Monday, September 27, 2010

ಇಂಗ್ಲಿಷ್ ಪರೀಕ್ಷೆ - ಆಪರೇಷನ್ ಡೈಮಂಡ್

ಮೊನ್ನೆ midterm exam ತಪ್ಪಿಸಿದ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡಾಗ ಬಾಲ್ಯದ ಘಟನೆಯೊಂದು

ಧುತ್ತೆಂದು ನೆನಪಾಯಿತು. ಪರೀಕ್ಷೆಯ ಗಂಭೀರತೆ ಬಗ್ಗೆ ವಿದ್ಯಾರ್ಥಿಗಳಿಗೆ ಕಟ್ಟು ನಿಟ್ಟಾಗಿ ಆದೇಶಿಸುವ ಈ

ಕಾಲದಲ್ಲಿ ನೆನಪಾದ ಬಾಲ್ಯಕ್ಕಾಗಿ ಅಚ್ಚರಿ.

ಆಗ ನಾವು 10th ಪರೀಕ್ಷೆ ಬರೆಯಲು ಗಂಗಾವತಿಗೆ ಹೋಗಬೇಕಿತ್ತು. ಹಿಂದೆ ಪ್ರಸ್ತಾಪಿಸಿದಂತೆ - ಶಿಕ್ಷಣದ ಬಗೆಗಿನ

ಅಸಡ್ಡೆ, ಪಾಲಕರ ನಿರಾಸಕ್ತಿ ಹೀಗೆ ಹತ್ತಾರು ಕಾರಣಗಳಿಂದ backward ಎಂಬ ಹಣೆಪಟ್ಟಿ.

ಆಗ ನಮಗೆ ಪ್ರತಿ - ವಿಷಯಕ್ಕೂ ಎರಡು ಪೇಪರ್ಸ. ಬೆಳಗಿನ paper ಚೆನ್ನಾಗಿ ಆದರೆ, ಮಧ್ಯಾಹ್ನದ paper

ಮೂಲಕ ಪಾಸಾಗುವ ಭರವಸೆ. ಹತ್ತನೇ ವಾರ್ಷಿಕ ಪರೀಕ್ಷೆಯ ಇಂಗ್ಲಿಷ್ ಮುಂಜಾನೆಯ paper ಸರಿಯಾಗಲಿಲ್ಲ.

ಮಧ್ಯಾಹ್ನದ ಪೇಪರ್ ಬಗ್ಗೆ ಇದ್ದ ಗಂಭೀರತೆಯೂ ಮಾಯವಾಯಿತು. ಅದು ವಾರ್ಷಿಕ ಪರೀಕ್ಷೆ fail ಆದರೆ ಒಂದು

ವರ್ಷ ಭವಿಷ್ಯ ಹಾಳು.

At least ಆ ಕಾರಣಕ್ಕಾದರೂ ನಾನು ಮಧ್ಯಾಹ್ನದ paper ಬಗ್ಗೆ Serious ಆಗ ಬೇಕಿತ್ತು. ಆದರೆ ದುರಾದೃಷ್ಟ.

ಆಲಕ್ಷಿಸಿದೆ. ನನಗಿಂತ ಎರಡು ವರ್ಷ ಮುಂದಿದ್ದ ಬಂಧು ಅರಳಿ ಅಪ್ಪಣ್ಣನಿಗೆ ಮಧ್ಯಾಹ್ನದ ಪೇಪರಿನ ನಿರಾಸಕ್ತಿ

ಹೇಳಿದೆ. ಮನಸ್ಸಿಲ್ಲಂದರೆ film ಗೆ ಹೋಗೋಣೇನು ಅಂದದ್ದೇ ತಡ yes ಎನ್ನಬೇಕೆ?

ಇಂಗ್ಲಿಷ್ paper ಗೆ ಬೈ, ಬೈ ಹೇಳಿ ನೋಡಲು ಆಯ್ದುಕೊಂಡ ಸಿನೆಮಾ ರಾಜ್ ನಟಿಸಿದ ಆಪರೇಷನ್

ಡೈಮಂಡ್ ರಾಕೆಟ್. ಮದ್ಯಾಹ್ನ ಉರಿಬಿಸಿಲಿನ ಸೆಕೆಯಲ್ಲಿ ಸಿನೆಮಾ ನೋಡಿ ಪರೀಕ್ಷೆಗೆ ನೀರು ಬಿಟ್ಟ ವಿಷಾದ

ಒಂಚೂರು ಮನಸ್ಸಿನಲ್ಲಿರಲಿಲ್ಲ. ಅಂತಹ ಅವಿವೇಕ ಮನಸು ನನ್ನದು.

ಸಿನೆಮಾ ಮುಗಿಸಿ ವಾಸವಾಗಿದ್ದ ಅರಳಿಯವರ ಮನೆಯತ್ತ ಪಯಣ, ಅಪ್ಪಣ್ಣ ನ ಹಿರಿಯ ಅಣ್ಣ ನಾಗರಾಜ

ಮಾಮಾ ತುಂಬಾ ಕಟ್ಟು ನಿಟ್ಟಿನ ಮನುಷ್ಯ. ದಿನ ಮನೆಗೆ ಹೋದ ಕೂಡಲೆ ಪ್ರಶ್ನೋತ್ತರ ಕೇಳುತ್ತಿದ್ದರು. ಮನದಲ್ಲಿ

ಏನೋ ಉತ್ತರ ಹೆಣೆದುಕೊಂಡು ಹೋದೆ.

ಅನೀರಿಕ್ಷಿತವಾಗಿ ನಾಗರಾಜ ಮಾಮ ವರಾಂಡದಲ್ಲಿ ಕುಳಿತಿದ್ದರು. ಏನಲೇ ಇಂಗ್ಲಿಷ್ ಪೇಪರ್ ಹೆಂಗಾತು

ಎಂದರು. ಅಷ್ಟೇನು ಛಲೋ ಆಗಲಿಲ್ಲ ಎಂದೆ.

ಯಾಕ ಪೇಪರ್ ಕಠಿಣ ಇತ್ತಾ ಎಂದರು. ಉತ್ತರ ನೀಡಲು ತಪ್ಪಿಸಿಕೊಂಡು ಒಳಹೋಗಲು ಪ್ರಯತ್ನಿಸಿದೆ. ಅವರು

ಬಿಡುವ ಹಾಗೆ ಕಾಣಲಿಲ್ಲ. ಗೆಳೆಯ ಅಪ್ಪಣ್ಣ ಹಾಗೂ ನನ್ನನ್ನು ಎದುರಿಗೆ ಕೂಡಿಸಿಕೊಂಡು ಪ್ರಶ್ನೆಗಳ ಸುರಿಮಳೆ

ಆರಂಭಿಸಿದರು. ನನಗೆ ನಡುಕ ಶುರು ಆಯ್ತು. ಅವರ ಮನೆಯ ಆಳಿಗೆ ಬಡಿಗೆ ತರಲು ಹೇಳಿದರು.

ನಿಜ ಹೇಳಲೇ paper ಹೆಂಗಾತು ಅಂತ ಮತ್ತದೇ ಪ್ರಶ್ನೆ. ಇಲ್ಲ ಮಾಮಾ pass ಆಗೋ chance ಕಡಿಮೆ

paper tough ಇತ್ತು ಎಂದು ಹುಸು ಬಾಂಬ್ ಒಗೆದೆ. ಪ್ರಶ್ನೆ ಪತ್ರಿಕೆ ತಾ ಎಂದರು.

ಅದನ್ನು ಗೆಳೆಯ ಒಯ್ದಿದ್ದಾನೆ ಎಂದೆ. ಅವರ ಪಿತ್ತ ನೆತ್ತಿಗೇರಿತು.

ಕೈ ಮುಂದೆ ಚಾಚಲು ನಯವಾಗಿ ನಿರಾಕರಿಸಿದೆ. ನನ್ನ ತಪ್ಪಿನಿಂದಾಗಿ ಹೊಡೆತ ಅಪ್ಪಣ್ಣನಿಗೆ ಬಿತ್ತು.

ಬದ್ಮಾಶ ನನ್ನ ಮಕ್ಕಳ paper ಬರೆದು pass ಆಗ್ರಿ ಅಂದ್ರ ಏನ್ ನಡೆಸೀರಿ ಅಂದರು.

ನಾನು ಪ್ರಶ್ನೆ ಕೇಳ್ತಿನಿ ತಪ್ಪದೆ ಉತ್ತರ ಕೊಡು ಅಂದರು. ಪ್ರಶ್ನೆ ಒಂದು ಆಪರೇಷನ್ ಡೈಮಂಡ್ ರಾಕೆಟ್

ಸಿನೆಮಾ ಗಂಗಾವತಿಯಲ್ಲಿ ಯಾವ ಟಾಕೀಸ್ ನಲ್ಲಿದೆ? ಗೊತ್ತಿಲ್ಲ ಎಂದೆ. ಪ್ರಶ್ನೆ ಎರಡು ಈ ಚಿತ್ರದ ಹೀರೋ

ಯಾರು ಅಂದ್ರು ಗೊತ್ತಿಲ್ಲ ಅಂದೆ. ನನ್ನ ಕೈಯಲ್ಲಿದ್ದ pad ತಗೆದುಕೊಂಡು ತಲೆಗೆ ಗುದ್ದಿದರು. ಅಳಲು ಶುರು

ಮಾಡಿದೆ. ಒದೀತಿನಿ ಮಗನೆ ಸುಳ್ಳು ಬೊಗಳಿದ್ರಾ. ಖರೆ ಹೇಳು ಮಧ್ಯಾಹ್ನ ಎಲ್ಲಿಗೆ ಹೋಗಿದ್ರಿ. ನಿರುತ್ತರರಾದೆವು.

ಪರೀಕ್ಷೆ ಬರಿರಲೆ ಮಕ್ಕಳಾ ಅಂದ್ರ ಸಿನೆಮಾ ನೋಡ್ತಾರ, ಸಿನೆಮಾ ಅದು ಇಂಗ್ಲಿಷ್ ಪೇಪರು ತಪ್ಪಿಸಿ. ಆಪರೇಷನ್

ಢೈಮಂಡ್ ಸಿನೆಮಾ ಅಂದು ಒದೆಕೊಟ್ಟರು.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದದ್ದನ್ನು ನೋಡಿದ್ದಾರೆ ಎಂಬ ಸತ್ಯ ಗೊತ್ತಾಯಿತು. ಮನೆಯಲ್ಲಿನ ಬಂಧುಗಳು,

ಆಳುಕಾಳುಗಳನ್ನು ಕೂಡಿಸಿಕೊಂಡು ನಮ್ಮ ಸಿನೆಮಾ ಪಯಣ ಅವರೇ ವಿವರಿಸಿದರು. ಟಾಕೀಸಿನಲ್ಲಿ ನಮ್ಮನ್ನು

ನೋಡಿದ್ದು. ಪರೀಕ್ಷೆ ತಪ್ಪಿಸಿ ಸಿನೆಮಾ ನೋಡಿದ ಬೇಜವಾಬ್ದಾರಿಯನ್ನು ಎಳೆಎಳೆಯಾಗಿ ಬಿಡಿಸುವಾಗ ಎಲ್ಲರೂ

ನಕ್ಕಿದ್ದೇ ನಕ್ಕಿದ್ದು.

ಇಲ್ಲ ಬಿಡು ಅಣ್ಣಾ ಇಂಗ್ಲಿಷ್ ನಲ್ಲಿ knowledge ಹೆಚ್ಚಾಗಲಿ ಅಂತ bond film ನೋಡಲು ಹೋಗಿದ್ದಾರೆ ಎಂದು

ಎಲ್ಲರೂ ತಮಾಷೆ ಮಾಡಿದಾಗ ಒದೆ ತಿಂದು ಅಳುತ್ತಾ ಒಳಗೆ ಹೋದೆವು. ಮುಂದೆ ಒಂದು ತಾಸು ಪರೀಕ್ಷೆಯ

ಗಂಭೀರತೆ ಬಗ್ಗೆ ತಿಳಿ ಹೇಳಿದರೂ, ಅದು ನನ್ನ ತಲೆಯಲ್ಲಿ ಹೋಗಲೇ ಇಲ್ಲ. ಪರೀಕ್ಷೆ ತಪ್ಪಿಸಿದರೆ ಏನು ಮಹಾ,

ಮತ್ತೆ October ನಲ್ಲಿ ಬರೆಯಬಹುದು ಎಂದು ಮನಸು ಲೆಕ್ಕ ಹಾಕಿತು. ಹೇಗೋ ಬೆಳಗಿನ paper ಸರಿ

ಆಗಿರಲಿಲ್ಲ. ಹೆಂಗೊ ಮಧ್ಯಾಹ್ನದ್ದು ಸರಿ ಆಗುತ್ತಿರಲಿಲ್ಲ. ಅದಕ್ಕೆ ಹೋದೆ. ಎಂಬ ಸಮರ್ಥನೆ ಮನಸ್ಸಿನಲ್ಲಿ

ಕೊರೆಯುತ್ತಿತ್ತು. ಹೇಳಿದರೆ ಮತ್ತೆ ಒದೆ ಬೀಳುತ್ತಿದ್ದವು. ಉಳಿದ ಮೂರು paper ಸರಿಯಾಗಿ ಬರೆಯಲು

ಆದೇಶಿಸಿದರು.

ಅಬ್ಬಾ! ಅಚ್ಚರಿ ಅಲ್ಲವೆ. ಯಶಸ್ವಿಇಂಗ್ಲಿಷ್ ಉಪನ್ಯಾಸಕನಾಗಿ ಎರಡು ದಶಕಗಳ ಪಾಠ ಮಾಡಿದ ನನ್ನ ಇಂಗ್ಲಿಷ್ ಕತೆ

ನೆನಪಾದರೆ ನನಗೇ ಅಚ್ಚರಿ. ಅಂದುಕೊಂಡಂತೆ fail ಆಗಿ october ನಲ್ಲಿ ಪರೀಕ್ಷೆಯಲ್ಲಿ pass ಅದೆ.

ಮುಂದೆ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ English ಕಲಿಯಬೇಕೆಂಬ ಹಟದಿಂದ B.A. English

major ತಗೆದುಕೊಂಡೆ.

ಹತ್ತನೆ ವರ್ಗದ ಆಲಕ್ಷ ನನ್ನನ್ನು ತೀವ್ರವಾಗಿ ಕಾಡುತ್ತಿತ್ತು. ಆಪರೇಷನ್ ಡೈಮಂಡ್, ಅರಳಿ ನಾಗರಾಜ ಮಾಮಾ,

ಸಿನೆಮಾಕ್ಕೆ ಕರೆದದ್ದು ಅಪ್ಪಣ್ಣ ಇಂದಿಗೂ ನೆನೆಪಾಗುತ್ತಾರೆ.

ಆದರೆ ನನ್ನ ದಿಢೀರ್ ಬೆಳವಣಿಗೆಯನ್ನು, ಸಾಧನೆಯನ್ನು ಗಂಗಾವತಿ ಅರಳಿ ಪರಿವಾರದವರು ಪವಾಡವೆಂಬಂತೆ

ನೋಡುತ್ತಾರೆ.

ಅಂದ ಹಾಗೆ ಆಪರೇಷನ್ ಗೆಳೆಯ ಅಪ್ಪಣ್ಣ ಈಗ ಗಂಗಾವತಿಯಲ್ಲಿ ದೊಡ್ಡ ವ್ಯಾಪಾರಿ, ಔಷಧಿ ಅಂಗಡಿಯ ಮೂಲಕ

ಶ್ರೀಮಂತ ನಾಗಿ ಬೆಳೆದಿದ್ದಾನೆ.

ಒದೆ ಕೊಟ್ಟು ಬುದ್ದಿ ಕಲಿಸಿದ ನಾಗರಾಜ ಮಾಮಾ ಈಗ ಹೈಕೋರ್ಟನ ಗೌರವಾನ್ವಿತ ನ್ಯಾಯ ಮೂರ್ತಿ

ಗಳಾಗಿರುವ ಶ್ರೀ ಅರಳಿ ನಾಗರಾಜ ಅವರು.

ಕಾಲ ಬದಲಾಗಿದೆ. ಎಲ್ಲರೂ ಈ ಘಟನೆಯನ್ನು ತಮಾಷೆಯಿಂದ ನೆನಸಿಕೊಂಡರೂ ಒಂದು ಒಳಾರ್ಥವಿದೆ. ಈ

ಘಟನೆಯನ್ನು ಮರೆತಿದ್ದ ನ್ಯಾಯ ಮೂರ್ತಿಗಳಿಗೆ ನಾನೇ ನೆನಪಿಸಿದಾಗ ಹೇಗಿದ್ದವನು ಹೇಗಾದೆಲೇ ಎಂದು

ತಮಾಷೆಯಿಂದ ಹೊಟ್ಟೆ ತುಂಬಾ ನಕ್ಕರು.

ಹಾಸ್ಯ ಪ್ರಜ್ಞೆ ಅರಿಯದವರೊಂದಿಗೆ ಮೌನ ಲೇಸು

Sense of Humour ನಮ್ಮ ಜೀವನೋತ್ಸಾಹಕ್ಕೆ ಅತ್ಯಗತ್ಯ. ಆದರೆ ಅದು ಯಾರೊಂದಿಗೆ ಎಂಬುದು ಅಷ್ಟೇ

ಮುಖ್ಯ. ಅಂತಹ ಅನೇಕ ಎಡಬಿಡಂಗಿ ಪ್ರಸಂಗಗಳನ್ನು ನನ್ನಂತೆ ಅನೇಕರು ಅನುಭವಿಸಿದ್ದಾರೆ.

ಸದಾ ನಗುತ್ತ, ನಗಿಸುತ್ತ ಇರಬೇಕು ಎಂಬ ಸಿದ್ಧಾಂತ ಎಲ್ಲ ಸಮಯದಲ್ಲೂ ಒಳ್ಳೆಯದಲ್ಲ. ಯಾವುದಾದರು ಒಂದು

'ಪ್ರಜ್ಞೆ' ಎಲ್ಲರಿಗೆ, ಎಲ್ಲ ಕಾಲಕ್ಕೂ ಸ್ವೀಕೃತ ಎಂದರ್ಥವಿಲ್ಲ.

ನಾವು ಸದಾ ನಗುತ್ತ, ನಗಿಸುತ್ತ ಜನ ನಮ್ಮೊಂದಿಗಿರುತ್ತಾರೆ. ಆದರೆ ಅದು ಅತೀಯಾದರೆ ನಾವೊಬ್ಬ ಬಫೂನ್

ಆಗುತ್ತೇವೆ.

ಹಾಸ್ಯದ ಅತಿರೇಕದಲ್ಲಿ ಒಮ್ಮೊಮ್ಮೆ ನಮ್ಮನ್ನು ಲೇವಡಿ ಮಾಡಿಕೊಳ್ಳುತ್ತಾ, ಬೇರೆಯವರನ್ನು ಲೇವಡಿ

ಮಾಡುವಾಗ ಸಮಸ್ಯ ಎದುರಾಗುತ್ತದೆ.

ಕೆಲವರು ಕೇವಲ ನಗಲು ಬಯಸುತ್ತಾರೆ. ಆದರೆ ತಾವು ಲೇವಡಿಗೊಳಗಾಗುವುದನ್ನು ಇಷ್ಟ ಪಡುವುದಿಲ್ಲ.

ಹಾಸ್ಯ, ವಿನೋದ ಪ್ರಜ್ಞೆ ಸದಾ ಸ್ವೀಕೃತವಲ್ಲ ಎಂಬ ಸತ್ಯ ಒಮ್ಮೊಮ್ಮೆ ಗೊತ್ತಾಗದಂತೆ ಅಪಾಯ

ತಂದೊಡ್ಡುತ್ತದೆ.

ಸಾವಿರಾರು ಜನ ಸ್ನೇಹಿತರಾಗುತ್ತಾರೆ. ನೂರಾರು ಜನ ಒಳಗೊಳಗೆ ನಸುನಗುತ್ತಲೇ ವೈರಿಗಳಾಗುತ್ತಾರೆ.

ಹಾಗಂತ ನಾವು ಹಾಸ್ಯ ಪ್ರಜ್ಞೆಯನ್ನು ಕೈಬಿಟ್ಟು ಮುಖ ಸಿಂಡರಿಸಿಕೊಂಡಿರಬೇಕೆಂದು ಅರ್ಥವಲ್ಲ.

ನನಗೊಬ್ಬ ಗೆಳೆಯರಿದ್ದರು. ನನ್ನ ವಿನೋದ ಪ್ರಜ್ಞೆ ಅವರಿಗೆ ಪ್ರಿಯವಾಗುತ್ತಿತ್ತು. ಆದರೆ ಅವರ So called

followers ಗೆ ಅದು ಇಷ್ಟವಾಗುತ್ತಿದ್ದಿಲ್ಲ. ಕಾರಣವಿಷ್ಟೇ ದೊಡ್ಡವರೆಂದು ಪರಿಗಣಿಸುವವರಿಗೆ (?) joke

ಮಾಡಬಾರದೆಂಬ ಸಣ್ಣ ಭ್ರಮೆ. ಅವರ ಅಭಿಮಾನಿಗಳ ಮಾತನ್ನು ಲೆಕ್ಕಿಸದಂತೆ ಹಾಗೆ ಇರುವುದು

ಅನಿವಾರ್ಯವಾಯಿತು.

ಯಾವುದೋ ಒಂದು ಲಾಟರಿ ಹೊಡೆದು ಅವರ ಸ್ಥಾನ ಮಾನ ಮೇಲ್ದರ್ಜೆಗೇರಿತು. ಆಗ ಅವರಿಗೆ ಅವರ

followers ಮಾತೇ ಪ್ರಿಯವೆನಿಸಿ ಗಂಭೀರರಾದರು.

ನಾನು ಅಷ್ಟೇ ಹೋಗೊ, ಎಂದು ಸುಮ್ಮನಾದೆ. ಸ್ನೇಹದ ಬೆಲೆ ಗೊತ್ತಿರದವರೊಂದಿಗೆ ಸ್ನೇಹ ಸಲ್ಲದು ಎಂಬ ಹೊಸ

ಪಾಠ ಕಲಿತೆ. ಅದೇ ರೀತಿ ಗೊತ್ತಿರುವ family friends ಪರಿವಾರದವರು ಸಲಿಗೆಯಿಂದಲೇ ಇದ್ದರು. ಒಂದು

ಗಳಿಗೆಯಲ್ಲಿ ಅವರ mood ಸರಿ ಇಲ್ಲದಾಗ ಅಯ್ಯೋ ಸರ್ ಗೆ joke ಮಾಡಬೇಡ ಎಂದು ಹೇಳಿ ಎಂದು

ಕುಟುಂಬದವರೊಂದಿಗೆ ಮುನಿಸಿಕೊಂಡರು. ನನ್ನ ಸಲುವಾಗಿ ಅವರ ಕುಟುಂಬದಲ್ಲಿ ಮುನಿಸು ಬೇಡ ಎಂಬ ಹೊಸ

ಪಾಠ ಕಲಿಯುವುದು ಅನಿವಾರ್ಯವಾಗಿದೆ.

ಹೀಗೆ ಬದುಕು ಅನೇಕ ಸರಣಿ ಪಾಠಗಳನ್ನು ಕಲಿಸುತ್ತದೆ. ಇದು ನಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಪೂರಕವಾಗುತ್ತದೆ.

ಇದೇ ಕಾರಣವನ್ನು ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಜೆ.ಎಚ್. ಪಟೇಲರು ಹೇಳಿದ್ದರು. ಅವರ ಹಾಸ್ಯ

ಪ್ರವೃತ್ತಿಯನ್ನು ಅವರ ಎಲ್ಲ ಸಮಕಾಲಿನರು ಒಪ್ಪಿಕೊಂಡಿದ್ದರು. ರಾಜಕೀಯವಾಗಿ ಬೇರೆ ಪಕ್ಷದಲ್ಲಿದ್ದವರಿಗೂ

ಪಟೇಲರ ಹಾಸ್ಯ ಪ್ರಜ್ಞೆ ತುಂಬಾ ಇಷ್ಟವಾಗುತ್ತಿತ್ತು.

ಇಂತಹ ಸಂದರ್ಭದಲ್ಲಿ ಅದೇ ತಾನೇ ಆಯ್ಕೆಯಾಗಿ ಮಂತ್ರಿಯಾಗಿದ್ದ ಎಳಸಲು ವ್ಯಕ್ತಿಯೊಬ್ಬನಿಗೆ ಪಟೇಲರು

ಜೋಕ್ ಮಾಡಿ ಪೇಟಗೆ ಸಿಕ್ಕರಂತೆ. ಗುಂಡು ಪಾರ್ಟಿಯಲ್ಲಿ ಪಟೇಲರ ಹಾಸ್ಯಪ್ರಜ್ಞೆಯನ್ನು ಅರಿಯದ ಅವಿವೇಕಿ,'ರೀ

ಪಟೇಲರೇ ನಾನು ಕ್ಯಾಬಿನೆಟ್ ಮಂತ್ರಿ, ನೋಡಿ ಮಾತಾಡ್ರಿ' ಎಂದು ಗುಡುಗಿದನಂತೆ. ಅದು ಪಟೇಲರ

ಬದುಕಿನಲ್ಲಾದ ಮೊದಲ ಘಟನೆ. ಹಾಗಂತ ಪಟೇಲರೇನು ತಮ್ಮ ಪ್ರಜ್ಞೆಯನ್ನು ಕಳೆದುಕೊಳ್ಳಲಿಲ್ಲ. ಇದನ್ನು

ಹೇಳಿವ ಉದ್ದೇಶವಿಷ್ಟೇ ಒಮ್ಮೊಮ್ಮೆ ದೊಡ್ಡವರು ಆತಂಕ ಎದುರಿಸುತ್ತಾರೆ ಎಂಬುದು.

ಅವರ ವಿನೋದ ಪ್ರಜ್ಷೆಯನ್ನು ಅಭಿನಂದಿಸಿದಾಗ ನನಗೆ ಪಟೇಲರು ಮೇಲಿನ ಘಟನೆಯನ್ನು ವಿವರಿಸಿ

ಎಚ್ಚರಿಸಿದ್ದರು.

ನಾನು ಕೆಲವು ಸ್ನೇಹಿತರನ್ನು (?) ಕಳೆದುಕೊಂಡಾಗ ಮೇಲಿನ ಮಾತುಗಳು ನೆನಪಾದವು ಅಷ್ಟೆ!

ಬದುಕೆಂಬ ರೈಲಿನಲ್ಲಿ ಹತ್ತುವವರು ಹತ್ತುತ್ತಾರೆ, ಇಳಿಯುವವರು ಇಳಿಯುತ್ತಾರೆ. ನಮ್ಮ ಗಾಡಿ ಓಡುತ್ತಲೇ

ಇರಬೇಕು. ಈ ನಿರ್ಲಿಪ್ತತೆ ರೂಪಿಸಿಕೊಳ್ಲಲು ಕಾಲ ಬೇಕಾಗುತ್ತದೆ.

ಅದಕ್ಕೆ ಹೇಳುತ್ತೇನೆ. ವಿನೋದ ಬಿಡಬೇಡಿ, ಆದರೆ ಎಲ್ಲರೊಂದಿಗೆ ಮಾಡಬೇಡಿ.


ಗಾಳಿಗುದ್ದಿ ಮೈ ನೋಯಿಸಿಕೊಂಡಂತೆ

ನಮ್ಮ ಭಾವನೆಗಳು ಲಂಗು ಲಗಾಮಿಲ್ಲದೆ ವೇಗವಾಗಿ ಓಡುತ್ತವೆ. ಆ ಭಾವನೆಗಳನ್ನು ಎಲ್ಲರೂ

ಅರ್ಥಮಾಡಿಕೊಂಡಿರುತ್ತಾರೆ ಎಂಬ ಭ್ರಮೆ ಬೇರೆ. ನೀನು ಅಷ್ಟೇ ಎಷ್ಟೊಂದು ಚಲ್ಲಾಟವಾಡಿದೆಯಲ್ಲ? ಅಬ್ಬರ

ಇಳಿದ ಸಮುದ್ರದ ಎದುರಿಗೆ ನಿಂತು ಶಾಂತವಾಗಿ ಆಲೋಚಿಸುತ್ತೇನೆ.

ಅತೀಯಾದ ಅಮೃತದಂತಹ ಪ್ರೀತಿಯ ಒರಸೆಯನ್ನು ಬಳಸಿಕೊಂಡ ಪರಿಯಲ್ಲಿ ಎಂತಹ ಅತಿರೇಕ.

ನಡು ರಾತ್ರಿಯಲಿ, ಪಿಸು ಮಾತಿನ ಸರಸದಲ್ಲಿಯೂ, ವಿರಸದ ಹಾವು ಬುಸುಗುಟ್ಟರೂ ಸಹಿಸಿಕೊಂಡು

ಬರಸೆಳೆದುಕೊಳ್ಳುತ್ತಿದ್ದ ನಿನ್ನ ಅಹಂಕಾರದ ಅವಿವೇಕವನ್ನು ನೆನಸಿಕೊಂಡರೆ ಛೇ ಎನಿಸುತ್ತದೆ. ನನ್ನ ಬಗ್ಗೆ.

ಮನಸುಗಳು ಮಿಲನವಾಗುವುದು ಪ್ರೀತಿಯ ದ್ರವ್ಯದಿಂದ ಎಂಬ ವಿವೇಚನೆ ನಿನ್ನಲಿ ಮೂಡಲೇ ಇಲ್ಲ.

ಬಾನಲಿ ನಗುತ್ತಿದ್ದ ಚುಕ್ಕೆಗಳನ್ನು ಎಣಿಸುತ್ತಾ, ಸಮವಾಗಿ ಮುತ್ತಿಕ್ಕಿದರೂ ಸ್ವೀಕರಿಸುವ ಸಹೃದಯತೆ ಬರಲೇ ಇಲ್ಲ.

ಉರಿಯುವ ಮುಖ, ನಗುವೇ ಕಾಣದ ತುಟಿಗಳನ್ನು ಸ್ವೀಕರಿಸಿದ ನನ್ನ ಹೇಡಿತನಕ್ಕೆ ಈಗ ಬೇಸರ ಶುರು ಆಗಿದೆ.

ಯಾವುದೋ ಒಂದು ಕೆಟ್ಟ ಸೆಳೆತ ನಿನ್ನಿಂದ ದೂರಾಗುವ ಮನಸ್ಸು ಮಾಡಲಿಲ್ಲ. ಈಗ ಗೊತ್ತಾಗಿದೆ. ಆ ಸೆಳೆತ

ಯಾವುದೆಂದು. ವಯಸ್ಸು ಪಾಠ ಕಲಿಸುತ್ತದೆ. ಕಾಲ ಪಾಠ ಕಲಿಸುತ್ತದೆ. 'ಕಾಲ' - 'ವಯಸ್ಸನ್ನು' ಲೆಕ್ಕಿಸಿದ್ದರೆ ನೋವು

ಅನುಭವಿಸುತ್ತೇವೆ.

ನಿನ್ನನ್ನು ನಂಬಿ, ಪ್ರಿತೀಯೆಂದು ಭ್ರಮಿಸಿ ಸಮಯ, ಶಕ್ತಿ ಹಾಳು ಮಾಡಿಕೊಂಡಿದ್ದನ್ನು ವಿಷಾದದಿಂದ ಮೆಲಕು

ಹಾಕುತ್ತೇನೆ.

ಯಾವಾಗಲಾದರೂ ಪ್ರೀತಿಯನ್ನು ತೋರಿಸುವಾಗ ನಿನ್ನ ಬೆರಳುಗಳು ನಲಿದಾಡಿದ ಎದೆಯ ರೋಮಗಳು ಈಗ

ಅನಾಥವಾಗಿಲ್ಲ ಎಂದು ಸಂಭ್ರಮಿಸುತ್ತವೆ. ರಾಗ - ತಾಳಗಳಿಲ್ಲದ ಬೇಸೂರು ಹಾಡಿನಂತಹ ನಿನ್ನ ಪ್ರೀತೀಯನ್ನು

ಎದೆಯ ಮೇಲಿನ ರೋಮಗಳೇ ತಿರಸ್ಕರಿಸಿದಾಗ, ಎದೆಯೊಳಗಡಗಿರುವ ಹೃದಯ ಹೇಗೆ ಸ್ವೀಕರಿಸಿತು.

ನನ್ನ positive ಭಾವನೆಗಳಿಗೆ ಗೌರವಿಸದ ನಿನ್ನ ಬಗ್ಗೆ ಪ್ರೀತಿಯಿರದಿದ್ದರೂ ದ್ವೇಷವಂತೂ ಇಲ್ಲ. ಯಾಕೆಂದರೆ

ನನಗರಿವಿಲ್ಲದಂತೆ ಕೆಲ ದಿನ ನಿನ್ನ ಮೈ - ಮನಗಳಲಿ ನಿತಾಂತವಾಗಿ ಹರಿದಾಡಿದ್ದೇನೆ ಎಂಬ ಮುಲಾಜು

ಇದೆಯಲ್ಲ ಅದಕ್ಕೆ.

Saturday, September 25, 2010

ವಿರೇಶ್ವರ ಪುಣ್ಯಾಶ್ರಮ


ಇಲ್ಲಿ ಎಲ್ಲಂದರಲ್ಲಿ ನಾದ
ನಿನಾದಗಳ ಕಂಪು
ಅಂಧರ ಬೆಳಕಲಿ ಅನಾಥರ ಖುಷಿಯಲಿ
ಸಂಭ್ರಮಿಸುವ ತಂಪು.
ಪುಣ್ಯಾಶ್ರಮದ ಪ್ರತಿ ಕಲ್ಲಲಿ
ಸರಿಗಮಗಳ ಸರಪಳಿ.
ಅಂಗುಲಂಗುಲದ ನಡೆಯಲಿ
ಅಂತಕರಣದ ಹೊಳಪು.
ಪಂಚಾಕ್ಷರ ಗವಾಯಿಗಳವರ
ಉಭಯ ಗಾನ ವಿಶಾರದೆ
ಇಲ್ಲಿ ಅಲುಗದೆ ನೆಲೆಯೂರಿ
ತನ್ಮಯಗಳಾಗಿ ಮೈ ಮರೆತು
ನಲಿಯುತ ಸಂಚರಿಸುವ
ಪರಿಯನು ಅರಿಯದವರು ಯಾರು?
ಪುಟ್ಟರಾಜರ ಶ್ರಮದ ಬೆವರ
ಹನಿಯಲೂ ಸೂಸುತಿದೆ ಗಾನ ಸುಗಂಧ
ಸರಿಗಮಗಳ ಜಪದಲಿ.
ಇಲ್ಲೊಮ್ಮೆ ಜಪಿಸಿದರೆ ಮೈ
ಮನಗಳಲಿ ಕಂಪನ.
ಮಲಿನವಾದ ಮನಸನು
ಬದಿಗಿಟ್ಟು ಒಮ್ಮೆ ಕೈಮುಗಿದು
ಒಳಗೆ ಬಾ ನಾದ ಪ್ರಿಯನೆ
ಎಲ್ಲಂದರಲಿ ಬೀಸುವ ಗಾನ
ಗಂಧದ ಕಂಪನು
ನಿನ್ನದಾಗಿಸಲು

ಅಂಧ ಆಂಕ್ರಂದನ


ವಿಧಿ ಕಣ್ಣು ಕಟ್ಟಿದಾಗ
ಒಳಗಣ್ಣು ತೆರೆಸಿದ ಕರುಣಾ
ಸಾಗರನೆ.
ಹೆತ್ತೊಡಲ ಬರಸಿಡಿಲಿಗೆ
ಕಾರಣನಾಗಿ
ಬದುಕು ಶೂನ್ಯ
ವಾದಾಗ ಅಸಂಖ್ಯೆ
ಸಂಖ್ಯೆ ಬಳಸಿ ಬಾಳ
ಪಯಣದಿ ಜೀವಯಾನಕೆ
ಭಾವ ತುಂಬಿದ ಗುರುವಿನ
ಗುರುವೆ.
ನಾದ ಲೋಕದೊಳೊಂದು
ಹೊಸ ಲೋಕ ಸೃಷ್ಟಿಸಿ ದಿವ್ಯ
ಬೆಳಕ ತೋರಿ ಅಂಧತ್ವ
ದೂರಾಗಿಸಿದ ಜಗದಾದಿ ಗುರುವೆ.
ನೀನಿಲ್ಲದ ಜಗದ ಶೂನ್ಯವ
ತುಂಬುವ ಶಕ್ತಿ ಕರುಣಿಸು
ದಯಾಮಯಿ ಪ್ರಭುವೆ.

Friday, September 24, 2010

ನಿನೆಮಾ ಗೀಳು - ಶಂಕರ ಪ್ರಸಂಗ

ಬಾಲ್ಯದಲ್ಲಿ ವಿಪರೀತ ಸಿನೆಮಾ ಹುಚ್ಚು. ರಜೆಯಲ್ಲಿ ಗದುಗಿಗೆ ಬಂದರೆ ನಾನು, ಶರಣು, ಸಿದ್ದಲಿಂಗಣ್ಣ ಒಂದೇ

ದಿನದಲ್ಲಿ ಮೂರು ಸಿನೆಮಾ ನೋಡಿದ ದಾಖಲೆ. ನೋಡಿದ ಸಿನೆಮಾದ ಕತೆಯನ್ನು ರಸವತ್ತಾಗಿ ಸಂಗೀತ ಸಮೇತ

ವರ್ಣಿಸುವುದೊಂದು ವಿಶೇಷ ಕಲೆಯಾಗಿತ್ತು. ಸಿನೆಮಾ ನೋಡಿ ಬಂದ ಮೇಲೆ ಸ್ನೇಹಿತರ ಪಡೆ ಕತೆ ಕೇಳಲು

ನನ್ನ ಸುತ್ತ ಇರುತ್ತಿತ್ತು.

ನಮ್ಮೂರ ಅಕ್ಕಿ ಲಾರಿ ಹಿಡಿದು 8ನೇ ಕ್ಲಾಸಿನಲ್ಲಿದ್ದಾಗ ಬೆಂಗಳೂರಿಗೆ ಹೋಗಿ ಕಂಠೀರವ ಸ್ಟುಡಿಯೋದಲ್ಲಿ

ಶೂಟಿಂಗ್ ನೋಡಿ ನೆಚ್ಚಿನ ನಟರನ್ನು ಭೇಟಿ ಆಗಿದ್ದೆ. ಅಷ್ಟೊಂದು ಕಿರಿವಯಸ್ಸಿನ ಹುಚ್ಚು ನೆನಪಾದರೆ ಈಗ ಅಚ್ಚರಿ.

ಕಂಠೀರವ ಸ್ಟುಡಿಯೋ ಗಾರ್ಡಗೆ ಹಣ ನೀಡಿ ಸ್ಟುಡಿಯೋದ ಒಳಗೆ ನುಗ್ಗಿದ್ದೆ.

ವಿದ್ಯಾರ್ಥಿಯಾಗಿದ್ದಾಗ ಶಂಕರ್ ನಾಗ್ ನೆಚ್ಚಿನ ನಟ. ಸೀತಾರಾಮು ಅಭಿನಯಕ್ಕೆ ಬೆರಗಾಗಿದ್ದೆ. ಶಂಕರ್ ನಾಗ್

ವಿಳಾಸ ಪತ್ತೆ ಹಚ್ಚಿ ಪತ್ರ ಬರೆದಿದ್ದೆ. ಮುಂದೆ ಒಂದೆರೆಡು ತಿಂಗಳಲ್ಲಿ ಅನಿರೀಕ್ಷಿತ ಸಂತೋಷ.

ಶಂಕರ್ ನಾಗ್ ಫೋಟೋ ಇರುವ ಕಾರ್ಡ ತಲುಪಿದಾಗ ಆದ ಸಂತಸಕ್ಕೆ ಲೆಕ್ಕವೇ ಇಲ್ಲ. ಗೆಳೆಯರಿಗೆಲ್ಲ ತೋರಿಸಿ

ಸಂಭ್ರಮಿಸಿದ್ದೆ. ನನ್ನ ಸಿನೆಮಾ ಹುಚ್ಚು, ಓದಿನ ಅಲಕ್ಷ, ವ್ಯಾಪಾರದಲ್ಲಿನ ನಿರಾಸಕ್ತಿ ಮನೆಯಲ್ಲಿ ಬೇಸರ

ಉಂಟುಮಾಡಿತ್ತು. ತಮ್ಮ ಜಗದೀಶನಿಗೆ ಇಂಗ್ಲಿಷ್ ಶಿಕ್ಷಣ ನೀಡುವುದಲ್ಲದೆ ಅವನ ಬಗ್ಗೆ ಮಮಕಾರ, ನನ್ನ ಬಗ್ಗೆ

ತಿರಸ್ಕಾರವನ್ನುಂಟು ಮಾಡಿತ್ತು.

ಹೀಗಿರುವಾಗ ಜಗದೀಶ ಶಂಕನಾಗ್ ಬರೆದ ಪತ್ರವನ್ನು ಹರಿದು ಹಾಕಿ ನನ್ನ ಭಾವನೆಗಳಿಗೆ ಬೆಂಕಿ ಇಟ್ಟ. ಏನೋ

ಕಳೆದುಕೊಂಡವರ ಹಾಗೆ ಜೋರಾಗಿ ಅಳಲು ಮಾಡಿದೆ.

ಮನೆಯಲ್ಲಿ ಅನುಕಂಪ ಗಳಿಸಲು ವಿಫಲನಾದೆ. ಅದೇನು ಮಹಾ ಅಂತ ತಮ್ಮನಿಗೆ ಬೈಯ್ಯುತ್ತೀ. ನೀನಂತು

ಓದಲ್ಲ, ಬರಿಯಲ್ಲ, ಸಿನೆಮಾ ನೋಡಿ ಹಾಳಾಗ್ತಿ, ಅದನ್ನು ಹರಿದ್ರ ಏನ್ ಆತು ಎಂದು ನನ್ನನ್ನೇ ಬೈದರು.

ಚೂರಾದ ಪತ್ರವನ್ನು ಜೋಡಿಸಿ ನೋವನ್ನು ಸಹಿಸಿಕೊಂಡೆ. ಮನೆಯಲ್ಲಿ ಎಲ್ಲರೂ ಅಲಕ್ಷಿಸಿದ್ದಕ್ಕೆ ಬೇಸರವಾಗಿ

ಜಗದೀಶನ ಮೇಲೆ ಸಿಟ್ಟು ಉಕ್ಕಿ ಬಂತು. ಏನು ಮಾಡೋದು ಅವನು ಅಪ್ಪಾನ ಮುದ್ದಿನ ಮಗ ಬೇರೆ.

ಈ ಪ್ರಸಂಗದಲ್ಲಿ ಅಸಹಾಯಕನಾದೆ. ಒಬ್ಬನೇ ರೋಧಿಸಿದೆ. ವಿದ್ಯಾರ್ಥಿಗಳ ಸಿನೆಮಾ ಹುಚ್ಚನ್ನು ಯಾರೂ

ಬೆಂಬಲಿಸುವುದಿಲ್ಲವಾದ್ದರಿಂದ ಈ ಘಟನೆಯಿಂದ ಕುದ್ದು ಹೋದೆ. ಆದರೆ ಸಿನೆಮಾ ಹುಚ್ಚು ಕಡಿಮೆ ಆಗಲಿಲ್ಲ.


Thursday, September 23, 2010

ಸೌಂದರ್ಯದ ಹಿಂದಿನ ಕ್ರೌರ್ಯ

'Living Together' ಇದೊಂದು ಮದುವೆಗೆ ಇನ್ನೊಂದು ಪರಿಕಲ್ಪನೆ. ಇದು ಇಂಡಿಯಾದಲ್ಲಿ ಸಾಧ್ಯವಾ

ಅಂದುಕೊಂಡಾಗಲೇ ಇಲ್ಲಿ ಆರಂಭವಾಗಿದೆ.

ಆದರೆ ಹುಡುಗನಿಗೆ ಹುಡುಗಿ ಇಷ್ಟವಾಗಲಿಲ್ಲ ಎಂದು ಕೊಲೆ ಮಾಡಿದ ಘಟನೆಗಳನ್ನು ಟಿ.ವಿ.ಯಲ್ಲಿ ನೋಡಿದಾಗ

ವಿಷಾದವೆನಿಸುತ್ತದೆ.ಬೇಡವೆಂದರೆ ತಿರಸ್ಕರಿಸಲಿ ಅಮಾನವೀಯವಾಗಿ ಕೊಲ್ಲುವದು ಯಾವ ನ್ಯಾಯ?

ಸುಂದರ ಯುವತಿ 'ಶುಭಾ' ಸ್ಟಾಫ್ ವೇರ್ ಇಂಜನೀಯರ್ ಗೀರಿಶ್ ನನ್ನು ಕೊಂದು ರಾಜಾರೋಷವಾಗಿ ಏನೂ

ಮಾಡಿಲ್ಲ ಎಂಬ ಹಾಗೆ ದಿಟ್ಟವಾಗಿ ಪೋಸ್ ಕೊಡುವುದನ್ನು ನೋಡಿದರೆ ಅಯ್ಯೋ ಎನಿಸುತ್ತದೆ.

ಶುಭಾಗೆ ಗಿರೀಶ್ ಬೇಡವಾಗಿದ್ದರೆ ಹೇಳಿ ತಿರಸ್ಕರಿಸಬಹುದಿತ್ತು ಗೆಳೆಯರೊಂದಿಗೆ (?) ಕೂಡಿ ಕೊಲೆ ಮಾಡಿದ್ದನ್ನು

ನೆನಸಿಕೊಂಡರೆ ಅದೆಂತಹ ಹಿಂಸೆ. ಇಲ್ಲಿ ಪ್ರೀತಿ ಪ್ರೇಮಗಳ ವಾಖ್ಯಾನವಿಲ್ಲ. ಇದ್ದದ್ದು ಕೇವಲ ಕ್ರೌರ್ಯ. ಶುಭಳ

ಮುಖದ ಮೇಲೆ ಎಳ್ಳಷ್ಟು ಪಾಪ ಪ್ರಜ್ಞೆ, ಪಶ್ಚಾತಾಪ ಇಲ್ಲದನ್ನು ನೋಡಿದರೆ ಅಚ್ಚರಿ. ಬೇಡವಾದದ್ದನ್ನು

ತಿರಸ್ಕರಿಸುವಾಗ ಆಕೆ ತೋರಿದ ಕ್ರೂರತೆಯನ್ನು ವಿಶ್ಲೇಶಿಸುವುದಾದರೂ ಹೇಗೆ?

ಪ್ರೀತಿ - ಪ್ರೇಮಗಳ ವಿಷಯದಲ್ಲಿ ಮನುಷ್ಯನ ಮನಸ್ಸು ವಿಚಿತ್ರವಾಗಿ ವರ್ತಿಸುತ್ತದೆ ಎಂಬುದಕ್ಕೆ ಶುಭ

ಸಾಕ್ಷಿಯಾಗಿದ್ದಾಳೆ. ಗೆಲ್ಲಲು ಏನೇನೋ ತಂತ್ರ ಹೂಡುತ್ತಿದ್ದಾಳೆ. ನ್ಯಾಯ ಮೂರ್ತಿ ಶ್ರೀಧರರಾವ್ ಕೇಸನ್ನು

ನಡೆಸಲು ನಿರಾಕರಿಸಿದ್ದಾರೆ. ಮುದ್ದು ಮುಖದ ಶುಭಾಳ ಕ್ರೌರ್ಯಕ್ಕೆ ನ್ಯಾಯಾಲಯವೇ ಬೆಚ್ಚಿ ಬಿದ್ದಿದೆ.

ಸೌಂದರ್ಯ ಇರುವುದು, ಇರಬೇಕಾದುದು ದೇಹಕ್ಕೊ, ಮನಸ್ಸಿಗೋ ಎಂಬ ವ್ಯಾಖ್ಯಾನ ಈಕೆಯನ್ನು ನೋಡಿದರೆ

ಶುರು ಆಗುತ್ತದೆ.

ನ್ಯಾಯಾಲಯದಲ್ಲಿ ಗೆದ್ದು ಬರುವ ಈಕೆಯ ಹಟಕ್ಕೆ ನಿಯಂತ್ರಣವಿಲ್ಲದಂತಾಗಿದೆ. ಜೈಲಿನಲ್ಲಿ ವೈದ್ಯನೊಬ್ಬ

ಈಕೆಯನ್ನು ಕಂಡು ಬೆಚ್ಚಿ ಬಿದ್ದಿದ್ದಾನಂತೆ.

ಮುಖದ ಮೇಲೆ ನಗು, ದು:ಖ ಏನನ್ನೂ ತೋರಿಸದೇ, ಧೈರ್ಯದಿಂದ ಓಡಾಡುವ 'ಶುಭಾ' ಮನೋವಿಜ್ಞಾನಕ್ಕೆ

ಸವಾಲಾಗಿದ್ದಾಳೆ. ಈಕೆಯ ವರ್ತನೆಗೆ ಅರ್ಥ ಹುಡುಕಲು ಪ್ರಯತ್ನಿಸಿದಂತೆಲ್ಲ ವ್ಯಕ್ತಿತ್ವ ಅನಾವರಣಗೊಳ್ಳುತ್ತದೆ.

ಒಮ್ಮೊಮ್ಮೆ ಅಲ್ಲಿ ನಾವು, ನೀವು ಇದ್ದೇವೆ ಎಂಬಂತೆ ಭಾಸವಾಗಿ ಭಯವಾಗುತ್ತದೆ.

ಹೀಗೊಂದು ಸಿನೆಮಾ ಕತೆ

ಗದುಗಿನ ಉತ್ಸಾಹಿ ಯುವಕ ಅನಿಲ ಮೆಣಸಿನ ಕಾಯಿ ಅನೇಕ ಸಾಹಸಗಳನ್ನು ಪ್ರಯೋಗಿಸುತ್ತಾನೆ. ಹತ್ತಾರು

ವರ್ಷಗಳ ಪರಿಚಯದಲ್ಲಿ ಸಾಧ್ಯವಾದಷ್ಟು ಸಲಹೆ ನೀಡಿದ್ದೇವೆ ಎಂಬುದೊಂದು ನೆಪ.

ವೈಯಕ್ತಿಕ risk ಗಳೊಂದಿಗೆ ಏನನ್ನಾದರೂ ಸಾಧಿಸುವ ಅವನ ಸಾಹಸವನ್ನು ಬೆಂಬಲಿಸಬೇಕು ಎನಿಸುತ್ತದೆ.

ಈಗ ಅನಿಲ ಹೊಸ ಸಾಹಸಕ್ಕೆ ಕೈಹಾಕಿ ಸಿನೆಮಾ ನಿರ್ಮಿಸುತ್ತಿದ್ದಾನೆ. ಖ್ಯಾತ ಸಾಹಿತಿ - ಮಾಜಿ ಶಾಸಕ

ಮಹದೇವ ಬಣಕಾರ ಅವರ ಪುತ್ರ ಉಮೇಶ ಬಣಕಾರ ಸಹಯೋಗದೊಂದಿಗೆ ದಿನೇಶ್ ಬಾಬು ನಿರ್ದೇಶನದಲ್ಲಿ

'ಮತ್ತೊಂದ್ ಮದುವೇನಾ' ಚಿತ್ರವನ್ನು ತಯಾರಿಸುವ ಕಾರಣಕ್ಕೆ ಶೂಟಿಂಗ್ ನೋಡಲೆಂದೇ ಮೈಸೂರು ಪಯಣ.

ಅನಾರೋಗ್ಯದ ಮಧ್ಯೆ ಸುಧೀರ್ಘ ಪಯಣ ಅಸಮಂಜಸ ಆದರೂ ನೈತಿಕ ಬೆಂಬಲ ನೀಡಲು ಡಾ. ಜಿ.ಬಿ.

ಅವರೊಂದಿಗೆ ಒಲ್ಲದ ಪುಟ್ಟ ಯಾತ್ರೆ.

ಒಂದು ದಿನದ ಶೂಟಿಂಗ್ ವೀಕ್ಷಣೆ. ನೆಚ್ಚಿನ ನಟರಾದ ಅನಂತ್ ನಾಗ್. ಸುಹಾಸಿನಿ ಅವರ ಅಭಿನಯ ವೀಕ್ಷಿಸಿದ

ಖುಷಿ. ಅದೆಲ್ಲಕ್ಕಿಂತ ಮುಖ್ಯವಾಗಿ ಉತ್ತರ ಕರ್ನಾಟಕದ ಮೊಟೆ ಬೆನ್ನೂರ ಯುವಕ ಉಮೇಶ್ ಬಣಕಾರ

ಸಿನೆಮಾರಂಗ ಲೆಕ್ಕದಾಟದಲ್ಲಿ ಗೆದ್ದದ್ದು ಖುಷಿಯಾಯಿತು.

ರಂಗು ರಂಗಿನ ನಟಿಯರ ಓಡಾಟ, ದಿನೇಶ ಬಾಬು ಅವರ ಕ್ರಿಯಾಶೀಲತೆ, ಅನಂತ್ ನಾಗ್ ಅವರ ವಿಚಿತ್ರ

ಮೂಡ್, ಸುಹಾಸಿನಿಯ ದೊಡ್ಡ ನಗು, ಶರಣ್, ತಾರಾ, ಜೆನ್ನಿಫರ್, ಅವರ ಓಡಾಟ ಕಣ್ಣಿಗೆ ಹಬ್ಬದನುಭವ.

ಸಿನೆಮಾ ಒಂದು ವಿಚಿತ್ರ ಜಗತ್ತು, ಮೂರು ತಾಸಿನ ಬಂಧನಕ್ಕೆ ಸಾವಿರಾರು ತಾಸುಗಳ ಹೋರಾಟ. ಒಂದೊಂದು

ಶಾಟ್ ಗೆ ತಾಸುಗಟ್ಟಲೆ ಪರಿಶ್ರಮ. ಸಿನೆಮಾ ನೋಡುವಾಗ ತಯಾರಿಸಿದವರ ಪರಿಶ್ರಮ ಅರ್ಥವಾಗುವುದಿಲ್ಲ.

ಚನ್ನಾಗಿದೆ, ಚೆನ್ನಾಗಿಲ್ಲ ಎಂದು ಒಂದೇ ಮಾತಿನಲ್ಲಿ ತಿರಸ್ಕರಿಸುವ ಪ್ರೇಕ್ಷಕ ಪ್ರಭುವನ್ನು ಮೆಚ್ಚಿಸಲು ಅದೆಂತಹ

ಪರಿಶ್ರಮ. ಚಾನೆಲ್ ಹಾವಳಿಯಲ್ಲಿ ಸಿನೆಮಾ ಬಿದ್ದು ಹೋದರು ಸಿನೆಮಾಗಳು ಬಂದೇ ಬರುತ್ತವೆ. ಅಲ್ಲೊಂದು,

ಇಲ್ಲೊಂದು ಯಶಸ್ಸು ಗೆಳೆಯರು ನಿರ್ಮಿಸಿದ ಸಿನೆಮಾ ಯಶಸ್ಸಾಗುತ್ತೆ, ಯಶಸ್ಸಾಗಲೀ ಎಂದು ಹಾರೈಸಿ ಊರಿಗೆ

ಮರಳಿದೆ.

ಗಾನ ವಿದ್ಯಾ ಬಡೀ ಕಠಿಣ ಹೈ !

ಪರಮ ಪೂಜ್ಯ ಪಂಡಿತ ಪುಟ್ಟರಾಜ ಗವಾಯಿಗಳು ೯೭ರ ಪ್ರಾಯದಲ್ಲಿ ಲಿಂಗೈಕ್ಯರಾದ ಸಂದರ್ಭದಲ್ಲಿ ಅಂಧಕಲಾವಿದನೊಬ್ಬ ಮರದ ಕೆಳಗೆ ನಿಂತು ಅನಾಥವಾಗಿ ರೋಧಿಸುತ್ತಿದ್ದ. ಹೆತ್ತವರಿಗೆ ಬೇಡವಾದ, ಬಸ್ ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿದ್ದ ಕುರುಡ ಬಾಲಕನನ್ನು ವಿರೇಶ್ವರ ಪುಣ್ಯಾಶ್ರಮಕ್ಕೆ ಕರೆತಂದು ಸಾಕಿ, ಸಲುಹಿ, ಸಂಗೀತ ಅಭ್ಯಾಸ ನೀಡಿ ಬೆಳೆಸಿದರು. ಪರಿಣಾಮ ಈಗ ಈ ಕಲಾವಿದ ನಾಗಯ್ಯ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಾ ಸ್ವಾಭಿಮಾನಿ ಬದುಕು ಸಾಗಿಸುತ್ತಿದ್ದಾನೆ.
ಇಂತಹ ಸಾವಿರಾರು ಉದಾಹರಣೆಗಳನ್ನು ಡಾ. ಪಂ. ಪುಟ್ಟರಾಜ ಕವಿಗವಾಯಿಗಳು ನಮ್ಮೊಂದಿಗೆ ಬಿಟ್ಟು ಹೋಗಿದ್ದಾರೆ. ಭಕ್ತರ ಪಾಲಿನ ನಡೆದಾಡುವ ದೇವರೆಂದು, ಸಂಗೀತಗಾರರಿಗೆ ಉಭಯಗಾನ ವಿಶಾರದರೆಂದು ಖ್ಯಾತಿ ಪಡೆದಿದ್ದ ಡಾ. ಪುಟ್ಟರಾಜ ಕವಿ ಗವಾಯಿಗಳು ಮೂಲತಃ ಹಾನಗಲ್ ತಾಲೂಕಿನ ದೇವರ ಹೊಸಪೇಟೆಯವರು.

ಬಾಲ್ಯದಲ್ಲಿ ಆಕಸ್ಮಿಕವಾಗಿ ಕಣ್ಣುಕಳೆದುಕೊಂಡ ಪುಟ್ಟಯ್ಯ ಅಂಧ ಅನಾಥರ ಕುಬೇರರೆನಿಸಿಕೊಂಡಿದ್ದ ಪಂಚಾಕ್ಷರಿ ಗವಾಗಳವರ ಕೃಪೆಗೆ ಪಾತ್ರರಾದರು. ಸಮರ್ಥ ಗುರುಗಳ ಸಾಧಕ ಶಿಷ್ಯರಾಗಿ ಸಂಗೀತ ಅಭ್ಯಾಸ ಮಾಡಿದರು.
ಬಾಹ್ಯದ ನೋಟವಿರದಿದ್ದರು ಅಂತರಂಗದ ಕಣ್ಣನ್ನು ಸದಾ ಜಾಗೃತವಾಗಿಟ್ಟುಕೊಂಡು ಸಂಗೀತಾಭ್ಯಾಸ ಮಾಡಿ ಸಾಧಕರಾದರು. ಬಸರಿಗಿಡದ ವಿರಪ್ಪನವರು ದಾನ ಮಾಡಿದ ಗದುಗಿನ ಜಾಗೆಯಲ್ಲಿ ವಿರೇಶ್ವರ ಪುಣ್ಯಾಶ್ರಮ ತಲೆ ಎತ್ತಿ ನಿಂತಿತ್ತು. ನೂರಾರು ಅಂಧ ಅನಾಥ ವಿಕಲಚೇತನ ಮಕ್ಕಳಿಗೆ ಪಂಚಾಕ್ಷರಿ ಗವಾಗಳು ಸಂಗೀತಾಭ್ಯಾಸ ನೀಡುತ್ತಿದ್ದರು. ಅಂಧತ್ವದ ಶಾಪವನ್ನು ಗ್ರಹಿಸಿದ್ದ ಗವಾಗಳು ಅವರಿಗೆ ಸ್ವತಂತ್ರವಾಗಿ ಬದುಕುಸಾಗಿಸಲು ಆತ್ಮ ವಿಶ್ವಾಸ ತುಂಬುವುದಲ್ಲದೆ ಜೀವನೋಪಾಯಕ್ಕಾಗಿ ಸಂಗೀತ ಹಾಗೂ ಪ್ರವಚನ, ಪುರಾಣ ಕಲೆಯನ್ನು ಕಲಿಸುತ್ತಿದ್ದರು. ಆಳವಾಗಿ ಅಧ್ಯಯನ ಮಾಡಿ ಸಾಧನೆಗೈದವರು ಶ್ರೇಷ್ಠ ಗಾಯಕರಾಗಿ ಹೊರಹೊಮ್ಮಿದ್ದಾರೆ, ಸಾಧಾರಣ ಪ್ರತಿಭೆ ಹೊಂದಿದವರು ಹೇಗೋ ಜೀವನ ನಡೆಸಲು ಗುರುಗಳು ಕೃಪೆ ತೋರಿದರು. ಈ ಕ್ರಿಯೆ ೨೦ನೆಯ ಶತಮಾನದ ಪವಾಡವೇ ಸರಿ.
ಅಪಾರ ಶೃದ್ಧೆ, ಸತತ ಪರಿಶ್ರಮ, ಗುರು ಭಕ್ತಿ ಹಾಗೂ ಇಷ್ಟಲಿಂಗ ಪೂಜಯನ್ನು ತಪಸ್ಸೆಂದು ಭಾವಿಸಿದ ಪುಟ್ಟರಾಜ ಗವಾಗಳು ಪಂಚಾಕ್ಷರ ಗವಾಗಳ ಮನ ಗೆದ್ದರು. ತಮ್ಮ ಉತ್ತರಾಧಿಕಾರಿಯನ್ನಾಗಿ ವಿರೇಶ್ವರ ಪುಣ್ಯಾಶ್ರಮದ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ ಪುಟ್ಟರಾಜರಿಗೆ ಇದೆ ಎಂದು ಅರಿತ ಗುರುಗಳು ಅಂಧ ಅನಾಥರ ಬಾಳಿಗೆ ಬೆಳಕು ನೀಡುವ ಹೊಣೆಯನ್ನು ಪುಟ್ಟಯ್ಯಜ್ಜ ಅವರ ಹೆಗಲಿಗೆ ಹೊರಿಸಿದರು.
೧೯೪೪ ರ ಜೂನ ೧೧ ರಿಂದ ವಿರೇಶ್ವರ ಪುಣ್ಯಾಶ್ರiದ ಜವಾಬ್ದಾರಿ ಹೊತ್ತ ಪುಟ್ಟಯ್ಯಜ್ಜ ಅವರು ಪುಟ್ಟ'ರಾಜ'ರಾಗಿ ಮೆರೆದರು. ನಿರಂತರ ೬೬ ವರ್ಷಗಳ ಕಾಲ ಲಕ್ಷಾಂತರ ಅಂಧರ ಬಾಳಿಗೆ ಬೆಳಕು ನೀಡಿದರು.
ಸಂಗೀತ ಎಲ್ಲರಿಗೂ ಒಲಿಯುವುದಿಲ್ಲ. ನಿರಂತರ ಸಾಧನೆಯ ಮೂಲಕ ಒಲಿಸಿಕೊಳ್ಳಬೇಕು. ಹಾಗೆ ಒಲಿಸಿಕೊಂಡವರು ವೈಯುಕ್ತಿಕ ಕೀರ್ತಿ, ಹಣ ಸಂಪಾದಿಸುತ್ತಾರೆ. ಆದರೆ ಪುಟ್ಟರಾಜರಿಗೆ ವೈಯುಕ್ತಿಕ ಕೀರ್ತಿ ಹಾಗೂ ಹಣ ಬೇಕಾಗಿರಲಿಲ್ಲ ತಮ್ಮಂತೆ ಅಸಹಾಯಕ ಸ್ಥಿತಿಯಲ್ಲಿರುವ ಲಕ್ಷಾಂತರ ವಿಕಲಚೇತನರಿಗೆ ತಾವು ಸಂಪಾದಿಸಿದ ವಿದ್ಯೆಯನ್ನು ಧಾರೆ ಎರೆಯಲಾರಂಬಿಸಿದರು. ಇಷ್ಟನ್ನೇ ಸಾಧಿಸಿದ್ದರೆ ಗವಾಗಳು ಒಬ್ಬ ಶ್ರೇಷ್ಠ ಸಂಗೀತ ಗುರುಗಳಾಗುತ್ತಿದ್ದರು. ಆದರೆ ಲಿಂಗ ಪೂಜಾ ನಿಷ್ಠೆಂದ ವಿಶೇಷ ಆಧ್ಯಾತ್ಮಿಕ ಶಕ್ತಿಯನ್ನು ಮೈಗೂಡಿಸಿಕೊಂಡರು. ಲಿಂಗಾಯತ ಧರ್ಮದ ಏಕತೆ ಸಾರುವ, ಕರಸ್ಥಲಕೆ ಬಂದು ಚುಳುಕಾದ ಇಷ್ಟಲಿಂಗದ ಶಕ್ತಿಯನ್ನು ಅರಿತುಕೊಂಡು, ಲಿಂಗಪೂಜೆ ಮಾಡುತ್ತಾ ಕಠಿಣ ವೃತ ನಿಯಮಗಳನ್ನು ಎಂತಹ ಸಂದರ್ಭದಲ್ಲಯೂ ಪಾಲಿಸಿಕೊಂಡು ಸ್ವತಃ ದೇವರಾದರು.
ಒಂದು ಅದ್ದೂರಿ ಸಮಾರಂಭದಲ್ಲಿ ಡಾ. ಪಂ. ಪುಟ್ಟರಾಜ ಗವಾಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದ ಮಠಾಧೀಶರೊಬ್ಬರು ಪಕ್ಕದಲ್ಲಿ ಕುಳಿತಿದ್ದ ನನ್ನನ್ನು ಪ್ರಶ್ನಿಸಿದರು. 'ಅಲ್ಲಾ ಸಾರ್ ಪುಟ್ಟರಾಜರು ಸರ್ವಸಂಗ ಪರಿತ್ಯಾಗಿಗಳು, ಸಾಧಕರು ಆದರೆ ಮೈತುಂಬ ಬಂಗಾರ, ಕೈತುಂಬ ಚಿನ್ನದ ಉಂಗುರಗಳನ್ನು ಧರಿಸಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ.' ಎಂದರು. ನಾನು ನಕ್ಕು ಸುಮ್ಮನಾದೆ. ಪುಟ್ಟರಾಜರ ನಿರ್ಲಿಪ್ತತೆಯನ್ನು , ಮುಗ್ಧತೆಯನ್ನು ಅರಿಯದ ಸ್ವಾಮಿಗಳ ಬಗ್ಗೆ ವಿಷಾದವೆನಿಸಿತು.
ಪುಟ್ಟ ಮಗುವನ್ನು ತಾಯಿ ಸಿಂಗರಿಸುತ್ತಾಳೆ. ಶುಭ್ರವಾಗಿ ಸ್ನಾನ ಮಾಡಿಸಿ ಸುಂಧರ ಬಟ್ಟೆಗಳನ್ನು ಹಾಕಿ ಬೆಲೆಬಾಳುವ ಬಂಗಾರದೊಡವೆಗಳನ್ನು ತೊಡಿಸುತ್ತಾಳೆ ಆದರೆ ಅದನ್ನೆಲ್ಲ ಧರಿಸಿದ ಮಗುವಿಗೆ ಸಿಂಗಾರ ಬಂಗಾರ ಬೇಕಾಗಿರುವದಿಲ್ಲ. ತಾ ಸಂಭ್ರಮಿಸಿದಾಗ ಮಗು ಮುಗ್ಧವಾಗಿ ನಗುತ್ತದೆ ಅಷ್ಟೇ!.
ಆ ಮಗುವಿನ ಮುಗ್ಧನಗುವಿನ ಸಾರ್ಥ್ಯಕ್ಯವನ್ನು ನಾನು ಡಾ. ಪಂ ಪುಟ್ಟರಾಜ ಗವಾಗಳ ವ್ಯಕ್ತಿತ್ವದಲ್ಲಿ ಕಂಡೆ, ಆ ಎಲ್ಲ ಅಲಂಕೃತ ಆಭರಣಗಳು ಪುಟ್ಟರಾಜರಿಗೆ ಬೇಕಿಲ್ಲ. ಅದನ್ನು ಕಂಡು ಸಂಭ್ರಮಿಸುವ ಭಕ್ತರಿಗೆ ಬೇಕು ಎಂದು ಆ ಸ್ವಾಮಿಗಳಿಗೆ ಉತ್ತರಿಸಿದೆ. ವ್ಯಕ್ತಿಯ ವ್ಯಕ್ತಿತ್ವದ ಆಳವನ್ನು ಅರಿಯುವ ವಿಶಾಲತೆ ಬೇಕು. ಮೇಲೆ ಗೋಚರಿಸುವ ಸಂಗತಿಗಳ ಮೂಲಕ ವ್ಯಕ್ತಿಗಳನ್ನು ಅಳೆಯುವದು ಅಸಾಧ್ಯ ಎಂಬುವದಕ್ಕೆ ಪುಟ್ಟರಾಜರೆ ಸಾಕ್ಷಿಯಾದರು.
ಬಂಗಾರ, ಉಡುಗೆ, ಊಟದ ವಿಷಯಗಳಲ್ಲಿ ಪುಟ್ಟರಾಜರು ಎಂದು ವ್ಯಾಮೋಹಿಗಳಾಗಿರಲಿಲ್ಲ. ಭಕ್ತರ ಸಂತಸದಲ್ಲಿ ಆತ್ಮ ತೃಪ್ತಿಯನ್ನು ಕಾಣುತ್ತಿದ್ದರು. 'ನಾನು ಮೊದಲೆ ಹೇಳಿ ಕೇಳಿ ಪುಟ್ಟಯ್ಯ, ಸಣ್ಣಾಂವ ಎನ್ನುತ್ತಲೇ ತಮ್ಮ ಮೊನಚು ಶೈಲಿಯ ಮಾತುಗಳನ್ನು ಆರಂಬಿಸಿ ಕೇಳುಗರ ಗಮನ ಸೆಳೆಯುತ್ತಿದ್ದರು.
ಹಿಂದಿ, ಸಂಸ್ಕೃತ ಹಾಗೂ ಕನ್ನಡ ಭಾಷೆಗಳಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಅವರು ಆರು ತಾಸುಗಳ ಧ್ಯಾನ ಪೂಜೆಗಳಲ್ಲಿ ಸಂಗೀತದ ಗಾನ ಲಹರಿಯನ್ನು ಆಸ್ವಾದಿಸುತ್ತ ಕ್ರಿಯಾ ಶೀಲ ಕೃತಿಗಳಿಗೆ ರೂಪನೀಡುತ್ತಿದ್ದರು. ಬ್ರೈಲ್ ಲಿಪಿಯನ್ನು ಅಧ್ಯಯನಕ್ಕಾಗಿ ಬಳಸಿಕೊಳ್ಳುವದಲ್ಲದೆ ಶಿಷ್ಯರಿಗೆ ವಿವರಿಸಿ ಅನೇಕ ಕೃತಿಗಳಿಗೆ ಜೀವ ತುಂಬಿದರು. ಹಿಂದಿಯಲ್ಲಿ 'ಬಸವ ಪುರಾಣ' ಬರೆದು ಅದನ್ನು ಅಂದಿನ ರಾಷ್ಟ್ರಪತಿ ಡಾ. ಬಾಬು ರಾಜೇಂದ್ರ ಪ್ರಸಾದ ಅವರಿಗೆ ಅರ್ಪಿಸಿ, ತನ್ಮೂಲಕ ಬಸವ ತತ್ವದ ಜ್ಯಾತ್ಯಾತೀತ ಮೌಲ್ಯಗಳಿಗೆ ರಾಷ್ಟ್ರವ್ಯಾಪಿ ಮನ್ನಣೆಯನ್ನು ದೊರಕಿಸಿಕೊಟ್ಟರು.
ಸಂಗೀತ ಸಾಹಿತ್ಯ ಹಾಗೂ ಆದ್ಯಾತ್ಮದಲ್ಲಿ ಅವರು ತೋರಿದ ಶ್ರದ್ಧೆ ಅನನ್ಯವಾದುದು. ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ಯಾವುದಾದರು ಒಂದು ಕ್ಷೇತ್ರದಲ್ಲಿ ಯಶ ಸಾಧಿಸಬಹುದು ಎಂಬ ತಾರ್ಕಿಕ ಲೆಕ್ಕಾಚಾರವನ್ನು ಅಲ್ಲಗಳೆದು ಎಲ್ಲ ಕ್ಷೇತ್ರಗಳಲ್ಲಿ ಹಿಡಿತ ಸಾಧಿಸಿದರು.
ಸಂಗೀತದ ಎಲ್ಲ ವಾದ್ಯಗಳನ್ನು ಏಕಕಾಲಕ್ಕೆ ನುಡಿಸಿ ಕೇಳುಗರನ್ನು ಬೆರಗುಗೊಳಿಸುತ್ತಿದ್ದರು. ನವ ರಸಗಳನ್ನು ಮೇಳೈಸಿ ಪ್ರವಚನ ನೀಡುತ್ತಾ ಸಂಗೀತ ವಾದ್ಯಗಳನ್ನು ಪ್ರಸಂಗಕ್ಕೆ ತಕ್ಕಂತೆ ಬಳಸಿ ಪ್ರವಚನದ ಮೆರುಗನ್ನು ಹೆಚ್ಚಿಸುತ್ತಿದ್ದರು. ಹಿಂದೂಸ್ತಾನಿ ಹಾಗೂ ಕರ್ನಾಟಕಿ ಸಮಗೀತದಲ್ಲಿ ಪ್ರಭುತ್ವ ಸಾಧಿಸಿದ ಏಕಮೇವ ದಿಗ್ಗಜರೆನಿಸಿಕೊಂಡರು. ಕಿಂಚಿತ್ತು ಅಹಃ ಇಲ್ಲದೆ ಎನಗಿಂತ ಕಿರಿಯರಿಲ್ಲ ಎಂಬ ಕಿಂಕರತ್ವ ಅವರ ವ್ಯಕ್ತಿತ್ವವನ್ನು ಮುಗಿಲೆತ್ತರಕ್ಕೆ ಎರಿಸಿತು.
ಅವರೆಂದೂ ಪ್ರಚಾರ ಬಯಸಲಿಲ್ಲ. ನೆಲದ ಮರೆಯ ನಿಧಾನದಂತೆ ಸದ್ದಿಲ್ಲದೆ ಶಿಷ್ಯ ಪ್ರಶಿಷ್ಯರನ್ನು ನಾಡಿಗೆ ಪರಿಚುಸಿದರು. ಗುರು ಶಿಷ್ಯ ಪರಂಪರೆಯನ್ನು ಸಂಗೀತ ಕ್ಷೇತ್ರದಲ್ಲಿ ಜೀವಂತವಾಗಿಟ್ಟರು. ಪ್ರತಿ ಸಂಗೀತ ಕಾರ್ಯಕ್ರಮಗಳಲ್ಲಿಯೂ ಅವರ ಶಿಷ್ಯರು ತಾವು ಪುಟ್ಟರಾಜ ಗವಾಗಳ ಶಿಷ್ಯರೆಂದು ಹೆಮ್ಮೆಂದ ಹೇಳಿಕೊಳ್ಳುತ್ತಾರೆ. ಹಾಗೆ ಪರಿಚುಸಿಕೊಳ್ಳುವುದು ಅವರಿಗೆ ಅಭಿಮಾನದ ಸಂಗತಿ.
ಕಳೆದ ದಶಕದಿಂದ ಅವರ ವೈಯುಕ್ತಿಕ ಸಂಪರ್ಕ ಬಂದು ಅವರ ಆಗಾಧ ವ್ಯಕ್ತಿತ್ವವನ್ನು ಹತ್ತಿರದಿಮದ ಅರಿಯಲು ಸಾಧ್ಯವಾತು. ಈ ವಿಚಿತ್ರ ಪ್ರಪಂಚದಲ್ಲಿ ಯಾರ್‍ಯಾರೋ ಪ್ರಚಾರಕ್ಕೆ ಬರುತ್ತಾರೆ. ಅನಗತ್ಯ ಕೀರ್ತಿ ಸ್ಥಾನಮಾನ ಸಂಪಾದಿಸುತ್ತಾರೆ. ಅವರು ಈ ರೀತಿ ಗಳಿಸುವ ಕೀರ್ತಿಯಲ್ಲಿ ಸಾಧನೆಗಿಂತ ವ್ಯವಸ್ಥಿತ ಪಿತೂರಿ ಇರುತ್ತದೆ ಎಂದರಿತು ಈ ಕುರಿತು ಒಮ್ಮೆ ಅವರಿಗೆ ಕೇಳಿದೆ. ಗುರುಗಳೆ ಈ ರೀತಿಯ ಖೊಟ್ಟಿ ಸಾಧಕರನ್ನು ನೋಡಿದರೆ ನಿಮಗೇನೆನಿಸುತ್ತದೆ. ಆಗ ಅವರು ನಾನ್ಯಾಕೆ ಅವರನ್ನು ಖೊಟ್ಟಿ ಅನ್ನಲಿ, ಅವರನ್ಯಾಕೆ ನಾನು ನೋಡಲಿ ಎಲ್ಲವನ್ನು ಗುರು ಕುಮಾರೇಶ, ಸಿದ್ಧಲಿಂಗ ಯತಿಗಳು ನೋಡುತ್ತಾರೆ. ನಮ್ಮ ಸಾಧನೆಯನ್ನು ಅವರು ನೋಡಿದರೆ ಸಾಕು. ಈ ಪ್ರಶಸ್ತಿಗಳು ತಮ್ಮ ಕಿಮ್ಮತ್ತು ಹೆಚ್ಚಿಸಿಕೊಳ್ಳಾಕ ಬರ್‍ತಿದ್ರ ಬರ್‍ಲಿ ಇಲ್ಲಂದ್ರ ಬ್ಯಾಡ. ಎಂದಾಗ ದಂಗಾಗಿ ಹೋದರೆ
ಅವರ ದರ್ಶನಕ್ಕೆ ಬರುತ್ತಿದ್ದ ಅಸಂಖ್ಯ ಭಕ್ತರು ಗವಾಯಿಗಳಿಗೆ ಅನೇಕ ಪ್ರಶಸ್ತಿಗಳು ಬರಲಿ ಎಮದು ಬಯಸುವದರಲ್ಲಿ ತಪ್ಪಿರಲಿಲ್ಲ. ಆದರೆ ಈ ವ್ಯವಸ್ಥೆಯಲ್ಲಿ ಅವುಗಳನ್ನು ಹೇಗೆ ತಪ್ಪಿಸಬೇಕು ಎಂಬ ಲೆಕ್ಕಾಚಾರವಂತೂ ಇರುತ್ತಿತ್ತು.
ಸಂಗೀತ - ಸಾಹಿತ್ಯ ಬಲ್ಲವರು ಅವರನ್ನು ಮಠಾಧೀಶರೆಂದು ಪೂಜ್ಯರೆಂದು ಗೌರವಿಸುತ್ತಲೇ ಅವರ ಹತ್ತಿರ ಪ್ರಶಸ್ತಿಗಳು ಸುಳಿಯದಂತೆ ಜಾಣ ಭಕ್ತಿಯನ್ನು ತೋರಿದರು. ಇನ್ನು ಮಠಾಧೀಶರಾದರೂ ಅವರನ್ನು ಒಪ್ಪಿಕೊಂಡಿದ್ದರೆ ಖುಷಿ ಎನಿಸುತ್ತಿತ್ತು. ಅವರೊಬ್ಬ ಗವಾಯಿ, ಸಂಗೀತ ಸಾಧಕ ಅಷ್ಟೇ. ಅವರು ಹೇಗೆ ಮಠಾಧೀಶರಾಗಲು ಸಾಧ್ಯ ಎಂದು ಲೆಕ್ಕಹಾಕುತ್ತಾ ಪುಟ್ಟರಾಜರನ್ನು ಹತ್ತಿಕ್ಕಲು ನೋಡಿದರು ಆದರೆ ತಮ್ಮ ಪ್ರತಿಭಾ ಸಂಪನ್ನತೆಂದ ಪುಟ್ಟರಾಜರು ಎಲ್ಲವನ್ನು ಹಿಮ್ಮೆಟ್ಟಿಸಿದರು.
ಹಾಗೆ ನಿಧಾನವಾಗಿ ಡಾ. ಪುಟ್ಟರಾಜರು ತಮ್ಮಷ್ಟಕ್ಕೆ ತಾವೆ ಗಟ್ಟಿಯಾಗಿ ಬೇರು ಬಿಡುತ್ತಾ ಬಾನೆತ್ತರಕ್ಕೆ ಬೆಳೆದರು. ಅವರನ್ನು ಅಲುಗಾಡಿಸಲು ಬಂದವರು ಹಾಗೆಯೇ ಹಿಂದಿರುಗಿದರು. ಅದೇ ಗವಾಯಿಗಳ ಶಕ್ತಿ! ಧೀ ಶಕ್ತಿ!.
ಅವರು ಹಿಂದಿ, ಸಂಸ್ಕೃತ, ಕನ್ನಡ ಭಾಷೆಗಳಲ್ಲಿ ಬರೆದ ಕೃತಿಗಳ ಚರ್ಚೆ ಆಗಲೇ ಇಲ್ಲ. ಯಾಕೆಂದರೆ ಆಧುನಿಕ ಸಾಹಿತ್ಯದ ಮೇಧಾವಿಗಳಿಗೆ ಡಾ. ಪುಟ್ಟರಾಜ ಗವಾಯಿಗಳು ಕೇವಲ ಸಂಗೀತ ಸಾಧಕರೆಂದೆ ಕಂಡರು. ಅವರ ವಚನಗಳನ್ನು ಅವರ ಶಿಷ್ಯಂದಿರು ಹಾಡಿ ಅವುಗಳ ಸತ್ವ ವನ್ನು ಸಾರಿದರು. ಅವರ ಭಾಷಾ ಜ್ಞಾನದ ಮೇಲೆ ಬೆಳಕು ಚೆಲ್ಲುವ ಕ್ರಿಯೆ ಆರಂಭವಾಗಲೇ ಇಲ್ಲ. ಬರುಬರುತ್ತ ಅವರು ಒಬ್ಬ ಲಿವಿಂಗ್ ಲೆಜೆಂಡ್ ಎನಿಸಿಕೊಂಡರು. ಸಾವಿರಾರು ತುಲಾಭಾರಗಳ ಮೂಲಕ ಆಶ್ರಮದ ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ೨೨೭೧ ತುಲಾಭಾರ ಕಾರ್ಯಕ್ರಮಗಳ ಮೂಲಕ ಸಂಗ್ರಹವಾದ ನಿಧಿಯನ್ನು ನಿರಂತರ ದಾಸೋಹಕ್ಕಾಗಿ ಬಳಸಿಕೊಂಡರು. ಡಾ. ಪುಟ್ಟರಾಜರು ಜನಸಾಮಾನ್ಯರಿಗೆ ಹತ್ತಿರವಾಗಲು ತುಲಾಭಾರಗಳು ಕಾರಣವಾದವು. ಈ ಪುಟ್ಟಯ್ಯನ ಜೋಳಿಗೆಗೆ ನಿಮ್ಮ ಅಂಧ ಅನಾಥ ಮಕ್ಕಳನ್ನು ಹಾಕ್ರಿ ಎಂದು ಭಾವುಕರಾಗಿ ನುಡಿಯುತ್ತಿದ್ದರು.
'ಶರಣರ ಮಹಿಮೆಯನ್ನು ಮರನದಲ್ಲಿ ನೋಡು' ಎಂಬ ಮಾತನ್ನು ಡಾ. ಪುಟ್ಟರಾಜ ಗವಾಗಳು ಸಾಬೀತು ಪಡಿಸಿದರು. ಈ ತಿಂಗಳ ೧೩ ರಂದು ಪುಟ್ಟರಾಜರು ನಮ್ಮನ್ನು ಅಗಲಿದ್ದಾರೆ ಎಂಬ ಹುಸಿ ಸಂದೇಶಗಳನ್ನು ಭಕ್ತರನ್ನು ತಲ್ಲಗೊಳಿಸಿದವು. ಬೆಳಗಾವಿಯಲ್ಲಿ ವೈದ್ಯಕೀಯ ಚಿಕಿತ್ಸೆ ಫಲಿಸದೇ ಅವರನ್ನು ಗದುಗಿಗೆ ಕರೆ ತರುವ ವ್ಯವಸ್ಥೆಯಾಗಿತ್ತು. ಅವರ ವಿಷಮ ಸ್ಥಿತಿ ಅರಿತ ವೈದ್ಯರು ಅವರು
ಗದಗ ತಲುಪುವದರೊಳಗೆ ಇಲ್ಲವಾಗುತ್ತಾರೆ ಎಂಬ ಸಂದೇಶವನ್ನು ಸರಕಾರಕ್ಕೆ ರವಾನಿಸಿದ್ದರು. ಆ ಮನೋಭಾವ ಇಟ್ಟುಕೊಂಡೇ ಜಿಲ್ಲಾಡಳಿತ ಸ್ಟೇಡಿಯಂ ನಲ್ಲಿ ಎಲ್ಲ ತಯಾರಿ ಮಾಡಿತ್ತು. ಆದರೆ ಆಶ್ರಮಕ್ಕೆ ಕಾಲಿಟ್ಟ ಕೂಡಲೇ ಪುಟ್ಟರಾಜ ಗವಾಗಳು ಚೇತರಿಸಿಕೊಂಡು ವೈದ್ಯರಿಗೆ ಅಚ್ಚರಿ ಮೂಡಿಸಿದರು. ಪ್ರತಿದಿನ ಹಗಲು ರಾತ್ರಿ ಭಕ್ತರು ಪೂಜ್ಯರ ದರ್ಶನ ಮಾಡಿದರು.
ಐದು ದಿನಗಳ ಕಾಲ ಭಕ್ತರಿಗೆ ಮುಕ್ತ ದರ್ಶನ ನೀಡುವ ಇಚ್ಚಾ ಶಕ್ತಿ ಅವರಲ್ಲಿತ್ತೆಂದು ತೋರುತ್ತದೆ. ಆಸ್ಪತ್ರೆ ಯಲ್ಲಿ ದೇಹತ್ಯಾಗ ಮಾಡುವ ಮನಸ್ಸಿಲ್ಲದೆ ತಾವು ಕಟ್ಟಿ ಬೆಳೆಸಿದ ಆಶ್ರಮದಲ್ಲಿ ನಿಶ್ಚಿಂತೆಯಿಂದ ದೇಹ ಬಿಟ್ಟರು. ಅಂದು ಎಂಟು ಲಕ್ಷ ಜನ ಅಂತ್ಯ ಯಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜಕಾರಣಿಗಳು ಜನರನ್ನು ಕಂಡು ಬೆರಗಾದರು. ಕರ್ನಾಟಕದ ಇತಿಹಾಸದಲ್ಲಿ ಇಷ್ಟೊಂದು ಜನ ಸೇರಿದ ಉದಾಹರಣೆಗಳಿಲ್ಲವಂತೆ. ಯಾವುದೆ ರೀತಿಯ ಗಲಾಟೆ ಇಲ್ಲದೆ ಭಕ್ತರು ನೆರದಿದ್ದ ಜನರಿಗೆ ಊಟ ಹಾಗೂ ನೀರಿನ ವ್ಯವಸ್ಥೆ ಕಲ್ಪಿಸಿದರು. ದಾನಿಗಳ ಈ ಸ್ವಯಂ ಪ್ರೇರಿತ ಸೇವೆಯಲ್ಲಿ ಗವಾಗಳ ಸಾಧನೆ ಇದೆ, ಆಧುನಿಕ ಪವಾಡವಿದೆ. ಲಕ್ಷ ದುಡಿದವರು ಐವತ್ತು ಸಾವಿರ ರೂಪಾ ಖರ್ಚು ಮಾಡಿದರೆ ಹತ್ತು ರೂಪಾ ದುಡಿದವರು ಐದು ರೂಪಾ ಖರ್ಚು ಮಾಡಿ ತಮ್ಮ ಭಕ್ತಿ ಮೆರೆದರು. ಒಂದು ರೂಪಾಯಿಗೆ ಜಗಳವಾಡುವ ಆಟೋದವರು ಪುಕ್ಕಟೆಯಾಗಿ ಜನರನ್ನು ಕರೆತಂದರು. ಹಣಕೊಟ್ಟರೂ ಸೇರದ ಜನ ಅಪಾರ ಸಂಖ್ಯೆಯಲ್ಲಿ ನೆರೆದು ರಾಜಕಾರಣಿಗಳನ್ನು ಬೆಚ್ಚಿಬಿಳಿಸಿದರು.
ಇಂತಹದೆ ಒಂದು ಘಟನೆ ೨೦೦೮ ರ ಚುನಾವಣೆಯಲ್ಲಿ ನಡೆದಿತ್ತು. ಒಂದು ಖಾಸಗಿ ಕಾರ್ಯಕ್ರಮದಲ್ಲಿ ಗವಾಯಿಗಳು ಈ ಬಾರಿಯ ಚುನಾವಣೆಯಲ್ಲಿ ಬಿ.ಜೆ.ಪಿ. ಗೆಲ್ಲುತ್ತದೆ ಎಂಬ ಅರ್ಥದಲ್ಲಿ ನುಡಿದದ್ದು ಕಾಂಗ್ರೆಸ್ಸಿಗರನ್ನು ಆತಂಕಕ್ಕೆ ಈಡು ಮಾಡಿತ್ತು. ಅದು ಹೇಗೊ ಸ್ಥಾನಿಕ ಪತ್ರಿಕೆಯಲ್ಲಿ ಪ್ರಕಟವಾಯಿತು. ಅವರ ಅನಿರೀಕ್ಷಿತ ಹೇಳಿಕೆಯ ಲಾಭವನ್ನು ಪಡೆಯಲು ರಾಜಕಾರಣಿಗಳು ಹೆಣಗಾಡಿದರು. ಗಾಬರಿಗೆ ಬಿದ್ದ ಭಕ್ತರು ಬಿ.ಜೆ.ಪಿ.ಗೆ ಓಟು ಹಾಕುವ ಮನಸ್ಸಿತ್ತೊ ಇಲ್ಲವೋ ಗವಾಯಿಗಳ ವಾಣಿ ಸುಳ್ಳಾಗಬಾರದು, ಅವರ ವ್ಯಕ್ತಿತ್ವಕ್ಕೆ ಧಕ್ಕೆ ಬರಬಾರದೆಂದು ಪತ್ರಿಕೆಯ ಝರಾಕ್ಸ ಪ್ರತಿ ಇಟ್ಟುಕೊಂಡು ಓಡಾಡಿ ಬಿ.ಜೆ.ಪಿ.ಯನ್ನು ಗೆಲ್ಲಿಸಿದರು. ಇದು ಮುಗ್ಧ ಭಕ್ತರ ಗೆಲುವಾದರೆ ರಾಜಕಾರಣಿಗಳು ತಮ್ಮ ಗೆಲುವು ಎಂದು ಸಂಭ್ರಮಿಸಿದರು.
ಕಳೆದ ಒಂದು ದಶಕದಿಂದ ಮಾಧಮದವರು ಗವಾಯಿಗಳ ವ್ಯಕ್ತಿತ್ವವನ್ನು ಸಮಾಜಕ್ಕೆ ಪ್ರತಿಬಿಂಬಿಸಿದರು ಆದರೆ ಕಾಲ ಮಿಂಚಿತ್ತು. ಅವರಿಗೆ ಸಿಗಬೇಕಾದ ಮಾನ ಸಮ್ಮಾನ ಸಿಗಲಿಲ್ಲ ಎಂಬ ವಿಷಾದ ಹಾಗೆಯೇ ಉಳಿತು.
ಕರ್ನಾಟಕ ರತ್ನ ನೀಡಲು ಸರಕಾರಕ್ಕೆ ಇದ್ದ ತೊಂದರೆ ಏನು ಎಂಬುದಕ್ಕೆ ಯಾರು ಉತ್ತರಿಸಬೇಕು?. ಇದೀಗ ಎಚ್ಚೆತ್ತ ಸರಕಾರ ಅವರ ಸ್ಮಾರಕಕ್ಕೆ ಐದು ಕೋಟಿ ರೂಪಾಯಿ ಬಿಡುಗಡೆಯನ್ನು ಘೋಸಿದೆ. 'ಭಾರತ ರತ್ನ'ದ ಮಾತನ್ನು ಆಡಿದೆ. ಆದರೆ ಅದಕ್ಕೆ ಮುಂಚೆ 'ಕರ್ನಾಟಕ ರತ್ನ' ನೀಡಲಿ.
ಅವರ ಎಪ್ಪತ್ತಕ್ಕೂ ಹೆಚ್ಚು ಕೃತಿಗಳು ಪುನರ್ ಮುದ್ರಣಗೊಳ್ಳುವ ವ್ಯವಸ್ಥೆ ಕಲ್ಪಿಸಿ ಸಾಹಿತ್ಯ ಚರ್ಚೆಗೆ ಅಕಾಡೆಮಿ ಮೂಲಕ ವೇದಿಕೆ ರೂಪಿಸಲಿ. ಕೇವಲ ಭಾವುಕ ಭಕ್ತರಿಂದ ಇತಿಹಾಸ ನಿರ್ಮಾಣವಾಗುವದಿಲ್ಲ. ಎಂಬ ಸತ್ಯ ಎಲ್ಲರಿಗೆ ಗೊತ್ತಿಲ್ಲವೆ? ಮತ್ತೆ ಹುಟ್ಟಿ ಬಾ ಪುಟ್ಟಯ್ಯ ಎಂಬ ಭಕ್ತರ ಅಂಧ ಅನಾಥರ ಕೂಗು ಕಿವಿ ಇದ್ದವರಿಗೆ ಕೇಳಿಸಲಿ ಎಂದು ಆಶಿಸುತ್ತೇನೆ.

Thursday, September 16, 2010

ನಿನ್ನೊಂದಿಗೆ ಸದಾ

ಸಣ್ಣಗೆ ರಿಂಗಣವಾಡಿದ ಸೆಲ್, ಅದರಲ್ಲಿ ಮೂಡಿಬಂದ ನಿನ್ನ photo ಮತ್ತೊಮ್ಮೆ ಇತಿಹಾಸವನ್ನು ನೆನಪಿಸಿತು.

ನಿನ್ನೊಂದಿಗಿನ ಬಂಧನವನ್ನು ಇತಿಹಾಸವೆಂದರೆ ಹೇಗೆ? ವರ್ತಮಾನದಲ್ಲಿ ಈಗ ಇರದಿದ್ದರೂ, ಭವಿಷ್ಯದಲ್ಲಿ

ಸಿಗುವುದಿಲ್ಲ ಎಂದಂತಾಗುತ್ತದೆ.

ಮಾಂಡೋವಿಯ ನಾಯಕ ಕಾಯಲಿಲ್ಲವೆ? ಹಾಗೆ ಕಾಯಬೇಕು ಎನಿಸಿದೆ ಕಾಯುತ್ತೇನೆ.

ಅಂದ ಹಾಗೆ ಈಗ ಯಾಕೆ ಮಾತನಾಡಿದೆ. ನಿನ್ನ ವರ್ತಮಾನವನ್ನು ಲೆಕ್ಕಿಸದೆ ಹಳೆಯ ಸಲುಗೆಯಿಂದ

ಮಾತನಾಡಿದ್ದು ಅಚ್ಚರಿ ಆಗಿರಬೇಕಲ್ಲವೆ?

ಅಂದು ------ ದಿನಕ್ಕೆ ನಾಲ್ಕೈದು ಬಾರಿ ಗಂಟೆ ಗಟ್ಟಲೆ ಹರಟೆ ಹೊಡೆಯುವಾಗ ನಾವಿಬ್ಬರು ದೂರಾಗುತ್ತೇವೆ

ಅಂದು ಕೊಂಡಿರಲಿಲ್ಲ. ಇನ್ನೇನು ಒಂದಾಗಿಬಿಡಬೇಕು ಎಂಬ ಸಂಭ್ರಮದಿಂದಲೇ ಅಲ್ಲವೆ ನಾಡೆಲ್ಲ, ಕಾಡೆಲ್ಲ

ಸುತ್ತಾಡಿದ್ದು.

ಇಬ್ಬರ ಜೇಬಿನಲ್ಲಿದ್ದ ಹಣವನ್ನು ಒಟ್ಟುಗೂಡಿಸಿ, ಲೆಕ್ಕ ಹಾಕಿ ಆಯೋಜಿಸುತ್ತಿದ್ದ ಪಯಣಗಳಲಿ ಎಂತಹ

ಮುದವಿತ್ತು. ನವಿಲು ತೀರ್ಥದ Guest House ನಲ್ಲಿ ಮೇಟಿ ನಮ್ಮನ್ನು ನೋಡಿ 'ಕಣ್ಣು ಮಿಟುಕಿಸಿದ್ದು ನೆನಪಾದರೆ

thrill ಅನಿಸುತ್ತದೆ.

ಆಗ ಅದೇ ನಮ್ಮ ಪಾಲಿನ ಸ್ವರ್ಗವಾಯಿತು. ಭಾವ ಬಂಧನದಲ್ಲಿ ಇದ್ದ ಸುಖದ ಮುಂದೆ ಇನ್ನೇನು ಬೇಕಿತ್ತು.

ಎರಡು ರಾತ್ರಿ ಕಳೆಯುವುದರ ಒಳಗೆ ಹಣ ಖಾಲಿ ಆಗುವ ಧಾವಂತ, ಇನ್ನೊಂದು ರಾತ್ರಿಯ ವಸತಿಗೆ ಮೇಟಿ

ಒಪ್ಪಿಕೊಂಡಾಗ ಆದ ಸಂತಸ ಈಗ ಕೋಟಿ ಕೊಟ್ಟರೂ ಸಿಗುವುದಿಲ್ಲ.

ತಣ್ಣನೆ ಹರಿಯುತ್ತಿದ್ದ ನದಿ, ಹಿತಕರವಾದ ತಂಗಾಳಿ ಈಗ ಯಾಕೆ ಸಿಗುತ್ತಿಲ್ಲ. ಯಾಕೆಂದರೆ ನೀನು ನನ್ನೊಂದಿಗೆ

ಇಲ್ಲವಲ್ಲ. ಎಂ.ಎ. ಮುಗಿದು ನಾನು ನೌಕರಿ ಹಾದಿ ಹಿಡಿದಾಗ, ನೀನು ಕೈಜೋಡಿಸುವ ಮಾತಾಡಿದ್ದೆ. ಆ

ವಿಶ್ವಾಸವೂ ನನಗಿತ್ತು.

ನಾನು first ಅಲ್ಲ ಎಂದು ಹೇಳುತ್ತಲೇ ಎಲ್ಲವನ್ನು ಒಪ್ಪಿಕೊಮಡು, ಒಪ್ಪಿಸಿಕೊಂಡಿದ್ದೆ. ದೇಹ - ಮನಸ್ಸುಗಳ

ಸುಖಾನುಭವ ಅರಿಯುವ ಮುನ್ನವೇ ಎಲ್ಲ ಪಾಠವನ್ನು ಮುಕ್ತವಾಗಿ ಕಲಿಸಿ ಕೊಟ್ಟಿದ್ದೆ. ನಾನೆಂತಹ ಅಮಾಯಕ

ಎಂದು ಈಗ ಅನಿಸುತ್ತದೆ. ವಾಸ್ತವದ ಬೆನ್ನು ಹತ್ತಿದ ನೀನು ಇದ್ದಕ್ಕಿದ್ದ ಹಾಗೆ ಭೇಟಿಯನ್ನು ನಿರಾಕರಿಸಿದೆ.

ಆಗ ನನಗಾದ ಹಿಂಸೆ ಅಷ್ಟಿಷ್ಟಲ್ಲ. ಹುಡುಕಿಕೊಂಡು ನೀನಿದ್ದ ಕಾಲೇಜಿಗೆ ಬಂದರೆ ಪರಿಚಯವಿಲ್ಲದಂತೆ ವರ್ತಿಸಿದ್ದು,

ಅಬ್ಬಾ! ಕೇವಲ ಹಾಯ್ ಹೇಳಿ ಯಾಕೋ ಸಹಪಾಠಿ ಜೊತೆ ಹೊರಟಿದ್ದು........

ಪುಟ್ಟ ಲಗೇಜ್ ಹಿಡಿದುಕೊಂಡು ನಿನ್ನೊಂದಿಗೆ ಒಂದೆರೆಡು ದಿನ ಇರುವ ಇರಾದೆಯನ್ನು ಲೆಕ್ಕಿಸದೇ Good bye

ಹೇಳಿದ್ದು. ಅಂದು ಕರಾಳ ರಾತ್ರಿಯನು ಅಲ್ಲೇ ಕಳೆದು ಮರುದಿನ ಭೇಟಿ ಆದಾಗ ಹಾಯ್ ಕೂಡ ಇರದ ಪೂರ್ಣ

ಅಪರಿಚಿತ ನಾನಾದೆ.

ಬದುಕೆಂದರೆ ಇಷ್ಟೊಂದು ಚಲ್ಲಾಟವೇ ಎನಿಸಿತು. ಇದ್ದಕ್ಕಿದ್ದ ಹಾಗೆ ಬದಲಾದ ನಿನ್ನ number........... ವಿಳಾಸ,

ಗೊತ್ತು ಗುರಿ ಎಲ್ಲವನ್ನು ಸಹಿಸಿಕೊಂಡು ಹುಡುಕುವ ಪ್ರಯತ್ನ ಮಾಡಲಿಲ್ಲ.

ಒಂದೆರೆಡು ವರ್ಷಗಳ ನಂತರ ಕವಿಗೋಷ್ಠಿಯಲಿ ಕಂಡ ನಿನ್ನಲಿ ಅದೇ ಕ್ರೂರ, ಅಲ್ಲಲ್ಲ ಹಾಗಂತ ನಾನು

ಭಾವಿಸಿದ್ದೆ. ನೋವಿನ ಕವಿತೆ ನಿನಗಾಗಿ ಎಂಬಂತೆ ಇದ್ದರೂ, ಪಕ್ಕದಲ್ಲಿ ಕುಳಿತಿದ್ದರೂ ಅದೇ ತಾತ್ಸಾರ.

ಹೀಗೆ ಬದುಕು ನನಗೂ ಪಾಠ ಕಲಿಸಿ, ಬೆಳೆಸಿತು. ಈಗ ಬೆಳೆದಿದ್ದೇನೆ ಅಂದುಕೊಂಡಿರುವಾಗ ನಿನ್ನ phone call

ನನ್ನಲ್ಲಿ ಯಾವುದೇ ಬದಲಾವಣೆ ತಂದಿಲ್ಲ. ಹಳೇ ದಾಟಿಯಲ್ಲಿಯೇ ಮಾತನಾಡಿದ್ದೇನೆ. ನಿನ್ನ ಎರಡು ಕ್ರೂರ,

ತಾತ್ಸಾರದ ಭೇಟಿಗಳನ್ನು ಲೆಕ್ಕಿಸದೇ.

ನೀನು ಅಷ್ಟೇ, ನೋಟಕ್ಕೆ, ನೇರವಾಗಿ ಸಿಗದೇ, ಹಳೆ ಸಲುಗೆಯಲ್ಲಿ ನವಿಲು ತೀರ್ಥದ ಮಿಲನದ ನೆನಪುಗಳನ್ನಷ್ಟೇ

ಮೆಲಕು ಹಾಕಬೇಕಾದರೆ ಅದೆಂತಹ ಆತ್ಮವಿಶ್ವಾಸವಿರಬೇಕು.

ನಾನು ಅಷ್ಟೇ ನಿನ್ನ ವರ್ತಮಾನ ಕೇಳಿಲ್ಲ, ಕೇಳವುದು ಇಲ್ಲ. ನನಗದರ ಅಗತ್ಯವೂ ಇಲ್ಲ.

ಮಿಲನದ ನೆನಪುಗಳನ್ನು ಹೊತ್ತು ನೀನೆನಾದರೂ ಎದುರಿಗೆ ಬಂದರೆ ಹಾಗೆಯೇ ಸ್ವೀಕರಿಸುತ್ತೇನೆ.

ಆಗ............. ನನ್ನ ಮೇಲೆ ಯಾಕೆ ತಿರಸ್ಕಾರ ಉಂಟಾಯಿತು ಎಂದು ಕೇಳುವುದು ಇಲ್ಲ! ಕೇಳಿದರೆ ಯಾವ

ಪ್ರಯೋಜನವೂ ಇಲ್ಲ!!

ಅಂದ ಹಾಗೆ ಮುಂದೆ ಭೇಟಿ ಆಗುವ ಪ್ರಸ್ತಾಪ ಇಟ್ಟಿದ್ದೆಯಲ್ಲ, ಹಾಗಾದರೆ ಅದೇ ನವಿಲು ತೀರ್ಥದ Guest

House ನಲ್ಲಿಯೇ ಭೇಟಿ ಆಗೋಣ . ಮೊದಲಿನ ಹಾಗೆ ಅಸಾಧ್ಯವಾಗಬಹುದು. ನನಗೀಗ ಖಂಡೀತಾ

ವಯಸ್ಸಾಗಿಲ್ಲ. ಕೂದಲು ಅಲ್ಲಲ್ಲಿ ಬೆಳ್ಳಗಾಗಿ, ಅಲ್ಲ ಮೆಹಂದಿ ಆಕ್ರಮಿಸಿದೆ. ಮೊದಲಿನ ಹಾಗೆ slim ಆಗಿ ಉಳಿದಿಲ್ಲ.

ನಿನ್ನ ಪಾಡು ಇನ್ನೇನಾಗಿರಬೇಡ? ನೀನು ಹೇಗೆ ಇದ್ದರೂ, ಏನೇ ಆಗಿದ್ದರೂ ಮಾತು ಕೊಟ್ಟಂತೆ ಅದೇ

ಜೇವನೋತ್ಸಾಹದಲ್ಲಿ ನಿನ್ನನ್ನು ಸೇರುತ್ತೇನೆ. ವಯಸ್ಸಾಗಿರುವುದು ದೇಹಕ್ಕೆ ಹೊರತು ಮನಸ್ಸಿಗೆ ಅಲ್ಲವಲ್ಲ. see

you again.

Wednesday, September 15, 2010

ಹರಿವ ನದಿಗೆ ಮೈಯಲ್ಲ ಕಾಲು

ಅಪರೂಪಕ್ಕೊಮ್ಮೆ ಸಿನೆಮಾ ನೋಡುವುದಾಗಿದೆ. ಟಾಕೀಜಿಗೆ ಹೋಗುವುದನ್ನು

ಮರೆತಿದ್ದೇವೆ. ಆದರೂ ಗೆಳೆಯರ ಒತ್ತಾಯಕ್ಕೆ ನೋಡಿದ ಸುದೀಪ್ ನಟಿಸಿ,

ನಿರ್ದೇಶಿಸಿದ 'ಆಟೋಗ್ರಾಫ್' ತುಂಬಾ ಇಷ್ಟವಾಯಿತು. ಬಾಲ್ಯದ ಸವಿನೆನಪುಗಳನ್ನು

ಇಷ್ಟೊಂದು ರಸವತ್ತಾಗಿ ಮೆಲಕು ಹಾಕಲು ಸಾಧ್ಯವಾ? ಎನಿಸಿತು. 'ಸವಿನೆನಪು

ಸಾವಿರ ನೆನಪು' ಎಂಬ ಹಾಡಿನಲ್ಲಿ ಎಂತಹ ಅರ್ಥವಿದೆ. ನೆನಪುಗಳು ಕಹಿಯಾಗಿದ್ದರೂ

ಅವುಗಳನ್ನು ಮೆಲಕು ಹಾಕುವುದರಲ್ಲಿನ 'ಸವಿ' ರುಚಿಕರ.

'My sad thoughts are the sweetest songs' ಎಂಬ John keats ನ

ಸಾಲುಗಳಲ್ಲಿ ಅದೆಂಥ ಮಾಧುರ್ಯವಿದೆ. ಅನುಭವಗಳು ಕಹಿಯಾಗಿದ್ದರೆ ಏನಂತೆ,

ಅದನ್ನು ನೆನಪಿಸಿಕೊಳ್ಳುವುದರಲ್ಲಿ ಸಿಹಿ ಇದೆ.

ಅದರಲ್ಲೂ ಬಾಲ್ಯದ ಅನುಭವಗಳಿಗೆ ಯಾವುದೇ logic ಇರುವುದಿಲ್ಲ. ಮಾಡಿದ್ದೇ ಸರಿ

ಆಡಿದ್ದೇ ಆಟ ಎಂಬ ಧೋರಣೆ ಈಗಲೂ ಹಚ್ಚ ಹಸಿರು.ಶಾಲೆಯಲ್ಲಿ ದಡ್ಡನಿದ್ದರೂ ನನ್ನ ಭಾಷಾ ಜ್ಞಾನ ಚೆನ್ನಾಗಿತ್ತು .

ನಮ್ಮೂರಲ್ಲಿ ಇಂದಿಗೂ 'ಅ' ಕಾರ, 'ಹ' ಕಾರ ದ ತೊಂದರೆ ಇದೆ. ಅಣ್ಣು, ಆಲು, ಊ

ಎಂದು ಉಚ್ಛರಿಸುತ್ತೇವೆ. ಹಣ್ಣು, ಹಾಲು, ಹೂ ಅನ್ನಬೇಕು ಎಂದೆನಿಸುವುದಿಲ್ಲ.

ಆದರೆ ನನಗಿದು ತಪ್ಪು ಅನಿಸುತ್ತಿತ್ತು.

ನಾವು ಸಣ್ಣವರಿದ್ದಾಗ ಮನೆತನದ್ದು ದೊಡ್ಡ ವ್ಯಾಪಾರ, ಕಿರಾಣಿ ಅಂಗಡಿ ನೂರಾರು

ಆಳುಗಳು, ಹತ್ತಾರು ವಾಹನಗಳು, ಗೋದಾಮುಗಳು, ಹೀಗೆ ಸಮೃದ್ಧಿಯ ಸಂಭ್ರಮ.

ಶಾಲೆಗೆ ನಮ್ಮನ್ನು ಕಳಿಸಲು, ಊರುರು ಅಲೆಯಲು ಹಳೆಯ ಜೀಪೊಂದು ಇತ್ತು.

ಡ್ರೈವರನಿಗೆ ಕನ್ನಡ ಬರುತ್ತಿರಲಿಲ್ಲ. ತೆಲಗು ಅಥವಾ ಹಿಂದಿಯಲ್ಲಿ ಮಾತನಾಡಬೇಕು

ನಮಗೆ ಕನ್ನಡ ಬಿಟ್ಟರೆ ಇನ್ನೊಂದು ಭಾಷೆ ಗೊತ್ತಿರಲಿಲ್ಲ. ಅವನು ತೆಲುಗಿನಲ್ಲಿ

ಮಾತನಾಡಿದರೆ ನಾವು ಕನ್ನಡದಲ್ಲಿಯೇ ಮಾತನಾಡುತ್ತಿದ್ದೆವು. ಜೀಪಿನಲ್ಲಿ ಹತ್ತಿ

ದಾಂಧಲೇ ಮಾಡಿದರೆ ಸಾಕು ದಿಗು, ದಿಗು ಅನ್ನುತ್ತಿದ್ದ. ಇಳಿಯಿರಿ ಅಂತ

ಅರ್ಥವಾಗುತ್ತಿತ್ತು ಅಷ್ಟೇ .ಕನ್ನಡದಲ್ಲಿ ನನ್ನ ಜ್ಞಾನ ಚೆನ್ನಾಗಿತ್ತು ಅಂತ ಈಗ

ಅನಿಸುತ್ತದೆ. ನಮ್ಮ ಲಾರಿ, ಜೀಪು ಅಂಗಡಿಯ ಬಾಗಿಲಿಗೆ ಮನೆ ದೇವರ ಹೆಸರು

ಬರೆಯುವುದು ಸಾಮಾನ್ಯ. ನಮ್ಮ ಲಾರಿಯ ಮೇಲೆ ದಪ್ಪ ಅಕ್ಷರಗಳಲ್ಲಿ ಶ್ರೀಗುರು

ಅಳ್ಳದ ಬಸವೇಶ್ವರ ಎಂದು ಪೇಂಟರ್ ಬರೆದಿದ್ದ ಇದು ತಪ್ಪು ಎಂದು ನಾನು

ವಾದಿಸಿದೆ. ನಾನು ಆಗ 2 ನೇ ಕ್ಲಾಸಿನ ವಿದ್ಯಾರ್ಥಿ. ನನ್ನ ವಾದವನ್ನು ಯಾರು

ಲೆಕ್ಕಿಸಲಿಲ್ಲ. ಅದೇ ರೀತಿ ಎಲ್ಲ ಕಡೆ ಬರೆಸಿದರು. ಅದು 'ಶ್ರೀಗುರು ಹಳ್ಳದ ಬಸವೇಶ್ವರ'

ಆಗಲಿ ಎಂಬ ನನ್ನ ವಾದವನ್ನು ಯಾರು ಕೇಳಲಿಲ್ಲ.

ಶಾಲೆಯಲ್ಲಿ ಕನ್ನಡ ಕಲಿಸುತ್ತಿದ್ದ ಶಿಕ್ಷಕರಿಗೆ ಕೇಳಿದೆ. ನಿನ್ನ ವಾದ ಸರಿ ಇದೆ. ಆದರೆ

ನಾವು ಹೇಗೆ ಮಾತನಾಡುತ್ತೇವೆಯೋ ಹಾಗೆಯೇ ಬರೆದಿದ್ದಾರೆ ಅಷ್ಟೇ ಎಂದು

ಸಮಾಧಾನಿಸಿದರು. ಆದರೂ ಹಾಗೆ ಬರೆದದ್ದು ತಪ್ಪು ಎಂದು ನಿತ್ಯ ಲಾರಿ

ನೋಡಿದಾಗಲೆಲ್ಲ ಕಾಡುತ್ತಲೇ ಇತ್ತು.

ಮುಂದೆ ನಾನು ಹೈಸ್ಕೂಲಿಗೆ ಬಂದು ಅಂಗಡಿ ಪ್ರಾರಂಭಿಸಿದ ಮೇಲೆ ಶ್ರೀಗುರು ಹಳ್ಳದ

ಬಸವೇಶ್ವರ ಎಂದು ಬರೆಸಿ ಖುಷಿ ಪಟ್ಟೆ. ಆಗ ನನಗೆ ಸಮಾಧಾನವಾಯಿತು. ಈಗ

ಗಂಗಾವತಿಯ ಬಿ. ಪ್ರಾಣೇಶ ಹೇಳುವ ಜೋಕುಗಳನ್ನು ಕೇಳಿದಾಗಲೆಲ್ಲ ನಮ್ಮೂರ

ಘಟನೆಗಳು ನೆನಪಾಗುತ್ತವೆ.

ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಬಿಟ್ಟು ಬೇರೆ ವಿಷಯಗಳನ್ನು ಕಲಿಯಲು

ಸಾಧ್ಯವಾಗಲೇ ಇಲ್ಲ. ಗಣಿತವಂತು ತಲೆಗೆ ಹೋಗಲೇ ಇಲ್ಲ. ಹೀಗಾಗಿ ಗೊತ್ತಿದ್ದ

ಕನ್ನಡವನ್ನೇ ಗಟ್ಟಿಯಾಗಿ ಹಿಡಿದುಕೊಂಡೆ.

joint family ವ್ಯೆವಸ್ಥೆಯಲ್ಲಿ ನೂರಾರು ಜನರಿದ್ದೆವು. ತಾತ, ಅಮ್ಮ, ಅಪ್ಪ, ದೊಡ್ಡಪ್ಪ,

ಚಿಕ್ಕಪ್ಪಂದಿರು,ಸೋದತ್ತೆಯರು ಹೀಗೆ ದೊಡ್ಡ ದಂಡೆ ಇತ್ತು. ಯಾರಿಗೂ ಶಿಕ್ಷಣದ ಬಗ್ಗೆ

ಕಾಳಜಿ ಇರಲಿಲ್ಲ. ನಮಗದರ ಅಗತ್ಯವೂ ಕಂಡು ಬರಲಿಲ್ಲ.

ಅಪ್ಪ, ಅವ್ವರಿಗೆ ನಾನು ಅಪ್ಪ ಅವ್ವ ಅನ್ನಲೇ ಇಲ್ಲ. ನನ್ನ ಸೋದರತ್ತೆ ಸುಮಂಗಲಾ

ಅತ್ತೆ ಅಪ್ಪನಿಗೆ ಅಣ್ಣ, ಅವ್ವಗೆ ಅತ್ತಿಗೆ ಅನ್ನುತ್ತಿದ್ದಳು. ನಾನು ಹಾಗೆ ಅನ್ನಲು ಶುರು

ಮಾಡಿದೆ. ನಿಮ್ಮಣ್ಣ ಎಲ್ಲಿ, ನಿಮ್ಮ ಅತ್ತಿಗೆ ಎಲ್ಲಿ ಎಂದು ಅತ್ತೆ ಕಾಡುತ್ತಲೆ ಇದ್ದರು.

ಮುಂದೆ 1972 ರಲ್ಲಿ ನಮ್ಮ ಕುಟುಂಬ ವಿಭಜನೆಯಾದಾಗ ಮನೆಯ ಪರಿಸರ

ಬದಲಾಯಿತು. ಸೋದರತ್ತೆ ಮದುವೆಯಾಗಿ ಹೋದಳು. ಅಣ್ಣ, ಅತ್ತಿಗೆ ಅನ್ನಬಾರದು

ಎಂದು ಎಲ್ಲರೂ ಕೀಟಲೆ ಮಾಡಿದ ಮೇಲೆ ಅವ್ವ ಎನ್ನಲು ಶುರು ಮಾಡಿದೆ. ಅಪ್ಪನಿಗೆ

ಅಪ್ಪ ಎನ್ನಲು ಸಾಧ್ಯವಾಗಲೇ ಇಲ್ಲ. 1972 ರಿಂದ ಜೀವನ ಬೇಸರವೆನಿಸಿತು.

ಅವಿಭಕ್ತ ಕುಟುಂಬ ವ್ಯೆವಸ್ಥೆಯೇ ಸುಂದರವೆನಿಸಿತು.ಕಾರಟಗಿ ಬೇಸರವಾಗಿ, ಅವ್ವಳ

ತವರು ಮನೆ ಕುಷ್ಟಗಿಗೆ ಹೆಚ್ಚು ಹೋಗಲು ಶುರು ಮಾಡಿದೆ. ಕುಷ್ಟಗಿಯ ದೊಡ್ಡ ಮನೆ ,

ಅಜ್ಜನ ಪ್ರೀತಿ ,ಕಕ್ಕಿಯ ಕಕ್ಕುಲತೆ ಹಿತವೆನಿಸಿತು. ಅಜ್ಜನೊಂದಿಗೆ ಕೋರ್ಟಿಗೆ

ಹೋಗುತ್ತಿದ್ದೆ. ಅಜ್ಜನ ಸೂಟು, ಕಾನೂನು ಪುಸ್ತಕಗಳು ಬೆರಗು ಮೂಡಿಸುತ್ತಿದ್ದವು.

ತಿಂಗಳುಗಟ್ಟಲೇ ಶಾಲೆ ತಪ್ಪಿಸಿ ಕುಷ್ಟಗಿಯಲ್ಲಿ ಇರುವುದು ಶೈಕ್ಷಣಿಕ

ಹಿನ್ನಡೆಯಾಯಿತು. ಶ್ರೀಮಂತರ ಮಕ್ಕಳು ಎಂಬ ಕಾರಣಕ್ಕೆ ಯಾರೂ ನಮ್ಮನ್ನು

ಶಿಕ್ಷಿಸಲಿಲ್ಲ.

ಕವಿಸ್ವವಿಮರ್ಶೆಗೆ ಒಳಗಾಗಗಬೇಕು- ಸಿದ್ದು ಯಾಪಲಪರವಿ





ಕೊಪ್ಪಳ : ಕವಿತೆಯನ್ನು ಬರೆದು ನಂತರ ಇದು ಪ್ರಕಟವಾಗಲೇಬೇಕು, ಇದೇ ಶ್ರೇಷ್ಠ ಎನ್ನುವ ಮನಸ್ಥಿತಿಯನ್ನು ಬಿಟ್ಟು ಕವಿಯಾದವನು ವಿಮರ್ಶೆಗೆ, ಅದರಲ್ಲೂ ಸ್ವ ವಿಮರ್ಶೆಗೆ ಒಳಗಾಗಬೇಕು, ಕವಿತೆ ಮೊದಲು ಬರೆದ ಕವಿಗೆ ಇಷ್ಟವಾಗಬೇಕು ನಂತರವೇ ಇತರರು ಮೆಚ್ಚಲು ಸಾಧ್ಯ ಎಂದು ಕವಿ, ಲೇಖಕ 'ಎತ್ತಣ ಮಾಮರ ಎತ್ತಣ ಕೋಗಿಲೆ'ಖ್ಯಾತಿಯ ಸಿದ್ದು ಯಾಪಲಪರವಿ ಹೇಳಿದರು.
ಅವರು ನಗರದ ಪ್ರವಾಸಿ ಮಂದಿರದಲ್ಲಿ ಕನ್ನಡನೆಟ್.ಕಾಂ ಕವಿಸಮೂಹ ಹಮ್ಮಿಕೊಂಡಿದ್ದ ೨೦ನೇ ಕವಿಸಮಯದ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ವಾಚ್ಯತೆ ಮೀರಿದ ಕವನಗಳು ಹುಟ್ಟಬೇಕು ಇದು ಬೇರೆ ಬೇರೆ ಕವಿಗಳನ್ನು ಓದುವದರಿಂದ ವಚನ ಸಾಹಿತ್ಯದಂತವುಗಳನ್ನು ಅಧ್ಯಯನ ಮಾಡುವುದರಿಂದ ಸಾಧ್ಯ. ಕಾವ್ಯದಲ್ಲಿ ಸೂಕ್ಷ್ಮ ನೇಯುವಿಕೆ ಅಗತ್ಯ. ಗೇಯತೆ, ರೂಪಕ, ಪ್ರತಿಮೆಗಳಿರುವ ಕಾವ್ಯ ದ ಸೃಷ್ಟಿಯಾಗಬೇಕು ಎಂದರು. ಇಡೀ ವಿಶ್ವದಲ್ಲಿ ಸುಂದರ ಸೃಷ್ಟಿ ಎಂದರೆ ಕವಿತೆ, ಅದು ಎಲ್ಲವನ್ನೂ ಒಳಗೊಂಡಿರುವಂತಹದ್ದು , ಯುವ ಕವಿಗಳ ಕವಿತೆಗಳನ್ನು ಹಿರಿಯ ಕವಿಗಳು ತಿದ್ದಿ ಅವರಿಗೆ ಮಾರ್ಗದರ್ಶನ ನೀಡಬೇಕು ಕವಿಗೋಷ್ಠಿ ಎಂದರೇ ಹಿಂದೆ ಮುಂದೆ ನೋಡುವಂಥಹ ಪ್ರಸ್ತುತ ಸಂದರ್ಭದಲ್ಲಿ ಕವಿಸಮಯದಂತಹ ಕಾರ್‍ಯಕ್ರಮಗಳು ಹೆಚ್ಚಾಗಬೇಕು, ಲೇಖಕ ಕವಿಯಾದವನು ಹಮ್ಮನ್ನು ಬಿಟ್ಟು ಎಲ್ಲರೊಡನೆ ಬೆರೆತು ಚರ್ಚೆಗೆ ತೊಡಗುವಂತಾಬೇಕು ಇದರಿಂದ ಸುಂದರ ಕಾವ್ಯ ರಚನೆ ಸಾಧ್ಯ ಎಂದರು.
ಇದಕ್ಕೂ ಮೊದಲು ಕವಿಗೋಷ್ಠಿಯಲ್ಲಿ ಮಹೇಶ ಬಳ್ಳಾರಿ-ವಿಪರ್‍ಯಾಸ, ಶಿ.ಕಾ.ಬಡಿಗೇರ- ಜನಪ್ರತಿನಿಧಿ, ಎನ್.ಜಡೆಯಪ್ಪ- ಇವರ್‍ಯಾರು?, ಶಿವಪ್ರಸಾದ ಹಾದಿಮನಿ-ರಾಜಕೀಯವಯ್ಯ, ಎ.ಪಿ.ಅಂಗಡಿ- ಗಾಂಧಿ ಕನಸಿನ ಗ್ರಾಮ ಸ್ವರಾಜ್ಯ, ಶ್ರೀನಿವಾಸ ಚಿತ್ರಗಾರ- ರಾಜಕೀಯ, ಡಾ.ಮಹಾಂತೇಶ ಮಲ್ಲನಗೌಡರ- ಕರ್ನಾಟಕ ರತ್ನ ಕುವೆಂಪು, ಅರುಣಾ ನರೇಂದ್ರ- ವಾಸ್ತವ, ಶಾಂತಾದೇವಿ ಹಿರೇಮಠ- ನಮ್ಮ ನಾಯಕರು, ವೀರಣ್ಣ ಹುರಕಡ್ಲಿ- ಸುತ್ತೋಣ ಬಾರಾ, ಸಿರಾಜ್ ಬಿಸರಳ್ಳಿ- ಮಾರುತ್ತೇವೆ ನಾವು, ಪುಷ್ಪಲತಾ ಏಳುಬಾವಿ-ಆಲಾಪನೆ, ವಾಸುದೇವ ಕುಲಕರ್ಣಿ- ಹಾರುವ ಹಕ್ಕಿಯ ಸಾಲು, ಶಾಂತು ಬಡಿಗೇರ-ಬಣ್ಣ, ಜಿ.ಎಸ್.ಬಾರಕೇರ-ಕನ್ನಡ ಕಂದನ ಆಸೆ, ಬಸವರಾಜ- ಅಮ್ಮನ ಮಡಿಲು, ಡಾ.ವಿ.ಬಿ.ರಡ್ಡೇರ- ಕದಡಬೇಡಿ ತಿಳಿನೀರ ಕೊಳವ, ವಿಠ್ಠಪ್ಪ ಗೋರಂಟ್ಲಿ- ಚುಟುಕು, ಸಿದ್ದು ಯಾಪಲಪರವಿ- ಯಾರಿವರು ಕವನಗಳನ್ನು ವಾಚನ ಮಾಡಿದರು.
ಕವಿಗೋಷ್ಠಿಯ ನಂತರ ಸಿದ್ದು ಯಾಪಲಪರವಿಯವರ ನೆಲದ ಮರೆಯ ನಿದಾನ ಕುರಿತು ಸಂವಾದ ಏರ್ಪಡಿಸಲಾಗಿತ್ತು.ಸಂವಾದಲ್ಲಿ ಮಾತನಾಡಿದ ಶಿ.ಕಾ.ಬಡಿಗೇರ- ಈ ಕವನಸಂಕಲನದ ಕವನಗಳಿಗೆ ಯಾವತ್ತೂ ಮುಪ್ಪಿಲ್ಲ, ಸಾವಿಲ್ಲ, ಸಾಮಾಜಿಕ ಪ್ರಜ್ಞೆಯುಳ್ಳ, ಬದ್ದತೆಯುಳ್ಳ ಕವನಗಳು ಇವು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಿವಪ್ರಸಾದ ಹಾದಿಮನಿ- ಕವಿಯನ್ನು ನವ್ಯ ಎನ್ನಬೇಕೋ, ಸಾಮಾಜಿಕ ಕವಿ ಎನ್ನಬೇಕೋ ತಿಳಿಯದಾಗಿದೆ. ಅವರ ಕವನಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ಎನ್.ಜಡೆಯಪ್ಪ, ಶ್ರೀನಿವಾಸ ಚಿತ್ರಗಾರ ಮಾತನಾಡಿದರು. ಡಾ.ವಿ.ಬಿ.ರಡ್ಡೇರ ಮಾತನಾಡಿ ಸಿದ್ದು ಯಾಪಲಪರವಿಯವ ಮೇಲೆ ವಚನ ಸಾಹಿತ್ಯ ಹೆಚ್ಚಿನ ಪ್ರಭಾವ ಬೀರಿದೆ ಎಂದರು. ಬೂಟು ಪಾಲೀಸು ಮಾಡುವ ಹುಡುಗನ ಕುರಿತ ಕವನದ ಕುರಿತು ಅತೀ ಮೆಚ್ಚುಗೆ ವ್ಯಕ್ತಪಡಿಸಿದರು. ವಿಠ್ಠಪ್ಪ ಗೋರಂಟ್ಲಿಯವರೂ ಸಹ ಸಿದ್ದು ಯಾಪಲಪರವಿ ಬಹುಮುಖ ಪ್ರತಿಭೆಯ ವ್ಯಕ್ತಿ , ಅವರ ಕವನಗಳಲ್ಲಿ ವಚನಗಳ ಪ್ರಭಾವ ಎದ್ದು ಕಾಣುವಂತಿದೆ. ಎತ್ತಣ ಮಾಮರ ಎತ್ತಣ ಕೋಗಿಲೆ ಪ್ರವಾಸ ಕಥನ ಅದ್ಭುತವಾಗಿ ಮೂಡಿ ಬಂದಿದೆ ಎಂದರು. ಕೊನೆಯಲ್ಲಿ ಮಾತನಾಡಿದ ಕವಿ ಸಿದ್ದು ಯಾಪಲಪರವಿ ತಮ್ಮ ಕವನಗಳ ಹುಟ್ಟಿನ ಕುರಿತು ಮಾತನಾಡಿದರು. ಎಲ್ಲರಿಗೂ ಧನ್ಯವಾದ ಅರ್ಪಿಸಿದರು.
ಕಾರ್‍ಯಕ್ರಮ ನಡೆಸಿಕೊಟ್ಟ ಸಿರಾಜ್ ಬಿಸರಳ್ಳಿ ಸಿದ್ದು ಯಾಪಲಪರವಿಯವರಿಂದ ಇನ್ನೂ ಹೆಚ್ಚಿನ ಕೃತಿಗಳು ಹೊರಬರಲಿ, ಜಿಲ್ಲೆಯ ಯುವ ಕವಿಗಳಿಗೆ, ಲೇಖಕರಿಗೆ ಅವರ ಮಾರ್ಗದರ್ಶನ ನೀಡುವಂತಾಗಲಿ ಎಂದರು.
ವರದಿ : ಸಿರಾಜ್ ಬಿಸರಳ್ಳಿ ಕನ್ನಡನೆಟ್.ಕಾಂ

Monday, September 13, 2010

ನಮ್ಮೂರ ಶಾಲೆ - ಒದ್ದೆಯಾದ ಚೊಣ್ಣ

ಊರ ಮಧ್ಯೆ ಸಿಹಿನೀರಿನ ಬಾವಿಯ ಹಿಂದೆ ಇದ್ದ ನಮ್ಮೂರ ಶಾಲೆ ವಿಶಾಲವೆನಿಸುತ್ತಿತ್ತು. ಈಗ ಬಿಡಿ ಶಾಲೆ ಊರ ಮಧ್ಯೆ

ಕಮರ್ಶಿಯಲ್ ಕಾಂಪ್ಲೆಕ್ಸಗಳ ದಾಂಗುಡಿಯಲ್ಲಿ ಸಿಕ್ಕುಬಿಟ್ಟಿದೆ. ಪಂಚಾಯತ್ ನವರು ಕಟ್ಟಿದ ಎರಡಂತಸ್ತಿನ ಮಳಿಗೆಗಳು

ಶಾಲೆಯನ್ನು ಮುಚ್ಚಿ ಹಾಕಿಬಿಟ್ಟಿವೆ. ಅದೇ ಹಳೆ ಗೇಟು ಜಂಗು ಹಿಡಿದು ಹೋಗಿದೆ. ಊರು ಸಾಕಷ್ಟು ಬೆಳೆದಿದೆ. ಆರ್ಥಿಕವಾಗಿ

ಪ್ರಬಲವಾಗಿದೆ. ಊರ ತುಂಬಾ ಆವರಿಸಿಕೊಮಡಿರುವ ರೈಸ್ ಮಿಲ್ಲುಗಳು ಊರ ಸಂಸ್ಕೃತಿಯನ್ನೇ ಬದಲಿಸಿವೆ.

ಆದರೆ ಆಗ ಕೇವಲ ಎರಡೇ ರೈಸ್ ಮಿಲ್ಲುಗಳು. ಎರಡೇ ದೊಡ್ಡ ಕಿರಾಣಿ ಅಂಗಡಿಗಳು, ಬೆರಳೆಣಿಕೆಯಷ್ಟು ಜನ ಶ್ರೀಮಂತರು.

ಜಾತಿಯ ಜಂಜಾಟವಿರಲಿಲ್ಲ. ಹಿಂದುಳಿದವರು, ದಲಿತರು ವಿನಯದಿಂದ ಶ್ರೀಮಂತರ ಫ್ಯೂಡಲ್ ವರ್ತನೆಯನ್ನು ಭಕ್ತಿಯಿಂದ

ಸ್ವೀಕರಿಸುವ ಮುಗ್ಧ ಸ್ಥಿತಿಯಿತ್ತು.

ಇದ್ದ ಒಂದು ಸರಕಾರಿ ಶಾಲೆ ಎಲ್ಲರ ಪಾಲಿನ ದೇವಾಲಯವಾಗಿತ್ತು. ಬಾಲ್ಯದ ದಿನಗಳ ಶಿಕ್ಷಕರು ಅಷ್ಟಾಗಿ ನೆನಪಾಗುತ್ತಿಲ್ಲ.

ದೂರದ ಬಂಧು ಸಾಲಗುಂದಿ ಸಿದ್ದಪ್ಪ ಮೇಷ್ಟ್ರು, ರಾಮಣ್ಣ ಮೇಷ್ಟ್ರು, ಪ್ರಕಾಶಪ್ಪ ಮೇಷ್ಟ್ರು ನನ್ನ ಸ್ಮೃತಿ ಪಟಲದ ಮೇಲಿದ್ದಾರೆ.

ಐದನೇ ವಯಸ್ಸಿಗೆ ಶಾಲೆ ಕಟ್ಟಡ ಏರಿದೆ. ಆರು ವರ್ಷಕ್ಕೆ ಎಂಬ ಕಾರಣಕ್ಕೆ admission ಸಮಯದಲ್ಲಿ ತಮಗೆ ತೋಚಿದಂತೆ
1-

6-1964 ಎಂದು ಜನ್ಮ ದಿನಾಂಕವನ್ನು ನಮೂದಿಸಿ ಪ್ರವೇಶ ನೀಡಿದರು. 12-4-1965 ನನ್ನ ನಿಜವಾದ ಜನ್ಮದಿನ. ಆದರೆ

ಅಧಿಕೃತವಾಗಿ ಸರಕಾರಿ ದಿನದಂದೇ ದಾಖಲಾದೆ.

ಒಂದನೇ ತರಗತಿ ಈಗಲೂ ನೆನಪಿದೆ. ಹೊಸದಾಗಿ ನೇಮಕಗೊಂಡ ರಾಮಣ್ಣ ಮೇಷ್ಟ್ರು ಇಂದಿಗೂ ನೆನಪಾಗುವುದು ಅವರ

ವಿಶೇಷ ಪೋಷಕುಗಳಿಂದಾಗಿ. ಉಳಿದ ಶಿಕ್ಷಕರು ಧೋತ್ರ ಧರಿಸುತ್ತಿದ್ದರೆ, ಈ ರಾಮಣ್ಣ ಮೇಷ್ಟ್ರು ಮಾತ್ರ ಪ್ಯಾಂಟ್,

ಶರ್ಟ,ಬೂಟುಗಳನ್ನು ಧರಿಸುತ್ತಿದ್ದರು. ಅವರ ಕಾಲಲ್ಲಿನ ಬೂಟುಗಳನ್ನು, ಅದಕ್ಕೆ ಲೇಪಿತವಾಗಿದ್ದ ಪಾಲೀಸನ್ನು ವಿಸ್ಮಯದಿಂದ

ನೋಡುತ್ತಿದೆ. ಅವರು ಸೊಂಟಕ್ಕೆ ಬಿಗಿದುಕೊಂಡಿದದ್ದ ದಪ್ಪನೇ belt ಬಹುವಾಗಿ ಆಕರ್ಷಿಸಿತ್ತು.

ಗಡಸು ಧ್ವನಿಯ ರಾಮಣ್ಣ ಮೇಷ್ಟ್ರು ಮಿಸಲಾತಿಯ ಮೇಲೆ ಆಯ್ಕೆಯಾಗಿದ್ದರು. ಹಳ್ಳಿ ಹುಡುಗರು ಕಲಿಯಲಿ ಎಂಬ ಉತ್ಸಾಹವಿತ್ತು.

ಅವರ ಕೈಯಲ್ಲಿನ ಕೋಲು ನೋಡಿದಾಗಲೆಲ್ಲ ಭಯವಾಗಿತ್ತಿತ್ತು. ನಂತರದ ಎಷ್ಟೋ ಘಟನೆಗಳು ನೆನಪಿಲ್ಲವಾದರೂ, ಒಂದನೇ

ಕ್ಲಾಸ್ ಇಂದಿಗೂ ನೆನಪಿರಲು ಈ ರಾಮಣ್ಣ ಮೇಷ್ಟ್ರೇ ಕಾರಣ. ಏನೋ ಪ್ರಶ್ನೆ ಕೇಳಿದರು, ಹೇಳಲು ಸಾಧ್ಯವಾಗಲಿಲ್ಲ. ಕೈ

ಮುಂದೆಮಾಡಲೇ ಎಂದರು. ರಪ್ಪ ಅಂತ ಏಟು ಕೊಟ್ಟರು ಏಟು ಕೊಟ್ಟಾಗ ಅಳಬೇಕಾದವನು ನಾನು. ಆದರೆ ರಾಮಣ್ಣ ಮೇಷ್ಟ್ರು

ಗಾಭರಿಯಾದರು. ನನಗೆ ಅರಿವಿರದಂತೆ ನನ್ನ ಚಣ್ಣ ಒದ್ದೆಯಾಗಿ ಹೋಗಿತ್ತು. ಥೂ ಹಲ್ಕಟ್ ಸೂಳೆಮಗನೆ, ಒಂದ ಏಟಗೆ ಉಚ್ಚೆ

ಹೊಯ್ಕಂಡೆಲಲೇ, ನಡೀ ಹೊರಗೆ ನಡಿ ಎಂದು ಜೋರಾಗಿ ಗದರಿದರು. ಗಡ,ಗಡ ನಡುಗುತ್ತಲೇ ಇದ್ದೆ. ಮುಂದೆ ಉಚ್ಚೆ ಬಿಡುತ್ತಲೇ

ಹೊರಗೆ ಬಂದೆ.

ಹೊರಗೆ ಹೋಗಿ ಒಯ್ದು ಬಾರಲೇ ಅಂದ್ರು ನೂರಾರು ಹೆಜ್ಜೆ ನಡೆದು ಹೋದೆ. ಎಲ್ಲ ಖಾಲಿ ಆಗಿದ್ದರಿಂದ ಮತ್ತೆ ಹೊಯ್ಯುವ ಮಾತೆಲ್ಲಿ

ಚಣ್ಣ ಒಣಗುವರೆಗೆ ಬಿಸಿಲಲ್ಲೆ ನಿಂತೆ.

ಚಣ್ಣ ಒಣಗಿದ ಮೇಲೆ ಮತ್ತೆ ಕ್ಲಾಸಿಗೆ ಬಂದೆ. ಒದ್ದೆಯಾದ ಚಣ್ಣ, ಅವರ ಕೈಯಲ್ಲಿನ ಬೆತ್ತ, ಅವರ ಪಳ, ಪಳ ಹೊಳೆಯೋ

ಬೂಟುಗಳನ್ನು ನೋಡುತ್ತಾ ಕುಳಿತುಕೊಂಡೆ. ಅಕ್ಷರಗಳು ತಲೆಯಲ್ಲಿ ಹೋಗಲೇ ಇಲ್ಲ. ಚಣ್ಣ ಒದ್ದೆಯಾದದ್ದು ಅಪಮಾನ ಎಂದು

ಅನಿಸಲೇ ಇಲ್ಲ. ಮನ್ಯಾಗ ಹೋಗಿ ಹೇಳಿದ್ರ ಮಗನ ನಿನ್ನ ಚರ್ಮಾ ಸುಲಿತೀನಿ ಎಂದು ರಾಮಣ್ಣ ಮೇಷ್ಟ್ರು ಮತ್ತೊಮ್ಮೆ ಗುಟುಕು

ಹಾಕಿದರು. ಇಲ್ಲ ಸರ್ ಎಂದೆ.

ಈ ಪ್ರಕರಣವನ್ನು ಬೇಗ ಮರೆಯಲಾಗಲಿಲ್ಲ. ಮನೆಯಲ್ಲಿ ಯಾರಿಗೂ ಹೇಳಲಿಲ್ಲ. ಅಂತಹ ಗುರುಭಕ್ತಿ ನನ್ನದು. ಅವ್ವ

ಹೆರಿಗೆಗೆ ಕುಷ್ಟಗಿಗೆ ಹೋಗಿದ್ದರು. ಅದೇ ನೆಪಮಾಡಿಕೊಂಡು ಶಾಲೆ ತಪ್ಪಿಸಿ ಊರಿಗೆ ಓಡಿ ಹೋದೆ. ನಾಲ್ಕಾರು ತಿಂಗಳು ಬಿಟ್ಟು

ವಾಪಾಸಾದಾಗ ರಾಮಣ್ಣ ಮೇಷ್ಟ್ರು ಅದೇಗತ್ತಿನಲ್ಲಿ, 'ಎಲ್ಲಿ ಹೋಗಿದ್ದಲೇ ಸುಡುಗಾಡು ಸಿದ್ಧ' ಎಂದು ಕೇಳಿದರು.

ಇನ್ನೊಮ್ಮೆ ತಪ್ಪಿಸಿದರೆ ಮುಕಳಿಮ್ಯಾಲೆ ಒದೀತಿನಲೇ ಎಂದು ಗುಡುಗಿದರು. ಮುಂದೆ ಎಥಾ ಪ್ರಕಾರ ಎರಡನೇ ಕ್ಲಾಸಿಗೆ ಹೋದೆ.

ಸಿದ್ದಪ್ಪ ಸರ್, ಪ್ರಕಾರಪ್ಪ ಸರ್ ಪಾಠ ಮಾಡಿದ ನೆನಪಿಲ್ಲವಾದರೂ ಅವರು ಬಳಸುತ್ತಿದ್ದ ಬೈಗಳುಗಳು ಇನ್ನೂ ನೆನಪಿನಲ್ಲಿವೆ.

ಸಿದ್ದಪ್ಪ ಮೇಷ್ಟ್ರು ಮನೆ, ನಮ್ಮ ಮನೆ ಎದುರಿಗಿತ್ತು. ಅವರು ತುಂಬಾ ಸಂಭಾವಿತರು. ಎಂದೂ ಕೆಟ್ಟ ಪದ ಬಳಸುತ್ತಿರಲಿಲ್ಲ. ಕೈಯಲ್ಲಿನ

ಬೆತ್ತ ಯಾರ ಕೈಗೂ ಅಪ್ಪಳಿಸುತ್ತಿದ್ದಿಲ್ಲ. ಧೋತರದ ಚುಂಗು ಹಿಡಿದು ಆ ಕಡೆ, ಈ ಕಡೆ ತಿರುಗಾಡುತ್ತ ಪಾಠ ಮಾಡುತ್ತಿದ್ದರು.

ಪ್ರಕಾಶಪ್ಪ ಮೇಷ್ಟ್ರು ಬೈಯುತ್ತಿದ್ದ ಹಿರೇತನ ಹಡಸೋ ಸೂಳೆ ಮಕ್ಕಳ ಎಂಬ ಪದದ ಅರ್ಥ ಗೊತ್ತಾಗದಿದ್ದರೂ ಅದನ್ನು enjoy

ಮಾಡುತ್ತಿದ್ದೆವು. ತುಂಬಾ ಚೆನ್ನಾಗಿ ಪಾಠಮಾಡುತ್ತಿದ್ದ ಪ್ರಕಾಶಪ್ಪ ಮೇಷ್ಟ್ರು ತಪ್ಪು ಮಾಡಿದಾಗಲೆಲ್ಲ. ಹಿರೇತನ ಹಡಸೋ ಸೂಳೆ

ಮಕ್ಕಳಾ ಎಂಬ ಬಿರುದನ್ನು ದಯಪಾಲಿಸುತ್ತಲೇ ಇದ್ದರು.

Thursday, September 9, 2010

ಹೆಳವ ಹೇಳಿದ ಕತೆ

ದಾಂಡೇಲಿ ಹತ್ತಿರ ಹಳ್ಳಿಯಲಿ ವಾಸಿಸುತ್ತಿರುವ ನಮ್ಮ ಮನೆತನದ ಹೆಳವ ಫಕೀರಪ್ಪನ ಮೇಲೆ ಎಲ್ಲಿಲ್ಲದ ಪ್ರೀತಿ.

ಕಳೆದ ಇಪ್ಪತ್ತು ವರ್ಷದಿಂದ ಅವನು ಹೇಳುವ ಏಕತಾನತೆಯ ಓದುವಿಕೆಯನ್ನು ಹೊಸತನದಿಂದ ಕೇಳುತ್ತಲೇ

ಇದ್ದೇನೆ.

ಬೇರುಗಳ ಬಗ್ಗೆ ಇರುವ ಕುತೂಹಲ ಸಹಜವಲ್ಲವೆ? ಶತಮಾನಗಳ ಹಿಂದೆ ಬಿಜಾಪೂರ ಜಿಲ್ಲೆಯ ಮುಳುಗಿಹೋದ

ಊರು ಗೋದಿಬನ್ನೂರು ನಮ್ಮ ಮೂಲ ಊರಂತೆ. ಹೀಗೆ ಅನೇಕರಿಗೆ ಗೋದಿಬನ್ನೂರು ಮೂಲ ಸ್ಥಳವಂತೆ,

ನದಿ ತೀರದ ಊರುಗಳು

ಮುಳುಗುವಾಗ ವಾಸಿಗಳು ಚದುರಿ ಹೋಗುವುದು ಸಹಜ.

ಗೌಡಕಿ ಮನೆತನದ ನಾವು ನದಿಯಲಿ ಮುಳುಗಿದ ಊರನ್ನು ತೊರೆದು ಯಾಪಲಪರವಿಗೆ ಬಂದದ್ದನ್ನು,

ಅಲ್ಲಿ ಶರಣಾರತಿ ಮನೆತನದವರಾಗಿ ಬಾಳಿದ್ದನ್ನು ಹೆಳವ

ಫಕೀರಪ್ಪ ರಸವತ್ತಾಗಿ ವರ್ಣಿಸುತ್ತಾನೆ. ನಾನು ಬರೆಯಬೇಕೆಂದಿರುವ ಬಾಲ್ಯದ ನೆನಪುಗಳಿಗೆ ಹೆಳವನ

ಮಾತುಗಳು ಪ್ರೇರಣೆ ನೀಡುತ್ತವೆ.

ಹರಿವ ನದಿಗೆ ಮೈಯೆಲ್ಲ ಕಾಲು' ಇದು ನನ್ನ ಮನದಲಿ ಮೂಡಿದ ಶೀರ್ಷಿಕೆ. ಬಾಲ್ಯದ ಅನೇಕ ಘಟನೆಗಳು

ವ್ಯಕ್ತಿತ್ವವನ್ನು ರೂಪಿಸಿವೆ. ಆ ಎಲ್ಲ ಘಟನೆಗಳು ದಾಖಲಾದರೆ ಅರ್ಥಪೂರ್ಣ.

ಬಾಲ್ಯದ ವಿದ್ಯಾರ್ಥಿ ಜೀವನದ ನೆನಪುಗಳು ನಿತ್ಯ

ಕಾಡುತ್ತಲಿವೆ. ಅವುಗಳನ್ನು ಒಪ್ಪ ಓರಣವಾಗಿ ದಾಖಲಿಸಬೇಕಿದೆ.

ಅಮರಣ್ಣ ತಾತ ಕಾರಟಗಿಯಲ್ಲಿ ಗಳಿಸಿದ ಹಣ, ಅಪಾರ ಆಸ್ತಿ, ಬಾಲ್ಯದ ಶ್ರೀಮಂತಿಕೆಯ ನೆನಪುಗಳು ಕಾಡುತ್ತಲೇ

ಇರುತ್ತವೆ. ಕರಗಿ ಹೋದ ಶ್ರೀಮಂತಿಕೆ, ಹಣಕ್ಕಾಗಿ ಪರದಾಟ, ಮತ್ತೆ ಮಾಡಿದ ಸಣ್ಣ ಪುಟ್ಟ ವ್ಯಾಪಾರಗಳು. ಆದರೆ

ಕರಗಿದ್ದನ್ನು ಗಳಿಸಲು ಸಾಧ್ಯವಾಗದೇ ಇದ್ದಾಗ ಲಕ್ಮಿಯನ್ನು ಕೈ ಬಿಟ್ಟು, ಸರಸ್ವತಿಗೆ ಬೆನ್ನು ಹತ್ತಿ ಶೈಕ್ಷಣಿಕ

ಸಂಸ್ಕಾರ ಪಡೆದದ್ದು....... ಈಗ ಮಿಂಚಿ ಮರೆಯಾದ ಅನುಭವಗಳು. ಆದರೆ ಅವುಗಳನ್ನು ಹಾಗೆ ಬಿಡಬಾರದು.

ಆತ್ಮವಿಶ್ವಾಸ ತುಂಬಿದ ಘಟನೆಗಳನ್ನು ಅಕ್ಷರಿಸುವುದರಲ್ಲಿ ಅರ್ಥವಿದೆ.

ಒಂದರಿಂದ ಏಳರವರೆಗೆ ಸರಿಯಾಗಿ ಶಾಲೆಗೆ ಹೋಗಲಾಗಲಿಲ್ಲ. ವ್ಯಾಪಾರ ಮನೆತನದ ಹುಡುಗರಿಗೆ ಅಂಗಡಿ,

ವ್ಯಾಪಾರ, ಹಣವೆಂದರೆ ಎಲ್ಲಿಲ್ಲದ ಸಂಭ್ರಮ. ಗಲ್ಲೆ ಮೇಲೆ ಕುಳಿತುಕೊಂಡು ಹಣ ಎಣಿಸುವುದು, ಅಕ್ಷರ

ಸಂಸ್ಕಾರವನ್ನು ದೂರಾಗಿಸುತ್ತದೆ ಎಂಬ ಸತ್ಯ ಗೊತ್ತಾಗಿದೆ.

ಈಗಲೂ ಅಷ್ಟೇ ವಿದೇಶಕ್ಕೆ ಹೋಗಿ ವಿದ್ಯಾರ್ಜನೆ ಮಾಡಿದ ಶ್ರೀಮಂತರ, ರಾಜಕಾರಣಿಗಳ ಮಕ್ಕಳು ವ್ಯಾಪಾರಕ್ಕೆ,

ರಾಜಕಾರಣಕ್ಕೆ ಮರಳುತ್ತಾರೆ. ವಿದ್ಯೆಗೆ ತಕ್ಕ ವೃತ್ತಿಗೆ ಅಂಟಿಕೊಳ್ಳುವ ಮನಸ್ಸು ಮಾಡುವುದಿಲ್ಲ. ಅದಕ್ಕೆ

ಬಾಲ್ಯದಲ್ಲಿನ ಘಟನೆಗಳೇ ಕಾರಣ. ಹೀಗೆ ಕಾರಟಗಿ - ಧಾರವಾಡ - ಮಹಾರಾಷ್ಟ್ರದ ಸಾಂಗ್ಲಿಯಲ್ಲಿನ

ಅಧ್ಯಯನ ನೆನಪುಗಳನ್ನು ಒಂದೆಡೆ ಕಟ್ಟಿಕೊಡುವ ಇರಾದೆ ಬೇಗ ಕೈಗೂಡಲಿ ಎಂದು ಆಶಿಸುತ್ತೇನೆ.

ಜೀವನೋತ್ಸಾಹದ ಹೊಸ ಆಯಾಮ

ನಾನೆಂದು ಜೀವನೋತ್ಸಾಹ ಕಳೆದುಕೊಂಡಿಲ್ಲ.

ಹಲವಾರು ಆತಂಕಗಳನ್ನು ಕಠಿಣ ಸವಾಲುಗಳನ್ನು ವಿಷಾದದಿಂದ

ಎದುರಿಸಿದ್ದೇನೆ. ಧೈರ್ಯದಿಂದ ಎಂದರೆ ಅಪಚಾರವಾದೀತು.

ಅಪಘಾತದಲ್ಲಿ ಎಡಗೈ ಮುರಿದಾಗ ಆಘಾತವಾಗಿತ್ತು. ಅನೇಕ ಸಕಾರಾತ್ಮಕ ಆಲೋಚನೆಗಳ ಮೂಲಕ

ಸಮಾಧಾನಿಸಿಕೊಂಡೆ.

ಅಚೀಚೆ ಓಡಾಟ. ಎಡಗೈಯಲಿ ಮಗು ಎತ್ತಿಕೊಂಡ ಹಾಗೆ. ಐದು ಕೆ.ಜಿ. ಭಾರದ plaster

ಅಸಹಾಯಕನನ್ನಾಗಿಸಿತ್ತು.

ಈಗ ಆ ಭಾರದಿಂದ ಮುಕ್ತನಾಗಿದ್ದೇನೆ. ಆಗೀಗ ಕಾಣಿಸಿಕೊಳ್ಳುವ ನೋವು, ಆ ನೋವಿನ ಕಾರಣದಿಂದಾಗಿ

ಸಣ್ಣನೆಯ ಜ್ವರ

ಬೇಸರವನ್ನುಂಟುಮಾಡಿತ್ತು.

ಈಗ ------- ಎಲ್ಲದರಿಂದ ಹೊರ ಬಂದಿದ್ದೇನೆ. ಒಂಟಿಯಾಗಿ ಬೆಂಗಳೂರಿಗೆ ಹೋಗಿ ಬಂದೆ. ದೆಹಲಿ ಭೇಟಿಯೂ ಆಯಿತು.

ತಿರುಗಾಡಿದಂತೆಲ್ಲ ಆತ್ಮ ವಿಶ್ವಾಸ ಹೆಚ್ಚಾಗಿದೆ.

ಅದೇ ವೇಗದಲ್ಲಿ ಕಾಲೇಜಿಗೂ ಹೋಗುವ ಮನಸ್ಸಾಗಿತ್ತು. ಆದರೆ bike ನಡೆಸಲು ಬರುವದಿಲ್ಲ ಎಂಬ ಕಾರಣಕ್ಕೆ

drop ಮಾಡಿದ್ದೆ.

ಆದರೆ ಈಗ ನಿರ್ಣಯ ಬದಲಾಗಿದೆ.

VRS ಆಲೋಚನೆ ಗಟ್ಟಿಯಾಗಿದೆ. 45 ರ ಪ್ರಾಯದಲ್ಲಿ ನೌಕರಿಯ ಹಂಗು ತೊರೆದು ಪತ್ರಿಕೆ ಆರಂಭಿಸಿದ

ಲಂಕೇಶರ ಆದರ್ಶ

ನಮ್ಮೊಂದಿಗೆ ಜೀವಂತವಾಗಿದೆ.

ಅದೇ ರೀತಿ ಹೊಸ ಸವಾಲುಗಳನ್ನು ಹೊತ್ತು ಬೆಂಗಳೂರು ಸೇರಿ ಬಾನೆತ್ತರಕೆ ಹಾರಿದ ಹಾಯ್ ರವಿ ಇದ್ದಾನೆ.

ಬದಲಾಗುವ

ಅವಕಾಶ ಬಂದಾಗ ಬದಲಾಗಬೇಕು. ಈಗ ಅನೇಕ ಕನಸುಗಳು ಗರಿಗೆದರಿವೆ. ನೌಕರಿ ಬಿಡುವ risk ಅನೇಕರನ್ನು

ನನ್ನಂತೆ

ಕೆಲಕಾಲ ದಿಗಿಲುಗೊಳಿಸಿದೆ.

ಈಗ ಗಟ್ಟಿಯಾಗಿದ್ದೇನೆ. ಆಗಲೇಬೇಕು. ಮಾಧ್ಯಮ ,HRD ಹೀಗೆ ಹಲವು ಅವಕಾಶಗಳಿವೆ. ಎಲ್ಲೇ ಹೋಗಲಿ

ತೊಂದರೆ

ಅನುಭವಿಸುತ್ತಲೇ professional success ಗಿಟ್ಟಿಸಿಕೊಳ್ಳುತ್ತೇನೆ. ಅದು ಅನಿವಾರ್ಯ ಕೂಡಾ.

'ಅರಸು ಮುನಿದರೆ ನಾಡೊಳು ಇರಬಾರದು' ಎಂದು ಶರಣರು ಹೇಳಿದ್ದಾರೆ. ನನ್ನನ್ನು ದುಡಿಸಿಕೊಳ್ಳುತ್ತಿದ್ದ ಧಣಿಗೆ

ನಾನೀಗ

ಬೇಡವಾಗಿದ್ದೇನೆ. ಈಗ ನಾನು ಅಂಗಲಾಚಿ ವೃತ್ತಿಗೆ ಮರಳಿದರೆ ಆತ್ಮಗೌರವಕ್ಕೆ ಪೆಟ್ಟು ಬಿದ್ದು ನಾಶವಾಗಿ

ಹೋಗುತ್ತೇನೆ.

ಇಲ್ಲೇ ಇದ್ದು ನಾಶವಾಗುವ ಬದಲು ಹೊಸ ವಾತಾವರಣದಲ್ಲಿನ ಸವಾಲುಗಳನ್ನು ಎದುರಿಸುವುದು ಸೂಕ್ತ

ಅನಿಸಿದೆ.

ಗಟ್ಟಿಯಾಗಿ ನನ್ನೊಂದಿಗೆ ಉಳಿದವರು, ಉಳಿಯುವವರು ಧೈರ್ಯ ನೀಡಿದ್ದಾರೆ. ನನ್ನ ಮೇಲಿನ ಭರವಸೆಯಿಂದ

ಹೊಸ ಸವಾಲು

ಎದುರಿಸುತ್ತೇನೆ. ನಿಮ್ಮ ಹಾರೈಕೆ ಸದಾ ಇರಲಿ ಅಷ್ಟೆ!

ಸ್ವಯಂ ನಿವೃತ್ತಿಯ ಆಲೋಚನೆ

ಕಳೆದ 20 ವರ್ಷ ಪರಿಶ್ರಮದಿಂದ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸಿದ ಸಂತೃಪ್ತಿ. ಆದರೆ ಸಿಗಬೇಕಾದ

ಮಾನ್ಯತೆ ಸಿಗಲಿಲ್ಲ ಎಂಬ ವೇದನೆ. ಹಾಗಾದರೆ ನಾನು ಎಡವಿದ್ದಾದರೂ ಎಲ್ಲಿ?

ಯಾರದೋ ಕುಟಿಲತನದಿಂದ, ನಿರ್ದಯಿ ಧೋರಣೆಯಿಂದಾಗಿ ನನ್ನ ಪ್ರತಿಭೆಯನ್ನು ಒಪ್ಪಿಕೊಳ್ಳದೇ,

ಬೇಜವಾಬ್ದಾರಿ ಎಂಬಂತೆ ಚಿತ್ರಿಸಿದ ವಿಕೃತ ರೂಪ ಸತ್ಯವಾದ ಅಪಾಯವನ್ನು ಅನಿವಾರ್ಯವಾಗಿ ಎದುರಿಸಿದೆ.

ಸಹಿಸಿದೆ.

ಈಗ ಸಾಕು ಎನಿಸಿದೆ. ನಿರಂತರ ಭಯದ ನೆರಳಲಿ, ಸೆಕ್ಯೂರೆಟಿ ಎಂಬ ವಿಷವರ್ತುಲದಲಿ, ಸಿಂಬಳದಲಿ ಸಿಕ್ಕ

ನೊಣದಂತೆ ಒದ್ದಾಡಿದೆ.

ಕೇವಲ ಸೆಕ್ಯೂರೆಟಿ ಎಂಬ ಭ್ರಮೆಯಲ್ಲಿ. ಕಳೆದ ವರ್ಷದಿಂದ ಮನಸ್ಸು ಗಟ್ಟಿಯಾಗತೊಡಗಿತು. ಸಾಕಪ್ಪ ಈ

ಹೇಡಿಬದುಕು ಎನಿಸಿತು.

ನೌಕರಿಯ ಭಯದಲ್ಲಿ ಸಿಕ್ಕ ಅಪಾರ ಅವಕಾಶಗಳನ್ನು ಕಳೆದುಕೊಂಡೆ. ಸರಕಾರ, ಅಕ್ಯಾಡೆಮಿ, ಸಾಂಸ್ಕೃತಿಕ

ಲೋಕದ ಅವಕಾಶಗಳನ್ನು ನಿರಾಕರಿಸುತ್ತಲೇ ಬಂದೆ ನೌಕರಿ ಎಂಬ ಪೆಡಂಭೂತವನ್ನು ಮೈಮೇಲೆ

ಎಳೆದುಕೊಂಡು.

ಶೇಕ್ಸಪೀಯರ್ ಹೇಳಿದ ಮಾತುಗಳು ಮತ್ತೆ,ಮತ್ತೆ ನೆನಪಾದವು. ಮನುಷ್ಯನಿಗೆ sight, life and freedom

ಇಲ್ಲದೆ ಬಾಳುವದೆಂದರೆ ಅಸ್ತಿತ್ವವೇ ಇಲ್ಲದಂತೆ.

ಉಸಿರು, ದೃಷ್ಥಿ ಹಾಗೂ ಸ್ವಾತಂತ್ರ್ಯವಿಲ್ಲದ ಬದುಕು ನರಕಕ್ಕೆ ಸಮ --- ಎಂಬ ಮಾತುಗಳಲ್ಲಿನ ಸತ್ಯಾಂಶ

ಅರಿವಾಗತೊಡಗಿತು.

ಈ ವರ್ಷ ಜೂನ್ ನಿಂದ ಆ ವಿಚಾರ ಆಳವಾಗಿ ಕೊರೆಯತೊಡಗಿತು. ಪರ್ಯಾಯ ವ್ಯವಸ್ಥೆಯಿಲ್ಲದೆ ಇದ್ದ

ನೌಕರಿಯನ್ನು ಬಿಡುವುದಾದರೂ ಹೇಗೆ? ಎಂಬ ಆತಂಕ.

ಬಿಟ್ಟ ಮೇಲಲ್ಲವೆ ಹೊಸ ಅವಕಾಶಗಳು. ಅದಕ್ಕೆ ಅಲ್ಲವೆ ಗಾದೆ.

ಮದುವೆ ಆಗದೆ ಹುಚ್ಚು ಬಿಡುವದಿಲ್ಲ. ಹುಚ್ಚು ಬಿಡದೆ ಮದುವೆ ಆಗುವುದಿಲ್ಲ ಎಂಬಂತಾಯಿತು ನನ್ನ ಸ್ಥಿತಿ.

ಈಗ ಹುಚ್ಚು ಬಿಡಿಸಿಕೊಳ್ಳಲು ನಿರ್ಧರಿಸಿದ್ದೇನೆ.

ಗೌರವಾನ್ವಿತ ಆಡಳಿತ ಮಂಡಳಿಯವರಿಗೆ ನನ್ನ ನಿರ್ಣಯ ತಿಳಿಸಿದ್ದೇನೆ. ಅವರು ಹೇಗೆ ಸ್ವೀಕರಿಸುತ್ತಾರೆ

ಎನ್ನುವುದಕ್ಕಿಂತ, ನಾನು ಹೇಗೆ ಹಗುರಾಗಿದ್ದೇನೆ ಎಂಬ ಸಂಭ್ರಮದಲ್ಲಿದ್ದೇನೆ.

ಮೊದಲು ಆರ್ಥಿಕ ಸೆಕ್ಯೂರಿಟಿ ಎಂಬ comfort zone ನಿಂದ ಹೊರ ಬಂದು ಹೊಸ ಸವಾಲನ್ನು

ಸ್ವೀಕರಿಸುತ್ತೇನೆ.

ಹೊಸ risk ಇಲ್ಲದೆ ಬದುಕು ಬದಲಾಗಲು ಹೇಗೆ ಸಾಧ್ಯ? ಎತ್ತರಕ್ಕೆ ಏರಲೂಬಹುದು, ಪಾತಳಕ್ಕೆ ಇಳಿಯಲೂ

ಬಹುದು.ವಿಷಯ ಅದಲ್ಲ.

ಪ್ರಾಂಜಲ ಮನಸಿನಿಂದ, ಪ್ರಾಮಾಣಿಕವಾಗಿ ಐಕ್ಯತಾ ಭಾವ ರೂಪಿಸಿಕೊಂಡರೆ ಅವಕಾಶಗಳು ಕೈ ಮಾಡಿ

ಕರೆಯುತ್ತವೆ. ಹೆದರಿ ಕೊಳಕನ್ನ ತುಂಬಿಕೊಂಡು ನೋವು ಅನುಭವಿಸಿದರೆ ಕೆಸರಲಿ ಹೂತು ಹೋಗುತ್ತೇವೆ ಎಂಬ

ಸತ್ಯ ಸ್ಪಷ್ಟವಾಗಿದೆ.

ಆದರೆ ಈ ಸ್ಪಷ್ಟತೆ ಬರಲು ಹತ್ತು ವರ್ಷ ತೆಗೆದುಕೊಂಡೆನಲ್ಲ ಎಂಬ ಬೇಸರವೂ ಇದೆ.

ಆದರೆ ಎಲ್ಲದಕೂ 'ಕಾಲ' ಕೂಡಿ ಬರಬೇಕು. ಒಳಗೆ ಗಟ್ಟಿ ಆಗದ ಹೊರತು ಈ ರೀತಿ ಗೊಂದಲಗಳು ಸಹಜವೆ?

ಈಗ ಹಗುರಾಗಿದ್ದೇನೆ. ಮುಂದೇನು ಎಂಬುದನ್ನು ಕಾಲವೇ ನಿರ್ಣಯಿಸಲಿ. ಕಣ್ಣೆದುರಿಗಿರುವ ಅವಕಾಶಗಳನ್ನು

ಸಮರ್ಥವಾಗಿ ನಿಭಾಯಿಸುತ್ತೇನೆ. ಆ ಧೈರ್ಯ ಬಂದಿದೆ. ಅಷ್ಟೇ ಸಾಕು!

ಶಿಕ್ಷಕ ವೃತ್ತಿಯನು ಖುಷಿಯಿಂದ ಕಳೆದೆ. ವಿದ್ಯಾರ್ಥಿಗಳ ಪ್ರೀತಿ ಸಂಪಾದಿಸಿದೆ. ಮೈಯಲ್ಲಿ ದೆವ್ವಹೊಕ್ಕಂಡವರ

ಹಾಗೆ ಪಾಠ ಮಾಡಿದೆ. class room ನ್ನು ಭವ್ಯ ವೇದಿಕೆಯಂತೆ ರೂಪಿಸಿಕೊಂಡು perform ಮಾಡಿದೆ.

ನವಿರು ಹಾಸ್ಯ, ಗಂಭೀರ ವಿವರಣೆಯಿಂದಾಗಿ teaching enjoy ಮಾಡಿದೆ.

ವಿದ್ಯಾರ್ಥಿಗಳು ಸಮಚಿತ್ತರಾಗಿ ನನ್ನನ್ನು ಸ್ವೀಕರಿಸಿದರು. ಅತೀಯಾದ cheap popularity ಯ ಬೆನ್ನು ಹತ್ತಲಿಲ್ಲ.

English tution ಹೇಳಿ ಹೇರಳ ಹಣ ಸಂಪಾದಿಸುವ ಮನಸು ಮಾಡಲಿಲ್ಲ.

ಹಾಗೆ ಮಾಡುವವರನ್ನು ಕಂಡು ಮರುಗಲಿಲ್ಲ.

P.U.C ಯಿಂದ P.G.ಯವರೆಗೆ ಪಾಠ ಮಾಡಿದೆ. ಎಲ್ಲ ಹಂತದ ವಿದ್ಯಾರ್ಥಿಗಳ ಮನಸ್ಸು ಗೆದ್ದೆ.

ಹೀಗೆ ಆಳೆತ್ತರಕ್ಕೆ ಏರುವ ಕ್ಷಣದಲಿ ದಿಢೀರ ವೃತ್ತಿ ಬಿಡುವ ನಿರ್ಣಯ ಮಾಡಿದ್ದೇನೆ. ಆದರೆ ಕಲಿಸುವಿಕೆಯನ್ನು ಖಂಡಿತಾ ಬಿಡುವುದಿಲ್ಲ.

ಬೇರೆ, ಬೇರೆ ಸ್ತರಗಳಲ್ಲಿ ಕಲಿಸುತ್ತ ಹೋಗುತ್ತೇನೆ. Teaching ನ್ನು ಆಧಾರವಾಗಿಟ್ಟುಕೊಂಡೆ ಹೊಸ ಜಗತ್ತನ್ನು ರೂಪಿಸಿಕೊಳ್ಳುತ್ತೇನೆ.

ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣವನ್ನು ಭಿನ್ನ ರೀತಿಯಿಂದ ಬಳಸಿಕೊಳ್ಳುತ್ತೇನೆ.

ಪ್ರತಿ ಕ್ಷಣವನ್ನು ಸಂತೋಷದಿಂದ, ಆತ್ಮವಿಶ್ವಾಸದಿಂದ ಕ್ರೀಯಾಶೀಲವಾಗಿ ಕಳೆಯುತ್ತೇನೆ. ನನ್ನ ನಿರ್ಣಯಕ್ಕಾಗಿ regret ಪಡದೆ ಹೊಸ ಜಗತ್ತಿಗೆ ಕಾಲಿಡುತ್ತೇನೆ.