ ಹಿಡಿದು
ಕಡಲನೇ ಮುಕ್ಕಳಿಸಿ ಕುಣಿಯುವ ನಾ
ಯಾರು ನನಗೆ ತಿಳಿಯಲೆ ಇಲ್ಲ.
ಮಾತುಗಳ ಸಿಂಚನದ ಸೆರಗ ಹಾಸಿ
ಅಡವಿಟ್ಟ ಮನದಾದರಗಳ ಚಾದರ ಹೊದ್ದು, ಬೇಸಿಗೆಯಲಿ
ತಣ್ಣಗೆ ಚಳಿಯಲಿ ಬೆಚ್ಚಗೆ ಮುದನೀಡುವ
ಗೆಳೆಯನ ಆರೈಕೆಯಲಿ ಆಳೆತ್ತರ ಬೆಳೆದ ಮರ
ನಿತ್ಯಾಕರ್ಷಕ-ಚಿತ್ತಾಕರ್ಷಕ ನನ್ನಂತೆ, ಒಮ್ಮೊಮ್ಮೆ
ಅವನಂತೆ
ಕುತೂಹಲ ವಿಶ್ವಾಸ ಅಗಮ್ಯ-ಅಗೋಚರ
ಸೆಳೆತ ನನ್ನನೆಳೆಯಿತು ವೃಕ್ಷದೆಡೆಗೆ
ಮೊದಲ ಪಾಪದ ಹಣ್ಣು
ತೆರೆಸಲಿಲ್ಲ ನನ್ನ ಒಳಗಣ್ಣು
ಮನದಾಳದ ಹಸಿವ ನೀಗಿಸಲು
ಇಳಿಸಿದೆ ಸಿಹಿ ಆಳದೊಳಗೆ
ಹುತ್ತ ಸೇರುವ ಹಾವಂತೆ ನುಸು-ನುಸುಳಿ
ಸಳ-ಸಳನೆ ಸರ-ಸರನೆ ಕಾಳ್ಗಿಚ್ಚಿನಂತೆ
ಇಳಿಯಿತು ಕರುಳಿನಾಳಕೆ
ಅಧರಕ್ಕೆ ಸಿಹಿ, ಉದರಕ್ಕೆ ಹೆಬ್ಬಾವು
ತಾಂಡವ ನೃತ್ಯ ಕತ್ತರಿಸಿತು ಕರುಳ ಬಳ್ಳಿಯನೆ
ಯತ್ನಿಸಿತು ಹೊರಬರಲು ನನ್ನ ತಿರುತಿರುಗಿ
ಒಗೆಯುತಲಿ
ಗಂಟಲಲಿ ಸಿಕ್ಕ ಉಸಿರು ಕೊಸರುತಲಿರುವಾಗ
ನೆನಪಾಯಿತು ಗೆಳೆಯನ ನಗು-ಮೊಗ
ನನ್ನನ್ನಿಲ್ಲಾಗಿಸಿದ, ಇಲ್ಲಾಗಿಸಿದ ಮಾವಿನ ಫಲ.
Read more...

ಗಾಂಧಿ ಮಾರ್ಗ

ಅರೆಬಟ್ಟೆ ತೊಟ್ಟು
ಹಗಲಿರುಳು ಕಣ್ಣಲಿ ಕಣ್ಣಿಟ್ಟು
ಉಪವಾಸ ಸತ್ಯಾಗ್ರಹಗಳ ಪಟ್ಟನು ತೊಟ್ಟು
ನೀನಲೆದೆ ಈ ದೇಶದ ಮೂಲೆ
ಮೂಲೆಯಲಿ
ಕಟ್ಟಿದೆ ಮನಸು ಮನಸುಗಳ
ಬೆಳೆಸಿದೆ ಸ್ವಾಭಿಮಾನವ
ಕಂಡೆ ಹಗಲಿರುಳು ಸ್ವಾತಂತ್ರ್ಯದ ಕನಸು
ಅಳಿಸಿ ಹಾಕಿದೆ ಜಾತಿ ವಿಷಮತೆ
ಸ್ಥಾನಮಾನ ಕೊಟ್ಟು ಆತ್ಮಾಭಿಮಾನ
ಬೆಳೆಸಿದೆ ದೀನ ದಲಿತರಿಗೆ
ಒದ್ದೋಡಿಸಿದೆ ದಾಸ್ಯತೆ ಹಬ್ಬಿಸಿದ
ಬಿಳಿಯರನು ಶಾಂತಿಮಂತ್ರವ ಹಾಡಿ.
ಇದೆಲ್ಲ ನೀ ನಮಗೆ ಹಾಕಿಕೊಟ್ಟ
'ಶಾಂತಿಮಾರ್ಗ' 'ಗಾಂಧಿ ಮಾರ್ಗ'
ಆದರೆ ಈಗಲೂ ಬಿಟ್ಟಿಲ್ಲ
ನಿನ್ನ ಮಾರ್ಗ ಖಾದಿ ತೊಟ್ಟು
ದೇಶವಾಳುತಿರುವವರು.
ಬಾಯಲೆಲ್ಲ ನಿನ್ನ ಮಂತ್ರ
ಬಳಸುವರೆಲ್ಲ ತಮ್ಮದೇ ಹೊಲಸು ಕುತಂತ್ರ
ಇವರೆಲ್ಲ ನಡೆಯುತಲಿರುವದು
'ಗಾಂಧೀ ಮಾರ್ಗ'ದಲೇ
ಯಾಕೆಂದರೆ ದೊಡ್ಡ ನಗರದ ರಸ್ತೆಗಳೆಲ್ಲವೂ
'ಗಾಂಧೀ ಮಾರ್ಗ', 'ಶಾಂತಿ ಮಾರ್ಗ', 'ನೀತಿ ಮಾರ್ಗ'
ಖುಷಿಪಡು, ಸಮಾಧಾನ ಹೊದು
ಅಜ್ಜಾ! ಇನ್ನೂ ಇವರು ನೀ ಹಾಕಿಕೊಟ್ಟ
ಮಾರ್ಗದಲಿ ಕಾರು ಓಡಿಸಿ ಧೂಳು ಎಬ್ಬಿ
ಸಿರುವುದು ಕಂಡು.
Read more...

ಬೆನ್ನುಡಿ

ಪ್ರೊ. ಸಿದ್ದು ಯಾಪಲಪರವಿ ಸೊಗಸಾದ ಮಾತುಗಾರ. ಸಂಪರ್ಕಕ್ಕೆ ಬಂದ ಯಾವ ವ್ಯಕ್ತಿಯೂ ಸುಲಭವಾಗಿ ಮರೆಯಲಾರದ ವ್ಯಕ್ತಿತ್ವ. ನಾಡಿನ ಅನೇಕ ಮಠಾಧೀಶರು, ರಾಜಕಾರಣಿಗಳು, ಅಧಿಕಾರಿಗಳು, ಸಾಹಿತ್ಯ, ಸಾಂಸ್ಕೃತಿಕ ಲೋಕದ ಅನೇಕ ದಿಗ್ಗಜರ ಸಂಪರ್ಕ ಮತ್ತು ಒಡನಾಟ ಇವರಿಗೆ ಬಲು ಸರಳ. ಮಾತನಾಡುತ್ತ, ವಯಸ್ಸಿಗೆ ತಕ್ಕ, ಅನುಭವಕ್ಕೆ ಮೀರಿದ ಮಾತನಾಡುತ್ತಿರುವರೇನೋ ಅನಿಸುವಾಗಲೆ ತಮ್ಮ ಛಾಪನ್ನು ಎದುರಿಗಿರುವವರ ಮೇಲೆ ಒತ್ತಿಬಿಟ್ಟು ನೆನಪಿನಲ್ಲಿ ಉಳಿಯುತ್ತಾರೆ ಎಂಬುದು ಬಹಳ ಜನರ ಅನಿಸಿಕೆ. ನೇರ ಮತ್ತು ವಿಡಂಬನೆಯ ಮಾತುಗಳಿಂದ ಸ್ನೇಹಿತರನ್ನು ಪಡೆದಂತೆ ವಿರೋಧಿಸುವವರನ್ನು ಪಡೆದದ್ದು ಹೆಚ್ಚು.
ಆಳಕ್ಕಿಳಿಯದೆ ಸರಳವಾಗಿ ಅರ್ಥವಾಗದ ನೆಲದ ಮರೆಯ ನಿಧಾನದಂತಹ ವ್ಯಕ್ತಿತ್ವ - ಲೇಖಕ, ವಾಗ್ಮಿ, ಉತ್ತಮ ನಿರೂಪಕ, ಸಾಕ್ಷ್ಯಚಿತ್ರ ನಿರ್ಧೇಶಕ, ಸಂದರ್ಶಕ, ಆಕಾಶವಾಣಿ ಕಲಾವಿದ, ಕವಿ, ವಿಮರ್ಶಕ, ಅದ್ಭುತ ಸಾಂಸ್ಕೃತಿಕ ಸಂಘಟಕ, ರಂಗನಟ, ಹೀಗೆ ಹಲವಾರು ಪ್ರತಿಭೆಗಳನ್ನು ಮೇಳೈಸಿಕೊಂಡಿದ್ದು, ಎಲ್ಲದರಲ್ಲಿಯೂ ಹಿಡಿತ ಸಾಧಿಸಿದ್ದರೂ ಯಾವುದಾದರೂ ಕ್ಷೇತ್ರಕ್ಕೆ ಆದ್ಯತೆ ನೀಡಿ ಗಟ್ಟಿಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದೇ ವಿರಳ. ಅನೇಕ ಕವಿಗೋಷ್ಠಿಯಲ್ಲಿ, ಪತ್ರಿಕೆಗಳಲ್ಲಿ ಇವರ ಕವಿತೆಗಳು ಅಭಿವ್ಯಕ್ತವಾಗಿದ್ದರೂ ಕವನಸಂಕಲನ ಇಷ್ಟು ಕವನಗಳನ್ನು ಹೊಂದಿರುವ ಈ ಕವನ ಸಂಕಲನದಂತೆ ಇನ್ನೂ ಅನೇಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ಪ್ರೊ. ಸಿದ್ದು ಯಾಪಲಪರವಿ ನೀಡಲಿ

-.ಡಾ.ಜಿ.ಬಿ.ಪಾಟೀಲ