Saturday, July 30, 2011

ಹೀಗೊಂದು ಸಂಕಷ್ಟ

ನಾವೇ ಕೇಳಿದ್ದು, ಕಂಡದ್ದು ಕೂಡಾ ಎಲ್ಲವೂ ಸತ್ಯವಲ್ಲ ಎಂದು ಒಮ್ಮೊಮ್ಮೆ ಅನಿಸುತ್ತಿತ್ತು ಆದರೆ ಈಗದು ಪರಿಪೂರ್ಣ ನಿಜವೆನಿಸುತ್ತದೆ. ಗಣಿಗಾರಿಕೆ ವಿಷಯದಲ್ಲಿ ಮಾನ್ಯ ಲೋಕಾಯುಕ್ತರು ತಮ್ಮ ವರದಿ ನೀಡಿದ್ದಾರೆ. ಖಂಡಿತಾ ಎಲ್ಲವೂ ನಿಚ್ಚಳವಾಗಿ ಪ್ರಾಮಾಣಿಕವಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡವರ ಹೆಸರು ದಾಖಲಾತಿಗಳು ಸ್ಪಷ್ಟವಾಗಿವೆ. ಈ ಪ್ರಕರಣದಲ್ಲಿ ಕೆಲವರು ಅಮಾಯಕರೆನಿಸುತ್ತಾರೆ. ಈ ಮಾತು ವಿಚಿತ್ರವಾದರೂ ಸತ್ಯ.ಗಣಿಗಾರಿಕೆಯ ಗಾಳಿ-ಗಂಧವನರಿಯದ ಆರೋಗ್ಯ ಸಚಿವ ಬಿ.ಶ್ರೀರಾಮುಲು ಈ ವರದಿಯಿಂದಾಗಿ ಅಧಿಕಾರ ಕಳೆದುಕೊಳ್ಳುವುದು ಪರಿಸ್ಥಿತಿಯ ವ್ಯಂಗವೇ ಸರಿ !ಸ್ವತಃ ಲೋಕಾಯುಕ್ತರಿಗೆ ಈ ವಿಷಯ ಗೊತ್ತಿದ್ದರೂ, ಗಣಿ ಕಂಪನಿಯ ಪಾಲುದಾರರಾದ ಪಾಪಕ್ಕೆ ಶ್ರೀರಾಮುಲು ಬಲಿಯಾಗಿದ್ದಾರೆ ಎಂಬ ಅರ್ಧ ಸತ್ಯ ಎಲ್ಲರಿಗೂ ಗೊತ್ತಾಗತೊಡಗಿದೆ.ಇಂದು ಮಾಧ್ಯಮ ಸ್ನೇಹಿತರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು ತುಂಬಾ ಆಪ್ತರಾಗಿ, ಪ್ರಾಮಾಣಿಕವಾಗಿ ಭಾವನೆಗಳನ್ನು ಹಂಚಿಕೊಂಡರು.ಬಾಲ್ಯದಿಂದಲೂ ಬಡತನದಲ್ಲಿ ಬೆಳೆದ ನಾನು ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬೆಳೆದು ಸ್ವತಃ ಅನ್ಯಾಯಕ್ಕೆ ಒಳಗಾಗಿದ್ದೇನೆ. ಅಂದ ಮಾತುಗಳು ಅರ್ಥಪೂರ್ಣವಾಗಿವೆ.ಅಲ್ಲಿ ಪ್ರಾಮಾಣಿಕತೆಯೂ ಎದ್ದು ಕಾಣುತ್ತಿತ್ತು. ಆದರೆ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಿದ್ದೇನೆ. ಈಗ ನಾನು ನನ್ನ ಪ್ರಾಮಾಣಿಕತೆಯನ್ನು ಒರೆಗಲ್ಲಿಗೆ ಹಚ್ಚಿಕೊಳ್ಳುವ ಸಂದರ್ಭ ಬಂದಿದೆ. ನನಗೆ ಗೊತ್ತಿರದೆ ಮಾಡಿದ ತಪ್ಪಿಗೆ ಈ ಶಿಕ್ಷೆ ಆಗಿರಬಹುದೇ ? ಎಂಬ ಆತ್ಮಾವಲೋಕನ ಅರ್ಥಪೂರ್ಣ ಆದರೆ ಕಾಲ ಎಲ್ಲವನ್ನೂ ನಿರ್ಧರಿಸುತ್ತದೆ. ನಿರ್ಧರಿಸಲಿ ಕೂಡಾ !

ಈಗಿನ ಲೋಕದಲಿ ಹೀಗಿರುತ್ತಾರಾ !ಆರ್.ರಾಮಪ್ರಿಯ

ಕಳೆದ ವರ್ಷದಿಂದ ವಿಧಾನ ಸೌಧವನ್ನು ತುಂಬಾ ಹತ್ತಿರದಿಂದ ನೋಡುವ ದುರಾದೃಷ್ಟ ನನ್ನದು.
ಈ ಹಿಂದೆ ನೌಕರಿ ಖಾತರಿಗಾಗಿ, ಎಂ.ಪಿ.ಪ್ರಕಾಶ ಅವರ ಸಾಂಸ್ಕೃತಿಕ ಸಂಬಂಧದಿಂದಾಗಿ ಬಾಪು ಹೆದ್ದೂರ ಶೆಟ್ಟಿ ಅವರ ನಿತಂತ ಸ್ನೇಹದಲ್ಲಿ ವಿಧಾನ ಸೌಧದ ಸಖ್ಯ ಇತ್ತು.ಗದುಗಿನ ಕಾಲೇಜು, ಸಾಂಸ್ಕೃತಿಕ ಜಂಜಾಟದಲಿ ಸ್ವಲ್ಪ ದೂರವಿದ್ದೆ. ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಬೌದ್ಧಿಕ ದಿವಾಳಿತನದ ಮಧ್ಯೆ ಈಗ ವಿಧಾನ ಸೌಧ ತುಂಬಾ ಭಿನ್ನವೂ, ಖಿನ್ನವೂ ಆಗಿದೆ.ಆದರೂ ಅಚ್ಚರಿಯೆಂಬಂತೆ, ಹೀಗೂ ಉಂಟೆ ಎಂಬಂತೆ, ಪ್ರಾಮಾಣಿಕರು, ದಕ್ಷರೂ ಇದ್ದಾರೆ ಎಂದರೆ ಏನರ್ಥ ?
ಈಗ ನಾ ಹೇಳಬಯಸುವದು ದಕ್ಷ, ಪ್ರಾಮಾಣಿಕ ಅಧಿಕಾರಿ, ಆರೋಗ್ಯ ಸಚಿವರ ಆಪ್ತ ಕಾರ್ಯದರ್ಶಿಗಳಾದ ಶ್ರೀರಾಮನಾಥಪುರ ರಾಮಪ್ರಿಯಾ ಅವರ ಬಗ್ಗೆ. ತೆಳಗಿನ, ಸರಳ ಉಡುಪಿನ ರಾಮಪ್ರಿಯರನ್ನು ಮೊದಲು ಕಂಡದ್ದು ಗದುಗಿನ ಕಾರ್ಯಕ್ರಮವೊಂದರಲ್ಲಿ. ಅರೆ ! ಪಿ.ಎಸ್. ಇಷ್ಟೊಂದು ಸರಳರಾಗಿರುತ್ತಾರೆ ಎಂದು ಬೆರಗಾಗಿದ್ದೆ
.ಕಳೆದ ವರ್ಷ ಅಪಘಾತಕ್ಕೆ ಒಳಗಾಗಿ ಕೈಮುರಿದುಕೊಂಡು ಜಯನಗರ ಆಸ್ಪತ್ರೆಯಲ್ಲಿದ್ದಾಗ ಪಿ.ಎಸ್. ಅವರು ತೋರಿದ ಪ್ರೀತಿ, ವಿಶ್ವಾಸ ಅವರನ್ನು ಹತ್ತಿರವಾಗಿಸಿತು.ಅವರು ಅಧಿಕಾರಿಯಾಗಿ ಹೇಗೆ ಎಂದು ಗೊತ್ತಿರಲಿಲ್ಲ.
ಮನುಷ್ಯನಿಗೆ ಹತ್ತಲ್ಲ ನೂರಾರು ಮುಖಗಳಿರುತ್ತವೆ. ಸಾಲದ್ದಕ್ಕೆ ಮುಖವಾಡಗಳು !!ಸರಳತೆ, ಪ್ರಾಮಾಣಿಕತೆ, ಇಂಟಿಗ್ರೇಟೆಡ್ ವ್ಯಕ್ತಿತ್ವ ಎಂಬ ಪದಗಳು ಡಿಕ್ಷನರಿಯಲ್ಲಿ ಕೊಳೆತು ನಾರಲು ಕಾರಣ ನಮ್ಮ ಹಿಪೋಕ್ರೇಟ್ ಬದುಕೇ ಅಲ್ಲವೇ ?
ನಾನು ಆರಂಭದಲ್ಲಿ ಅಂದುಕೊಂಡದ್ದು ಹಾಗೆಯೇ, ವ್ಯಕ್ತಿಗಳಲ್ಲಿನ ಮುಖವಾಡದಿಂದಾಗಿ, ಹೀಪೋಕ್ರಸಿಯಿಂದಾಗಿ ನಂಬಿಕೆಯನ್ನು ಅಲ್ಪ ಸ್ವಲ್ಪ ಕಳೆದುಕೊಂಡಿದ್ದೆ.ಆದರೆ ಆರ್. ರಾಮಪ್ರಿಯ ಆ ಪದಗಳ ಮೌಲ್ಯಗಳನ್ನು ಮರಳಿ ಕೊಟ್ಟಿದ್ದಾರೆ. ತಮ್ಮ ಪ್ರಖರ, ನೇರ ವ್ಯಕ್ತಿತ್ವದಿಂದಾಗಿ ಅನೇಕರ ನಿಷ್ಠುರ ಕಟ್ಟಿಕೊಂಡಿದ್ದಾರ.
ಅಷ್ಟೇ uಟಿಠಿoಠಿಚಿಟuಡಿ ಅನಿಸಿಕೊಂಡಿದ್ದಾರೆ. ಕೆಲವರ ದೃಷ್ಟಿಕೋನದಲ್ಲಿ. ಆದರೆ ಸತ್ಯಕ್ಕೆ ಇರುವ ಮುಖವೇ ಬೇರೆ. ಅವರ ಸಮಕಾಲಿನ ಅಧಿಕಾರಿಗಳು, ಪ್ರಾಮಾಣಿಕರೆನಿಸಿಕೊಂಡವರೂ ಅಲ್ಪ ಸ್ವಲ್ಪ ಆಸ್ತಿ ಪಾಸ್ತಿ ಮಾಡಿದ್ದಾರೆ. ಅದು ತಪ್ಪಲ್ಲ ಅನಿಸಿದರೂ ಇವರಿಗೆ ಅದೂ ಬೇಡದ, ನ್ಯಾಯ, ನಿಷ್ಠುರ, ಪ್ರಾಮಾಣಿಕ ಪಾರದರ್ಶಕ ಬದುಕು.
ಒಮ್ಮೊಮ್ಮೆ ಅಚ್ಚರಿ ಎನಿಸಿತ್ತದೆ. ಹೆಣ್ಣು, ಹೊನ್ನು, ಮಣ್ಣನ್ನು ನಿರ್ಲಿಪ್ತವಾಗಿ ತಿರಸ್ಕರಿಸಬೇಕು ಎಂದು ಹೇಳಿದಷ್ಟು ಸುಲಭ್ಯವಲ್ಲ ಆದರೆ ರಾಮಪ್ರಿಯ ಬದುಕಿನ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಸಾಧಕರಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದು, ಪಿಎಚ್.ಡಿ. ಪಡೆದರೂ ಹೆಸರಿನೊಂದಿಗೆ ಡಾಕ್ಟರ್ ಪ್ರಿಫಿಕ್ಸನ್ನು ತಗುಲಿಸಿಕೊಳ್ಳದ ಸರಳತೆ, ಆಗ ಪ್ರಾಧ್ಯಾಕರದವರು ಅದೇ ವೃತ್ತಿಯಲ್ಲಿದ್ದರೆ, ಈಗ ಯಾವುದಾದರೂ ವಿ.ವಿ.ಗೆ ಕುಲಪತಿಗಳಾಗಿರುತ್ತಿದ್ದರು. ಅನಿವಾರ್ಯವಾಗಿ ಅಧಿಕಾರಿಯಾಗಿದ್ದಾರೆ. ವ್ಯವಸ್ಥೆಯ ಕುತಂತ್ರದಿಂದಾಗಿ ಐ.ಎ.ಎಸ್. ನಿಂದ ವಂಚಿತರಾದ ಬಗ್ಗೆ ಕಿಂಚಿತ್ತು ವಿಶಾದವಿಲ್ಲ.
ಕನ್ನಡ ಸಾಹಿತ್ಯದ ಕುಮಾರವ್ಯಾಸ ಭಾರತವನ್ನು ಸುಲಲಿತವಾಗಿ ವಿವರಿಸುತ್ತಾರೆ. ಇಂಗ್ಲೀಷನಲ್ಲಿ ಅರ್ಥಶಾಸ್ತ್ರದ ಸಿದ್ಧಾಂತಗಳನ್ನು ಗಂಭೀರವಾಗಿ ವಿವೇಚಿಸುತ್ತಾರೆ. ಅಪಾರ ಜ್ಞಾನ ಸಂಪತ್ತಿನೊಂದಿಗೆ ಪಾಲಿಸಿಕೊಂಡು ಬಂದಿರುವ ಐಕ್ಯತ ವ್ಯಕ್ತತ್ವ ಮುಖ್ಯವೆನಿಸುತ್ತದೆ.
ಐಷಾರಾಮಿ ಯುಗದಲಿ ಹಾಸಿಗೆಯಲ್ಲದೆ ಚಾಪೆ ಮೇಲೆ ಮಲಗುವುದು, ಹಳೆಕಾರಿನಲ್ಲಿ ಸಂಚರಿಸುವುದು, ಸಿಕ್ಕಿರುವ ಅಧಿಕಾರವನ್ನು ಕಾನೂನು ಚೌಕಟ್ಟಿನಲ್ಲಿಯೇ ಚಲಾಯಿಸುವುದು ಸುಲಭದ ಮಾತಲ್ಲ. ಅವರ ತಾಯಿಯವರು ನಿಧನರಾದಾಗ ಅವರ ಊರಿಗೆ ಹೋಗಿದ್ದೆ. ಕಾಲು ಶತಮಾನದ ಹಿಂದಿನ ಹಳೆ ಮನೆ ಅವರ ವ್ಯಕ್ತಿತ್ವಕ್ಕಿರುವ ಭವ್ಯತೆಗೆ ಸಾಕ್ಷಿ ಎನಿಸಿತು.ಸಜ್ಜನರ ಸಂಗವದು ಹೆಜ್ಜೇನು ಸವಿದಂತೆ ಎಂಬ ಕವಿವಾಣಿ ರಾಮಪ್ರಿಯರೊಂದಿಗೆ ಕಾಲ ಕಳೆದಾಗ ಸತ್ಯವೆನಿಸಿ ಜೇನಿನಷ್ಟೇ ಮಧುರವೆನಿಸುತ್ತದೆ. ಅದಕ್ಕೆ ಹೇಳಿದ್ದು, ಈಗಿನ ಲೋಕದಲಿ ಹೀಗಿರುವುದುಂಟೆ ಎಂದು !