Thursday, December 16, 2010

ಲೈಂಗಿಕಾನುಭವದ ಅಪಾಯಗಳು

ಈ ಘಟನೆ ತುಂಬಾ ಹಳೆಯದಾದರೂ ಆಗಾಗ ಕಾಡುತ್ತಲಿರುತ್ತದೆ. ನಮ್ಮೂರ ಕಡೆ ಬಾಲ್ಯದಲ್ಲಿ ಶಿಕ್ಷಕರು, ಪಾಲಕರು ಲೈಂಗಿಕ ಶಿಕ್ಷಣ ನೀಡಿದ್ದರೆ ಈ ರೀತಿಯ ಅಪಾಯಗಳು ತಪ್ಪುತ್ತಾ ಇದ್ದವೇನೋ ಅನಿಸುತ್ತದೆ.

ಎಂಟನೇ ತರಗತಿಯಲ್ಲಿ ಓದುವಾಗ ಗೆಳೆಯರೆಲ್ಲ ವಯಸ್ಸಿನಲ್ಲಿ ಒಂದೆರಡು ವರ್ಷ ದೊಡ್ಡವರಿದ್ದರು. ಆಗಾಗ ರಹಸ್ಯವಾಗಿ ತಮ್ಮ ಲೈಂಗಿಕಾನುಭವಗಳನ್ನು ರಸವತ್ತಾಗಿ ವರ್ಣಿಸುತ್ತಿದ್ದರು. ಕುತೂಹಲವದ್ದರೂ ಭಯವೆನಿಸುತ್ತಿತ್ತು.

೧೦ನೇ ವರ್ಗದಲ್ಲಿದ್ದ ಗೆಳೆಯನ ಮದುವೆ ಆಗಿತ್ತು. ಮನೆಯಲ್ಲಿ ಅಕ್ಕನ ಮಗಳನ್ನು ಮದುವೆ ಆಗೋ ಅನಿವಾರ್ಯ, ಖರ್ಚಿನಲ್ಲಿ ಖರ್ಚು ಎಂದು ಮದುವೆಯಾಗಿದ್ದ. ಹುಡುಗಿ ತುಂಬಾ ಚಿಕ್ಕವಳು ಆದ್ದರಿಂದ ಆತನ ಮದುವೆಗೆ ವಿಶೇಷತೆಯಿರಲಿಲ್ಲ.

ನನ್ನ ಗೆಳೆಯರು ಅವನ ಮದುವೆಯ ಸಂದರ್ಭದಲ್ಲಿ ಪಡೆದ ಪಾರ್ಟಿ ಕತೆ ಕೇಳಿದರೆ ಖಂಡಿತಾ ನೀವು ಬೆಚ್ಚಿ ಬೀಳುತ್ತೀರಿ.
ನಮ್ಮ ಜಿಲ್ಲೆಯ ಪಕ್ಕದ ಜಿಲ್ಲೆಯ ಒಂದು ಹಳ್ಳಿಯಲಿ ದೇವದಾಸಿ ಪದ್ಧತಿ ಜೀವಂತವಾಗಿತ್ತು. ಅಲ್ಲಿ ಕೆಲವು ಮನೆಗಳಲ್ಲಿ ವಿಚಿತ್ರ ರೀತಿಯ ವೇಶ್ಯಾವಾಟಿಕೆ ನಡೆಯುತ್ತಿತ್ತಂತೆ.

ನಮ್ಮ ನಾಲ್ಕಾರು ಜನ ಗೆಳೆಯರು ಮದುವೆಯಾದ ಹುಡುಗನೊಂದಿಗೆ ಆ ಊರಿಗೆ ಹೋಗುವ ಯೋಜನೆ ರೂಪಿಸಿಕೊಂಡಿದ್ದರು. ವಯಸ್ಸಿನಲ್ಲಿ ಕಿರಿಯನಾದ ನನ್ನನ್ನು ಅಲ್ಲಿಗೆ ಕರೆಯಲಿಲ್ಲ.

ಕಾರಟಗಿಂದ ಹೊಸಪೇಟೆಗೆ ಅಂಬಾಸಡರ್ ಕಾರಿನಲ್ಲಿ ಹೋಗಿ, ಬೀರು, ಕೋಳಿಯ ರುಚಿ ನೋಡಿ, ಅಂದೇ ರಾತ್ರಿ ಹೊಸಪೇಟೆ ದಾಟಿಹೋಗಿ ಆ ಹಳ್ಳಿಯಲ್ಲಿ ರಾತ್ರಿಯ ರತಿಸುಖ ಪಡೆಯುವ ಮೋಜಿನ ಯಾತ್ರೆಯಾಗಿತ್ತು.
ಅಲ್ಲಿರುವ ಕೆಲವು ಮನೆಗಳಲ್ಲಿ ಒಂದೆರಡು ದಿನ ಇದ್ದು ಎಲ್ಲ ರೀತಿಯ ಸುಖ ಅನುಭವಿಸುವ ವ್ಯವಸ್ಥೆ ಇತ್ತಂತೆ. ಆ ಮನೆಯಲ್ಲಿಯೇ ಊಟ ವಸತಿ ಹಾಗೂ ರತಿಸುಖದ ಸಂಪ್ರದಾಯದ ಮನೆಗಳಲ್ಲಿ ಸೆಕ್ಸ ಅನುಭವಿಸುವ ಸಂಭ್ರಮಕ್ಕೆ ಮದುವೆಯಾದ ಹುಡುಗನು ಹೋಗಿದ್ದು ನನ್ನನ್ನು ತಲ್ಲಣಗೊಳಿಸಿತು.
ಕೇವಲ ೧೮ ರ ಪ್ರಾಯದ ಗೆಳೆಯರು ಹೀಗೆ ಸಾಮೂಹಿಕ ಲೈಂಗಿಕ ಸುಖ ಅನುಭವಿಸುವ ಪಾರ್ಟಿಯನ್ನು ಗೆಳೆಯನ ಮದುವೆಯ ನೆಪದಲಿ ಪಡೆದುಕೊಂಡದ್ದು ನನಗೆ ಬೇಸರವಾಯಿತು. ಆ ಪಾರ್ಟಿಗೆ ನನ್ನ ಕ್ಲಾಸಿನ ಇಬ್ಬರು ಗೆಳೆಯರು ಹೋಗಿದ್ದರು.
ಹೊಸ ಅನುಭವದಿಂದ ತತ್ತರಗೊಂಡ, ಗೆಳೆಯರು ಬಿತ್ತರಿಸಿದ ವಿವರ ಇಂದಿಗೂ ನೆನಪಿದೆ. ಅಂದು ರಾತ್ರಿ ಆ ಮನೆಗಳಿಗೆ ತಲುಪಿದ ಮೇಲೆ ಅವರೇ ಸ್ನಾನ ಮಾಡಿಸಿದರಂತೆ, ಏನೋ ಅರಿಯದವರಿಗೆ ಸೆಕ್ಸ್ ಹೇಗೆ ಅನುಭವಿಸಬೇಕು ಎಂದು ವಿವರಿಸುವುದಲ್ಲದೇ, ಗೃಹಿಣಿಯರಂತೆ ಅಪ್ಪಟ ಸುಖಾನುಭವ ನೀಡಿ ಖುಷಿಕೊಟ್ಟರಂತೆ. ೧೬-೧೮ ಪ್ರಾಯದಲ್ಲಿ ಲೈಂಗಿಕಾನುಭವದ ಅಗತ್ಯವಿತ್ತೆ ಎಂಬ ಪ್ರಶ್ನೆ ನನ್ನನ್ನು ಕಾಡಿತು.
ಅಬ್ಬಾ ! ಭಾರಿ ಮಜ ಅನಿಸ್ತಲೆ ಎಂದು ಗೆಳೆಯರು ವರ್ಣಿಸಿದ್ದೇ ವರ್ಣಿಸಿದ್ದು. ಒಂದು ದಿನದ ಹಾಲ್ವನ್ನು ಎರಡು ದಿನಕ್ಕೆ ವಿಸ್ತರಿಸಿ ಮದುವೆಯಾದ ಗೆಳೆಯನಿಗೆ ಪರಸ್ತ್ರೀಯೊಂದಿಗೆ ಸುಖ ಕೊಡಿಸಿದ ಮಹನಿಯರನ್ನು ಅವನು ಕೊಂಡಾಡಿದ.
ಮತ್ತೆ ಅದೇ ಗೆಳೆಯ ಮಹಾಜ್ಞಾನಿಯಂತೆ ವಿವರಿಸಿದ, ನೋಡು ೪೦ ಹನಿ ರಕ್ತ ಸೇರಿ, ಒಂದು ಹನಿ ವಿರ್ರ್‍ಯವಾಗುತ್ತದೆಯಂತೆ, ಆ ವಿರ್ಯವನ್ನು ಸ್ವಪ್ನ ಸ್ಖಲನ ಅಥವಾ ಮ್ಟುಷ್ಟಿ ಮೈಥುನದ ಮೂಲಕ ಹೊರ ಹಾಕಿದರೆ ಮನುಷ್ಯ ಸೊರಗುತ್ತಾನಂತೆ, ಒಣ ಮೀನಿನಂತಾಗುತ್ತಾನಂತೆ. ಅದೇ ಹೆಣ್ಣಿನ ಸಹವಾಸ ಮಾಡಿದರೆ ಜೀವನಕ್ಕೆ ಚೈತನ್ಯ ಸಿಗುತ್ತೇ ಎಂದು ಬುರುಡೆ ಬಿಟ್ಟ. ಅದನ್ನು ನಾನು ಅರೆಹುಚ್ಚನಂತೆ, ಕುತೂಹಲದಿಂದ ಆಲಿಸಿದೆ.

ಆದರೆ ಈ ಘಟನೆ ನನ್ನನ್ನು ತೀವ್ರವಾಗಿ ಕಾಡಿ, ಕಿರಿಕಿರಿ ಎನಿಸಿತು. ಗೆಳೆಯರಿಗೆ ತಿಳಿ ಹೇಳುವ ಅಗತ್ಯವಿರಲಿಲ್ಲ. ಆದರೆ ದಿಢೀರೆಂದು ಲೈಂಗಿಕ ಕುತೂಹಲ ಹೆಚ್ಚಿಸಿತು.
ಕೆಲವು ಸಮಾನ ಮನಸ್ಕ ಗೆಳೆಯರೂ ಕೂಡಾ ಅವನ ಮಾತನ್ನು ಅನುಮೋದಿಸಿದರು. ಆದರೆ ಅವರು ವೇಶ್ಯಯರ ಸಂಗವನ್ನು ಸಮ್ಮತಿಸದೇ ಇದ್ದುದು ನನ್ನ ಪುಣ್ಯ. ಇಲ್ಲ, ಸ್ವಪ್ನ ಸ್ಖಲನ, ಮುಷ್ಟಿಮ್ಯಥು ನ ಅಪಾಯ ಅಲ್ಲ ಎಂದು ತಾವು ಓದಿದ್ದೇವೆ ಎಂದು ಬೇರೆ ಹೇಳಿದರು.
ಹರೆಯದಲ್ಲಿ ಸೆಕ್ಸ್ ಯಾವಾಗ ಜಾಗೃತವಾಗುತ್ತದೆ ಎಂದು ವಿಜ್ಞಾನ ಹೇಳುವುದಕ್ಕಿಂತ ಅವರವರ ಜೀವನಾನುಭವವೇ ಮುಖ್ಯ ಎಂದೆನಿಸಿತು. ಹೀಗಾಗಿ ಗೆಳೆಯರೆಲ್ಲ ಸೇರಿ ಕೇವಲ ೧೪ರ ಪ್ರಾಯದಲಿ ಲೈಂಗಿಕಾನುಭವ ಜಾಗೃತಗೊಳಿಸಿದರು.

ನಾಲ್ವತ್ತು ಹನಿ ರಕ್ತದ ವಿರ್‍ಯಾಣು ಕತೆಯ ಆತಂಕದೊಂದಿಗೆ ಮುಷ್ಟಿ ಮೈಥುನಕೆ ಬಲಿ ಆದದ್ದು ಸಣ್ಣ ಸಂಗತಿ ಅನಿಸಿತು. ಕುಟುಂಬ ವ್ಯವಸ್ಥೆ, ವೈಯಕ್ತಿಕ ಸಾಹಿತ್ಯಾಸಕ್ತಿ, ಪಾಪ ಪುಣ್ಯಗಳ ಭಾವನೆಗಳು ತೀವ್ರವಾಗಿ ಜಾಗೃತಕೊಂಡಿದ್ದರಿಂದ ವೇಶ್ಯಯರ ಸುಖಕ್ಕೆ ನಾವು ಹತ್ತಾರು ಗೆಳೆಯರು ತಲೆ ಹಾಕಲಿಲ್ಲ ಎಂಬುದೇ ಮಹಾನ್ ಸಾಧನೆ ಎನಿಸಿದೆ.

ಅಂದ ಹಾಗೆ ಆ ಪಾರ್ಟಿಯಲಿ ಪಾಲ್ಗೊಂಡು ಇಬ್ಬರು ಗೆಳೆಯರು ಇತ್ತೀಚಿಗೆ ಏಡ್ಸ್ ಕಾಯಿಲೆಯಿಂದ ಸತ್ತಿದ್ದಾರೆಂದು ತಿಳಿದು ವಿಷಾದವೆನಿಸಿತು.

ಓದು ಒಕ್ಕಾಲು, ಬುದ್ದಿ ಮುಕ್ಕಾಲು

ಶಾಲೆ, ಅಂಗಡಿ, ಕಾರಟಗಿ ಬೇಸರವಾದಾಗಲೆಲ್ಲ. ಅಕ್ಷರಗಳು ತಲೆಗೆ ಪ್ರವೇಶಿಸಲು ನಿರಾಕರಿಸಿದಾಗಲೆಲ್ಲ ಓಡಿ ಹೋಗುತ್ತಿದ್ದೆ, ಏನೋ ನೆಪ ಮಾಡಿಕೊಂಡು ಕುಷ್ಟಗಿಗೆ.. .

ಕಾಶಮ್ಮ ಅಮ್ಮ ಸಿದ್ದ ನಿನ್ನ ಸಾಲಿ ಅಂದರೆ ಅಜ್ಜ ಅಷ್ಟೇ ರಾಗವಾಗಿ ಸಿದ್ಧನ ಶಾಲೆ ಪಡಸಾಲಿ ಅನ್ನುತ್ತಿದ್ದ, ನಾನು ಶಾಲೆ ಕಲಿಯುವುದಿಲ್ಲ ಎಂದು ಅಜ್ಜನಿಗೆ ಖಾತ್ರಿ ಆಗಿತ್ತು. ಏನೇ ಆಗಲಿ ಸಿದ್ಧನ ಪಾಲಿಗೆ ಓದು ಒಕ್ಕಾಲು, ಬುದ್ದಿ ಮುಕ್ಕಾಲು ಅಂದರೆ ತಪ್ಪಾಗುವುದಿಲ್ಲ ಎಂದು ಶಹಬ್ಬಾಸಗಿರಿ ನೀಡಿ ಧೈರ್ಯ ತುಂಬಿದ.
ಅಜ್ಜಾ ನೀಟಾಗಿ ಕೋರ್ಟಗೆ ಹೋಗುವಾಗ ಜೊತೆಗೆ ಹೋಗುತ್ತಿದ್ದೆ. ಅಜ್ಜನ ಸಹಾಯಕರು ಬಂದಾಗ ಏನೇನೋ ವಿಚಿತ್ರ ಪ್ರಶ್ನೆ ಕೇಳುತ್ತಿದ್ದೆ. ನನ್ನ ವಾಚಾಳಿತನದಿಂದಾಗಿ ನಾನು ತುಂಬಾ ಜಾಣನಿರಬಹುದೆಂದು ಅವರೆಲ್ಲ ಭಾವಿಸಿದ್ದರು.
ತುಂಬಾ ಗೌರವದಿಂದ ಕೋರ್ಟಗೆ ಬರುವ ನ್ಯಾಯಧೀಶರು ಬಹಳ ದೊಡ್ಡ ವ್ಯಕ್ತಿ ಅನಿಸುತ್ತಿದ್ದರು. ಅಜ್ಜಾ ನಾನು ವಕೀಲ ಆಗಬೇಕಾದ್ರ ಏನು ಮಾಡಬೇಕು. ಪೋಲಿಸರು ಸೆಲ್ಯೂಟ್ ಹೊಡೆಯುವದನ್ನು ನೋಡಿದರೆ ನನಗೂ ಜಡ್ಜ ಆಗಬೇಕು ಅನಿಸುತ್ತೆ ಅಂದೆ.
ಶಾಲೆಗೆ ಹೋಗದೆ, ಕಾಲೇಜು ಶಿಕ್ಷಣ ಪಡೆಯದೇ ಜಡ್ಜ್ ಆಗಲು ಸಾಧ್ಯನಾ ಅಂದೆ, ಭಲೆ ಮಗನೇ ಅಂದ. ಪರೀಕ್ಷೆಯಲ್ಲಿ ಪಾಸಾಗದಿದ್ದರೂ ಬಾಯಿ ಮಾತಿನ ಪ್ರಶ್ನೆ ಕೇಳಿ ನನ್ನನ್ನು ಯಾಕೆ ಪಾಸು ಮಾಡುವುದಿಲ್ಲ ಎಂದು ವಾದಿಸಿದೆ.

ಪರೀಕ್ಷೆಯ ಭಯ ನನ್ನಿಂದ ದೂರಾಗಲೇ ಇಲ್ಲ. ಪರೀಕ್ಷೆ ಬರೆಯದೇ ಪಾಸಾಗಬೇಕು ಎಂದು ಬಯಸಿದೆ.
ಪರೀಕ್ಷೆ ಬಂದರೆ ಸಾಕು ಜ್ವರ ಬರುತ್ತಿತ್ತು. ಜ್ವರದ ನೆಪದಿಂದ ಏನೋ ಗೀಚಿ ಬರುತ್ತಿದ್ದೆ. ಶಿಕ್ಷಕರು ಕರುಣೆ ತೋರಿ ಪಾಸು ಮಾಡುತ್ತಿದ್ದರು. ಏಳನೇ ತರಗತಿಯ ಮುಲ್ಕಿ ಪರೀಕ್ಷೆ ಮೇಷ್ಟ್ರು ಕೃಪೆಯಿಂದ ಪಾಸಾದೆ. ೮,೯ ದಾಟಿದೆ. ಆದರೆ ಹತ್ತರಲ್ಲಿ ನನ್ನ ಆಟ ನಡೆಯಲಿಲ್ಲ.
ಬದುಕಿನ ಯಶಸ್ಸಿನ ಮರ್ಮವೂ ಅರ್ಥ ಆಗಲಿಲ್ಲ. ಗೆಳೆಯರು ಗಂಭೀರವಾಗಿ ಓದಿ, ಪಾಸಾಗುವುದು ನನ್ನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಮನಸು ಶಾಲೆ ಶಿಕ್ಷಣದ ವಿಷಯಕ್ಕೆ ಕಲ್ಲಾಗಿ ಹೋತು. ತುಂಬಾ ವಾಚಾಳಿ ಇದ್ದುದರಿಂದ ಜಾಣ ಎಂದು ಎಲ್ಲರೂ ಹೋಗಳುತ್ತಿದ್ದದು ಕೂಡಾ ನನ್ನ ನೋವನ್ನು ದೂರಾಗಿಸಿತು. ದಡ್ಡನಾದರೂ ಎಲ್ಲರೂ ಪ್ರೀತಿಸುತ್ತಿದ್ದರಿಂದ ಶಾಲೆ ಕಲಿಯುವುದು ಗಂಭೀರ ಎನಿಸಲಿಲ್ಲ.
ಸಾಂಪ್ರಾದಾಕ ಶಿಕ್ಷಣವಿಲ್ಲದೆ ಯಶಸ್ಸು ಸಾಧ್ಯವಿಲ್ಲ ಎಂಬ ಕಿಡಿ ನುಂಗತೊಡಗಿದೆ. ಮುಂದೊಂದು ದಿನ ತೋಂಟದಾರ್ಯ ಮಠದ ಅಜ್ಜರನ್ನು ಕೇಳಿದೆ ಸಾಂಪ್ರದಾಯಿಕ ಶಿಕ್ಷಣವಿಲ್ಲದೆ, ಯಾವುದಾದರೂ ಕ್ಷೇತ್ರದಲ್ಲಿ ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಾಧ್ಯ ಆದರೂ ಪದವಿ ಪಡೆದರೆ ಒಳ್ಳೆಯದು ಅಂದರು ಹಾಗಾದರೆ ಯಾವ ಕ್ಷೇತ್ರ ನನಗೆ ದಕ್ಕಬಹುದು ಎಂದು ಆಲೋಚಿಸಿದೆ. ಉತ್ತರ ಹೊಳೆಯಲಿಲ್ಲ.
ಸರಿ ಈಗ ಕನ್ನಡ ಸಾಹಿತ್ಯ, ಭಾಷೆಯಲ್ಲಿ ಆಸಕ್ತಿ ಇದೆ, ಅದನ್ನೆ ಕಲಿತರಾಯಿತು ಎಂದು ತೀರ್ಮಾನಿಸಿದೆ. ಕುಷ್ಟಗಿಯಯಲ್ಲಿ ದಸ್ತಗೀರಿ ಮಾಷ್ಟ್ರು ಅಂತ ಇದ್ದರು. ಅವರು ಶಿಕ್ಷಕ ವೃತ್ತಿಯೊಂದಿಗೆ ಯಂತ್ರ, ತಂತ್ರಗಳ ವಿದ್ಯೆಯನ್ನು ತಿಳಿದಿದ್ದರು, ಊರ ಹೊರಗೆ ಬಯಲು ಕಡೆ ಹೋಗಿ ಬರುವಾಗ ಅಜ್ಜ ಅವರ ಮನೆಗೆ ಹೋಗಿ ಬರುತ್ತಿದ್ದೆ. ಸಣ್ಣಗೆ ನನ್ನ ವಿಷಯವೂ ಪ್ರಸ್ತಾಪವಾಯಿತು.
ನನಗೆ ಮಂತ್ರಿಸಿ ತಾಯತ ನೀಡಿದರು. ಅಜ್ಜ ಸ್ನಾನ ಮಾಡಿಸಿ ತಾಯತ ಕಟ್ಟಿದ. ಒಟ್ಟಾರೆ ಯಾವುದೇ ಮಂತ್ರವೋ, ತಾಯ್ತವೋ ನನ್ನನ್ನು ಉದ್ದಾರ ಮಾಡಿದರೆ ಸಾಕು ಅಂದುಕೊಂಡೆ. ಎಡಿಯೂರು ಸಿದ್ದಲಿಂಗೇಶನಿಗೆ, ಮನೆ ದೇವ್ರು ಹಳ್ಳದ ಬಸವೇಶ್ವರನಿಗೆ ಮುಡುಪು ಕಟ್ಟಿದರೆ ನಾನು ಪಾಸ್ ಆಗಬಹುದು ಎಂದರು. ಇಬ್ಬರಲ್ಲಿಯೂ ಬೇಡಿಕೊಂಡೆ. ಒಂಟಿಯಾಗಿ ಅಳಲು ಶುರು ಮಾಡಿದೆ.

ಸಾರ್ವಜನಿಕವಾಗಿ ಸದಾ ನಸುನಗುತ್ತಾ, ನಗಿಸುತ್ತಾ ಇರುತ್ತಿದ್ದ ನಾನು ಒಂಟಿತನದಲಿ ನೋವು, ಅಪಮಾನ ಅನುಭವಿಸುತ್ತಿದ್ದೆ. ಎಲ್ಲ ಇದೆ ಆದರೆ ಶಿಕ್ಷಣ ಇಲ್ಲದಿದ್ದರೆ ಹೇಗೆ ಎಂಬ ನಿರಾಶೆ.
ವಿದ್ಯೆಯಿಲ್ಲದವನ ಮುಖ ಹದ್ದಿಗಿಂತಲೂ ಕಡೆ ಎಂಬ ಸರ್ವಜ್ಞನ ಸಾಲುಗಳು ಹಿಂಸೆ ಅನಿಸಿ ಕನ್ನಡಿ ನೋಡಿಕೊಂಡೆ, ಆದರೆ ನಾನು ಹದ್ದಿನಂತೆ ಇಲ್ಲ ಬಿಡು ಎಂದು ಸಮಾಧಾನ ಪಟ್ಟುಕೊಂಡೆ.
ಕವಿತೆ, ಕತೆ, ಸಿನಿಮಾ ಹೀಗೆ ಎಲ್ಲ ಕಡೆ ಬಳಕೆಯಾಗುತ್ತಿದ್ದ ಪದಗಳೊಂದಿಗೆ ನನ್ನನ್ನು ಸಮೀಕರಿಸಿಕೊಂಡು ನೋಡುತ್ತಿದ್ದೆ. ಎಲ್ಲಿಯಾದರೂ ಪರಿಹಾರ ಸಿಗಬಹುದೆಂಬ ಹುಚ್ಚು.
ಕರಿದಾರ, ತಾಯ್ತ, ಮಂತ್ರಗಳು ಫಲಿಸಲಿಲ್ಲ. ದೇವರು, ಧರ್ಮ, ಸಂಪ್ರದಾಯಗಳಿಗೆ ಅರ್ಥವಿಲ್ಲ ಎನಿಸಿತು. ಬರುಬರುತ್ತಾ ಒಳಗೊಳಗೆ ನಾಸ್ತಿಕನಾದೆ ಆಸ್ತಿಕತೆಯ ಸೋಗಿನಲ್ಲಿ. ಎಲ್ಲ ಗುಡಿಗುಂಡಾರಗಳಿಗೂ, ಅಲೆದೆ. ಕೊಳ್ಳದ ಅಮರೇಶ್ವರ, ಯಾಪಲಪರವಿ ಬಸವಣ್ಣ, ಎಡೆಯೂರು ಸಿದ್ಧಲಿಂಗೇಶ ಯಾರಾದರೂ ನನ್ನನ್ನು ಕಾಪಾಡಿದರೆ ಸಾಕು ಎನಿಸುತ್ತಿತ್ತು. ನಿದ್ದೆ ಹತ್ತುವವರೆಗೆ ಎನೇನೋ ಆಲೋಚಿಸುತ್ತಿದ್ದೆ.

ಸೆಕ್ಸಸ್, ಸೆಕ್ಸಸ್ ನ ಪೇಚು ಇಂಗ್ಲೀಷ ಹಂಬಲ

ಅನೇಕ ಬಾರಿ ಪ್ರಸ್ತಾಪಿಸಿದಂತೆ ಶಾಲೆ ಕಲಿಯುವದೆಂದರೆ ದೂರದ ಊರಿಗೆ ಹೋಗಿ ಹಾಸ್ಟೆಲ್‌ನಲ್ಲಿದ್ದು, ಇಂಗ್ಲೀಷ ಮೀಡಿಯಂ ನಲ್ಲಿ ಕಲಿತರೆ ಮಾತ್ರ ನಿಜವಾದ ಕಲಿಯುವಿಕೆ ಎಂಬ ಕೀಳರಿಮೆ ಬಾಲ್ಯದಲ್ಲಿ ಕಾಡಲು ಶುರು ಆಯ್ತು.

ಊರ ಬಂಧುಗಳಾದ ಜವಳಿ, ಹಿಂದಪೂರ ಕುಟುಂಬದ ಗೆಳೆಯರು ಸಂಡೂರ ಮಹಾರಾಜರು ಪ್ರಾರಂಭಿಸಿದ ವಸತಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದರು. ಸೋದರತ್ತೆಯ ಮಕ್ಕಳು ರಾಯಚೂರಿನ ಗದ್ವಾಲ ಪರಿವಾರದ ಸಂಗಾತಿಗಳು ಗುಲಬುರ್ಗಾದ ಶರಣಬಸವೇಶ್ವರ ವಸತಿ ಶಾಲೆಯಲ್ಲಿದ್ದರು.

ನಮ್ಮ ಪೂರ್ವಜರು ಸಾಕಷ್ಟು ಶ್ರೀಮಂತರಾಗಿದ್ದರೂ, ಶಾಲೆಗಾಗಿ ಸಾವಿರರು ರೂಪಾಯಿ ಖರ್ಚು ಮಾಡುವುದು ಬೇಡ ಎಂಬ ವಾದವಿತ್ತು. ಬಾಲ್ಯದಲ್ಲಿ ಹೀಗಾಗಿ ನಾವು ನಿಜವಾದ ವಿದ್ಯಾರ್ಥಿಗಳು ಅನಿಸಿಕೊಳ್ಳಲಿಲ್ಲ. ವಿದ್ಯಾರ್ಥಿ ಜೀವನದ ಬಗ್ಗೆ ಅಸಡ್ಡೆ ಶುರು ಆಯಿತು.
ಕಲಿತರೆಷ್ಟು, ಬಿಟ್ಟರೆಷ್ಟು ಎಂಬ ವಿಷಾದ ಬೇರೆ.

ಮುಖ್ಯವಾಗಿ ಇಂಗ್ಲಿಷ್ ಬಾರದ ಕಿರಿ ಕಿರಿ ರಾಯಚೂರು ಅತ್ತೆಯ ಮಕ್ಕಳಾದ ನಾಗರಾಜ, ಶಿವರಾಜ, ಮಲ್ಲಿಗೆ ಚೆನ್ನಾಗಿ ಇಂಗ್ಲಿಷ್ ಬರ್ತಾ ಇತ್ತು.
ಯಾವುದೇ ಒಂದು ಸಂದರ್ಭದಲ್ಲಿ ಇಂಗ್ಲಿಷ್ ಪದಗಳನ್ನು ಬಳಸುವ ಪ್ರಸಂಗ ಬಂತು. ಅದು ತುಂಬಾ ಸೆಕ್ಸಸ್ ಆಗಿದೆ ಅಂದೆ. ಆಗ ಶಿವರಾಜ ಲೇ ಮಗನೆ ಅದು ಸೆಕ್ಸಸ್ ಅಲ್ಲಲೆ ಸಕ್ಸೆಸ್ ಲೇ ಅಂದಾಗ ಪೆಚ್ಚಾಗಿ ಹೋದೆ.
ಈ ಇಂಗ್ಲಿಷ್ ಅಪಮಾನವನ್ನು ಆ ಕ್ಷಣಕ್ಕೆ ಸ್ಪೋಟ್ವ್ರಿವ್ ಆಗಿ ತಗೋಂಡೆ. ಆದರೆ ರಜೆ ಮುಗಿಸಿ ಅತ್ತೆ ಮಕ್ಕಳು ಊರಿಗೆ ಹೋದಾಗ ಅಪಮಾನವನ್ನು ನಿರಂತರವಾಗಿ ಮೆಲುಕು ಹಾಕಿದೆ.

ದೂರದ ಊರ ಹೊರಗೆ ಲ್ಯಾಟ್ರಿನ್ ಹೋಗಿ ಹಿಂಸೆ ಅನುಭವಿಸಿ ಬರುವ ಸಂದರ್ಭದಲ್ಲಿ ಒಂಟಿಯಾಗಿ ಇಂಗ್ಲಿಷ್ ಅಪಮಾನವನ್ನು ಮೆಲುಕು ಹಾಕಿದೆ. ಸರಕಾರಿ ಶಾಲೆಗೆ ಹೋಗುವುದರಲ್ಲಿ ಅರ್ಥವೇ ಇಲ್ಲ ಅನಿಸಿತು. ನಾವು ಈ ಜನ್ಮದಲ್ಲಿ ಇಂಗ್ಲೀಷ್ ಕಲಿಯಲು ಅಸಾಧ್ಯ. ಹೀಗಿದ್ದಾಗ ಶಾಲೆಗೆ ಯಾಕೆ ಹೋಗಬೇಕು ಎಂದು ಪ್ರಶ್ನಿಸಿಕೊಂಡೆ.
ಶಾಲೆಯ ಬಗ್ಗೆ ನಿರಾಸಕ್ತಿ ಬೆಳೆಯಿತು. ಬೇಕಾದಾಗ ಹೋಗುತ್ತಿದ್ದೆ. ಬೇಡವಾದಾಗ ಬಿಡುತ್ತಿದ್ದೆ. ಇಂಗ್ಲಿಷ್ ಶಾಲೆಯ ಮಹತ್ವ ಅರಿತಿದ್ದ ಅಪ್ಪ, ತಮ್ಮ ಜಗದೀಶನನ್ನು ಇಂಗ್ಲೀಷ್ ಶಾಲೆಗೆ ಪ್ರವೇಶ ಕೊಡಿಸಿದ.
ಜವಳಿಯವರ ಹುಡುಗರೊಂದಿಗೆ ೨೫ ಕಿಲೋ ಮೀಟರ್ ದೂರದ ಮರಳಿಯ ಪ್ರಗತಿ ನಗರ ಶಾಲೆಗೆ ಜಗದೀಶ್ ಹೋಗುತ್ತಿದ್ದ, ದಿನಾ ಅವರನ್ನು ಶಾಲೆಗೆ ಕಳಿಸಲು ವ್ಯಾನ್ ಹೋಗುತ್ತಿತ್ತು. ಒಳಗೊಳಗೆ ಅಪಮಾನಿತನಾದೆ. ಅನಗತ್ಯ ಹೋಲಿಕೆಯಿಂದಾಗಿ ಕುಗ್ಗಿ ಹೋದೆ.
ನನಗೆ ಕಿರಾಣಿ ಅಂಗಡಿಯೇ ಗತಿ ಎನಿಸಿತು. ಆದರೂ ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಛಲ ಬೆಳೆಯಿತು. ರಾಪಿಡೆಕ್ಸ್ ಖರೀದಿಸಿದೆ. ಪ್ರಯೋಜನವಾಗಲಿಲ್ಲ.
ಎಲ್ಲೋ ಒಂದು ಕಡೆ ಇಂಗ್ಲಿಷ್ ಕಲಿಯಬೇಕೆಂಬ ಬೀಜ ಬಿತ್ತಿದೆ. ಮುಂದೊಂದು ದಿನ ಆ ಬೀಜ ಹೆಮ್ಮರವಾಗಬಹುದೆಂದು ಅಂದುಕೊಂಡಿರಲಿಲ್ಲ.
ಇಂಗ್ಲಿಷ್ ಮೀಡಿಯಂ ಕಲಿತವರು ಮಾತ್ರ ಇಂಗ್ಲೀಷನಲ್ಲಿ ಮಾತನಾಡಬಹುದು ಎಂಬ ಆತಂಕವನ್ನು ದೂರ ಮಾಡಲು ಪಣ ತೊಟ್ಟೆ ಆದರೆ ಅಂದು ನನ್ನ ಕೆಲಸವನ್ನು ಯಾರಿಗಾದರೂ ಹೇಳಿದ್ದರೆ ಅಪಹಾಸ್ಯ ಮಾಡುತ್ತಿದ್ದರು.

ಜಗದೀಶನ ಶಾಲೆ ಮರಳಿಯಿಂದ, ಕಾರಟಗಿ, ಇಲಕಲ್ಲು ಸಿಂಧನೂರು ಅಂತ ಪಯಣ ಶುರು ಆಯಿತು. ನಾನು ಕಾರಟಗಿಯ ಸರಕಾರ ಶಾಲೆಯಲ್ಲಿಯೇ ಕನಸು ಕಟ್ಟಲು ಆರಂಭಿಸಿದೆ. ಹೈಸ್ಕೂಲಿನಲ್ಲಿಯೂ ಅಷ್ಟೇ, ಎಷ್ಟೇ ಪ್ರಯತ್ನಿಸಿದರೂ ಇಂಗ್ಲಿಷ್ ತಲೆಗೆ ಹೋಗಲೇ ಇಲ್ಲ.
ನನ್ನ ಸಮಸ್ಯೆಯನ್ನು ಶಿಕ್ಷಕರಿಗೆ ವಿಷಾದದಿಂದ ವಿವರಿಸಿದೆ. ಹಾಗೇನಿಲ್ಲ ಕನ್ನಡ ಮೀಡಿಯಂನಲ್ಲಿ ಓದಿ ಜಾಣರಾಗಬಹುದು, ನಾವೆಲ್ಲ ಓದಿದ್ದು ಸರಕಾರಿ ಕನ್ನಡ ಶಾಲೆಗಳಲ್ಲಿಯೇ ಎಂಬ ಶಿಕ್ಷಕರ ಮಾತುಗಳು ಭರವಸೆ ಮೂಡಿಸಿದವು.

ಯಾಪಲಪರವಿ ಮನೆತನದ ಮೂರನೇ ತಲೆಮಾರಿನ ಮಕ್ಕಳು ಇಂಗ್ಲೀಷ್ ಶಾಲೆಗೆ ಹೋಗುತ್ತಿದ್ದರು. ನಾನು ಚನ್ನಪ್ಪ ಕಕ್ಕ ಸರಕಾರಿ ಶಾಲೆಗೆ ಫಿಕ್ಸ್ ಆದೆವು.
ಕೇವಲ ಕನ್ನಡ ಸಾಹಿತ್ಯವನ್ನು ಮಾತ್ರ ಪಟ್ಟಾಗಿ ಹಿಡಿದುಕೊಂಡೆ. ಕನ್ನಡ ಭಾಷೆಯಲ್ಲಿ ಹಿಡಿತ ಸಾಧಿಸಿದೆ. ಕಾಡಬಸಪ್ಪ ಗುರುಗಳು ಮಾರ್ಗದರ್ಶನ ಮಾಡಿದರು. ಉತ್ತಮ ಚರ್ಚಾ ಪಟುವಾದೆ. ನಿಧಾನ ಆತ್ಮವಿಶ್ವಾಸ ಹೆಚ್ಚಾಯಿತು. ವಿಜ್ಞಾನ, ಗಣಿತದ ಚಿಂತೆ ಬಿಟ್ಟೆ.

ಅಜ್ಜ ಬರಿಸಿಟ್ಟ ಜಾತಕ ಓದಿದೆ. ಅದರಲ್ಲೂ ಹಾಗೆ ಇತ್ತು. ನನಗೆ ಶಿಕ್ಷಣ ಹತ್ತುವುದಿಲ್ಲ ಎಂದು ಬರೆದಿತ್ತು ಜಾತಕ ಸುಳ್ಳು ಮಾಡುವ ಹಟ ಶುರು ಆಯ್ತು. ದೇವರು, ಧರ್ಮಗಳಲ್ಲಿ ನಂಬಿಕೆ ಕಡಿಮೆ ಆಯಿತು. ಇಷ್ಟೆಲ್ಲ ಪೂಜೆ ಮಾಡಿದರೂ, ವ್ಯಾಪಾರ ಏಕೆ ಲಾಸ್ ಆಯ್ತು, ನನಗೆ ಯಾಕೆ ಶಿಕ್ಷಣ ಹತ್ತಲಿಲ್ಲ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವ ತಾಕಲಾಟಕ್ಕೆ ಬಿದ್ದೆ, ಏನೋ, ಅರ್ಥವಾಗದ ವಯಸ್ಸು. ಆದರೂ ದೀರ್ಘ ಚಿಂತನೆಗೆ ತೊಡಗಿದೆ. ನೋಡೋಣ ಎಂದು ದೇವರನು ಒಲಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ ಇಂಗ್ಲಿಷ್ ಕಲಿಯಲು ದೇವರು ಒಲಿಯಲಿಲ್ಲ.

Monday, December 13, 2010

ನೆನಪಿಗೆ ಬಾರದ ನೆನಪಿರದ ಗಳಿಗೆ


ಅಂದು ಏಪ್ರಿಲ್ ೧೨ ರ ಸೋಮವಾರ ಕುಷ್ಟಗಿಯ ಪಟ್ಟಣಶೆಟ್ಟರ ಗುರುಸಿದ್ದಪ್ಪ ವಕೀಲರ ಮನೆಯಲಿ ಸಂಭ್ರಮದ ಆತಂಕ. ರಾಯಚೂರ ಜಿಲ್ಲೆಯ ಮೂಲೆಯಲ್ಲಿನ ದೊಡ್ಡ ಹಳ್ಳಿಯಂತಹ ತಾಲೂಕ ಕೇಂದ್ರ ಕುಷ್ಟಗಿ ಬರದ ನಾಡೆಂದನಿಸಿದರೂ, ಜಿಲ್ಲೆಯ ಊಟಿ ಅನಿಸಿಕೊಂಡಿದ್ದು ತಂಪಾದ ಹವಾಮಾನಕ್ಕಾಗಿ.
ಗುರುಸಿದ್ದಪ್ಪ ಪಟ್ಟಣಶೆಟ್ಟರು ಹಾಗೂ ಕಾಶಮ್ಮ ದಂಪತಿಗಳಿಗೆ ನಾಲ್ಕು ಜನ ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಎರಡನೇ ಮಗಳು ಸುಶೀಲ ಹೆರಿಗೆಗೆ ಬಂದಿದ್ದಳು. ಹೆಂಗರಳಿನ ವಕೀಲರಿಗೆ ಎಲ್ಲಿಲ್ಲದ ಆತಂಕ. ಎರಡನೇ ಮಗಳು ಸುಶೀಲಾಗೆ ಕೇವಲ ೧೭ ವರ್ಷ. ಚೊಚ್ಚಲು ಹೆರಿಗೆ ನೋವಿಗೆ ಸಣ್ಣ ವಿರಾಮ ಸಿಕ್ಕದ್ದು ಮಧ್ಯಾಹ್ನ ೩.೨೦ ಕ್ಕೆ. ಸೂಲಗಿತ್ತಿಯ ಪ್ರಯತ್ನದಿಂದ ಆದ ಸಹಜ ಹೆರಿಗೆಗೆ ಎಲ್ಲಿಲ್ಲದ ಸಂಭ್ರಮ.
ಹುಟ್ಟಿದ್ದು ಗಂಡು ಮಗು ಬೇರೆ ! ಮೇಲಿಂದ ಮೇಲೆ ನಾಲ್ಕು ಹೆಣ್ಣು ಹಡೆದ ವಕೀಲರಿಗೆ ತಮ್ಮ ಮಕ್ಕಳು ಗಂಡು ಹಡೆಯಲಿ ಎಂಬ ಹಿರಿದಾಸೆ ಬೇರೆ, ಅಂತೆಯೇ ಸುರಕ್ಷಿತ ಹೆರಿಗೆ, ದುಂಡಾದ ಮುದ್ದು ಗಂಡು ಮಗುವಿನೊಂದಿಗೆ.
ಫೋನು, ಮೊಬೈಲು ಇಲ್ಲದ ದಿನಗಳಲ್ಲಿ ಮಗಳ ಗಂಡನ ಮನೆ ಕಾರಟಗಿಗೆ ಪತ್ರ ರವಾನೆ
ಕಾರಟಗಿಯ ವ್ಯಾಪಾರಿ ಮನೆತನ ಯಾಪಲಪರವಿ ಬಸವರಾಜಪ್ಪ ಕೇವಲ ಇಪ್ಪತ್ತರ ಪ್ರಾಯದಲಿ ಗಂಡು ಮಗುವಿನ ತಂದೆಯಾದ ಸಂದೇಶ ರವಾನೆ. ಮೂರನೆ ಮಗಳು ನಿರ್ಮಲಾ ಹಾಗೂ ಬೇಬಿಯವರಿಗೆ ಎಲ್ಲಿಲ್ಲದ ಖುಷಿ. ದುಂಡಾದ ರಬ್ಬರ್ ಚಂಡಿನಂತಹ ಮಗುವಿನೊಂದಿಗೆ ಆಟ ಆಡಲು ಸಂತಸವೇ ಸಂತಸ.
ಶ್ರೀಮತಿ ಪಾರಮ್ಮ ಉರ್ಫ್ ಸುಶೀಲಮ್ಮ ಹಾಗೂ ಬಸವರಾಜಪ್ಪ ಯಾಪಲಪರವಿ ದಂಪತಿಗಳಿಗೆ ಅಷ್ಟೇ ಖುಷಿ !
ಹೈದ್ರಾಬಾದ್ ಕರ್ನಾಟಕದಲಿ ಪ್ರತಿಯೊಬ್ಬರು ಗಂಡು ಹುಟ್ಟಲೆಂದೇ ಬಯಸುವ ಕಾಲ. ಹೆಣ್ಣು ಹುಟ್ಟಿದರೆ ಹೇಗೆ ಎಂಬ ಆತಂಕ ಸಹಜವಾಗಿತ್ತು. ಆ ನಿರಾಸೆ ಎಲ್ಲರಿಂದ ಮಾಯವಾಗಿತ್ತು.
ಮಗು ಹುಟ್ಟಿದ ಹದಿನಾರು ದಿನಕ್ಕೆ ನಾಮಕರಣದ ಅದ್ದೂರಿ ಸಮಾರಂಭ. ಕುಷ್ಟಗಿ ಮನೆತನದ ದೇವರು ಎಡೆಯೂರ ಸಿದ್ದಲಿಂಗೇಶನ ಕಾರಟಗಿಯ ಮನೆ ದೇವರು ಹಳ್ಳದ ಬಸವೇಶ್ವರ ಎರಡರ ಸಮಾಗಮವೇ ಸಿದ್ಧಬಸವ ಎಂಬ ತಾರ್ಕಿಕ ನಾಮಕರಣ. ಇಲ್ಲಿ ವಕೀಲರ ಜಾಣತನ, ವ್ಯಾಪಾರಿಗಳ ಸಮೀಕರಣ ಇತ್ತಲ್ಲವೇ?

ಒಂದೂವರೆ ವರ್ಷದವರೆಗೆ ಬಾಲಕ ಸಿದ್ದಬಸವ ಬೆಳೆದದ್ದು ಕುಷ್ಟಗಿಯಲ್ಲಿಯೇ, ಯಾಕೆಂದರೆ ಒಂದೂವರೆ ವರ್ಷಕ್ಕೆ ಮತ್ತೆ ಸುಶೀಲಮ್ಮ ಎರಡನೇ ಹೆರಿಗೆಗೆ ಹಾಜರ್ ಅಂದಿನ ದಿನಗಳೇ ಹಾಗೆ ಹತ್ತಾರು ವರ್ಷ ಹಡೆಯುವ ಕಾಲ !
ಆದ್ದರಿಂದ ಅಜ್ಜ, ಅಮ್ಮ, ಕಕ್ಕಿಯರ ಕೈಯಲ್ಲಿಯೇ ಕಳೆದ ಸುಂದರ ಬಾಲ್ಯ. ಅದರಲ್ಲೂ ವಿಶೇಷವಾಗಿ ಸಣ್ಣ ಕಕ್ಕಿ, ಬೇಬಿ ಕಕ್ಕಿಯ ಅಕ್ಕರೆಯ ಮಡಿಲಲಿ ಬೆಳೆದ ಹರುಷ. ತಲೆ ತುಂಬಾ ಬೆಳೆದ ದಟ್ಟ ಕೂದಲು, ಅದರ ಮೇಲೊಂದು ಜುಟ್ಟು, ಆ ಜುಟ್ಟಿನ ತುಂಬಾ ಹೂಗಳ ಸುತ್ತು. ಮೈತುಂಬಾ ಧರಿಸಿದ ಆಭರಣಗಳ ದಾಖಲೆ ಇರಲಿ ಎಂಬ ಕಾರಣಕ್ಕೆ ಫೋಟೋ ತೆಗೆಸುವ ಆಸೆ. ಕುಷ್ಟಗಿಯಲ್ಲಿ ಸ್ಟುಡಿಯೋ ಇರಲಿಲ್ಲ. ಎಂಟು ತಿಂಗಳ ಮಗುವನ್ನು ಸಿಂಗರಿಸಿಕೊಂಡು ಇಲಕಲ್ಲಿಗೆ ಪಯಣ.
ಅಲ್ಲಿ ಸ್ಟುಡಿಯೋದಲ್ಲಿ ಕ್ಲಿಕ್ಕಿಸಿದ ಕ್ಯಾಮರಾಕ್ಕೆ ನೀಡಿದ ಮುಗ್ಧ ಫೋಟೋ ಇತಿಹಾಸದಲ್ಲಿ ದಾಖಲಾದ ಮಗುವಿನ ಮೊದಲ ಫೋಟೋ ಎಂಬ ಸಂಭ್ರಮ ಬೇರೆ.

ಮೂರು ವರ್ಷದಲ್ಲಿ ಹುಟ್ಟಿದ ನಂತರ ಮಕ್ಕಳು ಯಾಕೋ ದಕ್ಕಲಿಲ್ಲ. ಎಲ್ಲರಿಗೆ ಆತಂಕ, ಮಗುವನ್ನು ಹೊಸಿಲು ಮೇಲೆ ಕೂರಿಸಿ, ಬೆನ್ನಿಗೆ ಸುಡಿಸಿದರೆ, ಅಚ್ಚೆ ಹಾಕಿಸಿದರೆ ಬೆನ್ನ ಮೇಲೆ ಹುಟ್ಟುವ ಮಕ್ಕಳು ಸಾಯುವದಿಲ್ಲ ಎಂಬ ನಂಬಿಕೆ.
ಹುಟ್ಟಿದ ಮೂರೇ ವರ್ಷಕ್ಕೆ ಬೆನ್ನಿಗೆ ಬರೆ ಹಾಕಿಸಿಕೊಳ್ಳುವ ಶಿಕ್ಷೆ. ಒಡಹುಟ್ಟಿದವರು ಉಳಿಯಲಿ ಎಂಬ ಕಾರಣಕ್ಕೆ ಬಾಲ್ಯದಲ್ಲಿಯೇ ಹಿರಿಯ ಮಗನಿಗೆ ಶಿಕ್ಷೆ.
ಬೆನ್ನಿನ ಮಚ್ಚೆ ನಿಜ ಆಯ್ತು ನಂತರ ಹುಟ್ಟಿದ ಮಗಳು ನಾಗರತ್ನ ಆರಾಮಾಗಿ ಉಳಿದಳು. ಮುಂದೆ ನಾಲ್ಕುಮಕ್ಕಳು ಸತ್ತರೂ ಅಂತಿಮವಾಗಿ ಉಳಿದದ್ದು ನಾಲ್ಕು ಜನ. ಸಿದ್ಧಬಸವನಿಗೆ ಬಾಲ್ಯದಲ್ಲಿ ಹಾಕಿಸಿಕೊಂಡ ಬರೆ ನೆನಪಿನಲ್ಲಿ ಉಳಿದಿಲ್ಲವಾದರೂ ಎಲ್ಲೋ ಒಂದು ಅಭಿಮಾನವಿದೆ. ಹೀಗೇ ನಾಲ್ಕು ವರ್ಷದವರಗೆ ನೆನಪಾಗದ ಬಾಲ್ಯಕ್ಕೆ , ನೆನಪಾಗದ ಬಾಲ್ಯವನ್ನು ಕೆದಕುವ ಕುತೂಹಲ ಬೇರೆ. ನೆನಪಾಗದ, ನೆನಪಿರದ ಘಟನೆಗಳ ಬೇರುಗಳ ಹಿಡಿದಲ್ಲವೆ ಮುಂದೆ ಇಷ್ಟುದ್ದ ಬೆಳೆದದ್ದು . . .